Tag: ತಹಾವ್ವೂರ್‌ ರಾಣಾ

  • Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

    Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

    ನವದೆಹಲಿ: ಮುಂಬೈ ದಾಳಿ (Mumbai Attack) ಪ್ರಕರಣ ಉಗ್ರ ತಹವ್ವೂರ್ ರಾಣಾನ (Tahawwur Hussain Rana) ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಆರಂಭಿಸಿದೆ. ಈ ವಿಚಾರಣೆಯ ಸಂದರ್ಭದಲ್ಲಿ ರಾಣಾ ವಿರುದ್ಧ ಸಾಕ್ಷ್ಯ ನುಡಿಯಲು ನಿಗೂಢ ವ್ಯಕ್ತಿಗಳು ಸಾಲುಗಟ್ಟಿ ನಿಂತಿದ್ದಾರೆ ಎಂದು ಎನ್‌ಐಎ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಉಗ್ರ ಡೇವಿಡ್‌ ಹೆಡ್ಲಿ (David Headley) ಅಮೆರಿಕ ಪ್ರಜೆಯಾಗಿದ್ದರೆ ರಾಣಾ ಕೆನಡಾದ (Canada) ಪ್ರಜೆಯಾಗಿದ್ದಾನೆ. ಹೀಗಿದ್ದರೂ ಅವರು ಭಾರತಕ್ಕೆ (India) ಆಗಾಗ ಬರುತ್ತಿದ್ದರು. ಇವರು ಬರುವ ವೇಳೆ ಇವರನ್ನು ಸ್ವೀಕರಿಸಿದ ಮತ್ತು ವಸತಿ ವ್ಯವಸ್ಥೆ ಮಾಡಿದ ವ್ಯಕ್ತಿಗಳು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗುತ್ತಾರೆ. ಇವರು ತಿಳಿಸುವ ಮಾಹಿತಿಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

    ಈ ಮೊದಲೇ ಈ ಸಾಕ್ಷಿಗಳು ಹೇಳಿಕೆ ನೀಡಿದ್ದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಭವಿಷ್ಯದಲ್ಲಿ ಲಷ್ಕರ್-ಎ-ತೈಬಾ (LeT) ಸೇರಿದಂತೆ ಯಾವುದೇ ಉಗ್ರ ಸಂಘಟನೆಯಿಂದ ಇವರಿಗೆ ಸಮಸ್ಯೆಯಾಗದೇ ಇರಲು ನ್ಯಾಯಾಲಯದ ದಾಖಲೆಗಳಲ್ಲಿಯೂ ಸಹ ಈ ವ್ಯಕ್ತಿಗಳ ಗುರುತನ್ನು ಗೌಪ್ಯವಾಗಿಡಲಾಗಿತ್ತು.  ಇದನ್ನೂ ಓದಿ: ರಾಣಾ ಇರೋ ಸೆಲ್‌ಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ – ಕೋಟೆಯಾಗಿ ಬದಲಾದ NIA ಕಚೇರಿ

    ಭಾರತೀಯ ತನಿಖಾಧಿಕಾರಿಗಳು ರಾಣಾನನ್ನು ವಿಚಾರಣೆ ನಡೆಸುತ್ತಿರುವುದು ಇದೇ ಮೊದಲು. ಜೂನ್ 2010 ರಲ್ಲಿ ಎನ್‌ಐಎ ಅಮೆರಿಕದಲ್ಲಿ ರಾಣಾನ ಬಾಲ್ಯ ಸ್ನೇಹಿತ ಡೇವಿಡ್‌  ಹೆಡ್ಲಿಯನ್ನು ವಿಚಾರಣೆ ನಡೆಸಿತ್ತು. ಈ ನಿಗೂಢ ಸಾಕ್ಷಿ ರಾಣಾ ಮತ್ತು ಡೇವಿಡ್‌ ಹೆಡ್ಲಿಯೊಂದಿಗೆ ಸಂಬಂಧ ಹೊಂದಿದ್ದು, ರಾಣಾನ ಪಾತ್ರವನ್ನು ಪತ್ತೆಹಚ್ಚುವಲ್ಲಿ ಸಾಕ್ಷಿಯ ಹೇಳಿಕೆ ಪ್ರಮುಖ ಪಾತ್ರವಹಿಸಲಿದೆ ಮೂಲಗಳು ತಿಳಿಸಿವೆ.

