Tag: ತೀರ್ಪು

  • ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರಂತೆ, 5 ಶತಮಾನದ ಹೋರಾಟ ಅಂತ್ಯ – ಕರಂದ್ಲಾಜೆ

    ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರಂತೆ, 5 ಶತಮಾನದ ಹೋರಾಟ ಅಂತ್ಯ – ಕರಂದ್ಲಾಜೆ

    ಬೆಂಗಳೂರು: ಐದು ಶತಮಾನದ ಹೋರಾಟ ಇಂದು ಅಂತ್ಯವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

    ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ಶ್ರೀರಾಮ ಹುಟ್ಟಿದ ಜಾಗದಲ್ಲಿ ಮಂದಿರ ಆಗಬೇಕು ಎನ್ನವ ಹೋರಾಟ ಇತ್ತು. ಐದು ಶತಮಾನದ ಹೋರಾಟ ಇದು. ಶ್ರೀರಾಮ ಹುಟ್ಟಿದ ಜಾಗದಲ್ಲಿ ಮಂದಿರ ಆಗಬೇಕು ಎಂಬ ಹೋರಾಟ ಇತ್ತು. ಜನ ಚಾತಕ ಪಕ್ಷಿಯಂತೆ ಈ ದಿನಕ್ಕಾಗಿ ಕಾಯುತ್ತಿದ್ದರು. ಇದೊಂದು ಐತಿಹಾಸಿಕ ತೀರ್ಪು. ಹಿಂದೂಗಳಿಗೆ ಜಾಗ ಬಿಟ್ಟುಕೊಡುವ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದರು.

    ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ. ರಾಜ್ಯದ ಜನ ಶಾಂತಿಯಿಂದ ವರ್ತನೆ ಮಾಡಬೇಕು. ಎರಡು ಕೋಮಿನ ಜನ ಒಟ್ಟಾಗಿ ಬದುಕಬೇಕು. ಮಸೀದಿಗೂ ಜಾಗ ನೀಡಿ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಒಟ್ಟಾಗಿ ನಾವು ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

    ಲಕ್ಷಾಂತರ ಜನ ರಾಮನ ಮಂದಿರ ಹೋರಾಟಕ್ಕಾಗಿ ಪ್ರಾಣ ತೆತ್ತಿದ್ದರು. ರಾಮ ಮಂದಿರಕ್ಕೆ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ದೇಶದಲ್ಲಿ ನ್ಯಾಯ ಇದೆ ಎನ್ನುವುದು ತೀರ್ಪಿನಿಂದ ಸಾಬೀತಾಗಿದೆ. ಜಾಗ ಹಿಂದೂಗಳಿಗೆ ಬಿಟ್ಟು ಕೊಡುವ ಐತಿಹಾಸಿಕ ತೀರ್ಪು ಕೋರ್ಟ್ ನೀಡಿದೆ. ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರು ಇದ್ದ ಹಾಗೆ. ಹಿಂದೂ-ಮುಸ್ಲಿಮರು ಒಟ್ಟಾಗಿ ಪ್ರೀತಿ ವಿಶ್ವಾಸದಿಂದ ಬದುಕೋಣ ಎಂದು ಕರೆ ನೀಡಿದರು.

    ಮೂರು ತಿಂಗಳಲ್ಲಿ ಮಸೀದಿಗೆ ಜಾಗ ಕೊಡಬೇಕು ಎಂದು ಕೋರ್ಟ್ ಹೇಳಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ದೇಶದ, ರಾಜ್ಯದ ಜನ ಶಾಂತಿ, ಸೌಹಾರ್ದಯುತವಾಗಿ ಇರಬೇಕು ಎಂದರು.

