Tag: ತಮಿಳು ಸಿನಿಮಾ

  • ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ

    ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ

    ಚೆನ್ನೈ: ತಮಿಳಿನ ಖ್ಯಾತ ಹ್ಯಾಸ ನಟ ವಿವೇಕ್ ಇಂದು ಬೆಳಗಿನ ಜಾವ ಸುಮಾರು 4.30ಕ್ಕೆ ನಿಧನರಾಗಿದ್ದಾರೆ,

    ವಿವೇಕ್ ಅವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಆರೋಗ್ಯ ಸ್ಥಿತಿ ಪರೀಕ್ಷಿಸಿದಾಗ ಹೃದಯಾಘಾತವಾಗಿರುವುದು ತಿಳಿದು ಬಂದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು.

    ವೈದ್ಯರು ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದ್ರೋಗ ತಜ್ಞರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    ವಿವೇಕ್ ಏಪ್ರಿಲ್ 15 ರಂದು ಅವರ ಸ್ನೇಹಿತನೊಂದಿಗೆ ಚೆನ್ನೈನ ಒಮಾಂಡುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ವಿವೇಕ್ ಅವರು, ಎಲ್ಲರೂ ಕೂಡ ಕೋವಿಡ್ -19 ಲಸಿಕೆಗಳನ್ನು ಪಡೆಯುವಂತೆ ಮನವಿ ಮಾಡಿದ್ದರು. ಹಾಗೆ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಪಾಲಿಸಬೇಕೆಂದು ಜನರಿಗೆ ಕಿವಿಮಾತು ಹೇಳಿದ್ದರು.

    ವಿವೇಕ್ ಅವರು ತಮಿಳಿನ ಬಹುಬೇಡಿಕೆಯ ಹಾಸ್ಯ ನಟರಾಗಿದ್ದು, ಈಗಾಗಲೇ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

  • ಮರಿನಾ ಸಿನ್ಮಾ ಖ್ಯಾತಿಯ ನಟ ಥೆನ್ನರಸು ಸೂಸೈಡ್

    ಮರಿನಾ ಸಿನ್ಮಾ ಖ್ಯಾತಿಯ ನಟ ಥೆನ್ನರಸು ಸೂಸೈಡ್

    -ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
    -3 ವರ್ಷ ಹಿಂದೆ ಪ್ರೀತಿಸಿದ ಯುವತಿ ಜೊತೆ ಮದ್ವೆ

    ಚೆನ್ನೈ: 2012ರಲ್ಲಿ ಬಿಡುಗಡೆಯಾಗಿದ್ದ ಮರಿನಾ ಸಿನಿಮಾ ಖ್ಯಾತಿಯ ನಟ ಥೆನ್ನರಸು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ನಟ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    ಶಿವಕಾರ್ತಿಕೇಯನ್ ಮತ್ತು ಓವಿಯಾ ನಟನೆಯ ಮರಿನಾ ಸಿನಿಮಾ 2012ರಲ್ಲಿ ಸಖತ್ ಸದ್ದು ಮಾಡಿತ್ತು. ಮರಿನಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಥೆನ್ನರಸು ತಮ್ಮ ಸಹಜ ನಟನೆಯ ಮೂಲಕ ನೋಡುಗರಿಗೆ ಇಷ್ಟವಾಗಿದ್ದರು. ಮರಿನಾ ಬಳಿಕ ತಮಿಳಿನ ಹಲವು ಸಿನಿಮಾಗಳಲ್ಲಿ ಥೆನ್ನರಸು ನಟಿಸಿ ಸೈ ಅನ್ನಿಸಿಕೊಂಡಿದ್ದರು.

    ಮೂರು ವರ್ಷಗಳ ಹಿಂದೆ ಥೆನ್ನರಸು ಪ್ರೀತಿಸಿದ ಯುವತಿಯನ್ನ ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಸಹ ಇದೆ. ಮದ್ಯದ ದಾಸನಾಗಿದ್ದ ಥೆನ್ನರಸು ಮನೆಯಲ್ಲಿ ಪತ್ನಿ ಜೊತೆ ಸದಾ ಜಗಳವಾಡುತ್ತಿದ್ದರು. ಇಂದು ಸಹ ಪತಿ-ಪತ್ನಿ ನಡುವೆ ವಾಕ್ಸಮರ ನಡೆದಿದೆ. ಕೊನೆಗೆ ಕೋಣೆ ಸೇರಿದ ಥೆನ್ನರಸು ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಟರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರೋ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಟರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ನಟನ ನಿಧನಕ್ಕೆ ಕಾಲಿವುಡ್ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

