Tag: ತಬ್ರೇಜ್ ಶಮ್ಸಿ

  • ಹಾಲಿ ವಿಶ್ವ ನಂಬರ್ 1 ಬೌಲರ್ ಐಪಿಎಲ್‍ನಲ್ಲಿ ಅನ್‍ಸೋಲ್ಡ್

    ಹಾಲಿ ವಿಶ್ವ ನಂಬರ್ 1 ಬೌಲರ್ ಐಪಿಎಲ್‍ನಲ್ಲಿ ಅನ್‍ಸೋಲ್ಡ್

    ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‍ನಲ್ಲಿ ವಿಶ್ವ ಟಿ20 ಕ್ರಿಕೆಟ್‍ನ ನಂಬರ್ 1 ರ‍್ಯಾಂಕಿಂಗ್‌ ಬೌಲರ್ ದಕ್ಷಿಣ ಆಫ್ರಿಕಾದ ತಬ್ರೇಜ್ ಶಮ್ಸಿ ಅನ್‍ಸೋಲ್ಡ್ ಆಗಿದ್ದಾರೆ.

    ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೇಜ್ ಶಮ್ಸಿ ಅನ್‍ಸೋಲ್ಡ್ ಆಗಿದ್ದರು. 1 ಕೋಟಿ ಮೂಲಬೆಲೆ ಹೊಂದಿದ್ದ ಶಮ್ಸಿಯನ್ನು ಖರೀದಿಸಲು ಯಾವ ಫ್ರಾಂಚೈಸ್ ಕೂಡ ಮುಂದಾಗಿರಲಿಲ್ಲ. ಹಾಗಾಗಿ ಅನ್‍ಸೋಲ್ಡ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ಶಕೀಬ್ ಐಪಿಎಲ್‍ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ

    ಐಪಿಎಲ್ ಹರಾಜಿನ ವೇಳೆ ಶಮ್ಸಿ ವಿಶ್ವ ಟಿ20 ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಬಳಿಕ ಇದೀಗ ಐಸಿಸಿ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್‌ನಲ್ಲಿ ಶಮ್ಸಿ 784 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದ್ದಾರೆ. ಆದರೆ ಶಮ್ಸಿ ಐಪಿಎಲ್‍ನಲ್ಲಿ ಮಾತ್ರ ಅನ್‍ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಶಮ್ಸಿ ಆಫ್ರಿಕಾ ಪರ 47 ಟಿ20 ಪಂದ್ಯವಾಡಿದ್ದು, 57 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 6 ಮತ್ತು ಏಕದಿನ ಪಂದ್ಯದಲ್ಲಿ 44 ವಿಕೆಟ್ ಸಾಧನೆ ಮಾಡಿದ್ದಾರೆ. ಈ ಹಿಂದಿನ ಆವೃತ್ತಿಗಳ ಐಪಿಎಲ್‍ನಲ್ಲಿ ಕೂಡ ಆಡಿದ್ದರು. ಐಪಿಎಲ್‍ನಲ್ಲಿ 5 ಪಂದ್ಯಗಳನ್ನು ಆಡಿ 3 ವಿಕೆಟ್ ಕಿತ್ತಿದ್ದಾರೆ.

  • ವಿಕೆಟ್ ಪಡೆದು ಜಾದು ಮಾಡಿ ಅಭಿಮಾನಿಗಳನ್ನು ರಂಜಿಸಿದ ಆಫ್ರಿಕಾ ಬೌಲರ್ – ವಿಡಿಯೋ

    ವಿಕೆಟ್ ಪಡೆದು ಜಾದು ಮಾಡಿ ಅಭಿಮಾನಿಗಳನ್ನು ರಂಜಿಸಿದ ಆಫ್ರಿಕಾ ಬೌಲರ್ – ವಿಡಿಯೋ

    ಪಾರ್ಲ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂಝಾಂಸಿ ಸೂಪರ್ ಲೀಗ್ (ಎಂಎಸ್‍ಎಲ್) ಟಿ20 ಪಂದ್ಯದಲ್ಲಿ ಪಾರ್ಲ್ ರಾಕ್ಸ್ ತಂಡದ ಲೆಗ್ ಸ್ಪಿನ್ನರ್ ತಬ್ರೇಜ್ ಶಮ್ಸಿ ಮ್ಯಾಜಿಕ್ ಮಾಡಿದ್ದಾರೆ.

    ಬುಧವಾರ ಪಾರ್ಲ್ ರಾಕ್ಸ್ ಮತ್ತು ಡರ್ಬನ್ ಹೀಟ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ವೇಳೆ ಡರ್ಬನ್ ಹೀಟ್ ತಂಡದ ವಿಹಾನ್ ಲಬ್ಬೆ ಶಮ್ಸಿ ಎಸೆತವನ್ನು ಬಲವಾಗಿ ಹೊಡೆಯಲು ಹೋಗಿ ಕ್ಯಾಚ್ ನೀಡಿ ಔಟಾದರು.

    https://twitter.com/MSL_T20/status/1202287999020650496

    ವಿಕೆಟ್ ಪಡೆದ ಸಂಭ್ರಮದಲ್ಲಿ ಶಮ್ಸಿ ಕೆಂಪು ಬಣ್ಣದ ಕರವಸ್ತ್ರವನ್ನು ತೆಗೆದು ಅದರಲ್ಲಿ ಬಿಳಿ ಬಣ್ಣದ ದಂಡವನ್ನು ಹೊರ ತೆಗೆಯುವ ಮೂಲಕ ಜಾದು ಮಾಡಿ ಸಂಭ್ರಮಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಶಮ್ಸಿ 4 ಓವರ್ ಎಸೆದು 37 ರನ್ ನೀಡಿ 2 ವಿಕೆಟ್ ಪಡೆದಿದ್ದರೂ ತಂಡ ಸೋತಿದೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಾರ್ಲ್ ರಾಕ್ಸ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಡರ್ಬನ್ ಹೀಟ್ಸ್ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 197 ರನ್ ಗಳಿಸುವ ಮೂಲಕ 6 ವಿಕೆಟ್‍ಗಳ ಜಯ ಗಳಿಸಿತು.

