Tag: ತಿರುಪತಿ

  • Tirupati Stampede: ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನ, ಅಧಿಕಾರಿಗಳು ಅಮಾನತು

    Tirupati Stampede: ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನ, ಅಧಿಕಾರಿಗಳು ಅಮಾನತು

    ತಿರುಪತಿ: ಕಾಲ್ತುಳಿತದಿಂದ (Tirupati Stampede) ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನಕ್ಕೆ ತಿರುಮಲ ತಿರುಪತಿ ದೇವಸ್ಥಾನ (TTD) ಅವಕಾಶ ಮಾಡಿಕೊಟ್ಟಿದೆ.

    ಸಿಎಂ ಚಂದ್ರಬಾಬು ನಾಯ್ಡು (CM Chandrababu Naidu) ಹಾಗೂ ಡಿಸಿಎಂ ಪವನ್ ಕಲ್ಯಾಣ್ (DCM Pawan Kalyan) ಸೂಚನೆ‌ ಮೇರೆಗೆ ಸ್ವಿಮ್ಸ್ ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

    20 ಮಂದಿ ಗಾಯಾಳುಗಳುಗಳು ಸರ್ಕಾರಿ ಬಸ್ಸಿನಲ್ಲಿ ಆಸ್ಪತ್ರೆಯಿಂದ ದೇವಾಲಯಕ್ಕೆ ಪ್ರಯಾಣ ಮಾಡಿ ದೇವರ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ: Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?

     

    ವೈಕುಂಠ ಏಕಾದಶಿ (Vaikuntha Ekadashi) ಹಿನ್ನೆಲೆಯಲ್ಲಿ ತಿರುಪತಿ ತಿರುಮಲಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಕಾಲ್ತುಳಿತದ ಬಳಿಕ ಎಚ್ಚೆತ್ತ ಆಂಧ್ರಪ್ರದೇಶ ಸರ್ಕಾರ ಹಾಗೂ ಟಿಟಿಡಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿದೆ.

    ತಿರುಪತಿಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಗಳ ತಲೆದಂಡವಾಗಿದೆ. ಡಿವೈಎಸ್‌ಪಿ ರಮಣಕುಮಾರ್ ಹಾಗೂ ಗೋಶಾಲೆ ಡಿಡಿ ಹರಿನಾಥ ರೆಡ್ಡಿ ಅವರನ್ನು ಆಂಧ್ರಪ್ರದೇಶ ಸರ್ಕಾರ ಅಮಾನತು ಮಾಡಿದೆ. ಎಸ್‌ಪಿ ಸುಬ್ಬರಾಯಡು ಹಾಗೂ ಇಓ ಗೌತಮಿ, ಸಿಎಸ್ ಓ ಶ್ರೀಧರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?

    ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿತನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆಯೇ ಸರ್ಕಾರ ಹೊಣೆ ಹೊರಿಸಿದೆ.

    ಚಂದ್ರಬಾಬು ನಾಯ್ಡು ಮೃತರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕುಟುಂಬಸ್ಥರಿಗೆ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದಾರೆ.

  • ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?

    ವೈಕುಂಠ ಏಕಾದಶಿ ಪುರಾಣ ಕಥೆ ಏನು? ಯಾಕೆ ಆಚರಣೆ ಮಾಡುತ್ತಾರೆ?

    ಲ್ಪಾಂತ್ಯದಲ್ಲಿ ಮಹಾವಿಷ್ಣು (Maha Vishnu) ವಟಪತ್ರಶಾಯಿಯಾಗಿ ಯೋಗನಿದ್ರೆಯಲ್ಲಿದ್ದಾಗ ಆತನ ಕಿವಿಯ ಗುಗ್ಗೆಯಿಂದ (ಕರ್ಣಮಲ) ಇಬ್ಬರು ರಾಕ್ಷಸರು ಜನಿಸುತ್ತಾರೆ. ಬ್ರಹ್ಮನ ಪ್ರೇರಣೆಯಿಂದ ಅವರಲ್ಲಿ ವಾಯುಸಂಚಾರವಾಗುತ್ತದೆ.  ರಕ್ಷಸರಾಗಿ ಬಲಶಾಲಿಗಳಾದ ಅವರು ಮಹಾಬಲರಾಗಿ ದೇವಲೋಕವನ್ನೇ ವಶಪಡಿಸುತ್ತಾರೆ. ಬ್ರಹ್ಮ ಅವರನ್ನು ಸ್ಪರ್ಶಿಸಿ ನೋಡಲು ಒಬ್ಬ ಮೃದುವಾಗಿ ಕಂಡ. ಅವನೇ ಮಧು. ಮತ್ತೊಬ್ಬ ಕಲ್ಲಿನಂತೆ ಕರ್ಕಶವಾಗಿ ಕಂಡ. ಅವನೇ ಕೈಟಭ.

    ಪರಾಕ್ರಮಿಗಳಾದ ಮಧು ಕೈಟಭ (Madhu Kaitabha) ಇವರನ್ನು ವಿಷ್ಣು ಸಂಹರಿಸಿದ. ವೈಕುಂಠ ಲೋಕದ ಉತ್ತರ ದ್ವಾರದ ಮೂಲಕ ಅವರನ್ನು ಪ್ರವೇಶಿಸುವಂತೆ ಮಾಡಿ ಸದ್ಗತಿಯನ್ನು ಕರುಣಿಸುತ್ತಾನೆ. ಸದ್ಗತಿಯಲ್ಲಿ ಕರುಣಿಸಿದ್ದು  ಏಕಾದಶಿಯಂದು. ಈ ಕಾರಣಕ್ಕೆ ವೈಕುಂಠ ಏಕಾದಶಿಯಂದು (Vaikuntha Ekadashi) ವಿಶೇಷ ದ್ವಾರವನ್ನು ನಿರ್ಮಿಸಿ, ಅದರ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆಯುವ ಆಚರಣೆ ಇಂದು ಪ್ರಚಲಿತಕ್ಕೆ ಬಂದಿದೆ. ಭಕ್ತಿಪೂರ್ವಕವಾಗಿ ದೇವರಿಗೆ ಶರಣಾದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆಯಿದೆ.

