Tag: ತಿರುಪತಿ ದೇವಾಲಯ

  • ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು

    ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು

    – ‘ನಂದಿನಿ’ ತುಪ್ಪ ಬಳಕೆ ಬಳಿಕ ಸ್ವಾಧಿಷ್ಟ, ಗುಣಮಟ್ಟ ಕಾಯ್ದುಕೊಂಡ ತಿರುಪತಿ ಲಡ್ಡು
    – ಪರಸ್ಪರರಿಗೆ ಲಡ್ಡು ತಿನ್ನಿಸಿ ಭಕ್ತರ ಸಂಭ್ರಮ

    ಕೋಲಾರ/ಅಮರಾವತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಗೊಂದಲ, ಅಪವಿತ್ರದ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳದ ಭಕ್ತರು ಸೋಮವಾರ ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದು ಲಡ್ಡುಗಾಗಿ ಮುಗಿಬಿದ್ದರು.

    ತಿರುಪತಿ ಲಡ್ಡು ಪ್ರಸಾದ (Tirupati Laddu Row) ಅಪವಿತ್ರ ಭಾವನೆಯನ್ನು ಭಕ್ತರಿಂದ ತೊಡೆದುಹಾಕಲು, ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಶುದ್ಧೀಕರಣ ಮಾಡಲಾಯಿತು. ಜೊತೆಗೆ ಮಹಾಶಾಂತಿ ಹೋಮ ಕೂಡ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಇದನ್ನೂ ಓದಿ: ತಿರುಪತಿ ದೇವಾಲಯ ಪವಿತ್ರೋತ್ಸವ – ಹಾಲು, ಮೊಸರು, ತುಪ್ಪ, ಗೋಮೂತ್ರ, ಸಗಣಿ ಬಳಸಿ ದೇವಸ್ಥಾನ ಶುದ್ಧೀಕರಣ

    ಪ್ರಸಾದದ ವಿಚಾರವಾಗಿ ಸಾಕಷ್ಟು ವಿವಾದ ಎದ್ದಿದ್ದರೂ ಅದ್ಯಾವುದಕ್ಕೂ ಭಕ್ತರು ತಲೆಕೆಡೆಸಿಕೊಳ್ಳದೇ ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದರು. ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆದರು.

    ತಿಮ್ಮಪ್ಪನ ದರ್ಶನ ಬಳಿಕ ಲಡ್ಡು ತೆಗೆದುಕೊಳ್ಳಲು ಭಕ್ತರ ದಂದೇ ಸರತಿ ಸಾಲಿನಲ್ಲಿ ನಿಂತಿತ್ತು. ದರ್ಶನದ ಮಾದರಿಯಲ್ಲೇ ಲಡ್ಡುಗಾಗಿ ಉದ್ದುದ್ದ ಕ್ಯೂ ನಿಂತಿದ್ದರು. ಪ್ರಸಾದ ಕಲಬೆರಕೆ, ಅಪವಿತ್ರದ ಸುದ್ದಿಗಳಿಗೆ ಜನ ಡೋಂಟ್ ಕೇರ್ ಎಂದಿರುವಂತೆ ಕಂಡುಬಂತು. ಎಂದಿನಂತೆ ಲಡ್ಡು ಖರೀದಿ ಭರಾಟೆ ಜೋರಾಗಿತ್ತು. ಇದನ್ನೂ ಓದಿ: ಅಪವಿತ್ರ ಆರೋಪ ನಡುವೆಯೂ ತಿರುಪತಿ ಲಡ್ಡುಗೆ ಬೇಡಿಕೆ – ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟ

    ಅದರಲ್ಲೂ ಕೆಎಂಎಫ್ ನಂದಿನಿ ತುಪ್ಪ ಬಳಕೆ ಬಳಿಕ ಸ್ವಾಧಿಷ್ಟ, ಗುಣಮಟ್ಟವನ್ನು ಲಡ್ಡು ಕಾಯ್ದುಕೊಂಡಿದೆ. ಲಡ್ಡು ಸ್ವೀಕರಿಸಿ ಭಕ್ತರು ಖುಷಿ ಹಂಚಿಕೊಂಡರು. ಕೆಲವರು ಅಲ್ಲೇ ಪರಸ್ಪರ ಲಡ್ಡು ತಿನ್ನಿಸಿ ಭಕ್ತಿ ಮೆರೆದರು.