    ಎನ್‌ಐಎ ತನಿಖಾ ವಿವರಗಳ ಪ್ರಕಾರ 2006ರ ವೇಳೆಗೆ ದಾಳಿಯ ಯೋಜನೆ ನಡೆಯುತ್ತಿದ್ದಾಗ, ಹೆಡ್ಲಿ ಮೊದಲು ಎಲ್‌ಇಟಿ ನಾಯಕರು ಮತ್ತು ಇತರ ಸಹ ಸಂಚುಕೋರರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದ. ಈ ವೇಳೆ ಆತನಿಗೆ ತಾಜ್ ಮಹಲ್ ಹೋಟೆಲ್ ಸೇರಿದಂತೆ ಮುಂಬೈನ ಸಾಮಾನ್ಯ ವಿಡಿಯೋಗಳನ್ನು ತೆಗೆದುಕೊಂಡು ಬರುವಂತೆ ಸೂಚನೆ ಸಿಕ್ಕಿತ್ತು.

    ಈ ಸೂಚನೆಯಂತೆ ಸೆಪ್ಟೆಂಬರ್ 2006 ರಲ್ಲಿ ಹೆಡ್ಲಿ ಭಾರತಕ್ಕೆ ಆಗಮಿಸಿದ್ದ ಮತ್ತು ಪಾಕಿಸ್ತಾನ ಉಗ್ರರು ಕೇಳಿದ್ದ ವಿಡಿಯೋಗಳನ್ನು ಚಿತ್ರೀಕರಿಸಿದ್ದ. ಈ ಭೇಟಿಯ ಸಮಯದಲ್ಲಿ ರಾಣಾನ ಆಪ್ತ ವ್ಯಕ್ತಿಯೊಬ್ಬರು ಹೆಡ್ಲಿಯನ್ನು ಸ್ವಾಗತಿಸಿದ್ದರು. ಆ ವ್ಯಕ್ತಿಗೆ ರಾಣಾನಿಂದ ಕರೆ ಬಂದಿತ್ತು. ಈ ಕರೆಯ ನಂತರ ಆ ವ್ಯಕ್ತಿ ಹೆಡ್ಲಿ ಮತ್ತು ಇತರ ಇತರ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದ್ದರು.

    ಮುಂಬೈನಲ್ಲಿರುವ ರಾಣಾನ ವಲಸೆ ಕಾನೂನು ಕಚೇರಿಯೊಂದಿಗೆ ಸಂಬಂಧ ಹೊಂದಿದ್ದ ಇತರ ವ್ಯಕ್ತಿಗಳನ್ನು ಸಹ ಎನ್‌ಐಎ ಈ ಬಾರಿ ಪ್ರಶ್ನಿಸಲಿದೆ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    ರಾಣಾ ಶೀಘ್ರದಲ್ಲೇ ಸಾಕ್ಷಿಯೊಂದಿಗೆ ಭಾರತದಲ್ಲಿನ ಆತನ ಸಂಪರ್ಕಗಳು ಮತ್ತು ಹೆಡ್ಲಿ ಭೇಟಿ ನೀಡಿದ ಸ್ಥಳಗಳು ಮತ್ತು 2006 ಮತ್ತು 2009 ರ ನಡುವೆ ಭಾರತಕ್ಕೆ ಹಲವಾರು ಬಾರಿ ಭೇಟಿ ನೀಡಿದಾಗ ಆತ ಯಾರನ್ನು ಸಂಪರ್ಕ ಮಾಡಿದ್ದ? ಆ ವ್ಯಕ್ತಿಗಳನ್ನೂ ಎನ್‌ಐಎ ವಿಚಾರಣೆ ನಡೆಸಲಿದೆ.

    ರಾಣಾ ಪಾಕಿಸ್ತಾನದಲ್ಲಿದ್ದ ಹೆಡ್ಲಿಯ ದಾಳಿಯ ರೂವಾರಿಗಳ ಜೊತೆ ಕೆಲಸ ನೇರವಾಗಿ ಸಂವಹನ ಮಾಡುತ್ತಿದ್ದ. ಹೀಗಾಗಿ ಆರಂಭಿಕ ಹಂತದ ವಿಚಾರಣೆಯಲ್ಲಿ ರಾಣಾ ಮತ್ತು ಹೆಡ್ಲಿ ನಡುವಿನ ಸಂಬಂಧದ ಬಗ್ಗೆ ಕೇಳಲಾಗುತ್ತದೆ.

    ವಿಶೇಷ ನ್ಯಾಯಾಲಯ 18 ದಿನಗಳ ಕಾಲ ಕಸ್ಟಡಿಗೆ ನೀಡಿದ ಬಳಿಕ ಮುಂಬೈ ದಾಳಿ (Mumbai Attack) ಪ್ರಕರಣ ಆರೋಪಿ ಉಗ್ರ ತಹವ್ವೂರ್ ಹುಸೇನ್ ರಾಣಾನನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ (NIA) ಪ್ರಧಾನ ಕಚೇರಿಯಲ್ಲಿ ಬಂಧಿಸಿ ಇಡಲಾಗಿದೆ.

