Tag: ತಲಕಾವೇರಿ

  • ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

    ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

    ಮಾತೆ ಕಾವೇರಿ ತಲಕಾವೇರಿಯಲ್ಲಿ (Talacauvery) ಹುಟ್ಟಿ ಲೋಕ ಕಲ್ಯಾಣಕ್ಕಾಗಿ ನದಿಯಾಗಿ ಹೇಗೆ ಹರಿದಳು ಎಂಬುದರ ಬಗ್ಗೆ ‌ಹಲವರಿಗೆ ಇಂದಿಗೂ ಕುತೂಹಲ ಇದೆ. ಕಾವೇರಿ ಜನ್ಮ ತಾಳಿದ ಹಿನ್ನೆಲೆ ನೋಡುವುದಾದ್ರೆ ಅದಕ್ಕೊಂದು ಪೌರಾಣಿಕ ಕಥೆ ಇದೆ. ಬನ್ನಿ ತಿಳಿಯೋಣ…

    ಪುರಾಣ ಹೇಳುವಂತೆ, ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ (Brahmagiri Hill) ಕವೇರನೆಂಬ ಮುನಿ ವಾಸವಾಗಿದ್ದಋಂತೆ. ಅವನಿಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆ ಉಂಟಾಗಿ ಬ್ರಹ್ಮನನ್ನ ಕುರಿತು ತಪಸ್ಸು ಮಾಡುತ್ತಿದ್ದರ ಮಾಡತೊಡಗಿದ. ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನ ದತ್ತು ಮಗಳಾಗಿ ನೀಡಿದರಂತೆ. ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು. ಹೀಗೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು.

    ಒಮ್ಮೆ ಕವೇರನ ಆಶ್ರಮಕ್ಕೆ ಬಂದ ಅಗಸ್ತ್ಯ ಮುನಿಗಳು ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ನನ್ನನ್ನು ನೀವು ಉಪೇಕ್ಷಿಸಿ ಎಲ್ಲೂ ಹೋಗಬಾರದು ಹಾಗೊಂದು ವೇಳೆ ನನ್ನನ್ನ ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿದುಹೋಗುವುದಾಗಿ ಹೇಳಿದ್ದಳು. ಕಾವೇರಿಯ (Maa Cauvery) ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನ ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ದಿದ್ದರು.

    ಒಂದು ದಿನ ಬೇಗ ಎದ್ದ ಅಗಸ್ತ್ಯ ಮುನಿಗಳು ನಿದ್ದೆಯಲ್ಲಿದ್ದ ಕಾವೇರಿಯನ್ನು ಹಾಗೇ ಬಿಟ್ಟು ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿದ್ದರು. ಆದರೆ, ಎಚ್ಚರವಾದಾಗ ಸನಿಹದಲ್ಲಿ ಪತಿ ಇಲ್ಲದಿರುವುದನ್ನ ಕಂಡು ಕೋಪಗೊಂಡ ಕಾವೇರಿ, ಷರತ್ತು ಮೀರಿದ ಪತಿಯಿಂದ ದೂರವಾಗಿ ಅಲ್ಲೇ ಇದ್ದ ಕೊಳಕ್ಕೆ ಧುಮುಕಿ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರಿ, ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿದಳು ಎಂಬ ಪ್ರತೀತಿ ಇದೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿವರ್ಷ ತುಲಾ ಸಂಕ್ರಮಣದಂದು ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾ ಬಂದಿದ್ದಾಳಂತೆ.

    ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರ ಹರಿದು ಬಳಿಕ ರಾಜ್ಯದಲ್ಲಿ ಸುಮಾರು 381 ಕಿಮೀ ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿಮೀ ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತಾಳೆ. ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದ್ದು, ನೂತನವಾಗಿ ವಿವಾಹವಾದವರು ಈ ಸ್ನಾನಕೊಳದಲ್ಲಿ ಕೈಕೈ ಹಿಡಿದು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲ ಹಾಕಿಸಿಕೊಂಡ್ರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

    ಅಗಸ್ತ್ಯೇಶ್ವರ ದೇವಾಲಯದ ಎಡಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಲು ಸುಮಾರು 500 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಮೆಟ್ಟಿಲೇರಿದ್ರೆ ಬ್ರಹ್ಮಗಿರಿಯ ಬೆಟ್ಟದ ಮೇಲ್ಭಾಗವನ್ನ ತಲುಪಬಹುದು. ಇಲ್ಲಿಂದ ನಿಂತು ನೋಡಿದ್ರೆ ಕಂಡುಬರುವ ನಿಸರ್ಗದ ಸುಂದರ ದೃಶ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೇ ಎದುರಿನ ಬಾಪುರೆ ಬೆಟ್ಟದಲ್ಲಿ ಕೆಟ್ಟು ನಿಂತ ಬೃಹತ್‌ಗಾಳಿ ಯಂತ್ರಗಳು ಸೋಜಿಗವನ್ನುಂಟು ಮಾಡುತ್ತವೆ. ಇನ್ನು ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಸಿಗುವ ವ್ಯೂ ಪಾಯಿಂಟ್, ಭೀಮನಕಲ್ಲು, ಸಲಾಂಕಟ್ಟೆ ಎಲ್ಲವೂ ಇತಿಹಾಸದ ಕಥೆ ಹೇಳುತ್ತವೆ.

