Tag: ತಹಶೀಲ್ದಾರ

  • ಹಾವೇರಿಯಲ್ಲಿ ತಹಶೀಲ್ದಾರ್, ಡಾಕ್ಟರ್ ನಡುವೆ ಟಾಕ್ ವಾರ್

    ಹಾವೇರಿಯಲ್ಲಿ ತಹಶೀಲ್ದಾರ್, ಡಾಕ್ಟರ್ ನಡುವೆ ಟಾಕ್ ವಾರ್

    ಹಾವೇರಿ: ತಹಶೀಲ್ದಾರ್ ಭೇಟಿ ವೇಳೆ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ಇಲ್ಲದ್ದಕ್ಕೆ ತಹಶೀಲ್ದಾರ್ ಬಾಯಿಗೆ ಬಂದಂತೆ ಮಾತನಾಡಿದ್ದು, ಈ ವೇಳೆ ಇಬ್ಬರ ನಡುವೆ ಏಕವಚನದಲ್ಲೇ ವಾಗ್ವಾದ ನಡೆದಿದೆ. ಅಲ್ಲದೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ.

    ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾನುವಾರ ಮಧ್ಯಾಹ್ನ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾನಗಲ್ ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ಭೇಟಿ ನೀಡಿದ್ದರು. ಈ ವೇಳೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಆಸ್ಪತ್ರೆಯಲ್ಲಿ ಇರಲಿಲ್ಲ. ವೈದ್ಯ ಡಾ.ರಾಘವೇಂದ್ರ ಆಸ್ಪತ್ರೆಯಲ್ಲಿ ಇಲ್ಲದ್ದನ್ನು ತಹಶೀಲ್ದಾರ ಎರ್ರಿಸ್ವಾಮಿ ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಡಾ.ರಾಘವೇಂದ್ರ ಸ್ಥಳಕ್ಕೆ ಆಗಮಿಸಿದ್ದಾರೆ ಈ ವೇಳೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ.

    ನಂತರ ಆಸ್ಪತ್ರೆ ಮುಂಭಾಗದಲ್ಲಿ ವೈದ್ಯಾಧಿಕಾರಿ ಮತ್ತು ತಹಶೀಲ್ದಾರ ಇಬ್ಬರೂ ಪರಸ್ಪರ ಏಕವಚನದಲ್ಲಿ ನಿಂದಿಸಿದ್ದಾರೆ. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಸ್ಥಳೀಯರು ಹಾಗೂ ಪೊಲೀಸರು ಇಬ್ಬರ ನಡುವಿನ ಫೈಟಿಂಗ್ ಶಮನಕ್ಕೆ ಪ್ರಯತ್ನಿಸಿದರು. ಆದರೆ ಇಬ್ಬರ ನಡುವಿನ ಏಕವಚನದ ಟಾಕ್ ಫೈಟ್ ಮುಂದುವರಿದಿತ್ತು. ನಂತರ ಆಸ್ಪತ್ರೆಗೆ ಬೀಗ ಹಾಕಲಾಯಿತು. ಇಬ್ಬರ ಫೈಟಿಂಗ್ ನೋಡಿದ ರೋಗಿಗಳು ಕಂಗಾಲಾದರು.

    ಹಾನಗಲ್ ತಹಶೀಲ್ದಾರ್ ನನ್ನ ಮೇಲೆ ದೈಹಿಕ ದೌರ್ಜನ್ಯ ಮಾಡಿದ್ದಲ್ಲದೇ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಆರೋಪಿಸಿದರು. ತಹಶೀಲ್ದಾರ್ ಈ ಆರೋಪವನ್ನು ಅಲ್ಲಗಳೆದಿದ್ದು, ಜನರ ದೂರಿನ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆಸ್ಪತ್ರೆಯಲ್ಲಿ ಇಲ್ಲದ್ದನ್ನು ಪ್ರಶ್ನಿಸಿದ್ದಕ್ಕೆ ಡಾ.ರಾಘವೇಂದ್ರ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

  • ಚಿಕ್ಕೋಡಿಯಲ್ಲಿ ಸಲೀಸಾಗಿ ದೊರೆಯುತ್ತೆ ನಕಲಿ ಪ್ರಮಾಣ ಪತ್ರ..!

    ಚಿಕ್ಕೋಡಿಯಲ್ಲಿ ಸಲೀಸಾಗಿ ದೊರೆಯುತ್ತೆ ನಕಲಿ ಪ್ರಮಾಣ ಪತ್ರ..!

