Tag: ಡ್ರೈವರ್

  • ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

    ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

    ಲಕ್ನೋ: ಉತ್ತರ ಪ್ರದೇಶದ ನೊಯ್ದಾದ ಖಾಸಗಿ ಬಸ್ ಮಾಲೀಕರೊಬ್ಬರು ತಮ್ಮ ಬಸ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ಸಾರಿಗೆ ಇಲಾಖೆ 500 ರೂ. ದಂಡದ ಚಲನ್ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.

    ಸೆಪ್ಟೆಂಬರ್ 11ರಂದು ಆನ್‍ಲೈನ್ ಮೂಲಕ ಚಲನ್ ಕಳುಹಿಸಲಾಗಿದ್ದು, ನಮ್ಮ ಸಹೋದ್ಯೋಗಿಯೊಬ್ಬರು ಶುಕ್ರವಾರ ಇದನ್ನು ಪರಿಶೀಲಿಸಿದ್ದಾರೆ ಎಂದು ಬಸ್ ಮಾಲೀಕ ನಿರಂಕರ್ ಸಿಂಗ್ ಹೇಳಿದ್ದಾರೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ದಂಡ ಪಾವತಿಸುವುದಾಗಿಯೂ ಸಿಂಗ್ ತಿಳಿಸಿದ್ದಾರೆ.

    ನಮ್ಮ ಬಸ್‍ಗಳು ನಗರ ಸಾರಿಗೆಯಾಗಿದ್ದು, ಬಸ್ ವ್ಯವಹಾರವನ್ನು ನಮ್ಮ ಮಗ ನೋಡಿಕೊಳ್ಳುತ್ತಾನೆ. ನಮ್ಮ ಬಳಿ 40-50 ಬಸ್‍ಗಳಿವೆ, ಶಾಲೆಗಳಿಗೆ ಹಾಗೂ ವಿವಿಧ ಕಂಪನಿಗಳಿಗೆ ಬಸ್‍ಗಳನ್ನು ಬಾಡಿಗೆಗೆ ನೀಡಲಾಗಿದೆ. ಇವು ನೊಯ್ಡಾ ಹಾಗೂ ಗ್ರೇಟರ್ ನೊಯ್ಡಾದಲ್ಲಿ ಸಂಚರಿಸುತ್ತವೆ ಎಂದು ತಿಳಿಸಿದ್ದಾರೆ.

    ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಜವಾಬ್ದಾರಿಯುತ ಇಲಾಖೆ ಇಂತಹ ಸಣ್ಣ ತಪ್ಪುಗಳನ್ನು ಮಾಡಿದರೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೆ ನಿತ್ಯ ಸಾರಿಗೆ ಇಲಾಖೆ ಇಂತಹ ಅನಗತ್ಯ ಚಲನ್‍ಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಹಾಗೂ ಆತಂಕವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಾನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ. ಅಗತ್ಯವಿದ್ದರೆ ಕೋರ್ಟ್ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಸಾರಿಗೆ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲಿಸಲಾಗುತ್ತಿದೆ, ದೋಷವಾಗಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಹೊಸ ಮೋಟಾರ್ ವಾಹನ ಕಾಯ್ದೆಯ ನಿಯಮದಂತೆ ಚಲನ್ ನೀಡಲಾಗಿದೆ.

    ಈ ಚಲನ್‍ನ್ನು ನೋಯ್ಡಾ ಟ್ರಾಫಿಕ್ ಪೊಲೀಸರು ನೀಡಿಲ್ಲ. ಬದಲಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಹೊರಡಿಸಿದ್ದಾರೆ. ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಈ ಹಿಂದೇ ಅದೇ ಬಸ್‍ಗೆ ನಾಲ್ಕು ಬಾರಿ ದಂಡ ವಿಧಿಸಲಾಗಿತ್ತು. ಈ ಬಾರಿಯೂ ಸೀಟ್ ಬೆಲ್ಟ್ ಅಪರಾಧವಾಗಿದ್ದರೆ ಚಲನ್‍ನಲ್ಲಿ ಸೀಟ್ ಬೆಲ್ಟ್ ನಿಯಮ ಉಲ್ಲಂಘಿಸಿದ್ದಕ್ಕೆ ಎಂದು ಉಲ್ಲೇಖಿಸಬೇಕು, ಹೆಲ್ಮೆಟ್ ಧರಿಸದ್ದಕ್ಕೆ ಎಂದಲ್ಲ ಎಂದು ನಿರಂಕರ್ ಸಿಂಗ್ ವಾದಿಸಿದ್ದಾರೆ. ನಮ್ಮ ಕಡೆಯಿಂದ ಏನಾದರೂ ದೋಷವಿದ್ದರೆ, ನಾವು ದಂಡವನ್ನು ಪಾವತಿಸುತ್ತೇವೆ. ಆದರೆ ಅದು ನಿಜವಾಗಿರಬೇಕು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

