Tag: ತಾಲೀಮು

  • ಮರದ ಅಂಬಾರಿ ಹೊತ್ತು ಕ್ಯಾಪ್ಟನ್ ಅರ್ಜುನ ತಾಲೀಮು

    ಮರದ ಅಂಬಾರಿ ಹೊತ್ತು ಕ್ಯಾಪ್ಟನ್ ಅರ್ಜುನ ತಾಲೀಮು

    ಮೈಸೂರು: ದಸರಾ ಮಹೋತ್ಸವ 2019 ಹಿನ್ನೆಲೆ ಗಜಪಡೆಗೆ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಾಗಿದೆ. ಹೀಗಾಗಿ ಸುಮಾರು 650 ಕೆಜಿ ತೂಕ ಹೊತ್ತು ಗಜಪಡೆ ನಾಯಕ ಅರ್ಜುನ ತಾಲೀಮು ಆರಂಭಿಸಿದ್ದಾನೆ.

    ನಮ್ದ, ಗಾಧಿ, ಛಾಪು, ಮರಳುಮೂಟೆ, ಮರದ ಅಂಬಾರಿ ಸೇರಿ ಸುಮಾರು 650 ಕೆ.ಜಿ ತೂಕವನ್ನು ಅರ್ಜುನ ಹೊತ್ತು ತಾಲೀಮು ನಡೆಸುತ್ತಿದ್ದಾನೆ. ಅರಣ್ಯಾಧಿಕಾರಿಗಳು ದಸರಾ ಗಜಪಡೆಗೆ ಕೊನೆಯ ಹಂತದ ತಾಲೀಮು ನೀಡುತ್ತಿದ್ದು, ಅರಮನೆ ಆವರಣದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿದ ನಂತರ ಮರದ ಅಂಬಾರಿ ಕಟ್ಟುವ ಕಾರ್ಯ ಮಾಡಲಾಯಿತು. ಅರಮನೆ ಆವರಣದಲ್ಲಿ ಕ್ರೇನ್ ಮೂಲಕ ಆನೆ ಬೆನ್ನಿಗೆ ಮಾವುತರು ಮರದ ಅಂಬಾರಿ ಕಟ್ಟಿದರು.

    ಈ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾ ಗಜಪಡೆಗೆ ಅಂತಿಮ ಹಂತದ ತಾಲೀಮು ಆರಂಭಗೊಂಡಿದೆ. ಮರದ ಅಂಬಾರಿ ಹೊತ್ತು ಕ್ಯಾಪ್ಟನ್ ಅರ್ಜುನ ಸಾಗಿದ್ದಾನೆ. ಮರದ ಅಂಬಾರಿ ಸುಮಾರು 350 ಕೆಜಿ ತೂಕವಿದ್ದು, ಅದರ ಜೊತೆ 300 ಕೆಜಿ ತೂಕದಷ್ಟು ಮರಳು ಮೂಟೆ ಸೇರಿದಂತೆ ಒಟ್ಟು 650 ಕೆಜಿ ತೂಕವನ್ನು ಅರ್ಜುನ ಹೊತ್ತು ಸಾಗಿದ್ದಾನೆ. ದಸರಾ ದಿನದಂದು ಗಜಪಡೆ ಹೊತ್ತು ಸಾಗುವ ಚಿನ್ನದ ಅಂಬಾರಿ 750 ಕೆಜಿ ಇದೆ.

    https://www.youtube.com/watch?v=ghh6dSjQhQU

  • ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಗಜಪಡೆಯಿಂದ ತಾಲೀಮು ಆರಂಭ

    ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಗಜಪಡೆಯಿಂದ ತಾಲೀಮು ಆರಂಭ

    ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ 2019ಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತದೆ. ಇಂದು ಬೆಳ್ಳಂಬೆಳಗ್ಗೆಯೇ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಗಜಪಡೆ ತಾಲೀಮು ಆರಂಭಿಸಿದೆ.

    ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ಈಶ್ವರ, ವಿಜಯಾ, ವರಲಕ್ಷ್ಮಿ ಸೇರಿ ಎಲ್ಲ ಆರು ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಿವೆ. ಸದ್ಯ ಆನೆಗಳು ಬರಿ ಮೈ ನಡಿಗೆ ತಾಲೀಮು ಆರಂಭಿಸಿದ್ದು, ಜಂಬೂ ಸವಾರಿಗಾಗಿ ಗಜಪಡೆಗೆ ತರಬೇತಿ ನೀಡಲಾಗುತ್ತಿದೆ. ಮೈಸೂರು ಅರಮನೆಯಿಂದ ಗಜಪಡೆ ತಾಲೀಮು ಆರಂಭಿಸಿದ್ದು, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆಗಳಲ್ಲಿ ಸಾಗಿ ಬಳಿಕ ಅರಮನೆ ಸೇರಲಿದೆ.

