Tag: ತಾಯಂದಿರ ದಿನ

  • ಮಗಳನ್ನು ಸಂತೈಸಲು ‘ತಾಯಿ’ಯಾಗಿ ಶಾಲೆಗೆ ಬಂದ ತಂದೆ- ಪುತ್ರಿಯ ರಿಯಾಕ್ಷನ್ ಹೀಗಿತ್ತು..

    ಮಗಳನ್ನು ಸಂತೈಸಲು ‘ತಾಯಿ’ಯಾಗಿ ಶಾಲೆಗೆ ಬಂದ ತಂದೆ- ಪುತ್ರಿಯ ರಿಯಾಕ್ಷನ್ ಹೀಗಿತ್ತು..

    ಬ್ಯಾಂಕಾಕ್: ನಮ್ಮಲ್ಲಿ ಅನೇಕ ಮಂದಿ ಸಿಂಗಲ್ ಪೇರೆಂಟ್‍ಗಳು (Single Parent) ಹಲವಾರು ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ತಮ್ಮ ಮಕ್ಕಳಿಗೆ ತಂದೆ ಮತು ತಾಯಿ ಇಬ್ಬರ ಪ್ರೀತಿಯೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಪರದಾಡುತ್ತಾರೆ. ಮಕ್ಕಳಿಗೆ ತಂದೆ ಅಥವಾ ತಾಯಿ ಇಲ್ಲ ಎನ್ನುವ ಕೊರಗು ಕಿಂಚಿತ್ತೂ ಕಾಡಬಾರದು ಎಂದು ಸಿಂಗಲ್ ಪೇರೆಂಟ್‍ಗಳು ಹಲವಾರು ಸರ್ಕಸ್ ಮಾಡುತ್ತಾರೆ.

    ಮಗುವಿಗೆ ತಂದೆ ಮತ್ತು ತಾಯಿ ಇಬ್ಬರೂ ಬೇಕು ಎಂದು ನಮ್ಮ ಸಮಾಜ ನಂಬಿರುವುದರಿಂದ, ಒಂಟಿ ಅಪ್ಪಂದಿರು ಹೆಚ್ಚು ‘ತಾಯಿ’ಯಾಗಲು ಪ್ರಯತ್ನಿಸುತ್ತಾರೆ. ಹಾಗೆಯೇ ಒಂಟಿ ತಾಯಂದಿರು ತಮ್ಮ ಮಗುವಿಗೆ ಎರಡೂ ಪ್ರಪಂಚದ ಅತ್ಯುತ್ತಮತೆಯನ್ನು ನೀಡಲು ಕೆಲವು ರೀತಿಯಲ್ಲಿ ಹೆಚ್ಚು ‘ತಂದೆ’ಯಾಗಲು ಪ್ರಯತ್ನಿಸುತ್ತಾರೆ. ಅಂತೆಯೇ ಇದೀಗ ಥೈಲ್ಯಾಂಡ್‍ನಲ್ಲಿ ಕಣ್ಣೀರು ತರಿಸುವಂತಹ ಘಟನೆಯೊಂದು ನಡೆದಿದೆ.

    ಹೌದು. ತಂದೆಯೊಬ್ಬ ‘ತಾಯಂದಿರ ದಿನ’ ದಂದು (Mothers Day) ತನ್ನ ಮಗಳನ್ನು ಸಂತೈಸುವ ಸಲುವಾಗಿ ತಾಯಿಯಂತೆ ಡ್ರೆಸ್ ಮಾಡಿ ಶಾಲೆಗೆ ಬರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಸದ್ಯ ತಂದೆ ಹಾಗೂ ಮಗಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೀಡಿಯೋ ನೋಡಿ ನೆಟ್ಟಿಗರು ಕೂಡ ಒಂದು ಬಾರಿ ಮೌನಕ್ಕೆ ಶರಣಾಗುತ್ತಾರೆ.