  • ಭಾರತದ ಮೊದಲ 5 ಸ್ಟಾರ್ ಕ್ಯಾಬ್ ಡ್ರೈವರ್ – ಮಂಗಳಮುಖಿಯರಿಗೆ ಮಾದರಿಯಾದ ರಾಣಿ

    ಭಾರತದ ಮೊದಲ 5 ಸ್ಟಾರ್ ಕ್ಯಾಬ್ ಡ್ರೈವರ್ – ಮಂಗಳಮುಖಿಯರಿಗೆ ಮಾದರಿಯಾದ ರಾಣಿ

    ಭುವನೇಶ್ವರ್: ಮಂಗಳಮುಖಿ ರಾಣಿ ಕಿನ್ನಾರ ಭಾರತದ ಮೊದಲ 5 ಸ್ಟಾರ್ ಊಬರ್ ಕ್ಯಾಬ್ ಡ್ರೈವರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಸ್ತೆ, ನಿಲ್ದಾಣ, ರೈಲ್ವೇ, ಮಾರುಕಟ್ಟೆಗಳಲ್ಲಿ ಭಿಕ್ಷೆ ಬೇಡದೇ ರಾಣಿ ಕಿನ್ನಾರ ಸ್ವಾಭಿಮಾನದ ಜೀವನ ನಡೆಸುವ ಮೂಲಕ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ.

    ರಾಣಿ ಕಿನ್ನಾರ ಭುವನೇಶ್ವರದ ನಿವಾಸಿಯಾಗಿದ್ದು, ಫೈವ್ ಸ್ಟಾರ್ ಕ್ಯಾಬ್ ಡ್ರೈವರ್ ಆಗಿದ್ದಾರೆ. ಆಟೋ ರಿಕ್ಷಾದಿಂದ ತಮ್ಮ ಡ್ರೈವರ್ ವೃತ್ತಿ ಆರಂಭಿಸಿದ್ದ ರಾಣಿ ಇಂದು ಬಹುಜನರ ಮೆಚ್ಚಿನ ಡ್ರೈವರ್ ಆಗಿದ್ದಾರೆ.

    2016ರಲ್ಲಿ ಆಟೋ ಮೂಲಕ ನಾನು ನನ್ನ ವೃತ್ತಿ ಜೀವನ ಆರಂಭಿಸಿದೆ. ಜನರು ನನ್ನ ಆಟೋ ಹತ್ತಲು ಹಿಂದೇಟು ಹಾಕಿದ್ದರಿಂದ ಕೆಲಸ ಕೈ ಹಿಡಿಯಲಿಲ್ಲ. 2017ರ ಪುರಿಯಲ್ಲಿ ನಡೆದ ರಥಯಾತ್ರೆ ಸಂಧರ್ಭ ನಾನು ಸ್ವಯಂಪ್ರೇರಿತಗೊಂಡು ಆಂಬುಲೆನ್ಸ್ ಚಾಲನೆ ಮಾಡಿದೆ. ಈ ವೇಳೆ ನನಗೆ ಊಬರ್ ಕ್ಯಾಬ್ ಕಂಪನಿಯ ಮಾಜಿ ಉದ್ಯೋಗಿ ಪರಿಚಯವಾದರು. ಅಂದು ಅವರು ನೀವು ಕ್ಯಾಬ್ ಡ್ರೈವರ್ ಆಗಿ ಸಲಹೆ ನೀಡಿದರು ಎಂದು ರಾಣಿ ಕಿನ್ನಾರ ಹೇಳುತ್ತಾರೆ.