    ಮಂಗಳವಾರ ನಗರದ ದೇವರಾಜ ಮೊಹಲ್ಲಾದ ಸಾಯಿರಾಮ್ & ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಗಜಪಡೆಯ ತೂಕ ಪರಿಶೀಲನೆ ನಡೆದಿದೆ. ಗಜಪಡೆಯ ಕ್ಯಾಪ್ಟನ್ ಅರ್ಜುನ- 5,800 ಕೆ.ಜಿ ಇದ್ದರೆ, ವರಲಕ್ಷ್ಮಿ- 3,510 ಕೆ.ಜಿ, ಈಶ್ವರ- 3,995 ಕೆ.ಜಿ, ಧನಂಜಯ- 4,460 ಕೆ.ಜಿ, ವಿಜಯ- 2,825 ಕೆ.ಜಿ ಹಾಗೂ ಅಭಿಮನ್ಯು- 5,145 ಕೆ.ಜಿ ಇದೆ.

    ಸೋಮವಾರ ಮೈಸೂರು ಅರಮನೆಗೆ ಮೊದಲ ತಂಡದ ಆರು ಆನೆಗಳು ಆಗಮಿಸಿದ್ದವು. ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಆನೆಗಳನ್ನು ಬರ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಗಜಪಡೆಗೆ ಪೂಜೆ ನಡೆದಿತ್ತು. ಇನ್ನೂ ಒಂದೂವರೆ ತಿಂಗಳ ಕಾಲ ಆನೆಗಳು ಅರಮನೆಯಲ್ಲೇ ಉಳಿಯಲಿದೆ.

  • ಮಹಾಲಯ ಅಮವಾಸ್ಯೆ ಎಫೆಕ್ಟ್ – ದಸರಾ ಗಜಪಡೆ ತಾಲೀಮು ರದ್ದು

    ಮಹಾಲಯ ಅಮವಾಸ್ಯೆ ಎಫೆಕ್ಟ್ – ದಸರಾ ಗಜಪಡೆ ತಾಲೀಮು ರದ್ದು

    ಮೈಸೂರು: ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿತ್ತು. ಆದರೆ ಇಂದು ಮಹಾಲಯ ಅಮವಾಸ್ಯೆಯ ಹಿನ್ನೆಲೆಯಲ್ಲಿ ಗಜಪಡೆಯ ತಾಲೀಮು ರದ್ದಾಗಿದೆ.

    ಅರಮನೆ ಆವರಣದ ಒಳಗೆಯೇ ಆನೆಗಳು ವಿಶ್ರಾಂತಿ ಪಡೆಯುತ್ತಿವೆ. ಅರಮನೆ ಆವರಣದ ಒಳಗೆ ಒಂದೆರಡು ಸುತ್ತು ವಾಕಿಂಗ್ ಮಾಡಿದ ಗಜಪಡೆ ನಂತರ ವಿಶ್ರಾಂತಿಗೆ ಜಾರಿವೆ. ಅಮವಾಸ್ಯೆ ಆಗಿರುವ ಕಾರಣ ಅರಮನೆ ಆವರಣದಿಂದ ಆನೆಗಳನ್ನು ಹೊರಕ್ಕೆ ಕರೆದೊಯ್ದರೆ ಏನಾದರೂ ಅನಾಹುತ ಆಗಬಹುದೆಂಬ ಭಯ ಆನೆಯ ಮಾವುತರು ಮತ್ತು ಕಾವಾಡಿಗಳದ್ದು. ಈ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲೇ ಗಜಪಡೆಗೆ ತಾಲೀಮು ನೀಡಲಾಯಿತು. ಕಳೆದ ಅಮಾವಾಸ್ಯೆಯಂದು ಕೂಡ ದಸರಾ ಗಜಪಡೆಯ ತಾಲೀಮನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿತ್ತು.

