Tag: ತಿಪ್ಪೇಸ್ವಾಮಿ

  • ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ

    ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ

    ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದಾಗಿ ಬಳಲುತ್ತಿದ್ದ ಮಾಜಿ ಸಚಿವ ತಿಪ್ಪೇಸ್ವಾಮಿ ಚಿಕಿತ್ಸೆ ಫಲಕಾರಿಯಾಗದೇ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    76 ವರ್ಷದ ತಿಪ್ಪೇಸ್ವಾಮಿಯವರು, ಬಹು ಅಂಗಾಂಗ ಸಮಸ್ಯೆಯಿಂದ ಕಳೆದೊಂದು ವಾರದಿಂದ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾರದ ಲೋಕಕ್ಕೆ ತೆರಳಿದ್ದಾರೆ.

    ಕುಟುಂಬಸ್ಥರು ಮೃತರ ಪಾರ್ಥಿವ ಶರೀರವನ್ನು ಚಳ್ಳಕೆರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಇಂದು ಸಂಜೆ ಸ್ವಗ್ರಾಮವಾದ ಕಾಳಪ್ಪನಹಟ್ಟಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ತಿಪ್ಪೇಸ್ವಾಮಿಯವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಕಾಳಪ್ಪನಹಟ್ಟಿಯ ಗ್ರಾಮದವರಾಗಿದ್ದರು. ತಮ್ಮ ರಾಜಕೀಯ ಜೀವನವನ್ನು ಜೆಡಿಎಸ್ ನೊಂದಿಗೆ ಪ್ರಾರಂಭಿಸಿದ್ದರು. ಇವರು ಮೂರು ಬಾರಿ ಚಳ್ಳಕೆರೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡಿದ್ದರು. ಅಲ್ಲದೇ ದೇವೇಗೌಡರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಹಾಗೂ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

    ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಂಡಿದ್ದ ತಿಪ್ಪೇಸ್ವಾಮಿಯವರು ಯಡಿಯೂರಪ್ಪನವರ ವಲಯದಲ್ಲಿ ಗುರುತಿಸಿಕೊಂಡಿದ್ದರು. ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಾಗಿದ್ದ ಅವರು ವಾಲ್ಮೀಕಿ ಗುರುಪೀಠ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ರಾಜ್ಯ ಸರ್ಕಾರದಿಂದ ವಾಲ್ಮೀಕಿ ಪುರಸ್ಕಾರಕ್ಕೂ ಭಾಜನರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು: ತಿಪ್ಪೇಸ್ವಾಮಿ

    ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು: ತಿಪ್ಪೇಸ್ವಾಮಿ

    ಚಿತ್ರದುರ್ಗ: ನಟ ಕಿಚ್ಚ ಸುದೀಪ್ ಹಾಗೂ ಗಣಿದಣಿ ಜನಾರ್ದನ ರೆಡ್ಡಿ ವಿರುದ್ಧ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ನಾಯಕನಟ್ಟಿಯಲ್ಲಿ ನಟ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆಗಾಗಿ ಆಗಮಿಸಿದ್ದಕ್ಕಾಗಿ ಆಕ್ರೋಶಗೊಂಡ ತಿಪ್ಪೇಸ್ವಾಮಿ, ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು. ನಾನು ಇವರಿಗಿಂತ ಮೊದಲೇ ಬಣ್ಣ ಹಚ್ಚಿದ ಕಲಾವಿದ. ಹೀಗಾಗಿ ಇವರೆಲ್ಲಾ ಬಂದು ಪ್ರಚಾರ ಮಾಡಿದರೆ ನಮ್ ಜನ ಮರಳಾಗಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀ ರಾಮುಲು ಈ ಗೆಲ್ಲಲ್ಲ. ಅಂತ ಸುದೀಪ್ ವಿರುದ್ಧ ಕಿಡಿಕಾರಿದ್ದಾರೆ.

    ಬಳ್ಳಾರಿಯವರ ಅಟ ಇಲ್ಲಿ ನಡೆಯಲ್ಲ. ಆ ಜನಾರ್ದನ ರೆಡ್ಡಿಗೆ ನಾಚಿಕೆಯಾಗಬೇಕು. ಅವರಿಗೆ ಬಿಜೆಪಿಯೊಂದಿಗೆ ಬರಬೇಡ ಅಂದರೂ ನಾಚಿಕೆ ಇಲ್ಲದೇ ಬರುತ್ತಾರೆ. ಕದ್ದು ಮುಚ್ಚಿ ಪ್ರಚಾರ ಮಾಡುತ್ತಾರೆ. ನಾಚಿಕೆಯಾಗಲ್ವಾ ಅವರಿಗೆ ಅಂತ ಪ್ರಶ್ನಿಸಿದ್ರು.