    ಮಾಜಿ ಉದ್ಯೋಗಿಯ ಸಲಹೆ ಮೇರೆಗೆ ಕಂಪನಿಯ ಸಂದರ್ಶನಕ್ಕೆ ಹಾಜರಾಗಿ ಪಾಸಾದೆ. ಕಂಪನಿಯ ನಿಯಮದಂತೆ ಸ್ವಂತ ಕಾರ್ ಖರೀದಿಸಿ ಊಬರ್ ಕ್ಯಾಬ್ ಡ್ರೈವರ್ ಆದೆ. ಸದ್ಯ ನನಗೆ ನಿಶ್ಚಿತ ಪ್ರಯಾಣಿಕರು ಲಭ್ಯವಿದ್ದು, ನನ್ನ ಕಾರಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ವಿಶೇಷವಾಗಿ ರಾತ್ರಿ ಮಹಿಳೆಯರು ಸುರಕ್ಷತೆ ದೃಷ್ಟಿಯಿಂದ ನನ್ನ ಕಾರಿನಲ್ಲಿಯೇ ಪ್ರಯಾಣಿಸಲು ಇಷ್ಟಪಡುತ್ತಾರೆ ಎಂದು ರಾಣಿ ತಿಳಿಸುತ್ತಾರೆ.

    ರಾಣಿ ಕಿನ್ನಾರವರನ್ನು ನೋಡಿದ ಸ್ಥಳೀಯ ಮಂಗಳಮುಖಿಯರು ಭಿಕ್ಷೆ ಬೇಡೋದನ್ನು ಬಿಟ್ಟು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಪುರುಷ ಡೈವರ್ ಗಳಿಗಿಂದ ರಾಣಿಯವರು ಹೆಚ್ಚು ಪ್ರಯಾಣಿಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ ಎಂದು ಮತ್ತೋರ್ವ ಮಂಗಳಮುಖಿ ಸ್ನೇಹಶ್ರೀ ಹೇಳುತ್ತಾರೆ.

  • ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಕಾರಿನಲ್ಲಿ ಹೋಗ್ತಿದ್ದಾಗ ಸ್ನೇಹಿತರಿಗೆಲ್ಲಾ SORRY ಕೇಳಿದ ಸಿದ್ಧಾರ್ಥ್

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗುವ ಮೊದಲು ತನ್ನ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

    ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿದ್ದರಿಂದ ಕಂಕನಾಡಿ ಪೊಲೀಸರು ಕಾರಿನ ಡ್ರೈವರ್ ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಸಾಹೇಬ್ರು ದಾರಿಯುದ್ಧಕ್ಕೂ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದರು. ಮಂಗಳೂರು ಸರ್ಕಲ್‍ಗೆ ಹೋಗುವವರೆಗೂ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ ಎಂದು ವಿವರಿಸಿದ್ದಾರೆ.

    ಸೇತುವೆಗೆ ಬಂದ ಬಳಿಕ ಕಾರು ನಿಲ್ಲಿಸಿ ನೀನು ಹೋಗು, ನಾನು ವಾಕಿಂಗ್‍ಗೆ ಹೋಗಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಕಾರು ನಿಲ್ಲಿಸಿದ್ದೇನೆ. ಹೀಗೆ ಕಾರಿನಿಂದ ಇಳಿದ ಅವರು ವಾಕ್ ಮಾಡಿದವರು ಮತ್ತೆ ವಾಪಸ್ ಕಾರು ಬಳಿ ಬಂದಿಲ್ಲ ಎಂದು ಬಸವರಾಜ್ ಹೇಳಿದ್ದಾರೆ.

    ಅಲ್ಲದೆ ವಿಚಾರಣೆಯ ವೇಳೆ ಬಸವರಾಜ್, `ಸಾಹೇಬ್ರು ಇಂಗ್ಲೀಷ್ ನಲ್ಲಿ ನಾತನಾಡುತ್ತಿದ್ದರು. ಹೀಗಾಗಿ ನನಗೆ ಅದು ಅರ್ಥವಾಗಲಿಲ್ಲ’ ಎಂದು ಹೇಳಿದ್ದಾರೆ.

    ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸವರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ್ ಅವರು `ನೀನು ಬರಬೇಡ ಇಲ್ಲೇ ಇರು’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮ ಡ್ರೈವರ್ ಗೆ ಬರಬೇಡ ಎಂದು ತಿಳಿಸಿ ಹೋದ ಸಿದ್ದಾರ್ಥ್ ಮತ್ತೆ ಬರದೇ ಇದ್ದಾಗ ಆತಂಕಗೊಂಡ ಬಸವರಾಜ್, ಸಿದ್ದಾರ್ಥ್ ಅವರ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  • ಕಾಣೆಯಾಗುವ ಕೊನೆ ಕ್ಷಣದ ಮಾಹಿತಿ ಬಿಚ್ಚಿಟ್ಟ ಸಿದ್ಧಾರ್ಥ್ ಡ್ರೈವರ್