  • ವಿಜಯ್ ಸಂಭಾವನೆ ಗುಟ್ಟು ಬಿಚ್ಚಿಟ್ಟ ಐಟಿ ಅಧಿಕಾರಿಗಳು

    ವಿಜಯ್ ಸಂಭಾವನೆ ಗುಟ್ಟು ಬಿಚ್ಚಿಟ್ಟ ಐಟಿ ಅಧಿಕಾರಿಗಳು

    ಚೆನ್ನೈ: ಸಿನಿಮಾಗಳ ಬಗ್ಗೆ ಚರ್ಚೆ ನಡೆಯುವಂತೆಯೇ ನಟರ ಸಂಭಾವನೆ ಬಗ್ಗೆ ಸಹ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಈ ವಿಚಾರ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಕೇವಲ ಗಾಸಿಪ್‍ಗಳ ಮೂಲಕ ಸಂಭಾವನೆ ಸುದ್ದಿ ಹರಿದಾಡುತ್ತಿರುತ್ತದೆ. ಆದರೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಇದೀಗ ತಮಿಳು ನಟ ವಿಜಯ್ ದಳಪತಿಯವರ ಸಂಭಾವನೆ ಜಗಜ್ಜಾಹೀರಾಗಿದ್ದು, ಹುಬ್ಬೇರಿಸುವಂತೆ ಮಾಡಿದೆ.

    ಹೌದು ಕಳೆದ ವರ್ಷ ಧೂಳೆಬ್ಬೆಸಿದ್ದ ಬಿಗಿಲ್ ಚಿತ್ರದ ನಿರ್ಮಾಪಕ ಎಜಿಎಸ್ ಎಂಟರ್‍ಟೈನ್ಮೆಂಟ್ ಆ್ಯಂಡ್ ಫೈನಾನ್ಶಿಯರ್ ಕಚೇರಿ ಹಾಗೂ ಅಂಬು ಚೆಜಿಯನ್ ಅವರ ಮೆನೆ ಮೇಲೆ ಐಟಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ವೇಳೆ ಕೋಟಿಗಟ್ಟಲೆ ಹಣ ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಂಭಾವನೆ ವಿಚಾರವಾಗಿ ನಟ ದಳಪತಿ ವಿಜಯ್ ಮನೆ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಐಟಿ ಅಧಿಕಾರಿಗಳಿಂದ ವಿಜಯ್ ಸಂಭಾವನೆ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

    ‘ಬಿಗಿಲ್’ ಹಾಗೂ ‘ಮಾಸ್ಟರ್’ ಚಿತ್ರಗಳಿಗೆ ನಟ ದಳಪತಿ ವಿಜಯ್ ಪಡೆದಿರುವ ಸಂಭಾವನೆಗೆ ಸೂಕ್ತ ತೆರಗೆ ಪಾವತಿಸಿದ್ದಾರೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದ್ದು, ಈ ಮೂಲಕ ವಿಜಯ್ ಐಟಿ ಕುಣಿಕೆಯಿಂದ ಪಾರಾಗಿದ್ದಾರೆ. ಇದೇ ವೇಳೆ ಸಂಭಾವನೆ ಕುರಿತ ಮಾಹಿತಿ ಬಹಿರಂಗವಾಗಿದೆ. ನಟ ದಳಪತಿ ವಿಜಯ್ ಅವರ ಸಂಭಾವನೆ ಚಿತ್ರದಿಂದ ಚಿತ್ರಕ್ಕೆ ಭಾರೀ ಪ್ರಮಾಣದಲ್ಲಿ ಜಿಗಿದಿದೆ ಎಂಬ ಗುಟ್ಟು ರಟ್ಟಾಗಿದೆ.

    ವಿಜಯ್ ಅವರು ಬಿಗಿಲ್ ಸಿನಿಮಾಗೆ 50 ಕೋಟಿ ರೂ. ಸಂಭಾವನೆ ಪಡೆದಿದ್ದು, ಅವರ ಮುಂದಿನ ಚಿತ್ರ ಮಾಸ್ಟರ್‍ಗೆ 80 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಐಟಿ ಮೂಲಗಳನ್ನು ಆಧಾರಿಸಿ ವರದಿಯಾಗಿದೆ. ಅಲ್ಲದೆ ತನಿಖೆ ಮುಕ್ತಾಯವಾಗಿದ್ದು, ಮೂವರಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸುವುದು ಬಾಕಿ ಇದೆ. ವಿಜಯ್ ಹಾಗೂ ಕುಟುಂಬಸ್ಥರು ಹೂಡಿರುವ ಬಂಡವಾಳದ ಬಗ್ಗೆ ಸಂಶಯವಿದೆ ಎಂದಿದ್ದಾರೆ.