     

    ಅಮೃತ ಸಿಕ್ಕಿದ ದಿನ:
    ಒಂದು ದಿನ ಋಷಿ ದೂರ್ವಾಸ ಇಂದ್ರನ ಆಸ್ಥಾನಕ್ಕೆ ಬಂದು ಬಹಳ ಗೌರವದಿಂದ ಇಂದ್ರನಿಗೆ ಹೂವಿನ ಹಾರವನ್ನು ಅರ್ಪಿಸುತ್ತಾನೆ. ಇಂದ್ರನು ಆ ಹಾರವನ್ನು ತೆಗೆದುಕೊಂಡು ತನ್ನ ಆನೆಯ ಐರಾವತದ ಹಣೆಯ ಮೇಲೆ ಇಡುತ್ತಾನೆ. ಆನೆಯು ಹಾರವನ್ನು ಸೊಂಡಿಲಿನಿಂದ ತೆಗೆದುಕೊಂಡು ಭೂಮಿಯ ಮೇಲೆ ಎಸೆಯುತ್ತದೆ.

    ನಾನು ನೀಡಿದ ಹಾರಕ್ಕೆ ಅಗೌರವ ತೋರಿದ್ದಕ್ಕೆ ಸಿಟ್ಟಾದ ದೂರ್ವಾಸ ಮುನಿ ಕೋಪಗೊಂಡು, ನಿನಗೆ ಅಹಂಕಾರ ಬಂದಿದೆ. ಹೇಗೆ ನನ್ನ ಹಾರವನ್ನು ನೆಲಕ್ಕೆ ಎಸೆದು ಹಾಳು ಮಾಡಿದೆಯೋ ಅದೇ ರೀತಿ ನಿನ್ನ ರಾಜ್ಯವು ಹಾಳಾಗಲಿ ಎಂದು ಇಂದ್ರನಿಗೆ ಶಾಪವನ್ನು ಕೊಡುತ್ತಾನೆ. ದೂರ್ವಾಸನ ಶಾಪದ ಪರಿಣಾಮ ದೇವತೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಎಲ್ಲಾ ತರಕಾರಿ ಉತ್ಪನ್ನಗಳು ಮತ್ತು ಸಸ್ಯಗಳು ಸಾಯಲು ಪ್ರಾರಂಭಿಸುತ್ತವೆ, ಪುರುಷರು ದಾನ ಮಾಡುವುದನ್ನು ನಿಲ್ಲಿಸುತ್ತಾರೆ, ಮನಸ್ಸುಗಳು ಭ್ರಷ್ಟವಾಗುತ್ತವೆ, ಜನರು ಅಂತಿಮ ಇಂದ್ರಿಯ ಸುಖಗಳಲ್ಲಿ ತೊಡಗಲು ಪ್ರಾರಂಭಿಸುತ್ತಾರೆ. ಅಮರಾವತಿಯಲ್ಲಿ ದೇವರುಗಳು ದುರ್ಬಲವಾಗುತ್ತಿದ್ದಂತೆ, ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸುತ್ತಾರೆ.

     

    ಸೋತ ನಂತರ ಇಂದ್ರಾದಿ ದೇವತೆಗಳು ವಿಷ್ಣುವಿನ ಬಳಿ ಹೋಗಿ ಮೊರೆ ಇಡುತ್ತಾರೆ. ಆಗ ಆಮೃತ ಪಡೆಯಬೇಕೆಂದು ಹೇಳಿದ ವಿಷ್ಣು ನೀವು ಮತ್ತು ರಾಕ್ಷಸರು ಸಮುದ್ರ ಮಂಥನ (Samudra Manthan) ಮಾಡಬೇಕು ಎಂದು ಸೂಚಿಸುತ್ತಾನೆ. ವೈಕುಂಠ ಏಕಾದಶಿಯ ಪವಿತ್ರ ದಿನದಂದು ಸಾಗರ ಮಂಥನವನ್ನು ನಡೆಯಿತು. ದೇವರು ಮತ್ತು ರಾಕ್ಷಸರು ಅಮೃತಕ್ಕಾಗಿ ಕ್ಷೀರ ಸಮುದ್ರವನ್ನು ಮಥನ ಮಾಡಿದಾಗ ಮೊದಲು ಕಠೋರವಾದ ವಿಷ ಜನಿಸಿತು. ನಂತರ ಜೇಷ್ಠಾದೇವಿ ಜನಿಸಿದಳು. ಬಳಿಕ ಲಕ್ಷ್ಮೀ ಪಾಲ್ಗಡಲಿಂದ ಹೊರಬಂದಳು.ಕೊನೆಯದಾಗಿ ಸಿಕ್ಕಿದ್ದು ಅಮೃತ. ಕ್ಷೀರ ಸಾಗರದಲ್ಲಿ ಸಿಕ್ಕಿದ ಅಮೃತವನ್ನು ಮೋಹಿನಿ ರೂಪದಲ್ಲಿದ್ದ ವಿಷ್ಣು ದೇವತೆಗಳಿಗೆ ನೀಡಿದಳು. ಇದನ್ನೂ ಓದಿ: Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?

    ಅಮೃತ ಸಿಕ್ಕಿದ ಈ ಮಂಗಳರ ದಿನದಂದು ಮೃತಪಡುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ನಿವಾಸ ಅಥವಾ ವೈಕುಂಠ ಧಾಮವನ್ನು ತಲುಪುತ್ತಾರೆ ಎಂಬುದು ನಂಬಿಕೆ.

    ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಈ ದಿನ ಕಠಿಣ ಉಪವಾಸ ವ್ರತ ಆಚರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೆ ಆ ದಿನದಂದು ಭಗವಾನ್‌ ವಿಷ್ಣುವಿಗೆ ಭಕ್ತಿ ಹಾಗೂ ಸಮರ್ಪಣಾ ಭಾವದಿಂದ ಪೂಜೆ ಸಲ್ಲಿಸಲಾಗುತ್ತದೆ.

    ಏಕಾದಶಿ ವ್ರತವನ್ನು ಯಾರು ಭಕ್ತಿಯಿಂದ ಆಚರಿಸುತ್ತಾರೋ ಅವರ ಎಲ್ಲಾ ಕಷ್ಟಗಳು ಹಾಗೂ ಸಮಸ್ಯೆಗಳನ್ನು ವಿಷ್ಣು ಪರಿಹಾರ ಮಾಡುತ್ತಾನೆ. ಅದರಲ್ಲೂ ವೈಕುಂಠ ಏಕಾದಶಿ ಸಮಯದಲ್ಲಿ ವಿಷ್ಣುವಿನ ನೆಲೆಯಾದ ವೈಕುಂಠದ ದ್ವಾರಗಳು ತೆರೆಯುತ್ತದೆ. ಈ ವಿಶೇಷ ದಿನದಂದು ವಿಷ್ಣು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.

  • Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?

    Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?

    ತಿರುಪತಿ: ಪ್ರತಿ ವರ್ಷ ವೈಕುಂಠ ಏಕಾದಶಿ (Vaikunta Ekadasi ) ಸಮಯದಲ್ಲಿ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನನಕ್ಕೆ (Tirupati Temple) ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇಶ ವಿದೇಶಗಳಲ್ಲಿ ಭಕ್ತರು ಆಗಮಿಸಿ ದೇವರನ್ನು ಸಂದರ್ಶಿಸಿ ಪುನೀತರಾಗುತ್ತಾರೆ.

    ಸಾಧಾರಣವಾಗಿ ತಿರುಪತಿಯಲ್ಲಿ ಎರಡು ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಒಂದು ಒಂಬತ್ತು ದಿನಗಳ ಕಾಲ ನಡೆಯಲಿರುವ ಬ್ರಹ್ಮೋತ್ಸವ (Bsrahmotsavam) ಎರಡನೇಯದ್ದು ವೈಕುಂಠ ಏಕಾದಶಿ.

    ಆರಂಭದಲ್ಲಿ ಒಂದೇ ದಿನ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿತ್ತು. ಆದರೆ 1980 ಮತ್ತು 1990 ರ ದಶಕದ ಬಳಿಕ ಭಾರೀ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಬರಲು ಆಗಮಿಸತೊಡಗಿದರು. ಹೀಗಾಗಿ ಟಿಟಿಡಿ ವೈಕುಂಠ ದ್ವಾದಶಿಯನ್ನು ಹೆಚ್ಚುವರಿ ಪವಿತ್ರ ದಿನವೆಂದು ಗುರುತಿಸುವ ಮೂಲಕ ಹಬ್ಬದ ಸಂಭ್ರಮವನ್ನು ವಿಸ್ತರಿಸಿತು.

    ಮಕರ ಸಂಕ್ರಾಂತಿ ಹಬ್ಬದ ಹಿಂದಿನ ಎರಡೂ ದಿನಗಳನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ತಿರುಮಲದಲ್ಲಿ ವೆಂಕಟೇಶ್ವರನೆಂದು ಪೂಜಿಸಲ್ಪಡುವ ವಿಷ್ಣುವನ್ನು ಈ ಅವಧಿಯಲ್ಲಿ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

    ಸಾಮಾನ್ಯ ಭಕ್ತರು ಅಲ್ಲದೇ ವೈಕುಂಠ ಏಕಾದಶಿಯ ಸಮಯದಲ್ಲಿ ಗೋವಿಂದನ ಮಾಲೆಯನ್ನು ಧರಿಸಿದ ಭಕ್ತರು ತಿರುಪತಿಗೆ ಬರುತ್ತಾರೆ. ವೈಕುಂಠ ಏಕಾದಶಿಗೆ 41 ದಿನಗಳ ಮುಂಚಿತವಾಗಿ ಗೋವಿಂದ ಮಾಲೆಯನ್ನು ಭಕ್ತರು ಧರಿಸಿ ವ್ರತಾಚರಣೆ ಮಾಡುತ್ತಾರೆ. ಭಕ್ತಿಯ ಸಂಕೇತವಾಗಿ ಭಕ್ತರು ನೂರಾರು ಕಿಲೋಮೀಟರ್‌ ದೂರದಿಂದ ಬರಿಗಾಲಿನಲ್ಲಿ ನಡೆದುಕೊಂಡು ತಿರುಪತಿಗೆ ಬರುತ್ತಾರೆ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ನಾಯಕರ ಜೊತೆ ಚರ್ಚಿಸಿದ ಬಳಿಕ ಟಿಟಿಡಿ 2021-2022 ರಲ್ಲಿ ವೈಕುಂಠ ಏಕಾದಶಿ ಮತ್ತು ದ್ವಾದಶಿಯನ್ನು ಹತ್ತು ದಿನಗಳವರೆಗೆ ವಿಸ್ತರಿಸಿತು. ಈ ನಿರ್ಧಾರದ ನಂತರ ವೆಂಕಟೇಶ್ವರನ ಗರ್ಭಗುಡಿಯ ಸುತ್ತಲಿನ ಉತ್ತರ ದ್ವಾರವನ್ನು ಹತ್ತು ದಿನಗಳವರೆಗೆ ತೆರೆದಿಡಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ಉತ್ತರ ದ್ವಾರದ ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದು ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥನೆ ಮಾಡುತ್ತಾರೆ.