    ತೀರ್ಥೋದ್ಭವದ ಸಂದರ್ಭ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ಕಾರ್ಯವೂ ನಡೆಯುತ್ತದೆ. ತುಲಾಸಂಕ್ರಮಣದ ಒಂದು ತಿಂಗಳ ಕಾಲ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ನಂದಾದೀಪ ಉರಿಸಲಾಗುತ್ತದೆ. ಭಕ್ತರು ತಾವು ತರುವ ತುಪ್ಪವನ್ನು ಈ ದೀಪಕ್ಕೆ ಹಾಕುತ್ತಾರೆ. ಹಾಗೆಯೇ ಅಕ್ಕಿಯನ್ನು ಕೂಡ ಇಲ್ಲಿನ ಅಕ್ಷಯ ಭಂಡಾರಕ್ಕೆ ಹಾಕಿ ತಮ್ಮ ಮನೆಯ ಕಣಜದಲ್ಲಿ ಸದಾ ಭತ್ತ ತುಂಬಿರುವಂತೆ ಬೇಡಿಕೊಳ್ಳುತ್ತಾರೆ. ಕಾವೇರಿ ತೀರ್ಥೋದ್ಭವದ ತುಲಾ ಸಂಕ್ರಮಣ ಜಾತ್ರೆಯಲ್ಲಿ ಎಲ್ಲರೂ ಭಾಗಿಯಾಗಿ ಸಂಭ್ರಮಿಸುತ್ತಾರೆ.

    ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದ ಪುಣ್ಯಕಾಲದಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿ ತುಂಬಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಮಹತ್ವ ಇದೆ. ಇದು ಕಾವೇರಿ ತುಲಾ ಸಂಕ್ರಮಣ ಜಾತ್ರೆ ಎಂದೇ ಜನಪ್ರಿಯ. ಕೊಡಗಿನವರಷ್ಟೇ ಅಲ್ಲದೆ ನಾಡಿನ ಹಾಗೂ ದೇಶ-ವಿದೇಶಗಳ ಜನರೆಲ್ಲಾ ಇಲ್ಲಿ ಆಗಮಿಸಿ ಕಾವೇರಿ ತೀರ್ಥದಲ್ಲಿ ಮುಳುಗೆದ್ದು ಪುನೀತರಾಗುವ ತುಲಾ ಸಂಕ್ರಮಣ ಜಾತ್ರೆಯನ್ನು ನೋಡುವುದೇ ಆನಂದ.

    ಹಸಿರು ಕಾನನ, ಬೆಟ್ಟಗುಡ್ಡಗಳಿಂದ ಆವೃತಗೊಂಡು ಸದಾ ಮಂಜಿನ ಮುಸುಕಿನೊಂದಿಗೆ ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆಯುವ ತಲಕಾವೇರಿಯ ಪ್ರಕೃತಿಯ ತಾಣದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವ ಮೂಲಕ ಭಕ್ತರನ್ನ ಪುನೀತಗೊಳಿಸುತ್ತಾಳೆ. ಮಡಿಕೇರಿಯಿಂದ 42 ಕಿ.ಮೀ. ದೂರದಲ್ಲಿರುವ ತಲಕಾವೇರಿ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ.

  • ತಲಕಾವೇರಿ | ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ ಕಾವೇರಿ ಮಾತೆ!

    ತಲಕಾವೇರಿ | ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ ಕಾವೇರಿ ಮಾತೆ!

    ಮಡಿಕೇರಿ: ಕೊಡಗಿನ (Kodagu) ಕುಲದೇವಿ, ನಾಡಿನ ಜೀವನದಿ ಮಾತೆ ಕಾವೇರಿ (Cauvery Theerthodbhava) ನಿಗಧಿಯಂತೆ ಮಕರ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದಳು.

    ಬೆಳಗ್ಗೆ 11:30 ಗಂಟೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನೆರವೇರಿಸಿದರು. ಮತ್ತೊಂದೆಡೆ ಕಾವೇರಿ ತೀರ್ಥೋದ್ಭವ (Theerthodbhava) ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ 8 ಕಿಮೀ ದೂರದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು (Devotees) ಕಾವೇರಿ ಮಾತೆಯನ್ನ ನೆನೆಯುತ್ತಾ ತಲಕಾವೇರಿ ತಲುಪಿದರು. ಕೊಡಗು ಅಷ್ಟೇ ಅಲ್ಲದೇ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು.

    ತೀರ್ಥೋದ್ಭವದ ಸಮಯ ಹತ್ತಿರವಾಗಿತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಭಕ್ತರೆಲ್ಲರೂ ʻಉಕ್ಕಿ ಬಾ ತಾಯೆʼ ಎಂದು ಕಾವೇರಿ ಮಾತೆಯನ್ನ ಜಪಿಸುತ್ತಿದ್ದರು. ನಿಗದಿತೆ ಮಕರ ಲಗ್ನದಲ್ಲಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ಬಳಿಕ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥ ಪ್ರೋಕ್ಷಣೆ ಮಾಡಿದರು. ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ಭಕ್ತಿಭಾವ ಮೆರೆದು ಪುನೀತರಾದರು.

