Tag: ತನಿಖೆ

  • ಬಾಂಬ್ ಅಲ್ಲ, ಮೈಸೂರಿನಲ್ಲಿ ಪತ್ತೆಯಾಗಿದ್ದು ಯುಪಿಎಸ್ ಬಾಕ್ಸ್!

    ಬಾಂಬ್ ಅಲ್ಲ, ಮೈಸೂರಿನಲ್ಲಿ ಪತ್ತೆಯಾಗಿದ್ದು ಯುಪಿಎಸ್ ಬಾಕ್ಸ್!

    ಮೈಸೂರು: ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪತ್ತೆ ಆಗಿರುವುದು ಸ್ಫೋಟಕ ವಸ್ತು ಅಲ್ಲ. ಬ್ಯಾಟರಿ ಹಾಗೂ ಸರ್ಕ್ಯೂಟ್ ಬೋರ್ಡ್ ಹೊಂದಿರುವ ಯುಪಿಎಸ್ ಪವರ್ ಬ್ಯಾಂಕ್ ನೋಡಿ ಜನ ಆತಂಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದು ಯುಪಿಎಸ್ ಮಾದರಿಯ ಪವರ್ ಬ್ಯಾಂಕ್. ಇದರಲ್ಲಿ ಸರ್ಕ್ಯೂಟ್ ಇದೆ. ಇದರಿಂದ ಸ್ಫೋಟ ಸಾಧ್ಯವಿಲ್ಲ. ಸ್ಫೋಟಕ್ಕೆ ಇಷ್ಟೊಂದು ಶೆಲ್ ಅಗತ್ಯವಿಲ್ಲ. ಈ ರೀತಿಯ ಪವರ್ ಬ್ಯಾಂಕ್ ಇಟ್ಟು ಜನರನ್ನು ಭಯಪಡಿಸಲು ಯತ್ನಿಸಲಾಗಿದೆಯಾ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಸುಬ್ರಹ್ಮಣೇಶ್ವರ ರಾವ್ ಪಬ್ಲಿಕ್ ಟಿವಿ ಗೆ ತಿಳಿಸಿದ್ದಾರೆ.

    ಇಷ್ಟು ಶೆಲ್ ಇರುವ ಪವರ್ ಬ್ಯಾಂಕ್ ಅನ್ನು ಬೆಂಕಿಗೆ ಎಸೆದರೆ ಮಾತ್ರ ಸ್ಪೋಟಗೊಳ್ಳುತ್ತೆ ಅಷ್ಟೇ ಎಂದು ವಿವರಿಸಿದ ಅವರು, ಇದನ್ನು ಬಸ್ ನಿಲ್ದಾಣದ ಬಳಿ ಇಟ್ಟವರು ಯಾರು? ಜನರನ್ನು ಹೆದರಿಸುವುದಕ್ಕೆ ಇಟ್ಟಿದ್ದರಾ? ಅಥವಾ ಬೇಡ ಎಂದು ಇಲ್ಲೇ ಎಸೆದು ಹೋಗಿದ್ದಾರಾ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಹೇಳಿದರು.

    ಆಗಿದ್ದು ಏನು?
    ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಇರುವ ಪೀಪಲ್ಸ್ ಪಾರ್ಕ್ ನಲ್ಲಿ ಎರಡು ಬಾಕ್ಸ್
    ಗಳಲ್ಲಿ ಶೆಲ್ ಹಾಗೂ ವಯರ್ ತುಂಬಿದ ಬಾಕ್ಸ್ ಪತ್ತೆಯಾಗಿತ್ತು. ಇದನ್ನು ಕಂಡ ಸಾರ್ವಜನಿಕರು ಭಯಗೊಂಡು ಕಂಟ್ರೋಲ್ ರೂಂಗೆ ಕರೆಮಾಡಿದ್ದರು. ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಪರೀಶಿಲನೆ ನಡೆಸಿದ್ದರು.

  • ಹೊನ್ನಾವರ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು

    ಹೊನ್ನಾವರ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು

    ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಡಿಸೆಂಬರ್ 14ರಂದು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವಿದ್ಯಾರ್ಥಿನಿ ಮೇಲೆ ಯಾರು ಹಲ್ಲೆ ನಡೆಸಿಲ್ಲ ಬದಲಿಗೆ ಆಕೆಯೇ ನಿಂಬೆ ಮುಳ್ಳಿನಿಂದ ಗಾಯ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ತನಿಖೆ ವೇಳೆ ಬಹಿರಂಗಗೊಂಡಿದೆ.

