ಚೆನ್ನೈ: ತಮಿಳುನಾಡು ಪುರಸಭೆ ಆಡಳಿತ ಮತ್ತು ನೀರು ಸರಬರಾಜು ಇಲಾಖೆಯಲ್ಲಿ ಸರ್ಕಾರಿ ಹುದ್ದೆಗಳಿಗೆ ಲಂಚ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.
ರಿಯಲ್ ಎಸ್ಟೇಟ್ ಸಂಸ್ಥೆ ಟಿವಿಹೆಚ್ ಮತ್ತು ಡಿಎಂಕೆ ಸಚಿವ ಕೆ.ಎನ್.ನೆಹರು ಅವರ ಸಂಬಂಧಿ ಒಳಗೊಂಡ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದಾಳಿಯ ಸಂದರ್ಭದಲ್ಲಿ ಈ ಹಗರಣ ಬೆಳಕಿಗೆ ಬಂದಿದೆ ಎಂದು ತಮಿಳುನಾಡು ಪೊಲೀಸರಿಗೆ ಇಡಿ ತಿಳಿಸಿದೆ. ಇದನ್ನೂ ಓದಿ: ರಫೇಲ್‌ನಲ್ಲಿ ಹಾರಾಟ ನಡೆಸಿ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸಹಾಯಕ ಎಂಜಿನಿಯರ್‌ಗಳು, ಜೂನಿಯರ್ ಎಂಜಿನಿಯರ್‌ಗಳು ಮತ್ತು ಪಟ್ಟಣ ಯೋಜನಾ ಅಧಿಕಾರಿಗಳಂತಹ ಹುದ್ದೆಗಳನ್ನು ಪಡೆಯಲು ಅಭ್ಯರ್ಥಿಗಳು 25 ಲಕ್ಷದಿಂದ 35 ಲಕ್ಷ ರೂ.ಗಳವರೆಗೆ ಲಂಚವನ್ನು ನೀಡಿದ್ದಾರೆ ಎಂದು ತಮಿಳುನಾಡು ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಇಡಿ ಆರೋಪಿಸಿದೆ. ಆ.6 ರಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿದ್ದಾರೆ.
2024–2025 ಮತ್ತು 2025–2026 ವರ್ಷಗಳ ನೇಮಕಾತಿ ಪ್ರಕ್ರಿಯೆಯನ್ನು ಜಾಣ್ಮೆಯಿಂದ ನಿರ್ವಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಕೆಲವು ವ್ಯಕ್ತಿಗಳಿಗೆ ಪರೀಕ್ಷಾ ಮಾಹಿತಿ ಮೊದಲೇ ಲಭ್ಯವಿತ್ತು. ಲಂಚದ ಹಣವನ್ನು ನಗದು ರೂಪದಲ್ಲಿ ಸಂಗ್ರಹಿಸಿ ಹವಾಲಾ ಮಾರ್ಗಗಳ ಮೂಲಕ ರವಾನಿಸಲಾಗಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್ ಗ್ಯಾಂಗ್
ಲಂಚ ನೀಡಿದ ಸುಮಾರು 150 ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಪೊಲೀಸರಿಗೆ ಬರೆದ ಪತ್ರದಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಹಲವಾರು ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಇಡಿ ಹೆಸರಿಸಿದೆ.
ರಾಜ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರವೇ ಇಡಿ ತನಿಖೆ ಆರಂಭಿಸಬೇಕಾಗುತ್ತದೆ. ಹೀಗಾಗಿ, ಹಗರಣದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ತಮಿಳುನಾಡು ಪೊಲೀಸರಿಗೆ ಇಡಿ ಒತ್ತಾಯಿಸಿದೆ.