  • ತೀರ್ಪು ಏನೇ ಬಂದ್ರೂ ಅದು ಹೊಸ ಭಾರತಕ್ಕೆ ಮುನ್ನುಡಿ: ಅಣ್ಣಾಮಲೈ

    ತೀರ್ಪು ಏನೇ ಬಂದ್ರೂ ಅದು ಹೊಸ ಭಾರತಕ್ಕೆ ಮುನ್ನುಡಿ: ಅಣ್ಣಾಮಲೈ

    ಬೆಂಗಳೂರು: ದೇಶದ ಜನತೆ ಅಯೋಧ್ಯೆ ತೀರ್ಪಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತೀರ್ಪು ಏನೇ ಬಂದರೂ ಅದು ಭಾರತಕ್ಕೆ ಹೊಸ ಅಧ್ಯಾಯ ಆರಂಭವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಅಣ್ಣಾಮಲೈ ತಮ್ಮ ಟ್ವಿಟ್ಟರಿನಲ್ಲಿ, ಅಯೋಧ್ಯೆ ಬಗ್ಗೆ ಏನೇ ತೀರ್ಪು ಬಂದರೂ ಅದು ಹೊಸ ಭಾರತಕ್ಕೆ ಮುನ್ನುಡಿ. ಈ ದಿನವು ಮಾನವೀಯತೆಗೆ ಶಾಂತಿ, ಸಹನೆ ಹಾಗೂ ಗೌರವವನ್ನು ನೀಡಲಿ. ನಾವು ಸ್ವತಃ ಹೇರಿದ ಗುರುತುಗಳನ್ನು ತೆಗೆದು ಹಾಗೂ ನಮ್ಮ ‘ಭಾರತೀಯ’ ಗುರುತನ್ನು ಮೊದಲು ತರುವ ದಿನ ಆಗಿರಬೇಕು” ಎಂದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ನೋಡಿ ಅಣ್ಣಾಮಲೈ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು, “ನೀವು ಹೇಳಿದ್ದು ನಿಜ ಸರ್, ನಾವು ಮೊದಲು ಭಾರತೀಯರಾಗಿರಬೇಕು” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅಣ್ಣಾಮಲೈ ಅವರ ಮಾತನ್ನು ಒಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ಅಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಏನೇ ತೀರ್ಪು ಬಂದರೂ, ಅದು ಯಾರೊಬ್ಬರ ಗೆಲುವು ಅಥವಾ ಸೋಲು ಆಗುವುದಿಲ. ಈ ನಿರ್ಧಾರವು ಭಾರತದ ಶಾಂತಿ ಹಾಗೂ ಸದ್ಭಾವನೆಯ ಶ್ರೇಷ್ಠ ಸಂಪ್ರದಾಯವನ್ನು ಮತ್ತಷ್ಟು ಬಲಪಡಿಸಬೇಕು ಎಂಬುದು ನಮ್ಮೆಲ್ಲರ ಆದ್ಯತೆಯಾಗಿರಬೇಕು ಎಂದು ದೇಶದ ಜನತೆ ಬಳಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

  • ಅಯೋಧ್ಯೆ ಕೇಸ್ ಇಂದು ತೀರ್ಪು ಪ್ರಕಟ – ಶನಿವಾರವೇ ತೀರ್ಪು ಪ್ರಕಟಗೊಳ್ಳುತ್ತಿರುವುದು ಯಾಕೆ?

    ಅಯೋಧ್ಯೆ ಕೇಸ್ ಇಂದು ತೀರ್ಪು ಪ್ರಕಟ – ಶನಿವಾರವೇ ತೀರ್ಪು ಪ್ರಕಟಗೊಳ್ಳುತ್ತಿರುವುದು ಯಾಕೆ?

    ನವದೆಹಲಿ: ಸಾಧಾರಣವಾಗಿ ಸುಪ್ರೀಂ ಕೋರ್ಟ್ ಶನಿವಾರ ತೀರ್ಪು ಪ್ರಕಟಿಸುವುದಿಲ್ಲ. ಆದರೆ ಅಯೋಧ್ಯೆ ಪ್ರಕರಣದ ತೀರ್ಪನ್ನು ಶನಿವಾರ ಪ್ರಕಟಿಸುವ ಮೂಲಕ ಮುಖ್ಯ ನ್ಯಾ. ರಂಜನ್ ಗೊಗೋಯ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

    ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿ ಆಗಲಿರುವ ಹಿನ್ನೆಲೆಯಲ್ಲಿ ಈ ವಾರ ಅಥವಾ ಮುಂದಿನ ವಾರ ತೀರ್ಪು ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಶನಿವಾರವೇ ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇರಲಿಲ್ಲ. ಗೊಗೋಯ್ ಅವರ ಕೊನೆಯ ಕೆಲಸದ ದಿನಾಂಕ ನ.16 ಶನಿವಾರ ಆಗಿದ್ದರಿಂದ ಈ ವಾರ ತೀರ್ಪು ಪ್ರಕಟವಾಗದ ಕಾರಣ ನವೆಂಬರ್ 14, 15 ರಂದು ತೀರ್ಪು ಪ್ರಕಟವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಇದನ್ನೂ ಓದಿ:ಸಂವಿಧಾನ ಪೀಠದಿಂದ ಅಯೋಧ್ಯೆ ತೀರ್ಪು – ಐವರು ನ್ಯಾಯಾಧೀಶರ ಕಿರು ಪರಿಚಯ ಓದಿ

    ಅಯೋಧ್ಯೆ ವಿಚಾರ ಬಹಳ ಸೂಕ್ಷ್ಮವಾಗಿರುವ ಕಾರಣ ಸಂವಿಧಾನ ಪೀಠ ಸಂಧಾನದ ಮೂಲಕ ಬಗೆಹರಿಸಲು ಮಧ್ಯಸ್ಥಿಕೆ ತಂಡವನ್ನು ರಚಿಸಿತು. ಈ ತಂಡ ನಡೆಸಿದ ಸಂಧಾನ ಪ್ರಕ್ರಿಯೆ ವಿಫಲವಾದ ಹಿನ್ನೆಲೆಯಲ್ಲಿ ಅಗಸ್ಟ್ 6 ರಿಂದ ಸುಪ್ರೀಂ ಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿದ ಸಂವಿಧಾನ ಪೀಠ ಅಕ್ಟೋಬರ್ 16ಕ್ಕೆ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು.

