Tag: ತಿರುಪತಿ ಲಡ್ಡು

  • ಲಡ್ಡು ಲಡಾಯಿ | ಭದ್ರತೆಯ ನೆಪವೊಡ್ಡಿ ತಿರುಪತಿ ಭೇಟಿ ರದ್ದುಗೊಳಿಸಿದ ಜಗನ್ – ಚಂದ್ರಬಾಬು ನಾಯ್ಡು ತಿರುಗೇಟು

    ಲಡ್ಡು ಲಡಾಯಿ | ಭದ್ರತೆಯ ನೆಪವೊಡ್ಡಿ ತಿರುಪತಿ ಭೇಟಿ ರದ್ದುಗೊಳಿಸಿದ ಜಗನ್ – ಚಂದ್ರಬಾಬು ನಾಯ್ಡು ತಿರುಗೇಟು

    – ಸಂಪ್ರದಾಯ, ಭಕ್ತರ ನಂಬಿಕೆಗಳನ್ನ ಗೌರವಿಸಿ ಎಂದ ಹಾಲಿ ಸಿಎಂ

    ತಿರುಪತಿ: ಆಂಧ್ರ ರಾಜಕೀಯದಲ್ಲಿ ತಿರುಪತಿ ಲಡ್ಡು ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರೀ ಹೈಡ್ರಾಮಾ, ತೀವ್ರ ವಿರೋಧದ ನಡುವೆ ಮಾಜಿ ಸಿಎಂ ವೈ.ಎಸ್ ಜಗನ್ ಮೋಹನ್‌ ರೆಡ್ಡಿ (Jagan Mohan Reddy) ತಿರುಪತಿಗೆ ಭೇಟಿಯನ್ನು ರದ್ದು ಮಾಡಿಕೊಂಡರು. ದೇವರ ದರ್ಶನಕ್ಕೆ ಹೋಗ್ತಿದ್ರೆ ನೊಟೀಸ್ ಕೊಟ್ಟು ತಡೆ ಹಿಡೀತಿದ್ದಾರೆ ಎಂದು ಚಂದ್ರಬಾಬು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ದೇವರ ದರ್ಶನಕ್ಕೆ ಹೋಗ್ತಿದ್ದಾಗ ಅಡ್ಡಿಪಡಿಸಿರೋದು ದೇಶದಲ್ಲೇ ಇದು ಮೊದಲ ಕೇಸ್. ಆಂಧ್ರದಲ್ಲಿ ರಾಕ್ಷಸ ರಾಜ್ಯವಿದೆ ಎಂದು ಜಗನ್ ವಾಗ್ದಾಳಿ ನಡೆಸಿದ್ರು.

    ಲಡ್ಡು ವಿವಾದವನ್ನು (Tirupati Laddu Controversy) ಮರೆಮಾಚಲು ಡಿಕ್ಲರೇಷನ್ ವಿಚಾರ ದೊಡ್ಡದು ಮಾಡಿದ್ದಾರೆ. ಬರೆದುಕೊಳ್ಳಿ ನನ್ನ ಮತ ಮಾನವೀಯತೆ.. ನಾಲ್ಕು ಗೋಡೆ ಮಧ್ಯೆ ಬೈಬಲ್ ಓದುತ್ತೇನೆ.. ಹೊರಗೆ ಹೋದ್ರೆ ಎಲ್ಲಾ ಧರ್ಮ ಗೌರವಿಸ್ತೇನೆ.. ಹಿಂದೂ ಆಚರಣೆ ಮಾಡ್ತೇನೆ ಎಂದಿದ್ದಾರೆ. ಧರ್ಮದ ಹೆಸರಲ್ಲಿ ಕೀಳು ರಾಜಕೀಯ ನಡೀತಿದೆ ಎಂದು ಜಗನ್ ಕಿಡಿಕಾರಿದ್ದಾರೆ. ಈ ಮಧ್ಯೆ, ಲಡ್ಡು ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಇದನ್ನೂ ಓದಿ: MUDA Case| ರಾಜಧರ್ಮ ಪಾಲಿಸದಿದ್ದರೆ ಅದು ರಾವಣ ರಾಜ್ಯ ಆಗಲಿದೆ: ಕೋರ್ಟ್ ಆದೇಶದಲ್ಲಿ ಏನಿದೆ?

    ಜಗನ್‌ V/S ಚಂದ್ರಬಾಬು ನಾಯ್ಡು:
    ಇನ್ನೂ ಮಾಜಿ ಸಿಎಂ ಜಗನ್‌ ತಿರುಪತಿ ವೆಂಕಟೇಶ್ವರ ದೇವಸ್ಥಾನ ಭೇಟಿಯನ್ನು ಮುಂದೂಡಿದ ಬಳಿಕ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಗನ್‌ ತಿರುಪತಿ ಭೇಟಿ ರದ್ದುಗೊಳಿಸಿದ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಪ್ರತಿಕ್ರಿಯಿಸಿದ್ದಾರೆ. ಜಗನ್ ತಿರುಮಲ ದೇವಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ಸರ್ಕಾರ ಅಡ್ಡಿಪಡಿಸಿದೆ ಎಂದು ಸುಳ್ಳು ಹರಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಯಾರಾದರೂ ನಿಮ್ಮನ್ನು ಹೋಗದಂತೆ ತಡೆದಿದ್ದಾರಾ? ನೋಟಿಸ್ ಇದ್ದರೇ ಮಾಧ್ಯಮದವರಿಗೆ ತೋರಿಸಿ, ಏಕೆ ಸುಳ್ಳುಗಳನ್ನು ಹರಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ; 1 ಗಂಟೆ ಲೋಕಾಯುಕ್ತ ವಿಚಾರಣೆ ಎದುರಿಸಿದ ಕೇಂದ್ರ ಸಚಿವ ಹೆಚ್‌ಡಿಕೆ