    ಪ್ರತಿದಿನ ಅರಮನೆಯಿಂದ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್‍ನಗರ ಬಂಬೂಬಜಾರ್, ಹೈವೇ ವೃತ್ತದ ಮೂಲಕ ಬನ್ನಿಮಂಟಪ ತಲುಪುತ್ತಿದ್ದವು. ಬಳಿಕ ಅದೇ ಮಾರ್ಗವಾಗಿ ಆನೆಗಳು ಮೈಸೂರು ಅರಮನೆಗೆ ವಾಪಸ್ಸಾಗುತ್ತಿದ್ದವು. ಆದರೆ ಇಂದು ಅಮಾವಾಸ್ಯೆಯಾಗಿದ್ದರಿಂದ ತಾಲೀಮು ನಡೆಯುತ್ತಿಲ್ಲ. ಪ್ರತಿ ಅಮಾವಾಸ್ಯೆಯ ಸಮಯದಲ್ಲಿ ಆನೆಗಳಿಗೆ ತಾಲೀಮು ನಡೆಸುವುದಿಲ್ಲ.

    ತಾಲೀಮು ಏಕೆ?
    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಯಾಪ್ಟನ್ ಅರ್ಜುನನಿಗೆ ಇಂದು ಮರದ ಅಂಬಾರಿ ಹೊರಿಸಿ ತಾಲೀಮು!

    ಕ್ಯಾಪ್ಟನ್ ಅರ್ಜುನನಿಗೆ ಇಂದು ಮರದ ಅಂಬಾರಿ ಹೊರಿಸಿ ತಾಲೀಮು!

    ಮೈಸೂರು: ಮೈಸೂರು ದಸರಾ ಮಹೋತ್ಸವ 2018 ಕ್ಕೆ ದಿನಗಣನೆ ಶುರುವಾಗಿದ್ದು, ಇಂದು ಕ್ಯಾಪ್ಟನ್ ಅರ್ಜುನನಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತಿದೆ.

    ಜಂಬೂ ಸವಾರಿ ಮೆರವಣಿಗೆ ದಿನ ಚಿನ್ನದ ಅಂಬಾರಿ ಕಟ್ಟುವ ಕಾರಣ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತಿದೆ. ಪೂಜೆ ಬಳಿಕ ಅರ್ಜುನನಿಗೆ ಮರದ ಅಂಬಾರಿಯನ್ನು ಮಾವುತರು ಕಟ್ಟಿದರು. ಸುಮಾರು 280 ಕೆ.ಜಿ ತೂಕದ ಮರದ ಅಂಬಾರಿಯ ಜೊತೆಗೆ, 350 ರಿಂದ 400 ಕೆ.ಜಿ ಮರಳಿನ ಚೀಲ ಹೊರಿಸಿ ತಾಲೀಮು ನಡೆಸಿದರು. ಒಟ್ಟು ಅರ್ಜುನ 650 ರಿಂದ 700 ಕೆ.ಜಿ ಭಾರ ಹೊತ್ತು ಸಾಗಿದನು.

    ಮಂಗಳವಾರ ಮಹತ್ಮಾ ಗಾಂಧೀಜಿ ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಭಾರ ಹೊರಿಸದೆ ಆನೆಗಳು ಬರಿ ಮೈಯಲ್ಲಿ ತಾಲೀಮು ನಡೆಸಿದ್ದವು. ಈವರೆಗೂ 400 ರಿಂದ 500 ಕೆಜಿ ತೂಕದ ಭಾರ ಹೊತ್ತು ತಾಲೀಮು ನಡೆಸುತ್ತಿದ್ದ ಆನೆಗಳು, ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಹಿಂಸೆ ದೃಷ್ಟಿಯಿಂದ ಆನೆಗೆ ಭಾರ ಹೊರಿಸದೆ ತಾಲೀಮು ನಡೆಸಲಾಗಿತ್ತು.

    ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಗಾಂಧಿ ಜಯಂತಿ ಇದ್ದರೆ ಭಾರವಿಲ್ಲದೇ ತಾಲೀಮು ನೀಡುವ ಅಧಿಕಾರಿಗಳು, ಗಾಂಧೀಜಿಗೆ ಗೌರವ ಸಲ್ಲಿಸುವ ಸಲುವಾಗಿ ಖಾಲಿ ಮೈಯಲ್ಲಿ ಭಾರವಿಲ್ಲದೆ ಅರಮನೆಯಿಂದ ಬನ್ನಿಮಂಟಪದವರೆಗೆ ಆನೆಗಳು ಸಾಗಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಂಧೀಜಿ ಜನ್ಮದಿನ- ದಸರಾ ಗಜಪಡೆಗೆ ಇಂದು ಭಾರವಿಲ್ಲದೆ ತಾಲೀಮು!

    ಗಾಂಧೀಜಿ ಜನ್ಮದಿನ- ದಸರಾ ಗಜಪಡೆಗೆ ಇಂದು ಭಾರವಿಲ್ಲದೆ ತಾಲೀಮು!