    ಇಂದು ತೀರ್ಪಿನ ದಿನಾಂಕ ಪ್ರಕಟಗೊಳ್ಳುವ ಮೊದಲೇ ರಂಜನ್ ಗೊಗೋಯ್ ಅವರು ಶುಕ್ರವಾರ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅನುಪ್ ಚಂದ್ರ ಪಾಂಡೆ ಮತ್ತು ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಸಿಂಗ್ ಅವರನ್ನು ಭೇಟಿಯಾಗಿ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದ್ದರು. ಸುಪ್ರೀಂ ನ್ಯಾಯಮೂರ್ತಿಗಳೇ ಸರ್ಕಾರದ ಪ್ರತಿನಿಧಿಗಳ ಜೊತೆ ಕಾನೂನು ಬಗ್ಗೆ ಚರ್ಚೆ ನಡೆಸಿರುವುದು ಬಹಳ ಅಪರೂಪ.

    ಸಾಧಾರಣವಾಗಿ ಒಂದು ದಿನ ಅಥವಾ ಎರಡು ದಿನದ ಮೊದಲು ತೀರ್ಪು ಪ್ರಕಟಗೊಳ್ಳುವ ದಿನಾಂಕವನ್ನು ಸುಪ್ರೀಂ ಕೋರ್ಟ್ ಪ್ರಕಟಿಸುತ್ತದೆ. ಆದರೆ ಈ ಪ್ರಕರಣದಲ್ಲಿ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶುಕ್ರವಾರ ರಾತ್ರಿ ನ್ಯಾಯಮೂರ್ತಿಗಳು ದಿನಾಂಕ ಪ್ರಕಟಿಸಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

    ಮೊದಲೇ ದಿನಾಂಕ ಪ್ರಕಟಿಸಿದರೆ ಸಮಾಜ ವಿರೋಧಿ ಜನರಿಗೆ ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲದೇ ನ.10 ಭಾನುವಾರ ಸಾರ್ವಜನಿಕ ರಜೆಯಿದೆ. ಹೀಗಾಗಿ ಯಾವುದೇ ರೀತಿಯಲ್ಲಿ ಯಾರಿಗೂ ಸಮಸ್ಯೆ ಆಗದೇ ಇರಲು ರಂಜನ್ ಗೊಗೋಯ್ ಅವರು ದಿಢೀರ್ ಆಗಿ ಶುಕ್ರವಾರ ರಾತ್ರಿ ತೀರ್ಪು ಪ್ರಕಟಿಸುವ ದಿನಾಂಕವನ್ನು ಘೋಷಣೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

  • ನನ್ನ ಜೀವನದಲ್ಲಿ ಈ ದಿನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ: ಪೇಜಾವರಶ್ರೀ

    ನನ್ನ ಜೀವನದಲ್ಲಿ ಈ ದಿನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ: ಪೇಜಾವರಶ್ರೀ

    ಉಡುಪಿ: ನನ್ನ ಜೀವನದಲ್ಲಿ ಈ ದಿನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಪೇಜಾವರಶ್ರೀ ಅವರು ಹೇಳಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪೇಜಾವರಶ್ರೀ, ನನ್ನ ಜೀವನದಲ್ಲಿ ಈ ದಿನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ರಾಮಮಂದಿರ ಬಗ್ಗೆ ಬಹಳ ನಿರಾಶನಾಗಿದ್ದೆ. ನನಗೆ ಬಹಳ ವಯಸ್ಸಾಗಿರುವುದರಿಂದ ರಾಮಮಂದಿರದ ಆಸೆ ಕಳೆದುಕೊಂಡಿದ್ದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ನಾನು ಬಹಳ ನಿರೀಕ್ಷೆಯಿಂದ ತೀರ್ಪನ್ನು ಎದುರು ನೋಡುತ್ತಿದ್ದೇನೆ. ರಾಮಮಂದಿರ ಇಡೀ ದೇಶದ ಜನರ ಕನಸು, ರಾಮ ಮಂದಿರದ ಸ್ವಲ್ಪ ದೂರದಲ್ಲಿ ಮಸೀದಿ ಕೂಡ ನಿರ್ಮಾಣವಾಗಲಿ. ಇಂದಿನ ತೀರ್ಪು ಯಾರ ಪರವಾದರೂ, ಯಾರ ವಿರುದ್ಧವಾದರೂ ಸೌಹಾರ್ದತೆ ಮುಖ್ಯ. ಸಂವಿಧಾನಕ್ಕೆ ಭಂಗವಾಗಬಾರದು. ಕಾನೂನಿನ, ಕೋರ್ಟಿನ ವಿರುದ್ಧ ವರ್ತನೆ ಬೇಡ ಎಂದು ವಿನಂತಿಸಿದರು.

