Tag: ತಬ್ಲೀಘಿ ಜಮಾತ್

  • ಅಪರಾಧ ಕೃತ್ಯಗಳಲ್ಲಿ ತೊಡಗಿರುವ ತಬ್ಲೀಘಿ ಜಮಾತ್ ನಿಷೇಧಿಸಿ: ವಿಎಚ್‍ಪಿ ಒತ್ತಾಯ

    ಅಪರಾಧ ಕೃತ್ಯಗಳಲ್ಲಿ ತೊಡಗಿರುವ ತಬ್ಲೀಘಿ ಜಮಾತ್ ನಿಷೇಧಿಸಿ: ವಿಎಚ್‍ಪಿ ಒತ್ತಾಯ

    – ನಿಜಾಮುದ್ದೀನ್ ಮರ್ಕಜ್‍ನಿಂದಾಗಿ ಶೇ.30ರಷ್ಟು ಕೊರೊನಾ ಪ್ರಕರಣ ಹೆಚ್ಚಳ
    – ತಬ್ಲೀಘಿ ಜಮಾತ್‍ಗೆ ಉಗ್ರರೊಂದಿಗೆ ನಂಟು

    ನವದೆಹಲಿ: ಕೊರೊನಾ ವೈರಸ್ ಪ್ರಪಂಚಾದ್ಯಂತ ತಾಂಡವಾಡುತ್ತಿದ್ದು, ದೇಶದಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಶೇ.30ರಷ್ಟು ಪ್ರಕರಣಗಳು ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್‍ಗೆ ಸಂಬಂಧಿಸಿದ್ದಾಗಿವೆ ಎಂದು ಈಗಾಗಲೇ ತಿಳಿದಿದೆ. ಹೀಗಾಗಿ ತಬ್ಲೀಘಿ ಜಮಾತ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

    ತಬ್ಲೀಘಿ ಜಮಾತ್ ಸಂಘಟನೆ ಉಗ್ರರೊಂದಿಗೆ ನಂಟು ಹೊಂದಿದ್ದು, ಕೊರೊನಾ ವೈರಸ್‍ನ್ನು ಅಸ್ತ್ರವಾಗಿಸಿಕೊಂಡು ದೇಶವನ್ನು ಹಾಳು ಮಾಡಲು ಯತ್ನಿಸುತ್ತಿದೆ. ಹೀಗಾಗಿ ಈ ಮುಸ್ಲಿಂ ಸಂಘಟನೆಯನ್ನು ನಿಷೇಧಿಸಬೇಕು. ಅಲ್ಲದೆ ನಿಜಾಮುದ್ದೀನ್ ಮರ್ಕಜ್‍ನ ಬ್ಯಾಂಕ್ ಖಾತೆಗಳ ಕುರಿತು ತನಿಖೆ ನಡೆಸಬೇಕು. ಈ ಸಂಘಟನೆಗೆ ಉಗ್ರರೊಂದಿಗೆ ನಂಟು ಹೊಂದಿರುವ ಸಂಭವವಿದೆ ಎಂದು ವಿಎಚ್‍ಪಿ ತಿಳಿಸಿದೆ.

    ಈ ಕುರಿತು ವಿಶ್ವ ಹಿಂದೂ ಪರಿಷತ್‍ನ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಸುರೇಂದ್ರ ಜೈನ್ ಹೇಳಿಕೆ ನೀಡಿದ್ದು, ಈ ಸಂಘಟನೆ ನಿಜಾಮುದ್ದೀನ್‍ನಲ್ಲಿರುವ ಪ್ರಧಾನ ಕಚೇರಿಯಿಂದ ಲಕ್ಷಾಂತರ ತಬ್ಲೀಘಿಗಳ ಮೂಲಕ ಪ್ರಪಂಚದಾದ್ಯಂತ ದುಷ್ಟತನ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.

    ವಿಶ್ವದ ಬಹುತೇಕ ಭಯೋತ್ಪಾದಕ ಸಂಘಟನೆಗಳ ಸಂಸ್ಥಾಪಕರು ತಬ್ಲೀಘಿ ಜಮಾತ್‍ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ನಿಜಾಮುದ್ದೀನ್‍ನಲ್ಲಿರುವ ಮರ್ಕಜ್‍ನ ಕಟ್ಟಡವನ್ನು ಈ ಕೂಡಲೇ ಸೀಲ್ ಮಾಡಬೇಕು. ಅಲ್ಲದೆ ಇದರ ಬ್ಯಾಂಕ್ ಖಾತೆಗಳನ್ನು ಹಾಗೂ ಹಣಕಾಸಿನ ಮೂಲಗಳ ಕುರಿತು ತನಿಖೆ ನಡೆಸಬೇಕು. ಅಲ್ಲದೆ ಈ ಸಭೆ ನಡೆಸಲು ಅವಕಾಶ ಕಲ್ಪಿಸಿದ ಅಧಿಕಾರಿ ವಿರುದ್ಧ ಸೂಕ್ತ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಈ ಸಭೆಯಿಂದಾಗಿ ಇಂದು ಭಾರತ ಗಂಭೀರ ಪರಿಸ್ಥಿತಿ ಎದುರಿಸಬೇಕಾಗಿದೆ. ಅಲ್ಲದೆ ತಬ್ಲೀಘಿಗಳ ಅಮಾನವೀಯ ವರ್ತನೆಯಿಂದಾಗಿ ಇಡೀ ದೇಶದಲ್ಲಿ ಸಾವು, ನೋವುಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ತಬ್ಲೀಘಿ ಜಮಾತ್ ಹಾಗೂ ನಿಜಾಮುದ್ದೀನ್ ಮರ್ಕಾಜ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂದು ಜೈನ್ ಆರೋಪಿಸಿದ್ದಾರೆ.

    ಕಳೆದ 24 ಗಂಟೆಯಲ್ಲಿ 27 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 100ರ ಗಡಿ ದಾಟಿದೆ. ಭಾನುವಾರ ಸುಮಾರು 12 ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ.

    ಭಾನುವಾರ ಒಂದೇ ದಿನ ಸುಮಾರು 500ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸೋಂಕಿಂತರ ಸಂಖ್ಯೆ ದ್ವಿಗುಣವಾಗಿ ಏರಿಕೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 1ರಂದು ದೇಶದಲ್ಲಿ ಅಂದಾಜು 2 ಸಾವಿರ ಸೋಂಕಿತರಿದ್ದರು. ಕೇವಲ ನಾಲ್ಕೈದು ದಿನಗಳಲ್ಲಿ ಈ ಸಂಖ್ಯೆ ಡಬಲ್ ಆಗಿದೆ.

    ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿಯ ಜಮಾತ್ ನಲ್ಲಿ ಭಾಗಿಯಾದ ತಬ್ಲೀಘಿಗಳಿಂದ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಶೇ.30ರಷ್ಟು ಕೊರೊನಾ ಸೋಂಕಿತ ಪ್ರಕರಣಗಳು ದೆಹಲಿ ಜಮಾತ್ ಲಿಂಕ್ ಹೊಂದಿವೆ. ಇದೇ ರೀತಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಈ ಮುಂದಿನ ಏಳು ದಿನಗಳಲ್ಲಿ ದ್ವಿಗುಣವಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.