    ಮೈಸೂರು: ಮಹತ್ಮಾ ಗಾಂಧೀಜಿ ಅವರ ಜನ್ಮದಿನವಾದ ಹಿನ್ನೆಲೆಯಲ್ಲಿ ಇಂದು ದಸರಾ ಗಜಪಡೆಗಳಿಗೆ ಭಾರವಿಲ್ಲದೆ ತಾಲೀಮು ನಡೆಸಲಾಗುತ್ತಿದೆ.

    ಗಾಂಧಿ ಜಯಂತಿ ಆದ್ದರಿಂದ ಭಾರ ಹೊರಿಸದೆ ಆನೆಗಳು ಬರಿ ಮೈಯಲ್ಲಿ ತಾಲೀಮು ನಡೆಸಿದವು. ಈವರೆಗೂ 400 ರಿಂದ 500 ಕೆಜಿ ತೂಕದ ಭಾರ ಹೊತ್ತು ತಾಲೀಮು ನಡೆಸುತ್ತಿದ್ದ ಆನೆಗಳು, ಇಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಹಿಂಸೆ ದೃಷ್ಟಿಯಿಂದ ಆನೆಗೆ ಭಾರ ಹೊರಿಸದೆ ತಾಲೀಮು ನಡೆಸಲಾಗುತ್ತಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಗಾಂಧಿ ಜಯಂತಿ ಇದ್ದರೆ ಭಾರವಿಲ್ಲದೆ ತಾಲೀಮು ನೀಡುವ ಅಧಿಕಾರಿಗಳು, ಗಾಂಧೀಜಿಗೆ ಗೌರವ ಸಲ್ಲಿಸುವ ಸಲುವಾಗಿ ಖಾಲಿ ಮೈಯಲ್ಲಿ ಭಾರವಿಲ್ಲದೆ ಅರಮನೆಯಿಂದ ಬನ್ನಿಮಂಟಪದವರೆಗೆ ಆನೆಗಳು ಸಾಗಿದವು.

    ಈ ಮೊದಲು ಧನಂಜಯ ಆನೆಗೆ ಭಾರ ಹೊರುವ ತಾಲೀಮು ನೀಡಲಾಗಿತ್ತು. ಧನಂಜಯನ ಬೆನ್ನಿಗೆ ಸುಮಾರು 300 ಕೆ.ಜಿ. ತೂಕದ ಭಾರವನ್ನು ಹೊರಿಸಲಾಗುತ್ತಿತ್ತು. ಅರ್ಜುನ ಆನೆಗೂ ಮರಳು ಮೂಟೆ ಹೊತ್ತುಕೊಟ್ಟು ತಾಲೀಮು ನಡೆಸಲಾಗಿತ್ತು. ಅರಣ್ಯ ಇಲಾಖೆ ಅಂಬಾರಿ ಹೊರಲು ಅರ್ಜುನ, ಧನಂಜಯ, ಬಲರಾಮನಿಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದರು.

    ತಾಲೀಮು ಏಕೆ?
    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ: ಏನಿದು ಸಿಡಿಮದ್ದು ಕಾರ್ಯಕ್ರಮ? ಹೇಗೆ ಮಾಡಲಾಗುತ್ತದೆ?

    ಮೈಸೂರು ದಸರಾ: ಏನಿದು ಸಿಡಿಮದ್ದು ಕಾರ್ಯಕ್ರಮ? ಹೇಗೆ ಮಾಡಲಾಗುತ್ತದೆ?

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಿಡಿಮದ್ದಿನ ಸದ್ದು ಜೋರಾಗಿತ್ತು. ಜನರು ಮಾತ್ರವಲ್ಲದೆ ಅರಮನೆ ಆವರಣದಲ್ಲಿ ನಿಂತಿದ್ದ ಗಜಪಡೆ, ಅಶ್ವರೋಹಿದಳದ ಕುದುರೆಗಳು ಸಹ ನಿಂತಿದ್ದ ಜಾಗದಿಂದ ಚದುರಿದವು. ದಸರೆಯ ವಿಜಯದ ಸಂಕೇತವಾದ ಸಿಡಿಮದ್ದು ಕಾರ್ಯಕ್ರಮದ ಪೂರ್ವ ತಯಾರಿ ನಡೆಸಲಾಯಿತು.

    ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಗಜಪಡೆಗೆ ಭಾರ ಹೊರುವ ತಾಲೀಮು ನಡೆಯುತ್ತಿದೆ. ಈ ಮಧ್ಯೆ ಇಂದು ದಸರಾ ಗಜಪಡೆಗೆ ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಫಿರಂಗಿಗಳ ಸಿಡಿಮದ್ದು ತಾಲೀಮು ನಡೆಯಿತು. ಈ ತಾಲೀಮಿನಲ್ಲಿ ಕ್ಯಾಪ್ಟನ್ ಅರ್ಜುನ ನೇತೃತ್ವದ 12 ಆನೆಗಳು, 12 ಅಶ್ವಗಳು ಭಾಗಿಯಾಗಿತ್ತು.

    ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ನೇತೃತ್ವದಲ್ಲಿ 30 ಮಂದಿ ಸಿಎಆರ್ ಸಿಬ್ಬಂದಿಗಳು, ಮೂರು ಫಿರಂಗಿ ಗಾಡಿಗಳಲ್ಲಿ ಸಿಡಿಮದ್ದು ತಾಲೀಮು ನಡೆಸಿದರು. ಅಲ್ಲದೆ ಇನ್ನೂ 2 ಬಾರಿ ಈ ತಾಲೀಮು ನಡೆಯಲಿದ್ದು, ಕಳೆದ ಬಾರಿಗಿಂತ ಈ ಬಾರಿ ತಾಲೀಮು ಚೆನ್ನಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತರು ತಮ್ಮ ಅಭಿಪ್ರಯಾವನ್ನು ಹಂಚಿಕೊಂಡರು.

    ಜಂಬೂ ಸವಾರಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆಯಲ್ಲಿ 21 ಕುಶಾಲತೋಪು ಸಿಡಿಸಲಿದ್ದು ಆ ವೇಳೆಯಲ್ಲಿ ಶಬ್ದಕ್ಕೆ ಬೆದರದಂತೆ ಆನೆಗಳು ಹಾಗೂ ಕುದುರೆಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಈ ತರಬೇತಿ ನೀಡಲಾಗಿದ್ದು, ಇಂದು ನಡೆದ ಸಿಡಿಮದ್ದು ತಾಲೀಮಿನಲ್ಲಿ ದ್ರೋಣ, ಚೈತ್ರ, ಧನಂಜಯ ಹಾಗೂ ಹರ್ಷ ಆನೆಗಳು ಸ್ವಲ್ಪ ಬೆದರಿವೆ.

    ಇಂದು ಮೊದಲ ಹಂತದಲ್ಲಿ 6 ಸುತ್ತುಗಳಲ್ಲಿ ಸಿಡಿಮದ್ದು ಸಿಡಿಸಿದ್ದು, ಪ್ರತಿ ಸಿಡಿತದ ಶಬ್ಧದಲ್ಲೂ ನಾಲ್ಕು ಆನೆಗಳು ಬೆದರಿದವು. ಈ ವೇಳೆಯಲ್ಲಿ ಮಾವುತರು ಬೆದರಿದ ನಾಲ್ಕು ಆನೆಗಳನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ತಾಲೀಮಿನ ವೇಳೆ ಆ ಆನೆಗಳು ಹತೋಟಿಗೆ ಬರಲಿದೆ ಎಂದು ಆನೆ ವೈದ್ಯರು ಮಾಹಿತಿ ನೀಡಿದರು.

    ನಾಡ ಹಬ್ಬದ ಯಶಸ್ವಿಗಾಗಿ ಅರಮನೆ ನಗರಿಯಲ್ಲಿ ಸಕಲ ಸಿದ್ದತೆ ನಡೆಯುತ್ತಿದ್ದು, ವಿಜಯದ ಸಂಕೇತವಾಗಿ ಸಿಡಿಸುವ ಸಿಡಿಮದ್ದಿನ ತಾಲೀಮು ಕೂಡ ಇಂದು ಯಶಸ್ವಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಗಜಪಡೆಯ ತಾಲೀಮು ಹಾದಿಯಲ್ಲಿ ಮ್ಯಾಗ್ನೆಟಿಕ್ ರೋಲರ್ ಬಳಕೆ- ಯಾಕೆ?

    ಗಜಪಡೆಯ ತಾಲೀಮು ಹಾದಿಯಲ್ಲಿ ಮ್ಯಾಗ್ನೆಟಿಕ್ ರೋಲರ್ ಬಳಕೆ- ಯಾಕೆ?

    ಮೈಸೂರು: ದಸರಾಗಾಗಿ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಲಾಗುತ್ತಿದೆ. ಗಜಪಡೆ ತಾಲೀಮು ನಡೆಸುವ ಹಾದಿಯಲ್ಲಿ ಅವುಗಳ ಪಾದಕ್ಕೆ ಅಪಾಯ ಉಂಟು ಮಾಡುವ ಯಾವ ವಸ್ತುಗಳು ಇರದಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಮ್ಯಾಗ್ನೆಟಿಕ್ ರೋಲರ್ ಬಳಕೆಯಾಗುತ್ತಿದೆ.

    ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯೂ ಪ್ರತಿ ದಿನ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ಮಾಡುತ್ತವೆ. ಈ ಹಾದಿಯಲ್ಲಿ ಸಾಮಾನ್ಯವಾಗಿ ಕಬ್ಬಿಣದ ಚೂರು, ಲೋಹದ ತುಣಕುಗಳು, ಗ್ಲಾಸ್ ಚೂರುಗಳು ಬಿದ್ದಿರುತ್ತವೆ. ಆನೆಗಳ ಪಾದಕ್ಕೆ ಇವು ಚುಚ್ಚಿದರೆ ಅವುಗಳ ಪಾದಕ್ಕೆ ಅಪಾಯ ಖಚಿತ.

    ರಸ್ತೆಯ ಕಸ ಗುಡಿಸಿದರೂ ಈ ಲೋಹದ ಚೂರುಗಳು ರಸ್ತೆಯಲ್ಲೇ ಇರುತ್ತವೆ. ಹೀಗಾಗಿ ಲೋಹದ ಚೂರುಗಳು ಇರದಂತೆ ಮಾಡಲು ಮ್ಯಾಗ್ನೆಟಿಕ್ ರೋಲರ್ ಬಳಸಲಾಗುತ್ತಿದೆ. ಗಜಪಡೆಯ ಮುಂದೆ ಸಾರಥಿಯಂತೆ ಮಾಗ್ನೆಟಿಕ್ ರೋಲರ್ ಸಾಗುತ್ತದೆ. ಆನೆಗಳು ಸಾಗುವ ಮುನ್ನ ಅವುಗಳ ಮುಂಭಾಗದಲ್ಲಿ ಈ ರೋಲರ್ ಸಾಗುತ್ತದೆ. ಈ ಮ್ಯಾಗ್ನೆಟಿಕ್ ರೋಲರ್ ಕಬ್ಬಿಣದ ಚೂರು, ಗ್ಲಾಸ್ ಚೂರು, ಲೋಹದ ತುಣಕುಗಳನ್ನು ಸೆಳೆದು ಕೊಳ್ಳತ್ತದೆ. ಆಗ ಆನೆಗಳು ಸಾಗುವ ಹಾದಿ ಲೋಹದ ತುಂಡುಗಳಿಂದ ಮುಕ್ತವಾಗುತ್ತೆ. ಇದರಿಂದ ಆನೆಗಳ ಪಾದಕ್ಕೆ ತೊಂದರೆ ಆಗುವುದು ತಪ್ಪಿದಂತಾಗುತ್ತಿದೆ. ದಿನದ ಎರಡು ಬಾರಿಯ ತಾಲೀಮಿನಲ್ಲೂ ಈ ಮ್ಯಾಗ್ನೆಟಿಕ್ ರೋಲರ್ ಬಳಸಲಾಗುತ್ತಿದೆ. ಮೊದಲು ಜಂಬೂ ಸವಾರಿ ದಿನ ಮಾತ್ರ ಕೈಗಳಿಂದ ಲೋಹದ ಚೂರುಗಳನ್ನು ಸ್ವಚ್ಚ ಮಾಡಲಾಗುತ್ತಿತ್ತು. ಈಗ ಮೈಸೂರು ಭಾಗದ ಸಂತೋಷ್ ಮತ್ತು ವಿಜಯ್ ಈ ಮ್ಯಾಗ್ನೆಟಿಕ್ ರೋಲರ್ ತಯಾರಿಸಿ ಅರಣ್ಯ ಇಲಾಖೆಗೆ ನೀಡಿದ್ದಾರೆ.

    ಈ ರೋಲರ್ ನಲ್ಲಿ ಹೆಚ್ಚಿನ ವಿದ್ಯುತ್ ಕಾಂತೀಯ ಮ್ಯಾಗ್ನೆಟಿಕ್ ಬಳಕೆ ಮಾಡಲಾಗಿದೆ. ಇದರಿಂದ ರಸ್ತೆಯಲ್ಲಿ ಬಂದಿರುವ ಎಲ್ಲಾ ರೂಪದ ಲೋಹದ ತುಂಡುಗಳನ್ನು ಅದು ಸೆಳೆದುಕೊಳ್ಳುತ್ತದೆ. ಈ ರೋಲರ್ ನಿಜಕ್ಕೂ ಆನೆಗಳ ಪಾದದ ಸುರಕ್ಷತೆ ಹೆಚ್ಚಿನ ಸಹಕಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ ಗಜಪಡೆ ತಾಲೀಮಿಗೆ ಬ್ರೇಕ್!