    ಎನ್‌ಐಎ ಕಟ್ಟಡದ ನೆಲ ಮಹಡಿಯಲ್ಲಿರುವ 14*14 ಅಡಿ ಅಳತೆಯ ಕೋಣೆಗೆ ಸಿಸಿಟಿವಿ (CCTV) ಹಾಕಲಾಗಿದ್ದು ಪ್ರತಿಯೊಂದು ಚಲನವಲನಗಳನ್ನು ಗಮನಿಸಲಾಗುತ್ತದೆ. ಈ ಕೊಠಡಿಯಲ್ಲೇ ಎಲ್ಲಾ ತನಿಖಾ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲಿವೆ.

  • ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    – ಉಗ್ರನನ್ನು ಕರೆತರಲು ಬಹಳ ಎಚ್ಚರಿಕೆ ವಹಿಸಿದ್ದ ಭಾರತ
    – ವಿಮಾನದ ಮಧ್ಯದಲ್ಲಿ ಕುಳಿತಿದ್ದ ರಾಣಾ

    ನವದೆಹಲಿ: ಮುಂಬೈ ದಾಳಿಕೋರ ತಹಾವ್ವೂರ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ (Tahawwur Rana) ಕರೆತರಲಾಗಿದೆ. ಈ ಕರೆ ತರುವ ಪ್ರಕ್ರಿಯೆ ಬಹಳ ರಹಸ್ಯವಾಗಿತ್ತು. ಈ ಕರೆ ತರುವ ಕಾರ್ಯಾಚರಣೆಗೆ ಬಳಸಲಾದ ವಿಮಾನಕ್ಕೆ ಡಮ್ಮಿ ಕೋಡ್‌ (Dummy Code) ನೀಡಲಾಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ವಿಮಾನವು ಪಾಲಂ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಇಳಿಯುವವರೆಗೂ ವಿಧ್ವಂಸಕ ಕೃತ್ಯಗಳು ನಡೆಯವ ಸಾಧ್ಯತೆ ಇದ್ದ ಕಾರಣ ಹಸ್ತಾಂತರ ಪ್ರಕ್ರಿಯೆ ಬಹಳ ಸವಾಲಿನಿಂದ ಕೂಡಿತ್ತು. ಗೃಹ ಸಚಿವಾಲಯ, NSA ಕಚೇರಿ, ಗುಪ್ತಚರ ಇಲಾಖೆ ರಾಣಾನನ್ನು ಕರೆದುಕೊಂಡು ಬರುವ ವಿಮಾನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿತ್ತು. ಇದನ್ನೂ ಓದಿ: 18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

    ರಾಣಾನನ್ನು ಕರೆತಂದ ಗಲ್ಫ್‌ಸ್ಟ್ರೀಮ್ G550 (Gulfstream) ವಿಮಾನ ಸಾರ್ವಜನಿಕ ವಿಮಾನ ಟ್ರ್ಯಾಕರ್‌ಗಳಲ್ಲಿ ಪತ್ತೆಯಾಗುವುದನ್ನು ತಪ್ಪಿಸಲು ಮತ್ತು ಯಾವುದೇ ದಾಳಿ ಆಗದೇ ಇರಲು ಈ ಚಾರ್ಟರ್ಡ್ ವಿಮಾನಕ್ಕೆ ನಕಲಿ ಕೋಡ್ ನೀಡಲಾಗಿತ್ತು. ಹೀಗಾಗಿ ಯಾವ ವಿಮಾನದಲ್ಲಿ ರಾಣಾನನ್ನು ಕರೆತರಲಾಗುತ್ತಿದೆ? ಎಷ್ಟು ಗಂಟೆಗೆ ದೆಹಲಿಗೆ ವಿಮಾನ ಲ್ಯಾಂಡ್‌ ಆಗುತ್ತಿದೆ ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ.

    ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಅಮೆರಿಕದ ಸುಪ್ರೀಂ ಕೋರ್ಟ್‌ ರಾಣಾನನ್ನು ಗಡಿಪಾರು ಮಾಡುವಾಗ ಹಲವಾರು ಷರತ್ತುಗಳನ್ನು ವಿಧಿಸಿತ್ತು. ಒಂದು ವೇಳೆ ರಾಣಾ ಕರೆತರುವಾಗ ಏನಾದರೂ ಹೆಚ್ಚು ಕಡಿಮೆಯಾದರೂ ಭಾರತದ ರಕ್ಷಣಾ ಸಂಸ್ಥೆಗಳಿಗೆ ಕಪ್ಪು ಚುಕ್ಕೆ ಬರುತ್ತಿತ್ತು. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಬೇರೆ ದೇಶದಿಂದ ಉಗ್ರರನ್ನು ಕರೆ ತರುವ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿತ್ತು. ಈ ಕಾರಣಕ್ಕೆ ಬಹಳ ಎಚ್ಚರಿಕೆ ವಹಿಸಿ ವಿಶೇಷ ವಿಮಾನದ ಮೂಲಕ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ.

    ವಿಮಾನವು ಬುಧವಾರ ನಸುಕಿನ ಜಾವ ಅಮೆರಿಕದ ಲಾಸ್‌ ಏಂಜಲೀಸ್‌ನಿಂದ ಹೊರಟು ರೊಮೇನಿಯಾದಲ್ಲಿ ಪಿಟ್ ಸ್ಟಾಪ್ ನಂತರ ಸಂಜೆ 6 ಗಂಟೆ ಸುಮಾರಿಗೆ ದೆಹಲಿಯಲ್ಲಿ ಲ್ಯಾಂಡ್‌ ಆಯ್ತು. ವಿಮಾನವು ಸುಮಾರು 11 ಗಂಟೆಗಳ ಕಾಲ ರೊಮೇನಿಯನ್ ರಾಜಧಾನಿಯಲ್ಲಿ ನಿಂತಿತ್ತು. ಇದನ್ನೂ ಓದಿ: ಹೈಟೆಕ್‌ ವಿಮಾನ, 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

    ಭಾರತಕ್ಕೆ ಹಿಂದಿರುಗುವ ವಿಮಾನದಲ್ಲಿ, ರಾಣಾ ಮಧ್ಯದಲ್ಲಿ ಕುಳಿತಿದ್ದ ಮತ್ತು ಆತನ ಸುತ್ತಲಿನ ಎಲ್ಲಾ ಆಸನಗಳಲ್ಲಿ NSG ಕಮಾಂಡೋಗಳು ಇದ್ದರು. ನಂತರ ಹಿರಿಯ NIA ಅಧಿಕಾರಿಗಳು ಇದ್ದರು.

     

    ವಿಮಾನದಲ್ಲಿ ಇರುತ್ತೆ ಟ್ರಾನ್ಸ್‌ಪಾಂಡರ್‌ ಕೋಡ್‌
    ಆಕಾಶದಲ್ಲಿ ಹಾರಾಡುವ ಪ್ರತಿ ವಿಮಾನಕ್ಕೆ ಟ್ರಾನ್ಸ್‌ಪಾಂಡರ್‌ ಕೋಡ್‌ ಇರುತ್ತದೆ. ಟ್ರಾನ್ಸ್‌ಪಾಂಡರ್ ಕೋಡ್‌ ಮೂಲಕ ವಿಮಾನವನ್ನು ಗುರುತಿಸಲಾಗುತ್ತದೆ ಮತ್ತು ಟ್ರ್ಯಾಕ್ ಮಾಡಲಾಗುತ್ತದೆ. ಹಲವಾರು ಸಂಸ್ಥೆಗಳು ಈ ಕೋಡ್‌ ಬಳಸಿಕೊಂಡು ಆ ವಿಮಾನ ಸದ್ಯ ಯಾವ ಸ್ಥಳದಲ್ಲಿ ಹಾರಾಡುತ್ತಿದೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ಅಪ್‌ಡೇಟ್‌ ಮಾಡುತ್ತಿರುತ್ತದೆ.

    ಈ ಕೋಡ್‌ಗಳನ್ನು ವಾಯು ಸಂಚಾರ ನಿಯಂತ್ರಣದಿಂದ (ATC) ವಿಮಾನಗಳಿಗೆ ನಿಯೋಜಿಸಲಾಗುತ್ತದೆ. ಅವುಗಳನ್ನು ವಿಮಾನದ ಟ್ರಾನ್ಸ್‌ಪಾಂಡರ್‌ನೊಂದಿಗೆ ಬಳಸಲಾಗುತ್ತದೆ. ಈ ಕೋಡ್‌ ಮೂಲಕವೇ ನಿರ್ದಿಷ್ಟ ವಿಮಾನವನ್ನು ಗುರುತಿಸಲು, ಅದರ ಹಾರಾಟದ ಮಾರ್ಗ, ಎತ್ತರ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಟ್ರ್ಯಾಕ್ ಮಾಡಲಾಗುತ್ತದೆ.