    ಡರ್ಬನ್ ಹೀಟ್ಸ್ ಪರವಾಗಿ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಔಟಾಗದೇ 97 ರನ್(55 ಎಸೆತ, 9 ಬೌಂಡರಿ, 4 ಸಿಕ್ಸ್) ಹೊಡೆದರೆ, ಡೇವಿಡ್ ಮಿಲ್ಲರ್ 40 ರನ್(22 ಎಸೆತ, 1 ಬೌಂಡರಿ, 3 ಸಿಕ್ಸರ್) ಸಿಡಿಸಿ ಪಂದ್ಯಕ್ಕೆ ಜಯವನ್ನು ತಂದುಕೊಟ್ಟರು. ಈ ಪಂದ್ಯವನ್ನು ಸೋತರೂ ಜಾದು ಮೂಲಕ ಶಮ್ಸಿ ಅಭಿಮಾನಿಗಳನ್ನು ರಂಜಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  • ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರ ಜೊತೆ ದುಬೈಗೆ ತೆರಳಿದ ಕಿಚ್ಚ

    ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರ ಜೊತೆ ದುಬೈಗೆ ತೆರಳಿದ ಕಿಚ್ಚ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರ ಜೊತೆ ದುಬೈಗೆ ತೆರೆಳಿದ್ದಾರೆ.

    ಸುದೀಪ್ ‘ಕೋಟಿಗೊಬ್ಬ-3’ ಚಿತ್ರದ ಶೂಟಿಂಗ್‍ಗಾಗಿ ಪೊಲೆಂಡಿನ ವಾರ್ಸಾದಲ್ಲಿ ಇರುವ ತಮ್ಮ ಚಿತ್ರತಂಡದೊಂದಿಗೆ ಸೇರಲು ತೆರಳುತ್ತಿದ್ದರು. ಈ ವೇಳೆ ಸುದೀಪ್ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೆಲ ಆಟಗಾರರು ಕೂಡ ಪ್ರಯಾಣ ಬೆಳೆಸುತ್ತಿದ್ದರು. ಸುದೀಪ್ ಆಟಗಾರರನ್ನು ನೋಡುತ್ತಿದ್ದಂತೆಯೇ ಅವರನ್ನು ಭೇಟಿ ಮಾಡಿದ್ದಾರೆ.

    ತಮ್ಮ ಟ್ವಿಟ್ಟರಿನಲ್ಲಿ ಸುದೀಪ್ ಅವರು ದಕ್ಷಿಣ ಆಫ್ರಿಕಾ ಆಟಗಾರ ತಬ್ರೇಜ್ ಶಮ್ಸಿ ಅವರೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ, “ಅವರು ಬೇರೆ ಕಡೆ ಹೊರಟ್ಟಿದ್ದಾರೆ. ನಾನು ಕೋಟಿಗೊಬ್ಬ-3 ಸಿನಿಮಾ ಸೀಕ್ವೆನ್ಸ್ ಶೂಟಿಂಗ್‍ಗಾಗಿ ವಾರ್ಸಾಗೆ ಹೊರಟ್ಟಿದ್ದೇನೆ. ಸದ್ಯ ಚಿತ್ರದ ಮೊದಲ ಅರ್ಧ ಶೂಟಿಂಗ್ ಬೆಲ್‍ಗ್ರೆಡ್‍ನಲ್ಲಿ ನಡೆದಿತ್ತು” ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಸುದೀಪ್ ಅವರು, “ತಬ್ರೇಜ್ ಶಮ್ಸಿ ನಿಮ್ಮನ್ನು ಹಾಗೂ ನಿಮ್ಮ ತಂಡವನ್ನು ಭೇಟಿ ಮಾಡಿ ಖುಷಿಯಾಯಿತು. ಮಾಜಿ ಆಟಗಾರ, ಕೋಚ್ ಲ್ಯಾನ್ಸ್ ಕ್ಲುಸೆನರ್ ಅವರಿಗೆ ನನ್ನ ಹಲೋ ತಿಳಿಸಿ. ಕಳೆದ ವರ್ಷ ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟಿ10ನಲ್ಲಿ ಲ್ಯಾನ್ಸ್ ಕ್ಲುಸೆನರ್ ಅವರು ಭಾಗವಹಿಸಿದ್ದು ಖುಷಿಯಾಯಿತು. ನಿಮ್ಮ ಮುಂದಿನ ಎಲ್ಲ ಪಂದ್ಯಕ್ಕೆ ಶುಭಾಶಯ” ಎಂದು ಬರೆದುಕೊಂಡಿದ್ದಾರೆ.

    ಕೋಟಿಗೊಬ್ಬ-3 ಸಿನಿಮಾ ತಂಡದೊಂದಿಗೆ ಸುದೀಪ್ ಈಗ ಸೇರಿಕೊಂಡಿದ್ದು, ಸದ್ಯ ಶೂಟಿಂಗ್‍ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕಲಾವಿದರಾದ ಅಫ್‍ತಾಬ್ ಶಿವದಾಸಾನಿ, ಮಡೋನ್ನ ಸೆಬಾಸ್ಟಿಯನ್, ನವಾಬ್ ಶಾ, ಶ್ರದ್ಧಾದಾಸ್ ಅವರು ನಟಿಸುತ್ತಿದಾರೆ. ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಸಿನಿಮಾವನ್ನು ಶಿವ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ.