Tag: ತೀರ್ಪು

  • ಸುಪ್ರೀಂ ಕೋರ್ಟ್ ಆದೇಶ ನನಗೆ ಸಮಾಧಾನ ತಂದಿದೆ: ಹೆಚ್. ವಿಶ್ವನಾಥ್

    ಸುಪ್ರೀಂ ಕೋರ್ಟ್ ಆದೇಶ ನನಗೆ ಸಮಾಧಾನ ತಂದಿದೆ: ಹೆಚ್. ವಿಶ್ವನಾಥ್

    ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶ ನನಗೆ ಸಮಾಧಾನ ತಂದಿದೆ ಎಂದು ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವನಾಥ್ ಅವರು, ಸುಪ್ರೀಂ ಆದೇಶವನ್ನು ಈಗ ತಾನೇ ನಾನು ಮಾಧ್ಯಮದಲ್ಲಿ ನೋಡಿದೆ. ಅರ್ಧ ಗಂಟೆ ಅಥವಾ ಒಂದು ಗಂಟೆಯಲ್ಲಿ ನಾವು ಇಲ್ಲಿಂದ ಹೊರಡುತ್ತೇವೆ. ನಾವು ಮಂಡಿಸಿದ ವಾದವನ್ನು ಸುಪ್ರೀಂ ಕೋಟ್ ಪುರಸ್ಕರಿಸಿದೆ. ಸುಪ್ರೀಂ ಕೋರ್ಟ್ ಸ್ಪೀಕರ್ ಗೆ ಸೂಚನೆ ಕೂಡ ನೀಡಿದೆ. ಮೊದಲಿನಿಂದಲೂ ಸ್ಪೀಕರ್ ನಾನು ಪಾರದರ್ಶಕವಾಗಿ ನಡೆಯುತ್ತೇನೆ ಎಂದು ಹೇಳಿದ್ದರು. ಅವರು ಪಾರದರ್ಶಕವಾಗಿ ನಡೆಯುತ್ತಾರೆ ಎಂಬ ವಿಷಯ ನನಗೆ ಗೊತ್ತು ಎಂದರು.

    ನಾವು 10 ಜನ ರಾಜೀನಾಮೆ ನೀಡಿದ್ದೇವೆ. ಅದರಲ್ಲಿ 8 ಜನರ ರಾಜೀನಾಮೆ ಕ್ರಮಬದ್ಧವಾಗಿ ಇದೆ. ಈ ಎಲ್ಲಾ ಗೊಂದಲಕ್ಕೆ ಪರಿಹಾರ ಸಿಗುತ್ತೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶವೇನು?
    ಅತೃಪ್ತ ಶಾಸಕರ ಅರ್ಜಿಯನ್ನು ಇಂದೇ ನಿರ್ಧರಿಸಿ. ಇಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಿರುವ 10 ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು. ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

    ಅತೃಪ್ತ ಶಾಸಕರು ಬುಧವಾರ ಸ್ಪೀಕರ್ ವಿಳಂಬ ನೀತಿಯನ್ನು ವಿರೋಧಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅತೃಪ್ತರ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡು ವಿಚಾರಣೆ ನಡೆಸಿತು. ಮುಖ್ಯ ನ್ಯಾ.ರಂಜನ್ ಗೊಗಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಸಿತು. ಅತೃಪ್ತರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಕುಲ್ ರೋಹಟಿಗೆ ವಾದವನ್ನು ಆಲಿಸಿತು. ಇತ್ತ ಸಿಎಂ, ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಅವರಿಗೆ ನೋಟಿಸ್ ರವಾನಿಸಿದ್ದು, ನಿಮ್ಮ ವಾದವನ್ನು ಮಂಡಿಸಬಹುದು ಎಂದು ತಿಳಿಸಿದೆ.

  • ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಕನ್ನಡದಲ್ಲಿ ಲಭ್ಯ

    ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಕನ್ನಡದಲ್ಲಿ ಲಭ್ಯ

    ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಕನ್ನಡದಲ್ಲಿ ಲಭ್ಯವಾಗಲಿದೆ. ಕನ್ನಡ ತೆಲುಗು, ಹಿಂದಿ, ಅಸ್ಸಾಮಿ, ಮರಾಠಿ, ಓಡಿಯಾ ಭಾಷೆ ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ಲಭ್ಯವಾಗಲಿದೆ.

    ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗಯ್ ಈ ಮಹತ್ವದ ನಿರ್ಧಾರ ತೆಗದುಕೊಂಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪುಗಳನ್ನು ಸಾಮಾನ್ಯ ಜನರಿಗೂ ಅರ್ಥೈಸುವ ಹಿನ್ನೆಲೆ ಈ ಮಹತ್ವದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಮುಂದಾಗಿದೆ.

    ಈ ಸಂಬಂಧ ಈಗಾಗಲೇ ತಂತ್ರಜ್ಞಾನ ರೂಪಿಸಿಕೊಂಡಿದ್ದು, ಈ ತಿಂಗಳ ಅಂತ್ಯದಿಂದ ಈ ನಿಯಮ ಜಾರಿ ಆಗುವ ಸಾಧ್ಯತೆ ಇದೆ. 2017ರಲ್ಲಿ ಕೊಚ್ಚಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟಿದ್ದರು.

