ಶಿವಮೊಗ್ಗ: ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿ ಅರ್ಚಕನಿಗೆ 14 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ನಗರದ ಜೈಲು ರಸ್ತೆಯ ದುರ್ಗಾ ಪರಮೇಶ್ವರಿ ದೇವಾಲಯದ ಅರ್ಚಕನಾಗಿದ್ದ ಶಿವಕುಮಾರ್ ಕಳೆದ 2016ರಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದ ಅಪ್ರಾಪ್ತೆ ಬಾಲಕಿಯನ್ನು ಆತ್ಯಾಚಾರ ಮಾಡಿದ್ದ. ನೀನು ಮಂಕಾಗಿದ್ದೀಯ, ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆಯುವ ಹಾಗೆ ಪೂಜೆ ಮಾಡುತ್ತೇನೆಂದು ಆಮಿಷ ತೋರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.
ಅಪ್ರಾಪ್ತೆ ಹಾಗೂ ಆಕೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿದ್ದರು. ತನಿಖೆಯ ನಂತರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪ್ರಸಾದ್ ಅವರು ಶಿವಕುಮಾರ್‍ಗೆ 14 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ದಂಡದ ಹಣವನ್ನು ಸಂತ್ರಸ್ತೆ ಬಾಲಕಿಗೆ ನೀಡುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಕೆ.ಎಸ್.ಸತೀಶ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಬೆಂಗಳೂರು: ಬಾಬ್ರಿ ಮಸೀದಿಯ ಹೋರಾಟದಲ್ಲಿ ನಾನು ಸಹ ಭಾಗವಹಿಸಿದ್ದೆ, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬಂದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದು ಸಿಬಿಐ ನ್ಯಾಯಾಲಯ ಐತಿಹಾಸಿಕ ತೀರ್ಪು ಕೊಟ್ಟಿದೆ. 32 ನಾಯಕರನ್ನು ನಿರ್ದೋಷಿ ಎಂದು ತೀರ್ಪು ಬಂದಿದೆ. ಇದರಿಂದ ಸತ್ಯಕ್ಕೆ ಜಯ ಸಿಕ್ಕಿದೆ. ಈ ಹೋರಾಟದಲ್ಲಿ ನಾನೂ ಸಹ ಭಾಗವಹಿಸಿದ್ದೆ ಎಂದು ಸಂತಸ ವ್ಯಕ್ತಪಡಿಸಿದರು.
ನನಗೂ ಈ ತೀರ್ಪು ವೈಯಕ್ತಿಕವಾಗಿ ಸಂತಸ ತಂದಿದೆ. ಹಿರಿಯ ನಾಯಕ ಅಡ್ವಾಣಿಯವರ ಯಶಸ್ವಿ ಹೋರಾಟದಿಂದ ಅಯೋಧ್ಯೆಯಲ್ಲಿ ಇಂದು ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜನ ತೀರ್ಪು ಏನಾಗುತ್ತೆ ಎಂದು ಬಹಳ ಕಾತುರದಿಂದ ಕಾಯುತ್ತಿದ್ದರು. ಇವತ್ತು ಭಾರತೀಯರೆಲ್ಲರೂ ಸಂತೋಷ ಪಡುವ ದಿನ. ಹೋರಾಟಗಾರರಿಗೆ ಗೆಲುವು ಯಾವತ್ತೂ ಶತಸಿದ್ಧ ಅನ್ನೋದಕ್ಕೆ ಇದು ತಾಜಾ ಉದಾಹರಣೆ. ಈ ಯಶಸ್ಸಿಗೆ ಅಡ್ವಾಣಿ, ಜೋಷಿ, ಉಮಾಭಾರತಿಯಂತವರು ಕಾರಣ ಎಂದರು.
1992 ಡಿಸೆಂಬರ್ 6ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 351 ಸಾಕ್ಷಿಗಳನ್ನು ಹಾಗೂ 600 ದಾಖಲೆ ಪ್ರತಿಗಳನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿತ್ತು. ಆರಂಭಿಕವಾಗಿ 48 ಮಂದಿಯನ್ನು ಆರೋಪಿಗಳೆಂದು ಸಿಬಿಐ ಚಾರ್ಜ್‍ಶೀಟ್ ಸಲ್ಲಿಸಿತ್ತು. ಆದರೆ ಮೂರು ದಶಕಗಳಿಂದ ವಿಚಾರಣೆ ನಡೆಯುತ್ತಿದ್ದ ಕಾರಣ 48 ಜನ ಆರೋಪಿಗಳ ಪೈಕಿ 16 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 32 ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿತ್ತು. ಈಗ ಈ ಪ್ರಕರಣದಲ್ಲಿದ್ದ ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ.
