Tag: ತಾವರ್ ಚಂದ್ ಗೆಹ್ಲೋಟ್

  • 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ

    19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ

    ಬೆಂಗಳೂರು: ರಾಜ್ಯದ 19ನೇ ರಾಜ್ಯಪಾಲರಾಗಿ ಇಂದು ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ ಮಾಡಿದರು.

    ನೂತನ ರಾಜ್ಯಪಾಲರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನವನ್ನು ಹೈಕೋರ್ಟ್ ಮುಖ್ಯ ನ್ಯಾ. ಅಭಯ್ ಶ್ರೀನಿವಾಸ್ ಓಕಾ ಬೋಧಿಸಿದ್ದಾರೆ. ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ರಾಜ್ಯಪಾಲರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದ್ದಾರೆ.

    ನಾನು ಶ್ರದ್ಧಾಪೂರ್ವಕವಾಗಿ ಕರ್ನಾಟಕ ರಾಜ್ಯಪಾಲ ಹುದ್ದೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆಂದು ಭರವಸೆ ಕೊಡುತ್ತೇನೆ. ವಿಧಿಬದ್ಧ ನಿಯಮಗಳ ಪಾಲನೆ ಮೂಲಕ ಸಂವಿಧಾನದ ರಕ್ಷಣೆ ಮಾಡಲು ಬದ್ಧನಾಗಿರುತ್ತೇನೆ. ಕರ್ನಾಟಕ ರಾಜ್ಯದ ಜನರ ಸೇವೆ ಮತ್ತು ಕಲ್ಯಾಣ ಕಾರ್ಯಗಳಲ್ಲಿ ನಿರತನಾಗಿರುತ್ತೇನೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.

    ರಾಜಭವನದ ಗಾಜಿನ ಮನೆಯಲ್ಲಿ ನಡೆದ ನೂತನ ರಾಜ್ಯಪಾಲರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕೆಲ ಸಚಿವರು ಭಾಗಿಯಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪದಗ್ರಹಣ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

    2014ರಿಂದ ಗುಜರಾತ್ ಮೂಲದ ವಜೂಭಾಯ್ ವಾಲಾ ರಾಜ್ಯಪಾಲರಾಗಿದ್ದರು. ಕಳೆದ ವಾರ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನರ್‍ರಚನೆ ವೇಳೆ ತಾವರ್‍ಚಂದ್ ಗೆಹ್ಲೋಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದ ಗೆಹ್ಲೋಟ್ ನಿಯಮದ ಪ್ರಕಾರ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. 2006ರಿಂದ 2014ರವರೆಗೆ ಗೆಹ್ಲೋಟ್ ಕರ್ನಾಟಕ ಬಿಜೆಪಿ ಉಸ್ತುವಾರಿಯೂ ಆಗಿದ್ದರು. 1996ರಿಂದ 2009ರವರೆಗೆ ಮಧ್ಯಪ್ರದೇಶದ ಸಹಜಪುರ್ ಕ್ಷೇತ್ರದ ಲೋಕಸಭಾ ಸಂಸದರಾಗಿದ್ದ ಗೆಹ್ಲೋಟ್ 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯಸಭೆಗೆ ಆಯ್ಕೆ ಆಗಿದ್ದರು.

  • ರಾಜ್ಯಕ್ಕೆ ಆಗಮಿಸಿದ ನೂತನ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್

    ರಾಜ್ಯಕ್ಕೆ ಆಗಮಿಸಿದ ನೂತನ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್

    ಬೆಂಗಳೂರು: ನೂತನ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ರವರು ಇಂದು ರಾಜ್ಯಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕಂದಾಯ ಸಚಿವ ಆರ್.ಆಶೋಕ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಬರಮಾಡಿಕೊಂಡರು.

    ಇದಕ್ಕೂ ಮುನ್ನ ಮಾತನಾಡಿದ ಸಚಿವ ಆರ್.ಅಶೋಕ್, ನೂತನ ರಾಜ್ಯಪಾಲರನ್ನು ನಾನು ಸಿಎಸ್ ರವಿಕುಮಾರ್ ಸರ್ಕಾರದ ಪರವಾಗಿ ಸ್ವಾಗತಿಸಲು ಬಂದಿದ್ದೇವೆ. ಗೆಹ್ಲೋಟ್ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿರುವುದು ಸಂತೋಷವಾಗಿದೆ. ಈ ಹಿಂದೆಯೇ ರಾಜ್ಯದ ಉಸ್ತುವಾರಿಗಳಾಗಿ ಗೆಹ್ಲೋಟ್ ರವರು ಕೆಲಸ ಮಾಡಿದ್ದಾರೆ. ಕರ್ನಾಟಕದ ಪರಿಚಯ ಮತ್ತು ಇತಿಹಾಸ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದರು.

    ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಅನುಭವ ಗೆಹ್ಲೋಟ್ ಅವರಿಗಿದೆ. ತುಳಿತಕ್ಕೆ ಒಳಗಾದ ಸಮುದಾಯದಿಂದ ಬಂದವರಾಗಿದ್ದಾರೆ. ಅವರ ಸಲಹೆ ಸೂಚನೆ ಮತ್ತು ಒಳ್ಳೆಯ ಆಡಳಿತಕ್ಕೆ ಅವರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ತಿಳಿಸಿದರು. ತಾವರ್ ಚಂದ್ ಗೆಹ್ಲೋಟ್ ಅವರು ನಾಳೆ ಕರ್ನಾಟಕದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

  • ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

    ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

    – 8 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

    ನವದೆಹಲಿ: ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು, ರಾಜ್ಯದ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರು ನೇಮಕವಾಗಿದ್ದಾರೆ.

    ಈ ಹಿಂದೆ ಕರ್ನಾಟಕದ ಉಸ್ತುವಾರಿಯಾಗಿದ್ದ ಗೆಹ್ಲೋಟ್ ಅವರನ್ನು ಇದೀಗ ವಿ.ಆರ್.ವಾಲಾ ಜಾಗಕ್ಕೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟ ಪುನಾರಚನೆ ಚರ್ಚೆಯ ಬೆನ್ನಲ್ಲೇ ಗೆಹ್ಲೋಟ್ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಕುತೂಹಲ ಹುಟ್ಟಿಸಿದೆ. ಮೂಲತಃ ಮಧ್ಯಪ್ರದೇಶದವರಾದ ಗೆಹ್ಲೋಟ್, ದಲಿತ ಕುಟುಂಬದಲ್ಲಿ ಹುಟ್ಟಿದವರು. ಕೇಂದ್ರ ಸಾಮಾಜಿಕ, ನ್ಯಾಯ, ಸಬಲೀಕರಣ ಸಚಿವರಾಗಿದ್ದ ಇವರು,  ಪ್ರಸ್ತುತ ರಾಜ್ಯಸಭಾ ಬಿಜೆಪಿ ನಾಯಕರಾಗಿದ್ದಾರೆ.

    ರಾಜ್ಯದಲ್ಲಿ 6 ವರ್ಷ 10 ತಿಂಗಳಿಂದ ವಜೂಭಾಯಿ ರುಧಾಬಾಯಿ ವಾಲಾ ರಾಜ್ಯಪಾಲರಾಗಿದ್ದಾರೆ. ವಿ.ಆರ್.ವಾಲಾ 2014ರ ಸೆಪ್ಟೆಂಬರ್ ನಲ್ಲಿ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು. 2019ರ ಸೆಪ್ಟೆಂಬರ್ ನಲ್ಲಿ  ವಿ.ಆರ್ ವಾಲಾ ಅವರ 5 ವರ್ಷದ ಅಧಿಕಾರಾವಧಿ ಪೂರ್ಣಗೊಂಡಿತ್ತು. ಅಧಿಕಾರ ಮುಗಿದ ಬಳಿಕವೂ ವಾಲಾ ಅವರನ್ನೇ ಮುಂದುವರಿಸಲಾಗಿತ್ತು.

    ಮಿಜೋರಾಂ ರಾಜ್ಯಪಾಲರಾಗಿ ಹರಿ ಬಾಬು ಕಂಭಂಪತಿ, ಮಧ್ಯಪ್ರದೇಶ ಮಂಗುಭಾಯ್ ಚಗನ್ಭಾಯ್ ಪಟೇಲ್, ಹಿಮಾಚಲ ಪ್ರದೇಶ ರಾಜೇಂದ್ರನ್ ವಿಶ್ವನಾಥ್ ಅರ್ಲೆಕರ್, ಗೋವಾ ಪಿ.ಎಸ್.ಶ್ರೀಧರನ್ ಪಿಳ್ಳೈ, ತ್ರಿಪುರ ಸತ್ಯದೇವ್ ನಾರಾಯಣ್ ಆರ್ಯ, ಜಾರ್ಖಂಡ್ ರಮೇಶ್ ಬೈಸ್ ಹಾಗೂ ಹರಿಯಾಣ ರಾಜ್ಯಪಾಲರಾಗಿ ಬಂದಾರು ದತ್ತಾತ್ರೇಯ ಅವರನ್ನು ನೇಮಿಸಲಾಗಿದೆ.