    ಕೇವಲ ಇಂಗ್ಲಿಷ್‍ನಲ್ಲಿ ತೀರ್ಪು ಹೊರ ಬರುವ ಹಿನ್ನೆಲೆ ಅದು ಎಲ್ಲ ವರ್ಗದ ಜನರನ್ನು ತಲುಪುವುದಿಲ್ಲ. ಹೀಗಾಗಿ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲೂ ತೀರ್ಪು ಪ್ರಕಟವಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ರಾಷ್ಟ್ರಪತಿಗಳ ಸಲಹೆ ಪರಿಗಣಿಸಿದ್ದ ಮುಖ್ಯ ನಾಯಮೂರ್ತಿ ರಂಜನ್ ಗೊಗಯ್ ಅದನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದ್ದಾರೆ.

  • 2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ, ಓರ್ವ ಖುಲಾಸೆ

    2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ, ಓರ್ವ ಖುಲಾಸೆ

    ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2005ರಂದು ನಡೆದ ಉಗ್ರರ ದಾಳಿ ಪ್ರಕರಣ ತೀರ್ಪು ಹೊರಬಂದಿದ್ದು, ನಾಲ್ವರು ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

    ಅಲಹಾಬಾದ್ ಜಿಲ್ಲೆಯ ಪ್ರಯಾಗ್‍ರಾಜ್ ವಿಶೇಷ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ಈ ಮೂಲಕ ಹದಿನಾಲ್ಕು ವರ್ಷಗಳ ಬಳಿಕ ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣ ಐದು ಜನರ ಪೈಕಿ ಮೊಹಮ್ಮದ್ ಅಜೀಜ್ ವಿರುದ್ಧದ ಆರೋಪವನ್ನು ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದೆ.

    ಇರ್ಫಾನ್, ಆಶೀಖ್ ಇಕ್ಬಾಲ್ ಅಲಿಯಾಸ್ ಫಾರೂಕ್, ಶಕೀಲ್ ಅಹ್ಮದ್ ಹಾಗೂ ಮೊಹಮ್ಮದ್ ನಸೀಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್ ಚಂದ್ರ ಅವರು ಆರೋಪಿಗಳಿಗೆ ತಲಾ 2.40 ಲಕ್ಷ ರೂ. ದಂಡ ವಿಧಿಸಿದ್ದಾರೆ.

    ಏನಿದು ಪ್ರಕರಣ?:
    ಅಯೋಧ್ಯೆಯಲ್ಲಿ 2005, ಜುಲೈ 5 ರಂದು ಲಷ್ಕರ್ ಎ- ತೋಯ್ಬಾ ಉಗ್ರ ಸಂಘಟನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ಸಾರ್ವಜನಿಕರು ಸಾವನ್ನಪ್ಪಿದ್ದರು. ನಮ್ಮ ಭದ್ರತಾ ಪಡೆಯ ಸಿಬ್ಬಂದಿ ಐವರು ಉಗ್ರರರನ್ನು ಹೊಡೆದುರಳಿಸಿದ್ದರು. ಅಷ್ಟೇ ಅಲ್ಲದೆ 7 ಮಂದಿ ಸಿಆರ್‍ಪಿಎಫ್ ಯೋಧರು ಗಾಯಗೊಂಡಿದ್ದರು.

    ಉಗ್ರನ ಕೈನಲ್ಲಿ ಸಿಕ್ಕ ಮೊಬೈಲ್ ಆಧಾರದ ಮೇಲೆ 14 ವರ್ಷಗಳ ಹಿಂದೆಯೇ ಐವರನ್ನು ಪೊಲೀಸರು ಬಂಧಿಸಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಕುರಿತು ಜೂನ್ 11ರಂದು ವಿಚಾರಣೆ ಪೂರ್ಣಗೊಳಿಸಿದ್ದ ಪ್ರಯಾಗ್‍ರಾಜ್ ವಿಶೇಷ ನ್ಯಾಯಾಲಯವು ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

  • ನ್ಯಾಯಾಲಯದಿಂದ ರಿಲೀಫ್: ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಎಸ್‍ವೈ

    ನ್ಯಾಯಾಲಯದಿಂದ ರಿಲೀಫ್: ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಎಸ್‍ವೈ

    ಬೀದರ್: ಆಪರೇಷನ್ ಕಮಲ ಆಡಿಯೋ ಪ್ರಕರಣದಿಂದ ಸ್ವಲ್ಪ ರಿಲೀಫ್ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಅವರು ಮೋದಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಹುಮ್ನಾಬಾದ್ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಕೋರ್ಟ್ ನಿಂದ ಆಪರೇಷನ್ ಕಮಲ ಆಡಿಯೋ ಎಫ್‍ಐಆರ್ ಗೆ ತಡೆಯಾಜ್ಞೆ ಆದೇಶ ಬರುತ್ತಿದ್ದಂತೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಪಕ್ಷದ ಮುಖಂಡರು ಸಾತ್ ನೀಡಿದರು.

    ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದರು. ಆದರೆ ಕೋರ್ಟ್ ನನಗೆ ನ್ಯಾಯ ಒದಗಿಸಿಕೊಟ್ಟಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯ, ದೇವರ ಬಗ್ಗೆ ನನಗೆ ಅಪಾರ ವಿಶ್ವಾಸವಿದೆ. ಹೀಗಾಗಿ ನನಗೆ ಅನ್ಯಾಯವಾಗಲಿಲ್ಲ ಎಂದು ಕಿಡಿಕಾರಿದರು.