ಬೆಂಗಳೂರು: ನ್ಯಾಯ ಸಿಗುವುದು ತಡವಾಗಿದೆ. ಆದರೆ ನಿರಾಕರಿಸಲಾಗಿಲ್ಲ ಎಂದು ಬಾಬ್ರಿ ಮಸೀದಿ ದ್ವಂಸದ ತೀರ್ಪಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
28 ವರ್ಷದ ಹಿಂದೆ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು. ಈ ಪ್ರಕರಣವು ಕಳೆದ 28 ವರ್ಷದಿಂದ ನ್ಯಾಯಾಲಯದಲ್ಲಿತ್ತು. ಇಂದು ಇದರ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ.ಸುರೇಂದ್ರ ಕುಮಾರ್ ಯಾದವ್, ಇದು ಇಂದು ಆಕಸ್ಮಿಕ ಘಟನೆ. ಇದು ಪೂರ್ವ ನಿಯೋಜಿತ ಕೃತ್ಯವಲ್ಲ ಎಂದು ಹೇಳಿ ಪ್ರಕರಣದಲ್ಲಿದ್ದ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
ಈ ತೀರ್ಪಿನಿಂದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ವಿಚಾರವಾಗಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಸುರೇಶ್ ಕುಮಾರ್ ಅವರು, ವಿಳಂಬವಾದರೂ ಸಂಪೂರ್ಣ ನ್ಯಾಯ ನೀಡಿದ ತೀರ್ಪಿಗೆ ಧನ್ಯವಾದಗಳು ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಇಂಗ್ಲಿಷಿನಲ್ಲಿ ಟ್ವೀಟ್ ಮಾಡಿ ನ್ಯಾಯ ಸಿಗುವುದು ತಡವಾದರೂ, ನಿರಾಕರಿಸಲಾಗಿಲ್ಲ ಎಂದಿದ್ದಾರೆ.
ವಿಳಂಬವಾದರೂ ಸಂಪೂರ್ಣ ನ್ಯಾಯ ನೀಡಿದ ತೀರ್ಪಿಗೆ ಧನ್ಯವಾದಗಳು. 🙏🙏🙏
1992 ಡಿಸೆಂಬರ್ 6ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 351 ಸಾಕ್ಷಿಗಳನ್ನು ಹಾಗೂ 600 ದಾಖಲೆ ಪ್ರತಿಗಳನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿದೆ. ಆರಂಭಿಕವಾಗಿ 48 ಮಂದಿಯನ್ನು ಆರೋಪಿಗಳೆಂದು ಸಿಬಿಐ ಚಾರ್ಜ್‍ಶೀಟ್ ಸಲ್ಲಿಸಿತ್ತು. ಆದರೆ ಮೂರು ದಶಕಗಳಿಂದ ವಿಚಾರಣೆ ನಡೆಯುತ್ತಿದ್ದ ಕಾರಣ 48 ಜನ ಆರೋಪಿಗಳ ಪೈಕಿ 16 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 32 ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿತ್ತು. ಈಗ ಈ ಪ್ರಕರಣದಲ್ಲಿದ್ದ ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ.
32 ಮಂದಿಆರೋಪಿಗಳು ಯಾರು?
ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಧೀರ್ ಕಕ್ಕರ್, ಸತೀಶ್ ಪ್ರಧಾನ್, ರಾಮ್ ಚಂದ್ರ ಖತ್ರಿ, ಸಂತೋಷ್ ದುಬೆ, ಓಂ ಪ್ರಕಾಶ್ ಪಾಂಡೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಪ್ರಕಾಶ್ ಶರ್ನಾ, ಗಾಂಧಿ ಸಿಂಗ್ ಕಮಲೇಶ್ ತ್ರಿಪಾಠಿ, ಬ್ರಿಜ್ ಭೂಷಣ್ ಸಿಂಗ್, ರಾಮ್ಜಿ ಗುಪ್ತಾ, ಮಹಂತ್ ನೃತ್ಯ ಗೋಪಾಲ್ ದಾಸ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ವಿನಯ್ ಕುಮಾರ್ ರೈ, ನವೀನ್ ಭಾಯ್ ಶುಕ್ಲಾ, ಧರ್ಮದಾಸ್, ಜೈ ಭಗವಾನ್ ಗೋಯೆಲ್, ಅಮರನಾಥ್ ಗೋಯೆಲ್, ಸಾಧ್ವಿ ರಿತಂಬರ, ಪವನ್ ಪಾಂಡೆ, ವಿಜಯ್ ಬಹದ್ದೂರ್ ಸಿಂಗ್, ಆರ್‍ಎಂ ಶ್ರೀವತ್ಸ, ಧರ್ಮೇಂದ್ರ ಸಿಂಗ್ ಗುಜ್ಜರ್.
ಹುಬ್ಬಳ್ಳಿ: ಲೈಂಗಿಕ ಕ್ರಿಯೆಗೆ ಒಪ್ಪದ ಪತ್ನಿಯ ಮೇಲೆ ಆಕ್ರೋಶಗೊಂಡು ಕತ್ತು ಹಿಸುಕಿ ಹತ್ಯೆಗೈದಿದ್ದ ಪತಿಯ ವಿರುದ್ಧದ ಆರೋಪ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣವನ್ನು ಹುಬ್ಬಳ್ಳಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಕಾಯ್ದಿರಿಸಿದೆ.