     

  • ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    ತಿರುಪತಿ: ಪ್ರಸಿದ್ಧ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ (Tirupati Temple) ಬುಧವಾರ ರಾತ್ರಿ ವೈಕುಂಠ ದ್ವಾರ ದರ್ಶನ (Vaikuntha Dwara Darshan) ಟಿಕೆಟ್‌ ಕೌಂಟರ್‌ ಬಳಿ ನೂಕು ನುಗ್ಗಲು ಸಂಭವಿಸಿ ನಡೆದ ಕಾಲ್ತುಳಿತದಲ್ಲಿ (Stampede) ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

    ಬೈರಾಗಿಪಟ್ಟೇಡ, ಶ್ರೀನಿವಾಸಂ ಮತ್ತು ಸತ್ಯನಾರಾಯಣಪುರಂನಲ್ಲಿ ಕಾಲ್ತುಳಿತ ಸಂಭವಿಸಿದ್ದು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ದುರಂತಕ್ಕೆ ಕಾರಣ ಏನು?
    ಜ. 10, 11 ಮತ್ತು 12 ರಂದು ವೈಕುಂಠ ಏಕಾದಶಿ ಇರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 5 ಗಂಟೆಯಿಂದ ವೈಕುಂಠದ್ವಾರ ಸರ್ವದರ್ಶನಕ್ಕೆ ಟಿಕೆಟ್​ ನೀಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ (TTD)ಪ್ರಕಟಿಸಿತ್ತು. ದಿನಕ್ಕೆ 40 ಸಾವಿರದಂತೆ 3 ದಿನಗಳಲ್ಲಿ 1 ಲಕ್ಷದ 20 ಸಾವಿರ ದರ್ಶನ ಟಿಕೆಟ್​ ನೀಡಲು ಟಿಟಿಡಿ ನಿರ್ಧರಿಸಿತ್ತು. 9 ಕಡೆಗಳಲ್ಲಿ 90 ಕೌಂಟರ್‌ಗಳ ಮೂಲಕ ಸರ್ವದರ್ಶನ ಟಿಕೆಟ್​​ ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿತ್ತು.  ಇದನ್ನೂ ಓದಿ: ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಮಹಿಳೆ ದುರ್ಮರಣ

    ವೈಕುಂಠ ದ್ವಾರ ದರ್ಶನದ ಟಿಕೆಟ್‌ ಪಡೆಯಲು ಬುಧವಾರ ಸಂಜೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಭಾರೀ ಸಂಖ್ಯೆಯಲ್ಲಿ ಭಕ್ತರು ಸರದಿಯಲ್ಲಿ ನಿಂತಿದ್ದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಟಿಕೆಟ್‌ ನೀಡಲು ಟಿಟಿಡಿ ಮುಂದಾಯಿತು. ಬೈರಾಗಿಪಟ್ಟೇಡ ರಾಮ ನಾಯ್ಡು ಶಾಲೆಯ ಬಳಿಯ ಕೌಂಟರ್‌ನಲ್ಲಿ ಸಾಲಿನಲ್ಲಿ ನಿಂತಿದ್ದ ಭಕ್ತರೊಬ್ಬರಿಗೆ ದಿಢೀರ್‌ ಉಸಿರಾಟದ ಸಮಸ್ಯೆಯಾಗಿದೆ.

    ಆ ಭಕ್ತರನ್ನು ಆಸ್ಪತ್ರೆಗೆ ಕರೆದೊಯ್ಯಲು ಭದ್ರತಾ ಸಿಬ್ಬಂದಿ ಒಮ್ಮೆ ಕೌಂಟರ್‌ ಗೇಟ್‌ ತೆರೆದಿದ್ದಾರೆ. ಈ ವೇಳೆ ಟಿಕೆಟ್‌ ನೀಡಲೆಂದೇ ಈ ಗೇಟ್‌ ತೆರೆಯಲಾಗಿದೆ ಎಂದು ಭಾವಿಸಿದ ಭಕ್ತರು ಏಕಾಏಕಿ ಕೌಂಟರ್‌ ಕಡೆಗೆ ನುಗ್ಗಿದ್ದಾರೆ. ಇದರಿಂದ ನೂಕುನುಗ್ಗಲು ಸಂಭವಿಸಿ ಕೆಲವರು ಕೆಳಗೆ ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಕೆಲವರು ಓಡಾಡಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಎಂದು ವರದಿಯಾಗಿದೆ. ಟಿಕೆಟ್‌ ಪಡೆಯಲು ಎಲ್ಲಾ ಭಕ್ತರು ಸರತಿಯಲ್ಲೇ ನಿಂತಿದ್ದರು. ಎಲ್ಲಾ ಭಕ್ತರು ಒಂದೇ ಬಾರಿಗೆ ಕೌಂಟರ್‌ ಬಳಿ ನುಗ್ಗಿದ್ದರಿಂದ ಹಲವು ಮಂದಿ ಜನ ಸಂದಣಿಯಲ್ಲಿ ಸಿಲುಕಿದ್ದರಿಂದ ದುರಂತ ಸಂಭವಿಸಿದೆ.

     

    ವೈಕುಂಠ ಏಕಾದಶಿ ಸಂಭ್ರಮದಲ್ಲಿ ದೇಶದ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ.

    ತೀವ್ರವಾಗಿ ಗಾಯಗೊಂಡವರಿಗೆ ಪೊಲೀಸ್‌ ಸಿಬ್ಬಂದಿಯೇ ಪ್ರಾಥಮಿಕ ಆರೈಕೆ ಮಾಡುತ್ತಿರುವುದು ಹಾಗೂ ಗಾಯಾಳುಗಳನ್ನು ಅಂಬುಲೆನ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯಗಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

     

  • ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿಯವರು ಯಾರೂ ಮೃತಪಟ್ಟಿಲ್ಲ: ಡಿಸಿ ಸ್ಪಷ್ಟನೆ

    ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿಯವರು ಯಾರೂ ಮೃತಪಟ್ಟಿಲ್ಲ: ಡಿಸಿ ಸ್ಪಷ್ಟನೆ

    ಅಮರಾವತಿ: ವೈಕುಂಠ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ (Tirupati) ಭಾರೀ ದುರಂತ ಸಂಭವಿಸಿದೆ. ಕಾಲ್ತುಳಿತಕ್ಕೆ (Tirupati Stampede) ಸಿಲುಕಿ 7 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಅಧಿಕ ಭಕ್ತರು ಅಸ್ವಸ್ಥಗೊಂಡಿದ್ದಾರೆ. ಘಟನೆಯಲ್ಲಿ ಕರ್ನಾಟಕದ ಬಳ್ಳಾರಿ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಬಳ್ಳಾರಿಯವರು ಯಾರೂ ಮೃತಪಟ್ಟಿಲ್ಲ ಎಂದು ಬಳ್ಳಾರಿ ಡಿ.ಸಿ ಪ್ರಶಾಂತ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.