    ಮೋದಿ ವಿಜಯ್ ಸಂಕಲ್ಪ ಯಾತ್ರೆಗೆ ಕೇಂದ್ರ ಸಚಿವ ಪುರುಷೋತ್ತಮ ರೂಪಾಲ್ ಚಾಲನೆ ನೀಡಿದರು. ಶಾಸಕರಾದ ಶ್ರೀರಾಮಲು, ಆರ್.ಅಶೋಕ್, ಪ್ರಭು ಚವ್ಹಾಣ್, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.

    ಕೋರ್ಟ್ ಆದೇಶ ಏನು?:
    ದೇವದುರ್ಗ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ವಿಚಾರಣೆಗೆ ತಡೆ ಕೋರಿ ಬಿಎಸ್‍ವೈ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಿದ್ದರು. ಇಂದು ಹೈಕೋರ್ಟ್ ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಅವರು ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಬಿ.ಎಸ್.ವೈ ಸೇರಿದಂತೆ ನಾಲ್ವರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ದೇವದುರ್ಗ ಠಾಣೆಯಲ್ಲಿ ದೂರು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಡ ರಾತ್ರಿಯವರೆಗೆ ವಿಚಾರಣೆ – 12 ದಿನದಲ್ಲಿ ಕಾಮುಕನಿಗೆ ಜೀವಾವಧಿ ಶಿಕ್ಷೆ!

    ತಡ ರಾತ್ರಿಯವರೆಗೆ ವಿಚಾರಣೆ – 12 ದಿನದಲ್ಲಿ ಕಾಮುಕನಿಗೆ ಜೀವಾವಧಿ ಶಿಕ್ಷೆ!

    ಜೈಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಕೇವಲ 12 ದಿನಗಳಲ್ಲಿ ರಾಜಸ್ಥಾನದ ಸ್ಥಳೀಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

    ಕರಣ್ ಎ.ಕೆ.ಎ ಕಾಳಿಯಾ ಜೀವಾವಧಿ ಶಿಕ್ಷೆ ಗುರಿಯಾದ ಅಪರಾಧಿ. 4 ವರ್ಷದ ಬಾಲಕಿ ಮೇಲೆ ಕರಣ್ ಅತ್ಯಾಚಾರ ಎಸಗಿದ್ದ. ಪೊಲೀಸರು ವೇಗವಾಗಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಈ ಪ್ರಕರಣದ ವಿಚಾರಣೆ ತಡ ರಾತ್ರಿಯವರೆಗೂ ನಡೆದು ವಾದ-ಪ್ರತಿವಾದ ಆಲಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಈ ಶಿಕ್ಷೆ ವಿಧಿಸಿದೆ.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಆರಂಭದಲ್ಲಿ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ರಾಪ್ತೆಯ ಗ್ಯಾಂಗ್ ರೇಪ್: ಮೂವರು ಕಾಮುಕರಿಗೆ 20 ವರ್ಷ ಜೈಲು

    ಅಪ್ರಾಪ್ತೆಯ ಗ್ಯಾಂಗ್ ರೇಪ್: ಮೂವರು ಕಾಮುಕರಿಗೆ 20 ವರ್ಷ ಜೈಲು

    ದಾವಣಗೆರೆ: ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಿಯಕರ ಸೇರಿದಂತೆ ಮೂವರು ಅಪರಾಧಿಗಳಿಗೆ 20 ವರ್ಷ ಶಿಕ್ಷೆ, ತಲಾ 25 ಸಾವಿರ ರೂ. ದಂಡವಿಧಿಸಿ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ತೀರ್ಪು ನೀಡಿದೆ.

    ಭದ್ರಾವತಿ ತಾಲೂಕಿನ ರಂಗಾಪುರ ಗ್ರಾಮದ ಪ್ರಿಯಕರ ರಮೇಶ್, ವಿಜಯ್ ಹಾಗೂ ಅರುಣ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಮ್ಮನಗುಡ್ಡದಲ್ಲಿ ಕಾಮುಕರು ಅತ್ಯಾಚಾರ ಎಸಗಿದ್ದರು. ಕಳೆದ ಒಂದುವರೆ ವರ್ಷದಿಂದ ವಿಚಾರಣೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಈ ಪ್ರಕರಣದ ಕುರಿತು ನ್ಯಾಯಾಧೀಶರಾದ ನಾಗಶ್ರೀ ಅವರು ವಿಚಾರಣೆ ನಡೆಸಿ ಇಂದು ತೀರ್ಪು ನೀಡಿದ್ದಾರೆ.

