Tag: ತಮಿಳುನಾಡು ಸಿಎಂ

  • ಸ್ಟಾಲಿನ್‌ ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾರೆ: ತಮಿಳುನಾಡು ಸಿಎಂ ವಿರುದ್ಧ ಬೊಮ್ಮಾಯಿ ಕಿಡಿ

    ಸ್ಟಾಲಿನ್‌ ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾರೆ: ತಮಿಳುನಾಡು ಸಿಎಂ ವಿರುದ್ಧ ಬೊಮ್ಮಾಯಿ ಕಿಡಿ

    ಬೆಂಗಳೂರು: ತಮಿಳುನಾಡು ಸಿಎಂ ಸ್ಟಾಲಿನ್‌ ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ಹೊರಹಾಕಿದರು.

    stalin

    ಮೇಕೆದಾಟು ವಿರುದ್ಧ ಪ್ರಧಾನಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಪತ್ರ ಬರೆದದ್ದನ್ನು ವಿರೋಧಿಸಿ ಬೊಮ್ಮಾಯಿ ಮಾತನಾಡಿದರು. ಕಾವೇರಿ‌ ನಿರ್ವಹಣಾ ಪ್ರಾಧಿಕಾರದಲ್ಲಿ ಅಂತಿಮ‌ ಸಭೆ ಇದೆ. ಆದರೆ ಮೇಕೆದಾಟು ವಿಚಾರವಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಮೇಕೆದಾಟು ವಿಚಾರದಲ್ಲಿ ಪ್ರಧಾನಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ. ಸ್ಟಾಲಿನ್ ಪತ್ರ ಒಕ್ಕೂಟದ ವ್ಯವಸ್ಥೆಗೆ ವಿರೋಧ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನಿಗೆ ಸ್ಟಾಲಿನ್ ಪತ್ರ

    ನಮ್ಮ ನೀರಿನ ಬಳಕೆಗೆ ಅವರ ವಿರೋಧ ಸರಿಯಲ್ಲ. ನಾವು ನಮ್ಮ ರಾಜ್ಯದಲ್ಲೇ ಮೇಕೆದಾಟು ಯೋಜನೆ ಮಾಡುತಿದ್ದೇವೆ. ಸ್ಟಾಲಿನ್ ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ. ಸ್ಟಾಲಿನ್ ಪತ್ರ ಕಾನೂನು ಬಾಹಿರವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.

    River

    ಮೇಕೆದಾಟು ಕುರಿತು ಹಿಂದೆಯೂ ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ಸಭೆಗಳಾಗಿವೆ. ಈಗಿನ ಸಭೆಗೆ ಯಾಕೆ ಇವರ ವಿರೋಧ? ಮೇಕೆದಾಟು ವಿಚಾರದಲ್ಲಿ ನಿರಂತರ ಕ್ಯಾತೆ ಮಾಡುತ್ತಿದ್ದಾರೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಲ್ಲಿ ಮತ್ತೆ ಕೊರೊನಾ ಸ್ಫೋಟ

  • ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ರೈತ ಮುಖಂಡರಿಂದ ತಮಿಳುನಾಡಿನ ಸಿಎಂ ಭೇಟಿ

    ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ರೈತ ಮುಖಂಡರಿಂದ ತಮಿಳುನಾಡಿನ ಸಿಎಂ ಭೇಟಿ

    ಚೆನ್ನೈ: ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಕೇರಳ ರಾಜ್ಯಗಳ ರೈತ ಮುಖಂಡರು ಇಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳ ಬಗ್ಗೆ ಗಮನಸೆಳೆದರು.

    ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧ ಖಾತ್ರಿಗೊಳಿಸಲು ಕಾನೂನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ಅರಿಶಿನ ಬೆಳೆಗೆ ಶೇಕಡಾ 5ರಷ್ಟು ಜಿಎಸ್‌ಟಿ ವಿಧಿಸಿರುವುದನ್ನು ರದ್ದು ಮಾಡಬೇಕು. ಅರಿಶಿನ ಬೆಳೆಗೆ 15,000 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರ ಖರೀದಿ ಕೇಂದ್ರಗಳ ಮೂಲಕ ಖರೀದಿಸುವಂತೆ ಆಗಬೇಕು. ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

    ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಆಯಾ ವರ್ಷದ ಇಳುವರಿ ಆಧರಿಸಿ ಎಫ್‌ಆರ್‌ಪಿ ದರ ರೈತರಿಗೆ ನೀಡುವಂತಾಗಬೇಕು. ಕೇಂದ್ರ ಸರ್ಕಾರ ಖರೀದಿಸುವ ಕನಿಷ್ಠ ಬೆಂಬಲ ಬೆಲೆ ಖರೀದಿ ಅನುದಾನ ಎಲ್ಲಾ ರಾಜ್ಯಗಳಿಗೂ ಸಮನಾಗಿ ಹಂಚಿಕೆ ಮಾಡಿ ಖರೀದಿಸುವಂತೆ ಆಗಬೇಕು ಎಂದು ತಿಳಿಸಿದ್ದಾರೆ.

    ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು ಐವತ್ತು ವರ್ಷಗಳ ಹಿಂದೆ ರಚಿತವಾಗಿರುವ ವನ್ಯಜೀವಿ ಸಂರಕ್ಷಣೆ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿರುವ ತಮಿಳುನಾಡು ಸಿಎಂ, ರೈತರ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡುತ್ತಿದೆ: ಅನ್ಸಾರಿ

    ರೈತ ಮುಖಂಡರ ನಿಯೋಗದಲ್ಲಿ ಅರಿಶಿನ ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ತಮಿಳುನಾಡಿನ ದೈವಸಿಗಾಮಣಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಕುರುಬೂರು ಶಾಂತಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷ ತೆಲಂಗಾಣದ ನರಸಿಂಹ ನಾಯ್ಡು, ಕೇರಳ ರಾಜ್ಯದ ಪಿ.ಟಿ.ಜಾನ್, ತಮಿಳುನಾಡಿನ ರಾಮಗೌಂಡರ್, ಇಲ್ಲಂಗೂವನ್ ವೆಲಂಗಣಿ, ಎಳಿಲ್ಲನ್ ಕಾಂಚಿಪುರಂ, ಬಾಬು ಕೊಯಮತ್ತೂರು, ಮಾಣಿಕ್ಯಂ ಹುಣಸೂರು, ವಿಮಾಲ್ ಕುಮಾರ ಇತರರು ಇದ್ದರು.

  • ಪನ್ನೀರ್‍ಸೆಲ್ವಂ ಹೇಳಿದ ಅಮ್ಮನ ‘ಆತ್ಮ’ಕಥೆ!

    – ನಾನೇ ಸಿಎಂ ಆಗಬೇಕೆಂದು ಅಮ್ಮಾ ಬಯಸಿದ್ದರು
    – ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಅಸಮಾಧಾನ
    – ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ
    – ಕೊನೆಗೂ ಮನದ ದುಗುಡ ಹೊರಹಾಕಿದ ಒಪಿಎಸ್

    ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಸುದ್ದಿಯ ನಡುವೆಯೇ ತಮಿಳುನಾಡು ಸಿಎಂ ಒ.ಪನ್ನೀರ್‍ಸೆಲ್ವಂ ತುಟಿಬಿಚ್ಚಿದ್ದಾರೆ. ಪನ್ನೀರ್‍ಸೆಲ್ವಂ ಮಾತುಗಳನ್ನು ನೋಡಿದರೆ ಅವರು ಬಂಡಾಯದ ಬಾವುಟ ಹಾರಿಸಿದ ಲಕ್ಷಣ ಸ್ಪಷ್ಟವಾಗಿ ಗೋಚರಿಸಿದೆ. ತಮಿಳುನಾಡಿನಲ್ಲಿ ಮಂಗಳವಾರ ರಾತ್ರಿ 9 ಗಂಟೆ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಆರಂಭವಾದವು. ಮರೀನಾ ಬೀಚ್‍ನಲ್ಲಿರುವ ಜಯಲಲಿತಾ ಸಮಾಧಿ ಬಳಿಗೆ ಆಗಮಿಸಿದ ಪನ್ನೀರ್ ಸೆಲ್ವಂ ಸಮಾಧಿ ಮುಂದೆ ಕೂತು ಧ್ಯಾನ ಮಗ್ನರಾದರು. ಸುಮಾರು ಅರ್ಧ ಗಂಟೆಗಳ ಕಾಲ ಇದೇ ರೀತಿಯಲ್ಲಿಯೇ ಒಪಿಎಸ್ ಕೂತಿದ್ದರು. ಇದಾದ ಬಳಿಕ ಪನ್ನೀರ್‍ಸೆಲ್ವಂ ಮಾಧ್ಯಮಗಳ ಮುಂದೆ ಬಂದು ಮಾತಿಗೆ ನಿಂತರು. ಮಾತಿನ ನಡುವೆಯೇ ಒಪಿಎಸ್ ಕಣ್ಣೀರನ್ನೂ ಹಾಕಿದರು.