    ಘಟನೆ ಕುರಿತು ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದು, ವಿದ್ಯಾರ್ಥಿನಿ ಗಾಯ ಮಾಡಿಕೊಂಡು ಮನೆಗೆ ಹೋಗದೇ ಐದು ಕಿಲೋ ಮೀಟರ್ ನಡೆದು ಮಾಗೋಡಿಗೆ ತೆರಳಿದ್ದಾಳೆ. ಈ ವೇಳೆ ಅಲ್ಲಿನ ಸ್ಥಳೀಯರು ವಿದ್ಯಾರ್ಥಿನಿಗೆ ಆದ ಗಾಯ ನೋಡಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ನಡೆದಿದ್ದೇನು?
    ವಿದ್ಯಾರ್ಥಿನಿ ಶಾಲೆ ತೆರಳುವ ಸಂದರ್ಭದಲ್ಲಿ ಪ್ರತಿ ದಿನ ಅದೇ ಗ್ರಾಮದ ಗಣೇಶ್ ಎನ್ನುವ ಯುವಕ ದಾರಿಯಲ್ಲಿ ಅಡ್ಡಗಟ್ಟಿ ನನ್ನನ್ನು ಪ್ರೀತಿಸು ಎಂದು ತೊಂದರೆ ಕೊಡುತ್ತಿದ್ದ. ಘಟನೆ ನಡೆದ ದಿನವೂ ಗಣೇಶ್ ಮತ್ತು ಆತನ ಸ್ನೇಹಿತ ಸಂತೋಷ್ ವಿದ್ಯಾರ್ಥಿನಿಗೆ ತೊಂದರೆ ಕೊಟ್ಟಿದ್ದರು. ಇದೇ ಸಮಯದಲ್ಲಿ ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿತ್ತು. ಇದರಿಂದ ಗೊಂದಲಕ್ಕೆ ಒಳಗಾಗಿ ವಿದ್ಯಾರ್ಥಿನಿ ಅವರಿಬ್ಬರಿಂದ ಮತ್ತು ಶಾಲೆಯ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ನಿಂಬೆ ಮುಳ್ಳಿನಿಂದ ಸ್ವತಃ ಕೈ ಕೊಯ್ದು ಕೊಂಡಿದ್ದಾಳೆ ಎಂದು ಎಸ್‍ಪಿ ವಿನಾಯಕ್ ಹೇಳಿದ್ದಾರೆ.

    ಪ್ರಸ್ತುತ ವಿದ್ಯಾರ್ಥಿನಿಗೆ ಈ ಸಂಬಂಧ ತಜ್ಞರು ಪರೀಕ್ಷೆ ನಡೆಸಿ, ಸಾಂತ್ವನ ಕೇಂದ್ರದಿಂದ ಕೌನ್ಸಿಲಿಂಗ್ ನಡೆಸಲಾಗಿದೆ. ಇನ್ನು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಗಣೇಶ್ ಹಾಗೂ ಆತನ ಸ್ನೇಹಿತ ಸಂತೋಷ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ.

    ಏನಿದು ಘಟನೆ?
    ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು. ಡಿಸೆಂಬರ್ 14 ರಂದು ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಚಾಕು ಇರಿಯಲಾಗಿದೆ ಎಂಬ ಸುದ್ದಿ ಹರಡುತ್ತಿದಂತೆ, ಹೊನ್ನಾವಾರದ ಮಾಗೋಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದರು. ಅಲ್ಲದೇ ಸಿ.ಸಿ ಕ್ಯಾಮರಾ ಮಾಹಿತಿ ಆಧಾರದಲ್ಲಿ ಹಲವರನ್ನು ಬಂಧನ ಮಾಡಲಾಗಿತ್ತು.