    ತಿರುಪತಿ ದೇಗುಲದ ಶ್ರೀನಿವಾಸಂ ಬಳಿ ಘಟನೆ ನಡೆದಿದ್ದು, ಮೂವರು ಮಹಿಳೆಯರು ಸೇರಿ 7 ಮಂದಿ ಭಕ್ತರು ಮೃತಪಟ್ಟಿದ್ದಾರೆ.  ಇನ್ನು ಗಾಯಾಳುಗಳಿಗೆ ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೃತರನ್ನು ಕೇರಳದ ನಿರ್ಮಲ (50),  ವಿಶಾಖಪಟ್ಟಣಂನ  ರಜನಿ (47), ವೈಜಾಗ್‌ನ ಲಾವಣ್ಯ (40), ವಿಶಾಖಪಟ್ಟಣಂನ ಶಾಂತಿ (30), ಸೇಲಂನ ಮಲ್ಲೀಕಾ (49) ಹಾಗೂ ನರಸಿಪಟ್ಟಣದ ನಾಯ್ಡು ಬಾಬು (59) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ತಿರುಪತಿ ಕಾಲ್ತುಳಿತಕ್ಕೆ ಸಾವಿನ ಸಂಖ್ಯೆ 7ಕ್ಕೆ ಏರಿಕೆ – ಅಸ್ವಸ್ಥರ ಏರ್‌ಲಿಫ್ಟ್‌ಗೆ ಸಿಎಂ ಸೂಚನೆ

    ಜನವರಿ 10 ರಿಂದ 14ರವರೆಗೆ ವೈಕುಂಠ ದ್ವಾರ ದರ್ಶನಕ್ಕೆ ಉಚಿತ ಟಿಕೆಟ್ ವಿತರಣೆ ಹಿನ್ನೆಲೆ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಟಿಟಿಡಿಯಿಂದ ಒಟ್ಟು 7 ಲಕ್ಷ ಟಿಕೆಟ್ ವಿತರಣೆ ಕಾರ್ಯ ನಡೆಯುತ್ತಿತ್ತು. ಉಚಿತ ಟಿಕೆಟ್ ಪಡೆಯುವ ಸಲುವಾಗಿ ಸಾಗರೋಪಾದಿಯಲ್ಲಿ ಭಕ್ತರು ಕೌಂಟರ್ ಬಳಿ ಸೇರಿದ ಪರಿಣಾಮ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಇದನ್ನೂ ಓದಿ: ಬ್ಯಾಂಕ್‌ನಿಂದ ಸಾಲಕ್ಕೆ ಲಾರಿ ಜಪ್ತಿ – ಟೈರನ್ನೇ ಕದ್ದ ಅಧಿಕಾರಿಗಳು!?

    ಇನ್ನು ತಿರುಪತಿಗೆ ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಚಂದ್ರಬಾಬು ನಾಯ್ಡು ಭೇಟಿ ನೀಡಲಿದ್ದು, ಮೃತ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ. ಘಟನಾ ಸ್ಥಳಕ್ಕೂ ತೆರಳಿ ಮಾಹಿತಿ ಪಡೆಯಲಿದ್ದಾರೆ.  ಇದನ್ನೂ ಓದಿ: ಕರ್ನಾಟಕ ನಕ್ಸಲ್ ಮುಕ್ತ ಆಗಿದೆ: ಸಿಎಂ

  • ತಿರುಪತಿಯಲ್ಲಿ ಭಾರಿ ಅನಾಹುತ – ಕಾಲ್ತುಳಿತಕ್ಕೆ 4 ಮಂದಿ ಸಾವು

    ತಿರುಪತಿಯಲ್ಲಿ ಭಾರಿ ಅನಾಹುತ – ಕಾಲ್ತುಳಿತಕ್ಕೆ 4 ಮಂದಿ ಸಾವು

    ಅಮರಾವತಿ: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ (Tirupati Temple) ಬುಧವಾರ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.

    ತಿರುಪತಿಯಲ್ಲಿ ದರ್ಶನಕ್ಕೆ ಟಿಕೆಟ್ ವಿತರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ನಾಲ್ವರು ಭಕ್ತರು ಸಾವನ್ನಪ್ಪಿದ್ದಾರೆ. ತಿರುಪತಿಯ ವಿಷ್ಣು ನಿವಾಸದ ಬಳಿ ಇರುವ ತಿರುಮಲ ಶ್ರೀವಾರಿ ವೈಕುಂಠ ದ್ವಾರದಲ್ಲಿ ಬುಧವಾರ ರಾತ್ರಿ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಗಡ್ಕರಿ ಭೇಟಿಯಾದ ಹೆಚ್‌ಡಿಕೆ – ಮಂಡ್ಯ ಹೊರವರ್ತುಲ ರಸ್ತೆ ಯೋಜನೆ, ಬೈಪಾಸ್ ಅಭಿವೃದ್ಧಿಗೆ ಮನವಿ

    ನೂರಾರು ಭಕ್ತರು ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ಗಾಗಿ ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‘ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.