    ಬಿಗಿಲ್ ಸಿನಿಮಾ ಕಳೆದ ವರ್ಷ ಭರ್ಜರಿ ಸದ್ದು ಮಾಡಿತ್ತು. ಅಲ್ಲದೆ ಸುಮಾರು 300 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿತ್ತು. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮಾಸ್ಟರ್ ಚಿತ್ರ ಮೂಡಿ ಬಂದಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಬಹು ತಾರಾಗಣವೇ ಇದ್ದು, ವಿಜಯ್ ಸೇತುಪತಿ, ಮಾಳವಿಕಾ ಮೋಹನನ್ ಹಾಗೂ ಆಂಡ್ರಿಯಾ ಜೆರೆಮಯ್ಯಾ ಅಭಿನಯಿಸಿದ್ದರು.

  • ‘ಫ್ರೆಂಡ್ ಶಿಪ್’ಗಾಗಿ ತಮಿಳು ಚಿತ್ರರಂಗಕ್ಕೆ ಬಂದ ಹರ್ಭಜನ್ ಸಿಂಗ್

    ‘ಫ್ರೆಂಡ್ ಶಿಪ್’ಗಾಗಿ ತಮಿಳು ಚಿತ್ರರಂಗಕ್ಕೆ ಬಂದ ಹರ್ಭಜನ್ ಸಿಂಗ್

    ಬೆಂಗಳೂರು: ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ತಮಿಳು ಚಿತ್ರವೊಂದರಲ್ಲಿ ನಟಿಸಲು ಕಾಲಿವುಡ್‍ಗೆ ಬಂದಿದ್ದಾರೆ.

    ಸದ್ಯ ಕ್ರಿಕೆಟ್ ಪಂದ್ಯಗಳಲ್ಲಿ ಸಕ್ರಿಯವಾಗಿ ಇಲ್ಲದ ಹರ್ಭಜನ್ ಸಿಂಗ್ ಅವರು ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹೌದು ಭಾರತದ ದೂಸ್ರಾ ಸ್ಪೆಶಲಿಸ್ಟ್ ಬಜ್ಜಿ ಈಗ ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ಫ್ರೆಂಡ್ ಶಿಪ್’ ಚಿತ್ರದಲ್ಲಿ ನಟಿಸಲಿದ್ದಾರೆ.

    ಕ್ರಿಕೆಟ್‍ಗೆ ಅಲ್ಪ ವಿರಾಮವಿಟ್ಟಿರುವ ಹರ್ಭಜನ್ ಸಿಂಗ್ ಅವರು ಸದ್ಯ ಹಲವಾರು ಟಿವಿ ಶೋನಲ್ಲಿ ಗೆಸ್ಟ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಪತ್ನಿ ಗೀತಾ ಬಸ್ರಾ ಅಭಿನಯದ ಸೆಕೆಂಡ್ ಹ್ಯಾಂಡ್ ಹಸ್ಬೆಂಡ್ ಚಿತ್ರದಲ್ಲಿ ಸ್ಪೆಶಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಫ್ರೆಂಡ್ ಶಿಪ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಜ್ಜಿ ಚಿತ್ರದ ಮೊದಲ ಪೋಸ್ಟರ್ ಅನ್ನು ಹಾಕಿ ತಮಿಳಿನಲ್ಲೇ ತಮಿಳುಚಿತ್ರರಂಗಕ್ಕೆ ಧನ್ಯವಾದ ತಿಳಿಸಿದ್ದಾರೆ.

    ಫ್ರೆಂಡ್ ಶಿಪ್ ಸಿನಿಮಾವನ್ನು ಜಾನ್ ಪೌಲ್ ಮತ್ತು ಶ್ಯಾಮ್ ಸೂರ್ಯ ನಿರ್ದೇಶನ ಮಾಡುತ್ತಿದ್ದು, ಬಿಡುಗಡೆಯಾಗಿರುವ ಮೊದಲ ಪೋಸ್ಟರ್ ಸಖತ್ ಟ್ರೆಂಡಿಯಾಗಿದೆ. ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಪೋಸ್ಟರ್ ಅಲ್ಲಿ ಇಬ್ಬರು ವ್ಯಕ್ತಿಗಳ ಕೈಗೆ ಒಂದೇ ಬೇಡಿಯನ್ನು ಹಾಕಿದ್ದಾರೆ. ಬಜ್ಜಿ ನಟನೆಯ ಮೊದಲ ತಮಿಳು ಸಿನಿಮಾದ ಪೋಸ್ಟರ್ ಗೆ ಪ್ರೇಕ್ಷಕನಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಫ್ರೆಂಡ್ ಶಿಪ್ ಚಿತ್ರದ ಪೋಸ್ಟರ್ ಅನ್ನು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಮೊದಲ ಬಾರಿಗೆ ಭಾರತದ ಚಿತ್ರರಂಗದಲ್ಲಿ ಭಾರತೀಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಫ್ರೆಂಡ್ ಶಿಪ್ ಎಂಬ ಚಿತ್ರದಲ್ಲಿ ಲೀಡ್ ರೋಲ್‍ನಲ್ಲಿ ಅಭಿನಯಿಸಲಿದ್ದಾರೆ. ಇದೇ 2020 ಕ್ಕೆ ಈ ಸಿನಿಮಾ ದೇಶಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