    ಕಾಣೆಯಾಗುವ ಕೊನೆ ಕ್ಷಣದ ಮಾಹಿತಿ ಬಿಚ್ಚಿಟ್ಟ ಸಿದ್ಧಾರ್ಥ್ ಡ್ರೈವರ್

    ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಸೋಮವಾರ ಸಂಜೆ 7 ಗಂಟೆ ಸುಮಾರಿನಿಂದ ಮಂಗಳೂರಿನ ನೇತ್ರಾವತಿ ದಡದಿಂದ ನಾಪತ್ತೆಯಾಗಿದ್ದಾರೆ. ಆದರೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದೀಗ ಸಿದ್ಧಾರ್ಥ್ ಕಾರು ಚಾಲಕ ನಾಪತ್ತೆಯಾಗುವ ಕೊನೆಯ ಕ್ಷಣದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

    ಡ್ರೈವರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಿದ್ಧಾರ್ಥ್ ಅವರು ನಾಪತ್ತೆಯಾಗುವ ಮೊದಲು ಎಲ್ಲಿಗೆ ಹೋಗಿದ್ದರು, ಏನು ಮಾಡಿದರು ಎಂಬ ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.

    ಡ್ರೈವರ್ ಹೇಳಿದ್ದೇನು?
    ನಾನು ಕಳೆದು ಮೂರು ವರ್ಷಗಳಿಂದ ಕಾಫಿ ಡೇ ಮಾಲೀಕರಾದ ಸಿದ್ಧಾರ್ಥ್ ಅವರು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸೋಮವಾರ ಎಂದಿನಿಂದ ಸದಾಶಿವನಗರದಲ್ಲಿರುವ ಸಿದ್ಧಾರ್ಥ್ ಅವರ ಮನೆಗೆ ಕೆಲಸಕ್ಕೆ ಹೋಗಿದ್ದೆ. ನಂತರ ಸುಮಾರು 8 ಗಂಟೆಗೆ ಸಿದ್ಧಾರ್ಥ್ ಅವರು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಅವರ ಕಚೇರಿಗೆ ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋದೆ. ನಂತರ ಕಚೇರಿಯಲ್ಲಿದ್ದು, ಬೆಳಗ್ಗೆ 11 ಗಂಟೆ ವಾಪಸ್ ಮನೆಗೆ ಬಂದೆವು ಎಂದು ತಿಳಿಸಿದ್ದಾರೆ.

    ಮನೆಗೆ ಬಂದ ನಂತರ ಸಿದ್ಧಾರ್ಥ್ ಅವರು ಊರಿಗೆ ಹೋಗಬೇಕಾಗಿದೆ ನೀನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಾ ಎಂದು ಹೇಳಿದರು. ನಾನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಂದೆ. ಬಳಿಕ ಸುಮಾರು 5.30ಕ್ಕೆ ಸಕಲೇಶಪುರದ ಕಡೆಗೆ ಹೋಗು ಎಂದರು. ನಾನು ಅವರು ಹೇಳಿದಂತೆ ಕೆಎ 03 ಎನ್‍ಸಿ, 2592 ಕಾರಿನಲ್ಲಿ ಬೆಂಗಳೂರನ್ನು ಬಿಟ್ಟು ಸಕಲೇಶಪುರದ ಕಡೆ ಚಲಾಯಿಸಿಕೊಂಡು ಹೋದೆ. ಸಕಲೇಶಪುರ ಸಮೀಪಿಸುತ್ತಿದಂತೆ ಮುಂದೆ ಮಂಗಳೂರು ಕಡೆ ಹೋಗುವಾ ಎಂದು ತಿಳಿಸಿದರು. ನಾನು ಅವರು ತಿಳಿಸಿದಂತೆ ಅವರನ್ನು ಕರೆದುಕೊಂಡು ಮಂಗಳೂರು ನಗರಕ್ಕೆ ಪ್ರವೇಶಿಸುವ ಸರ್ಕಲ್‍ ಗೆ ಬಂದಾಗ ಸಿದ್ಧಾರ್ಥ್ ಎಡಗಡೆ ತೆಗೆದುಕೋ ಸೈಟ್‍ಗೆ ಹೋಗಬೇಕು ಎಂದು ಹೇಳಿದರು.