     

  • ಹಂತಕ ಧರ್ಮರಾಜ್ ಚಡಚಣ ಹತ್ಯೆಗೆ ಟ್ವಿಸ್ಟ್- ನಕಲಿ ಎನ್‍ ಕೌಂಟರ್ ಎಂದು ತಾಯಿ ಆರೋಪ

    ಹಂತಕ ಧರ್ಮರಾಜ್ ಚಡಚಣ ಹತ್ಯೆಗೆ ಟ್ವಿಸ್ಟ್- ನಕಲಿ ಎನ್‍ ಕೌಂಟರ್ ಎಂದು ತಾಯಿ ಆರೋಪ

    ವಿಜಯಪುರ: ಎನ್ ಕೌಂಟರ್ ನಲ್ಲಿ ಪಿಎಸ್‍ಐ ಗುಂಡಿಗೆ ಬಲಿಯಾದ ಭೀಮಾತೀರದ ನಟೊರಿಯಸ್ ಹಂತಕ ಧರ್ಮರಾಜ್ ಚಡಚಣ ಪ್ರಕರಣ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದೆ. ಧರ್ಮರಾಜ್ ಸಾವಿನ ಬಗ್ಗೆ ಆತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ತನಿಖೆಗೆ ಆಗ್ರಹಿಸಿದ್ದಾರೆ.

    ಅಕ್ರಮ ಶಸ್ತ್ರಾಸ್ತ್ರ ಪತ್ತೆಗೆ ಬಂದ ಪೊಲೀಸರ ಮೇಲೆ ಗುಂಡು ಹಾರಿಸಿ, ಪಿಎಸ್‍ಐ ಗೋಪಾಲ ಹಳ್ಳೂರ್ ಗುಂಡಿಗೆ ಬಲಿಯಾದ ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ್ ಚಡಚಣ ಅಧ್ಯಾಯ ಅಂತ್ಯವಾಗಿದೆ. ಆದರೆ ಆತನ ಸಾವಿನ ಬಗ್ಗೆ ಭೀಮಾ ತೀರದಲ್ಲಿ ದಿನಕ್ಕೊಂದು ಮಾತುಗಳು ಕೇಳಿ ಬರುತ್ತಿವೆ.

    ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ – ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಹಂತಕ ಸಾವು

    ಧರ್ಮರಾಜ್ ತಾಯಿ ವಿಮಲಾಬಾಯಿ ಮತ್ತೆ ಪ್ರಕರಣದ ಬಗ್ಗೆ ಧ್ವನಿಯತ್ತಿದ್ದು, ನನ್ನ ಮಗನನ್ನು ನಕಲಿ ಎನ್ ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಧರ್ಮರಾಜ್ ಸಹೋದರ ಗಂಗಾಧರನನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ಈವರೆಗೂ ಕೋರ್ಟ್ ಗೆ ಹಾಜರುಪಡಿಸಿಲ್ಲ, ಎಲ್ಲಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಮಹಾದೇವ ಸಾಹುಕಾರ್ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯಪುರ ಎಸ್ಪಿ ಧರ್ಮರಾಜ್ ತಾಯಿ ವಿಮಲಾಬಾಯಿ ನನಗೆ ಖುದ್ದಾಗಿ ಬಂದು ಯಾವುದೇ ದೂರು ನೀಡಿಲ್ಲ. ಎನ್ ಕೌಂಟರ್ ನಡೆದ ವೇಳೆ ಅನೇಕರು ಅಲ್ಲಿಂದ ಪರಾರಿಯಾಗಿದ್ದಾರೆ. ಅದರಲ್ಲೇ ಧರ್ಮರಾಜ್ ತಮ್ಮ ಗಂಗಾಧರ ಹೋಗಿರಬಹುದು. ಅದರ ಬಗ್ಗೆ ಮಾಹಿತಿ ಇಲ್ಲ.

  • ಜಮ್ಮು-ಕಾಶ್ಮೀರದಲ್ಲಿ ಬೆಂಗ್ಳೂರು ಯೋಧ ಆತ್ಮಹತ್ಯೆ – ತನಿಖೆಗೆ ಪೋಷಕರ ಆಗ್ರಹ

    ಜಮ್ಮು-ಕಾಶ್ಮೀರದಲ್ಲಿ ಬೆಂಗ್ಳೂರು ಯೋಧ ಆತ್ಮಹತ್ಯೆ – ತನಿಖೆಗೆ ಪೋಷಕರ ಆಗ್ರಹ

    ಶ್ರೀನಗರ: ಬೆಂಗಳೂರು ಮೂಲದ ಸೈನಿಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಮ್ಮು-ಕಾಶ್ಮೀರದ ಪಹಗಾಮ್ ಸೈನಿಕ ನೆಲೆಯಲ್ಲಿ ನಡೆದಿದೆ.