  • ಕೂದಲಿನಿಂದ 126 ಕೋಟಿ, ಲಡ್ಡು ಪ್ರಸಾದದಿಂದ 365 ಕೋಟಿ – ಟಿಟಿಡಿ ನಿರೀಕ್ಷಿತ ಆದಾಯ

    ಅಮರಾವತಿ: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಗುರುವಾರ ತನ್ನ 2022-23ನೇ ಸಾಲಿನ ಬಜೆಟ್ ಮಂಡಿಸಿದೆ.

    ತಿರುಮಲದ ಪುರಾತನ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿ 2022-23ರ ವಾರ್ಷಿಕ ಬಜೆಟ್‌ನಲ್ಲಿ 3,096.40 ಕೋಟಿ ರೂ. ಆದಾಯವನ್ನು ಅಂದಾಜಿಸಿದೆ.

    ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಬಜೆಟ್ ಸಭೆಯಲ್ಲಿ ಪರಿಶೀಲಿಸಿದ ಬಳಿಕ ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಜವಾಹರ ರೆಡ್ಡಿ ವಾರ್ಷಿಕ ಬಜೆಟ್ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

    ದೇವಾಲಯದ ವಾರ್ಷಿಕ ಆದಾಯದಲ್ಲಿ ಸುಮಾರು 1,000 ಕೋಟಿ ರೂ. ಹುಂಡಿಯಲ್ಲಿ (ದಾನ-ಪಾತ್ರೆ) ಭಕ್ತರಿಂದ ಬರುತ್ತದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿನ ಠೇವಣಿ ಮೇಲಿನ ಬಡ್ಡಿ ಸುಮಾರು 668.5 ಕೋಟಿ ರೂ., ವಿವಿಧ ರೀತಿಯ ಟಿಕೆಟ್‌ಗಳ ಮಾರಾಟದಿಂದ 362 ಕೋಟಿ ರೂ. ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.

    ಲಡ್ಡು ಪ್ರಸಾದ ಮಾರಾಟದಿಂದ 365 ಕೋಟಿ ರೂ., ವಸತಿ ಹಾಗೂ ಮದುವೆ ಮಂಟಪದ ಬಾಡಿಗೆಯಿಂದ 95 ಕೋಟಿ ರೂ., ಭಕ್ತರು ಅರ್ಪಿಸುವ ಕೂದಲು ಮಾರಾಟದಿಂದ 126 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಮಂಡಳಿಯ ವಿವಿಧ ಸೇವೆಗಳ ವೆಚ್ಚವನ್ನು 1,360 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ

    ಭಕ್ತರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಬಂದು ತಮ್ಮ ಕೂದಲನ್ನು ದಾನ ಮಾಡಿದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುತ್ತಾರೆ ಹಾಗೂ ಅವರ ಎಲ್ಲಾ ತೊಂದರೆಗಳು ದೂರವಾಗುತ್ತದೆ ಎಂಬುದು ಜನಪ್ರಿಯ ನಂಬಿಕೆ. ಲಕ್ಷ್ಮಿ ದೇವಿ ಇಲ್ಲಿ ಎಲ್ಲಾ ಪಾಪಗಳನ್ನು ಹಾಗೂ ದುಷ್ಟತನವನ್ನು ತೊರೆಯುವ ವ್ಯಕ್ತಿಯ ಎಲ್ಲಾ ದುಃಖಗಳನ್ನು ದೂರ ಮಾಡುತ್ತಾಳೆ ಎಂದು ನಂಬಲಾಗುತ್ತದೆ.

