Tag: ತಿರುವಣ್ಣಾಮಲೈ

  • ಎಸ್‍ಪಿಬಿ ನೆನಪು- ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿದ ಇಳಯರಾಜ

    ಎಸ್‍ಪಿಬಿ ನೆನಪು- ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿದ ಇಳಯರಾಜ

    ಚೆನ್ನೈ: ತಮ್ಮ ಗೆಳೆಯ, ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನೆನಪಿನಲ್ಲೇ ಇರುವ ಸಂಗೀತ ನಿರ್ದೇಶಕ ಇಳಯರಾಜ, ಶನಿವಾರ ರಾತ್ರಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ತೆರಳಿ ದೀಪ ಹಚ್ಚಿದ್ದಾರೆ.

    ಸರ್ಕಾರದ ಸೂಚನೆ ಹಿನ್ನೆಲೆ ಇಳಯರಾಜ ತಮ್ಮ ಪ್ರಾಣ ಸ್ನೇಹಿತನ ಅಂತಿಮ ದರ್ಶನದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿ ತಮ್ಮ ಗೆಳೆಯನನ್ನು ನೆನೆದಿದ್ದಾರೆ. ಅಲ್ಲದೆ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ, ಸದ್ಗತಿ ದೊರೆಯಲಿ ಎಂದು ಇಳಯರಾಜ ಬೇಡಿಕೊಂಡಿದ್ದಾರೆ.

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸೆಪ್ಟೆಂಬರ್ 25ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅವರ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಹಾಗೂ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಚೆನ್ನೈನ ಫಾರ್ಮ್ ಹೌಸ್‍ನಲ್ಲಿ ಮಾಡಲಾಯಿತು. ಆದರೆ ಬಹುತೇಕ ಗಣ್ಯರು ಎಸ್‍ಪಿಬಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅದೇ ರೀತಿ ಇಳಯರಾಜ ಸಹ ಹೋಗಲಿಲ್ಲ. ಹೀಗಾಗಿ ದೇವಸ್ಥಾನಕ್ಕೆ ತೆರಳಿ ದೀಪ ಬೆಳಗಿಸಿ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    இசைஞானி இளையராஜா அவர்கள் திரு SP பாலசுப்ரமணியம் அவர்களின் ஆத்மா சாந்தி அடைய திருவண்ணாமலையில் சற்று முன் மோட்ச தீபம்…

    Posted by Ilaiyaraaja on Saturday, September 26, 2020

    ಸಿನಿಮಾ ರಂಗಕ್ಕೆ ಪ್ರವೇಶ ಮಾಡುವುದಕ್ಕೂ ಮುನ್ನವೇ ಇಳಯರಾಜ ಹಾಗೂ ಎಸ್‍ಪಿಬಿ ಸ್ನೇಹಿತರಾಗಿದ್ದರು. ಅಲ್ಲದೆ ಸಿನಿಮಾ ರಂಗಕ್ಕೆ ಬಂದ ನಂತರ ಇಳಯರಾಜ ನಿರ್ದೇಶನದ ಹಲವು ಸಿನಿಮಾಗಳ ಹಾಡುಗಳನ್ನು ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಹೀಗಾಗಿ ಇಳಯರಾಜ ಹಾಗೂ ಎಸ್‍ಪಿಬಿ ಮಧ್ಯೆ ಆಳವಾದ ಸ್ನೇಹವಿತ್ತು.

    ಎಸ್‍ಪಿಬಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಶ್ಚರ್ಯ ವ್ಯಕ್ತಪಡಿಸಿದ್ದ ಇಳಯರಾಜ, ಬಾಲು ನೀನೆಲ್ಲಿಗೆ ಹೋದೆ, ಯಾಕೆ ಹೋದೆ? ಬಾಲು ಬೇಗನೆ ಮರಳಿ ಬಾ, ನಿನಗಾಗಿ ನಾನು ಕಾಯುತ್ತಿದ್ದೇನೆ. ಆದರೆ ನೀನು ಕೇಳುತ್ತಿಲ್ಲ. ನೀನು ಹೋಗಿದ್ದೀಯಾ, ಎಲ್ಲಿಗೆ ಹೋದೆ, ಗಂಧರ್ವರಿಗೆ ಹಾಡು ಹೇಳಲು ಹೋದೆಯಾ? ಈಗ ಜಗತ್ತಿನಲ್ಲಿ ನನಗೆ ಏನನ್ನೂ ನೋಡಲು ಆಗುತ್ತಿಲ್ಲ. ಶಬ್ದಗಳನ್ನು ಕಳೆದುಕೊಂಡಿದ್ದೇನೆ, ಏನು ಹೇಳಬೇಕೋ ನನಗೆ ತೋಚುತ್ತಿಲ್ಲ. ಯಾವುದೇ ದುಃಖಕ್ಕೆ ಒಂದು ಮಿತಿಯಿದೆ. ಆದರೆ ಈ ದುಃಖಕ್ಕೆ ಮಿತಿಯಿಲ್ಲ ಎಂದು ಹೇಳಿದ್ದರು.