    ಇದೇ ಸಂದರ್ಭದಲ್ಲಿ ಮಾತಾನಾಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಕಾವೇರಿ ಸಂಕ್ರಮಣ ಕೊಡಗಿನಲ್ಲಿ ಎಲ್ಲಕ್ಕಿಂತ ವಿಶೇಷ ಹಬ್ಬ ನಾಡಿನ‌ ಜನರಿಗೆ ಆರೋಗ್ಯ ಆಯಸು ಕರುಣಿಸಲೆಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಕಾವೇರಮ್ಮ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸಿದೆ. ಅರಸು ಸಮುದಾಯದಿಂದ ಸಾಂಸ್ಕೃತಿಕ ಉಡುಪು ಹಾಕಿಕೊಂಡು ತಲಕಾವೇರಿಗೆ ಅಗಮಿಸಿದೇನೆ ಎಂದರು.

    ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡು ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ನೆರವೇರಿಸಿದರು.

  • ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ತೀರ್ಥರೂಪಿಣಿಯಾಗುವ ವಿಸ್ಮಯ ಕಾಣಲು ಜನ ಕಾತರ

    ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ತೀರ್ಥರೂಪಿಣಿಯಾಗುವ ವಿಸ್ಮಯ ಕಾಣಲು ಜನ ಕಾತರ

    – ಡಿಸಿಎಂ ಡಿಕೆ ಶಿವಕುಮಾರ್‌, ರಾಮಲಿಂಗಾರೆಡ್ಡಿ ಭಾಗಿ

    ಮಡಿಕೇರಿ: ಕರುನಾಡಿನ ಜೀವನದಿ ಕಾವೇರಿಯ (Kaveri) ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿಮಾತೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

    ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಕಾತರರಾಗಿದ್ದಾರೆ. ಕೊಡಗಿನ ಜನರ ಕುಲದೇವತೆ ಕರ್ನಾಟಕದ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ.ಇದನ್ನೂ ಓದಿ: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ಕಣ್ತುಂಬಿಕೊಳ್ಳಲಿರುವ ಡಿಕೆಶಿ, ರಾಮಲಿಂಗಾ ರೆಡ್ಡಿ

    ಶುಕ್ರವಾರ (ಅ.17) ಮಧ್ಯಾಹ್ನ 1:44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ. ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಈ ವಿಸ್ಮಯ ನೋಡಲು ಜನರು ಕಾತರರಾಗಿ ಕಾಯುತ್ತಿದ್ದಾರೆ. ತೀರ್ಥೋದ್ಭವಕ್ಕೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಪೂಜೆಗಳು ಜರುಗಲಿವೆ. ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ಬೆಳಗ್ಗೆ 11:30ರಿಂದಲೇ ತೀರ್ಥೋದ್ಭವದ ತನಕ ಮಂತ್ರಪಠಣ ನಡೆಯಲಿದೆ.

    ಪವಿತ್ರ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ ತಲಕಾವೇರಿಗೆ ಆಗಮಿಸಲಿದ್ದಾರೆ. ಇನ್ನೂ ಕಾವೇರಿ ತೀರ್ಥೋದ್ಭವ ನೋಡಲು ಮಂಡ್ಯ, ಮೈಸೂರು, ಬೆಂಗಳೂರು, ಹಾಸನ ಜಿಲ್ಲೆ ಸೇರಿದಂತೆ ದೇಶದ ಹಲವೆಡೆಗಳಿಂದ ಭಕ್ತರು ಬರುತ್ತಾರೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನಮಾಡಿ ಅಲ್ಲಿ ಭಗಂಢೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ. ತೀರ್ಥೋದ್ಭವವಾಗುತ್ತಿದ್ದಂತೆ ತೀರ್ಥವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಾರೆ.

    ಸದ್ಯ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ಇದನ್ನೂ ಓದಿ: ಮಡಿಕೇರಿ | ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

  • ಮಡಿಕೇರಿ | ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

    ಮಡಿಕೇರಿ | ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

    ಮಡಿಕೇರಿ: ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದ್ದು, ಮಡಿಕೇರಿ (Madikeri) ತಾಲೂಕಿನ ತಲಕಾವೇರಿ (Talacauvery) ಕ್ಷೇತ್ರದಲ್ಲಿ ಅಕ್ಟೋಬರ್ 17ರಂದು ಕಾವೇರಿ ತೀರ್ಥೋದ್ಭವ (Cauvery Tirthodbhava) ನಡೆಯಲಿದೆ.

    ಅಕ್ಟೋಬರ್ 17ರಂದು ಮಧ್ಯಾಹ್ನ 1:44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ತೀರ್ಥೋದ್ಭವ ಸಂಭವಿಸಲಿದೆ. ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ. ಇದನ್ನೂ ಓದಿ: ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟನೆ

    ಸೆ.26ರ ಬೆಳಗ್ಗೆ 9:31ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅಕ್ಟೋಬರ್ 4ರ ಬೆಳಗ್ಗೆ 8:33ರ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.14ರ ಬೆಳಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಅ.14ರ ಸಂಜೆ 4:45ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸುವುದು, ಅ.17ರ ಮಧ್ಯಾಹ್ನ 1:44 ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ನಡೆಯಲಿದೆ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ: ಬೆಳೆ ಪರಿಹಾರ ಆದಷ್ಟು ಬೇಗ ಕೊಡ್ತೀವಿ, ದುಡ್ಡಿಗೆ ಕೊರತೆ ಇಲ್ಲ: ಸಿಎಂ

  • ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ; ಜನಜೀವನ ಅಸ್ತವ್ಯಸ್ತ

    ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ; ಜನಜೀವನ ಅಸ್ತವ್ಯಸ್ತ

    – ತಲಕಾವೇರಿಯಲ್ಲಿ ಅಬ್ಬರಿಸಿದ ಮಳೆ; ಶನಿಮಹಾತ್ಮ ದೇಗುಲದ ಆವರಣದಲ್ಲಿ ಕಾಂಪೌಂಡ್‌ ಕುಸಿತ

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಈ ನಡುವೆ ಇಂದು ಜಿಲ್ಲೆಯ ಹಲವೆಡೆ ಬೆಳಗ್ಗೆಯಿಂದಲೂ ಧಾರಾಕಾರವಾಗಿ ಮಳೆಯಾಗಿದೆ.