    ರಾಜ್ಯದಲ್ಲಿ ಸಂಘರ್ಷಗಳು ನಡೆದರೆ ಉಪವಾಸ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ದೆಹಲಿಯಲ್ಲಿ ಸಂತರ ಶಾಂತಿಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಮುಂದೆ ಅಯೋಧ್ಯೆಗೆ ಕೂಡ ಭೇಟಿಯಾಗುವ ಆಲೋಚನೆ ಇದೆ ಎಂದು ಹೇಳಿದರು.

  • ಸಂವಿಧಾನ ಪೀಠದಿಂದ ಅಯೋಧ್ಯೆ ತೀರ್ಪು – ಐವರು ನ್ಯಾಯಾಧೀಶರ ಕಿರು ಪರಿಚಯ ಓದಿ

    ಸಂವಿಧಾನ ಪೀಠದಿಂದ ಅಯೋಧ್ಯೆ ತೀರ್ಪು – ಐವರು ನ್ಯಾಯಾಧೀಶರ ಕಿರು ಪರಿಚಯ ಓದಿ

    ನವದೆಹಲಿ: ಅಯೋಧ್ಯೆ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಪ್ರಕಟಿಸಲಿದ್ದು, ಐವರು ನ್ಯಾಯಮೂರ್ತಿಗಳಿಗೆ ನೀಡಲಾಗುವ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್, ನ್ಯಾಯಮೂರ್ತಿ ಎಸ್‍ಎ ಬೋಬ್ಡೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಪೀಠ ಬೆಳಗ್ಗೆ 10.30ಕ್ಕೆ ತನ್ನ ತೀರ್ಪನ್ನು ಪ್ರಕಟಿಸಲಿದೆ. ಎಲ್ಲ ನ್ಯಾಯಾಧೀಶರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ ಎಂದು ವರದಿಯಾಗಿದೆ.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್:
    ಮುಖ್ಯ ನ್ಯಾಯಮೂರ್ತಿಗಳಾಗಿರುವ ರಂಜನ್ ಗೋಗೊಯ್ ಅಸ್ಸಾಂ ಮೂಲದವರು. ದೇಶದ ಈಶಾನ್ಯ ಭಾಗದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಕ್ಕೆ ನೇಮಕಗೊಂಡ ಮೊದಲಿಗರು ರಂಜನ್ ಗೋಗೊಯ್. 1978ರಲ್ಲಿ ಗುವಾಹಟಿಯ ಹೈಕೋರ್ಟ್ ನಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಫೆಬ್ರವರಿ 28, 2001ರಂದು ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಾಧೀಶರಾದ ನಂತರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗಳಲ್ಲಿ ರಂಜನ್ ಗೋಗಯ್ ಸೇವೆ ಸಲ್ಲಿಸಿದ್ದಾರೆ. ಏಪ್ರಿಲ್ 2012ರಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು. ನವೆಂಬರ್ 17ರಂದು ನಿವೃತ್ತಿ ಹೊಂದುತ್ತಿರುವ ರಂಜನ್ ಗೋಗೊಯ್, ವೃತ್ತಿ ಜೀವನದಲ್ಲಿ ಹಲವು ಪ್ರಕರಣಗಳನ್ನು ಆಲಿಸಿದ್ದು, ಅವುಗಳಲ್ಲಿ ಅಯೋಧ್ಯೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‍ಸಿಆರ್) ಸೇರಿವೆ. ಶುಕ್ರವಾರ ಸ್ವತಃ ಉತ್ತರ ಪ್ರದೇಶ ಪೊಲೀಸರ ಜೊತೆ ಭದ್ರತೆ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದರು.

    ನ್ಯಾ. ಶರದ್ ಅರವಿಂದ್ ಬೋಬ್ಡೆ:
    ರಂಜನ್ ಗೋಗೊಯ್ ಅವರ ನಿವೃತ್ತಿ ಬಳಿಕ ನ್ಯಾ. ಶರದ್ ಅರವಿಂದ್ ಬೋಬ್ಡೆ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಲಿದ್ದಾರೆ. 2000ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬೋಬ್ಡೆ ಅವರು ನೇಮಕಗೊಂಡರು. ಮಧ್ಯ ಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿರುವ ಬೋಬ್ಡೆ ಅವರು ಏಪ್ರಿಲ್ 2013ರಲ್ಲಿ ಸುಪ್ರಿಂಕೋರ್ಟಿಗೆ ಬಡ್ತಿ ಪಡೆದರು. 63 ವರ್ಷದ ಬೋಬ್ಡೆ ನವೆಂಬರ್ 17ರ ನಂತರ ಸಿಜೆಐ ಆಗಿ 18 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ, ವಿಶ್ವದ ಪ್ರಮುಖವಾದ ಕೇಸ್ ಗಳಲ್ಲಿ ಅಯೋಧ್ಯೆ ಪ್ರಕರಣ ಸಹ ಒಂದಾಗಿದೆ ಎಂದು ಹೇಳಿದ್ದರು.

