Tag: ತರಂಗ ವಿಶ್ವ

  • ಯೋಗರಾಜ್ ಭಟ್ಟರು ಮತ್ತೊಂದು ಎಣ್ಣೆ ಸಾಂಗ್ ಬಿಟ್ರು

    ಯೋಗರಾಜ್ ಭಟ್ಟರು ಮತ್ತೊಂದು ಎಣ್ಣೆ ಸಾಂಗ್ ಬಿಟ್ರು

    ನಿರ್ದೇಶಕ ಯೋಗರಾಜ್ ಭಟ್ ‘ಎಣ್ಣೆ ಸಾಂಗ್’ ಪಿತಾಮಹಾ ಆಗುವತ್ತ ದಾಪುಗಾಲು ಇಡುತ್ತಿದ್ದಾರೆ. ಒಂದರ ಮೇಲೊಂದು ಎಣ್ಣೆ ಸಾಂಗ್ ಬರೆಯುತ್ತಿದ್ದಾರೆ. ಈಗಾಗಲೇ ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು’ ಹಾಡು ಕುಡಿಯುವವರಿಗೆ ಹಾಗೂ ಕುಡಿಯದವರಿಗೆ ಇಬ್ಬರಿಗೂ ಮೆಚ್ಚುಗೆಯಾಗಿತ್ತು. ಇದೀಗ “ಗಿರ್ಕಿ” ಚಿತ್ರಕ್ಕಾಗಿ “ಗ್ಲಾಸು ಗ್ಲಾಸಿಗೆ  ತಾಗೊ ಟೈಮಲಿ ದೇಶ ಚಿಂತನೆ ಮಾಡೋಣ” ಎಂಬ ಹಾಡನ್ನು ಬರೆದಿದ್ದಾರೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಇತ್ತೀಚೆಗೆ ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. A2 music ಸಂಸ್ಥೆ ಈ ಹಾಡನ್ನು ಹೊರತಂದಿದೆ.  ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಈ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಣ್ಣೆ ಪ್ರಿಯರಿಗೆ ಮತ್ತೊಂದು ಒಳ್ಳೆಯ ಹಾಡು ಸಿಕ್ಕಿದೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರವನ್ನು  ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ‌. ಲವ್, ಥ್ರಿಲ್ಲರ್  ಹಾಗೂ ಕಾಮಿಡಿ  ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ವಾಸುಕಿ ಭುವನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ‌. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ತಮ್ಮ ಕಾಮಿಡಿ ಮೂಲಕ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.

  • ಮೆರೆದಾಡದೆಯೂ ಮನಸು ಮುಟ್ಟೋ ಪಾರ್ವತಮ್ಮನ ಮಗಳು!

    ಮೆರೆದಾಡದೆಯೂ ಮನಸು ಮುಟ್ಟೋ ಪಾರ್ವತಮ್ಮನ ಮಗಳು!

    ಬೆಂಗಳೂರು: ಹರಿಪ್ರಿಯಾ ನಟನೆಯ ಇಪ್ಪತೈದನೇ ಚಿತ್ರವೆಂಬುದೂ ಸೇರಿದಂತೆ ನಾನಾ ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಯಾವುದೇ ಅಬ್ಬರವಿಲ್ಲದ ನಿರೂಪಣೆ, ನಮ್ಮ ಆಸುಪಾಸಲ್ಲಿಯೇ ಕಥೆ ಘಟಿಸುತ್ತಾ ಪಾತ್ರಗಳು ಚಲಿಸಿದಂತೆ ಭಾಸವಾಗುವಷ್ಟು ವಾಸ್ತವಿಕ ದೃಶ್ಯಗಳ ಜೊತೆ ಜೊತೆಗೇ ಡೋಂಟ್ ಕೇರ್ ಸ್ವಭಾವದ ಪಾರ್ವತಮ್ಮನ ಮಗಳ ಸ್ಟೋರಿ ಬಿಚ್ಚಿಕೊಳ್ಳುತ್ತೆ.

    ಜೆ ಶಂಕರ್ ಇದೊಂದು ಭಿನ್ನ ಶೈಲಿಯ ಕಮರ್ಶಿಯಲ್ ಚಿತ್ರ ಎಂಬ ಸುಳಿವನ್ನು ಆರಂಭದಲ್ಲಿಯೇ ಜಾಹೀರು ಮಾಡಿದ್ದರು. ಆದ್ದರಿಂದಲೇ ಮಾಮೂಲಿ ಮೆಥಡ್ಡಿನ ನಾಯಕಿ ಪ್ರಧಾನ ಚಿತ್ರಗಳಿಗಿಂತ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಈ ಸಿನಿಮಾ ಪ್ರೇಕ್ಷಕರಿಗೆಲ್ಲ ಆಪ್ತವಾಗುತ್ತೆ.