    ಮೈಸೂರು ದಸರಾ ಗಜಪಡೆ ತಾಲೀಮಿಗೆ ಬ್ರೇಕ್!

    ಮೈಸೂರು: ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ದಸರಾ ಗಜಪಡೆಗೂ ಅಮಾವಾಸ್ಯೆ ಬಿಸಿ ಮುಟ್ಟಿದ್ದು, ಗಜಪಡೆ ತಾಲೀಮಿಗೆ ಬ್ರೇಕ್ ಬಿದ್ದಿದೆ.

    ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿತ್ತು. ಪ್ರತಿದಿನ ಅರಮನೆಯಿಂದ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್‍ನಗರ ಬಂಬೂಬಜಾರ್, ಹೈವೆ ವೃತ್ತದ ಮೂಲಕ ಬನ್ನಿಮಂಟಪ ತಲುಪುತ್ತಿದ್ದವು. ಬಳಿಕ ಅದೇ ಮಾರ್ಗವಾಗಿ ಆನೆಗಳು ಮೈಸೂರು ಅರಮನೆಗೆ ವಾಪಸ್ಸಾಗುತ್ತಿದ್ದವು. ಆದರೆ ಇಂದು ಅಮಾವಾಸ್ಯೆಯಾಗಿದ್ದರಿಂದ ತಾಲೀಮು ನಡೆಯುತ್ತಿಲ್ಲ. ಪ್ರತಿ ಅಮಾವಾಸ್ಯೆ ಬಂದರೂ ಆನೆಗಳಿಗೆ ತಾಲೀಮು ನಡೆಸುವುದಿಲ್ಲ. ಇದನ್ನೂ ಓದಿ: ಮೈಸೂರೊಳಗೆ ದಸರಾ ಆನೆ ಟೀಂ ವಾಕಿಂಗ್- ವಿಡಿಯೋ ನೋಡಿ

    ಮೈಸೂರಿನ ಒಳಗೆ 40 ದಿನ ಗಜಪಡೆಯೂ ವಾಕಿಂಗ್ ಮಾಡುತ್ತದೆ. ದಸರಾ ತಾಲೀಮು ರೂಪದ ವಾಕಿಂಗ್ ಅನ್ನು ಗಜಪಡೆಯೂ ಬೆಳಗ್ಗೆ ಮತ್ತು ಸಂಜೆ ಮಾಡಲಿವೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ವಾಕಿಂಗ್ ಪ್ರತಿದಿನ ಅರಮನೆಯ ಆವರಣದಿಂದ ಆರಂಭವಾಗುತ್ತದೆ.

    ತಾಲೀಮು ಏಕೆ?
    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾ ಜಂಬೂ ಸವಾರಿಗೆ ಆನೆಗಳ ಭರ್ಜರಿ ತಾಲೀಮು

    ದಸರಾ ಜಂಬೂ ಸವಾರಿಗೆ ಆನೆಗಳ ಭರ್ಜರಿ ತಾಲೀಮು

    ಮೈಸೂರು: ವಿಶ್ವವಿಖ್ಯಾತ ದಸರಾ ಹಬ್ಬ ಈಗಾಗಲೇ ಶುರುವಾಗಿದ್ದು, ಅರಮನೆ ಮುಂದೆ ಹಲವು ತಯಾರಿಗಳು ನಡೆಯುತ್ತಿವೆ. ಅದರಲ್ಲಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಇನ್ನು ನಾಲ್ಕು ದಿನಗಳು ಬಾಕಿ ಇರುವಾಗಲೇ ಇಂದು ಅರಮನೆ ಮೈದಾನದಲ್ಲಿ ಆನೆಗಳ ತಾಲೀಮು ಭರ್ಜರಿಯಾಗಿ ನಡೆಯಿತು.

    ಮೈಸೂರಿನ ಎಸಿಪಿ ಶೈಲೇಂದ್ರ ಮತ್ತು ಇನ್ಸ್ ಪೆಕ್ಟರ್ ಚಂದ್ರಶೇಖರ್ ಅಂಬಾರಿ ಹೋರುವ ಅರ್ಜುನನಿಗೆ ಪುಷ್ಪ ಎರಚುವ ಮೂಲಕ ಆನೆಗಳ ತಾಲಿಮಿಗೆ ಚಾಲನೆ ನೀಡಿದರು. ವಿಜಯದಶಮಿಯಂದು ಅಂಬಾರಿ ಹೊರುವ ಅರ್ಜುನ ಮತ್ತು ಸಾಥ್ ನೀಡುವ ಆನೆಗಳಿಗೆ ಸರತಿ ಸಾಲಿನ ಪೂರ್ವನಿಗದಿಗಾಗಿ ಇಂದು ತಾಲೀಮು ಕಾರ್ಯ ನಡೆಯಿತು. ಇಂದು ನಿಗದಿಯಾಗಿದ್ದ ಮರದ ಅಂಬಾರಿ ಹೋರುವ ತಾಲಿಮನ್ನು ರದ್ದುಗೊಳಿಸಲಾಯಿತು. ಅಂಬಾರಿ ನಡೆಯುವ ಸಮಯದಲ್ಲಿ ಯಾವುದೇ ರೀತಿಯ ಅಡಚಣೆಗಳು ನಡೆಯಬಾರದು ಎಂಬ ದೃಷ್ಟಿಯಿಂದ ಈ ತಾಲೀಮು ಕಾರ್ಯ ನಡೆಯುತ್ತದೆ.

    ವಿಜಯ ದಶಮಿಯಂದು ಅಂಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಲಿದ್ದಾರೆ. ಇನ್ನೂ ತಾಲೀಮಿನ ವೇಳೆ ಕೆ.ಎಸ್.ಆರ್.ಪಿ, ಡಿ.ಎ.ಆರ್, ಸಿ.ಎ.ಆರ್, ಅಶ್ವರೋಹಿ ದಳ, ಹೋಮ್ ಗಾರ್ಡ್ ಸಿಬ್ಬಂದಿಗಳ ಪೂರ್ವ ಪಥಸಂಚಲನವೂ ಕೂಡ ನಡೆಯಿತು.

  • ಕುದುರೆ ಸವಾರಿ ಮಾಡಿಕೊಂಡೇ ಜನರ ಸಮಸ್ಯೆ ಆಲಿಸಿದ ಮೈಸೂರು ಮೇಯರ್

    ಕುದುರೆ ಸವಾರಿ ಮಾಡಿಕೊಂಡೇ ಜನರ ಸಮಸ್ಯೆ ಆಲಿಸಿದ ಮೈಸೂರು ಮೇಯರ್

    ಮೈಸೂರು: ನಗರದಲ್ಲಿ ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಎಂ.ಜೆ ರವಿಕುಮಾರ್ ಕುದುರೆ ಸವಾರಿ ಮಾಡುತ್ತಾ ನಗರದ ಸಮಸ್ಯೆ ಆಲಿಸಿದರು.

    ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಮೇಯರ್ ಕುದುರೆ ಓಡಿಸುವ ತರಬೇತಿ ಪಡೆಯುತ್ತಿದ್ದಾರೆ. ಜಂಬೂಸವಾರಿ ಮೆರವಣಿಗೆಯಲ್ಲಿ ಮೇಯರ್ ಹಾಗೂ ಜಿ.ಪಂ ಅಧ್ಯಕ್ಷರು ಭಾಗವಹಿಸುವುದು ಸಂಪ್ರದಾಯವಾಗಿದೆ. ಇದಕ್ಕಾಗಿ ಮೇಯರ್ ಕುದುರೆ ಸವಾರಿ ತಾಲೀಮು ನಡೆಸುತ್ತಿದ್ದಾರೆ. ಹೀಗೆ ಕುದುರೆ ಸವಾರಿ ಮಾಡುತ್ತಾ ನಗರ ಪ್ರದಕ್ಷಿಣೆ ಕೂಡ ಮಾಡಿದರು.

    ಮೈಸೂರಿನ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಪರಿಶೀಲನೆ ನಡೆಸಿ ಫುಟ್‍ಪಾತ್ ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಕುದುರೆ ಮೇಲೆ ಕುಳಿತು ವಾಕಿ ಟಾಕಿಯಲ್ಲಿ ಅಧಿಕಾರಿಗಳಿಗೂ ಖಡಕ್ ಎಚ್ಚರಿಕೆ ನೀಡಿದರು. ಕಾರಿನಲ್ಲಿ ಓಡಾಡುತ್ತಾ ನಗರ ಪ್ರದಕ್ಷಿಣೆ ಮಾಡುತ್ತಿದ್ದ ಮೇಯರ್ ಹೀಗೆ ಕುದುರೆಯಲ್ಲಿ ಓಡಾಡುತ್ತಾ ಜನರ ಸಮಸ್ಯೆ ಆಲಿಸಿದ್ದನ್ನು ಜನರು ಕುತೂಹಲದಿಂದ ನೋಡುತ್ತಿದ್ದರು.