    ನ್ಯಾ. ಡಿ.ವೈ.ಚಂದ್ರಚೂಡ್
    ಸುಪ್ರೀಂ ಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಅತಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದ ವೈ.ವಿ. ಚಂದ್ರಚೂಡ್ ಅವರ ಪುತ್ರರಾಗಿರುವ ಡಿ.ವೈ.ಚಂದ್ರಚೂಡ್ ಮೇ 2016ರಲ್ಲಿ ಸುಪ್ರೀಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡರು. ಹಾರ್ವರ್ಡ್ ನಲ್ಲಿ ಕಾನೂನು ಪದವಿ ಪಡೆದಿರುವ ಚಂದ್ರಚೂಡ್ ಬಾಂಬೆ ಮತ್ತು ಅಲಹಬಾದ್ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸಿದ್ದಾರೆ.

    ನ್ಯಾ.ಅಶೋಕ್ ಭೂಷಣ್:
    1979ರಲ್ಲಿ ನ್ಯಾ.ಅಶೋಕ್ ಭೂಷಣ್ ಅಲಹಬಾದ್ ಹೈಕೋರ್ಟಿನಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಅರಂಭಿಸಿದರು. 2001ರಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. ಜುಲೈ 2014ರಲ್ಲಿ ಕೇರಳ ಹೈಕೋರ್ಟಿಗೆ ವರ್ಗಾವಣೆಗೊಂಡು ಮಾರ್ಚ್ 2015ರಲ್ಲಿ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಮೇ 13, 2016ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.

    ನ್ಯಾ.ಅಬ್ದುಲ್ ನಜೀರ್:
    ಫೆಬ್ರವರಿ 1983ರಲ್ಲಿ ಕರ್ನಾಟಕದ ಹೈಕೋರ್ಟಿನಲ್ಲಿ 20 ವರ್ಷಗಳ ಕಾಲ ನ್ಯಾ.ಅಬ್ದುಲ್ ನಜೀರ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ತದನಂತರ ಖಾಯಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಫೆಬ್ರವರಿ 17, 2017ರಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.

  • ಅಯೋಧ್ಯೆ ತೀರ್ಪಿಗಾಗಿ ವಿದೇಶ ಪ್ರವಾಸ ರದ್ದುಗೊಳಿಸಿದ್ದ ಗೊಗೋಯ್

    ಅಯೋಧ್ಯೆ ತೀರ್ಪಿಗಾಗಿ ವಿದೇಶ ಪ್ರವಾಸ ರದ್ದುಗೊಳಿಸಿದ್ದ ಗೊಗೋಯ್

    ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಅವರು ಅಯೋಧ್ಯೆ ಪ್ರಕರಣದ ತೀರ್ಪು ಬರೆಯಲು ತಮ್ಮ ವಿದೇಶ ಪ್ರವಾಸವನ್ನೇ ರದ್ದುಗೊಳಿಸಿದ್ದರು.

    ಗೊಗೋಯ್ ಅವರು ದಕ್ಷಿಣ ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಪ್ರವಾಸ ಹೋಗಲು ವೇಳಾಪಟ್ಟಿ ಸಿದ್ಧಗೊಂಡಿತ್ತು. ಆದರೆ ನವೆಂಬರ್ 17ರಂದು ನಿವೃತ್ತಿ ಆಗುವುದರ ಒಳಗಡೆ ಮಹತ್ವದ ತೀರ್ಪು ಪ್ರಕಟಿಸಬೇಕಿದ್ದ ಕಾರಣ ಗೊಗೋಯ್ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದರು.

    ನಿವೃತ್ತಿ ಆಗುವುದಕ್ಕೂ ಮೊದಲು ಅಯೋಧ್ಯೆ ತೀರ್ಪ ನೀಡಬೇಕಿತ್ತು. ಈ ಬಗ್ಗೆ ಅಧ್ಯಯನ ಮಾಡಿ ತೀರ್ಪು ಬರೆಯಬೇಕಿತ್ತು. ಹಾಗಾಗಿ ಅವರು ಅಯೋಧ್ಯೆ ತೀರ್ಪು ನೀಡುವವರೆಗೂ ಎಲ್ಲಿಯೂ ಹೋಗಲ್ಲ ಎಂದು ತಿಳಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

    ಐವರು ನ್ಯಾಯಧೀಶರಾದ ಸಿಜೆಐ ರಂಜನ್ ಗೊಗೋಯ್, ಎಸ್.ಎ ಬೋಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಎ ನಜೀರ್ ನೇತೃತ್ವದ ಸಂವಿಧಾನ ಪೀಠ ಇಂದು ಬೆಳಗ್ಗೆ 10:30ಕ್ಕೆ ಐತಿಹಾಸಿಕ ತೀರ್ಪು ಪ್ರಕಟಿಸಲಿದೆ.