    ಪ್ರೀತಿ ನಾಟಕ:
    ರಂಗಾಪುರ ಗ್ರಾಮದ ರಮೇಶ್ ಮತ್ತು ಅಪ್ರಾಪ್ತೆಯ ಪ್ರೀತಿ ಎರಡು ವರ್ಷದ ಹಿಂದೆ ಬ್ರೇಕ್ ಅಪ್ ಆಗಿತ್ತು. ರಮೇಶ್ ಪುನಃ ಪ್ರೀತಿಸುತ್ತೇನೆಂದು ಹೇಳಿ ಬಾಲಕಿಯನ್ನ 2017, ಜೂ.2 ರಂದು ಜೋಳದಾಳು ಅಮ್ಮನ ಗುಡ್ಡಕ್ಕೆ ಕರೆತಂದಿದ್ದ. ರಮೇಶ್ ಜೊತೆ ವಿಜಯ್, ಅರುಣ್ ಕೂಡ ಬಂದಿದ್ದು, ಮೂವರು ಸೇರಿ ಬಾಲಕಿಯನ್ನ ಹೆದರಿಸಿ ಅತ್ಯಾಚಾರ ಮಾಡಿದ್ದಾರೆ.

    ಮೂವರು ಕಾಮುಕರಿಂದ ತಪ್ಪಿಸಿಕೊಂಡು ಹೋದ ಬಾಲಕಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಳು. ಶಿವಮೊಗ್ಗ ಆಸ್ಪತ್ರೆಯವರು ಈ ಬಗ್ಗೆ ಅಲ್ಲಿನ ಎಸ್‍ಪಿಗೆ ಮಾಹಿತಿ ನೀಡಿದ್ದರು. ನಂತರ ಚನ್ನಗಿರಿ ಪೊಲೀಸರು ಪ್ರಿಯಕರ ರಮೇಶನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ವಿಜಯ್ ಹಾಗೂ ಅರುಣ್ ತಲೆಮರೆಸಿಕೊಂಡಿದ್ದರು. ಚನ್ನಗಿರಿ ಪಿಸಿಐ ಆರ್.ಆರ್.ಪಾಟೀಲ್ ಅವರ ನೇತೃತ್ವದ ತಂಡವು ಎಲ್ಲರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಮನಿಸಿ,  ಮೂಲ ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವಂತಿಲ್ಲ – ಸುಪ್ರೀಂನಿಂದ ಮಹತ್ವದ ತೀರ್ಪು

    ಗಮನಿಸಿ, ಮೂಲ ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವಂತಿಲ್ಲ – ಸುಪ್ರೀಂನಿಂದ ಮಹತ್ವದ ತೀರ್ಪು

    ನವದೆಹಲಿ: ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳಲ್ಲಿನ ಯಾವುದೇ ಅಂಶವೂ ಬದಲಾವಣೆ ಆಗಬಾರದು ಎಂದು ಆದೇಶಿಸಿದೆ.

    ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ್ ಶರಣ್ ಅವರನ್ನೊಳಗೊಂಡ ದ್ವಿಸದಸ್ಯಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಪಡಿಸಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 52(1) ಅಡಿ ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳು ಕಡ್ಡಾಯ ಎಂದು ತಿಳಿದಿದೆ.

    ನ್ಯಾಯಪೀಠ ತಿಳಿಸಿರುವಂತೆ ವಾಹನಕ್ಕೆ ಸಾಮಾನ್ಯವಾಗಿ ಮಾಲೀಕರ ನೆಚ್ಚಿನ ಬಣ್ಣ ಹಾಗೂ ಸಣ್ಣ ಪ್ರಮಾಣದ ಬದಲಾವಣೆಗಳನ್ನು ಮೋಟಾರು ವಾಹನ ಕಾಯ್ದೆ ಅಡಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ ವಾಹನದ ಬದಲಾವಣೆ ಮೂಲ ವಿನ್ಯಾಸಕ್ಕೆ ದಕ್ಕೆ ಉಂಟು ಮಾಡುತ್ತಿದ್ದರೆ, ಈ ವಾಹನ ನೋಂದಣಿಗೆ ಅರ್ಹವಲ್ಲ ಎಂದು ತಿಳಿಸಿದೆ.

    ಅಲ್ಲದೇ ವಾಹನ ಉತ್ಪಾದನೆಯ ಮೂಲ ಮಾದರಿಯು ರಸ್ತೆಯ ಯೋಗ್ಯತೆ ಮತ್ತು ಸುರಕ್ಷತೆ ವೈಶಿಷ್ಟ್ಯಗಳಿಗೆ ಮಾತ್ರ ಪರೀಕ್ಷಿಸಲ್ಪಡುತ್ತದೆ ಎಂಬ ಆಧಾರದ ಅನ್ವಯ ತೀರ್ಪು ನೀಡಿದೆ. ಆದ್ದರಿಂದ ತಯಾರಕರ ಮೂಲ ನಿರ್ದಿಷ್ಟ ವಿನ್ಯಾಸಕ್ಕೆ ಧಕ್ಕೆಯಾದರೆ ಯಾವುದೇ ವಾಹನ ನೋಂದಣಿಯಾಗಲು ಅನುಮತಿ ನೀಡಲಾಗುವುದಿಲ್ಲ ಎಂದು ತನ್ನ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