    ಸಾರ್ವಜನಿಕ ಜೀವನದಲ್ಲಿ ಜನರು ಸಂಪ್ರದಾಯಗಳನ್ನು ಅನುಸರಿಸಬೇಕು ಮತ್ತು ಏನು ಮಾಡಬೇಕೋ ಅದನ್ನು ಮಾಡಲೇಬೇಕು. ಪೂಜಾ ಸ್ಥಳಕ್ಕೆ ಭೇಟಿ ನೀಡಬೇಕಾದ್ರೆ, ಅಲ್ಲಿನ ಸಂಪ್ರದಾಯಗಳನ್ನು ಗೌರವಿಸಬೇಕು. ಸಂಪ್ರದಾಯಗಳನ್ನು ಮತ್ತು ಭಕ್ತರ ನಂಬಿಕೆಗಳನ್ನು ಅಗೌರವಗೊಳಿಸಬಾರದು. ಏಕೆಂದರೆ ಅಲ್ಲಿನ ನಂಬಿಕೆಗಳಿಗಿಂತ ಯಾರೂ ಮೇಲಲ್ಲ, ಯಾರೂ ದೇವರಲ್ಲ ಎಂದು ತಿರುಗೇಟು ನೀಡಿದ್ದಾರೆ.

  • ತಿರುಪತಿ ಲಡ್ಡು ಟೇಸ್ಟ್‌ ಸೂಪರ್‌: ಲಡ್ಡು ಸವಿದು ಖುಷಿ ಹಂಚಿಕೊಂಡ ಭಕ್ತರು

    ತಿರುಪತಿ ಲಡ್ಡು ಟೇಸ್ಟ್‌ ಸೂಪರ್‌: ಲಡ್ಡು ಸವಿದು ಖುಷಿ ಹಂಚಿಕೊಂಡ ಭಕ್ತರು

    – ನಮ್ಮ ಕೆಎಂಎಫ್‌, ನಮ್ಮ ಹೆಮ್ಮೆ.. ‘ನಂದಿನಿ’ ತುಪ್ಪ ಬಳಸಿ ಸ್ವಾಧಿಷ್ಟ ಲಡ್ಡು ತಯಾರಿಸಿ ಎಂದ ಕನ್ನಡಿಗ ಭಕ್ತ

    ಅಮರಾವತಿ: ನಂದಿನಿ ತುಪ್ಪ ಬಳಸಿ ತಯಾರಿಸಲಾಗುತ್ತಿರುವ ತಿರುಪತಿ ಲಡ್ಡು (Tirupati Laddu Row) ಸವಿದು ಭಕ್ತರು ಖುಷಿ ವ್ಯಕ್ತಪಡಿಸಿದ್ದಾರೆ. ಪ್ರಸಾದಕ್ಕೆ ಕಲಬೆರಕೆ, ಅಪವಿತ್ರ ವಿವಾದದ ಬೆನ್ನಲ್ಲೇ ದೇವಾಲಯ ಶುದ್ಧೀಕರಿಸಲಾಗಿದ್ದು, ಹೆಚ್ಚೆಚ್ಚು ಜನರು ತಿರುಪತಿಗೆ ಆಗಮಿಸಿ ಶ್ರೀ ವೆಂಕಟರಮಣದ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯಲ್ಲಿ ಲಡ್ಡು ಪ್ರಸಾದ ತೆಗೆದುಕೊಳ್ಳುತ್ತಿದ್ದಾರೆ.

    ಬೆಂಗಳೂರಿನಿಂದ (Bengaluru) ತಿರುಪತಿ ದೇವಾಲಯಕ್ಕೆ (Tirupati Temple) ಬಂದಿದ್ದ ಜಗದೀಶ್‌ ಮಾತನಾಡಿ, ಲಡ್ಡುನಲ್ಲಿ ಏನೇನೊ ಕಲಬೆರಕೆ ಮಾಡಲಾಗಿದೆ ಅಂತಾರೆ. ಸದ್ಯಕ್ಕೆ ಏನೂ ಇಲ್ಲ, ಎಲ್ಲಾ ಬದಲಾಗಿದೆ. ಲಡ್ಡು ಟೇಸ್ಟ್‌ ಮಾಡಿದ್ದೇವೆ. ತುಂಬಾ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು

    ಮತ್ತೊಬ್ಬರು ಭಕ್ತರು, ನಾವು ಲಡ್ಡು ತೆಗೆದುಕೊಂಡು ತಿಂದೆವು. ಟೇಸ್ಟ್‌ ಸೂಪರ್‌ ಆಗಿದೆ. ನಮ್ಮ ಕೆಎಂಎಫ್‌.. ನಮ್ಮ ಬೆಂಗಳೂರು. ನಮಗೂ ಖುಷಿ ತಂದಿದೆ. ತುಂಬಾ ಚೆನ್ನಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

    ನಮ್ಮ ನಾಡಿನ ನಂದಿನಿ ತುಪ್ಪ ಬಳಸಿ ಲಡ್ಡು ಮಾಡುತ್ತಿರುವುದು ತುಂಬಾ ಖುಷಿ ವಿಚಾರ. ಮಧ್ಯದಲ್ಲಿ ಈ ರೀತಿಯ ವಿವಾದ ಎದ್ದಿದ್ದಕ್ಕೆ ಬೇಜಾರಾಯ್ತು. ನಮ್ಮ ಕರ್ನಾಟಕ ನಮ್ಮ ಹೆಮ್ಮೆ. ನಂದಿನಿ ನಮ್ಮ ಹೆಮ್ಮೆ. ನಂದಿನಿ ಬಳಸಿ ಸ್ವಾಧಿಷ್ಟಕರವಾದ ಲಡ್ಡು ಸವಿಯಿರಿ ಎಂದು ಕರ್ನಾಟಕದವರೇ ಆದ ಇನ್ನೊಬ್ಬರು ಭಕ್ತರು ಖುಷಿ ವ್ಯಕ್ತಪಡಿಸಿದರು. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ

    ಲಡ್ಡು ಟೇಸ್ಟ್‌ ಬಹಳ ಚೆನ್ನಾಗಿದೆ. ತಾಜಾ ತುಪ್ಪದ್ದೇ ಆಗಿದೆ. ಮೊದಲು ಇದ್ದ ಟೇಸ್ಟ್‌ ಥರಾನೆ ಇದೆ ಲಡ್ಡು. ತಿಂದು ಬಹಳ ಖುಷಿಯಾಯಿತು ನಮಗೆ. ನನ್ನ ಬರ್ತ್‌ಡೇ ಸೆಲಬ್ರೇಷನ್‌ ಇಲ್ಲೇ ಆಯಿತು ಎಂದು ಕುಟುಂಬ ಸಮೇತರಾಗಿ ತಿರುಪತಿಗೆ ಆಗಮಿಸಿದ್ದ ಭಕ್ತೆಯೊಬ್ಬರು ಸಂತಸ ವ್ಯಕ್ತಪಡಿಸಿದರು.

  • ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    – ಸೋಮವಾರ ತಿರುಮಲದಲ್ಲಿ ಮಹಾಶಾಂತಿ ಹೋಮ

    ಅಮರಾವತಿ: ತಿರುಪತಿ ಲಡ್ಡು (Tirupati Laddu Row) ಅಪವಿತ್ರವಾಗಿದೆ ಎಂಬ ಆರೋಪಗಳು ಲಡ್ಡು ಪ್ರಸಾದಕ್ಕೆ ಬೇಡಿಕೆ ಕುಸಿಯಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಅಂಥಾದ್ದೇನು ಆಗಿಲ್ಲ. ಈ ಆರೋಪಗಳು ಭಕ್ತರ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ. ಕಳಂಕರಹಿತ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ.

    ಲಡ್ಡು ತಯಾರಿಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪಗಳ ನಡುವೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ. ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್ಷಿಯಾಗಿದೆ. ಸೆ. 19 ರಂದು 3.69 ಲಕ್ಷ, 20 ರಂದು 3.16 ಲಕ್ಷ, 21 ರಂದು 3.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ. ಇದನ್ನೂ ಓದಿ: ತಿರುಪತಿ ದೇವಾಲಯದ ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚಿಸಿದ ಆಂಧ್ರ ಸರ್ಕಾರ

    ಅಂದ ಹಾಗೇ, ಲಡ್ಡು ಅಪಚಾರ ಸಂಬಂಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಾಳೆ ಮಹಾಶಾಂತಿ ಯಾಗ ನಿರ್ವಹಿಸಲು ಟಿಟಿಡಿ ಅಧಿಕಾರಿಗಳು ಶರವೇಗದ ಸಿದ್ಧತೆಗಳನ್ನು ನಡೆಸಿದ್ದಾರೆ. ನಾಳೆಯ ಶುಭ ರೋಹಿಣಿ ನಕ್ಷತ್ರದಲ್ಲಿ ಮೊದಲಿಗೆ ಮಹಾಶಾಂತಿ ಹೋಮ ನಿರ್ವಹಿಸಿ ನಂತರ ವಾಸ್ತು ಹೋಮವನ್ನು ಆಗಮ ಪಂಡಿತರು ನೆರವೇರಿಸಲಿದ್ದಾರೆ. ಅಂತಿಮವಾಗಿ ಪಂಚಗವ್ಯಗಳಿಂದ ಸಂಪ್ರೋಕ್ಷಣೆ ಮಾಡಲಿದ್ದಾರೆ.

    ತಿಮ್ಮಪ್ಪನ ಆರ್ಜಿತ ಸೇವೆಗಳಿಗೆ ಭಂಗ ಉಂಟಾಗದಂತೆ ನಾಳೆಯೇ ಎಲ್ಲಾ ಯಾಗಗಳನ್ನು ಮುಗಿಸಲಿದ್ದಾರೆ. ಈ ಸಂಬಂಧ ಇಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಟಿಟಿಡಿ ಅಧಿಕಾರಿಗಳು ಮತ್ತು ಆಗಮ ಪಂಡಿತರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಹಾಗೆಯೇ, ಬ್ರಹ್ಮೋತ್ಸವಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇನ್ನು, ಡಿಸಿಎಂ ಪವನ್ ಕಲ್ಯಾಣ್ ಇಂದಿನಿಂದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ಇದು 11 ದಿನ ಮುಂದುವರಿಯಲಿದೆ. ಈ ಮಧ್ಯೆ, ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಬಿ.ಸುರೇಂದ್ರನಾಥ್ ನೇತೃತ್ವದ ತಜ್ಞರ ಸಮಿತಿ, ಭವಿಷ್ಯದಲ್ಲಿ ಲಡ್ಡುಗೆ ಬಳಸುವ ತುಪ್ಪದ ವಿಚಾರದಲ್ಲಿ ಯಾವುದೇ ಅನಾಹುತಗಳು ಉಂಟಾಗದ ರೀತಿಯಲ್ಲಿ ಹಲವು ಶಿಫಾರಸು ಮಾಡಿದೆ. ಇದನ್ನೂ ಓದಿ: ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ – ಸುರಕ್ಷತೆಗೆ ಜಿಪಿಎಸ್ ಅಳವಡಿಸಲು ಮುಂದಾದ KMF