  • ಅಯೋಧ್ಯೆ ತೀರ್ಪು ಏನೇ ಬಂದ್ರೂ ಶಾಂತಿಯುತವಾಗಿ ಸ್ವಾಗತಿಸ್ತೀವಿ: ರೋಶನ್ ಬೇಗ್

    ಅಯೋಧ್ಯೆ ತೀರ್ಪು ಏನೇ ಬಂದ್ರೂ ಶಾಂತಿಯುತವಾಗಿ ಸ್ವಾಗತಿಸ್ತೀವಿ: ರೋಶನ್ ಬೇಗ್

    ಬೆಂಗಳೂರು: ರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ವಿಚಾರ ಸಾಕಾಗಿ ಹೋಗಿದೆ. ಇಂದು ಅಯೋದ್ಯೆ ತೀರ್ಪು ಏನೇ ಬಂದ್ರು ಶಾಂತಿಯುತವಾಗಿ ಸ್ವಾಗತ ಮಾಡ್ತಿವಿ ಎಂದು ಅನರ್ಹ ಶಾಸನ ರೋಶನ್ ಬೇಗ್ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಮ ಮಂದಿರ ಭಾರತ ದೇಶದಲ್ಲಿ ನಿರ್ಮಾಣವಾಗದೇ ಪಾಕಿಸ್ತಾನದಲ್ಲಿ ನಿರ್ಮಾಣವಾಗುತ್ತಾ? ರಾಮ ಮಂದಿರ ಹಾಗೂ ಬಾಬ್ರಿ ಮಸಿದಿ ವಿಚಾರ ಸಾಕಾಗಿ ಹೋಗಿದೆ. ಇಂದು ಅಯೋಧ್ಯೆ ತೀರ್ಪು ಏನೇ ಬಂದ್ರು ಶಾಂತಿಯುತವಾಗಿ ಸ್ವಾಗತ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಒಂದೂವರೆ ಶತಮಾನದ ಅಯೋಧ್ಯೆ ವ್ಯಾಜ್ಯ ಇಂದು ಇತ್ಯರ್ಥ – ಯಾರ ವಾದ ಏನು? ಯಾವ ವರ್ಷ ಏನಾಯ್ತು?

    ಕರ್ನಾಟಕದಿಂದ ಕಾಶ್ರ್ಮಿರದವರೆಗೂ ಮುಸ್ಲಿಂ ಧರ್ಮಗುರುಗಳು ಶಾಂತಿಯುತವಾಗಿ ತೀರ್ಪನ್ನ ಸ್ವಾಗತಿಸಲು ನಿರ್ಧರಿಸಿದ್ದಾರೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂದು ಎಂಟು ತಿಂಗಳ ಹಿಂದೆಯೇ ಹೇಳಿಕೆ ನೀಡಿದ್ದೆ ಎಂದು ಹೇಳಿದರು.

  • ನಮಗೆ ಒಳ್ಳೆಯದು ಬರುತ್ತೆ, ಹನುಮಂತನ ರೀತಿ ಬೆಂಕಿ ಹಚ್ಚಲು ಬರುತ್ತೆ: ಬಿ.ಎಲ್ ಸಂತೋಷ್

    ನಮಗೆ ಒಳ್ಳೆಯದು ಬರುತ್ತೆ, ಹನುಮಂತನ ರೀತಿ ಬೆಂಕಿ ಹಚ್ಚಲು ಬರುತ್ತೆ: ಬಿ.ಎಲ್ ಸಂತೋಷ್

    ಬಳ್ಳಾರಿ: ನಾವೂ ಒಳ್ಳೆಯರಾಗಿ ಹೇಳುತ್ತೇವೆ ಕೇಳಿ. ಇಲ್ಲದಿದ್ದರೆ ನಮಗೆ ಹನುಮಂತನ ತರಹ ಬೆಂಕಿ ಹಚ್ಚಲು ಬರುತ್ತೆ ಎಂದು ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಬೆಂಕಿ ಹಚ್ಚುವ ಮಾತುಗಳನ್ನಾಡಿದ್ದಾರೆ.

    ಬಳ್ಳಾರಿಯ ಮೋಕಾ ಸಮೀಪದ ಮರೂರು ಗ್ರಾಮದಲ್ಲಿ ಹನುಮ ಮಾಲಾಧಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂತೋಷ್, ಮತಾಂತರ ಮತ್ತು ಗೋಹತ್ಯೆ ಮಾಡೋರನ್ನು ಉದ್ದೇಶಿಸಿ ಈ ರೀತಿ ಮಾತನಾಡಿದ್ದಾರೆ. ಅಲ್ಲದೇ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಈ ಬಾರಿ ನಮ್ಮ ಪರ ತೀರ್ಪು ಬರುತ್ತದೆ. ನ್ಯಾಯಾಧೀಶರಿಗೆ ನಮ್ಮ ಕೂಗು ಕೇಳಿಸುವಂತೆ ಜೈ ಶ್ರೀ ರಾಮ್ ಎಂದು ಕೂಗಿ ಎಂದು ಹೇಳಿದರು.