    ತಿಪ್ಪೇಸ್ವಾಮಿ ಒಲವು ಸಿಎಂ ಸಿದ್ದರಾಮಯ್ಯ ಕಡೆ ವಾಲಿದ್ದೂ, ಬದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ. ಶ್ರೀರಾಮುಲು ಸೋಲುತ್ತಾರೆ. ಆದರೆ ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂದಿದ್ದ ನಟ ಸುದೀಪ್, ಮೊಳಕಾಲ್ಮೂರು ಕ್ಷೇತ್ರಕ್ಕೆ ಯಾಕೆ ಬಂದ್ರು ಅಂತ ಕಿಡಿಕಾರಿದ್ದಾರೆ.

    ಜೊತೆಗೆ ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಸುದೀಪ್ ರೋಡ್ ಶೋ ವೇಳೆಯೇ ದೇಗುಲದ ಆವರಣದಲ್ಲಿ ಬಂಡಾಯ ಶಾಸಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದೂ, ಅವರ ಗುರುತಾದ ನೂರಾರು ಟ್ರಾಕ್ಟರ್ ಗಳಲ್ಲಿ ಅಪಾರ ಜನಸ್ತೋಮವನ್ನು ಸೇರಿಸಿ ಬಹಿರಂಗ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಏಯ್ ಶ್ರೀರಾಮುಲು.. ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ?- ಶ್ರೀರಾಮುಲು, ಯಶ್ ವಿರುದ್ಧ ತಿಪ್ಪೇಸ್ವಾಮಿ ವಾಗ್ದಾಳಿ

    ಏಯ್ ಶ್ರೀರಾಮುಲು.. ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ?- ಶ್ರೀರಾಮುಲು, ಯಶ್ ವಿರುದ್ಧ ತಿಪ್ಪೇಸ್ವಾಮಿ ವಾಗ್ದಾಳಿ

    ಚಿತ್ರದುರ್ಗ: ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹಾಗೂ ನಟ ಯಶ್ ವಿರುದ್ಧ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ನಾಯಕನಹಟ್ಟಿಯಲ್ಲಿ ಪ್ರಚಾರದ ವೇಳೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ನಟ ಯಶ್ ಪ್ರಚಾರಕ್ಕೆ ಟೀಕೆ ಮಾಡಿದ ತಿಪ್ಪೇಸ್ವಾಮಿ, ಯಶ್ ನಟರಾಗುವ ಮುನ್ನವೇ ನಾನು ಬಣ್ಣ ಬಳಿದುಕೊಂಡು ನಾಟಕವಾಡಿದವನು. ಯಶ್ ಬಂದು ಓಟ್ ಕೇಳಿದ್ರೆ ರಾಮುಲುಗೆ ಇಲ್ಲಿ ಯಾರು ಓಟ್ ಹಾಕಲ್ಲ. ಏಯ್ ಶ್ರೀರಾಮುಲು ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ.. ನಿನ್ನನ್ನು ಬಳ್ಳಾರಿಗೆ ಕಳುಹಿಸಲು ಇಲ್ಲಿನ ಜನ ತೀರ್ಮಾನಿಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್

    ಇಡೀ ಕ್ಷೇತ್ರದ ತುಂಬಾ ನನ್ನ ಕಲಾಭಿಮಾನಿಗಳು ಇದ್ದಾರೆ. ಬಣ್ಣ ಬಡಿದುಕೊಂಡು ಸ್ಟೇಜ್ ಗೆ ಹೋಗಿ ಮಾತು ಹೇಳುವವನು ನಿಜವಾದ ಕಲಾವಿದ. ಸಿನಿಮಾದವರು ನಡೆದುಕೊಂಡು ಬಂದ್ರೆ ಸರಿಯಾಗಿ ನಡೆಯಲು ಬರೋದಿಲ್ಲವೆಂದು ವಾಪಸ್ಸು ಕಳುಹಿಸುತ್ತಾರೆ. ಶ್ರೀರಾಮುಲು ಸುಮ್ಮನೇ ನಾಯಕ ನಟರನ್ನ ಯಾಕೇ ಕರೆಯಿಸುತ್ತೀಯಾ? ನಿನ್ನ ದುಡ್ಡಿಗಾಗಿ ಜನರು ಬರ್ತಾರೆ. ಮತಹಾಕಲು ಯಾರು ಬರೋದಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.