    ಸುಪ್ರೀಂ ತೀರ್ಪಿನ ಅನ್ವಯ ವಾಹನಗಳಿಗೆ ದೊಡ್ಡ ಗಾತ್ರದ ಟೈರ್ ಅಳವಡಿಸುವುದು, ವಾಹನದ ಸಾಮಥ್ರ್ಯದಲ್ಲಿ ಬದಲಾವಣೆ ಮಾಡುವುದು ಸೇರಿದಂತೆ ವಾಹನದ ಮೂಲ ರಚನೆಯಲ್ಲಿ ನಮೂದಿಸಲಾಗಿರುವ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಈ ತೀರ್ಪಿನ ಪರಿಣಾಮವಾಗಿ ಕೇರಳ ಸರ್ಕಾರ ಜಾರಿಗೆ ತಂದಿದ್ದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಕೂಡ ಅನರ್ಹಗೊಂಡಿದೆ. ಕೇರಳ ಸರ್ಕಾರದ ತಿದ್ದುಪಡಿ ಕಾಯ್ದೆಯಲ್ಲಿ ವಾಹನದಲ್ಲಿನ ಮೂಲ ಬದಲಾವಣೆ ಮಾಡಲು ಅವಕಾಶ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ ಪವನ್ ಕಲ್ಯಾಣ್ ಅಭಿಮಾನಿ ಕೊಲೆ ಪ್ರಕರಣ – ಆರೋಪಿಗೆ ಜೀವಾವಧಿ ಶಿಕ್ಷೆ

    ನಟ ಪವನ್ ಕಲ್ಯಾಣ್ ಅಭಿಮಾನಿ ಕೊಲೆ ಪ್ರಕರಣ – ಆರೋಪಿಗೆ ಜೀವಾವಧಿ ಶಿಕ್ಷೆ

    ಕೋಲಾರ: ತೆಲುಗು ನಟ ಪವನ್ ಕಲ್ಯಾಣ್ ಅಭಿಮಾನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿರುವ ಕೋಲಾರ 2ನೇ ಜಿಲ್ಲಾ ಸತ್ರ ನ್ಯಾಯಾಲಯ ಪ್ರಕರಣದ ಎ 1 ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.

    2016 ಆಗಸ್ಟ್ ತಿಂಗಳಿನಲ್ಲಿ ಪವನ್ ಅಭಿಮಾನಿ ವಿನೋದ್ ರಾಯಲ್ ಎಂಬ ಯುವಕನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಮೊದಲನೇ ಆರೋಪಿ ಅಕ್ಷಯ್ ಕುಮಾರ್ ಗೆ ಜೀವಾವಧಿ ಶಿಕ್ಷೆ ಹಾಗೂ ಎರಡನೇ ಆರೋಪಿ ಸುನೀಲ್‍ಗೆ ಒಂದು ವರ್ಷ ಜೈಲು ಶಿಕ್ಷೆ ನೀಡಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

    ಏನಿದು ಪ್ರಕರಣ: ಮೃತ ವಿನೋದ್ ಕೋಲಾರದ ಪವನ್ ಕಲ್ಯಾಣ್ ಅಭಿಮಾನಿಗಳ ಸಂಘದಲ್ಲಿ ಸಕ್ರೀಯರಾಗಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇದರಂತೆ 2016 ಆ.21 ರ ಭಾನುವಾರ ವಿನೋದ್ ಕಾರ್ಯಕ್ರಮವೊಂದರಲ್ಲಿ ಕಣ್ಣು ದಾನ ಮಾಡುವುದಾಗಿ ಪ್ರಕಟಿಸಿದರು. ಇದೇ ಕಾರ್ಯಕ್ರಮಕ್ಕೆ ಜ್ಯೂನಿಯರ್ ಎನ್‍ಟಿಆರ್ ಅಭಿಮಾನಿಗಳು ಕೂಡ ಆಗಮಿಸಿದ್ದರು. ಆದರೆ ಕಾರ್ಯಕ್ರಮದಲ್ಲಿ ವಿನೋದ್ ತಮ್ಮ ನಟನ ಬಗ್ಗೆ ಅಭಿಮಾನದಿಂದ ಮಾತನಾಡಿದ್ದ ವಿಚಾರವಾಗಿ ಎನ್‍ಟಿಆರ್ ಅಭಿಮಾನಿಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ವಿಕೋಪಕ್ಕೆ ತಿರುಗಿ ವಿನೋದ್‍ಗೆ ಇರಿದು ಕೊಲೆ ಮಾಡಲಾಗಿತ್ತು. ಈ ಘಟನೆಯ ಬಳಿಕ ನಟ ಪವನ್ ಕಲ್ಯಾಣ್ ಅಭಿಮಾನಿಯ ಮನೆಗೆ ಭೇಟಿ ನೀಡಿ ಸ್ವಾಂತನ ಹೇಳಿದ್ದರು.

    ಕೋಲಾರ ತಾಲ್ಲೂಕು ನರಸಾಪುರ ಬಳಿ ಕೊಲೆ ನಡೆದಿತ್ತು, ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಂಡಪ್ 2018- ಸುಪ್ರೀಂನಿಂದ ಸರಣಿ ತೀರ್ಪು, ಮಿಶ್ರಾ ವಿರುದ್ಧವೇ ತಿರುಗಿಬಿದ್ದಿದ್ದ ಜಡ್ಜ್‌ಗಳು

    ರೌಂಡಪ್ 2018- ಸುಪ್ರೀಂನಿಂದ ಸರಣಿ ತೀರ್ಪು, ಮಿಶ್ರಾ ವಿರುದ್ಧವೇ ತಿರುಗಿಬಿದ್ದಿದ್ದ ಜಡ್ಜ್‌ಗಳು

    ಈ ವರ್ಷದ ಆರಂಭದಲ್ಲೇ ನಿವೃತ್ತ ಮುಖ್ಯ ನ್ಯಾ. ಮಿಶ್ರಾ ವಿರುದ್ಧ ಜಡ್ಜ್ ಗಳೇ ಬಂಡಾಯ ಎದ್ದ ಪರಿಣಾಮ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವ ದೃಢಪಟ್ಟಿತ್ತು. ವೃತ್ತಿ ಜೀವನದ ಕೊನೆಯಲ್ಲಿ ದೀಪಕ್ ಮಿಶ್ರಾ ಅವರಿದ್ದ ಪೀಠ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸುವ ಮೂಲಕ ಸುದ್ದಿಯಲ್ಲಿತ್ತು.