    ನ್ಯಾಯಾಲಯ ಸಾಮಾನ್ಯ ಜನರ ಭಾವನೆಗೆ ಬೆಲೆಕೊಟ್ಟು ವಿಚಾರಣೆ ಕೈಗೆತ್ತಿಕೊಂಡಿದೆ ಯಾವುದ್ಯಾವುದೋ ಕೇಸ್‍ಗಳಿಗೆ ಮಧ್ಯರಾತ್ರಿ 2 ಗಂಟೆಗೆ ತೀರ್ಪು ಕೊಡುತ್ತಾರೆ. ಈ ವಿಚಾರದಲ್ಲಿ ಹಾಗೇ ಮಾಡಲಿ. ತೀರ್ಪು ನಮ್ಮ ಪರ ಬರುತ್ತದೆ ಎಂದು ನಂಬಿಕೆ ಇದೆ. ಇನ್ನೊಂದು 25 ದಿನ ಕಾಯೋಣ, ಈ ಬಾರಿ ನಮ್ಮ ಸಂಕಲ್ಪ ಪೂರ್ಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ವಿಪ್ ನೀಡಬಾರದು ಎಂದು ಎಲ್ಲೂ ಹೇಳಿಲ್ಲ – ಶಿವಲಿಂಗೇಗೌಡ

    ವಿಪ್ ನೀಡಬಾರದು ಎಂದು ಎಲ್ಲೂ ಹೇಳಿಲ್ಲ – ಶಿವಲಿಂಗೇಗೌಡ

    ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟಿನ ತೀರ್ಪು ಯಾರ ಪರವೂ ಇಲ್ಲ ಯಾರ ವಿರುದ್ಧವೂ ಅಲ್ಲ. ನ್ಯಾಯಾಲಯ ಸ್ಪೀಕರ್ ಅವರ ಪರಮೋಚ್ಛ ಅಧಿಕಾರವನ್ನು ಎತ್ತಿ ಹಿಡಿದಿದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿಶ್ಲೇಷಿಸಿದ್ದಾರೆ.

    ದೇವನಹಳ್ಳಿ ಬಳಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಸುಪ್ರೀಂ ಕೋರ್ಟ್ ಕಾಲ ಮಿತಿಯೊಳಗೆ ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥ ಮಾಡಿ ಎಂದು ಹೇಳಿದೆ ಹೊರತು ಇಂತಿಷ್ಟೇ ದಿನದಲ್ಲಿ ಮಾಡಿ ಎಂದು ಹೇಳಿಲ್ಲ. ಇನ್ನೂ ಅತೃಪ್ತ ಶಾಸಕರ ಮೇಲೆ ಸದನಕ್ಕೆ ಹಾಜರಾಗುವಂತೆ ಒತ್ತಡ ಹೇರುವಂತಿಲ್ಲ ಎಂದು ಹೇಳಿದೆ. ಆದರೆ ವಿಪ್ ನೀಡಬಾರದು ಎಂದೂ ಎಲ್ಲೂ ಹೇಳಿಲ್ಲ ಎಂದರು.

    ಸಂವಿಧಾನ ದತ್ತವಾಗಿ ಶಾಸಕರಿಗೆ ವಿಪ್ ಜಾರಿ ಮಾಡಲಾಗುವುದು. ವಿಪ್ ಜಾರಿ ಮಾಡಿದ ನಂತರ ಸದನಕ್ಕೆ ಹಾಜರಾಗದಿದ್ದರೆ ಅನರ್ಹತೆ ಪ್ರಶ್ನೆ ಎದುರಾಗುತ್ತದೆ. ಆಗ ಸಹಜವಾಗಿ ಪಕ್ಷದಿಂದ ಅನರ್ಹತೆ ಮಾಡಿ ಅಂತ ಸ್ಪೀಕರ್ ಅವರಿಗೆ ದೂರು ನೀಡುತ್ತೇವೆ. ಆಗ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಅನರ್ಹತೆಯನ್ನು ಮಾಡಲೇಬೇಕಾಗುತ್ತೆ. ಹೀಗಾಗಿ ಇದು ಅತೃಪ್ತ ಶಾಸಕರ ಪರದ ತೀರ್ಪು ಅಲ್ಲ. ನ್ಯಾಯಾಲಯ ಸ್ಪೀಕರ್ ಅವರಿಗೆ ಎಲ್ಲಾ ಅಧಿಕಾರವನ್ನು ಅವರ ವಿವೇಚನೆಗೆ ಬಿಟ್ಟಿದೆ ಎಂದು ಹೇಳಿದರು.