    ಹರ್ಭಜನ್ ಸಿಂಗ್ ಅವರು ಜೊತೆಗೆ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಮೊದಲ ಬಾರಿಗೆ ಇದೇ ವರ್ಷ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇರ್ಫಾನ್ ಪಠಾಣ್ ಅವರು ವಿಕ್ರಮ್ ನಟನೆಯ ‘ವಿಕ್ರಮ್ 58’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ಸ್ವತಃ ಸಿನಿಮಾದ ನಿರ್ದೇಶಕ ಅಜಯ್ ಜ್ಞಾನಮುತ್ತು ಅವರು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

  • ಕಾಲಿವುಡ್‍ಗೆ ಹರ್ಭಜನ್, ಇರ್ಫಾನ್ ಎಂಟ್ರಿ

    ಕಾಲಿವುಡ್‍ಗೆ ಹರ್ಭಜನ್, ಇರ್ಫಾನ್ ಎಂಟ್ರಿ

    ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಕಾಲಿವುಡ್ (ತಮಿಳು ಸಿನಿಮಾ)ಗೆ ಪಾದಾರ್ಪಣೆ ಮಾಡಲಿದ್ದಾರೆ.

    ನಿರ್ದೇಶಕ ಆರ್. ಅಜಯ್ ಜ್ಞಾನಮುತ್ತು ಅವರ ಮುಂಬರುವ ಸಿನಿಮಾ ‘ವಿಕ್ರಮ್ 58’ರಲ್ಲಿ ಇರ್ಫಾನ್ ಪಠಾಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ‘ಡಿಕ್ಕಿಲುನಾ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ಮಾಹಿತಿಯನ್ನು ಆಟಗಾರರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಅಜಯ್ ಜ್ಞಾನಮುತ್ತು ‘ವಿಕ್ರಮ್ 58’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಡಿಯೋವನ್ನು ಟ್ವೀಟ್ ಮಾಡಿರುವ ಇರ್ಫಾನ್, “ಹೊಸ ಕೆಲಸ ಮತ್ತು ಹೊಸ ಸವಾಲಿಗೆ ಸಿದ್ಧವಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಅಂಕಿ ಅಂಶಗಳನ್ನು ತಿಳಿಸಿದ್ದಾರೆ.

    ಮತ್ತೊಂದೆಡೆ ಹರ್ಭಜನ್ ಟ್ವೀಟ್ ಮಾಡಿ, ‘ಡಿಕ್ಕಿಲುನಾ’ ಚಿತ್ರದ ಶೀರ್ಷಿಕೆಯ ಹೆಸರಿನೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾನು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ. ನಿರ್ಮಾಣ ತಂಡಕ್ಕೆ ಧನ್ಯವಾದಗಳು. ಈ ಸಂಬಂಧಗಳನ್ನು ವಿವರಿಸಲು ನನಗೆ ಪದಗಳಿಲ್ಲ ಎಂದು ಹರ್ಭಜನ್ ಬರೆದುಕೊಂಡಿದ್ದಾರೆ. ‘ಡಿಕ್ಕಿಲುನಾ’ ಸಿನಿಮಾವನ್ನು ಕಾರ್ತಿಕ್ ಯೋಗಿ ನಿರ್ದೇಶಿಸುತ್ತಿದ್ದಾರೆ.

