Tag: ತಂತ್ರಾಂಶ

  • ಪೆಗಾಸಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ

    ಪೆಗಾಸಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ

    ನವದೆಹಲಿ: ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪೆಗಾಸಸ್‌ಗೆ ಸಂಬಂಧಿಸಿದಂತೆ ವರದಿ ಪ್ರಕಟವಾದ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

    ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಗಮನದಲ್ಲಿಟ್ಟುಕೊಂಡು ವಕೀಲ ಎಂಎಲ್ ಶರ್ಮಾ ಪೆಗಾಸಸ್ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಭಾರತ ಹಾಗೂ ಇಸ್ರೇಲ್ ನಡುವೆ 2017ರಲ್ಲಿ ನಡೆದ ರಕ್ಷಣಾ ಒಪ್ಪಂದದ ಸಂದರ್ಭದಲ್ಲಿ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ವರದಿ ಮಾಡಿತ್ತು. ಇದನ್ನೂ ಓದಿ: 2017ರಲ್ಲಿ ಭಾರತ-ಇಸ್ರೇಲ್‌ ರಕ್ಷಣಾ ಒಪ್ಪಂದದ ವೇಳೆ ಪೆಗಾಸಸ್‌ ಖರೀದಿ – ನ್ಯೂಯಾರ್ಕ್‌ ಟೈಮ್ಸ್‌ ವರದಿ

    2017ರಲ್ಲಿ ಭಾರತ 2 ಶತಕೋಟಿ ಡಾಲರ್ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಗುಪ್ತಚರ ಸಾಧನಗಳ ಒಪ್ಪಂದ ಮಾಡಿಕೊಂಡಿತ್ತು. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕು ರಕ್ಷಕರು, ರಾಜಕಾರಣಿಗಳು ಹಾಗೂ ಇತರರ ಮೇಲೆ ಕಣ್ಣಿಡಲು ಸರ್ಕಾರ ಪೆಗಾಸಸ್ ಸಾಫ್ಟ್‌ವೇರ್ ಬಳಸುತ್ತಿದೆ ಎಂದು ವರದಿಯಾಗಿದೆ.

    ಯಾವುದೇ ಖಾಸಗಿ ಕಂಪನಿಗಳು ಅಥವಾ ಗುಪ್ತಚರ ಸಂಸ್ಥೆಗಳು ಮಾಡಲು ಅಸಾಧ್ಯವಾದ ಕೆಲಸವನ್ನು ಪೆಗಾಸಸ್ ಮಾಡುತ್ತದೆ. ಐಫೋನ್, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಎನ್‌ಕ್ರಿಪ್ಟ್ ಮಾಡಲಾದ ಸಂವಹನವನ್ನೂ ಪೆಗಾಸಸ್ ಯಶಸ್ವಿಯಾಗಿ ಭೇದಿಸಬಲ್ಲದು ಎಂದು ಎಂದು ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪೆಗಾಸಸ್ ಖರೀದಿಸಿ ಮೋದಿ ಸರ್ಕಾರ ದೇಶದ್ರೋಹ ಮಾಡಿದೆ: ರಾಹುಲ್ ಗಾಂಧಿ

    ನ್ಯೂಯಾರ್ಕ್ ಟೈಮ್ಸ್ ವರದಿಯ ಬಗ್ಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸಚಿವ ನಿವೃತ್ತ ಜನರಲ್ ವಿಕೆ ಸಿಂಗ್ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು ಸುಪಾರಿ ಮೀಡಿಯಾ ಎಂದು ಕರೆದು ಟೀಕಿಸಿದ್ದಾರೆ.

    ಕಳೆದ ಲೋಕಸಭೆ ಅಧಿವೇಶನದ ಸಮಯದಲ್ಲೂ ಪೆಗಾಸಸ್ ವರದಿ ಬಹಳ ಸದ್ದು ಮಾಡಿತ್ತು. ಈಗ ಬಜೆಟ್ ಅಧಿವೇಶನಕ್ಕೂ ಮೊದಲು ಪೆಗಾಸಸ್‌ಗೆ ಸಂಬಂಧಿಸಿದಂತೆ ವರದಿ ಪ್ರಕಟವಾಗಿದ್ದು ಸಂಸತ್ತಿನಲ್ಲಿ ಕೋಲಾಹಲ ನಡೆಯುವ ಸಾಧ್ಯತೆಯಿದೆ.