  • ಆ ಸಾಧು ನೋಡನೋಡುತ್ತಿದ್ದಂತೆ ರಾಕೆಟ್ ಥರಾ ಹಾರಿ ಹೋಗಿದ್ರು..!!

    ಆ ಸಾಧು ನೋಡನೋಡುತ್ತಿದ್ದಂತೆ ರಾಕೆಟ್ ಥರಾ ಹಾರಿ ಹೋಗಿದ್ರು..!!

    ಇವರು ಒಬ್ಬ ವಿಚಿತ್ರ ಸಾಧು. ತನಗಿರೋ ಚಟಗಳಿಂದಲೇ ಹೆಸರುವಾಸಿಯಾದ ವಿಲಕ್ಷಣ ಸಾಧು. ತನ್ನ ನಿಜ ನಾಮಧೇಯವನ್ನು ಜಗತ್ತಿನಿಂದ ಮುಚ್ಚಿಟ್ಟ ವಿಚಿತ್ರ ವ್ಯಕ್ತಿತ್ವ ಇವರದ್ದು. ಬೌದ್ಧ ಮತದ ಝೆನ್ ಸಿದ್ಧಾಂತವನ್ನು ಪ್ರತಿಪಾದಿಸಿ ಜನರಿಗೆ ಬೋಧಿಸಿದ ಅಪ್ರತಿಮ ಗುರು ಆತ. ನೋಡೋಕೆ ಸಾಮಾನ್ಯರಂತೆ ಕಂಡ್ರೂ ಬಯಸಿದಾಗ ಬೇಕಾದಲ್ಲಿಗೆ ಹಾರಬಲ್ಲ ಶಕ್ತಿ ಇದ್ದ ಪವಾಡ ಪುರುಷ.

    ಅದೊಂದು ದಿನ, ಸಮಯ ಮುಸ್ಸಂಜೆಯ ಆಸುಪಾಸಿರಬಹುದೇನೋ. ಅಷ್ಟೊತ್ತಿಗೆ ಅಲ್ಲಿದ್ದ ಭಕ್ತನೊಬ್ಬ ತನ್ನ ಮೊಬೈಲ್ ಕ್ಯಾಮೆರಾದಿಂದ ಗುಡಿಯ ಆವರಣದಲ್ಲಿ ಕೂತಿದ್ದ ಈ ವ್ಯಕ್ತಿಯನ್ನೇ ಕೇಂದ್ರೀಕರಿಸಿಕೊಂಡು ಚಿತ್ರೀಕರಣ ಮಾಡ್ತಿದ್ದ. ಹೀಗೆ ಅರ್ಧ ಘಂಟೆ ಕಳೆದಿರಬಹುದೇನೋ. ಆ ನಿಂತಿದ್ದ ಸಾಧು ಒಮ್ಮಿಂದೊಮ್ಮೆಗೆ ಅಗೋಚರ ಶಕ್ತಿ ಪ್ರಾಪ್ತರಾದವರಂತೆ ಕಂಡು ಬಂದ್ರು. ಮೈ ಸಣ್ಣಗೆ ಕಂಪಿಸ್ತಾ ಇತ್ತು. ಆಗ ಅಲ್ಲೊಂದು ಪವಾಡವೇ ಘಟಿಸ್ತು. ರಾಕೆಟ್ ಉಡಾವಣೆ ಮಾಡಿದಷ್ಟೇ ವೇಗದಲ್ಲಿ, ನಿಂತಿದ್ದ ವ್ಯಕ್ತಿ ಗಾಳಿಯಲ್ಲಿ ರೊಯ್ಯನೆ ಮಾಯವಾಗಿಬಿಟ್ಟಿದ್ರು. ಹೌದು. ಇದಾಗಿದ್ದು, ತಿರುವಣ್ಣಾಮಲೈ ದೇವಾಲಯದ ಆವರಣದಲ್ಲಿ. ಅಂದು ರಾಕೆಟ್ ಥರಾ ಹಾರಿ ಹೋಗಿದ್ದ ಪವಾಡ ಪುರುಷರೇ, ಮೂಕುಪೊಡಿ ಸಿದ್ಧರ್ ಅನ್ನೋ ಸಾಧು.