    ಅವರು ಹೇಳಿದಂತೆ ನಾನು ಎಡಗಡೆಗೆ ತೆಗೆದುಕೊಂಡು ಕೇರಳ ಹೆದ್ದಾರಿಯಲ್ಲಿ 3-4 ಕಿ.ಮೀ ಬಂದಾಗ ನದಿಗೆ ಅಡ್ಡಲಾಗಿ ಕಟ್ಟಿರುವ ಒಂದು ದೊಡ್ಡ ಸೇತುವೆ ಆರಂಭವಾಗುತ್ತಿದ್ದಂತೆ ಕಾರು ನಿಲ್ಲಿಸು ಎಂದು ಹೇಳಿದರು. ನಂತರ ಅವರು ಕಾರಿನಿಂದ ಇಳಿದು ವಾಕಿಂಗ್ ಹೋದರು. ಹೀಗೆ ಇಳಿದು ಫೋನಿನಲ್ಲಿ ಮಾತನಾಡಿಕೊಂಡು ಸ್ವಲ್ಪ ದೂರ ಹೋದವರೇ ಮತ್ತೆ ವಾಪಸ್ ಕಾರು ಬಳಿ ಬಂದರು. ನಂತರ ಪುನಃ ಫೋನಿನಲ್ಲಿ ಮಾತನಾಡಿಕೊಂಡು ಒಂದಷ್ಟು ದೂರ ಹೋದರು. ಹೋಗೆ ಹೋಗುವಾಗ ಅವರನ್ನು ನಾನು ನೋಡುತ್ತಿದ್ದೆ, ಅವರು ಕಾಣಿಸದಾಗ ನಾನು ಅವರನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋದೆ .

    ಆಗ ಅವರು `ನೀನು ಇಲ್ಲೇ ಇರು ಬರಬೇಡ’ ಎಂದು ಹೇಳಿ ಹೋದರು. ಸುಮಾರು ಅರ್ಧ ಗಂಟೆಯಾದರೂ ಅವರು ವಾಪಸ್ ಬಂದಿಲ್ಲ. ಇದರಿಂದ ಆತಂಕಗೊಂಡ ನಾನು ಅವರಿಗೆ ಫೋನ್ ಮಾಡಿದೆ. ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ನಾನು ಮತ್ತಷ್ಟು ಆತಂಕಗೊಂಡಿದ್ದು, ನಾನು ಎಸ್.ಎಂ ಕೃಷ್ಣ ಅವರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ತಿಳಿಸಿದೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ ಎಂದು ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

  • ಎಸ್‍ಎಂಕೆ ಅಳಿಯ ನಾಪತ್ತೆ- ಪೊಲೀಸರಿಂದ ಸಿದ್ದಾರ್ಥ್ ಡ್ರೈವರ್ ವಿಚಾರಣೆ

    ಎಸ್‍ಎಂಕೆ ಅಳಿಯ ನಾಪತ್ತೆ- ಪೊಲೀಸರಿಂದ ಸಿದ್ದಾರ್ಥ್ ಡ್ರೈವರ್ ವಿಚಾರಣೆ

    ಮಂಗಳೂರು: ಉದ್ಯಮಿ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕಾರಿನ ಡ್ರೈವರ್ ಬಸವರಾಜ್ ಅವರನ್ನು ಕಂಕನಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿದ್ದರಿಂದ ನೇತ್ರಾವತಿ ಸೇತುವೆಯ ಬಳಿ ತೀವ್ರ ಆತಂಕ ಎದುರಾಗಿದ್ದು, ಇತ್ತ ಕಂಕನಾಡಿ ಪೊಲೀಸರು ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಬಸವರಾಜ್, `ಸಾಹೇಬ್ರು ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದರು. ಹೀಗಾಗಿ ನನಗೆ ಅದು ಅರ್ಥವಾಗಲಿಲ್ಲ’ ಎಂದು ಹೇಳಿದ್ದಾರೆ.

    ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ್ ಅವರು `ನೀನು ಬರಬೇಡ ಇಲ್ಲೇ ಇರು’ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ತಮ್ಮ ಡ್ರೈವರ್ ಗೆ ಬರಬೇಡ ಎಂದು ತಿಳಿಸಿ ಹೋದ ಸಿದ್ದಾರ್ಥ್ ಮತ್ತೆ ಬರದೇ ಇದ್ದಾಗ ಆತಂಕಗೊಂಡ ಬಸವರಾಜ್, ಸಿದ್ದಾರ್ಥ್ ಅವರ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಕೂಡಲೇ ಪೊಲೀಸರು ದೌಡಾಯಿಸಿದ್ದಾರೆ. ಆದರೆ ಒಂದೆ ಕತ್ತಲು ಹಾಗೂ ಇನ್ನೊಂದೆಡೆ ಮಳೆ ಸುರಿಯುತ್ತಿದ್ದರಿಂದ ಹುಡುಕಾಟ ನಡೆಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಸ್ಥಳಕ್ಕೆ ಸಾಕಷ್ಟು ಮಂದಿ ಪೊಲೀಸರು, ಅಗ್ನಿಶಾಮಕ ದಳ, ಹಾಗೂ ಸಾರ್ವಜನಿಕರು ದೌಡಾಯಿಸಿ ಸಿದ್ದಾರ್ಥ್ ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. 2 ಬೋಟ್ ಗಳಲ್ಲಿ ಈಜು ತಜ್ಞರು ಶೋಧ ಕಾರ್ಯ ಕೈಗೊಂಡಿದ್ದಾರೆ.

  • ಡ್ರೈವರ್ ಸಮಯ ಪ್ರಜ್ಞೆಯಿಂದ 50 ಮಂದಿ ಪಾರು

    ಡ್ರೈವರ್ ಸಮಯ ಪ್ರಜ್ಞೆಯಿಂದ 50 ಮಂದಿ ಪಾರು

    ಚಾಮರಾಜನಗರ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗಿದೆ.

    ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟ- ಕೋಣನಕೆರೆ ಮಾರ್ಗದಲ್ಲಿ ಮಂಗಳವಾರ ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಟೇರಿಂಗ್ ಕಟ್ ಆಗಿದೆ. ಇದನ್ನು ಅರಿತ ಬಸ್ ಚಾಲಕ ಪ್ರಪಾತಕ್ಕೆ ಬೀಳಬೇಕಿದ್ದ ಬಸ್‍ನ್ನು ಮರಕ್ಕೆ ಡಿಕ್ಕಿ ಹೊಡಿಸಿದ್ದಾನೆ.

    ಇದ್ದರಿಂದ ಬಾರಿ ಅನಾಹುತ ತಪ್ಪಿ 50 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಡ್ರೈವರ್ ಸೇರಿದಂತೆ 6 ಮಂದಿಗೆ ಗಾಯಗಳಾಗಿವೆ. ಗಾಯಗೊಂಡಿರುವ ಗಂಗಾಧರ್, ಇಂದ್ರಮ್ಮ, ಸಿದ್ದಯ್ಯ, ಮಹೇಶ್ ಯೋಗಿಣಿ, ಬೆನಕಗೌಡ ಎಂಬವರನ್ನು ಕೊಳ್ಳೆಗಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಅವಘಡಕ್ಕೆ ಬಸ್ ಹದಗೆಟ್ಟಿರುವುದೇ ಮೂಲ ಕಾರಣ ಎಂದು ಹೇಳಲಾಗುತ್ತಿದೆ.

  • ಡ್ಯೂಟಿ ವೇಳೆ ಬಸ್ ನಿಲ್ಲಿಸಿ ಓಡಿ ಹೋಗಿ ಮತದಾನಗೈದ ಚಾಲಕ – ವಿಡಿಯೋ ವೈರಲ್

    ಡ್ಯೂಟಿ ವೇಳೆ ಬಸ್ ನಿಲ್ಲಿಸಿ ಓಡಿ ಹೋಗಿ ಮತದಾನಗೈದ ಚಾಲಕ – ವಿಡಿಯೋ ವೈರಲ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಆಗಿರುವುದಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅಲ್ಲಿನ ಜನತೆಗೆ ಮತದಾನದ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದನ್ನು ಸಾರಿ ಹೇಳುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಹೌದು. ಜಯರಾಜ್ ಎಂಬ ಖಾಸಗಿ ಬಸ್ಸಿನಲ್ಲಿ  ಪ್ರಯಾಣಿಕರನ್ನು ತುಂಬಿಕೊಂಡು ಜಯರಾಜ್ ಶೆಟ್ಟಿ  ಡ್ರೈವಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ತಮ್ಮ ಬೂತ್ ಹತ್ತಿರ ಬಂದಾಗ ಬಸ್ ನಿಲ್ಲಿಸಿ, ಓಡಿಕೊಂಡು ಹೋಗಿ ಮತ ಹಾಕಿ ಬಂದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