    ಆರ್. ನರೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವ ಸೈನಿಕ ಎಂದು ತಿಳಿದುಬಂದಿದ್ದು, ಇವರು ಜಮ್ಮು-ಕಾಶ್ಮೀರದ ಪಹಗಾಮ್ ಪ್ರದೇಶದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು.

    ಯೋಧ ನರೇಂದ್ರ ಅವರು ಭಾನುವಾರ ಮಧ್ಯಾಹ್ನದ ವೇಳೆ ಆರ್ಮಿ ಕ್ಯಾಂಪ್ ನಲ್ಲಿ ತಮ್ಮ ಸರ್ವಿಸ್ ರೈಫಲ್ ನಿಂದ ಶೂಟ್ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಕುರಿತು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಂಗಳೂರಿನ ರಾಜಗೋಪಾಲನಗರದ ಮಾರುತಿ ಟ್ಯಾಕೀಸ್ ಬಳಿ ಮೃತ ಸೈನಿಕ ನರೇಂದ್ರ ಪೋಷಕರು ವಾಸಿಸುತ್ತಿದ್ದಾರೆ. ಯೋಧ ನರೇಂದ್ರ ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಸೇವೆಗೆ ಮರಳಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಿನ ತಮ್ಮ ಪೋಷಕರಿಗೆ ವಿಡಿಯೋ ಕಾಲ್ ಮಾಡಿ ಸಂತೋಷದಿಂದ ಮಾತನಾಡಿದ್ದರು. ತಮ್ಮ ಮಗ ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ಪಡೆದ ಪೋಷಕರು ತೀವ್ರ ದುಃಖದಲ್ಲಿದ್ದು, ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದಾರೆ.

    ಮೃತ ಯೋಧನ ಪಾರ್ಥೀವ ಶರೀರ ಇಂದು ಬೆಳ್ಳಿಗೆ 11.30ರ ವೇಳೆಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.

  • ಆತ್ಮರಕ್ಷಣೆಗಾಗಿ ರೇಪಿಸ್ಟ್ ಕಾಮಿ ಅಪ್ಪನನ್ನು ಕೊಂದ್ಳು ಅಪ್ರಾಪ್ತ ಮಗಳು!

    ಆತ್ಮರಕ್ಷಣೆಗಾಗಿ ರೇಪಿಸ್ಟ್ ಕಾಮಿ ಅಪ್ಪನನ್ನು ಕೊಂದ್ಳು ಅಪ್ರಾಪ್ತ ಮಗಳು!

    ಲಕ್ನೋ: ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಹಿನ್ನೆಲೆಯಲ್ಲಿ ರೋಸಿ ಹೋಗಿದ್ದ ಮಗಳು ತನ್ನ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಾಂಭಾಲ್ ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ಎರಡು ವರ್ಷಗಳಿಂದ ಪಾಪಿ ತಂದೆ ನಿರಂತರವಾಗಿ ಮಗಳ ಮೇಲೆ ಅತ್ಯಾಚಾರ ಮಾಡುತ್ತಾ ಬಂದಿದ್ದ. ಸೋಮವಾರ ರಾತಿಯ್ರೂ ತಂದೆ ಮನೆಗೆ ಬಂದು ಅತ್ಯಾಚಾರ ಎಸಗಿದ್ದಾನೆ. ಇದರಿಂದ ರೊಚ್ಚಿಗೆದ್ದ 16 ವರ್ಷದ ಮಗಳು ತನ್ನ ಆತ್ಮ ರಕ್ಷಣೆಗಾಗಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿ ಮಂಗಳವಾರ ತನ್ನ 12 ವರ್ಷದ ತಂಗಿ ಹಾಗೂ ನೆರೆಹೊರೆಯವರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬಂದು ತಾನು ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದಾಳೆ. ಆದರೆ ಬಾಲಕಿ ಅನಕ್ಷರಸ್ಥಳಾಗಿದ್ದರಿಂದ ತನ್ನ ರಕ್ಷಣೆಗಾಗಿ ಈ ರೀತಿ ಮಾಡಿದ್ದಾಳೆ. ಆದ್ದರಿಂದ ಆಕೆಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಆಕೆ ತಂದೆ ವಿರುದ್ಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ತನಿಖಾಧಿಕಾರಿ ಶಮ್ಶಾದ್ ಅಲಿ ಅವರು ಹೇಳಿದರು.