    ಅಂದ ಹಾಗೆ, ಈ ಮೂಕುಪೊಡಿ ಸಿದ್ಧರ್ ಬರಿಗಾಲಿನಲ್ಲಿ ಎಷ್ಟು ದೂರ ಬೇಕಾದ್ರೂ ಅನ್ನಾಹಾರಗಳಿಲ್ಲದೆ ನಡೆದು ಹೋಗೋ ಶಕ್ತಿ ಗಳಿಸಿದ್ರು. ಒಮ್ಮೆ ಧ್ಯಾನಕ್ಕೆ ಕೂತ್ರೆ ದಿನಗಟ್ಟಲೆ, ವಾರಗಟ್ಟಲೆ ಏಳ್ತಾನೇ ಇರಲಿಲ್ಲ. ರಾತ್ರಿ ಹಗಲನ್ನೋ ಪರಿವೆಯೇ ಇಲ್ಲದೆ ತಪೋನಿರತರಾಗಿಬಿಡುತ್ತಿದ್ದವರು ಮೂಕುಪೊಡಿ ಸಿದ್ಧರ್.

    ಈ ಸಾಧುವಿಗೆ ಮೂಕುಪೊಡಿ ಸಿದ್ಧರ್ ಅನ್ನೋ ಹೆಸರು ಬಂದಿರೋದ್ರ ಹಿಂದೆ ಒಂದು ಸ್ವಾರಸ್ಯಕರ ಕಥೆ ಇದೆ. ಇವರು ದಿನಾ ನಶ್ಯವನ್ನು ಸೇವಿಸ್ತಿದ್ರು. ಮೂಗಿನ ಹೊಳ್ಳೆಯ ತುಂಬಾ ನಶ್ಯ ತುಂಬಿಸಿ ಇವರದ್ದೇ ಲೋಕದಲ್ಲಿ ಇದ್ದು ಬಿಡ್ತಿದ್ರು. ಆದ್ರೆ, ಇವರ ಹೆಸರಿನ ಹಿಂದೆ ಬಿದ್ದು, ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಬಯಸಿದವ್ರಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಹೀಗಾಗಿ ಮೂಗಿಗೆ ನಶ್ಯ ಹಾಕೋ ಸಿದ್ಧರ್ ಅನ್ನೋ ಹೆಸರು ಬಂತು. ಈ ಮೂಕುಪೊಡಿ ಸಿದ್ಧರ್ ಯಾರಾದ್ರೂ ಎದುರಿಗೆ ಸಿಕ್ರೆ ಮನಸ್ಸಾದ್ರೆ ಮಾತಾಡಿಸ್ತಿದ್ರು. ಹೊರ ಜಗತ್ತಿಗೆ ಹುಚ್ಚನ ರೀತಿ ಗೋಚರಿಸೋ ಇವರ ಶಕ್ತಿಯನ್ನು ಕಣ್ಣಾರೆ ಕಂಡ ಜನ ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯರಂತೆ ಮೈಯ್ಯಲ್ಲೊಂದು ಸಣ್ಣ ಬಟ್ಟೆ ತುಂಡನ್ನ ಸುತ್ತಿ ಓಡಾಡೋ ಇವರಿಗೆ ಗಾಳಿ, ಮಳೆ, ಚಳಿಯ ಹಂಗಿರಲಿಲ್ಲ. ಇವರದ್ದು ತೀಕ್ಷ್ಣವಾದ ದೃಷ್ಟಿ. ಇವ್ರ ಕಣ್ಣಲ್ಲಿ ಕಣ್ಣಿಟ್ಟು ನೋಡೋದು ಬಹಳಾನೇ ಕಷ್ಟ. ಇವರ ಕೃಪಾಕಟಾಕ್ಷ ಬಿದ್ರೆ ಸಾಕು ಭಾಗ್ಯೋದಯವಾಗ್ತಿತ್ತು ಅಂತಾ ಇಲ್ಲಿನ ಭಕ್ತರು ಹೇಳ್ತಾರೆ.

    ಪ್ರತೀ ಮುಂಜಾನೆ ನೂರಾರು ಸಂಖ್ಯೆಯಲ್ಲಿ ಅಣ್ಣಾಮಲೈ ದೇವಾಲಯದ ಬಳಿ ಮೂಕುಪೊಡಿ ಸಿದ್ಧರ್ ದರ್ಶನಕ್ಕಾಗಿ ಕಾಯ್ತಾ ಇರ್ತಿದ್ರು. ಬರೋ ಜನರ ಬಳಿ ಹಣ ತೆಗೆದು ತನ್ನ ಬಟ್ಟೆಗೆ ಹಾಕುವಂತೆ ಸೂಚಿಸ್ತಿದ್ರು. ಕೆಲವೇ ದಿನಗಳಲ್ಲಿ ಇದು ದೊಡ್ಡ ಗಂಟಾಗಿ ಮಾರ್ಪಾಡಾದ ನಂತ್ರ ಈ ಹಣವನ್ನು ತೆಗೆದುಕೊಂಡು ತನ್ನ ಜೊತೆಗಿರೋ ಬಡ ಜನರಿಗೆ ಹಂಚಿಬಿಡ್ತಿದ್ರು.