    ವಿಡಿಯೋದಲ್ಲೇನಿದೆ?:
    ಮಂಗಳೂರು – ಶಿವಮೊಗ್ಗ ನಡುವೆ ಸಂಚರಿಸುವ ಖಾಸಗಿ ಬಸ್ ರಸ್ತೆ ಬದಿಯಲ್ಲಿರುವ ಶಾಲೆಯೊಂದರ ಮುಂದೆ ನಿಲ್ಲುತ್ತದೆ. ಕೂಡಲೇ ಚಾಲಕ ಬಸ್ಸಿನಿಂದ ಇಳಿದು ಮತಗಟ್ಟೆಯ ಬಳಿ ವೇಗವಾಗಿ ಓಡುತ್ತಾರೆ. ಅಲ್ಲದೆ ತನ್ನ ಹಕ್ಕು ಚಲಾಯಿಸಿ ಅಷ್ಟೇ ವೇಗವಾಗಿ ವಾಪಸ್ ಬಂದಿದ್ದಾರೆ. ಇದನ್ನೂ ಓದಿ: ವೋಟ್ ಹಾಕದೇ ಟ್ರಿಪ್ ಬಂದೋರ್ಗೆ ಮಾಡಿದ್ರು ವ್ಯಂಗ್ಯ ಸನ್ಮಾನ!

    ಆ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಕೂಡ ಇತ್ತು. ಹೀಗಾಗಿ ಚಾಲಕ ಪ್ರಯಾಣಿಕರಿಗೆ ತೊಂದರೆಯಾಗದಂತೆ ತನ್ನ ಮತವನ್ನು ಸದೃಢ ಭಾರತದ ನಿರ್ಮಾಣಕ್ಕೆ ಚಲಾಯಿಸಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ನಂತರ ಫೆಸ್‍ಬುಕ್ ಹಾಗೂ ವಾಟ್ಸಾಪ್ ಮೂಲಕ ಹರಿಯಬಿಟ್ಟಿದ್ದಾರೆ.

    ಒಟ್ಟಿನಲ್ಲಿ ಕರ್ತವ್ಯದ ಮಧ್ಯೆಯೇ ಬಸ್ ನಿಲ್ಲಿಸಿ, ಮತದಾನದ ಹಕ್ಕು ಚಲಾಯಿಸಿದ್ದು ಇದೀಗ ಪ್ರಶಂಸೆಗೆ ಕಾರಣವಾಗಿದೆ. ಕೆಲಸಕ್ಕೆ ರಜೆ ಕೊಟ್ಟರೂ, ಮತ ಹಾಕದೇ ಮಜಾ ಮಾಡುವ ಮಂದಿಯ ನಡುವೆ ಈ ಬಸ್ ಚಾಲಕನ ಕರ್ತವ್ಯ ನಿಷ್ಠೆ ಗಮನ ಸೆಳೆದಿದೆ.

  • ವಿಶ್ವ ಮಹಿಳಾ ದಿನಾಚರಣೆ- ಆರ್.ಜೆ ಆದ ದೇಶದ ಮೊದಲ ತೃತೀಯ ಲಿಂಗಿ

    ವಿಶ್ವ ಮಹಿಳಾ ದಿನಾಚರಣೆ- ಆರ್.ಜೆ ಆದ ದೇಶದ ಮೊದಲ ತೃತೀಯ ಲಿಂಗಿ

    ಬೆಂಗಳೂರು: ಇಂದು ವಿಶ್ವ ಮಹಿಳಾ ದಿನಾಚರಣೆ. ಅಕ್ಕ, ತಂಗಿ, ತಾಯಿ ಹಾಗೂ ಮಡದಿ ಹೀಗೆ ಎಲ್ಲಾ ರೋಲ್ ಗಳನ್ನು ಪ್ಲೇ ಮಾಡುವ, ಮಲ್ಟಿ ಟಾಸ್ಕರ್ ಮಹಿಳೆ. ಎಲ್ಲಾ ಕ್ಷೇತ್ರದಲ್ಲಿಯೂ ತನ್ನದೆ ಆದ ಛಾಪು ಮೂಡಿಸಿ, ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಎಂದು ನಮ್ಮ ನಾರಿಯರು ಪ್ರೂವ್ ಮಾಡಿದ್ದಾರೆ.