ಮುಸ್ತಫಾ ಮೌಲಾಸಾಬ ಗುಲ್ಲಾಶಿ ಅಪರಾಧ ಸಾಬೀತಾದ ವ್ಯಕ್ತಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದ ಮುಸ್ತಫಾ, ಸವದತ್ತಿಯ ಯರಗಟ್ಟಿ ಗ್ರಾಮದ ಗೈಮುಸಾಬ ಜಮಾದಾರ ಪುತ್ರಿ ಆಶಾರನ್ನು ಮದುವೆ ಆಗಿದ್ದನು.
2017, ಫೆ. 2ರ ನಂತರ ಹುಬ್ಬಳ್ಳಿಯ ಮಂಟೂರ ರಸ್ತೆಯ ಬ್ಯಾಳಿ ಪ್ಲಾಟ್‍ನ ಸಂಬಂಧಿ ಮಮತಾಜ ಮೈಸೂರ ಎಂಬವರ ಮನೆಗೆ ಕರೆ ತಂದಿದ್ದನು. ಲೈಂಗಿಕ ಕ್ರಿಯೆಗೆ ಆಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಕ್ರೋಶಗೊಂಡು ಕತ್ತು ಹಿಸುಕಿ ಹತೈಗೈದಿದ್ದನು.
ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್ ಪೆಕ್ಟರ್ ವಿನೋದ್ ಮುಕ್ತೇದಾರ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಬಿರಾದಾರ ದೇವೇಂದ್ರಪ್ಪ ಎನ್ ಅವರು ಮುಸ್ತಫಾ ವಿರುದ್ದದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದ್ದು, ಶಿಕ್ಷೆ ಪ್ರಮಾಣ ಕಾಯ್ದಿರಿಸಿ ಆದೇಶಿಸಿದ್ದಾರೆ.
ನವದೆಹಲಿ: ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದೋಷಿಗಳಿಗೆ ಈಗಾಗಲೇ ಗಲ್ಲು ಶಿಕ್ಷೆ ಖಾಯಂ ಆಗಿದೆ. ಜನವರಿ 22ಕ್ಕೆ ನೇಣುಗಂಬ ಏರಲಿದ್ದು, ಈ ನಡುವೆ ಇಬ್ಬರು ಆರೋಪಿಗಳು ಕಟ್ಟ ಕಡೆಯ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಪ್ರಕರಣದಲ್ಲಿ ದೋಷಿಗಳಾದ ವಿನಯ್ ಕುಮಾರ್ ಶರ್ಮಾ ಮತ್ತು ಮುಖೇಶ್ ಕ್ಯುರೆಟಿವ್ ಅರ್ಜಿ ಸಲ್ಲಿಸಿದ್ದು, ಇಂದು ಸುಪ್ರೀಂಕೋರ್ಟ್ ಈ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ. ನ್ಯಾ. ಎನ್.ವಿ ರಮಣ ನೇತೃತ್ವದ ಐದು ಮಂದಿ ನ್ಯಾಯಧೀಶರ ಸಾಂವಿಧಾನಿಕ ಪೀಠ ಈ ಅರ್ಜಿ ವಿಚಾರಣೆ ನಡೆಸಲಿದ್ದು, ಇಂದೇ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಈ ಹಿಂದೆ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ಮರು ಪರಿಶೀಲನಾ ಅರ್ಜಿ ವಜಾ ಆದ ಬಳಿಕ ಪಟಿಯಾಲ ಹೌಸ್ ಕೋರ್ಟ್ ಜನವರಿ 22 ಬೆಳಗ್ಗೆ ಏಳು ಗಂಟೆಗೆ ಡೆತ್ ವಾರೆಂಟ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಕ್ಯುರೆಟಿವ್ ಅರ್ಜಿ ಸಲ್ಲಿಸಿರುವ ಇಬ್ಬರು ದೋಷಿಗಳು ಡೆತ್ ವಾರೆಂಟ್ ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದ್ದು, ಅರ್ಜಿ ಪುರಸ್ಕೃರಿಸದ್ದಲ್ಲಿ ಗಲ್ಲು ಶಿಕ್ಷೆಗೆ ತಡೆ ಬೀಳಲಿದ್ದು ತಿರಸ್ಕಾರವಾದಲ್ಲಿ ಹಿಂದಿನ ಆದೇಶದಂತೆ ನಾಲ್ವರು ದೋಷಿಗಳು ಜನವರಿ 22ಕ್ಕೆ ನೇಣಿಗಂಭ ಏರಲಿದ್ದಾರೆ.