    ಗ್ರಾಮೀಣ ಭಾಗದಲ್ಲಿ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ವಿರಾಜಪೇಟೆ ತಾಲ್ಲೂಕಿನ ಕಾಕೋಟು ಪರಂಬು ಮೂರ್ನಾಡು ಮಧ್ಯ ರಸ್ತೆಗೆ ಅಡ್ಡಲಾಗಿ ಬಿದ್ದ ಮರದಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂತರ ಪಂಚಾಯಿತಿ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಮರ ತೆರವು ಕಾರ್ಯಚರಣೆ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

    ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ಶನಿಮಹಾತ್ಮ ದೇವಾಲಯದ ಆವರಣದ ಕಾಂಪೌಂಡ್ ಕುಸಿದಿದ್ದು, ಮನೆಯ ಮಾಲೀಕರು ಅತಂಕಕ್ಕೆ ಒಳಗಾಗಿದ್ದಾರೆ. ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಮಧ್ಯಾಹ್ನದ ನಂತರ ಭಾರಿ ಮಳೆಯಾಗಿದ್ದು, ಕಾವೇರಿ ಭಕ್ತರು ಹಾಗೂ ಪ್ರವಾಸಿಗರು ತಲಕಾವೇರಿ ದ್ವಾರದ ಬಳಿ ನಿಂತು ಮಳೆಯಿಂದ ರಕ್ಷಣೆ ಪಡೆದರು.

    ನಿರಂತರವಾಗಿ ಸುರಿದ ಮಳೆ ಪರಿಣಾಮದಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕೊಂಚಮಟ್ಟಿಗೆ ನೀರು ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಮಳೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಕತ್ತಲೆಯಲ್ಲಿ ದಿನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನಾಳೆಯಿಂದ ಜೂ.1 ರವರೆಗೆ ಕೊಡಗು ಜಿಲ್ಲೆಯಾದ್ಯಂತ ಭಾರೀ ಗಾಳಿ, ಮಳೆ ಹಾಗೂ ಕೆಲವೆಡೆ ಅತಿ ಹೆಚ್ಚು ಆಗುವ ಸಾಧ್ಯತೆ ಇದೆ.

  • ಪ್ರಧಾನಿಯಾಗುವ ಅವಕಾಶವಿದೆ ಅಂದಿದ್ದಕ್ಕೆ ನಕ್ಕಿದ್ದರು – ಮಾಜಿ ಸಚಿವ ಎಂ.ಸಿ ನಾಣಯ್ಯ

    ಪ್ರಧಾನಿಯಾಗುವ ಅವಕಾಶವಿದೆ ಅಂದಿದ್ದಕ್ಕೆ ನಕ್ಕಿದ್ದರು – ಮಾಜಿ ಸಚಿವ ಎಂ.ಸಿ ನಾಣಯ್ಯ

    – ತಲಕಾವೇರಿ ಜೀರ್ಣೋದ್ಧಾರಕ್ಕೆ 18 ಕೋಟಿ ಅನುದಾನ ಕೊಟ್ಟಿದ್ದ ಎಸ್‌ಎಂಕೆ!

    ಮಡಿಕೇರಿ: ಎಸ್.ಎಂ ಕೃಷ್ಣ (SM Krishna) ದೇಶಕಂಡ ಅತ್ಯುತ್ತಮ ರಾಜಕಾರಣಿ ಅಂದ್ರೆ ತಪ್ಪಾಗಲ್ಲ. ತಾನು ಓದುವ ಸಂದರ್ಭದಲ್ಲೇ ಅವರ ಭಾಷಣ ಕೇಳಲು ವಿಧಾನ ಪರಿಷತ್‌ಗೆ ಹೋಗಿದ್ದೆ. ಅವರ ಮಾತಿನ ಸ್ಫೋರ್ತಿಯಿಂದಲೇ ನಾನು ರಾಜಕೀಯ ರಂಗ ಪ್ರವೇಶಿಸಿದೆ ಎಂದು ಮಾಜಿ ಸಚಿವ ಎಂ.ಸಿ ನಾಣಯ್ಯ (MC Nanaiah) ತಮ್ಮ ನೆನಪುಗಳನ್ನು ಹಂಚಿಕೊಂಡರು.