  • ಮೊಳಕಾಲ್ಮೂರು ಶಾಸಕ ಎಸ್ ತಿಪ್ಪೇಸ್ವಾಮಿಯಿಂದ ಹೊಸ ಬಾಂಬ್!

    ಮೊಳಕಾಲ್ಮೂರು ಶಾಸಕ ಎಸ್ ತಿಪ್ಪೇಸ್ವಾಮಿಯಿಂದ ಹೊಸ ಬಾಂಬ್!

    ಚಿತ್ರದುರ್ಗ: ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಾಲಿ ಶಾಸಕ ಎಸ್.ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಎರಡು ದಿನಗಳ ಹಿಂದೆ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇಂದು ಮೊಳಕಾಲ್ಮೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ, ಈ ಹಿಂದೆ ಪರಿವರ್ತನಾ ಯಾತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ನನ್ನ ಬಳಿ ಹಣ ಕೇಳಿದ್ದಕ್ಕೆ, 25 ಲಕ್ಷ ರೂ. ನೀಡಿದ್ದೆ. ಮೋದಿ, ಅಮಿತ್ ಶಾ ಸಮಾವೇಶಗಳಿಗಾಗಿ ಇಲ್ಲಿಂದ ನನ್ನ ಖರ್ಚಿನಲ್ಲಿ ಬಸ್‍ಗಳನ್ನು ಕಳುಹಿಸಲಾಗಿತ್ತು. ಬಿಜೆಪಿ ನಾಯಕರೆಲ್ಲಾ ಪಕ್ಷ ಸಂಘಟನೆಗಾಗಿ ನನ್ನಿಂದ 4-5 ಕೋಟಿ ರೂ. ಖರ್ಚು ಮಾಡಿಸಿದ್ದಾರೆ ಅಂತಾ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

    ನನ್ನಿಂದ ಹಣ ಪಡೆದುಕೊಂಡ ಬಳಿಕ ಕೊನೆ ಗಳಿಗೆಯಲ್ಲಿ ನನಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಯಿತು. ದೊಡ್ಡ ಲೀಡರ್ ಎಂದು ಹೇಳಿಕೊಂಡು ಮತ ಕೇಳಲು ಬರುವವರನ್ನು ಎಷ್ಟು ಮನೆಯ ದೀಪ ತೆಗೆದಿದ್ದೀರಿ ಎಂದು ಪ್ರಶ್ನಿಸಿ ಅಂತಾ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ರು.

  • ನಾನು ಬಿಜೆಪಿಗೆ ಮತ್ತೆ ಸೇರಲ್ಲ, ಇದೆಲ್ಲಾ ಬಳ್ಳಾರಿಯವರ ತಂತ್ರ: ಶಾಸಕ ತಿಪ್ಪೇಸ್ವಾಮಿ ಗರಂ

    ನಾನು ಬಿಜೆಪಿಗೆ ಮತ್ತೆ ಸೇರಲ್ಲ, ಇದೆಲ್ಲಾ ಬಳ್ಳಾರಿಯವರ ತಂತ್ರ: ಶಾಸಕ ತಿಪ್ಪೇಸ್ವಾಮಿ ಗರಂ

    ಚಿತ್ರದುರ್ಗ: ನನ್ನನ್ನು ಇದುವರೆಗೂ ಯಾರು ಸಂಪರ್ಕಿಸಿಲ್ಲ ಮತ್ತು ನಾನು ಬಿಜೆಪಿಗೆ ಮತ್ತೆ ಸೇರಲ್ಲ. ಬಳ್ಳಾರಿಯವರ ಕುತಂತ್ರದಿಂದ ನನಗೆ ಟಿಕೆಟ್ ತಪ್ಪಿದೆ. ಆದ್ರೆ ಇವರ ಆಟ ಇಲ್ಲಿ ನಡೆಯಲ್ಲ ಅಂತಾ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.