ಗದಗ: 2ನೇ ಮದುವೆ ಮಾಡಿಕೊಳ್ಳಲು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದ ಪತಿಗೆ ಗಲ್ಲು ಶಿಕ್ಷೆ ವಿಧಿಸಿ ಗದಗದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ತಾಂಡ ನಿವಾಸಿ ಅರುಣ್ ಕುಮಾರ್ ಲಮಾಣಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. 2ನೇ ಮದುವೆ ಮಾಡಿಕೊಳ್ಳಲು ತನ್ನ ಪತ್ನಿ ಮಂಜುಳಾ ಹಾಗೂ ಇಬ್ಬರು ಮಕ್ಕಳಿಗೆ ವಿಷ ಹಾಕಿ ಅರುಣ್ ಕೊಲೆ ಮಾಡಿದ್ದನು. 2016 ಮಾರ್ಚ್ 29ರಂದು ಹಮ್ಮಗಿ ಗ್ರಾಮದ ತೋಟದ ಮನೆಯಲ್ಲಿ ಅರುಣ್ ಪತ್ನಿ, ಮಕ್ಕಳಿಗೆ ವಿಷವಿಕ್ಕಿ ಹತ್ಯೆ ಮಾಡಿದ್ದನು. ಇದನ್ನೂ ಓದಿ: ಶೀಲ ಶಂಕಿಸಿ ಪತ್ನಿ ಸಹಿತ 5 ಮಂದಿಯ ಕೊಲೆ – ಪಾತಕಿಗೆ ಗಲ್ಲು ಶಿಕ್ಷೆ
ಈ ಪ್ರಕರಣವನ್ನು ನ್ಯಾಯಾಲಯ ಮೂರು ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆಸಿದ್ದು, ಅರುಣ್ ಕೃತ್ಯ ಸಾಬೀತಾಗಿದೆ. ಈ ಹಿನ್ನೆಲೆ ನ್ಯಾಯಾಧೀಶರು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದ್ದಾರೆ. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಜಿ.ಎಸ್ ಸಂಗ್ರೇಶಿ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.
ಭೋಪಾಲ್: ಕಾಂಗ್ರೆಸ್ ಮಾಜಿ ಶಾಸಕಿ ಶಕುಂತಲಾ ಖತಿಕ್ ಅವರಿಗೆ ಮಧ್ಯ ಪ್ರದೇಶದ ಭೋಪಾಲ್ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೇರಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕಿ ಶಕುಂತಲಾ ಖತಿಕ್ ಅವರು ಮತ್ತು ಅವರ ಬೆಂಬಲಿಗರಾದ ಏಳು ಜನರಿಗೆ ಪೊಲೀಸ್ ಠಾಣೆಯನ್ನು ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
2017 ರಲ್ಲಿ ಮಾಂಡ್‍ಸೌರ್ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ಹತ್ಯೆಯ ವಿರೋಧಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಶಕುಂತಲಾ ಖತಿಕ್ ಅವರು, ಪ್ರತಿಭಟನೆಯ ವೇಳೆ ಪೊಲೀಸ್ ಠಾಣೆಯನ್ನು ಸುಟ್ಟು ಹಾಕಿ ಎಂದು ಘೋಷಣೆ ಕೂಗಿದ್ದರು. ಈ ಕಾರಣದಿಂದ ಭೋಪಾಲ್ ನ್ಯಾಯಾಲಯ ಮೂರು ವರ್ಷ ಜೈಲು ಮತ್ತು ಮಾಜಿ ಶಾಸಕಿ ಸೇರಿ ಎಲ್ಲಾ ಆರೋಪಿಗಳಿಗೂ 5 ಸಾವಿರ ದಂಡ ವಿಧಿಸಿದೆ.
2017ರಲ್ಲಿ ರೈತರ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿ ಶಕುಂತಲಾ ಖತಿಕ್ ಅವರು ರೈತರ ಜೊತೆ ಸೇರಿ ಪೊಲೀಸ್ ಠಾಣೆಯ ಮುಂದೆ ಉಗ್ರ ಹೋರಾಟ ಮಾಡಿದ್ದರು. ಈ ವೇಳೆ ಪೊಲೀಸ್ ಠಾಣೆಗೆ ಬೆಂಕಿ ಹಾಕಿ ಎಂಬ ಘೋಷಣೆಯನ್ನು ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ಅಧಾರದ ಮೇಲೆ ಅವರ ವಿರುದ್ಧ ಕೇಸ್ ದಾಖಲಾಗಿತ್ತು.
ಈಗ ಈ ಪ್ರಕರಣದಲ್ಲಿ ಶಕುಂತಲಾ ಖತಿಕ್ ಸೇರಿ ಅವರ ಬೆಂಬಲಿಗರಾದ ವಿನಾಸ್ ಗೋಯೆಲ್, ದೀಪಕ್ ಸೇಠ್, ನಾರಾಯಣ್, ಬಂಟಿ ಅಲಿಯಾಸ್ ಸಂಜಯ್, ಸತೀಶ್ ವರ್ಮಾ, ಮತ್ತು ಮನೀಶ್ ಖತಿಕ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಖತಿಕ್ ಅವರಿಗೆ ಒಂದು ತಿಂಗಳ ಕಾಲವಾಕಾಶ ನೀಡಲಾಗಿದೆ.
