Tag: ತಂದೆ ಮಗಳು

  • ಒಂದು ಕೊಲೆ, ಒಂದು ಆತ್ಮಹತ್ಯೆ – ಎರಡು ಕೊಲೆ ಯತ್ನದ ಹಿಂದೆ ಹಲವು ಅನುಮಾನಗಳು

    ಒಂದು ಕೊಲೆ, ಒಂದು ಆತ್ಮಹತ್ಯೆ – ಎರಡು ಕೊಲೆ ಯತ್ನದ ಹಿಂದೆ ಹಲವು ಅನುಮಾನಗಳು

    ಬೆಂಗಳೂರು: ಸಿಲಿಕಾನ್ ಸಿಟಿಯ ರಾಜಗೋಪಾಲನಗರದ ಹೆಗ್ಗನಹಳ್ಳಿಯಲ್ಲಿ ನಡೆದಿದ್ದ ಹೆಂಡತಿಯ ಕೊಲೆ, ಗಂಡ ಮತ್ತು ಮಗಳ ಕೊಲೆ ಯತ್ನ, ಬಾಡಿಗೆದಾರ ನೇಣು ಬಿಗಿದುಕೊಂಡು ಸಾವು ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಹೆಗ್ಗನಹಳ್ಳಿ ನಿವಾಸಿಯಾದ ಲಕ್ಷ್ಮಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಅದೇ ಮನೆಯಲ್ಲಿ ಲಕ್ಷ್ಮಿ ಗಂಡ ಶಿವರಾಜ್ ಮತ್ತು ಮಗಳು ಚೈತ್ರ ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಜೊತೆಗೆ ಅದೇ ಮನೆಯ ಮೇಲೆ ಬಾಡಿಗೆಗೆ ವಾಸವಾಗಿದ್ದ ಚಿತ್ರದುರ್ಗ ಮೂಲದ ರಂಗದಾಮಯ್ಯ ಅನುಮಾನಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದರು.

    ಸ್ಥಳಕ್ಕೆ ಬಂದ ಪೊಲೀಸರು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತಂದೆ ಮತ್ತು ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮನೆ ಮಾಲೀಕಿ ಲಕ್ಷ್ಮಿ ತಲೆಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು, ಬಾಡಿಗೆದಾರ ರಂಗದಾಮಯ್ಯ ಹೊಟ್ಟೆಗೆ ಚಾಕು ಇರಿದ ಸ್ಥಿತಿಯಲ್ಲಿ ನೇಣು ಬಿಗಿದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಲಕ್ಷ್ಮಿ ಮತ್ತು ಬಾಡಿಗೆದಾರ ರಂಗದಾಮಯ್ಯನ ನಡುವೆ ಅಕ್ರಮ ಸಂಬಂಧದ ಶಂಕೆ ವ್ಯಕ್ತವಾಗಿದ್ದು, ಇದೇ ಕಾರಣಕ್ಕೆ ಗಲಾಟೆ ನಡೆದು ಲಕ್ಷ್ಮಿಯನ್ನು ಬಾಡಿಗೆದಾರ ರಂಗದಾಮಯ್ಯನೆ ಕೊಲೆ ಮಾಡಿ ನಂತರ ಗಂಡ ಮತ್ತು ಮಗಳ ಕೊಲೆಗೆ ಯತ್ನಿಸಿರಬಹುದು ಅಂತಾ ಶಂಕಿಸಲಾಗಿದೆ. ಆದರೆ ರಂಗದಾಮಯ್ಯನ ಹೊಟ್ಟೆಗೆ ಚಾಕು ಹಾಕಿದ್ದು ಯಾರು? ಚಾಕು ಹಾಕಿ ತೀವ್ರ ರಕ್ತಸ್ರಾವ ಆದ ನಂತರ ಹೇಗೆ ನೇಣುಬಿಗಿದುಕೊಂಡ ಎಂಬ ಹಲವು ಅನುಮಾನಗಳು ಪೊಲೀಸರನ್ನು ಕಾಡತೊಡಗಿವೆ.

    ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡ ರಾಜಗೋಪಾಲನಗರ ಪೊಲೀಸರು ಈ ಎಲ್ಲಾ ಅಯಾಮಗಳಿಂದ ತನಿಖೆ ನಡೆಸಿದ್ದಾರೆ.