    ಇರ್ಫಾನ್ ಪಠಾಣ್ 2003ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. 2008ರ ಏಪ್ರಿಲ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ಇರ್ಫಾನ್ ಶ್ರೀಲಂಕಾ ವಿರುದ್ಧ ಆಡಿದ ಕೊನೆಯ ಪಂದ್ಯ ಆಗಸ್ಟ್ 2012ರಲ್ಲಿ. ಇರ್ಫಾನ್ 29 ಟೆಸ್ಟ್ ಪಂದ್ಯಗಳಲ್ಲಿ 1,105 ರನ್ ಗಳಿಸಿದ್ದಾರೆ ಮತ್ತು ಅವರ ವೃತ್ತಿಜೀವನದಲ್ಲಿ 100 ವಿಕೆಟ್ ಪಡೆದಿದ್ದಾರೆ. 120 ಏಕದಿನ ಪಂದ್ಯಗಳಲ್ಲಿ 1,544 ರನ್ ಗಳಿಸಿ 173 ವಿಕೆಟ್ ಪಡೆದಿದ್ದಾರೆ. ಇರ್ಫಾನ್ ಪಠಾಣ್ 24 ಟಿ-20ಗಳಲ್ಲಿ ಆಡಿದ್ದು, 172 ರನ್ ಗಳಿಸಿ, 28 ವಿಕೆಟ್ ಪಡೆದಿದ್ದಾರೆ.

    ಹರ್ಭಜನ್ ಸಿಂಗ್ ಮಾರ್ಚ್ 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಹರ್ಭಜನ್ ಕೊನೆಯದಾಗಿ 2015ರ ಆಗಸ್ಟ್ ನಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು. ಭಜ್ಜಿ ಏಪ್ರಿಲ್ 1998ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಿದರು. ಅವರ ಕೊನೆಯ ಏಕದಿನ ಪಂದ್ಯ 2015ರ ಅಕ್ಟೋಬರ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವಾಗಿತ್ತು. ಹರ್ಭಜನ್ ತಮ್ಮ ವೃತ್ತಿಜೀವನದಲ್ಲಿ 103 ಟೆಸ್ಟ್ ಪಂದ್ಯಗಳಲ್ಲಿ 417 ವಿಕೆಟ್, 236 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ ಮತ್ತು 28 ಟಿ-20ಗಳಲ್ಲಿ 25 ವಿಕೆಟ್ ಪಡೆದಿದ್ದಾರೆ.

  • ವಿಭಿನ್ನ ಲುಕ್ ನಲ್ಲಿ ಬಿಗ್ ಬಿ

    ವಿಭಿನ್ನ ಲುಕ್ ನಲ್ಲಿ ಬಿಗ್ ಬಿ

    ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅಮಿತಾಬ್, ಸಿನಿಮಾದಲ್ಲಿ ನಟಿಸಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸಿನಿಮಾದ ಪಾತ್ರ ನಿಭಾಯಿಸಿದ ಎರಡು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಬಿಗ್ ಬಿ ವಯಸ್ಸಾದಂತೆ ನಿಮ್ಮನ್ನ ಗುರುತಿಸುವವರ ಸಂಖ್ಯೆಯೂ ಸಹ ಕಡಿಮೆ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.

    ತಮಿಳು ಸಿನಿಮಾಕ್ಕಾಗಿ ಅಮಿತಾಬ್ ಬಚ್ಚನ್ 40 ದಿನಗಳ ಕಾಲ್ ಶೀಟ್ ನೀಡಿದ್ದರು. ಅದರೆ ಅದಕ್ಕಿಂತ ಮುಂಚೆ ಬಚ್ಚನ್ ನಟನೆಯ ಭಾಗ ಭಾಗಶಃ ಮುಗಿಯುತ್ತಾ ಬಂದಿದೆ. ಸಿನಿಮಾದಲ್ಲಿ ಅಮಿತಾಬ್ ಪಂಚೆ ಧರಿಸಿದ್ದಾರೆ. ಹಣೆಯ ತುಂಬ ವಿಭೂತಿ, ಅದರ ಮಧ್ಯೆ ಶ್ರೀಗಂಧವನ್ನು ಹಚ್ಚಿಕೊಂಡು ಸಾಂಪ್ರದಾಯಿಕ ತಮಿಳು ನಟನ ಹಾಗೆ ಕಂಡಿದ್ದಾರೆ.

    ತಮಿಳುನಾಡಿನ ನಟ ಎಸ್.ಜೆ. ಸೂರ್ಯ ಸಹ ಅಮಿತಾಬ್ ಬಚ್ಚನ್ ಜೊತೆ ನಟನೆ ಮಾಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ನಾನು ತಮಿಳು ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಬರುವ ಮುಂಚೆ ಅಮಿತಾಬ್ ರ ಜೊತೆ ನಟಿಸುವ ಕನಸು ಕಂಡಿದ್ದೆ, ಅದು ಇಂದು ಕೈಗೂಡಿದೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.