    ʻಪಬ್ಲಿಕ್‌ ಟಿವಿʼಯೊಂದಿಗೆ ಮಾತನಾಡಿದ ಅವರು, ಎಸ್‌ಎಂಕೆ ನಿಧನಕ್ಕೆ ಸಂತಾಪ ಸೂಚಿಸಿದರು. ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಾನು ಓದುವ ಸಂದರ್ಭದಲ್ಲೇ ಪರಿಷತ್‌ನಲ್ಲಿ ವಿಪಕ್ಷ ನಾಯಕರಾಗಿದ್ದರು. ಅತ್ಯಂತ ಸರಳವಾಗಿ ಅಳೆದು ತೂಗಿ ಮಾತಾನಾಡುವ ವ್ಯಕ್ತಿತ್ವ ಅವರದ್ದಾಗಿತ್ತು. ಅಂದಿನ ರಾಜಕೀಯ ದಿನಗಳ ಬಗ್ಗೆ ಮೆಲುಕು ಹಾಕುವ ಸಂದರ್ಭದಲ್ಲಿ ನಾನು ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ʻನಾ ಕಂಡ ಮುಖ್ಯಮಂತ್ರಿಗಳು‌ʼ ಎಂಬ ಪುಸ್ತಕ ಬರೆದಿದ್ದೆ. ಅದರಲ್ಲಿ ಎಸ್.ಎಂ ಕೃಷ್ಣ ಅವರ ಸಾಧನೆಗಳ ಬಗ್ಗೆ ಹಾಗೂ ನನ್ನೊಂದಿಗೆ ಇರುವ ನಿಕಟಪೂರ್ವ ಸಂಬಂಧಗಳ ಬಗ್ಗೆಯೂ ಉಲ್ಲೇಖ ಮಾಡಿದ್ದೇನೆ ಎಂದು ತಿಳಿಸಿದ್ರು.

    ಎಸ್‌ಎಂಕೆ ಅವರು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ನಾನು ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೆ. ಅಂದು ನಾನು ಸದನದಲ್ಲಿ ಕೃಷ್ಣ ಅವರಿಗೆ ನಿಮಗೆ ಪ್ರಧಾನಿಯಾಗುವ ಎಲ್ಲಾ ಲಕ್ಷಣ ಇದೆ ಎಂದು ಹೇಳಿದ್ದೆ. ಅದಕ್ಕೆ ಅವರು ಅಯ್ಯೋ ನಾಣಯ್ಯ ಅವ್ರೇ ಏನ್‌ ಹೇಳ್ತಾ ಇದ್ದೀರಿ, ರಾಜಕೀಯದಿಂದ ಬೇಗ ಕಳಿಸಿಕೋಡುವ ಆಸೆ ಏನಾದ್ರೂ ಇದೆಯೇ ಎಂದು ನಕ್ಕಿದ್ದರು ಎಂದು ತಮ್ಮ ಅನುಭವ ಹಂಚಿಕೊಂಡರು. ಇದನ್ನೂ ಓದಿ: ಭಾಗ-1 | ಶಾಸಕನಿಂದ ಮುಖ್ಯಮಂತ್ರಿವರೆಗೆ…. ಎಸ್‌ಎಂಕೆ ರಾಜಕೀಯ ಜೀವನದ ಏಳುಬೀಳು!

    ತಲಕಾವೇರಿ ಜೀರ್ಣೋದ್ಧಾರಕ್ಕೆ ಎಸ್‌ಎಂಕೆ ಕೊಡಗೆ ಅಪಾರ:
    ಇನ್ನೂ ʻಪಬ್ಲಿಕ್‌ ಟಿವಿʼ ಜೊತೆಗೆ ಮಾಜಿ ಸಚಿವೆ ಸುಮಾ ವಸಂತ್ ಮಾತನಾಡಿ, ದಕ್ಷಿಣ ಭಾರತದ ಪ್ರಮುಖ ನದಿ, ಕಾವೇರಿಯ ಉಗಮ ಸ್ಥಾನ, ತಲಕಾವೇರಿಯ (Tala Kaveri) ದೇವಾಲಯದ ಜೀರ್ಣೋದ್ಧಾರಕ್ಕೆ ಕೃಷ್ಣ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು. ಇದನ್ನೂ ಓದಿ:  ರಾಜ್‌ಕುಮಾರ್ ಕಿಡ್ನಾಪ್ ವೇಳೆ ಸ್ಯಾಟ್‌ಲೈಟ್ ಫೋನ್‌ನಿಂದ ವೀರಪ್ಪನ್ ಜೊತೆ ಮಾತನಾಡಿದ್ದ ಎಸ್‌ಎಂಕೆ

    ಎಸ್‌ಎಂಕೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೊಡಗಿನ ಟಿ ಜಾನ್‌, ಎಂ.ಎಂ ನಾಣಯ್ಯ ಮತ್ತು ನನಗೆ ಸಚಿವ ಸ್ಥಾನ ನೀಡಿದ್ರು. ನಾನು ರಾಜಕೀಯವಾಗಿ ಬೆಳೆಯಲು ಅವರೇ ನೇರ ಕಾರಣ ತನ್ನಗೆ ಸಾಕಷ್ಟು ಧೈರ್ಯ ತುಂಬಿದ್ರು. ಕೊಡಗು ಜಿಲ್ಲೆಯ ಭಾಗಮಂಡಲ ಹಾಗೂ ತಲಕಾವೇರಿ ಜೀರ್ಣೋದ್ಧಾರ ಮಾಡಲು ಅವರು ಕೊಟ್ಟ ಕೊಡುಗೆ ಯಾವತ್ತೂ ಮರೆಯಲು ಸಾದ್ಯವಿಲ್ಲ. ನಾವು ಕೇಳಿದ ತಕ್ಷಣ ಅಂದಿನ ಕಾಲಘಟ್ಟಕ್ಕೆ ಸುಮಾರು 18 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ರು. ಆದ್ರೆ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿ ಅವರ ಹೆಸರು ಹಾಕದೇ ಇರುವುದು ತುಂಬಾ ನೋವು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಕಲ್ಲಿನಲ್ಲಿ ಅವರ ಹೆಸರು ಕೆತ್ತನೆ ಮಾಡುವಂತೆ ಮವಿ ಮಾಡುತ್ತೇನೆ ಎಂದು ತಿಳಿಸಿದರು.

  • ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ

    ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ

    – ತಲಕಾವೇರಿಯಲ್ಲಿ ತೀರ್ಥೋದ್ಭವ

    ಮಡಿಕೇರಿ: ತಲಕಾವೇರಿ (TalaCauvery) ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ ಕಾವೇರಿ ಪವಿತ್ರ ತೀರ್ಥೋದ್ಭವ ನೆರವೇರಿತು. ಭಕ್ತರಿಗೆ ತೀರ್ಥರೂಪಿಣಿಯಾಗಿ ಕಾವೇರಿ (Cauvery) ದರ್ಶನ ನೀಡಿದಳು.

    ಕೊಡಗು ಜಿಲ್ಲೆಯ (Kodagu) ಮಡಿಕೇರಿ (Madikeri) ತಾಲೂಕಿನ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷ ತುಲಾ ಲಗ್ನದಲ್ಲಿ ತೀರ್ಥೋದ್ಭವವಾಯಿತು. ವರ್ಷಕ್ಕೊಮ್ಮೆ ಜರುಗುವ ದೇಶದ ಪವಿತ್ರ ತೀರ್ಥೋದ್ಭವ ಸಂಭ್ರಮ ಇಂದು ನಡೆಯಿತು. ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನವಾದಳು.ಇದನ್ನೂ ಓದಿ: ಬೆಳಗಾವಿ| ತಂದೆಯ ಸಾವಿನ ಬಗ್ಗೆ ಮಗಳ ಅನುಮಾನ – ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

    ನಿಗದಿಯಂತೆ 7:40ಕ್ಕೆ ಸೂರ್ಯ ಕನ್ಯಾ ಲಗ್ನದಿಂದ ತುಲಾ ಲಗ್ನಕ್ಕೆ ಪ್ರವೇಶಿಸುತ್ತಿದ್ದಂತೆ ತೀರ್ಥೋದ್ಭವ ನೆರವೇರಿತು. ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿ, ಮೂರು ಬಾರಿ ಉಕ್ಕಿ ಬಂದಳು. ಬಳಿಕ ಅರ್ಚಕರು ನೆರೆದಿರುವ ಭಕ್ತರಿಗೆ ಬ್ರಹ್ಮಕುಂಡಿಕೆಯಿಂದ ತೀರ್ಥ ಪ್ರೋಕ್ಷಣೆ ಮಾಡಿದರು.

    ತೀರ್ಥೋದ್ಭವಕ್ಕೆ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ (Ponnanna) ಆಗಮಿಸಿದ್ದರು.

    ಬೆಳಗ್ಗೆ 7 ಗಂಟೆ 40 ನಿಮಿಷಕ್ಕೂ ಮೊದಲು ಒಂದು ಗಂಟೆಯಿಂದ ನಿರಂತರವಾಗಿ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆದವು. ಜೊತೆಗೆ ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಅರ್ಚಕರ ತಂಡ ಬ್ರಹ್ಮಕುಂಡಿಕೆಯ ಬಳಿ ಕಾವೇರಿ ತೀರ್ಥೋದ್ಭವಕ್ಕೆ ಪೂಜೆ ನಡೆಸಿದರು. ಕಾವೇರಿ ಮಾತೆಯನ್ನು ಆಹ್ವಾನಿಸಲು ವಿವಿಧ ಪೂಜಾ ಕೈಂಕಾರ್ಯಗಳನ್ನು ಅರ್ಚಕರ ತಂಡ ಕೈಗೊಂಡಿತ್ತು.

    ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಂಡ್ಯ, ಮೈಸೂರು, ಹಾಸನ ಹಾಗೂ ಬೇರೆ ರಾಜ್ಯಗಳಾದ ತಮಿಳುನಾಡು, ಕೇರಳದಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರ ಆಗಮಿಸಿದ್ದರು. ಇನ್ನೂ ತೀರ್ಥ ರೂಪಿಣಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಭಕ್ತಗಣ ಕಾತುರದಿಂದ ಕಾದು, ಉಕ್ಕಿ ಬಾ ಕಾವೇರಮ್ಮೆ, ಕಾವೇರಿ ಬಾಳು ಎಂದು ಭಜಿಸುತ್ತಿದ್ದರು. ಬ್ರ‍್ರಹ್ಮಕುಂಡಿಕೆಯ ಬಳಿ ಸಾವಿರಾರು ಜನ ಭಕ್ತರು ನೆರೆದಿದ್ದರು. ಕೊಡವ ಧಿರಿಸಿನಲ್ಲಿ ಬಂದ ಭಕ್ತರು ದುಡಿಕೊಟ್ಟು ಪಾಟ್ ಬಡಿಯುತ್ತಾ ಕಾವೇರಿ ಸ್ಮರಣೆ ಮಾಡಿದರು.ಇದನ್ನೂ ಓದಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಸೆಲ್ಫ್ ಆಕ್ಸಿಡೆಂಟ್ – ಇಬ್ಬರು ಸ್ಥಳದಲ್ಲೇ ಸಾವು

  • ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಗತ್ಯ ಸಿದ್ಧತೆಗೆ ಬೋಸರಾಜು ಸೂಚನೆ

    ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಗತ್ಯ ಸಿದ್ಧತೆಗೆ ಬೋಸರಾಜು ಸೂಚನೆ

    ಮಡಿಕೇರಿ: ಇದೇ ಅ.17ರಂದು ತಲಕಾವೇರಿಯಲ್ಲಿ ಜರುಗುವ ಪವಿತ್ರ ತೀರ್ಥೋದ್ಭವ ಸಂಬಂಧ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜು (N S Bosaraju) ಅವರು ಸೂಚಿಸಿದ್ದಾರೆ. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದ ಹಳೆ ಮುಡಿಶೆಡ್ ಕಟ್ಟಡದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪವಿತ್ರ ತೀರ್ಥೋದ್ಭವ ಸಂಬಂಧ ತಲಕಾವೇರಿಯಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಅಧಿಕಾರಿಗಳು ಗಮನಹರಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಈ ಬಾರಿ ಅ.17ರಂದು ಬೆಳಗ್ಗೆ 7:40 ಗಂಟೆಗೆ ಪವಿತ್ರ ತೀರ್ಥೋದ್ಭವ ಸಂಭವಿಸುವುದರಿಂದ ರಾತ್ರಿ ವೇಳೆಯಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಮಳೆ ಕಡಿಮೆಯಾಗಿದ್ದು, ಕೂಡಲೇ ರಸ್ತೆ ನಿರ್ವಹಣೆ ಕೈಗೊಳ್ಳಬೇಕು. ರಸ್ತೆ ಬದಿ ಕಾಡನ್ನು ಕಡಿಯಬೇಕು. ಗಿಡ ಗಂಟೆ ಸಂಬಂಧ ಅರಣ್ಯ ಅಧಿಕಾರಿಗಳು ತಗಾದೆ ತೆಗೆಯಬಾರದು ಎಂದು ನಿರ್ದೇಶನ ನೀಡಿದ್ದಾರೆ.ಇದನ್ನೂ ಓದಿ: ಹೀರೋ ಆದ ‘ಶ್ರೀಗೌರಿ’ ಸೀರಿಯಲ್ ವಿಲನ್- ‘ಪೀಟರ್’ ಚಿತ್ರಕ್ಕೆ ಡಾಲಿ, ವಿಜಯ್ ಸೇತುಪತಿ ಸಾಥ್

    ಪೊಲೀಸ್ ಇಲಾಖೆ ಅಧಿಕಾರಿಗಳು ಪವಿತ್ರ ತೀರ್ಥೋದ್ಭವ ಸಂಬಂಧ ಅಗತ್ಯ ಬಂದೋಬಸ್ತ್ ಮಾಡಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಅಗತ್ಯ ಬಸ್ ಸೌಲಭ್ಯ ಒದಗಿಸುವುದು, ಕಾವೇರಿ ನೀರಾವರಿ ನಿಗಮ, ಸೆಸ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಹಂತದಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದರು.

    ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸುವಂತೆ ಸೂಚಿಸಿದರು. ನಾಡಿನ ಜೀವನದಿ ತಲಕಾವೇರಿಯ ಪವಿತ್ರ ತೀರ್ಥೋದ್ಭವ ಒಂದು ವಿಶಿಷ್ಟವಾಗಿದ್ದು, ಪವಿತ್ರ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಭಕ್ತಾಧಿಗಳಿಗೆ ಅಗತ್ಯ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.

    ಮಡಿಕೇರಿ-ಭಾಗಮಂಡಲ, ಕರಿಕೆ-ಭಾಗಮಂಡಲ, ವಿರಾಜಪೇಟೆ-ಭಾಗಮಂಡಲ ರಸ್ತೆಗುಂಡಿ ಮುಚ್ಚಬೇಕು. ರಸ್ತೆ ನಿರ್ವಹಣೆ ಮಾಡಬೇಕು. ಹಾಗೆಯೇ ಭಾಗಮಂಡಲ-ತಲಕಾವೇರಿ ರಸ್ತೆ ಸರಿಪಡಿಸುವಂತೆ ನಿರ್ದೇಶನ ನೀಡಿದರು. ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರು ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.ಇದನ್ನೂ ಓದಿ: ಸೋಮವಾರ ನಾಗಮಂಗಲಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ: ಅಶ್ವಥ್ ನಾರಾಯಣ್

    ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ರಸ್ತೆ ಗಿಡಗಂಟೆ ಕಡಿಯುವ ಸಂಬಂಧ ಲೋಕೋಪಯೋಗಿ, ಅರಣ್ಯ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಮಾಡಿ ತುರ್ತು ಕ್ರಮವಹಿಸುವಂತೆ ಸೂಚಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ, ಪ್ರತೀ ಬಾರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಇದನ್ನು ನಿಯಂತ್ರಿಸಲು ಭಕ್ತಾಧಿಗಳು ಸಹಕರಿಸಬೇಕು ಎಂದು ಕೋರಿದರು. ಈ ಬಾರಿ ಬೆಳಗಿನ ವೇಳೆ ತೀರ್ಥೋದ್ಭವ ಸಂಭವಿಸುವುದರಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆ ಆಗಮಿಸಲಿದ್ದಾರೆ. ಆದ್ದರಿಂದ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಲಾಗುವುದು ಎಂದರು. ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿ ತೀರ್ಥೋದ್ಭವಕ್ಕೆ ಅಗತ್ಯ ಬಸ್ ಸೌಲಭ್ಯವನ್ನು ಕಳೆದ ಬಾರಿಯಂತೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

  • ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ಫಿಕ್ಸ್‌

    ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ಫಿಕ್ಸ್‌

    ಮಡಿಕೇರಿ: ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ತಲಕಾವೇರಿಯಲ್ಲಿ (Talacauvery) ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ (Cauvery Theerthodbhava) ಮುಹೂರ್ತ ಫಿಕ್ಸ್ ಆಗಿದೆ.