    ಸಲಿಂಗಕಾಮ ಅಪರಾಧವಲ್ಲ:
    ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 6ರಂದು ತೀರ್ಪು ನೀಡಿತು. ಈ ತೀರ್ಪಿನಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ರದ್ದುಗೊಳಿಸಲಾಗಿದೆ. ಐಪಿಸಿ ಸೆಕ್ಷನ್ 377ರ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಾಗಿತ್ತು. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.

    ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್. ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠವು ಐಪಿಸಿ 377 ಅನ್ನು ಅಸಿಂಧುಗೊಳಿಸಿ ಆದೇಶವನ್ನು ಪ್ರಕಟಿಸಿತ್ತು. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.

    ಅಕ್ರಮ ಸಂಬಂಧ ಅಪರಾಧವಲ್ಲ:
    ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‍ನ ಸಂವಿಧಾನಿಕ ಪೀಠ ಮಹತ್ವದ ತೀರ್ಪುನ್ನು ಸೆಪ್ಟೆಂಬರ್ 27ರಂದು ನೀಡಿತು. ಐಪಿಸಿ ಸೆಕ್ಷನ್ 497ರ ಪ್ರಕಾರ ವಿವಾಹಿತ ಪುರುಷ ಅನೈತಿಕ ಸಂಬಂಧ ಹೊಂದಿದ್ದರೆ ಅಪರಾಧವಾಗಿತ್ತು. ಸಂವಿಧಾನದ 14ನೇ ವಿಧಿಯ (ಕಾನೂನಿನ ಮುಂದೆ ಎಲ್ಲರೂ ಸಮಾನರು) ಹಿನ್ನಲೆಯಲ್ಲಿ ಸೆಕ್ಷನ್ 497 ಅನ್ನು ರದ್ದುಪಡಿಸಲಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೊಹಿಂಗ್ಟನ್ ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠ ಈ ಆದೇಶವನ್ನು ನೀಡಿತ್ತು.

    ಶಬರಿಮಲೆಗೆ ಮಹಿಳೆಯರ ಪ್ರವೇಶ:
    10 ರಿಂದ 50 ವರ್ಷದ ಒಳಗಿನ ಮಹಿಳೆಯರು ಕೂಡ ಶಬರಿಮಲೆ ದೇಗುಲ ಪ್ರವೇಶ ಮಾಡಬಹುದು ಎಂದು ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದಕ್ಕೆ ಬಲಪಂಥೀಯ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ವಿಶೇಷ ಪೂಜೆ ನಿಮಿತ್ತ ಅಕ್ಟೋಬರ್ ನಲ್ಲಿ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಈ ವೇಳೆ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಹಾಗೂ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಅಯ್ಯಪ್ಪನ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ದೇವಸ್ಥಾನ ಸಮೀಸುತ್ತಿದ್ದಂತೆ ಪ್ರತಿಭಟನಾಕಾರರು ಇದಕ್ಕೆ ಅವಕಾಶ ನೀಡಲಿಲ್ಲ. ಈಗಲೂ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದವೇ ಆಗಿ ಉಳಿದುಕೊಂಡಿದೆ. ಇದಕ್ಕೆ ಅನೇಕ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ ಎಂದು ಹೇಳಿದ್ದರು.

    ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪಟ್ಟು!
    ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲವೆಂದು 1994ರಲ್ಲಿ ನ್ಯಾ. ಇಸ್ಮಾಯಿಲ್ ಫಾರೂಕಿ ನೇತೃತ್ವದ ಪೀಠವು ತೀರ್ಪು ನೀಡಿತ್ತು. ಈ ತೀರ್ಪಿನ ಪರಿಶೀಲನೆಗಾಗಿ ಪ್ರಕರಣವನ್ನು ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಸೆಪ್ಟಂಬರ್ 27ರಂದು ನಮಾಜ್ ಮಾಡಲು ಮಸೀದಿ ಬೇಕಾಗಿಲ್ಲ ಎಂದು ಹೇಳಿ ಫಾರೂಕಿ ತೀರ್ಪನ್ನು ಎತ್ತಿಹಿಡಿಯಿತು. ಈ ತೀರ್ಪು ರಾಮ ಮಂದಿರ ನಿರ್ಮಾಣಕ್ಕೆ ಪೂರಕವಾಗಿದ್ದರಿಂದ ಅಕ್ಟೋಬರ್ 29ರಿಂದ ಅಯೋಧ್ಯೆ ಅರ್ಜಿಯ ಅಂತಿಮ ವಿಚಾರಣೆ ನಡೆಸಲಾಗುತ್ತದೆ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಮತ್ತಷ್ಟು ಹಚ್ಚಾಯಿತು. ಈ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿದ್ದ ಪೀಠ ಅಯೋಧ್ಯೆ ತೀರ್ಪು ಮಾತ್ರವೇ ನಮಗೆ ಮುಖ್ಯವಲ್ಲ. ನಮಗೆ ನಮ್ಮದೇ ಆದ ಆಧ್ಯತೆಗಳಿವೆ ಎಂದು ಹೇಳಿ ಆದೇಶ ಪ್ರಕಟಿಸಿತು. ಈ ಆದೇಶದಿಂದ ಹಿಂದೂ ಸಂತರು ಮತ್ತು ಸಂಘಟನೆಗಳು ಮೋದಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿವೆ.