    ಸ್ಪೀಕರ್ ಯಾವಾಗ ಬೇಕಾದರೂ ತಮ್ಮ ತೀರ್ಮಾನಗಳನ್ನು ಕೈಗೊಳ್ಳಬಹುದು. ಈ ಹಿಂದೆ ಈ ರೀತಿ ಆದಂತಹ ಹಲವು ಉದಾಹರಣೆಗಳೂ ಇವೆ. ನಾಳೆ ವಿಶ್ವಾಸ ಮತಯಾಚನೆ ಮಾಡಲಿದ್ದೇವೆ. ಅದರ ಮೇಲೆ ಚರ್ಚೆ ನಡೆಯಲಿದ್ದು ನಾಳೆ ಅಥವಾ ನಾಡಿದ್ದು ಬೇಕಾದರೂ ನಾವು ಬಹುಮತ ಸಾಬೀತುಪಡಿಸುತ್ತೇವೆ. ಸದನದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಲು ಯತ್ನಿಸಿದವರ ಎಲ್ಲಾ ಮಾಹಿತಿಗಳನ್ನು ಬಿಚ್ಚಡಲಿದ್ದೇವೆ ಎಂದು ಗರಂ ಆದರು.

  • ಸುಪ್ರೀಂಗಿಂತ ದೊಡ್ಡವನು ನಾನಲ್ಲ, ನಾನು ಯಾರಿಗೂ ಸವಾಲ್ ಹಾಕಿಲ್ಲ: ಸ್ಪೀಕರ್

    ಸುಪ್ರೀಂಗಿಂತ ದೊಡ್ಡವನು ನಾನಲ್ಲ, ನಾನು ಯಾರಿಗೂ ಸವಾಲ್ ಹಾಕಿಲ್ಲ: ಸ್ಪೀಕರ್

    ಕೋಲಾರ: ಮೈತ್ರಿ ಪಕ್ಷದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ನಾನು ಯಾರಿಗೂ ಸವಾಲ್ ಹಾಕಿಲ್ಲ, ಸುಪ್ರೀಂ ಕೋರ್ಟಿಗಿಂತ ದೊಡ್ಡವನು ನಾನಲ್ಲ ಎಂದಿದ್ದಾರೆ.

    ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಅತೃಪ್ತರ ರಾಜೀನಾಮೆ ಅಂಗೀಕಾರ ಮಾಡುವ ಬಗ್ಗೆ ವಾದ ಪ್ರತಿವಾದಗಳು ನಡೆದಿದೆ. ಈ ಸಂಬಂಧ ತೀರ್ಪನ್ನು ನಾಳೆ ನೀಡುವುದಾಗಿ ಕೋರ್ಟ್ ತಿಳಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು, ನಾಳೆಯ ಕೋರ್ಟ್ ತೀರ್ಪು ನೋಡಿದ ಬಳಿಕ ಪ್ರತಿಕ್ರಿಯೆ ನೀಡುವೆ. ಸುಪ್ರೀಂ ಕೋರ್ಟ್ ಗಿಂತ ದೊಡ್ಡವನು ನಾನಲ್ಲ. ಇವತ್ತು ವಾದ ವಿವಾದ ನಡೆದಿದೆ. ಅದರ ಬಗ್ಗೆ ಅಂತಿಮ ತೀರ್ಮಾನ ಬರುವವರೆಗೂ ಮಾತನಾಡಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿ ನಾನು ನಿರ್ವಹಣೆ ಮಾಡುತ್ತಿದ್ದೇನೆ. ಯಾರಿಗೂ ನಾನು ಸವಾಲ್ ಹಾಕಿಲ್ಲ ಎಂದರು.

    ನಾನು ಯಾರ ಜೊತೆಗೂ ಜಿದ್ದಾ ಜಿದ್ದಿ ಮಾಡಿಲ್ಲ. ನನ್ನ ಧ್ವನಿಯೇ ಸ್ಪಲ್ಪ ಜೋರಾಗಿದೆ. ನಮ್ಮಪ್ಪನಿಗೂ ಸ್ವಲ್ಪ ಗಂಟಲು ದೊಡ್ಡದಾಗಿತ್ತು ಹಾಗಾಗಿ ನಾನು ಹಾಗೆ ಮಾತನಾಡುತ್ತೇನೆ. ಇದು ಸುಪ್ರೀಂ ಕೋರ್ಟ್ ಹಾಗೂ ನನ್ನ ನಡುವಿನ ಸಂಘರ್ಷ ಅಲ್ಲ. ನಿಮ್ಮ ಭಾಷೆಯಲ್ಲಿ ನೀವು ಏನಾದರೂ ಮಾತನಾಡಿಕೊಳ್ಳಿ. ನಿಮಗೆ ಪತ್ರಿಕಾ ಸ್ವಾತಂತ್ರ್ಯವಿದೆ ಎಂದು ಮಾಧ್ಯಮಗಳಿಗೆ ಹೇಳಿದರು.