    ಸಂಸದ ಶ್ರೀರಾಮುಲು ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ತಿಪ್ಪೇಸ್ವಾಮಿ ಅವರು ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ, ಕಣದಿಂದ ಹಿಂದೆ ಸರಿಯುವಂತೆ ತಿಪ್ಪೇಸ್ವಾಮಿ ಅವರ ಮನವೊಲಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದನ್ನೂ ಓದಿ: ನಾಲ್ಕು ಕಡೆ ಕಲ್ಲು ತೂರಾಡಿ, ಇಲ್ಲದಿದ್ರೆ ಸುಮ್ಮನಿರಿ…- ತಿಪ್ಪೇಸ್ವಾಮಿಯಿಂದ ಬೆಂಬಲಿಗರಿಗೆ ಪ್ರಚೋದನೆ

    ತಮ್ಮ ಬಗ್ಗೆ ಹುಟ್ಟಿಕೊಂಡಿರುವ ಮಾತುಗಳಿಗೆ ಸ್ಪಷ್ಟನೆ ನೀಡಿದ ತಿಪ್ಪೇಸ್ವಾಮಿ, ನನ್ನ ಬೆಂಬಲಿಗರು ಮತ್ತು ಮತದಾರರಲ್ಲಿ ಗೊಂದಲ ಮೂಡಿಸಲು ಈ ರೀತಿಯ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಕೆಲಸವನ್ನು ಬಳ್ಳಾರಿಯವ್ರೆ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಇದನ್ನೂ ಓದಿ:  ಮಾತು ಕೊಟ್ಟು ಮೋಸ ಮಾಡಿದ್ರು ಶ್ರೀರಾಮುಲು-ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶ: ನೀವೇ ವಿಡಿಯೋ ನೋಡಿ

  • ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಭೇಟಿ ಬಳಿಕ ಸಿಎಂ ಪ್ರತಿಕ್ರಿಯೆ

    ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಭೇಟಿ ಬಳಿಕ ಸಿಎಂ ಪ್ರತಿಕ್ರಿಯೆ

    ಮೈಸೂರು: ಚಿತ್ರದುರ್ಗದ ಮೊಳಕಾಲ್ಮೂರು ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆದಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಬಿಜೆಪಿ ಶಾಸಕರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಟಿಕೆಟ್ ಕೊಡಲು ಸಮಯ ಮಿಂಚಿಹೋಗಿದೆ. ಅವರು ನನ್ನನ್ನು ಭೇಟಿ ಕಾಂಗ್ರೆಸ್ ಟಿಕೆಟ್ ಕೊಡಿಸುವಂತೆ ಕೇಳಿದ್ದಾರೆ. ಆದ್ರೆ ನಾನು ಈಗ ಸಾಧ್ಯವಿಲ್ಲ, ಕಷ್ಟ ಆಗುತ್ತೆ ಅಂತ ಹೇಳಿದ್ದೇನೆ ಅಂದ್ರು. ಇದನ್ನೂ ಓದಿ: ಕುತೂಹಲ ಮೂಡಿಸಿದೆ ಬಿಜೆಪಿ ಶಾಸಕ ತಿಪ್ಪೇಸ್ವಾಮಿ- ಸಿಎಂ ಭೇಟಿ

    ಇದೇ ವೇಳೆ ಚನ್ನಪಟ್ಟಣದಲ್ಲಿ ಹೆಚ್ ಎಂ ರೇವಣ್ಣ ಬದಲು ಸಿದ್ದರಾಮಯ್ಯರೇ ಸ್ಪರ್ಧೆ ಮಾಡಲಿ ಎಂಬ ಹೆಚ್‍ಡಿಕೆ ಸವಾಲು ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಪತ್ನಿ ಚನ್ನಪಟ್ಟಣದಲ್ಲಿ ಸೋತರು. ಆಗ ಚಾಲೆಂಜ್ ಎಲ್ಲಿ ಹೋಗಿತ್ತು ಅಂತ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.

