Tag: ತಿಪ್ಪರಾಜು ಹವಾಲ್ದಾರ್

  • ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪೈಪೋಟಿ

    ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪೈಪೋಟಿ

    ರಾಯಚೂರು: ಜಿಲ್ಲೆಯ ರಾಯಚೂರು ಗ್ರಾಮೀಣ ಕ್ಷೇತ್ರ (Raichur Rural Constituency) ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದ್ದು ಹಲವಾರು ವಿಶೇಷತೆಗಳನ್ನು ಹೊಂದಿದೆ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕಲ್ಮಲಾ ಕ್ಷೇತ್ರ ರಾಯಚೂರು ಗ್ರಾಮೀಣ ಕ್ಷೇತ್ರವಾಗಿ ಮರುನಾಮಕರಣವಾಯಿತು. ಮರು ವಿಂಗಡಣೆಗೂ ಮುನ್ನ ಕಲ್ಮಲಾ ಕ್ಷೇತ್ರದಲ್ಲಿ ಗೆದ್ದ ಬಹುತೇಕರು ಮಂತ್ರಿಗಳಾಗಿ ಮೆರೆದದ್ದು ಈ ಕ್ಷೇತ್ರದ ವಿಶೇಷತೆ.

    ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ ಎದುರಾಗುವ ಸಾಧ್ಯತೆಯಿದ್ದು, ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಮಧ್ಯೆ ನೇರ ಹಣಾಹಣಿ ಇದೆ. ಜೆಡಿಎಸ್ ಪಕ್ಷ ಸಹ ಪೈಪೋಟಿಯಲ್ಲಿದೆ. ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಬಸನಗೌಡ ದದ್ದಲ, ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಜೆಡಿಎಸ್‌ನಿಂದ ಸಣ್ಣ ನರಸಿಂಹ ನಾಯಕ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 2ನೇ ಬಾರಿಗೆ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಸತವಾಗಿ 2 ಬಾರಿ ಗೆಲ್ಲುವುದು ಸುಲಭವಲ್ಲ ಎನ್ನೋದನ್ನು ಸುಳ್ಳು ಮಾಡಲು ಹೊರಟಿದ್ದಾರೆ. ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತೊಮ್ಮೆ ಮತದಾರರ ವಿಶ್ವಾಸ ಸಾಧಿಸಲು ಹರಸಾಹಸ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ್ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

    ಅಭ್ಯರ್ಥಿಗಳ ಪ್ಲಸ್ ಮತ್ತು ಮೈನಸ್:
    ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಬಸನಗೌಡ ದದ್ದಲ ಹೆಸರು ಉಳಿಸಿಕೊಂಡಿದ್ದಾರೆ. ಹೀಗಾಗಿ ಜನರ ಒಲವು ಇನ್ನೂ ಕಾಂಗ್ರೆಸ್ ಕಡೆ ಕಾಣುತ್ತಿದೆ. ಕ್ಷೇತ್ರದ ಜನರ ಜೊತೆ ಸದಾ ಸಂಪರ್ಕದಲ್ಲಿರುವುದು, ಹೆಚ್ಚು ಆಶ್ವಾಸನೆಗಳನ್ನು ಕೊಡದೆ, ಕ್ಷೇತ್ರದ ಜನರ ನಂಬಿಕೆಯನ್ನು ಉಳಿಸಿಕೊಂಡಿರುವುದು ಬಸನಗೌಡ ದದ್ದಲ್‌ಗೆ ಪ್ಲಸ್ ಆಗಲಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಒಳರಾಜಕೀಯ, ಪರಿಶಿಷ್ಟ ಪಂಗಡ ಸಮುದಾಯ ಮುಖಂಡರಾಗಿದ್ದ ಮಾಜಿ ಸಂಸದ ಬಿವಿ ನಾಯಕ್ ಬಿಜೆಪಿ ಸೇರ್ಪಡೆಯಾಗಿದ್ದು ಸ್ವಲ್ಪ ಹಿನ್ನಡೆ ಉಂಟು ಮಾಡಬಹುದು.

    ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಕ್ಷೇತ್ರದ ತುಂಬಾ ಓಡಾಟ ನಡಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು, ನೆರೆ ಸಂದರ್ಭದಲ್ಲಿ ಬಿಎಸ್‌ವೈ ಅಭಿವೃದ್ಧಿ ಕೆಲಸಗಳು ಅಭ್ಯರ್ಥಿಗೆ ಪ್ಲಸ್ ಆಗಬಹುದು. ಶಾಸಕರಾಗಿದ್ದಾಗ ನೀಡಿದ ಭರಪೂರ ಭರವಸೆಗಳು ಭರವಸೆಗಳಾಗೇ ಉಳಿದಿರುವುದು, ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದ ಜನರಿಂದ ದೂರ ಉಳಿದದ್ದು ಮೈನಸ್ ಆಗಬಹುದು. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ – ಈ ಬಾರಿ ಯಾರ ಕೈ ಹಿಡಿಯಲಿದ್ದಾನೆ ಮತದಾರ?

    ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಮತ ಬ್ಯಾಂಕ್ ಇರುವುದು ಪ್ಲಸ್ ಆಗಬಹುದು. ಆದರೆ ಕ್ಷೇತ್ರದ ಎಲ್ಲಾ ಭಾಗಗಳ ಜನರೊಂದಿಗೆ ಉತ್ತಮ ಒಡನಾಟ ಇಲ್ಲದಿರುವುದು ಅಭ್ಯರ್ಥಿಗೆ ಮೈನಸ್ ಆಗಬಹುದು.

    ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗುವ ವಿಷಯಗಳು:
    ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆ, ಕೃಷ್ಣಾ ನದಿ ನಡುಗಡ್ಡೆ ಗ್ರಾಮಗಳಿಗೆ ಸೇತುವೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವ ವಿಷಯಗಳು ಚರ್ಚೆಯ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಕ್ಷೇತ್ರದ ಬಹುತೇಕ ಗ್ರಾಮಗಳು ಕೃಷ್ಣಾ ನದಿ ದಂಡೆಯಲ್ಲಿ ಬರುವುದರಿಂದ ಪ್ರವಾಹ ಭೀತಿ, ಗ್ರಾಮ ಸ್ಥಳಾಂತರ ವಿಷಯಗಳು ಚರ್ಚೆಯಾಗುತ್ತವೆ.

    2023ರ ಚುನಾವಣೆಗೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,27,761 ಇದೆ. ಇದರಲ್ಲಿ ಪುರುಷರು 1,12,041, ಮಹಿಳೆಯರು 1,15,665 ಹಾಗೂ 55 ತೃತೀಯ ಲಿಂಗಿ ಮತದಾರರಿದ್ದಾರೆ. ಜಾತಿವಾರು ಅಂದಾಜು ಮತದಾರರ ಸಂಖ್ಯೆ ಈ ರೀತಿ ಇದೆ.
    ಪರಿಶಿಷ್ಟ ಜಾತಿ – 45,000
    ಪರಿಶಿಷ್ಟ ಪಂಗಡ – 30,000
    ಗಂಗಾಮತಸ್ಥರು – 28,000
    ಕುರುಬರು – 35,000
    ಲಿಂಗಾಯತ – 25,000
    ಮುಸ್ಲಿಂ – 20,000 ಹಾಗೂ ಇತರೆ ಜಾತಿಯ ಉಳಿದ ಮತದಾರರಿದ್ದಾರೆ.

    ಇದುವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 8 ಬಾರಿ, ಜನತಾದಳ, ಜೆಡಿಎಸ್, ಜೆಎಸ್‌ಪಿ, ಬಿಜೆಪಿ, ಪಕ್ಷೇತರ ತಲಾ 1 ಬಾರಿ ಗೆದ್ದಿವೆ. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ. ಈ ಬಾರಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಪೈಪೋಟಿಯಿದ್ದು ಜೆಡಿಎಸ್ ಅಭ್ಯರ್ಥಿ ಸಹ ಗೆಲುವಿಗಾಗಿ ಸೆಣೆಸಾಟ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಿಜೆಪಿ ಕಾರ್ಯಕರ್ತರಿಗೆ ಮೋದಿ ನೀಡಿದ ಸಂದೇಶ ಏನು?

  • ಎಸ್.ಟಿ. ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬಿಜೆಪಿ ಎಸ್.ಟಿ. ಮೋರ್ಚಾ ಮನವಿ

    ಎಸ್.ಟಿ. ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬಿಜೆಪಿ ಎಸ್.ಟಿ. ಮೋರ್ಚಾ ಮನವಿ

    ಬೆಂಗಳೂರು: ರಾಜ್ಯ ಎಸ್.ಟಿ. ಸಮುದಾಯದ ಮೀಸಲಾತಿಯ ಪ್ರಮಾಣವನ್ನು ಈಗ ಇರುವ ಶೇಕಡಾ 3 ರಿಂದ ಶೇಕಡಾ 7.5ಕ್ಕೆ ಹೆಚ್ಚಳ ಮಾಡುವಂತೆ ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಘಟಕವು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.

    ಮೋರ್ಚಾದ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಅವರು ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಎಸ್.ಟಿ. ಸಮುದಾಯಗಳ ಜನಸಂಖ್ಯೆ ಸುಮಾರು 75 ಲಕ್ಷಕ್ಕೂ ಅಧಿಕವಿದ್ದು, ಸಮುದಾಯಕ್ಕೆ ಶೇ.3 ಮೀಸಲಾತಿ ನಿಗದಿಯಾಗಿದೆ. ಸಂವಿಧಾನದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕಾದ ಪ್ರಮಾಣಕ್ಕಿಂತ ಇದು ಕಡಿಮೆ ಇರುತ್ತದೆ. ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸುವ ಕುರಿತು ಸಮುದಾಯದಿಂದ ರಾಜ್ಯಾದ್ಯಂತ ಬೇಡಿಕೆ ಹಾಗೂ ಹೋರಾಟ ಮಾಡಿದ್ದರಿಂದ ಅಂದು ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದ್ದರು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ. ಸದರಿ ನ್ಯಾಯಮೂರ್ತಿಗಳು ಸಲ್ಲಿಸಿರುವ ವರದಿಯು ಸರ್ಕಾರದ ಪರಿಶೀಲನೆ ಹಂತದಲ್ಲಿದೆ. ಸಮುದಾಯದ ಬಹುದಿನಗಳ ಬೇಡಿಕೆಯನ್ನು ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಈ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕಾಗಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶಾಲಾ-ಕಾಲೇಜು ಆರಂಭಕ್ಕೆ ಸೋಮವಾರ ಮಾರ್ಗಸೂಚಿ

    ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಪ್ರತ್ಯೇಕವಾಗಿ ಸಚಿವಾಲಯವನ್ನು ಘೋಷಣೆ ಮಾಡಿದ್ದು, ಇದರಿಂದ ಬಹುದಿನಗಳ ಈ ಸಮುದಾಯದ ಬೇಡಿಕೆಯನ್ನು ಈಡೇರಿಸಿದಂತಾಗಿದೆ. ಇದರಿಂದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸಹಾಯ ಮಾಡಿದಂತಾಗಿದೆ. ಅದಕ್ಕಾಗಿ ಈ ನಾಡಿನ ಸಮಗ್ರ ಎಸ್.ಟಿ. ಸಮುದಾಯಗಳ ಪರವಾಗಿ ಹಾಗೂ ರಾಜ್ಯ ಎಸ್.ಟಿ.ಮೋರ್ಚಾದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