    ವಿಸ್ಮಯಕಾರಿ ಶಕ್ತಿಗಳನ್ನು ತಮ್ಮದಾಗಿಸಿಕೊಂಡ ಸಿದ್ಧರ್ ಎದುರಿಗಿರೋರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಕರಾರುವಾಕ್ಕಾಗಿ ಹೇಳ್ತಾರೆ. ಸಮುದ್ರದ ಅಲೆಗಳನ್ನು ಯಾವ ದಿಕ್ಕಿಗೆ ಬೇಕಾದ್ರೂ ಆ ದಿಕ್ಕಿಗೆ ಹೊರಳಿಸ್ತಿದ್ರು ಅನ್ನೋದನ್ನ ಕಣ್ಣಾರೆ ಕಂಡವರು ಹೇಳ್ತಾರೆ. ಸಿದ್ಧರ್ ಇಡೀ ಪ್ರಪಂಚದ ಭವಿಷ್ಯವನ್ನು ಕಣ್ಣಿಗೆ ಕಟ್ಟೋ ಹಾಗೆ ಉತ್ತರ ಕೊಡ್ತಿದ್ರು. ಕೆಲವೊಮ್ಮೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ವರ್ತಿಸ್ತಿದ್ರು. ಸಾಮಾನ್ಯರ ಕಣ್ಣಿಗೆ ಕಾಣದ ಅಗೋಚರ ಶಕ್ತಿಗಳು ಇವ್ರ ಕಣ್ಣಿಗೆ ಕಾಣ್ತಿದ್ವು ಅಂತಾರೆ ಇಲ್ಲಿನ ಜನ. ಯಾವುದೇ ತೆರನಾದ ರೋಗವೇ ಆಗಿರ್ಲಿ ಇವರನ್ನು ನೋಡಿದ ತಕ್ಷಣ ನಿವಾರಣೆಯಾಗುತ್ತಿತ್ತಂತೆ.

    ಜನ್ರನ್ನ ನೋಡಿಯೇ ನಿಮ್ಮ ಹೆಸರು, ತಂದೆ ತಾಯಿ ಕುಲ ಜಾತಕ ಎಲ್ಲವನ್ನೂ ಪಟ ಪಟನೆ ಹೇಳೋ ಶಕ್ತಿ ಈ ಮೂಕುಪೊಡಿ ಸಿದ್ಧರ್ ಗೆ ಇತ್ತಂತೆ. ಹೀಗೆ ಅತೀಂದ್ರಿಯ ಶಕ್ತಿಗಳನ್ನು ಹೊಂದಿರೋ ಸಿದ್ಧರ್ ತಮ್ಮ ಸಾವಿನ ಬಗ್ಗೆಯೂ ಅದೊಂದು ದಿನ ಅದ್ಭುತವೊಂದನ್ನ ಸೃಷ್ಟಿಸಿಬಿಟ್ಟಿದ್ರು. ಇವರು ಸತ್ತಿದ್ದಾರೆಂದು ತಿಥಿ ಮಾಡೋದಕ್ಕೆ ಹೊರಟ ಜನರ ಮುಂದೆ ತಮ್ಮ ಬ್ರಹ್ಮ ಜ್ಞಾನದಿಂದ ಅಲ್ಲಿನ ವಿಷಯ ತಿಳಿದುಕೊಂಡು ಪ್ರತ್ಯಕ್ಷರಾಗಿಬಿಟ್ಟಿದ್ರು. ಮೂಕುಪೊಡಿ ಸಿದ್ಧರ್ ಹಿನ್ನೆಲೆಯಾಗ್ಲೀ, ಇವರ ಶಕ್ತಿಯ ವ್ಯಾಪ್ತಿಯಾಗ್ಲೀ ಗೊತ್ತಿಲ್ಲದಿದ್ರೂ ಇಂದಿಗೂ ಜನರಿಗೆ ಇವರೊಂದು ಅಚ್ಚರಿಯಾಗಿ ಕಾಣ್ತಾರೆ. ಇಂತಹಾ ವಿಸ್ಮಯಕಾರಿ ವ್ಯಕ್ತಿಗಳು ನಮ್ಮ ನಡುವೆ ಇದ್ರು ಅನ್ನೋದೇ ಅಚ್ಚರಿ.

    – ಕ್ಷಮಾ ಭಾರದ್ವಾಜ್, ಉಜಿರೆ