    ಕುಮಾರಸ್ವಾಮಿಯಂತೆ ನಾನು ಕೆಳಮಟ್ಟಕ್ಕೆ ಇಳಿದು ಸವಾಲು ಹಾಕಲ್ಲ. ಅವರು ಚಿಕ್ಕಬಳ್ಳಾಪುರದಲ್ಲಿ ಯಾಕೇ ಸೋತರು. ಚಾಮುಂಡೇಶ್ವರಿಯಲ್ಲಿ ಬಂದು ಪ್ರಚಾರ ಮಾಡುವ ಅವರಿಗೆ ಕ್ಷೇತ್ರದ ಜೊತೆ ಒಳ್ಳೆ ಸಂಬಂಧ ಇದೇಯಾ? 2006ರಲ್ಲಿ ಬಂದಿದ್ದು ಬಿಟ್ಟರೆ ಇವತ್ತೆ ಬರ್ತಿರೋದು. ಮುಖ್ಯಮಂತ್ರಿಯಾಗಿದ್ದಾಗ ಕೆಲಸ ಮಾಡದೆ, ಈಗ ಬಂದು ಗ್ರಾಮಗಳನ್ನ ದತ್ತು ತೆಗೆದುಕೊಂಡರೆ ಆಗುತ್ತಾ? ಮೊದಲು ರಾಮನಗರವನ್ನ ದತ್ತು ತೆಗೆದುಕೊಳ್ಳಲಿ ಅಂತ ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮತಗಳು ಕುಮಾರಸ್ವಾಮಿ ಅಥವಾ ನನ್ನ ಜೇಬಿನಲ್ಲಿಲ್ಲ- ಸಿಎಂ ತಿರುಗೇಟು

  • ಕುತೂಹಲ ಮೂಡಿಸಿದೆ ಬಿಜೆಪಿ ಶಾಸಕ ತಿಪ್ಪೇಸ್ವಾಮಿ- ಸಿಎಂ ಭೇಟಿ

    ಕುತೂಹಲ ಮೂಡಿಸಿದೆ ಬಿಜೆಪಿ ಶಾಸಕ ತಿಪ್ಪೇಸ್ವಾಮಿ- ಸಿಎಂ ಭೇಟಿ

    ಮೈಸೂರು: ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪೇಸ್ವಾಮಿಯವರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

    ಸಂಸದ ಶ್ರೀರಾಮುಲು ವಿರುದ್ಧ ಸಿಡಿದೆದ್ದಿರುವ ತಿಪ್ಪೇಸ್ವಾಮಿ ಅವರು ಮೈಸೂರಿನ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಸಿಎಂ ಅವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿ ಅವರು ಮೊಳಕಾಲ್ಮೂರಿನ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ ಅನ್ನೋ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಮೂಡಿದೆ. ಇದೇ ವೇಳೆ ಸಿರಗುಪ್ಪ ಶಾಸಕ ಬಿ.ಎಂ ನಾಗರಾಜ್ ಬೆಂಬಲಿಗರು ಕೂಡ ಮೈಸೂರಿನ ಟಿ.ಕೆ ಬಡಾವಣೆಯಲ್ಲಿರೋ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು

    ಶಾಸಕರು ಸೋಮವಾರ ಸಚಿವ ಡಿಕೆ ಶಿವಕುಮಾರ್ ಅವರನ್ನು ಕೂಡ ಭೇಟಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಡಿಕೆಶಿ, ಶಾಸಕ ತಿಪ್ಪೇಸ್ವಾಮಿ ಅವರು ನನ್ನನ್ನು ಭೇಟಿಯಾಗಿದ್ದಾರೆ. ತಿಪ್ಪೇಸ್ವಾಮಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಿಜೆಪಿ ಶಾಸಕರಾಗಿದ್ದಾರೆ. ಶಾಸಕರ ಭೇಟಿ ವಿಚಾರವನ್ನ ವರಿಷ್ಠರ ಬಳಿ ಪ್ರಸ್ತಾಪ ಮಾಡುತ್ತೇನೆ. ಪಕ್ಷಕ್ಕೆ ಕರೆದುಕೊಳ್ಳುವುದರ ಬಗ್ಗೆ ವರಿಷ್ಠರು ತಿರ್ಮಾನಿಸುತ್ತಾರೆ. ಏ.19ರಂದು ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದಿನಿಂದ ಅಭ್ಯರ್ತಿಗಳಿಗೆ ಬಿ ಫಾರಂ ಕೊಡಲಾಗುತ್ತದೆ. ಪಕ್ಷದಲ್ಲಿರುವ ಅಸಮಾಧಾನವನ್ನು ಎರಡು ಮೂರು ದಿನಗಳಲ್ಲಿ ಶಮನ ಮಾಡಲಾಗುತ್ತದೆ. ಅಸಮಾಧಾನ ಯಾವ ಪಕ್ಷದಲ್ಲಿ ಇಲ್ಲ ಹೇಳಿ. ಅದನ್ನು ಬಗೆಹರಿಸುವ ಕೆಲಸ ವರಿಷ್ಠರು ಮಾಡುತ್ತಾರೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಭಿನ್ನಮತೀಯರಿಂದ ಶ್ರೀರಾಮುಲು ಕಾರಿಗೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್

  • ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಶಾಸಕ ತಿಪ್ಪೇಸ್ವಾಮಿ ಅವರು ಸಂಸದ ಶ್ರೀರಾಮುಲು ಅವರ ಸವಾಲಿಗೆ ಪ್ರತಿ ಸವಾಲು ಎಸೆದಿದ್ದಾರೆ.

    ತನ್ನ ವಿರುದ್ಧ ಚುನಾವಣೆಯಲ್ಲಿ ನಿಂತು ಸ್ಪರ್ಧೆ ಮಾಡಿ ಗೆದ್ದು ತೋರಿಸಿ ಎಂಬ ಶ್ರೀ ರಾಮುಲು ಅವರ ಸವಾಲನ್ನು ಸ್ವೀಕರಿಸಿ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ, ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೀನು ಗಂಡಸಾಗಿದ್ರೆ. ನಾಯಕನೇ ಆಗಿದ್ರೆ. ಇಲ್ಲಿ ಗೆದ್ದು ತೋರಿಸು ನಿಮ್ಮಂತವರಿಗೆ ಇಲ್ಲಿನ ಜನರು ಹೆದರುವುದಿಲ್ಲ. ಇದು ಮದಕರಿನಾಯಕ ಕಟ್ಟಿದ ಜಿಲ್ಲೆ ಎಂದು ಕಟು ಶಬ್ಧಗಳಲ್ಲಿ ಪ್ರತಿ ಸವಾಲು ಹಾಕಿದರು.

    ಮೊಳಕಾಲ್ಮೂರು ಕ್ಷೇತ್ರದ ಸ್ವ-ಗ್ರಾಮದಲ್ಲಿ ಬೆಂಬಲಿಗರ ಸಭೆ ಬಳಿಕ ಮಾತನಾಡಿದ ತಿಪ್ಪೇಸ್ವಾಮಿ, ಶತಾಯಗತಾಯ ಶ್ರೀರಾಮುಲು ಅವರಿಗೆ ಈ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುತ್ತೇನೆ. ಪಕ್ಷದಲ್ಲಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನಾನು ಯಾವ ಪಕ್ಷದವರನ್ನೂ ಟಿಕೆಟ್ ಗಾಗಿ ಸಂಪರ್ಕಿಸಿಲ್ಲ ಎಂದರು.

    ಬಳ್ಳಾರಿಯಲ್ಲಿ ಸೋಲಿನ ಭೀತಿಯಿಂದ ಶ್ರೀರಾಮುಲು ವರು ಚಿತ್ರದುರ್ಗಕ್ಕೆ ಬಂದಿದ್ದಾರೆ. ಅಲ್ಲದೇ ತನಗೆ ಟಿಕೆಟ್ ನೀಡುವ ಭರವಸೆ ನೀಡಿ ಮೋಸ ಮಾಡಿದ್ದಾರೆ. ಬಿಜೆಪಿ ಮೋಸ ಮಾಡಿದ ಪಕ್ಷ, ಬಿಜೆಪಿಗೆ ಮತ ಹಾಕಬೇಡಿ. ಅಲ್ಲದೇ ನಾಗೇಂದ್ರ, ಆನಂದ್ ಸಿಂಗ್ ಅವರೆಲ್ಲ ಶ್ರೀರಾಮುಲು ಅವರನ್ನು ಯಾಕೆ ಬಿಟ್ಟು ಹೋದರು ನನಗೆ ತಿಳಿದಿದೆ. ಆದರೆ ಅವರು ಇಲ್ಲಿನ ಕೆಲ ಸ್ಥಳೀಯರ ಮಾತು ಕೇಳಿದ್ದಾರೆ. ಅಂಥವರ ಮಾತಿನಿಂದ ಎಲ್ಲರೂ ಹಾಳಾಗಬೇಕಾಗುತ್ತದೆ. ಪದೇ ಪದೇ ಸೋಲು ಖಚಿತ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ರಾಮುಲು ಅವರು ಹೇಳುತ್ತಾರೆ ಆದ್ರೆ ಅವರದ್ದು, ಮಾತು ಕೊಟ್ಟು ಮೋಸ ಮಾಡಿದ ರಕ್ತ ಎಂದು ತೀವ್ರ ವಾಗ್ದಾಳಿ ನಡೆಸಿದರು.