    ಬಾಲಕಿ ದೂರಿನಲ್ಲಿ, ನನ್ನ ತಂದೆ 2 ವರ್ಷದಿಂದ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದ. ನನ್ನ ತಾಯಿಯನ್ನೂ ಕೂಡ 9 ವರ್ಷಗಳ ಹಿಂದೆ ಕೊಲೆ ಮಾಡಿದ್ದನು. ಮನೆಯಲ್ಲಿ ನಾನು, ಅಜ್ಜಿ, ತಂದೆ ಹಾಗೂ ನನ್ನ ತಂಗಿ ವಾಸವಾಗಿದ್ದೆವು. ದಿನ ಕುಡಿದುಕೊಂಡು ಬಂದು ಅತ್ಯಾಚಾರ ಮಾಡುತ್ತಿದ್ದ. ಅಜ್ಜಿಗೆ ಕಣ್ಣು ಕಾಣುವುದಿಲ್ಲ ಆದ್ದರಿಂದ ಅವರಿಂದ ಯಾವುದೇ ಸಹಾಯ ಸಿಗುತ್ತಿರಲಿಲ್ಲ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಗೆ ಒಡ್ಡಿದ್ದ. ಅದೇ ರೀತಿ ಸೋಮವಾರ ರಾತ್ರಿ ಕುಡಿದು ಅತ್ಯಾಚಾರ ಎಸಗಿದ್ದಾನೆ. ಕೊನೆಗೆ ನನ್ನ ರಕ್ಷಣೆಗಾಗಿ ಕೋಲಿನಿಂದ ಅವನ ತಲೆಗೆ ಜೋರಾಗಿ ಹೊಡೆದೆ, ತಲೆಗೆ ಏಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ತಂದೆ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾಳೆ.

    ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಕಳುಹಿಸಿದ್ದಾರೆ. ಅಷ್ಟೇ ಅಲ್ಲದೇ ಡಿಎನ್‍ಎ ವರದಿಯನ್ನು ಕೇಳಿದ್ದಾರೆ. ಹಾಗೆಯೇ ಹಲವಾರು ಗ್ರಾಮಸ್ಥರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಹೇಳಿಕೆಯಂತೆ ಆಕೆಯ ತಂದೆಯ ನಡವಳಿಕೆ ಸರಿಯಿರಲಿಲ್ಲ ಎಂದು ತಿಳಿದು ಬಂದಿದೆ. ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 304 (ಉದ್ದೇಶಪೂರ್ವಕ ಅಲ್ಲದ ಕೊಲೆ) ರ ಅಡಿಯಲ್ಲಿ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

    ಕೆಲವು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 100(ಆತ್ಮರಕಕ್ಷಣೆ) ಅಡಿಯಲ್ಲಿ ದಾಖಲಿಸಿದ್ದು, ತನಿಖೆಯನ್ನು ಪ್ರಾರಂಭಿಸಿದ್ದೇವೆ. ಈ ಪ್ರಕರಣದಲ್ಲಿ ಹೆಚ್ಚುವರಿಯಾಗಿ ಕಾನೂನಿನ ಅಭಿಪ್ರಾಯವನ್ನು ಕೇಳಬೇಕಿದೆ ಎಂದು ಪೊಲೀಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

  • ಟ್ರೋಲ್ ಆಗ್ತಿದೆ ಗೃಹಸಚಿವರು, ಶಾಸಕರು, ಮೋಹನ್ ಆಳ್ವ ಮಾತುಕತೆಯ ಫೋಟೋ

    ಟ್ರೋಲ್ ಆಗ್ತಿದೆ ಗೃಹಸಚಿವರು, ಶಾಸಕರು, ಮೋಹನ್ ಆಳ್ವ ಮಾತುಕತೆಯ ಫೋಟೋ

    ಮಂಗಳೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್‍ನ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವಿನ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವು ಸಿಗುತ್ತಿದೆ. ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಗೃಹ ಸಚಿವರು ಮತ್ತು ಸ್ಥಳೀಯ ಶಾಸಕರು ಆಳ್ವಾಸ್ ಸಂಸ್ಥೆಯ ಮಾಲೀಕರೊಂದಿಗೆ ಕಾಣಿಸಿಕೊಂಡಿದ್ದಾರೆ.