    ಏನಿದು ಘಟನೆ..?: 48 ವರ್ಷದ ಪ್ರಚಯ ತದೀಬು ಮಹಿಳೆಯಂತೆ ಬಂದಿರುವ ಸಿಂಗಲ್ ಪೇರೆಂಟ್. ಇವರು ಮದರ್ಸ್ ಡೇ ಅಂದು ಮಗಳ ಶಾಲೆಯಲ್ಲಿ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಗಳಿಗೆ ತಾಯಿಯ ಪ್ರೀತಿಯೂ ಸಿಗಬೇಕು ಎನ್ನು ನಿಟ್ಟಿನಲ್ಲಿ ಅಮ್ಮನ ಧಿರಿಸಿನಲ್ಲಿ ಆಗಮಿಸಿದ್ದಾರೆ. ಮಹಿಳೆಯಂತೆ ಕಾಣಿಸಿಕೊಳ್ಳಲು ಬಟ್ಟೆ, ಉದ್ದನೆಯ ಕೂದಲು ಹಾಗೂ ವಿಗ್ ಧರಿಸಿದ್ದರು. ಶಾಲೆಗೆ ಬಂದ ತದೀಬು, ತನ್ನ ಮಗಳ ಪಕ್ಕ ಬಂದು ಕುಳಿತಿದ್ದಾರೆ. ಈ ವೇಳೆ ತಂದೆಯನ್ನು ಕಂಡು ಅಚ್ಚರಿಗೊಳಗಾದ ಮಗಳು ಕಾಲಿಗೆ ಬಿದ್ದು, ಅಪ್ಪನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾಳೆ.

    ಈ ಎಲ್ಲಾ ದೃಶ್ಯವು ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋವನ್ನು ತದೀಬು ಅವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಇಂದು ತಾಯಂದಿರ ದಿವಗಿದ್ದು, ಹೀಗಾಗಿ ನಾನು ನಿನಗಾಗಿ `ತಾಯಿ’ಯಾಗಬಲ್ಲೆ ಎಂದು ಬರೆದುಕೊಂಡಿದ್ದಾರೆ. ತದೀಬು ಅವರು ವೀಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ಇದು ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ತಂದೆ-ಮಗಳ ಬಾಂಧವ್ಯಕ್ಕೆ ಹಾಗೂ ಮಗಳಿಗೆ ತಾಯಿಯ ಸ್ಥಾನವನ್ನೂ ಕೂಡ ತುಂಬುತ್ತಿರುವ ತಂದೆಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೀರೆ ಹಂಚಿಕೆವಾಗ ನುಕುನುಗ್ಗಲು: ಮಗುವನ್ನು ಎತ್ತಿಕೊಂಡು ಕಾಪಾಡಿ ಎಂದು ಕಿರುಚಾಡಿದ ಮಹಿಳೆ

    ಸೀರೆ ಹಂಚಿಕೆವಾಗ ನುಕುನುಗ್ಗಲು: ಮಗುವನ್ನು ಎತ್ತಿಕೊಂಡು ಕಾಪಾಡಿ ಎಂದು ಕಿರುಚಾಡಿದ ಮಹಿಳೆ

    ಹಾಸನ: ಭಾನುವಾರ ವಿಶ್ವ ತಾಯಂದಿರ ದಿನಾಚರಣೆ ನಡೆಯಿತು. ಈ ದಿನವನ್ನು ಹಾಸನದ ಅರಕಲಗೂಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಿನಿಮಾ ನಟ-ನಟಿಯರು ಭಾಗವಹಿಸಿದ್ರು. ಆದ್ರೆ ಕಾರ್ಯಕ್ರಮದಲ್ಲಿ ಆದ ಸಣ್ಣ ಎಡವಟ್ಟಿನಿಂದ ತಾಯಿ, ಮಗು ಕಣ್ಣೀರಿಡುವಂತಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು.

    ಸುತ್ತಲೂ ಸಾವಿರಾರು ಜನ. ಸಾವಿರಾರು ಜನರ ನೂಕುನುಗ್ಗಲಲ್ಲಿ ನಿಂತ ತಾಯಿಯೊಬ್ಬಳು ತನ್ನ ಮಗುವನ್ನು ಕೈಯಲ್ಲಿ ಎತ್ತಿಹಿಡಿದು ಕೂಗಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಶ್ರೀಧರ್‌ಗೌಡ ಭಾನುವಾರ ವಿಶ್ವ ತಾಯಂದಿರ ದಿನ ಕಾರ್ಯಕ್ರಮ ಆಯೋಜನೆ ಮಾಡಿದ್ರು.

    ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವೆ ಉಮಾಶ್ರೀ, ಚಲನಚಿತ್ರ ನಟಿಯರಾದ ಸಾನ್ವಿ ಶ್ರೀವಾತ್ಸವ್, ಮಿಲನನಾಗರಾಜ್, ಸಾಧುಕೋಕಿಲ ಸೇರಿದಂತೆ ಹಲವರು ಭಾಗವಹಿಸಿದ್ರು. ಈ ಕಾರಣದಿಂದ ಸಹಜವಾಗಿ ಕಾರ್ಯಕ್ರಮದಲ್ಲಿ ಸಾವಿರಾರು ಜನ ತಾಯಂದಿರು ಭಾಗವಹಿಸಿದ್ರು. ಅವರಿಗೆ ಸೀರೆ ಹಂಚಿಕೆ ಮಾಡಲು ಮುಂದಾದಾಗ ಜನಸಂದಣಿಯಲ್ಲಿ ಸಿಲುಕಿಕೊಂಡ ತಾಯಿ-ಮಗು ನರಳಾಡಿದರು. ಇದನ್ನೂ ಓದಿ:  ಕಾಂಗ್ರೆಸ್ ಕಾವೇರಿ, ಮೇಕೆದಾಟು ವಿಚಾರ ತಂದು ತಮಿಳುನಾಡು, ಕರ್ನಾಟಕ ನಡುವೆ ಬಿರುಕು ಮೂಡಿಸಿದೆ: ಅಣ್ಣಾಮಲೈ 