    ಆಧಾರ್‌ಗೆ ಬಲ:
    ಸರ್ಕಾರಿ ಸೌಲಭ್ಯಗಳ ಪಡೆಯಲು `ಆಧಾರ್’ ಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸೆಪ್ಟೆಂಬರ್ 26ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ ಆಧಾರ್‍ಗೆ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿಯಿತು. ಭಾರತದ ಪ್ರತಿಯೊಬ್ಬ ನಾಗಕರಿಕನಿಗೂ ವಿಶಿಷ್ಟ ಗುರುತಿನ ಚೀಟಿ, ಸಂಖ್ಯೆ ನೀಡುವ ಉದ್ದೇಶದಿಂದ ಯುಪಿಎ ಸರ್ಕಾರವು, 2009ರಲ್ಲಿ ಯುಪಿಎ ಸರ್ಕಾರ ಆಧಾರ್ ಪ್ರಾಧಿಕಾರ ಸ್ಥಾಪನೆ ಮಾಡಿ ಆಧಾರ್ ಕಾರ್ಡ್ ನೀಡಲು ಆರಂಭಿಸಿತ್ತು. ಕರ್ನಾಟಕ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಎಂಬವರು 2012ರಲ್ಲಿ `ಆಧಾರ್’ನ ಸಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

    ರಫೇಲ್ ಹಗರಣ:
    ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಬಹುಕೋಟಿ ಹಗರಣ ನಡೆದಿದೆ. ಹೀಗಾಗಿ ಈ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿತ್ತು. ಎಲ್ಲ ಅರ್ಜಿಗಳನ್ನು ಕ್ರೋಢಿಕರಿಸಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ರಫೇಲ್ ಹಗರಣ ಸಂಬಂಧ ತನಿಖೆಗೆ ಆದೇಶ ನೀಡಲ್ಲ ಎಂದು ಡಿಸೆಂಬರ್ 14ರಂದು ಮಹತ್ವದ ತೀರ್ಪು ನೀಡಿತ್ತು. ಈ ಆದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿತು. ನ್ಯಾಯಾಲಯಕ್ಕೆ ಕೇಂದ್ರ ತಪ್ಪು ಮಾಹಿತಿ ನೀಡಿದೆ. ಹೀಗಾಗಿ ನ್ಯಾಯಾಲಯದಿಂದ ಈ ತೀರ್ಪು ಪ್ರಕಟವಾಗಿದೆ ಎಂದು ಹೇಳಿ ಕಾಂಗ್ರೆಸ್ ನಾಯಕರು ಈಗ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

    ಮಿಶ್ರಾ ವಿರುದ್ಧ ಸುದ್ದಿಗೋಷ್ಠಿ:
    ಭಾರತದ ಇತಿಹಾಸದಲ್ಲಿದೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿಯನ್ನು ನಡೆಸಿ ನ್ಯಾಯಾಂಗ ವ್ಯವಸ್ಥೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದರು. ಜನವರಿಯಲ್ಲಿ ನ್ಯಾಯಮೂರ್ತಿಗಳಾದ ಚೆಲ್ಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ನ್ಯಾ. ಚೆಲ್ಮೇಶ್ವರ್ ಅವರು ನ್ಯಾಯಾಂಗ ವ್ಯವಸ್ಥೆ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳ್ಳಂದೂರು ಕೆರೆ ಮಾಲಿನ್ಯ – ರಾಜ್ಯ ಸರ್ಕಾರಕ್ಕೆ 50 ಕೋಟಿ, ಪಾಲಿಕೆಗೆ 25 ಕೋಟಿ ರೂ. ದಂಡ

    ಬೆಳ್ಳಂದೂರು ಕೆರೆ ಮಾಲಿನ್ಯ – ರಾಜ್ಯ ಸರ್ಕಾರಕ್ಕೆ 50 ಕೋಟಿ, ಪಾಲಿಕೆಗೆ 25 ಕೋಟಿ ರೂ. ದಂಡ

    – ಕೆರೆಗಳಿಗಾಗಿ 500 ಕೋಟಿ ಹಣ ಮೀಸಲಿಗೆ ಎನ್‍ಜಿಟಿ ಸೂಚನೆ

    ಬೆಂಗಳೂರು: ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಹತ್ವದ ತೀರ್ಪು ಪ್ರಕಟಿಸಿದೆ. ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ.