    ತಿರುಪತಿ ದೇವಸ್ಥಾನದ ಕಾಲ್ತುಳಿತ ಘಟನೆಯ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜ.10ರಿಂದ ಆರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ದೇಶ-ವಿದೇಶಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಇದನ್ನೂ ಓದಿ: ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ – ವಿದೇಶಾಂಗ ಸಚಿವ ಜೈಶಂಕರ್

  • VRS ತೆಗೆದುಕೊಳ್ಳಿ ಅಥವಾ ವರ್ಗಾವಣೆಯಾಗಿ – ಹಿಂದೂಯೇತರ ಸಿಬ್ಬಂದಿ ಬೇಡ: ತಿರುಪತಿ ಬೋರ್ಡ್‌

    VRS ತೆಗೆದುಕೊಳ್ಳಿ ಅಥವಾ ವರ್ಗಾವಣೆಯಾಗಿ – ಹಿಂದೂಯೇತರ ಸಿಬ್ಬಂದಿ ಬೇಡ: ತಿರುಪತಿ ಬೋರ್ಡ್‌

    ತಿರುಪತಿ: ಹೊಸದಾಗಿ ರಚನೆಯಾಗಿರುವ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿ ಉದ್ಯೋಗದಲ್ಲಿರುವ ಹಿಂದೂಯೇತರರು ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕು (VRS) ಅಥವಾ ಆಂಧ್ರಪ್ರದೇಶದ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಯನ್ನು ಆರಿಸಿಕೊಳ್ಳಬೇಕೆಂದು ನಿರ್ಣಯವನ್ನು ಅಂಗೀಕರಿಸಿದೆ.

    ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು (BR Naidu) ಅವರು ಸೋಮವಾರ ಈಗ ನಿರ್ಧಾರವನ್ನು ದೃಢಪಡಿಸಿದ್ದಾರೆ. ಹಿಂದೂಯೇತರ ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಮಂಡಳಿಯ 7 ಸಾವಿರ ಖಾಯಂ ಉದ್ಯೋಗಿಗಳ ಪೈಕಿ ಸುಮಾರು 300 ಮಂದಿಗೆ ಈ ಕ್ರಮವು ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ. ಟಿಟಿಡಿಯು ಸುಮಾರು 14,000 ಗುತ್ತಿಗೆ ಕಾರ್ಮಿಕರನ್ನು ಸಹ ನೇಮಿಸಿಕೊಂಡಿದೆ.

     

    ಈ ನಿರ್ಧಾರವು ಆಂಧ್ರಪ್ರದೇಶದ ದತ್ತಿ ಕಾಯ್ದೆಮತ್ತು ಟಿಟಿಡಿ ಕಾಯ್ದೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿರುವ ಟಿಟಿಡಿ ವಿವಿಧ ನೌಕರರ ಸಂಘಗಳಿಂದ ಬೆಂಬಲವನ್ನು ಪಡೆದುಕೊಂಡಿದೆ. ಅಕ್ಟೋಬರ್ 31 ರಂದು ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಾಯ್ಡು ಅವರು ದೇವಸ್ಥಾನವನ್ನು ಹಿಂದೂಗಳು ಮಾತ್ರ ನಡೆಸಬೇಕು ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಇನ್ಮುಂದೆ ಎರಡರಿಂದ ಮೂರು ಗಂಟೆಯಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ!

    ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅಥವಾ ಅವರಿಗೆ ಸ್ವಯಂ ನಿವೃತ್ತಿ ಯೋಜನೆ ನೀಡಲು ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ನಾಯ್ದು ತಿಳಿಸಿದರು.

    ಹಲವು ವರ್ಷಗಳಿಂದ, ದೇವಸ್ಥಾನ ಮಂಡಳಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ಟಿಟಿಡಿ ಕಾಯ್ದೆಯನ್ನು ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ. 1989 ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವು ಟಿಟಿಡಿ-ಆಡಳಿತದ ಹುದ್ದೆಗಳಿಗೆ ನೇಮಕಾತಿಗಳನ್ನು ಹಿಂದೂಗಳಿಗೆ ಸೀಮಿತಗೊಳಿಸಬೇಕೆಂದು ಆದೇಶಿಸಿತ್ತು. ಈ ನಿಬಂಧನೆಗಳ ಹೊರತಾಗಿಯೂ, ಹಿಂದೂಯೇತರರು ದೇವಸ್ಥಾನದ ಒಳಗಡೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ಹೇಳಿವೆ.

     

  • ಆಂಧ್ರಪ್ರದೇಶ| 3ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ – ಮೃತದೇಹ ಹೊಲದಲ್ಲಿ ಹೂತುಹಾಕಿದ ಸಂಬಂಧಿ

    ಆಂಧ್ರಪ್ರದೇಶ| 3ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ – ಮೃತದೇಹ ಹೊಲದಲ್ಲಿ ಹೂತುಹಾಕಿದ ಸಂಬಂಧಿ

    ಅಮರಾವತಿ: ಮೂರು ವರ್ಷದ ಬಾಲಕಿಯ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರವೆಸಗಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿ (Tirupati) ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿ ವಾಸವಿದ್ದ ಕಾಲೋನಿಯಲ್ಲೇ ವಾಸವಿದ್ದ 22ರ ಹರೆಯದ ಆರೋಪಿ ಶುಕ್ರವಾರ ಮಗುವಿಗೆ ಚಾಕೊಲೇಟ್ ಕೊಡಿಸಿ ಗದ್ದೆಗೆ ಕರೆದೊಯ್ದಿದ್ದ. ಬಳಿಕ ಆಕೆಯನ್ನು ಕೊಂದು ಶವವನ್ನು ಹೊಲದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ಚುನಾವಣಾ ಕಾರ್ಯತಂತ್ರಕ್ಕೆ 100 ಕೋಟಿ ಶುಲ್ಕ ಪಡೆಯುತ್ತೇನೆ: ಪ್ರಶಾಂತ್‌ ಕಿಶೋರ್‌