    ಸಮುದಾಯದ ಇನ್ನೊಂದು ಪ್ರಮುಖ ಬೇಡಿಕೆಯಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಆದಿಕವಿ ಶ್ರೀ ವಾಲ್ಮೀಕಿ ಅಧ್ಯಯನ ಪೀಠ ಆರಂಭವಾಗಿದೆ. ಇದರಿಂದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಬದುಕಿನ ಅಧ್ಯಯನಕ್ಕೆ ಚಾಲನೆ ಲಭಿಸಿದೆ. ಜಗತ್ತಿನ ಮೊದಲ ಬೃಹತ್ ಆದಿ ಕಾವ್ಯವನ್ನು ರಚಿಸಿದ ಮಹಾನ್ ಮಹರ್ಷಿಗೆ ಗೌರವ ತೋರಿದ್ದೀರಿ. ಅದಕ್ಕಾಗಿ ಈ ನಾಡಿನ ಸಮಗ್ರ ವಾಲ್ಮೀಕಿ ಸಮುದಾಯಗಳ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಅವರು ತಿಳಿಸಿದ್ದಾರೆ.

    ಎಸ್.ಟಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಓಲೆಕಾರ, ನರಸಿಂಹ ನಾಯಕ್, ರಾಜ್ಯ ಕಾರ್ಯದರ್ಶಿಗಳಾದ ಮಹಾಂತೇಶ ನಾಯಕ, ಪದಾಧಿಕಾರಿಗಳಾದ ವಿಕ್ರಮ್ ಗಂಗಾಧರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

  • ಸೋಲಿನ ಪರಾಮರ್ಶೆ ಸಭೆಯಲ್ಲಿ ಕಣ್ಣೀರಿಟ್ಟ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್

    ಸೋಲಿನ ಪರಾಮರ್ಶೆ ಸಭೆಯಲ್ಲಿ ಕಣ್ಣೀರಿಟ್ಟ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್

    ರಾಯಚೂರು: ಸೋಲಿನ ಪರಾಮರ್ಶೆ ಸಭೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಗಳಗಳನೆ ಕಣ್ಣೀರಿಟ್ಟಿದ್ದಾರೆ.

    ರಾಯಚೂರು ನಗರದ ಹೊರವಲಯದಲ್ಲಿನ ಹರ್ಷಿತಾ ಗಾರ್ಡನ್ ನಲ್ಲಿ ನಡೆದ ಸಭೆಯಲ್ಲಿ ತಿಪ್ಪರಾಜು ಸೋತಿದ್ದಕ್ಕೆ ಅತ್ತಿದ್ದಾರೆ. 2013 ರಲ್ಲಿ ಗೆದ್ದು ಶಾಸಕನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿಯೇ ಅಷ್ಟೊಂದು ಅಭಿವೃದ್ಧಿ ಆಗಿಲ್ಲ. ನನ್ನ ಹಣೆಬರಹದಲ್ಲಿ ಸೋಲು ಬರೆದಿದೆ ಅನ್ನಿಸುತ್ತೆ, ಯಾರ ಬಗ್ಗೆಯೂ ದೋಷಿಸಿದ್ರು ಪ್ರಯೋಜನ ಇಲ್ಲ ಎಂದರು.

    ಮತದಾರರಿಗೆ ಅಭಿನಂದನೆ ಹಾಗೂ ಸೊಲಿನ ಆತ್ಮಾವಲೋಕನಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಗೆ ರಾಯಚೂರು ಲೊಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಾನೇನು ಸನ್ಯಾಸಿ ಅಲ್ಲ ಅಂತ ತಿಪ್ಪರಾಜು ಹವಾಲ್ದಾರ್ ಹೇಳಿದ್ದಾರೆ.

    https://youtu.be/oDPAG0iom-I