    ಗೃಹ ಸಚಿವ ರಾಮಲಿಂಗ ರೆಡ್ಡಿ ಹಾಗೂ ಮೂಡಬಿದಿರೆಯ ಶಾಸಕ ಅಭಯ್‍ಚಂದ್ರ ಜೈನ್ ಅವರು ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಜೊತೆ ಸೇರಿ ಮೀಟಿಂಗ್ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ಈ ಫೋಟೋ ವಿವಾದವನ್ನು ಎಬ್ಬಿಸಿರುವುದಲ್ಲದೆ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಾ ಎಂಬ ಅನುಮಾನವನ್ನೂ ಸೃಷ್ಟಿಸಿದೆ.

    ಕಳೆದ ಬುಧವಾರ ಮಂಗಳೂರು ಭೇಟಿಯಲ್ಲಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅಗ್ನಿಶಾಮಕ ಠಾಣೆಯ ಉದ್ಘಾಟನೆಗಾಗಿ ಮೂಡಬಿದಿರೆಗೆ ಹೋಗಿದ್ದರು. ಈ ವೇಳೆ ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಹಾಗೂ ಮೋಹನ್ ಆಳ್ವ ಗೃಹ ಸಚಿವರನ್ನು ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಅವರು ಏನು ಮಾತನಾಡಿದರು ಎಂದು ಯಾರಿಗೂ ಗೊತ್ತಿಲ್ಲ. ಆದರೆ ಕಾವ್ಯ ಸಾವಿನ ಪ್ರಕರಣವನ್ನು ಮುಚ್ಚಿ ಹಾಕುವ ಮಾತುಕತೆ ನಡೆದಿದೆ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅವರು ಮಾತುಕತೆ ನಡೆಸುತ್ತಿರೋ ಫೋಟೋಗಳಿಗೆ ತಮಗೆ ತೋಚಿದ ಹಾಗೆ ಬರಹವನ್ನು ಬರೆದು ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.

    ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವಿನ ಪ್ರಕರಣ ದೊಡ್ಡ ಸದ್ದು ಮಾಡಿದೆ. ಈ ಸಾವಿನ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಸತ್ಯಾಂಶ ಕೂಡ ಹೊರಬಂದಿಲ್ಲ. ಕುಟುಂಬ ಮತ್ತು ಸಾರ್ವಜನಿಕರ ಸಂಶಯಗಳಿಗೆ ಉತ್ತರನೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಾಲೀಕ ಮೋಹನ್ ಆಳ್ವರೇ ಹಲವರ ಕಣ್ಣಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಈ ನಡುವೆಯೇ ಮೋಹನ್ ಆಳ್ವರನ್ನು ಗೃಹ ಸಚಿವ ರೆಡ್ಡಿ ಅವರು ಭೇಟಿಯಾಗಿ ಮಾತುಕತೆ ನಡೆಸಿರೋದು ಕಾವ್ಯ ಪರ ಹೋರಾಡುತ್ತಿರುವವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೋರಾಟಗಾರ ದಿನಕರ್ ಶೆಟ್ಟಿ ತಿಳಿಸಿದ್ದಾರೆ.

    ಬುಧವಾರ ಗೃಹ ಸಚಿವರು ಮೋಹನ್ ಆಳ್ವ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ನಾವು ಅವರನ್ನು ಭೇಟಿ ಮಾಡಲು ಹೋಗಿದ್ದಾಗ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು ನಾವು ಕೇಳಿಕೊಂಡಿದ್ದೇವು. ಆದರೆ ಅವರು ಕಾಟಾಚಾರಕ್ಕಷ್ಟೇ ಒಂದೆರಡು ನಿಮಿಷ ಮಾತನಾಡಿಸಿ ಸಮಯದ ಅಭಾವವಿದೆ ಅಂತ ಹೇಳಿ ಕಳುಹಿಸಿಬಿಟ್ರು ಎಂದು ಕಾವ್ಯಳ ತಾಯಿ ಬೇಬಿ ಪೂಜಾರಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಕಾವ್ಯ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸದಿದ್ದರೆ ಶನಿವಾರ ಮಂಗಳೂರಿನಲ್ಲಿ ಅರೆಬೆತ್ತಲೆ ಹೋರಾಟ ಮಾಡುತ್ತೇವೆ ಎಂದು ಆಳ್ವಾಸ್ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

  • ಗೌರಿ ಲಂಕೇಶ್ ಹಂತಕರ ಪತ್ತೆಗೆ ಶೋಧ ತೀವ್ರ- ಇಂದು ಪತ್ರಕರ್ತೆಯ ಮನೆಗೆ ಎಸ್‍ಐಟಿ ಭೇಟಿ

    ಗೌರಿ ಲಂಕೇಶ್ ಹಂತಕರ ಪತ್ತೆಗೆ ಶೋಧ ತೀವ್ರ- ಇಂದು ಪತ್ರಕರ್ತೆಯ ಮನೆಗೆ ಎಸ್‍ಐಟಿ ಭೇಟಿ

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ.