    ಸೀರೆ ಹಂಚಲು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಸೀರೆ ಹಂಚಿಕೆ ವಿಷ್ಯ ತಿಳಿದು ಒಮ್ಮೆಲೆ ಸಾವಿರಾರು ಮಹಿಳೆಯರು ಮುಗಿಬಿದ್ದ ಪರಿಣಾಮ, ಮಧ್ಯದಲ್ಲಿ ಸಿಲುಕಿದ ತಾಯಿ ಹಾಗೂ ಅಲ್ಲೇ ಇದ್ದ ಮಗು ಹೊರಬರಲಾರದೆ ಕಂಗಾಲಾಗಿ ಹೋದ್ರು. ಮಗುವನ್ನು ಹಿಡಿದಿದ್ದವರು ಕೈಮೇಲೆತ್ತಿ ಮಗು ರಕ್ಷಣೆಗೆ ಮುಂದಾದ್ರು. ಈ ಸನ್ನಿವೇಶ ಒಂದು ಕ್ಷಣ ಭಯದ ವಾತಾವರಣವನ್ನೇ ಮೂಡಿಸಿತ್ತು.

    ಅಂತಿಮವಾಗಿ ಗುಂಪಿನಲ್ಲಿ ಸಿಲುಕಿದ್ದವರು ಸೇಫಾಗಿ ಹೊರ ಬಂದಿದ್ದಾರೆ. ಆದರೆ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಿದಾಗ ಆದಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾರ್ಯಕ್ರದಲ್ಲಿ ಇಂತಹ ಅವಾಂತರ ತಪ್ಪಿದ್ದಲ್ಲ ಅಂತಾನೆ ಹೇಳಬಹುದು. ಇದನ್ನೂ ಓದಿ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್

  • ತಾಯಂದಿರ ದಿನವನ್ನು ಏಕೆ ಆಚರಿಸುತ್ತಾರೆ? ಮಹತ್ವ, ಹಿನ್ನೆಲೆ ಏನು?

    ತಾಯಂದಿರ ದಿನವನ್ನು ಏಕೆ ಆಚರಿಸುತ್ತಾರೆ? ಮಹತ್ವ, ಹಿನ್ನೆಲೆ ಏನು?

    ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವಿಲ್ಲ. ತಾಯಿಯ ಪ್ರೀತಿ, ತ್ಯಾಗಕ್ಕೆ ನಾವು ಏನೇ ಮಾಡಿದರೂ ಅದು ಕಡಿಮೆ ಆಗುತ್ತದೆ. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ. ಹಾಗಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ.

    ತಾಯಂದಿರ ದಿನ ಶುರುವಾಗಿದ್ದು ಹೇಗೆ?
    ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.

    2ನೇ ಭಾನುವಾರ ತಾಯಂದಿರ ದಿನ ಏಕೆ ಆಚರಿಸುತ್ತಾರೆ?
    ಮೇ 9, 1914ರಂದು ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.

    ತಾಯಂದಿರ ದಿನ ಏಕೆ ಆಚರಿಸುತ್ತಾರೆ?
    ತಾಯಿಗಾಗಿ ಪ್ರೀತಿ ಹಾಗೂ ಉಡುಗೊರೆ ನೀಡಲು ಯಾವುದೇ ವಿಶೇಷ ದಿನದ ಅಗತ್ಯ ಇಲ್ಲ. ಆದರೂ ಸಹ ತಾಯಂದಿರ ದಿನದಂದು ತಾಯಿಗೆ ಮತ್ತಷ್ಟು ಗೌರವ ನೀಡಲಾಗುತ್ತದೆ. ಈ ದಿನದಂದು ತಾಯಿಗೆ ಸಿಹಿ ಜೊತೆ ಉಡುಗೊರೆ ನೀಡಲಾಗುತ್ತದೆ.