    ಇಂದು ಅಂತಿಮ ವಿಚಾರಣೆ ನಡೆಸಿದ ನ್ಯಾ. ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠ ಈ ಮಹತ್ವದ ಆದೇಶ ನೀಡಿದೆ. ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿಧಿಸಿದ ದಂಡವನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ಅಲ್ಲದೆ 500 ಕೋಟಿ ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆ ಅಭಿವೃದ್ಧಿಗೆ ಮೀಸಲು ನಿಧಿಗೆ ನೀಡಲು ಸೂಚಿಸಿದ್ದು ಆ ಹಣವನ್ನು ಕೆರೆ ಸಂರಕ್ಷಣೆಗೆ ಬಳಸಿಕೊಳ್ಳಲು ಆದೇಶಿಸಿದೆ.

    ಇನ್ಮುಂದೆ ಕೆರೆ ಮತ್ತೆ ಕಲುಷಿತಗೊಂಡರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಅಲ್ಲದೆ, ಆ ವಿಷಯವನ್ನು ಅಧಿಕಾರಿಗಳ ಕೆರಿಯರ್ ರೆಕಾರ್ಡ್ ನಲ್ಲಿ ಬರೆಯಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶ ನೀಡಿದೆ.

    ಬೆಳ್ಳಂದೂರು ಕೆರೆ ರಕ್ಷಣೆ ಆಗಿಲ್ಲ. ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ರಾಜಕಾಲುವೆ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಜಲಮಾಲಿನ್ಯ ಮಾಡುವುದು ಅಪರಾಧವಾಗಿದೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಅಂತ ಅಧಿಕಾರಿಗಳ ಮೇಲೂ ಎನ್ ಜಿಟಿ ಕಿಡಿಕಾರಿದೆ.

    ಜವಾಬ್ದಾರಿ ನಿಭಾಯಿಸದಿದ್ದರೆ ಮುಂದೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಉನ್ನತ ಸಮಿತಿ ನೀಡಿರುವ ಶಿಫಾರಸ್ಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಗಳ ಅಭಿವೃದ್ಧಿ ಸಂಬಂಧ ಎನ್ ಜಿಟಿ ಆದೇಶ ಪಾಲನೆಗಾಗಿ ನಿವೃತ್ತಿ ನ್ಯಾ. ಸಂತೋಷ್ ಹೆಗಡೆ ನೇತೃತ್ವದ ಸಮಿತಿ ರಚನೆ ಮಾಡುವಂತೆ ಸೂಚಿಸಲಾಗಿದೆ. ವೆಬ್ ಸೈಟ್ ರಚಿಸಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಜನರು ವೆಬ್ ಸೈಟ್ ನಲ್ಲಿ ದೂರು, ಸಲಹೆ ನೀಡಬಹುದು.

    ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿದ್ದ ಎನ್ ಜಿಟಿ ಇಂದು ತೀರ್ಪು ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

    ಉತ್ತಮ ತೀರ್ಪು:
    ತೀರ್ಪು ಕುರಿತು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ಬೆಳ್ಳಂದೂರು ಕೆರೆ ವಿಚಾರದಲ್ಲಿ ತೀರ್ಪು ಸಿಕ್ಕಿದೆ. 50 ಕೋಟಿ, ಪಾಲಿಕೆಗೆ 25 ಕೋಟಿ ದಂಡ ಹಾಕಿರೋದು ಉತ್ತಮ ತೀರ್ಪು ಎಂದು ಹೇಳಿದರು.

    ಎನ್ ಜಿಟಿ ಈ ರೀತಿ ದಂಡ ಹಾಕಿರೋದು ಇದು ಎರಡನೇ ಬಾರಿ. ಇದು ಇಲ್ಲಿನ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದ್ದು, ಸಂತೋಷ್ ಹೆಗ್ಡೆ ಅವ್ರ ಸಮಿತಿ ರಚನೆಗೆ ಸೂಚಿಸಿದ್ದು ಖುಷಿಯಾಗಿದೆ. ಕೆರೆಗಳು ಹಾಳಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಾಗೂ ಅವರ ಸೇವಾ ರಿಜಿಸ್ಟರ್ ನಲ್ಲಿ ಉಲ್ಲೇಖೀಸಬೇಕೆಂದು ಸೂಚನೆ ಕೊಟ್ಟಿರೋದು ಒಪ್ಪಬೇಕಿದೆ. ಕೆರೆಗಳ ಅಭಿವೃದ್ದಿ ವಿಚಾರದಲ್ಲಿ ಉಲ್ಲೇಖಿಸಿರೋ ವೆಬ್ ಸೈಟ್ ಆರಂಭಿಸೋದು ಉತ್ತಮವಾಗಿದೆ. ಕೆರೆ ಸಂರಕ್ಷಣಾ ಮೀಸಲು ನಿಧಿ 500 ಕೋಟಿ ಇಡಲು ಸೂಚಿಸಿದೆ. ಈ ತೀರ್ಪು ನೋಡಿದ್ರೆ ರಾಜ್ಯ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿರೋದು ಗೊತ್ತಾಗಿದೆ. ರಾಜ್ಯದಲ್ಲಿ ಹಾಗೂ ಪಾಲಿಕೆಯಲ್ಲಿ ಆಡಳಿತ ಇಲ್ಲ ಅನ್ನೋದು ಗೊತ್ತಾಗುತ್ತೆ. ಕೂಡಲೇ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು. ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಅಂತ ಅವರು ಆಗ್ರಹಿಸಿದರು.

    https://www.youtube.com/watch?v=syYAEeLN9wc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv