Tag: ತಿರುವನಂತರಪುರ

  • ಕಾಸರಗೋಡಿನಲ್ಲಿ ತೌಕ್ತೆ ಚಂಡಮಾರುತ ರೌದ್ರವತಾರಕ್ಕೆ ಮನೆ ಕುಸಿತ, ಜನರಲ್ಲಿ ಆತಂಕ

    ಕಾಸರಗೋಡಿನಲ್ಲಿ ತೌಕ್ತೆ ಚಂಡಮಾರುತ ರೌದ್ರವತಾರಕ್ಕೆ ಮನೆ ಕುಸಿತ, ಜನರಲ್ಲಿ ಆತಂಕ

    ತಿರುವನಂತರಪುರಂ: ತೌಕ್ತೆ ಚಂಡಮಾರುತದಿಂದಾಗಿ ಕರಾವಳಿಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಲವೆಡೆ ಕರಾವಳಿ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿರುವುದಾಗಿ ವರದಿಯಾಗಿದೆ.

    ತೌಕ್ತೆ ಚಂಡಮಾರುತದ ರೌದ್ರಾವತಾರದಿಂದ ಕೇರಳದ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕರಾವಳಿ ಭಾಗದ ಪ್ರದೇಶಗಳಲ್ಲಿ ತೀವ್ರ ಕಡಲ್ಕೊರೆತದಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಕಾಸರಗೋಡಿನಲ್ಲಿ ಸಮುದ್ರ ಪ್ರದೇಶದ ಸಮೀಪವಿದ್ದ ಎರಡು ಅಂತಸ್ತಿನ ಮನೆ ಕುಸಿದುಬಿದ್ದಿರುವುದಾಗಿ ತಿಳಿದು ಬಂದಿದೆ.

    ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಪ್ರದೇಶದಲ್ಲಿ ವಾಸವಾಗಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಕೇರಳದ ಎರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

    ತೀವ್ರ ವಾಯುಭಾರ ಕುಸಿತದಿಂದ ಹವಾಮಾನ ವೈಪರೀತ್ಯವಾಗಲಿದೆ. ಇದರಿಂದ ತೌಕ್ತೆ ಚಂಡಮಾರುತ ಶನಿವಾರ ಬೆಳಗ್ಗಿನಿಂದಲೇ ಆರಂಭವಾಗಲಿದ್ದು, ಶನಿವಾರ ರಾತ್ರಿಯ ಬಳಿಕ ತೀವ್ರವಾಗಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತೌಕ್ತೆ ಚಂಡಮಾರುತ ಅರಬ್ಬಿ ಸಮುದ್ರದ ಈಶಾನ್ಯ ಪ್ರದೇಶ, ಲಕ್ಷದ್ವೀಪ, ಮಾಲ್ಡೀವ್ಸ್ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಅಲ್ಲದೇ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ತೀವ್ರ ಸ್ವರೂಪದ ಗಾಳಿ, ಮಳೆಯಾಗಲಿದೆ ಎಂದು ತಿಳಿಸಿದೆ.

  • ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    – ಮಂಡ್ಯ, ಕಾರವಾರದಲ್ಲೂ ಸೈಕ್ಲೋನ್ ಹೊಡೆತ
    – 14 ಜನರ ಸಾವು, 223 ಜನರ ರಕ್ಷಣೆ

    ತಿರುವನಂತರಪುರ: ಕನ್ಯಾಕುಮಾರಿ ಸೇರಿದಂತೆ ಕೇರಳದ ಕರಾವಳಿಯಲ್ಲಿ ಓಖಿ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಾಜ್ಯದ ಮಂಗಳೂರು ಕರಾವಳಿಗೂ ಓಖಿ ಚಂಡಮಾರತ ಅಪ್ಪಳಿಸಿದ್ದು, ಚಂಡಮಾರುತದ ರಭಸಕ್ಕೆ 4 ಮೀನುಗಾರಿಕಾ (ವೆಸಲ್) ಹಡುಗು ಮುಳುಗಡೆಯಾಗಿದೆ.

    ಇದರ ಜೊತೆಗೆ ಇನ್ನೊಂದು ವೆಸಲ್ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಮಂದಿ ಕಾರ್ಮಿಕರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ವೆಸಲ್‍ನ ಮಾಲೀಕರು, ಸಾಮಾಗ್ರಿಗಳನ್ನು ಕಳಿಸುತ್ತಿರುವ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

    ಮಂಗಳೂರಲ್ಲಿ ಅನಾಹುತದ ಬೆನ್ನಲ್ಲೇ ಕಾರವಾರದಲ್ಲೂ ಓಖಿ ಸೈಕ್ಲೋನ್ ಗಂಟೆಗೆ 40 ಕಿ.ಮೀ ವೇಗದಲ್ಲಿ ಅಪ್ಪಳಿಸುತ್ತಿದೆ. ಇದರಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಮೀನುಗಾರರಿಗೆ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಲಾಗಿದೆ. ಓಖಿ ಪ್ರಭಾವ ಸತತ 48 ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಓಖಿ ಚಂಡಮಾರುತದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿಯೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳು ಹೆಚ್ಚು ಏಳುತ್ತಿದ್ದು ಗಂಟೆಗೆ 35 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಕಾರಣದಿಂದ ಎರಡು ದಿನಗಳವರೆಗೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಕಾರವಾರ ಭಾಗದಲ್ಲಿ ನಾರ್ತ್ ಈಸ್ಟ್ ನಿಂದ ಬೀಸುತ್ತಿರುವ ಬಿರುಗಾಳಿಯ ಪ್ರಮಾಣ ತಗ್ಗಿದೆ. ಗಾಳಿಯು ದಿಕ್ಕು ಬದಲಿಸುತ್ತಿದ್ದು ಜಿಲ್ಲೆಯ ಕರಾವಳಿ ಭಾಗದಲ್ಲಿ ಇಂದು ಸಂಜೆ ಅಥವಾ ನಾಳೆ ಸಂಜೆ ಒಳಗೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

     

    ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ಮಂಡ್ಯ, ಕೋಲಾರದಲ್ಲೂ ಸೈಕ್ಲೋನ್ ಭೀತಿ ಎದುರಾಗಿದೆ. ಓಖಿ ಚಂಡಮಾರುತದಿಂದಾಗಿ ಕಟಾವಿಗೆ ಬಂದಿರುವ ಭತ್ತ, ರಾಗಿ ಆಹಾರ ಪದಾರ್ಥಗಳು ಬಿರುಗಾಳಿಗೆ ನಾಶವಾಗುವ ಆಂತಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಟಾವು ಮಾಡಲಾಗಿರುವ ಬೆಳೆಗಳು ಮಳೆಗೆ ನಾಶವಾಗಿದೆ. ಮಂಡ್ಯದ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ರೈತ ಬೆಳೆದ ಭತ್ತದ ಬೆಳೆ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ, ವೈದ್ಯನಾಥಪುರ ಗ್ರಾಮದ ರೈತರು ಚಂಡಮಾರುತದ ಅರಿವಿಲ್ಲದೇ ತೆನೆ ಬಂದಿದ್ದ ಸುಮಾರು ನಾಲ್ಕು ಎಕರೆ ಪ್ರದೇಶದ ಭತ್ತದ ಪೈರನ್ನು ಕಟಾವು ಮಾಡಿದ್ದರು. ಆದರೆ ಭತ್ತದ ಪೈರನ್ನು ಒಕ್ಕಣೆ ಮಾಡುವ ಮುನ್ನವೇ ಮಳೆ ಸುರಿದು ಗದ್ದೆಯಲ್ಲಿ ನೀರು ನಿಂತಿದೆ. ಪರಿಣಾಮ ಭತ್ತದ ಬೆಳೆ ಸಂಪೂರ್ಣ ನೀರಿನಲ್ಲಿ ನೆನೆದು ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

    ಸಮುದ್ರಕ್ಕೆ ತೆರಳಿದ ಮೀನುಗಾರರನ್ನು ಭಾರತೀಯ ನೌಕಾ ಪಡೆ ಹೆಲಿಕಾಪ್ಟರ್ ಗಳ ಮೂಲಕ ರಕ್ಷಣೆ ಮಾಡುತ್ತಿದ್ದು, ಇದುವರೆಗೂ ಸುಮಾರು 223 ಜನರನ್ನು ರಕ್ಷಣೆ ಮಾಡಿದೆ. ಇನ್ನು ಸಮುದ್ರಕ್ಕೆ ತೆರಳಿದ 40 ರಿಂದ 60 ಮೀನುಗಾರರ ಸುಳಿವು ಸಿಕ್ಕಿಲ್ಲ ಎಂದು ವರದಿಯಾಗಿದೆ. ಈವರೆಗೆ 14 ಜನ ಮೃತಪಟ್ಟಿದ್ದಾರೆ.

    ಭಾರತೀಯ ನೌಕಪಡೆ ರಕ್ಷಣಾ ಕಾರ್ಯಚಾರಣೆ ಕೈಗೊಂಡಿರುವ ದೃಶ್ಯಗಳು ಲಭ್ಯವಾಗಿದೆ. ಇನ್ನು ಸಮುದ್ರಕ್ಕೆ ತೆರಳಿರುವ ಮೀನುಗಾರರ ಕುಟುಂಬಸ್ಥರು ಸಮುದ್ರ ದಡದಲ್ಲೇ ಕಾದು ಕುಳಿತ್ತಿದ್ದು, ನೀರು ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

    https://www.youtube.com/watch?v=FlExdKZ96-U

    https://www.youtube.com/watch?v=IskPbU9PesM