    ಕ್ಷೇತ್ರದ ಜನತೆ ನನ್ನೊಂದಿಗೆ ಇದ್ದಾರೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಎಲ್ಲಾ ಸಮುದಾಯದವರೂ ನನ್ನ ಜೊತೆಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನನ್ನ ಕುಟುಂಬಕ್ಕೆ ಅನ್ಯಾಯ ಮಾಡಿದೆ ಎಂದು ತಮ್ಮ ಸಹೋದರನ ಹೆಸರು ಹೇಳದೆ ಶ್ರೀರಾಮುಲು ವಿರುದ್ಧ ಕೆಂಡಾಮಂಡಲರಾದ್ರು.  ಇದನ್ನೂ ಓದಿ:   ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು

     

     

  • ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು

    ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು

    ಬಳ್ಳಾರಿ: ಕರ್ನಾಟಕ ವಿಧಾನಸಭಾ ಚುನಾವಣಾ ಪಟ್ಟಿ ಬಿಡುಗಡೆಗೊಂಡ ಬಳಿಕ ಶ್ರೀರಾಮುಲು ಮತ್ತು ತಿಪ್ಪೇಸ್ವಾಮಿ ಬೆಂಬಲಿಗರ ವಿರುದ್ಧ ಭಿನ್ನಮತ ಏರ್ಪಟ್ಟಿದೆ.

    ಬಳ್ಳಾರಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀರಾಮುಲು, ಶುಕ್ರವಾರ ನಡೆದ ಘಟನೆ ನನಗೆ ಮತ್ತು ನಮ್ಮ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ನಿನ್ನೆಯ ಘಟನೆಯಲ್ಲಿ ನನ್ನ ಕಾರು ಜಖಂ ಆಗಿದೆ. ನನ್ನ ಹುಡುಗರ ಮೇಲೆ ಹಲ್ಲೆಯಾಗಿದೆ ಅಷ್ಟೆ. ನನ್ನ ಶರ್ಟ್ ಹರಿದು ಹಲ್ಲೆ ಮಾಡಿದ್ದಾರೆ ಅನ್ನೋದು ಸುಳ್ಳು ವದಂತಿಯಾಗಿದೆಂದು ಅವರು ಹೇಳಿದ್ದಾರೆ.

    ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಈ ಹಿಂದೆ ನನ್ನಿಂದ ಗೆದ್ದಿಲ್ಲ ಅಂತಿದ್ದಾರೆ. ಆದರೆ ಇದೀಗ ಅವರಿಗೆ ಸವಾಲು ಹಾಕುವೆ, ತಿಪ್ಪೇಸ್ವಾಮಿಗೆ ಶಕ್ತಿ ಇದ್ದರೇ ಪಕ್ಷೇತರ ಅಭ್ಯರ್ಥಿಯಾಗಲಿ. ಇಲ್ಲವೇ ಬೇರೆಯವರಿಗೆ ಬೆಂಬಲ ನೀಡಿ ಗೆದ್ದು ತೋರಿಸಲಿ ಅಂತ ಸಂಸದ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಬಹಿರಂಗವಾಗಿ ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಭಿನ್ನಮತೀಯರಿಂದ ಶ್ರೀರಾಮುಲು ಕಾರಿಗೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್

    ಅಲ್ಲದೇ ಈ ಘಟನೆಯ ಬಗ್ಗೆ ಪಕ್ಷದ ನಾಯಕರು ನಿನ್ನೆಯೇ ನನ್ನಿಂದ ಮಾಹಿತಿ ಪಡೆದಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದ ಶಾಸಕ ತಿಪ್ಪೇಸ್ವಾಮಿಗೆ 2013ರಲ್ಲಿ ನಾನೇ ಅವರ ಕೈ ಹಿಡಿದು ಗೆಲ್ಲಿಸಿದೆ. ಆದ್ರೆ ಇದೀಗ ಅವರು ತಿರುಗಿ ಬಿದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಕಾಂಗ್ರೆಸ್ ನನ್ನನ್ನೂ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ. ಇದನ್ನೂ ಓದಿ:  ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ, ದೂರು ನೀಡಲ್ಲ: ಶ್ರೀರಾಮುಲು