ಬೆಂಗಳೂರು: ಇಂದು ಅನರ್ಹ ಶಾಸಕರ ಭವಿಷ್ಯ ಏನು ಎನ್ನುವುದನ್ನ ಸುಪ್ರೀಂ ಕೋರ್ಟ್ ನಿರ್ಧರಿಸಲಿದೆ. ಹೀಗಾಗಿ ಅನರ್ಹರಿಗಷ್ಟೇ ಅಲ್ಲ ಬಿಜೆಪಿಗೂ ತೀರ್ಪು ಏನಾಗಲಿದೆ ಎಂಬ ಎದೆಬಡಿತ ಹೆಚ್ಚಾಗಿದೆ.
ಸುಪ್ರೀಂ ಕೋರ್ಟಿನ ತೀರ್ಪು ಹೊರಬಿದ್ದ ಬಳಿಕ ಬಿಜೆಪಿ ಮಹತ್ವದ ಕೋರ್ ಕಮಿಟಿ ಸಭೆ ನಡೆಸಲಿದೆ ಎನ್ನಲಾಗಿದೆ. ಉಪಚುನಾವಣೆಗೆ ಟಿಕೆಟ್ ಹಂಚಿಕೆ ಸಂಬಂಧ ಮಹತ್ವದ ನಿರ್ಧಾರವನ್ನು ಬಿಜೆಪಿ ಕೈಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೆ ಇಂದು ಮಧ್ಯಾಹ್ನ 3 ಗಂಟೆವರೆಗೆ ಸಿಎಂ ಯಡಿಯೂರಪ್ಪ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅನರ್ಹರ ತೀರ್ಪಿಗಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್‌ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?
ಹಾಗೆಯೇ ಈ ಮಧ್ಯೆ ಅನರ್ಹರ ಭವಿಷ್ಯ ಏನಾಗಲಿದೆ ಎಂಬ ಹಲವು ಪ್ರಶ್ನೆಗಳು ರಾಜಕೀಯ ಪಾಳಯದಲ್ಲಿ ಹುಟ್ಟಿಕೊಂಡಿದೆ. ಕಾಂಗ್ರೆಸ್ ಉಪಚುನಾವಣೆಗೆ ಉಳಿದ ಟಿಕೆಟ್ ಅನೌನ್ಸ್ ಮಾಡುತ್ತಾ? ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲಕ್ಕೆ ಇಂದೇ ತೆರೆ ಬೀಳುತ್ತಾ? ಯಾರಿಗೆ ಸಿಗುತ್ತೆ ಬಿಜೆಪಿ ಟಿಕೆಟ್? ಅನರ್ಹರಿಗಾ ಅಥವಾ ಅವರ ಕುಟುಂಬಸ್ಥರಿಗಾ? ಇಲ್ಲಾ ಪಕ್ಷದವರಿಗಾ ಎನ್ನುವ ಸಾಲು ಸಾಲು ಪ್ರಶ್ನೆಗಳು ರಾಜ್ಯ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ತಲೆ ಕಡೆಸಿದೆ.
ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟಿನಿಂದ ತೀರ್ಪು ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವ ನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು ಇಂದಿನ ತೀರ್ಪು ಬಗ್ಗೆ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ತಿಂಗಳುಗಳ ಕಾನೂನು ಹೋರಾಟಕ್ಕೆ ಅಂತಿಮ ದಿನ ಬಂದಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ.
– ಶತಮಾನದ ಭೂ ವ್ಯಾಜ್ಯದ ಸಕ್ಸಸ್‍ಗೆ ಪರಾಸರನ್ ಕಾರಣ
– ಎರಡನೇ ‘ಪತ್ನಿ’ಯಿಂದ ಅಯೋಧ್ಯೆ ಕೇಸ್ ಗೆಲುವು
ಬೆಂಗಳೂರು: ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಭೂ ವ್ಯಾಜ್ಯ ಕೇಸ್ ಇತ್ಯರ್ಥವೇನೋ ಆಯ್ತು. ಆದರೆ ಶತಮಾನದ ವ್ಯಾಜ್ಯದ ಸಕ್ಸಸ್‍ಗೆ ಕಾರಣವಾಗಿದ್ದು ಯಾರು ಎಂಬ ಪ್ರಶ್ನೆಗೆ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ.
ಹೌದು. ದಶಕಗಳ ಕಾನೂನು ಹೋರಾಟದ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯ ವಿವಾದ ಕೊನೆಗೂ ಬಗೆಹರಿದಿದೆ. ರಾಮಜನ್ಮಭೂಮಿ ಶ್ರೀರಾಮನಿಗೆ ಸೇರಿದ್ದು. ಇದು ಬೇರೆ ಯಾರಿಗೂ ಸೇರಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಶಿಯಾ, ವಕ್ಫ್, ನಿರ್ಮೋಹಿ ಅಖಾರರ ಪರ ಖ್ಯಾತನಾಮ ವಕೀಲರು ಮಂಡಿಸಿದ ವಾದವನ್ನು ಮೆಟ್ಟಿನಿಂತು ರಾಮಲಲ್ಲಾ ಕೇಸ್ ತನ್ನದಾಗಿಸಿಕೊಂಡಿದೆ. ಇದಕ್ಕೆ ಕಾರಣ 92 ವರ್ಷ ಹಿರಿಯ ವಕೀಲ ಕೆ ಪರಾಸರನ್.