    ಸಮಾಧಿಗೆ ನಮಿಸಿದ ಬಳಿಕ ಬಂದ ಒ.ಪನ್ನೀರ್‍ಸೆಲ್ವಂ ಹೇಳಿದ್ದಿಷ್ಟು.

    ನನ್ನ ನಾಯಕಿಗೆ ನಾನು ಗೌರವ ಸಲ್ಲಿಸಿದ್ದೇನೆ. ನಾನು ದೇಶದ ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೆಲವು ಸತ್ಯವನ್ನು ಹೇಳಬೇಕೆಂದು ಅಮ್ಮನ ಆತ್ಮ ನನಗೆ ಹೇಳಿದೆ. ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ನಾನೇ ಸಿಎಂ ಆಗಬೇಕು ಎಂದು ಸಾವಿಗೂ ಮುನ್ನ ಹೇಳಿದ್ದರು ಎಂದು ಪನ್ನೀರ್‍ಸೆಲ್ವಂ ಸ್ಪಷ್ಟಪಡಿಸಿದರು.

    ನನ್ನ ಮೇಲೆ ಒತ್ತಡ ಹಾಕಿ ರಾಜೀನಾಮೆ ಪಡೆದಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನನ್ನು ಪದೇ ಪದೇ ಅವಮಾನಿಸಿದರು. ಶಶಿಕಲಾ ಸಿಎಂ ಆಗಬೇಕೆಂದು ಕೆಲವರು ನನಗೆ ಹೇಳಿದರು. ನಾನು ಇದರ ಅಗತ್ಯವೇನು ಎಂದು ಪ್ರಶ್ನಿಸಿದ್ದಕ್ಕೆ ಒಬ್ಬನೇ ವ್ಯಕ್ತಿ ಸಿಎಂ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರಬೇಕು ಎಂದು ಹೇಳಿದರು. ಪಕ್ಷದ ಕಚೇರಿಯಲ್ಲೇ ಶಾಸಕರ ಸಭೆ ನಡೆಯುತ್ತಿದ್ದರೂ ನನಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಎಲ್ಲಾ ವಿಚಾರಗಳನ್ನೂ ತಿಳಿಸುವಂತೆ ಜಯಲಲಿತಾ ಆತ್ಮ ನನಗೆ ಹೇಳಿದೆ. ಹೀಗಾಗಿ ನಾನು ಇದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದು ಪನ್ನೀರ್‍ಸೆಲ್ವಂ ಹೇಳಿದರು.

    ಕಳೆದ ಸೆಪ್ಟೆಂಬರ್‍ನಲ್ಲಿ ಮನೆಯಲ್ಲೇ ಕುಸಿದು ಬಿದ್ದಿದ್ದ ಜಯಲಲಿತಾ ಅವರನ್ನು ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಲಲಿತಾ ಕಳೆದ ವರ್ಷ ಡಿಸೆಂಬರ್ 6ರಂದು ಸಾವನ್ನಪ್ಪಿದ್ದರು. ಅಂದು ಮಧ್ಯರಾತ್ರಿಯಲ್ಲೇ ಒ.ಪನ್ನೀರ್‍ಸೆಲ್ವಂ ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಕಳೆದ ಭಾನುವಾರ ಶಶಿಕಲಾ ನಟರಾಜನ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಇದಾದ ಬಳಿಕ ಒ.ಪನ್ನೀರ್‍ಸೆಲ್ವಂ ರಾಜೀನಾಮೆ ನೀಡಿದ್ದರು. ಆದರೆ ಮುಂದಿನ ಸಿಎಂ ಅಧಿಕಾರ ಸ್ವೀಕರಿಸುವವರೆಗೆ ನೀವೇ ಸಿಎಂ ಆಗಿ ಮುಂದುವರಿಯಿರಿ ಎಂದು ತಮಿಳುನಾಡಿನ ರಾಜ್ಯಪಾಲರು ಸೂಚಿಸಿದ್ದರು.