    ಎಸ್‍ಐಟಿ ಹಾಗೂ ಪೊಲೀಸರ ತಂಡ ಆರೋಪಿಗಳಿಗೆ ಬಲೆ ಬೀಸಿದೆ. ಐಜಿ ಬಿಕೆ ಸಿಂಗ್ ನೇತೃತ್ವದಲ್ಲಿ 3 ವಿಶೇಷ ತಂಡ ರಚನೆ ಮಾಡಲಾಗಿದೆ. ಇನ್ನೂ ಹಂತಕರ ಜಾಡು ಹಿಡಿದು ಕಾರ್ಯಾಚರಣೆಗಿಳಿದಿರುವ ವಿಶೇಷ ತಂಡ ಹಂತಕರ ಬಗ್ಗೆ ಸಾಕಷ್ಟು ಸುಳಿವು ಕಲೆ ಹಾಕಿದೆ.

    ಸದ್ಯ ಗೌರಿ ಲಂಕೇಶ್ ನಿವಾಸದ ಬಳಿ ಕಾವಲಿಗೆ ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿದ್ದು, ಎಫ್‍ಎಸ್‍ಎಲ್ ಅಧಿಕಾರಿಗಳಿಗೆ ಪ್ರತಿ ಹಂತದ ವರದಿ ನೀಡುವಂತೆ ಎಸ್‍ಐಟಿ ಸೂಚನೆ ನೀಡಿದೆ. ಹಂತಕರ ಬೇಟೆಗೆ ಕಾರ್ಯಾಚರಣೆಗಿಳಿದಿರುವ ಪೊಲೀಸರು ಬೆಂಗಳೂರಿನಾದ್ಯಂತ ನಾಕಬಂದಿ ಹಾಕಿ ಇಂದು ಕೂಡ ತೀವ್ರ ತಪಾಸಣೆ ನಡೆಸಿದ್ದಾರೆ.

    ಇದುವರೆಗೆ ಸಿಸಿಟಿವಿ ದೃಶ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ಸುಳಿವು ಸಿಕ್ಕಿಲ್ಲ. ಸಿಕ್ಕ ಸಿಸಿಟಿವಿ ದೃಶ್ಯದಲ್ಲೂ ಆರೋಪಿಯ ಚಹರೆ ಸರಿಯಾಗಿ ಕಾಣಿಸುತ್ತಿಲ್ಲ. ಪೊಲೀಸರು ಗೌರಿ ಅವರ ಫೋನ್ ಕರೆಗಳ ಸಿಡಿಆರ್ ಚೆಕ್ ಮಾಡುತ್ತಿದ್ದಾರೆ. ತನಿಖಾ ತಂಡ ಕರೆಗಳ ವಿನಿಮಯದ ಬಗ್ಗೆ ಬೆನ್ನತ್ತಿದೆ. ಇಂದು ವಿಶೇಷ ತನಿಖಾ ತಂಡದ ಸಭೆ ನಡೆಯಲಿದೆ. ಕೊಲೆಯ ಬಗ್ಗೆ ಇದುವರೆಗೆ ಸಂಗ್ರಹವಾಗಿರುವ ಸಾಕ್ಷ್ಯಾಧಾರಗಳ ಪರಿಶೀಲನೆಯಾಗಲಿದ್ದು, ಅನಂತರ ಮುಂದಿನ ತನಿಖೆಯ ಹಾದಿಯ ಬಗ್ಗೆ ತೀರ್ಮಾನ ಕೂಗೊಳ್ಳಲಾಗುತ್ತದೆ.

    ಗೌರಿ ಲಂಕೇಶ್ ಹತ್ಯೆಯ ಬಗ್ಗೆ ತಂಗಿ ಕವಿತಾ ಲಂಕೇಶ್‍ರಿಂದ ದೂರು ಪಡೆದಿರುವ ಪೊಲೀಸರು, ಐಪಿಸಿ ಸೆಕ್ಷನ್ 302 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.