    ಈ ನಂಬಿಕೆಯನ್ನು ಪೂರ್ಣಗೊಳಿಸಲು ಜನರು ಎಲ್ಲಾ ದುಷ್ಟತನ ಹಾಗೂ ಪಾಪವನ್ನು ತಮ್ಮ ಕೂದಲ ರೂಪದಲ್ಲಿ ಬಿಡುತ್ತಾರೆ. ಪ್ರತಿದಿನ ಸುಮಾರು 20 ಸಾವಿರ ಭಕ್ತರು ತಿರುಪತಿ ದೇವಸ್ಥಾನಕ್ಕೆ ಕೇಶ ದಾನಕ್ಕೆ ಹೋಗುತ್ತಾರೆ. ಈ ಕೆಲಸಕ್ಕಾಗಿ ಸುಮಾರು 600 ಕ್ಷೌರಿಕರನ್ನು ದೇವಾಲಯದ ಆವರಣದಲ್ಲಿ ಇರಿಸಲಾಗಿದೆ.

  • ತಿರುಪತಿ ಮಾದರಿಯಲ್ಲಿ ರಾಮನಗರದಲ್ಲಿ ತಲೆ ಎತ್ತಲಿದೆ ತಿಮ್ಮಪ್ಪನ ದೇವಾಲಯ

    ತಿರುಪತಿ ಮಾದರಿಯಲ್ಲಿ ರಾಮನಗರದಲ್ಲಿ ತಲೆ ಎತ್ತಲಿದೆ ತಿಮ್ಮಪ್ಪನ ದೇವಾಲಯ

    ಬೆಂಗಳೂರು: ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನ ಮಾದರಿಯಲ್ಲಿ ರಾಜ್ಯದಲ್ಲೂ ತಿರುಪತಿ ತಿಮ್ಮಪ್ಪನ ದೇವಾಲಯ ತಲೆ ಎತ್ತಲಿದೆ.

    ಆಂಧ್ರಪ್ರದೇಶದ ತಿರುಪತಿಗೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಕೆಲ ಕ್ಷಣಗಳಷ್ಟೇ ದೇವರ ದರ್ಶನ ಪಡೆಯುವ ಅವಕಾಶ ಸಿಗುತ್ತದೆ. ಇದರಿಂದ ಗಂಟೆಗಂಟಲೇ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುವ ಭಕ್ತರು ನಿರಾಸೆಯನ್ನ ಅನುಭವಿಸುತ್ತಾರೆ. ಇಂತಹ ಭಕ್ತರಿಗೆ ರಾಜ್ಯದಲ್ಲೇ ತಿಮ್ಮಪ್ಪನ ದರ್ಶನ ಪಡೆಯುವ ಅವಕಾಶ ಲಭಿಸಿದೆ.

    ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಮುಜರಾಯಿ ಇಲಾಖೆಯ ಸಭೆಯಲ್ಲಿ ರಾಮನಗರದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

    ರಾಮನಗರದಲ್ಲಿ ದೇವಾಲಯ ನಿರ್ಮಾಣಕ್ಕೆ ಬೇಕಾದ ಅಗತ್ಯವಾದ 15 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿಯಲ್ಲೇ ರಾಜ್ಯದಲ್ಲೂ ದೇವಸ್ಥಾನ ನಿರ್ಮಾಣವಾಗಲಿದೆ. ದೇವಸ್ಥಾನ ನಿರ್ಮಾಣ ಕಾರ್ಯವನ್ನ ಸಂಪೂರ್ಣವಾಗಿ ಟಿಟಿಡಿಯೇ ನೋಡಿಕೊಳ್ಳಲಿದ್ದು, ಅದರ ನಿರ್ವಹಣೆ ಕೂಡಾ ಟಿಟಿಡಿಯೇ ಮಾಡಲಿದೆ.

    ಉಳಿದಂತೆ ಇಂದು ನಡೆದ ಸಭೆಯಲ್ಲಿ ಸಚಿವ ರೇವಣ್ಣ, ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್ ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.