    ವಿಮಾನ ತರಬೇತಿ ಸಮಯ ಅಥವಾ ರಾಡಾರ್ ವ್ಯವಸ್ಥೆಗಳನ್ನು ಪರೀಕ್ಷಿಸಲು ಡಮ್ಮಿ ಕೋಡ್‌ಗಳನ್ನು ಬಳಸಲಾಗುತ್ತದೆ. ಆದರೆ ಅವುಗಳನ್ನು ನೈಜ ಹಾರಾಟ ಕಾರ್ಯಾಚರಣೆಗಳಿಗೆ ಬಳಸಲಾಗುವುದಿಲ್ಲ.

  • 18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

    18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

    ನವದೆಹಲಿ: 2008ರ ಮುಂಬೈ ದಾಳಿಯ (Mumbai Attack) ಪ್ರಮುಖ ಸೂತ್ರಧಾರಿ ಲಷ್ಕರ್ ಉಗ್ರ ತಹಾವ್ವೂರ್‌ ರಾಣಾನನ್ನು (Tahawwur Rana) ಕೋರ್ಟ್‌ 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ (NIA) ಕಸ್ಟಡಿಗೆ ನೀಡಿದೆ.

    ಅಮೆರಿಕದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ (Delhi) ಕರೆತಂದ ಬಳಿಕ ಎನ್‌ಐಎ ಬಂಧಿಸಿತು. ಬಂಧನದ ಬಳಿಕ ತಡರಾತ್ರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.  ಇದನ್ನೂ ಓದಿ: ಹೈಟೆಕ್‌ ವಿಮಾನ, 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

    ಈ ವೇಳೆ ಎನ್‌ಐಎ ಪರ ವಕೀಲರು, ಮುಂಬೈ ದಾಳಿಯ ಪಿತೂರಿಗ ಸಂಬಂಧಿಸಿದಂತೆ ಉಗ್ರ ಹೆಡ್ಲಿ (David Headley) ಮತ್ತು ರಾಣಾ ನಡುವಿನ ಇಮೇಲ್‌ ಪುರಾವೆಗಳನ್ನು ಉಲ್ಲೇಖಿಸಿದರು. ಕ್ರಿಮಿನಲ್ ಪಿತೂರಿಯ ಭಾಗವಾಗಿ ಡೇವಿಡ್ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ಮೊದಲು ತಹವ್ವೂರ್ ರಾಣಾನ ಜೊತೆ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದ್ದ. ಹೀಗಾಗಿ ಆತನನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಈ ವಾದವನ್ನು ಪುರಸ್ಕರಿಸಿದ ಕೋರ್ಟ್‌ 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿತು.

    ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ನಡೆಸುವುದು, ಕೊಲೆ ಮತ್ತು ನಕಲಿ ದಾಖಲೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (UAPA) ಕಾಯ್ದೆಯಡಿಯಲ್ಲಿ ರಾಣಾ ಮೇಲೆ ಆರೋಪ ಹೊರಿಸಲಾಗಿದೆ. 64 ವರ್ಷದ ತಹವ್ವೂರ್ ರಾಣಾನನ್ನು ವಿಚಾರಣೆ ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ.

    ಮಧ್ಯರಾತ್ರಿವರೆಗೂ ನಡೆದ ವಿಚಾರಣೆ ವೇಳೆ ಎನ್‌ಐಎ ಕಚೇರಿ ಸುತ್ತಮುತ್ತ ಭಾರೀ ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗಿತ್ತು. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    ಹಿರಿಯ ವಕೀಲ ದಯಾನ್ ಕೃಷ್ಣನ್ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದರ್ ಮಾನ್ ಎನ್‌ಐಎ ಪರ ವಾದಿಸಿದರು. ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಪಿಯೂಷ್ ಸಚ್‌ದೇವ ತಹವ್ವೂರ್ ರಾಣಾ ಪರ ವಾದಿಸಿದರು.

    ತಹವ್ವೂರ್ ರಾಣಾನ ಯಶಸ್ವಿ ಹಸ್ತಾಂತರದ ಬಗ್ಗೆ ಮಾತನಾಡಿದ ಅಮೆರಿಕದ ವಕ್ತಾರ ಟ್ಯಾಮಿ ಬ್ರೂಸ್, ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತಿರುವುದರಿಂದ ಅವುಗಳ ನಡುವಿನ ಕ್ರಿಯಾಶೀಲತೆಯ ಬಗ್ಗೆ ಯುಎಸ್ ಹೆಮ್ಮೆಪಡುತ್ತದೆ ಎಂದು ಹೇಳಿದರು.