    ಈಗಾಗಲೇ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಪೆಗಾಸಸ್‌ಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವರದಿಯಾಗಿದೆ.

  • ಆಪಲ್‍ನಿಂದ ಡ್ಯುಯಲ್ ಸಿಮ್ ಐಫೋನ್?

    ಆಪಲ್‍ನಿಂದ ಡ್ಯುಯಲ್ ಸಿಮ್ ಐಫೋನ್?

    ಬೆಂಗಳೂರು: ಇಲ್ಲಿಯವರೆಗೆ ಸಿಂಗಲ್ ಸಿಮ್ ಐಫೋನ್ ಗಳನ್ನು ಬಿಡುಗಡೆ ಮಾಡುತ್ತಿದ್ದ ಆಪಲ್ ಕಂಪೆನಿ ಈಗ ಡ್ಯುಯಲ್ ಸಿಮ್ ಫೋನ್ ಬಿಡುಗಡೆ ಮಾಡುತ್ತಿರುವ ಬಗ್ಗೆ ಸುಳಿವು ನೀಡಿದೆ.

    ಹೌದು. ಆಪಲ್ ತನ್ನ ಮೊಬೈಲ್ ಆಪರೇಟಿಂಗ್ ಸಿಸ್ಟಂ ಐಓಎಸ್ 12ರ ಐದನೇ ಡೆವಲಪರ್ ಬೀಟಾದ ಆವೃತ್ತಿಯನ್ನು ಬಿಡುಗಡೆಮಾಡಿದೆ. ಬೀಟಾ ಐಓಎಸ್‍ನಲ್ಲಿ ಹೊಸ ಫೀಚರ್ ಗಳಿದ್ದು, ಮುಖ್ಯವಾಗಿ ಡ್ಯುಯಲ್ ಸಿಮ್ ಸ್ಟೇಟಸ್ ಮತ್ತು ಎರಡನೇ ಸಿಮ್ ಸ್ಲಾಟ್ ಬಗ್ಗೆ ಉಲ್ಲೇಖಿಸಲಾಗಿದೆ.

    ಈ ಹಿಂದೆ ಆಪಲ್ 6.5 ಇಂಚು ಸ್ಕ್ರೀನ್ ಹೊಂದಿರುವ ಡ್ಯುಯಲ್ ಸಿಮ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆದರೆ ಯಾವಾಗ ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಸ್ಪಷ್ಟವಾದ ವಿವರ ಸಿಕ್ಕಿರಲಿಲ್ಲ. ಆದರೆ ಈಗ ಬೀಟಾ ಆವೃತ್ತಿಯಲ್ಲಿ ಸುಳಿವು ನೀಡಿದ್ದು ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಬೀಟಾ ಆವೃತ್ತಿಯಲ್ಲಿ ಡಾರ್ಕ್ ಕಂಟ್ರೋಲ್ ಸೆಂಟರ್ ನಿಯಂತ್ರಣ, ಪ್ರಿ ಲೋಡ್ ಆಗಿರುವ ಫೋಟೋಗಳ ಅಪ್ಲಿಕೇಶನ್ ಗಾಗಿ ಹೊಸ ಸ್ಪ್ಲಾಶ್ ಸ್ಕ್ರೀನ್ ಸೇರಿಸಿದೆ.

    ವಿಶ್ವದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೊದಲನೇಯ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್‍ಗಳ ಪ್ರಾಬಲ್ಯವೇ ಇಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಆಂಡ್ರಾಯ್ಡ್ ಫೋನ್‍ಗಳಿಗೆ ಸ್ಪರ್ಧೆ ನೀಡಲು ಈಗ ಆಪಲ್ ಮುಂದಾಗಿದೆ ಎನ್ನಲಾಗಿದೆ.