    ನಾಯಕಿ ಶಾಲಾ ಕಾಲೇಜು ಹಂತದಿಂದಲೇ ಬೋಲ್ಡ್ ವ್ಯಕ್ತಿತ್ವ ಹೊಂದಿರುವಾಕೆ. ಈಕೆಯ ಖದರಿನ ಮುಂದೆ ಗಂಡು ಹೈಕಳೇ ಮಂಕು ಬಡಿಯುತ್ತವೆ. ಅಂಥಾ ಡೋಂಟ್ ಕೇರ್ ಸ್ವಭಾವದ ಹುಡುಗಿ ಪಾರ್ವತಮ್ಮನ ಮುದ್ದಿನ ಮಗಳು. ಆಕೆಯ ಬದುಕಲ್ಲಿಯೂ ಕೂಡಾ ಹಲವಾರು ನೋವು, ನಿರಾಸೆಗಳಿರುತ್ತವೆ. ಆದರೆ ಅದ್ಯಾವುದೂ ಕೂಡಾ ತನ್ನ ಪಾದರಸದಂಥಾ ವ್ಯಕ್ತಿತ್ವವನ್ನು ಘಾಸಿಗೊಳಿಸದಂತೆ ನೋಡಿಕೊಂಡು ಮುಂದುವರೆಯೋ ಪಾರ್ವತಮ್ಮನ ಮಗಳು ಕಡೆಗೂ ಕಷ್ಟಪಟ್ಟು ಓದಿ ಪೊಲೀಸ್ ಅಧಿಕಾರಿಯಾಗುತ್ತಾಳೆ. ಎಂಥಾ ಕ್ಲಿಷ್ಟಕರವಾದ ಕೇಸನ್ನೇ ಆದರೂ ಲೀಲಾಜಾಲವಾಗಿ ಬೇಧಿಸೋ ಚಾಕಚಕ್ಯತೆಯೊಂದಿಗೆ ಹೆಸರುವಾಸಿಯಾಗುತ್ತಾಳೆ.

    ಇಂಥಾ ಪೊಲೀಸ್ ಅಧಿಕಾರಿಣಿ ಪಾರ್ವತಮ್ಮನ ಮಗಳ ಮುಂದೆ ಭಯಾನಕವಾದೊಂದು ಪ್ರಕರಣ ತನಿಖೆಗಾಗಿ ಬರುತ್ತದೆ. ಅದು ವೈದ್ಯೆಯೊಬ್ಬಳ ಅಸಹಜ ಸಾವಿನ ಪ್ರಕರಣ. ಅದರಲ್ಲಿ ವೈದ್ಯಕೀಯ ವರದಿ ಸೇರಿದಂತೆ ಎಲ್ಲವೂ ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಈ ಪ್ರಕರಣದ ಸಿಕ್ಕನ್ನು ಪಾರ್ವತಮ್ಮನ ಮಗಳು ಹೇಗೆ ಬಿಡಿಸುತ್ತಾಳೆಂಬುದರ ಸುತ್ತ ಈ ಕಥೆ ರೋಚಕವಾಗಿ, ಯಾವುದೇ ಅಬ್ಬರಗಳಿಲ್ಲದೆ ಸಾಗುತ್ತೆ.

    ಇಂಥಾ ಪೊಲೀಸ್ ವೃತ್ತಿ, ಇನ್ವೆಸ್ಟಿಗೇಷನ್ನುಗಳಾಚೆಗೆ ಪಾರ್ವತಮ್ಮನ ಮಗಳ ಕಥೆ ಮನಸಿಗೆ ನಾಟುತ್ತೆ. ಆಕೆ ಒಳಿತೆಲ್ಲವನ್ನು ಮಗುಮನಸಿನಿಂದ ಸ್ವೀಕರಿಸುತ್ತಾ, ಅನ್ಯಾಯವನ್ನು ನಿಂತ ನಿಲುವಿನಲ್ಲಿಯೇ ಪ್ರತಿಭಟಿಸೋ ಹೆಣ್ಣುಮಗಳಾಗಿ ಎಲ್ಲರ ಮನಸಿಗಿಳಿಯುತ್ತಾಳೆ. ತೀರಾ ಯಾರಾದರೂ ಹುಡುಗ ಇಷ್ಟವಾದರೆ ನೇರಾನೇರ ಹೋಗಿ ಪ್ರಪೋಸ್ ಮಾಡಿ ಬಿಡುವಂಥಾ ಈ ಗಟ್ಟಿಗಿತ್ತಿಯ ಪಾಲಿಗೆ ಅಮ್ಮ ಪಾರ್ವತಮ್ಮ ನಿಜವಾದ ಶಕ್ತಿ. ಆ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸಿದ್ದಾರೆ. ತಾಯ್ತನದ ಎಲ್ಲ ಭಾವಗಳನ್ನೂ ಹೊಂದಿರೋ ಈ ಪಾತ್ರದ ಮೂಲಕ ಅವರ ಎಲ್ಲರನ್ನೂ ಆವರಿಸಿಕೊಳ್ಳುತ್ತಾರೆ.