  • ತಿರುಪತಿ ಲಡ್ಡಿಗೆ ದನದ ಕೊಬ್ಬು ಬೆರಸುವುದು ಘೋರ ಅಪರಾಧ – ಎಂ.ಬಿ ಪಾಟೀಲ್‌ ವಿಷಾದ

    ತಿರುಪತಿ ಲಡ್ಡಿಗೆ ದನದ ಕೊಬ್ಬು ಬೆರಸುವುದು ಘೋರ ಅಪರಾಧ – ಎಂ.ಬಿ ಪಾಟೀಲ್‌ ವಿಷಾದ

    – ಹಾದಿಯಲ್ಲಿ ಹೋಗುವವರೆಲ್ಲಾ ರಾಜ್ಯಪಾಲರಿಗೆ ದೂರು ಕೊಟ್ಟರೆ ಹೇಗೆ? ಎಂದ ಸಚಿವ

    ವಿಜಯಪುರ: ತಿರುಪತಿ ಲಡ್ಡು ವಿಚಾರ (Tirupati Laddu controversy) ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದು, ದನದ ಕೊಬ್ಬು ಬೆರಸುವುದು ಘೋರ ಅಪರಾಧ. ದನದ ಕೊಬ್ಬನ್ನು ಬೆರಸಿದ್ದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಸಚಿವ ಎಂ.ಬಿ ಪಾಟೀಲ್‌ (MB Patil) ಆಗ್ರಹಿಸಿದ್ದಾರೆ.

    ವಿಜಯಪುರದಲ್ಲಿಂದು (Vijayapura) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಮಿಶ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಇದು ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದು, ದನದ ಕೊಬ್ಬನ್ನು ಬೆರೆಸಿದ್ದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು. ಭಕ್ತರ ಭಾವನೆಗಳ ಜೊತೆ ಆಟ ಆವಡುವುದು ಸರಿಯಲ್ಲ. ಅದರಲ್ಲಿ ಪಾವಿತ್ರ‍್ಯತೆ ಇದೆ, ದನದ ಕೊಬ್ಬು ಬೆರೆಸುವುದು ಘೋರ ಅಪರಾಧ. ಆಗಾಗ ಪ್ರಸಾದದ ತಪಾಸಣೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

    ಇದೇ ವೇಳೆ ಶಾಸಕ ಮುನರತ್ನ (Munirathna) ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ಯಾರೂ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆ ಆಗಲಿ. ನಿಜವಾಗಿ ಆ ರೀತಿ ಘೋರವಾದಂತಹ ಕೃತ್ಯ ಮಾಡಿದ್ದರೇ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ. ಫಸ್ಟ್ ಟೈಮ್ ಊಹಿಸದಂತಹ ಆಪಾದನೆ ಕೇಳಿ ನಾನು ಗಾಬರಿಯಾದೆ. ಹನಿಟ್ರ‍್ಯಾಪ್, ಸಿಡಿ ಮಾಡೋದು, ಹೆಣ್ಣುಮಕ್ಕಳ ಬಳಕೆ ಇವೆಲ್ಲ ಹೇಯ ಕೃತ್ಯಗಳು ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ಶ್ರದ್ಧೆಗೆ ಭಂಗ, ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಬೇಕು: ಈಶ್ವರಪ್ಪ ಆಗ್ರಹ

    ರಾಜ್ಯಪಾಲರಿಗೆ ದೂರು ಕೊಡೊದೇ ಹೊಸ ದಂಧೆ ಆಗುತ್ತೆ:
    ರಾಜ್ಯಪಾಲರ ಹಸ್ತಕ್ಷೇಪ ವಿಚಾರ ಕುರಿತು ಮಾತನಾಡಿದ ಸಚಿವರು, ಇದು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮದ್ಯೆದ ಸಂಘರ್ಷವಲ್ಲ. ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೆಪ ಮಾಡಬಾರದು. ಎಲ್ಲರೂ ಹೋಗಿ ರಾಜ್ಯಪಾಲರಿಗೆ ದೂರು ಕೊಡುವುದು, ಅವರು ಅದನ್ನು ಪರಿಗಣಿಸುವುದು ಆಗಬಾರದು ಎಂದಿದ್ದಾರೆ. ಇದನ್ನೂ ಓದಿ: ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಆಲ್‌ರೌಂಡ್‌ ಆಟ – ಭಾರತಕ್ಕೆ 280 ರನ್‌ಗಳ ಭರ್ಜರಿ ಜಯ; 1-0 ಸರಣಿ ಮುನ್ನಡೆ

    ಪೊಲೀಸ್ ಸ್ಟೇಷನ್ ಬದಲು ರಾಜ್ಯಪಾಲಿಗೆ ದೂರು ಕೊಟ್ಟಂತೆ ಆಗುತ್ತದೆ. ರಾಜ್ಯಪಾಲರಿಗೆ ದೂರು ಕೊಡೊದೇ ಒಂದು ಹೊಸ ದಂಧೆ ಶುರು ಆಗುತ್ತದೆ. ಅದಾಗ್ಯೂ ರಾಜ್ಯಪಾಲರ ಹಸ್ತಕ್ಷೇಪದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ, ಅವರು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಹಾದಿಯಲ್ಲಿ ಹೋಗುವವರು ಬಂದು ಸಿಕ್ಕ ಸಿಕ್ಕವರ ಮೇಲೆ ಮೇಲೆ ಅರ್ಜಿ ಹಾಕಿದರೆ ಹೇಗೆ? ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಆಡಳಿತ ಯಂತ್ರದ ಮೇಲೆ ಹದ್ದಿನ ಕಣ್ಣು – ಅನಗತ್ಯ ಸಿಬ್ಬಂದಿಗೆ ಗೇಟ್‌ಪಾಸ್‌ ಕೊಡಲು ಸರ್ಕಾರ ಪ್ಲ್ಯಾನ್!‌

  • ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

    ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

    ನವದೆಹಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಪ್ರತಿಷ್ಠಾಪನೆ ದಿನ 300 ಕೆಜಿ ತಿರುಪತಿ ಲಡ್ಡು (Tirupati Laddu) ಪ್ರಸಾದ ಬಂದಿತ್ತು ಎಂದು ಅಯೋಧ್ಯೆಯ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ತಿಳಿಸಿದ್ದಾರೆ.

    ರಾಮಮಂದಿರದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು. ಜನವರಿಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ತಿರುಪತಿ ದೇವಸ್ಥಾನದಿಂದ 300 ಕೆಜಿ ಪ್ರಸಾದವನ್ನು ಭಕ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯ ಅರ್ಚಕರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಸುದ್ದಿ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷ YSRCP, ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

    ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ‘ಪ್ರಸಾದ’ (ಲಡ್ಡು) ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸುತ್ತಿದ್ದ ಬಗ್ಗೆ ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

    ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ್ದರೆ ಅದು ಅಕ್ಷಮ್ಯ. ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸತ್ಯೇಂದ್ರ ದಾಸ್ ಒತ್ತಾಯಿಸಿದ್ದಾರೆ.

  • Tirupati Laddu Row | ಟಿಟಿಡಿ ಲಡ್ಡು ತಯಾರಿಕೆಗೆ ಪ್ರಮಾಣಿಕೃತ ತುಪ್ಪವನ್ನೇ ಬಳಸಲಾಗಿದೆ: ಜಗನ್ ಸ್ಪಷ್ಟನೆ

    Tirupati Laddu Row | ಟಿಟಿಡಿ ಲಡ್ಡು ತಯಾರಿಕೆಗೆ ಪ್ರಮಾಣಿಕೃತ ತುಪ್ಪವನ್ನೇ ಬಳಸಲಾಗಿದೆ: ಜಗನ್ ಸ್ಪಷ್ಟನೆ

    – ತಿರುಪತಿ ಲಡ್ಡು ವಿಚಾರದಲ್ಲಿ ಟಿಡಿಪಿ ರಾಜಕೀಯ

    ಅಮರಾವತಿ: ತಿರುಪತಿ (Tirupathi) ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ತುಪ್ಪದ ಮಾದರಿ ಸಂಗ್ರಹಿಸಿ ಪ್ರಮಾಣಿಕರಿಸಿದ ಬಳಿಕವೇ ತುಪ್ಪದ ಬಳಕೆ ಮಾಡಲಾಗುತ್ತದೆ ಎಂದು ವೈಎಸ್‍ಆರ್‌ಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸ್ಪಷ್ಟನೆ ನೀಡಿದ್ದಾರೆ.

    ತಿರುಪತಿ ಲಡ್ಡು ವಿಷಯದಲ್ಲಿ ನಡೆಯುತ್ತಿರುವ ವಿವಾದದ (Tirupati Laddu Row) ವಿಚಾರವಾಗಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಪ್ರಸಾದದ ಅರ್ಹತೆಯ ಮಾನದಂಡ ದಶಕಗಳಿಂದ ಬದಲಾಗಿಲ್ಲ. ಪೂರೈಕೆದಾರರು ಎನ್‍ಎಬಿಎಲ್ ಪ್ರಮಾಣಪತ್ರ ಮತ್ತು ಉತ್ಪನ್ನ ಗುಣಮಟ್ಟದ ಪ್ರಮಾಣಪತ್ರವನ್ನು ನೀಡಬೇಕು. ಅದಾದ ಬಳಿಕ ಟಿಟಿಡಿ (TTD) ತುಪ್ಪದಿಂದ ಮಾದರಿಗಳನ್ನು ಸಂಗ್ರಹಿಸುತ್ತದೆ. ಬಳಿಕ ಪರಿಶೀಲಿಸಿದ ಉತ್ಪನ್ನಗಳನ್ನು ಮಾತ್ರ ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Tirupati Laddu Row: ಹೈಕೋರ್ಟ್‌ ಮೊರೆ ಹೋದ ಜಗನ್‌

    ದೇವಾಲಯಕ್ಕೆ ಲಡ್ಡು ತಯಾರಿಕೆಗಾಗಿ ಸಾಮಗ್ರಿಗಳನ್ನು ಒದಗಿಸಲು ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಅಗತ್ಯ ದಾಖಲೆಗಳನ್ನು ಹಾಗೂ ಗುಣಮಟ್ಟದ ಪ್ರಮಾಣ ಪತ್ರವನ್ನು ಒದಗಿಸಿ ಟೆಂಡರ್ ಪಡೆಯಬೇಕು. ನಮ್ಮ ಆಡಳಿತದಲ್ಲಿ ನಾವು 18 ಬಾರಿ ಉತ್ಪನ್ನಗಳನ್ನು ತಿರಸ್ಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

    ಚಂದ್ರಬಾಬು ನಾಯ್ಡು ಅವರು, ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದ ಮಾದರಿಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಗುಜರಾತ್‍ನ ಸರ್ಕಾರಿ ಲ್ಯಾಬ್‍ನ ವರದಿಯನ್ನು ಅವರು ಉಲ್ಲೇಖಿಸಿದ್ದರು.

    ಈ ವಿಚಾರ ಸದ್ದು ಮಾಡುತ್ತಿದ್ದಂತೆ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂಬ ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಆರೋಪದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಅವರಿಗೆ ವಿವರವಾದ ವರದಿ ಕೇಳಿದ್ದಾರೆ.

    ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಕೂಡ ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

  • ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ

    ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ

    ನವದೆಹಲಿ: ತಿರುಪತಿ ಲಡ್ಡು (Tirupati Laddoos) ಪ್ರಸಾದದಲ್ಲಿ ಮೀನಿನ ಎಣ್ಣೆಯನ್ನು ಬೆರೆಸಿರುವುದು ತಪಾಸಣೆಯಿಂದ ಸ್ಪಷ್ಟವಾಗಿದೆ ಎಂದು ರಾಮಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ತಿಳಿಸಿದ್ದಾರೆ.

    ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಪ್ರಕರಣ ಕುರಿತು ಮಾತನಾಡಿದ ಅವರು, ಇದೆಲ್ಲ ಯಾವಾಗ ನಡೆದಿದೆ ಎಂಬುದು ಇನ್ನೂ ತಿಳಿದಿಲ್ಲ. ಇದು ಪಿತೂರಿಯಾಗಿದೆ ಮತ್ತು ಸನಾತನ ಧರ್ಮದ ಮೇಲಿನ ದಾಳಿಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

    ತಿರುಪತಿ ದೇವಸ್ಥಾನ ಲಡ್ಡು ಪ್ರಸಾದದಲ್ಲಿ ಹಿಂದಿನ ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಸುತ್ತಿತ್ತು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

    ಸಿಎಂ ಆರೋಪಗಳಿಗೆ ಸಾಕ್ಷಿಯಾಗಿ ಪ್ರಯೋಗಾಲಯದ ವರದಿಯೊಂದನ್ನು ಬಿಡುಗಡೆ ಮಾಡಲಾಗಿದೆ. ತಿರುಪತಿ ಲಡ್ಡು ಪ್ರಸಾದದ ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಹಾಗೂ ಹಂದಿಕೊಬ್ಬಿನ ಕುರುಹುಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ಆಂಧ್ರ ಸಿಎಂ ಆರೋಪ

  • ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

    ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

    – ಪ್ರಯೋಗಾಲಯದ ಪರೀಕ್ಷೆಯಲ್ಲಿ ಪ್ರಾಣಿಗಳ ಕೊಬ್ಬು, ಮೀನೆಣ್ಣೆ ದೃಢ

    ಹೈದರಾಬಾದ್‌: ತಿರುಪತಿ ದೇವಸ್ಥಾನದಲ್ಲಿ (Tirupati Temple) ಭಕ್ತರಿಗೆ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ (Laddus) ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ (Beef Fat, Fish Oil) ಇದೆ ಎಂದು ಲ್ಯಾಬ್ ವರದಿ ದೃಢಪಡಿಸಿದೆ.

    ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು (Chandrababu Naidu) ಆರೋಪಿಸಿದ್ದರು.

    ಈ ಆರೋಪದ ಬೆನ್ನಲ್ಲೇ ಪಶು ಆಹಾರ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯ NDDB CALF ನ ವರದಿಯು ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದ ಮಾದರಿಗಳಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಲ್ಯಾಬ್ ವರದಿಯಲ್ಲಿ ಏನಿದೆ?
    ಲಡ್ಡುಗೆ ಬಳಸಿದ ತುಪ್ಪದಲ್ಲಿ ಮೀನೆಣ್ಣೆ,ಹಂದಿಯ ಕೊಬ್ಬು, ತಾಳೆ ಎಣ್ಣೆ ಕೊಬ್ಬು, ತೆಂಗಿನ ಎಣ್ಣೆಯ ಕೊಬ್ಬು ಪತ್ತೆಯಾಗಿದೆ. ಸೋಯಾ, ಸೂರ್ಯಕಾಂತಿ, ಆಲಿವ್, ಹತ್ತಿ ಬೀಜದೆಣ್ಣೆ ಸಿಕ್ಕಿದೆ. ತುಪ್ಪದಲ್ಲಿ ವ್ಹೀಟ್ ಜೆರ್ಮ್ ಆಯಿಲ್, ಮೇಜ್ ಜೆರ್ಮ್ ಆಯಿಲ್ ಪತ್ತೆಯಾಗಿದೆ.

    ಸಿಎಂ ಹೇಳಿಕೆಯನ್ನು ಟಿಟಿಡಿ ಭಾಗಶಃ ಒಪ್ಪಿದೆ. ಒಂದು ಕಂಪನಿಯ ತುಪ್ಪದಲ್ಲಿ ವೆಜಿಟೆಬಲ್ ಫ್ಯಾಟ್ ಬೆರೆಸಿರುವುದು ಗೊತ್ತಾಗಿದೆ ಎಂದು ಟಿಟಿಡಿ ಇಓ ಶ್ಯಾಮಲರಾವ್ ಹೇಳಿದ್ದಾರೆ. ಟಿಟಿಡಿ ಮಾಜಿ ಸದಸ್ಯ ಓವಿ ರಮಣ, ಚಂದ್ರಬಾಬು ಹೇಳಿದ್ದೆಲ್ಲಾ ಸತ್ಯ ಎಂದಿದ್ದಾರೆ.

    ಜಗನ್ ಸಿಎಂ ಆಗಿದ್ದಾಗ ವಿದೇಶದಿಂದ ಆಮದು ಮಾಡಿಕೊಂಡ ಬೆಣ್ಣೆಯನ್ನು ಲಡ್ಡು ತಯಾರಿಗೆ ಬಳಸಲಾಗುತ್ತಿತ್ತು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

    ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರು ಸಿಹಿ ತಯಾರಿಸಲು ನಿಜವಾಗಿಯೂ ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನಾಯ್ಡು ಅವರ ಆರೋಪಗಳು ವೆಂಕಟೇಶ್ವರನನ್ನು ಪೂಜ್ಯ ದೇವತೆ ಎಂದು ಪರಿಗಣಿಸುವ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಶರ್ಮಿಳಾ ಹೇಳಿದ್ದಾರೆ.

  • ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ಆಂಧ್ರ ಸಿಎಂ ಆರೋಪ

    ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ಆಂಧ್ರ ಸಿಎಂ ಆರೋಪ

    – ಚಂದ್ರಬಾಬು ನಾಯ್ಡು ಆರೋಪ ತಳ್ಳಿಹಾಕಿದ ಜಗನ್‌ ರೆಡ್ಡಿ ಪಕ್ಷ

    ಅಮರಾವತಿ: ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (YSR Congress) ಸರ್ಕಾರದಲ್ಲಿ ತಿರುಪತಿ ಲಡ್ಡು (Tirupati Laddoos) ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

    ಆದರೆ, ಸಿಎಂ ನಾಯ್ಡು (ChandrababuNaidu) ಆರೋಪವನ್ನು ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ (Jagan Mohan Reddy) ನೇತೃತ್ವದ ಪಕ್ಷವು ತಳ್ಳಿಹಾಕಿದೆ. ಇದು ದುರುದ್ದೇಶಪೂರಿತವಾಗಿದೆ ಎಂದು ಟೀಕಿಸಿದೆ. ಇದನ್ನೂ ಓದಿ: 35 ವರ್ಷದಲ್ಲೇ ದಾಖಲೆ – ಜಮ್ಮು ಕಾಶ್ಮೀರದಲ್ಲಿ ಭರ್ಜರಿ ಮತದಾನ

    ಬುಧವಾರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, ಜಗನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನವು ‘ಪ್ರಸಾದ’ವಾಗಿ ನೀಡುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

    ಕಳೆದ 5 ವರ್ಷಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ತಿರುಮಲದ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ. ಅವರು ‘ಅನ್ನದಾನ’ (ಉಚಿತ ಊಟ) ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಪವಿತ್ರ ತಿರುಮಲ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿ ಕಲುಷಿತಗೊಳಿಸಿದ್ದಾರೆ. ಆದರೆ, ನಾವು ಈಗ ಶುದ್ಧ ತುಪ್ಪವನ್ನು ಬಳಸುತ್ತಿದ್ದೇವೆ. ತಿರುಮಲ ತಿರುಪತಿ ದೇವಸ್ಥಾನ ಪಾವಿತ್ರ್ಯತೆಯನ್ನು ಕಾಪಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ವಾರದೊಳಗೆ ಸಿಎಂ ಅಧಿಕೃತ ನಿವಾಸ ತ್ಯಜಿಸಲಿದ್ದಾರೆ ಕೇಜ್ರಿವಾಲ್

    cm jagan mohan reddy

    ಚಂದ್ರಬಾಬು ನಾಯ್ಡು ಅವರು ತಿರುಮಲದ ಪಾವಿತ್ರ್ಯತೆ ಮತ್ತು ಕೋಟ್ಯಂತರ ಹಿಂದೂಗಳ ನಂಬಿಕೆಯನ್ನು ತೀವ್ರವಾಗಿ ಹಾಳು ಮಾಡಿದ್ದಾರೆ. ತಿರುಮಲ ಪ್ರಸಾದದ ಬಗ್ಗೆ ಅವರ ಹೇಳಿಕೆಗಳು ಅತ್ಯಂತ ದುರುದ್ದೇಶಪೂರಿತವಾಗಿವೆ. ಯಾವುದೇ ವ್ಯಕ್ತಿ ಇಂತಹ ಮಾತುಗಳನ್ನು ಆಡುವುದಿಲ್ಲ. ಅಂತಹ ಆರೋಪಗಳನ್ನು ಮಾಡುವುದಿಲ್ಲ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಖಂಡಿಸಿದ್ದಾರೆ.

    ರಾಜಕೀಯ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ. ಭಕ್ತರ ನಂಬಿಕೆ ಗಟ್ಟಿಗೊಳಿಸಲು ನಾನು ಕುಟುಂಬ ಸಮೇತ ತಿರುಮಲ ಪ್ರಸಾದದ ವಿಚಾರವಾಗಿ ಪರಮಾತ್ಮನ ಮುಂದೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧ. ಚಂದ್ರಬಾಬು ನಾಯ್ಡು ತಮ್ಮ ಕುಟುಂಬದೊಂದಿಗೆ ಅದೇ ರೀತಿ ಮಾಡಲು ಸಿದ್ಧರಿದ್ದಾರೆಯೇ ಎಂದು ಸುಬ್ಬಾ ರೆಡ್ಡಿ ಸವಾಲು ಹಾಕಿದ್ದಾರೆ.

  • ಇದು ದರದ ಪ್ರಶ್ನೆ ಅಲ್ಲ, ಬೇರೆಯವರಿಗೆ ನಾವು ಮಾರುಕಟ್ಟೆ ಬಿಟ್ಟು ಕೊಟ್ಟಂತೆ: ಸೋಮಶೇಖರ ರೆಡ್ಡಿ

    ಇದು ದರದ ಪ್ರಶ್ನೆ ಅಲ್ಲ, ಬೇರೆಯವರಿಗೆ ನಾವು ಮಾರುಕಟ್ಟೆ ಬಿಟ್ಟು ಕೊಟ್ಟಂತೆ: ಸೋಮಶೇಖರ ರೆಡ್ಡಿ

    ಬೆಂಗಳೂರು: ಇದು ದರದ ಪ್ರಶ್ನೆ ಅಲ್ಲ. ಬೇರೆಯವರಿಗೆ ಮಾರುಕಟ್ಟೆ ಬಿಟ್ಟು ಕೊಟ್ಟಂತೆ ಎಂದು ಕೆಎಂಎಫ್‌ (KMF) ಮಾಜಿ ಅಧ್ಯಕ್ಷ ಸೋಮಶೇಖರ ರೆಡ್ಡಿ (Somashekara Reddy) ಪ್ರತಿಕ್ರಿಯಿಸಿದ್ದಾರೆ.