ಕೆ ಪರಾಸರನ್ ಅವರು ಕಾನೂನು ಲೋಕದ ಹೀರೋ. ಇವರಿಗೆ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸೋದು ಅಂದರೆ ಪಂಚಪ್ರಾಣ. `1949ರಲ್ಲಿ ನನಗೆ ಮದುವೆ ಆಯ್ತು. ಇದಾದ ಮರುವರ್ಷವೇ ಮತ್ತೊಂದು ಮದುವೆ ಮಾಡಿಕೊಂಡೆ. ಎರಡನೇ ಹೆಂಡತಿ ಹೆಸರು `ಕಾನೂನು’. ಯಾವ ಪುರುಷನಿಗಾದ್ರೂ ಎರಡನೇ ಹೆಂಡತಿ ಮೇಲೆ ಮೋಹ. ನನಗೂ ಮೊದಲ ಹೆಂಡತಿಗಿಂತ 2ನೇ ಹೆಂಡತಿ ಮೇಲೆಯೇ ಮೋಹ. ನಾನು ನನ್ನ ಜೀವನದಲ್ಲಿ ನಿಜವಾದ ಪತ್ನಿಗಿಂತ ಕಾನೂನನ್ನೇ ಹೆಚ್ಚು ಪ್ರೀತಿಸಿದೆ’ ಎಂದು ಹಿರಿಯ ವಕೀಲ ಪರಾಸರನ್ ಹೇಳುತ್ತಾರೆ. ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ
ಇಂತಹ ಕಾನೂನು ವ್ಯಾಮೋಹಿ ಪರಾಸರನ್, ತಮ್ಮ 92ನೇ ವಯಸ್ಸಿನಲ್ಲಿಯೂ ರಾಮಲಲ್ಲಾ ಪರ ಸುಪ್ರೀಂಕೋರ್ಟಿನಲ್ಲಿ ಪ್ರಖರ ವಾದ ಮಂಡಿಸಿ, ಕೇಸನ್ನು ಗೆಲ್ಲಿಸಿದ್ದಾರೆ. ಇದೀಗ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಮಲಲ್ಲಾ ವಿರಾಜಮಾನ್ ಪರ ಸುಪ್ರೀಂಕೋರ್ಟಿನಲ್ಲಿ 40 ದಿನಗಳ ಕಾಲ ಪ್ರಖರ ವಾದ ಮಂಡಿಸಿದರು. 92 ವರ್ಷದ ಪರಾಸರನ್ ಕೋರ್ಟ್ ಹಾಲ್‍ನಲ್ಲಿ ನಿಂತು ವಾದ ಮಂಡಿಸುತ್ತಿದ್ದರೆ, ನ್ಯಾಯಮೂರ್ತಿಗಳು ತಾವು ದಯವಿಟ್ಟು ಕುಳಿತು ವಾದ ಮಾಡಿ ಎಂದು ಕೇಳಿಕೊಳ್ಳುತ್ತಿದ್ರು. ಆದರೆ ಪರಾಸರನ್ ಮಾತ್ರ ನಿಂತು ವಾದ ಮಂಡಿಸೋದು ನಮ್ಮ ಸಂಸ್ಕೃತಿ ಎಂದು ಹೇಳಿ ವಾದಿಸಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?
ರಾಮಲಲ್ಲಾ ಪರ ವಾದ ಮಂಡಿಸುವ ವೇಳೆ ಕೆ ಪರಾಸರನ್ ಅವರು ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂದು ಹೇಳುತ್ತಾರೆ. ಅಂದರೆ ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂದರ್ಥ. ಶ್ರೀರಾಮನಜನ್ಮಭೂಮಿ ಕೂಡ ನಮಗೆ ಮುಖ್ಯ. ರಾಮಲಲ್ಲಾಗೆ ರಾಮಜನ್ಮಭೂಮಿ ಸಿಗಬೇಕು ಎಂದು ವಾದ ಮಂಡಿಸಿದ್ದರು. ಇದನ್ನೂ ಓದಿ: ರಾಮನಿಗೆ `ಪುರಾತತ್ವ’ ಆಧಾರ – 5 ಶತಮಾನಗಳ ವಿವಾದಕ್ಕೆ ಷರಾ ಬರೆದ ಸುಪ್ರೀಂ
ಕೋರ್ಟಿನಲ್ಲಿ ಪ್ರಕರಣ ಸಂಬಂಧ ವಾದ ಮಂಡನೆಯಲಿ ಪರಾಸರನ್ ಅವರು ವೇದಗಳನ್ನು, ಪುರಾಣಗಳನ್ನು ಕೂಡ ಉಲ್ಲೇಖಿಸುತ್ತಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳಲೇಬೇಕು ಎಂಬ ಉದ್ದೇಶದಿಂದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದವರಲ್ಲಿ ಪರಾಸರನ್ ಸಹ ಒಬ್ಬರು. ಪ್ರತೀದಿನದ ಕೋರ್ಟ್ ಕಲಾಪಗಳಿಗೆ ಒಂದು ದಿನ ಮುಂಚಿತವಾಗಿಯೇ ಸಿದ್ಧಗೊಳ್ಳುವ ಪರಿಪಾಠವನ್ನು ಪರಾಸರನ್ ಅವರು ಅಳವಡಿಸಿಕೊಂಡಿದ್ದರು.
