Tag: ತಮ್ಮಣ್ಣ

  • ತಿಥಿ ಚಿತ್ರ ಖ್ಯಾತಿಯ ತಮ್ಮಣ್ಣ ನಟನೆಯ ‘ದಾಸಪ್ಪ’ ಸಿನಿಮಾದ ಟ್ರೈಲರ್ ರಿಲೀಸ್

    ತಿಥಿ ಚಿತ್ರ ಖ್ಯಾತಿಯ ತಮ್ಮಣ್ಣ ನಟನೆಯ ‘ದಾಸಪ್ಪ’ ಸಿನಿಮಾದ ಟ್ರೈಲರ್ ರಿಲೀಸ್

    ರಾಷ್ಟ್ರಪ್ರಶಸ್ತಿ ವಿಜೇತ ‘ತಿಥಿ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ನಟ ತಮ್ಮಣ್ಣ ಪ್ರಮುಖಪಾತ್ರದಲ್ಲಿ ನಟಿಸಿರುವ ‘ದಾಸಪ್ಪ’ ಚಿತ್ರದ ಟ್ರೈಲರ್ ಸಿರಿ ಮ್ಯೂಸಿಕ್ ಮೂಲಕ ಇತ್ತೀಚಿಗೆ ಬಿಡುಗಡೆಯಾಯಿತು. ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್(ಬಹದ್ದೂರ್) ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    ನಾನು ಮಂಡ್ಯ ಜಿಲ್ಲೆಯ ಕೀಲಾರದವನು ಎಂದು ಮಾತನಾಡಿದ ನಿರ್ದೇಶಕ ವಿಜಯ್ ಕೀಲಾರ, ದಾಸಪ್ಪ ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಎಲ್ಲಾ ಹಳ್ಳಿಗಳಲ್ಲಿ ಯಾವುದೇ ಕಾರ್ಯವಾದರೂ ದಾಸಪ್ಪ ಅವರು ಇರಲೇ ಬೇಕು. ಅಂತಹ ದಾಸಪ್ಪ ಎಂಬ ಪಾತ್ರದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ತಿಥಿ ಚಿತ್ರದ ಸ್ಪೂರ್ತಿಯಿಂದ ಈ ಚಿತ್ರ ಮಾಡಿದ್ದೇನೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ನಾನೇ ಬರೆದಿದ್ದೇನೆ. ಆನಂದ್ ಕೆಂಪೇಗೌಡ ಕೆಬ್ಬಳ್ಳಿ ಈ ಚಿತ್ರದ ನಿರ್ಮಾಪಕರು. ಶ್ರೀನಿವಾಸ್ ಹಾಗೂ ರಾಘವೇಂದ್ರ ಸಹ ನಿರ್ಮಾಪಕರು‌.

    ತಿಥಿ ಖ್ಯಾತಿಯ ನಟ ತಮ್ಮಣ್ಣ ಅವರು ದಾಸಪ್ಪನಾಗಿ ಅಭಿನಯಿಸಿದ್ದಾರೆ. ಮಂಜು ಪಾವಗಡ, ವಿನೋದ್ ಗೊಬ್ರಗಾಲ, ಅಂಜನ ಗಿರೀಶ್, ಸುರಕ್ಷಿತ ಶೆಟ್ಟಿ, ಸಿಂಚನ ಗೌಡ  ಮುಂತಾದವರು ಅಭಿನಯಿಸಿದ್ದಾರೆ. ಹಾಡುಗಳು ಹಾಗೂ ಸಾಹಸ ಸನ್ನಿವೇಶಗಳು ಇಲ್ಲದಿರುವುದು ಈ ಚಿತ್ರದ ವಿಶೇಷ.  ಮಂಡ್ಯ, ಕೀಲಾರ, ಮದ್ದೂರಿನಲ್ಲಿ ಚಿತ್ರೀಕರಣವಾಗಿದೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು. ದಾಸಪ್ಪನ ಪಾತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ ಎಂದ ನಟ ತಮ್ಮಣ್ಣ, ಚಿತ್ರತಂಡದವರಿಗೆ ಧನ್ಯವಾದ ತಿಳಿಸಿದರು.

    ನಿರ್ದೇಶಕರು ನನ್ನ ಸ್ನೇಹಿತರು. ಕಥೆ ಕೇಳಿ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು. ನಿರ್ಮಾಣದ ಜೊತೆಗೆ ಸಣ್ಣ ಪಾತ್ರದಲ್ಲೂ ಕಾಣಿಸಿಕೊಂಡಿರುವುದಾಗಿ ಸಹ ನಿರ್ಮಾಪಕ ಶ್ರೀನಿವಾಸ್ ತಿಳಿಸಿದರು‌. ಮತ್ತೊಬ್ಬ ಸಹ ನಿರ್ಮಾಪಕ ರಾಘವೇಂದ್ರ ಹಾಗೂ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಿತ್ರದಲ್ಲಿ ನಟಿಸಿರುವ ಮಂಜು ಪಾವಗಡ, ವಿನೋದ್  ಗೊಬ್ರಗಾಲ, ಸುರಕ್ಷಿತ, ಸಿಂಚನ ಗೌಡ ಮುಂತಾದವರು ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು.

  • ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ- ಡಿಸಿ ತಮ್ಮಣ್ಣ

    ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ- ಡಿಸಿ ತಮ್ಮಣ್ಣ

    – ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಗೆ ಬೈದ ಸಚಿವ

    ಮಂಡ್ಯ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ನಾಲಿಗೆ ಸ್ಥಿಮಿತ ಕಳೆದುಕೊಂಡಿದ್ದಾರೆ.

    ಶುಕ್ರವಾರ ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಕ್ಷೇತ್ರದಲ್ಲಿ ನಿಖಿಲ್‍ಗೆ ಮತ ಹಾಕದ ಜನರ ಮೇಲೆ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ.

    ಶಂಕುಸ್ಥಾಪನೆ ವೇಳೆ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ಈ ವೇಳೆ ತಮ್ಮಣ್ಣ ಜನರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರಾಮಸ್ಥರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಕೇಳಿಕೊಂಡಿದ್ದರು.

    ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದಾರೆ.

    ಸಚಿವ ತಮ್ಮಣ್ಣ ಚುನಾವಣೆ ವೇಳೆಯಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ತಮ್ಮಣ್ಣ ಅವರು ಹೆಬ್ಬೆರಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ ಹೋದ ಕಡೆಗಳಲ್ಲಿ ಮತ ಹಾಕದ ಮತದಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಸುಮಲತಾ ಗೆಲುವಿಗೆ ಕಾರಣರಾದ ಜೆಡಿಎಸ್ ತ್ರಿಮೂರ್ತಿಗಳಿಗೆ ಅಭಿನಂದನೆ – ಬ್ಯಾನರ್ ಹಾಕಿ ವ್ಯಂಗ್ಯ

    ಸುಮಲತಾ ಗೆಲುವಿಗೆ ಕಾರಣರಾದ ಜೆಡಿಎಸ್ ತ್ರಿಮೂರ್ತಿಗಳಿಗೆ ಅಭಿನಂದನೆ – ಬ್ಯಾನರ್ ಹಾಕಿ ವ್ಯಂಗ್ಯ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದು, ಇದೀಗ ಅವರ ಬೆಂಬಲಿಗರು ಮಂಡ್ಯ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.

    ಮಂಡ್ಯದ ನೂರು ಅಡಿ ರಸ್ತೆಯಲ್ಲಿ ಸುಮಲತಾ ಬೆಂಬಲಿಗರು ಬ್ಯಾನರ್ ಕಟ್ಟಿದ್ದಾರೆ. ಬ್ಯಾನರ್‌ನಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಫೋಟೋ ಹಾಕಿದ್ದಾರೆ. ಅವರ ಫೋಟೋ ಕೆಳಗೆ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣರಾದ ತ್ರಿಮೂರ್ತಿಗಳಿಗೆ ಅಭಿನಂದನೆಗಳು ಎಂದು ಬರೆದಿದ್ದು, ಈ ಮೂಲಕ ಸುಮಲತಾ ಬೆಂಬಲಿಗರು ವ್ಯಂಗ್ಯವಾಡಿದ್ದಾರೆ.

    ಲೋಕಸಭಾ ಚುನಾವಣೆಗೂ ಮುನ್ನಾ ಸುಮಲತಾ ವಿರುದ್ಧ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ಅವರು ಲಘು ಟೀಕೆ ಮಾಡಿದ್ದರು. ಇದರಿಂದ ಈ ಮೂವರು ಜೆಡಿಎಸ್ ನಾಯಕರು ಸುಮಲತಾ ಗೆಲುವಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಬೆಂಬಲಿಗರು ಈ ರೀತಿ ಮಾಡಿದ್ದಾರೆ.

    ಸುಮಲತಾ ಮನೆಗೆ ಬಂದವರಿಗೆ ಒಂದು ಲೋಟ ನೀರು ಕೊಡುತ್ತಿರಲಿಲ್ಲ ಎಂದು ತಮ್ಮಣ್ಣ ಟೀಕೆ ಮಾಡಿದ್ದರು. ಇನ್ನೂ ಶ್ರೀಕಂಠೇಗೌಡ, ಸುಮಲತಾ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದರು. ಸುಮಲತಾ ಆಂಧ್ರ ನಾಯ್ಡು, ಸಿನಿಮಾದವರನ್ನು ನಂಬಬೇಡಿ ಎಂದು ಶಿವರಾಮೇಗೌಡ ವ್ಯಂಗ್ಯ ಮಾಡಿದ್ದಾರೆ. ಈ ಮೂವರ ಹೇಳಿಕೆಗಳಿಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಅವಹೇಳನಕಾರಿ ಹೇಳಿಕೆಗಳಿಂದ ಸುಮಲತಾ ಗೆಲುವಿಗೆ ಸಹಕಾರ ಆಯ್ತು ಎಂದು ಅಭಿನಂದನಾ ಬ್ಯಾನರ್ ಹಾಕುವ ಮೂಲಕ ಜೆಡಿಎಸ್ ನಾಯಕರ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