    ತಿರುಪತಿ ಲಡ್ಡುಗೆ ನಂದಿನಿ ತುಪ್ಪದ ಟೆಂಡರ್‌ (No More Nandini Ghee for Tirupati Laddus) ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಂದಿನಿ ತುಪ್ಪ ತಿರುಪತಿ ದೇವರ ಸಂಬಂಧ ಅವಿನಾಭಾವ. ಸರಬರಾಜು ನಿಲ್ಲಿಸಿದರೆ ರೈತರಿಗೆ ತೊಂದರೆಯಾಗಲಿದೆ. ಅಷ್ಟೇ ಅಲ್ಲದೇ ನಂದಿನಿಯ ಅಂತರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಗೆ ಸಮಸ್ಯೆಯಾಗಲಿದೆ ಎಂದರು. ಇದನ್ನೂ ಓದಿ: ತಿರುಪತಿ ಲಡ್ಡುಗೆ ಇಲ್ಲ ನಂದಿನಿ ತುಪ್ಪ-ಕಾಂಗ್ರೆಸ್‌ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ: ಸಿಟಿ ರವಿ

     

    ಈ ಹಿಂದೆ ಒಂದು ಬಾರಿ ಟಿಟಿಡಿಯವರು (TTD) ದರ ಕಡಿಮೆ ಎಂದು ಬೇರೆ ಬ್ರ್ಯಾಂಡ್ ತುಪ್ಪ ಬಳಸಿದ್ದರು. ಆದರೆ ಗುಣಮಟ್ಟ ಕಡಿಮೆ ಎಂದು ಅವರಿಗೆ ಅನಿಸಿತು. ಆಮೇಲೆ ನಾನೇ ಖುದ್ದು ನಮ್ಮ ನಂದಿನಿ ತುಪ್ಪ ತೆಗೆದುಕೊಳ್ಳುವಂತೆ ಮನವೊಲಿಸಿದ್ದೆ ಎಂದು ತಿಳಿಸಿದರು.

    ಟಿಟಿಡಿಯರಿಗೆ ನಾವು ಮಾರುಕಟ್ಟೆ ದರಕ್ಕಿಂತ ಎರಡು ರೂಪಾಯಿ ಕಡಿಮೆಗೆ ಕೊಡುತ್ತಿದ್ದೆವು. ದಯವಿಟ್ಟು ಕೆಎಂಎಫ್‌ ಈ ಟೆಂಡರ್‌ ಅನ್ನು ಬಿಡಬಾರದು. ನಾನು ಖುದ್ದು ಭೀಮಾ ನಾಯ್ಕ್ (Bhima Nayak) ಜೊತೆ ಮಾತನಾಡುತ್ತೇನೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನಂದಿನಿ ತುಪ್ಪ ಕಳುಹಿಸಬೇಕು ಎಂದರು.‌

    ಸುಮಾರು 50 ವರ್ಷಗಳ ಬಳಿಕ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಕೆಎಂಎಫ್‌ನಿಂದ ನಂದಿನಿ ತುಪ್ಪದ ಖರೀದಿಯನ್ನು ಸ್ಥಗಿತ ಮಾಡಿದೆ. ಇದರಿಂದಾಗಿ ವಿಶ್ವ ಪ್ರಸಿದ್ಧ ಲಾಡುಗಳಲ್ಲಿ ಇನ್ನು ಮುಂದೆ ನಂದಿನಿ ತುಪ್ಪದ ಘಮ ಇರುವುದಿಲ್ಲ. ಈ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಭೀಮಾನಾಯ್ಕ್‌, ಕೆಎಂಎಫ್ ಸಲ್ಲಿಸಿದ ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ತಿರುಮಲ ಆಡಳಿತ ಮಂಡಳಿ ನಿಗದಿ ಮಾಡಿದ ಬೆಲೆಗೆ ತುಪ್ಪ ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಟೆಂಡರ್‌ನಿಂದ ಕೆಎಂಎಫ್‌ ದೂರ ಉಳಿದಿದೆ ಎಂದಿದ್ದಾರೆ.

    ಆರು ತಿಂಗಳಿಗೆ 14 ಲಕ್ಷ ಕೆಜಿ ತುಪ್ಪ ನಂದಿನಿಯಿಂದ ಸರಬರಾಜು ಆಗುತ್ತಿತ್ತು. ಈ ಹಿಂದೆ ರಿಯಾಯಿತಿ ದರದಲ್ಲಿ ತಿಮ್ಮಪ್ಪನ ಸನ್ನಿಧಿಗೆ ತುಪ್ಪ ಹೋಗುತ್ತಿತ್ತು. ಆದರೆ ಈಗ ಕೆಎಂಎಫ್‌ ಹಾಲಿನ ಬೆಲೆ ಏರಿಕೆ ಮಾಡಿದ್ದರಿಂದ ತಪ್ಪದ ದರವನ್ನು ಏರಿಸಿತ್ತು. ದರದ ಗೊಂದಲದಿಂದ ಟೆಂಡರ್‌ನಲ್ಲಿ ಕೆಎಂಎಫ್‌ ಭಾಗವಹಿಸರಲಿಲ್ಲ


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]