    ಬಾಲಕಿ ಮನೆಗೆ ಬಾರದೇ ಇದ್ದಾಗ ಆಕೆಯ ಪೋಷಕರು ಆಕೆಗಾಗಿ ಹುಡುಕಾಟ ಆರಂಭಿಸಿದ್ದು, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ, ಉಗ್ರರ ನಡುವೆ ಗುಂಡಿನ ಚಕಮಕಿ

    ಮೃತದೇಹವನ್ನು ಹೊಲದಿದಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಗರಿ ಶಾಸಕ ಗಾಲಿ ಭಾನು ಪ್ರಕಾಶ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: Mumbai | ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹೋದರನನ್ನು ಭಾರತಕ್ಕೆ ಕರೆತರಲು ತಯಾರಿ ಶುರು

  • ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ – ಪ್ರತಿದಿನ 1,000 ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ

    ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ – ಪ್ರತಿದಿನ 1,000 ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ

    – ಆಂಧ್ರಪ್ರದೇಶದ ಸಿಎಂಗೆ ಕೆಎಸ್‌ಟಿಡಿಸಿ ಅಧ್ಯಕ್ಷ ಬೇಡಿಕೆ
    – ಭಕ್ತಾದಿಗಳಿಗೆ 350 ರೂಮ್‌ಗಳ ವ್ಯವಸ್ಥೆ

    ಅಮರಾವತಿ/ಬೆಂಗಳೂರು: ಭಾರತದ ಅತೀ ಶ್ರೀಮಂತ ದೇಗುಲಗಳಲ್ಲಿ ತಿರುಪತಿ ವೆಂಕಟೇಶ್ವರ ದೇವಾಲಯವೂ (Tirumala Tirupati Devasthanam) ಒಂದು. ತಿರುಪತಿ ತಿಮ್ಮಪ್ಪನಿಗೆ ಲಕ್ಷಾಂತರ ಭಕ್ತರಿದ್ದು, ತಿರುಪತಿ ಲಡ್ಡು ವಿವಾದದ (Tirupati Laddu Row) ನಂತರವೂ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಕರ್ನಾಟಕದಿಂದಲೂ (Karnataka) ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ (KSTDC), ಆಂಧ್ರ ಸಿಎಂಗೆ ಹೊಸ ಮನವಿ ಮಾಡಿದೆ.

    ತಿರುಪತಿ ಭಕ್ತರ ಪಾಲಿಗೆ ಕಲಿಯುಗದ ವೈಕುಂಠ. ತಿರುಮಲಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಎರಡು ತೆಲುಗು ರಾಜ್ಯಗಳಲ್ಲದೆ, ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಆಪತ್ತುಗಳನ್ನು ನಿವಾರಿಸುವ ಏಡುಕೊಂಡಲವಾಡ ದರ್ಶನ ಪಡೆಯಲು ಜನ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಥವಾ ಕೆಎಸ್‌ಟಿಡಿಸಿಯ ಸೀಟ್‌ಗಳಿಗಾಗಿ ಪ್ರತಿದಿನ ಕಾಯುತ್ತಾರೆ. ಪ್ರತಿದಿನ ಟಿಟಿಡಿಯು ಕೆಎಸ್‌ಟಿಡಿಸಿಗೆ ಕರ್ನಾಟಕದ 250 ಭಕ್ತಾದಿಗಳಿಗೆ ನೇರ ದರ್ಶನಕ್ಕೆ ಸದ್ಯ ಅವಕಾಶ ನೀಡಿದೆ. ಆದರೂ ನೇರ ದರ್ಶನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಇದು ತಿರುಪತಿ ಲಡ್ಡು ವಿವಾದದ ನಂತರವೂ ಮುಂದುವರೆದಿದೆ. ಈ ನಿಟ್ಟಿನಲ್ಲಿ ಕೆಎಸ್‌ಟಿಡಿಸಿಯು ಪ್ರತಿದಿನ 250 ಜನರಿಗೆ ನೇರ ದರ್ಶನದ ಸಂಖ್ಯೆಯನ್ನು, ಒಂದು ಸಾವಿರಕ್ಕೆ ಹೆಚ್ಚಿಸಬೇಕೆಂದು ಆಂಧ್ರ ಸಿಎಂಗೆ ಮನವಿ ಮಾಡಿದ್ದು, ಸದ್ಯ ಮಾತುಕತೆ ನಡೆದಿದೆ. ಇದನ್ನೂ ಓದಿ: ದೇಶದ ರೈತರಿಗೆ ನವರಾತ್ರಿ ಗಿಫ್ಟ್‌ – ಶನಿವಾರ ಪ್ರಧಾನಿ ಮೋದಿಯಿಂದ 20,000 ಕೋಟಿ ರೂ. ಬಿಡುಗಡೆ

    ಇನ್ನೂ ಸದ್ಯ 250 ಜನ ಭಕ್ತಾದಿಗಳಿಗೆ ನಿಗಮದಿಂದ ಪ್ರತಿನಿತ್ಯ 5-6 ಬಸ್‌ಗಳು ರಾಜ್ಯದಿಂದ ತೆರಳುತ್ತಿದ್ದವು. ಸಾವಿರ ಜನರಿಗೆ ಅವಕಾಶ ಸಿಕ್ಕರೇ, ರಾಜ್ಯದಿಂದ ತಿರುಪತಿಯತ್ತ 10-12 ಬಸ್‌ಗಳು ಪ್ರವಾಸೋದ್ಯಮ ಇಲಾಖೆಯಿಂದ ಸಂಚರಿಸಲಿವೆ. ಭಕ್ತಾದಿಗಳ ಸಂಖ್ಯೆ ಹೆಚ್ಚಾದರೂ ಅಲ್ಲಿನ ವಸತಿ ವ್ಯವಸ್ಥೆಗೆ ಆತಂಕಪಡಬೇಕಿಲ್ಲ. ಏಕೆಂದರೆ ತಿರುಪತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ 350 ರೂಮ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭಿನ್ನಮತ ಸ್ಫೋಟ – ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ

  • ತಿರುಮಲನ ಸನ್ನಿಧಿಗೆ 2 ಟ್ರಕ್‌ಗಳಲ್ಲಿ ಕೆಎಂಎಫ್ ಶುದ್ಧ ನಂದಿನಿ ತುಪ್ಪ ಸರಬರಾಜು

    ತಿರುಮಲನ ಸನ್ನಿಧಿಗೆ 2 ಟ್ರಕ್‌ಗಳಲ್ಲಿ ಕೆಎಂಎಫ್ ಶುದ್ಧ ನಂದಿನಿ ತುಪ್ಪ ಸರಬರಾಜು

    ತಿರುಪತಿ: ಪ್ರಸಿದ್ಧ ತಿರುಪತಿ ತಿರುಮಲ ಲಡ್ಡು ಪ್ರಸಾದ ಕಲಬೆರಕೆ ಬೆನ್ನಲ್ಲೆ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೀಗ ತಿಮ್ಮಪ್ಪನ ಸನ್ನಿಧಿಗೆ ಎರಡು ಟ್ರಕ್‌ಗಳಲ್ಲಿ ಕೆಎಂಎಫ್ (KMF- Karnataka Milk Federation) ಶುದ್ಧ ನಂದಿನಿ ತುಪ್ಪ ಆಗಮಿಸಿದೆ.

    ತಿರುಪತಿ (Tirupati) ತಿರುಮಲ ಲಡ್ಡು ಪ್ರಸಾದ ಕಲಬೆರಕೆ ಬೆನ್ನಲ್ಲೆ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ಎರಡು ಟ್ರಕ್‌ಗಳಲ್ಲಿ ತಿರುಪತಿಗೆ ಕೆಎಂಎಫ್ ತುಪ್ಪ ಬಂದಿದೆ. ಒಂದು ಟ್ರಕ್ ಯಲಹಂಕ ಮದರ್ ಡೈರಿಯಿಂದ (Yalahanka Mother Dairy) ಹಾಗೂ ಚನ್ನರಾಯಪಟ್ಟಣದಿಂದ (Channarayapattana) ಮತ್ತೊಂದು ಟ್ರಕ್‌ನಲ್ಲಿ ತುಪ್ಪ ಸರಬರಾಜಾಗಿದೆ.ಇದನ್ನೂ ಓದಿ: ಪೊಲೀಸರಿಂದ ರೇಪ್ ಆರೋಪಿ ಹತ್ಯೆ – ಅನುಮಾನ ವ್ಯಕ್ತಪಡಿಸಿದ ಇಂಡಿಯಾ ಒಕ್ಕೂಟ

    ಸುಮಾರು 26 ಟನ್ ತುಪ್ಪ 2 ಟ್ರಕ್‌ಗಳಲ್ಲಿ ಆಗಮಿಸಿದ್ದು, ಲಡ್ಡು ವಿವಾದದ ಮಧ್ಯೆ ಕೆಎಂಎಫ್ ನಂದಿನಿ ತುಪ್ಪ ಸರಬರಾಜಾಗಿದೆ. ಸದ್ಯ ತಿರುಪತಿಗೆ ಆಗಮಿಸಿರುವ ಟ್ರಕ್‌ಗಳು ಮಂಗಳವಾರ ರಾತ್ರಿ ತಿರುಮಲಕ್ಕೆ ತಲುಪಲಿವೆ. ಇದರ ಬೆನ್ನಲ್ಲೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್‌ಗೆ ಟಿಟಿಡಿ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಿರುಪತಿ ಲಡ್ಡು ವಿವಾದದ ಬಳಿಕ ಕೆಎಂಎಫ್ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ.

    ಕೆಎಂಎಫ್ ತನ್ನ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಹಾಗೂ ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತುಪ್ಪದ ಟ್ಯಾಂಕರ್‌ಗಳಿಗೆ ಜಿಪಿಎಸ್, ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಿದೆ.

    ದಿನಕ್ಕೆ ಒಂದು ಟ್ಯಾಂಕರ್‌ನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಲ್ಯಾಬ್ ಟೆಸ್ಟ್ ಮಾಡಿದ ಬಳಿಕ ನಂದಿನ ತುಪ್ಪ ಪೂರೈಸಲಾಗುತ್ತಿದೆ. ವಿಶೇಷತೆ ಎಂದರೆ ತುಪ್ಪ ಇರುವ ಟ್ಯಾಂಕರ್ ಒಮ್ಮೆ ಲಾಕ್ ಆದ್ರೆ ಮತ್ತೇ ಟಿಟಿಡಿಯಲ್ಲಿಯೇ ಓಪನ್ ಮಾಡಲಾಗುತ್ತದೆ. ಟಿಟಿಡಿಯಲ್ಲಿ ಓಪನ್ ಮಾಡಬೇಕು ಅಂದ್ರೆ ಪಾಸ್ ವರ್ಡ್ ಕಡ್ಡಾಯ. ಟ್ಯಾಂಕರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಕೆಎಂಎಫ್ ಅಧಿಕಾರಿಗಳಿಗೆ ಒಟಿಪಿ ರವಾನೆಯಾಗುತ್ತದೆ. ಒಟಿಪಿ ನಂಬರ್ ಹೇಳಿದರೆ ಮಾತ್ರ ಓಪನ್ ಆಗುತ್ತದೆ. ಈ ಪ್ರಕ್ರಿಯೆಗೆ ಕೆಎಂಎಫ್ ಸಿಬ್ಬಂದಿಯನ್ನು ನೇಮಕ ಮಾಡಿ ಟ್ರಕ್ ಜೊತೆಗೆ ಕಳುಹಿಸಿಕೊಡಲಾಗಿದೆ.ಇದನ್ನೂ ಓದಿ: ಭ್ರಷ್ಟಾಚಾರ ಕೇಸ್ – ಶಿರಸಿ ಬಿಜೆಪಿ ನಾಯಕಿಗೆ 1 ವರ್ಷ ಜೈಲು, 5 ಸಾವಿರ ರೂ. ದಂಡ