  • ನಾಳೆ KSRTC, ಬಿಎಂಟಿಸಿ ಬಸ್ ಇರುತ್ತಾ – ಸಾರಿಗೆ ಸಚಿವರು ಹೇಳೋದು ಏನು

    ನಾಳೆ KSRTC, ಬಿಎಂಟಿಸಿ ಬಸ್ ಇರುತ್ತಾ – ಸಾರಿಗೆ ಸಚಿವರು ಹೇಳೋದು ಏನು

    ಮಂಡ್ಯ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್ ಗೆ ಸಹಕಾರ ನೀಡುವುದಾಗಿ ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಹೇಳಿದ್ದಾರೆ.

    ಮದ್ದೂರಿನಲ್ಲಿ ಮಾತನಾಡಿದ ಅವರು, ಅನೇಕ ಸಂಘ ಸಂಸ್ಥೆಗಳು ಬಂದ್‍ಗೆ ಕರೆ ನೀಡಿವೆ. ಹೀಗಾಗಿ ಸಾರಿಗೆ ಇಲಾಖೆಯ ನೌಕರರು ಸಹಕರಿಸುತ್ತಾರೆ ಎಂದು ತಿಳಿಸಿದರು.

    ಸರ್ಕಾರದ ಬೆಂಬಲ ಎಂದು ಹೇಳುತ್ತಿಲ್ಲ. ಕಾರ್ಮಿಕರ ಹಿತದೃಷ್ಟಿಯಿಂದ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ನಾವು ಕೂಡ ಸಹಕರಿಸುತ್ತಿದ್ದೇವೆ. ನಾಳೆ ಬಸ್ ಸಂಚಾರದ ಬಗ್ಗೆ ಪರಿಸ್ಥಿತಿ ನೋಡಿ ತೀರ್ಮಾನಕ್ಕೆ ಬರುತ್ತೇವೆ. ಆದರೆ ಬಂದ್ ಇರುವುದರಿಂದ ಸಾರಿಗೆ ವ್ಯವಸ್ಥೆ ಕಷ್ಟ ಎಂದು ಹೇಳಿದರು.

    ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಮಾತ್ರ ಬಸ್ ಸಂಚಾರ ಇರುತ್ತೆ. ಇಲ್ಲದಿದ್ರೆ ಬಸ್ ಸಂಚಾರ ಇರುವುದಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್‍ನಲ್ಲೂ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಫೋಟ

    ಜೆಡಿಎಸ್‍ನಲ್ಲೂ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಫೋಟ

    ಮಂಡ್ಯ: ಕಾಂಗ್ರೆಸ್ ಆಯ್ತು ಜೆಡಿಎಸ್ ನಲ್ಲಿ ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

    ಸಿಎಸ್ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ನೀಡಿ ಜಿಲ್ಲೆಯಲ್ಲಿ ಪಕ್ಷಕ್ಕೆ ಏನು ಮಾಡದ ಡಿಸಿ ತಮ್ಮಣ್ಣಗೆ ಸಾರಿಗೆ ಖಾತೆ ಕೊಟ್ಟಿರುವುದು ಪುಟ್ಟರಾಜು ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ

    ಸಣ್ಣ ನೀರಾವರಿ ಖಾತೆ ಸಿಕ್ಕಿದ ಹಿನ್ನೆಲೆಯಲ್ಲಿ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿಯನ್ನು ಪಡೆಯಿರಿ ಎಂದು ಪುಟ್ಟರಾಜು ಅವರಿಗೆ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ನಾಳೆ ಪುಟ್ಟರಾಜು ತುರ್ತು ಪತ್ರಿಕಾಗೋಷ್ಠಿ ಕರೆದಿದ್ದು ಕುತೂಹಲ ಹೆಚ್ಚಾಗಿದೆ.

    ಈ ಬಾರಿಯ ಚುನಾವಣೆಯಲ್ಲಿ ಪುಟ್ಟರಾಜು ಚುನಾವಣೆಯಲ್ಲಿ ಜಿಲ್ಲೆಯ ಹೊಣೆ ಹೊತ್ತಿದ್ದರು. ಆದರೆ ಪಕ್ಷ ಸಂಘಟನೆಗೆ ಏನು ಮಾಡದ ಡಿಸಿ ತಮ್ಮಣ್ಣ ಅವರಿಗೆ ಸಾರಿಗೆ ಖಾತೆಯನ್ನು ನೀಡಿದ್ದಕ್ಕೆ ಪುಟ್ಟರಾಜು ಬೆಂಬಲಿಗರು ಆಕ್ರೋಶಗೊಂಡಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.