    ಹಿಂದುಳಿದ ಜನಾಂಗದ ಪರ ನಾನು ಹೋರಾಡುತ್ತಿದ್ದೇನೆ. ಕಾಂಗ್ರೆಸ್ ಎಸ್ಸಿ ಎಸ್‍ಟಿ ಮತಗಳಿಗೋಸ್ಕರ ನನ್ನ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ. ಆದರೆ ಕಾಂಗ್ರೆಸ್ ನವರೂ ಏನೇ ಷಡ್ಯಂತ್ರ ಮಾಡಿದರೂ ನಾನು ಜಗ್ಗುವುದಿಲ್ಲ. ಮೊಳಕಾಲ್ಮೂರು ಕ್ಷೇತ್ರದಿಂದ ನಾನು ಕೇವಲ ನಾಮಪತ್ರ ಹಾಕಿ 2-3 ದಿನ ಮಾತ್ರ ಪ್ರಚಾರ ಮಾಡುವೆ. ಉಳಿದ ದಿನಗಳಲ್ಲಿ ನಾನು ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವೆ ಎಂದು ಶ್ರೀರಾಮುಲು ಹೇಳಿದ್ದಾರೆ.

  • ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ, ದೂರು ನೀಡಲ್ಲ: ಶ್ರೀರಾಮುಲು

    ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ, ದೂರು ನೀಡಲ್ಲ: ಶ್ರೀರಾಮುಲು

    ಚಿತ್ರದುರ್ಗ: ಇಂದಿನಿಂದ ಪ್ರಚಾರ ಆರಂಭಿಸಿದ್ದೇನೆ. ಆದ್ರೆ ಇವತ್ತು ಬೆಳಗ್ಗೆ ನಡೆದ ಘಟನೆ ನೋವು ತಂದಿದೆ. ನಾನು ಯಾವುದೇ ಸ್ವಾರ್ಥ ಇಟ್ಟುಕೊಳ್ಳದೇ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ. ಇದನ್ನೂ ಓದಿಬಿಜೆಪಿ ಭಿನ್ನಮತೀಯರಿಂದ ಶ್ರೀರಾಮುಲು ಕಾರಿಗೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್

    ಕೊಂಡ್ಲಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ತಿಪ್ಪೇಸ್ವಾಮಿಯವರು ಅವರ ಬೆಂಬಲಿಗರ ಮೂಲಕ ಗಲಾಟೆ ಮಾಡಿಸಿದ್ದಾರೆ. ಇದೂ ಪ್ರಚೋದನಾಕಾರಿ ಗಲಾಟೆಯಾಗಿದ್ದು, ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ. ಪ್ರಚೋದನೆ ಮಾಡುವವರಿಗೆ ದೇವರು ನೋಡಿಕೊಳ್ಳುತ್ತಾನೆ. ನಾನು ಯಾವುದೇ ದೂರು ನೀಡುವುದಿಲ್ಲ ಎಂದು ತಿಳಿಸಿದರು.

    ನಾನು ಬೆನ್ನು ತೋರಿಸಿ ರಾಜಕಾರಣ ಮಾಡಿಲ್ಲ. ತಿಪ್ಪೇಸ್ವಾಮಿಯವರು ಅವರ ದಾರಿ ಅವರು ನೋಡಿಕೊಳ್ಳಲಿ. ಇನ್ನು ಮೇಲೆ ನಮಗೂ ಅವರಿಗೂ ಸಂಬಧವಿಲ್ಲ. ಈ ರೀತಿ ಘಟನೆಯಾದ ನಂತರ ಮೃದುಧೋರಣೆ ತಳೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ನಾನು ಗೆದ್ದೆ ಗೆಲ್ಲುವೆ. ಮೊಳಕಾಲ್ಮೂರು ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ. ನಾನು ರಾಜೀನಾಮೆ ನೀಡಿ ಸ್ಪರ್ಧೆ ಮಾಡುವುದಿಲ್ಲ. ನನ್ನ ಹಾಗೂ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ. ಗೆದ್ದ ನಂತರವೇ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.