    ನಾಯಕಿ ಪ್ರಧಾನ ಚಿತ್ರಗಳಲ್ಲಿರೋ ಯಾವ ಅಬ್ಬರವೂ ಇಲ್ಲಿಲ್ಲ. ಆದರೆ ನಿರ್ದೇಶಕ ಜೆ ಶಂಕರ್ ಅವರು ಅದೊಂದು ಕೊರತೆ ಅನ್ನಿಸದಂತೆ ದೃಶ್ಯ ಕಟ್ಟಿದ್ದಾರೆ. ಯಾಕೆಂದರೆ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಯಾವ ಮೆರೆದಾಟವೂ ಇಲ್ಲದೆ ನೋಡುಗರ ಮನಸು ಮುಟ್ಟುತ್ತಾರೆ. ನಿರ್ಮಾಪಕರಾದ ಶಶಿಧರ್ ಕೆ ಎಂ ಅವರೂ ಕೂಡಾ ಡಾಕ್ಟರ್ ಪಾತ್ರದಲ್ಲಿ ಮಿಂಚಿದ್ದಾರೆ. ತರಂಗ ವಿಶ್ವ ಸೇರಿದಂತೆ ಎಲ್ಲರೂ ತಂತಮ್ಮ ಪಾತ್ರಗಳಿಗೇ ಬೇರೆಯದ್ದೇ ಟಚ್ ನೀಡಿದ್ದಾರೆ. ಈ ಮೂಲಕವೇ ಜೆ ಶಂಕರ್ ಭಿನ್ನ ಬಗೆಯ, ಕ್ರಿಯೇಟಿವ್ ನಿರ್ದೇಶಕರಾಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ಎಂಥಾ ಪಾತ್ರಗಳಿಗಾದರೂ ಹೊಂದಿಕೊಳ್ಳುವ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಮತ್ತಷ್ಟು ಇಷ್ಟವಾಗುತ್ತಾರೆ. ಇದು ಎಲ್ಲರೂ ನೋಡಲೇ ಬೇಕಾದ ವಿಶಿಷ್ಟವಾದ ಚಿತ್ರ.

    ರೇಟಿಂಗ್: 3.5/5

  • ಮಹಿಳಾ ಟೆಕ್ಕಿಗೆ ಕಿರುಕುಳ ಆರೋಪ- ಸ್ಯಾಂಡಲ್ ವುಡ್ ಹಾಸ್ಯನಟನ ವಿರುದ್ಧ ಎಫ್‍ಐಆರ್!

    ಮಹಿಳಾ ಟೆಕ್ಕಿಗೆ ಕಿರುಕುಳ ಆರೋಪ- ಸ್ಯಾಂಡಲ್ ವುಡ್ ಹಾಸ್ಯನಟನ ವಿರುದ್ಧ ಎಫ್‍ಐಆರ್!

    ಬೆಂಗಳೂರು: ಸ್ಯಾಂಡಲ್‍ವುಡ್‍  ಹಾಸ್ಯನಟನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹಾಸ್ಯನಟ ತರಂಗ ವಿಶ್ವ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಟೆಕ್ಕಿಯೊಬ್ಬರು ದೂರು ನೀಡಿದ್ದಾರೆ.

    ಹಾಸ್ಯನಟ ತರಂಗ ವಿಶ್ವ ಹಾಗೂ ಮಹಿಳೆ ಉತ್ತರಹಳ್ಳಿಯ ಪ್ಯಾಷನ್ ಹೌಸ್ ಅಪಾರ್ಟ್‍ಮೆಂಟ್ ನಲ್ಲಿ ವಾಸವಿದ್ದರು. ಮಹಿಳೆ ತನ್ನ ಮಗಳ ಜೊತೆ ಒಂಟಿಯಾಗಿ ವಾಸವಿದ್ದರು. ಈ ವೇಳೆ ವಿಶ್ವ ಹಾಗೂ ಪುಟ್ಟಸ್ವಾಮಿ ಎಂಬವರು ಮಹಿಳೆಯನ್ನ ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ನಾಲ್ವರ ವಿರುದ್ಧ ಎಫ್‍ಐಅರ್ ದಾಖಲಿಸಿದ್ದಾರೆ.

    ಮೊದಲು ಹಾಸ್ಯನಟನ ವಿರುದ್ಧ ದೂರು ದಾಖಲಿಸಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಮೀನಾಮೇಷ ಎಣಿಸಿದ್ದಾರೆ. ಬಳಿಕ ಮಹಿಳೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಮೀಷನರ್ ಸೂಚನೆ ಮೇರೆಗೆ ಸಿಕೆ ಅಚ್ಚುಕಟ್ಟು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.