ಈ ವಾದ ಸರಣಿಯ ಸಂದರ್ಭದಲ್ಲಿ ಪಿ.ವಿ. ಯೋಗೇಶ್ವರನ್, ಅನಿರುದ್ ಶರ್ಮಾ, ಶ್ರೀಧರ್ ಪುಟ್ಟರಾಜು ಮತ್ತು ಅದಿತಿ ದಾನಿ ಅವರಿದ್ದ ಯುವ ವಕೀಲ ಪಡೆ ಪರಾಸರನ್ ಅವರಿಗೆ ಸಹಾಯ ಮಾಡುತ್ತಿದ್ದರು. ಪರಾಸರನ್ ಅವರು ಎಷ್ಟು ತಯಾರಾಗಿ ಕಲಾಪಕ್ಕೆ ಹಾಜರಾಗುತ್ತಿದ್ದರು ಎಂದರೆ ನ್ಯಾಯಾಧೀಶರು ಮತ್ತು ವಕೀಲರು ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೂ ಅವರು ಅಲ್ಲೇ ನಿಖರವಾಗಿ ಉತ್ತರಿಸಿ ವಾದಿಸುತ್ತಿದ್ದರು. ವಯಸ್ಸು ಆಗಿದ್ದರೂ ಅವರ ಜ್ಞಾಪಕ ಶಕ್ತಿ ಕಲಾಪ ವೀಕ್ಷಿಸುತ್ತಿದ್ದ ಯುವ ವಕೀಲರ ಅಚ್ಚರಿಗೆ ಕಾರಣವಾಗಿತ್ತು.
ಆದರೆ 40 ದಿನಗಳ ವಿಚಾರಣೆಯ ಸಂದರ್ಭದಲ್ಲಿ ಪರಾಸರನ್ ಅವರು ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಪರಾಸರನ್ ಅವರಿಗೆ ಪ್ರತಿವಾದಿಯಾಗಿದ್ದವರು ಮುಸ್ಲಿಂ ಅರ್ಜಿದಾರರ ಪರವಾಗಿ ವಾದಿಸುತ್ತಿದ್ದ ರಾಜೀವ್ ಧವನ್ ಅವರು. ಧವನ್ ಸುಪ್ರೀಂ ಕೋರ್ಟಿನ ಪ್ರಮುಖ ವಕೀಲರು. ಹೀಗಾಗಿ ಎದುರಾಳಿಗಳ ಮೇಲೆ ಲಾ ಪಾಯಿಂಟ್ ಎತ್ತಿ ವಕೀಲರನ್ನು ಕಕ್ಕಾಬಿಕ್ಕಿ ಮಾಡುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ. ಧವನ್ ಕಾಗದ ಪತ್ರವನ್ನು ಹರಿದು ಹಾಕಿದ್ದರೂ ಪರಾಸರನ್ ಅವರು ತಾಳ್ಮೆ ಕಳೆದುಕೊಂಡಿರಲಿಲ್ಲ. ಹಿಂದೂ ಕಡೆಯ ವಕೀಲರ ವಾದ ಮೂರ್ಖತನದಿಂದ ಕೂಡಿದ್ದು ಎಂದು ಹೇಳಿದರು ಪರಾಸರನ್ ಶಾಂತವಾಗಿದ್ದರು.
ಅಕ್ಟೋಬರ್ 16ರಂದು ಜನ್ಮಭೂಮಿ ಪ್ರಕರಣದ ವಿಚಾರಣೆ ಮುಕ್ತಾಯವಾದ ಬಳಿಕ ಪರಾಸರನ್ ಅವರು ನ್ಯಾಯಾಲಯದ ಹೊರಭಾಗದಲ್ಲಿ 15 ನಿಮಿಷಗಳ ಕಾಲ ರಾಜೀವ್ ಧವನ್ ಅವರಿಗಾಗಿ ಕಾದು ಕುಳಿತಿದ್ದರು. ಈ ವಿಚಾರ ತಿಳಿದ ರಾಜೀವ್ ಧವನ್ ಅವರು ಹೊರಗೆ ಬಂದು ಪರಾಸರನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಮೂಲಕ ಕೋರ್ಟಿನ ಒಳಗೆ ನಾವಿಬ್ಬರು ಎದುರಾಳಿಗಳಾಗಿದ್ದರೂ ಹೊರಗಡೆ ಮಾತ್ರ ಸ್ನೇಹಿತರು ಎಂದು ತೋರಿಸಿದ್ದರು. ಈ ಮೂಲಕ ಎಲ್ಲ ವಕೀಲರ ಮನಸ್ಸು ಗೆದ್ದಿದ್ದರು.