    ಬೆಳಗಾವಿ/ಚಿಕ್ಕೋಡಿ: ಅಸಲಿ ಜಾತಿ ಪ್ರಮಾಣ ಪತ್ರ ಪಡೆಯುವರು ಸಾಕಷ್ಟು ಬಾರಿ ತಹಶೀಲ್ದಾರ್ ಕಚೇರಿ ಅಲೆದಾಡಿದ ಮೇಲೆ ಕೊನೆಗೆ ಪ್ರಮಾಣ ಪತ್ರ ಪಡೆದುಕೊಳ್ಳುತ್ತಾರೆ. ಆದರೆ ಈ ತಾಲೂಕಿನಲ್ಲಿ ಅಸಲಿಗಿಂತ ನಕಲಿ ಪ್ರಮಾಣ ಪತ್ರ ಸಲೀಸಾಗಿ ದೊರೆಯುತ್ತಿದೆ. ಜನರಿಗೆ ಯಾವುದು ಬೇಕೋ ಆ ಜಾತಿಯ ಪ್ರಮಾಣ ಪತ್ರವನ್ನು ಯಾವುದೇ ದಾಖಲೆಗಳಿಲ್ಲದೆ ನೀಡಲಾಗುತ್ತಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆಯ ಸದಸ್ಯರು ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸದಲಗಾ ಪುರಸಭೆಯ 11ನೇ ವಾರ್ಡಿನಲ್ಲಿ ಅವಿರೋಧವಾಗಿ ಆಯ್ಕೆಯಾದ ರವಿ ಗೋಸಾವಿ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ಅವರ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ.

    ಚಿಕ್ಕೋಡಿ ತಾಲೂಕಿನ ತಹಶೀಲ್ದಾರ್ ಅವರು ಯಾವುದೇ ದಾಖಲೆ ಇಲ್ಲದೇ ಪ್ರವರ್ಗ 2ಎ ಅಲ್ಲಿ ಬರುತ್ತಿದ್ದ ಹಿಂದೂ ಗೋಸಾವಿ ಭಟಕಿ ಜಮಾತ ಜಾತಿಯಿಂದ ಎಸ್‍ಟಿ ಪರಿಶಿಷ್ಟ ಪಂಗಡಕ್ಕೆ ಯಾವುದೇ ದಾಖಲೆಗಳಿಲ್ಲದೇ ಬದಲಾಯಿಸಿಕೊಂಡಿದ್ದಾರೆ. ರವಿ ಗೋಸಾವಿಯಿಂದ ಯಾವುದೇ ಶಾಲಾ ಹಾಗೂ ಕಂದಾಯ ಇಲಾಖೆಯ ದಾಖಲಾತಿಗಳನ್ನು ಪಡೆಯದೇ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

    ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ ವರ್ಗದಲ್ಲಿ ಯಾವುದೇ ಮುಖಂಡರು ಇಲ್ಲದನ್ನು ಗಮನಿಸಿ ರವಿ ಗೋಸಾವಿ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಲಿಂಕ್ ಹಿಡಿದು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾನೆ. ನಂತರ ವಾರ್ಡ್ ನಂ.11 ಎಸ್‍ಟಿ ಮೀಸಲು ವಾರ್ಡ್‍ನಿಂದ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಿಜೆಪಿಯ ಪುರಸಭೆ ಸದಸ್ಯರಿಗೆ ಈತನ ಅಸಲಿ ಬಂಡವಾಳ ಗೊತ್ತಾಗಿ ಈತನ ಜಾತಿ ಪ್ರಮಾಣ ಪತ್ರದ ಎಲ್ಲ ದಾಖಲೆಗಳನ್ನ ಸಂಗ್ರಹಿಸಿ ಈತನ ಸದಸ್ಯತ್ವ ರದ್ದು ಮಾಡುವಂತೆ ಎಚ್ಚರಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ರಾಜಕೀಯ ಮುಖಂಡರ ಮಾತು ಕೇಳಿ ತಹಶೀಲ್ದಾರ್ ಕಚೇರಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಲಾಗಿದ್ದು, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಲಗಾ ಬಿಜೆಪಿ ಪುರಸಭೆ ಸದಸ್ಯರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ ರಾಯಬಾಗ ತಹಶೀಲ್ದಾರ

    ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ ರಾಯಬಾಗ ತಹಶೀಲ್ದಾರ

    ಬೆಳಗಾವಿ: ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ರಾಯಭಾಗ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಮಾನವೀಯತೆಯನ್ನು ಮೆರದಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಬಳಿ ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ರಾಜಶೇಖರ್ ಅದೇ ಮಾರ್ಗದಲ್ಲಿ ಬರುತ್ತಿದ್ದರು. ಅಪಘಾತ ಕಂಡ ಕೂಡಲೇ ತಮ್ಮ ವಾಹನ ನಿಲ್ಲಿಸಿ ಸ್ಥಳೀಯ ವೈದ್ಯರನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

    ಚಿಕಿತ್ಸೆ ಕೊಡಿಸಿದ ಬಳಿಕ ಹೊರಡದೇ ಅಂಬುಲೆನ್ಸ್ ಬರೊವರೆಗು ಕಾಯ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ ನಂತರವೇ ತೆರಳಿದ್ದಾರೆ. ತಹಶೀಲ್ದಾರ ರಾಜಶೇಖರ್ ಅವರ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.