    ಟಾಪ್ ಕಂಪೆನಿಗಳ ಫೋನ್ ಗಳ ಪೈಕಿ ಆಪಲ್ ಒಂದನ್ನು ಹೊರತುಪಡಿಸಿ ಉಳಿದ ಎಲ್ಲ ಸ್ಮಾರ್ಟ್‍ಫೋನ್ ಕಂಪೆನಿಗಳು ಡ್ಯುಯಲ್ ಸಿಮ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಐಫೋನ್ ಬೆಲೆಯಲ್ಲಿರುವ ಆಂಡ್ರಾಯ್ಡ್ ಫೋನ್ ಗಳಲ್ಲೂ ಎರಡು ಸಿಮ್ ಹಾಕಬಹುದಾಗಿದೆ. ಆಪಲ್ ಸಹ ಈ ಮಾರುಕಟ್ಟೆಯ ಟ್ರೆಂಡ್ ಅನ್ನು ಫಾಲೋ ಮಾಡುವ ಸಲುವಾಗಿ ಡ್ಯುಯಲ್ ಸಿಮ್ ಇರುವ ಐಫೋನ್ ಬಿಡುಗಡೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

    ಏನಿದು ಆಪಲ್ ಬೀಟಾ ಐಓಎಸ್?
    ನೀವು ವಾಟ್ಸಪ್ ಬಳಸುತ್ತಿದ್ದರೆ ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ವಾಟ್ಸಪ್, ವಾಟ್ಸಪ್ ಬೀಟಾ ಆವೃತ್ತಿಯ ಎರಡು ಅಪ್ಲಿಕೇಶನ್ ನೋಡಿರಬಹುದು. ವಾಟ್ಸಪ್ ಬೀಟಾ ಆವೃತ್ತಿಯನ್ನು ಡೌನ್ ಲೋಡ್ ಮಾಡಿದರೆ ನಿಮಗೆ ವಾಟ್ಸಪ್ ಹೊಸ ವಿಶೇಷತೆಗಳು ಬೇಗನೇ ಸಿಗುತ್ತದೆ. ವಾಟ್ಸಪ್ ಕಂಪೆನಿಯ ಹೊಸ ವಿಶೇಷತೆಗಳ ಪ್ರಯೋಗಗಳನ್ನು ಬೀಟಾ ಅವೃತ್ತಿ ಬಳಕೆದಾರರಲ್ಲಿ ನೋಡಿ ಬಳಿಕ ಅಂತಿಮವಾಗಿ ಎಲ್ಲ ಜನರಿಗೆ ಆ ವಿಶೇಷತೆಯನ್ನು ನೀಡುತ್ತದೆ. ಅದೇ ರೀತಿಯಾಗಿ ಆಪಲ್ ಸಹ ತನ್ನ ಐಓಎಸ್ ಹೊಸ ವಿಶೇಷತೆಯನ್ನು ಬಳಕೆದಾರರಿಗೆ ನೀಡಲು ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ನೀಡಿದ ಎಲ್ಲ ವಿಶೇಷತೆಗಳು ಅಂತಿಮವಾಗಿ ಬಿಡುಗಡೆ ಮಾಡಲಾಗುವ ಐಓಎಸ್‍ನಲ್ಲಿ ಇರುತ್ತದೆ ಎಂದು ಹೇಳಲು ಬರವುದಿಲ್ಲ. ಗ್ರಾಹಕ ಅಭಿಪ್ರಾಯಗಳನ್ನು ಸಂಗ್ರಹಿಸಿ, ದೋಷಗಳನ್ನು ಸರಿಪಡಿಸಿ ಅಂತಿಮವಾಗಿ ಎಲ್ಲ ವಿಶೇಷತೆಗಳನ್ನು ಸೇರಿಸಿ ಐಓಎಸ್ ಬಿಡುಗಡೆ ಮಾಡುತ್ತದೆ.