ಇಂತಹ ಕೆ ಪರಾಸರನ್, ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಕರಣದಲ್ಲಿ ಮಹಿಳೆಯರ ಪ್ರವೇಶದ ವಿರುದ್ಧವಾಗಿ ವಾದ ಮಂಡಿಸಿದ್ದಾರೆ. ಈ ಕುರಿತ ತೀರ್ಪು ಇನ್ನೂ ಬರಬೇಕಿದೆ. ಅಂದಹಾಗೇ, ಕೆ ಪರಾಸರನ್ ಅವರನ್ನು ಭಾರತೀಯ ಬಾರ್ ಅಸೋಸಿಯೇಷನ್‍ನ ಪಿತಾಮಹ ಅಂತಲೇ ಕರೆಯಲಾಗುತ್ತಿದೆ. 1927 ಅಕ್ಟೋಬರ್ 9ರಂದು ತಮಿಳುನಾಡಿನ ಅಯ್ಯಂಗಾರಿ ಕುಟುಂಬದಲ್ಲಿ ಜನಿಸಿದ ಪರಾಸರನ್, ತಮ್ಮ ಬಹುಕೇತ ಜೀವನವನ್ನು ಕೋರ್ಟ್ ಹಾಲ್‍ಗಳಲ್ಲೇ ಕಳೆದಿದ್ದಾರೆ. ಹಿಂದುತ್ವದ ಬಗ್ಗೆ ಅಪಾರ ಜ್ಞಾನವಿರುವ ಇವರು ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 1983ರಿಂದ 1989ರ ತನಕ ಭಾರತ ಅಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.
ಕೆ ಪರಾಸರನ್ ಅವ್ರ ಕಾನೂನು ಸೇವೆ ಪರಿಗಣಿಸಿ ಭಾರತ ಸರ್ಕಾರ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಒಟ್ಟಿನಲ್ಲಿ ರಾಮನಜನ್ಮಭೂಮಿಯನ್ನು ರಾಮನಿಗೆ ಮರಳಿಸುವಲ್ಲಿ ಕೆ ಪರಾಸರನ್ ಪಾತ್ರವನ್ನು ಯಾರು ಮರೆಯುವಂತೆ ಇಲ್ಲ. ಇವರ ಜೀವನ ಪಥ ಕಾನೂನು ವಿದ್ಯಾರ್ಥಿಗಳಿಗೆ ಒಂದು ಪಾಠವಾಗಿದೆ.
ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಇದನ್ನು ಯಾರೂ ಗೆಲವು, ಸೋಲು ಎಂದು ಭಾವಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸಲು ನಾವೂ ಸಹ ಸಹಕರಿಸುತ್ತೇವೆ ಎಂದು ಭಾಗವತ್ ಹೇಳಿದ್ದಾರೆ.
Mohan Bhagwat,RSS Chief: We welcome this decision of Supreme Court. This case was going on for decades and it has reached the right conclusion. This should not be seen as a win or loss.We also welcome everyone's efforts to maintain peace and harmony in society. #Ayodhyajudgementpic.twitter.com/DtNnliaKEA
ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇವೆ. ದಶಕಗಳಿಂದ ನಡೆಯುತ್ತಿದ್ದ ಪ್ರಕರಣ ಇಂದು ಇತ್ಯರ್ಥವಾಗಿರುವುದು ಸಂತಸ ತಂದಿದೆ. ಇದನ್ನು ಯಾರೂ ಗೆಲುವು ಸೋಲು ಎಂದು ಭಾವಿಸಬಾರದು. ನಾವು ಹಿಂದಿನದನ್ನು ಮರೆಯಬೇಕಿದೆ. ನಮ್ಮಿಂದ ನಿರೀಕ್ಷಿಸಲಾದ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಪ್ರಯತ್ನವನ್ನು ನಾವು ಸ್ವಾಗತಿಸುತ್ತೇವೆ ಎಂದು ಕರೆ ನೀಡಿದರು.
ಮುಂದಿನ ಯಾವುದೇ ಆಂದೋಲನ ಅಥವಾ ರಾಜಕೀಯ ಆಂದೋಲನದಲ್ಲಿ ಆರ್‌ಎಸ್‌ಎಸ್ ಭಾಗಿಯಾಗುವುದಿಲ್ಲ. ಚಾರಿತ್ರ್ಯ ನಿರ್ಮಾಣದ ಕಡೆ ಗಮನಹರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು, ನಾವು ಎಲ್ಲ ಧರ್ಮಗಳನ್ನು ಹೊರತಾಗಿ ಭಾರತೀಯ ಪ್ರಜೆಗಳು ಎಂದು ಅಭಿಪ್ರಾಯಪಟ್ಟರು.
ಇಂದು ಬೆಳಗ್ಗೆ ರಾಮಜನ್ಮ ಭೂಮಿ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚಸದಸ್ಯರ ಪೀಠ ತೀರ್ಪು ಪ್ರಕಟಿಸಿದೆ. ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳದಲ್ಲಿ 5 ಎಕರೆ ಜಮೀನು ನೀಡಬೇಕು. ಮಂದಿರ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.