    ಕೊಡಗಿನ (Kodagu) ತಲಕಾವೇರಿಯಲ್ಲಿರುವ ತೀರ್ಥ ಕುಂಡಿಕೆಯಲ್ಲಿ ಅ.17 ರಂದು ಗುರುವಾರ ಬೆಳಗ್ಗೆ 7:40 ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಕಾವೇರಿ ತೀರ್ಥ ರೂಪದಲ್ಲಿ ಉಗಮವಾಗಲಿದೆ. ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಇದೆ. ಇದನ್ನೂ ಓದಿ: ಮಡಕಶಿರಾ ಭಾಗದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಉದ್ಯಮಿಗಳ ಜೊತೆ ಚರ್ಚೆ: ಕುಮಾರಸ್ವಾಮಿ ಭರವಸೆ

    ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಮಾತೆ ಕಾವೇರಿ ಜಲರೂಪದಲ್ಲಿ ದರ್ಶನ ಕೊಡುತ್ತಾಳೆ ಎಂದು ನಂಬಲಾಗುವ ಪವಿತ್ರ ತೀರ್ಥೋದ್ಭವಕ್ಕೆ ಈಗಾಗಲೇ ‌ಸಿದ್ಧತೆ ಕಾರ್ಯಗಳ ಚರ್ಚೆ ನಡೆಸಲಾಗುತ್ತಿದೆ.

    ಪ್ರತಿ ವರ್ಷವೂ ತುಲಾ ಮಾಸದಲ್ಲಿ ನಡೆಯುವ ಈ ಜಾತ್ರೆಗೆ ಸೆ.26 ರಿಂದಲೇ ಸಿದ್ಧತೆ ಶುರುವಾಗುತ್ತದೆ. ಅಕ್ಟೋಬರ್‌ ಕಾಲಿಡುತ್ತಿದ್ದಂತೆಯೇ ಭಾಗಮಂಡಲ, ತಲಕಾವೇರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗುತ್ತದೆ. ಇದುವರೆಗೂ ಕಾವೇರಿ ಭಕ್ತರ ಉತ್ಸಾಹಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ. ಈ ಬಾರಿ ಬೆಳಗ್ಗೆ ತೀರ್ಥೋದ್ಭವ ಅಗುತ್ತಿರುವುದರಿಂದ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶನನ್ನು ಕಾಂಗ್ರೆಸ್‌ ಸರ್ಕಾರ ಪೊಲೀಸ್‌ ವ್ಯಾನ್ ಕಂಬಿ ಹಿಂದೆ ಹಾಕಿದೆ:‌ ಮೋದಿ ವಾಗ್ದಾಳಿ

  • ತಲಕಾವೇರಿ, ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಸದ ಯದುವೀರ್

    ತಲಕಾವೇರಿ, ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಸದ ಯದುವೀರ್

    ಮಡಿಕೇರಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದ ಯದುವೀ‌ರ್ ಒಡೆಯರ್ (Yaduveer Krishnadatta Chamaraja Wadiyar) ಅವರು ಇಂದು ಕೊಡಗಿನ (Kodagu) ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ (Tala Kaveri) ಹಾಗೂ ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಸಂಸದರಾಗಿ ಗೆಲುವು ಸಾಧಿಸಿದ ನಂತರ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಯದುವೀರ್ ಅವರಿಗೆ ಗಡಿಭಾಗ ಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ನಂತರ ಸಂಸದರು ತಲಕಾವೇರಿ, ಭಾಗಮಂಡಲಕ್ಕೆ (Bhagamandala) ತೆರಳಿ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಮತ ಹಾಕಿದ್ದಕ್ಕೆ‌ ಕಾಂಗ್ರೆಸ್‌ ಸರ್ಕಾರ ಸೇಡು ತೀರಿಸಿಕೊಳ್ತಿದೆ – ಅಶೋಕ್‌

    ನಾಪೋಕ್ಲುವಿಗೆ ತೆರಳಿದ ಅವರು ಶ್ರೀಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇವಾಲಯದ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದರು. ತಮ್ಮ ಗೆಲುವಿಗಾಗಿ ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಜಿಲ್ಲೆಯ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.

    ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ ಯದುವೀರ್ ಅವರು ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: ದುರ್ಗಾದೇವಿಗೆ ಭಂಡಾರದ ನೈವೇದ್ಯ – ಮುಧೋಳ ಲೋಕಾಪುರದಲ್ಲಿ 7 ವರ್ಷಕ್ಕೊಮ್ಮೆ ನಡೆಯುತ್ತದೆ ವಿಶಿಷ್ಟ ಜಾತ್ರೆ