    ಲಂಡನ್‍ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಭಾರತ ಸೇರಿ ಹಲವಾರು ದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಮೇ 12ರಂದು ತಾಯಂದಿರ ದಿನ ಆಚರಿಸಲಾಗುತ್ತದೆ.

  • ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

    ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

    ಬೆಂಗಳೂರು: ಇಂದು ವಿಶ್ವದೆಲ್ಲೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ‘ಅಮ್ಮ ಐ ಲವ್ ಯು’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

    ಅಮ್ಮ ಐ ಲವ್ ಯು ಚಿತ್ರದ ಟೀಸರ್ ಎರಡು ನಿಮಿಷವಿದ್ದು, ಈ ಟೀಸರ್ ನೋಡಿದ ಪ್ರತಿಯೊಬ್ಬರಿಗೂ ತನ್ನ ತಾಯಿಯ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಪ್ರತಿದಿನ ಎಲ್ಲರ ಜೀವನದಲ್ಲಿ ತಾಯಿಯ ಜೊತೆ ನಡೆಯುವ ಸಂಭಾಷಣೆಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ.

    ಅಮ್ಮ ಐ ಲವ್ ಯು ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಗೆ ಧ್ರುವ ಸರ್ಜಾ ತಮ್ಮ ಧ್ವನಿಯನ್ನು ನೀಡಿದ್ದಾರೆ. ಟೀಸರ್ ನಲ್ಲಿ ತಾಯಿಯ ಬಗ್ಗೆ ಹೇಳಲಾಗಿದ್ದು, ತಾಯಿ ನಮಗಾಗಿ ಏನೇನು ಮಾಡುತ್ತಾರೆಂಬುದು ಟೀಸರ್ ನಲ್ಲಿ ಹೇಳಿದ್ದಾರೆ.

    ನಮ್ಮ ಬೇಕಾಗಿರುವ ಚಿಕ್ಕಚಿಕ್ಕ ವಸ್ತುಗಳ ಬಗ್ಗೆ ತಾಯಿಯ ಹತ್ತಿರ ಕೇಳುತ್ತೇವೆ. ಆದರೆ ತಂದೆ ಇದ್ದರೆ ತಾಯಿ ಎಲ್ಲಿ ಎಂದು ಕೇಳುತ್ತೇವೆ. ನಮಗೆ ಬೇಕಾಗಿರುವ ತಿಂಡಿಯನ್ನು ಕೇಳಿದರೆ, ಅವಳಿಗೆ ಏನು ಬೇಕೋ ಅದನ್ನು ಬಿಟ್ಟು, ನಮಗೇನು ಬೇಕೋ ಅದನ್ನು, ಯಾವಾಗ ಬೇಕಾದ್ರೂ ಮಾಡಿಕೊಡುತ್ತಾರೆ ಎಂದು ಟೀಸರ್ ನಲ್ಲಿ ತಿಳಿಸಿದ್ದಾರೆ.

    ಸ್ವೀಪರ್, ಕ್ಲೀನರ್, ಕೀಪರ್, ಶೇಫ್, ವೇಟರ್, ಟೀಚರ್, ಸಂಸ್ಥಾಪಕಿ, ಡೆಕೋರೇಟರ್, ಸ್ಟೋರಿ ರೈಟರ್, ಸಿಂಗರ್, ಆ್ಯಕ್ಟರ್, ಸರ್ಪೋಟರ್, ಮೋಟಿವೇಟರ್ ಎಲ್ಲರಿಗೂ ತಮ್ಮ ಅಮ್ಮ ಆಗಿರುತ್ತಾರೆ. ನಮಗೆ ಏನೇ ಆಗಬೇಕಾದರೂ ನಮಗೆ ನಮ್ಮ ಅಮ್ಮಾನೇ ಆಗಬೇಕು. ತಂದೆ ಆಗಲೂ ಕೆಲವು ಕ್ಷಣ ಸಾಕು, ಆದರೆ ತಾಯಿ ಆಗಲು ಜೀವನಪೂರ್ತಿ ಬೇಕು ಎಂದು ಟೀಸರ್ ನಲ್ಲಿ ತೋರಿಸಿದ್ದಾರೆ.

    ಎಂ ಚೈತನ್ಯ ಈ ಸಿನಿಮಾದ ನಿರ್ದೇಶಕರಾಗಿದ್ದು, ಚಿತ್ರತಂಡ ಈ ಟೀಸರ್ ನನ್ನು ಎಲ್ಲ ತಾಯಂದರಿಗೆ ಅರ್ಪಿಸಿದ್ದಾರೆ. ಈ ಚಿತ್ರ ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದೆ. ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

    https://www.youtube.com/watch?v=SuX3BBVjPbk