    ಸ್ತ್ರೀ ಎಂಬ ಎರಡಕ್ಷರದಲ್ಲಿ ಅದೆನೋ ಅದ್ಭುತ ಶಕ್ತಿಯಿದೆ. ನಮ್ಮೆಲ್ಲರನ್ನು ಹೆತ್ತು, ಹೊತ್ತು ಸಾಕುವ ಕರುಣಾಮಯಿ, ಮಮತಾಮಯಿ ಹೆಣ್ಣು. ನಾರಿಯರ ಬಗ್ಗೆ ಎಷ್ಟು ಬಣ್ಣಿಸಿದ್ರೂ ಪದಗಳೇ ಸಾಲದು. ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದು, ಈ ಮೂಲಕ ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಮಾಡದ ಸಾಧನೆಯಿಲ್ಲ ಎಂಬ ಹೊಸ ಗಾದೆ ಬರೆದಿದ್ದಾಳೆ.

    ಸಮಾಜದ ಕೊಂಕು ಮಾತುಗಳಿಗೆ ಎದೆಗುಂದದೆ ತೃತೀಯ ಲಿಂಗಿ ಪ್ರಿಯಾಂಕ ರೇಡಿಯೋ ಜಾಕಿಯಾಗಿದ್ದಾರೆ. ಇವರ ಧ್ವನಿಯನ್ನು ರೇಡಿಯೋ ಆಕ್ಟೀವ್ ಸಿಆರ್ 90.4ನಲ್ಲಿ ಪ್ರತಿನಿತ್ಯ ಕೇಳಬಹುದಾಗಿದೆ. ಭಾರತದ ಮೊಟ್ಟಮೊದಲ ತೃತೀಯ ಲಿಂಗ ಆರ್.ಜೆ ಎಂಬ ಖ್ಯಾತಿಗೆ ಪ್ರಿಯಾಂಕ ಪಾತ್ರಳಾಗಿದ್ದಾರೆ. ಇದರ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.

    ರಾಜ್ಯದ ಏಕೈಕ ಮಹಿಳಾ ಡ್ರೈವರ್ ಎಂಬ ಖ್ಯಾತಿಗೆ ಪ್ರೇಮ ನಡಪಟ್ಟಿ ಪಾತ್ರಳಾಗಿದ್ದಾರೆ. ನಗರದ ಬಿಎಂಟಿಸಿಯಲ್ಲಿ ಸುಮಾರು 10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಪುರುಷರ ನಡುವೆ ತಮ್ಮದೆ ಆದ ಛಾಪು ಮೂಡಿಸಿ, ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ರಾಜಧಾನಿಯ ಎಲ್ಲೆಡೆಯೂ ಇವರ ಅಭಿಮಾನಿಗಳಿದ್ದಾರೆ. ಒಟ್ಟಿನಲ್ಲಿ ಇಂತಹ ಅದೆಷ್ಟೋ ಮಹಿಳೆಯರು ನಮ್ಮ ಮಧ್ಯೆ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ರೂ. ಚಿಲ್ಲರೆಗಾಗಿ ಕಂಡಕ್ಟರ್, ಡ್ರೈವರ್‌ನಿಂದ ಪ್ರಯಾಣಿಕನ ಮೇಲೆ ಹಲ್ಲೆ

    ಮೂರು ರೂ. ಚಿಲ್ಲರೆಗಾಗಿ ಕಂಡಕ್ಟರ್, ಡ್ರೈವರ್‌ನಿಂದ ಪ್ರಯಾಣಿಕನ ಮೇಲೆ ಹಲ್ಲೆ

    ಬೆಂಗಳೂರು: ಮೂರು ರೂಪಾಯಿ ಚಿಲ್ಲರೆ ನೀಡುವ ವಿಚಾರಕ್ಕೆ ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್ ಸೇರಿಕೊಂಡು ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಫ್ಲೈಓವರ್ ಬಳಿ ನಡೆದಿದೆ.

    ಮಹಮ್ಮದ್ ಹಲ್ಲೆಗೊಳಾಗದ ಪ್ರಯಾಣಿಕ. ಮಹಮ್ಮದ್ ಮಾರತ್ತಹಳ್ಳಿ ಮತ್ತು ಐಟಿಪಿಎಲ್ ಮಾರ್ಗದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಂಡಕ್ಟರ್ ಟಿಕೆಟ್ ಕೊಟ್ಟಿದ್ದು, ಮಹಮ್ಮದ್‍ಗೆ ಮೂರು ರೂಪಾಯಿ ಚಿಲ್ಲರೆ ನೀಡಬೇಕಿತ್ತು.

    ಇದೇ ವಿಚಾರಕ್ಕೆ ಮೊದಲಿಗೆ ಕಂಡಕ್ಟರ್ ಮತ್ತು ಮಹಮ್ಮದ್ ನಡುವೆ ಗಲಾಟೆ ಶುರುವಾಗಿದೆ. ನಂತರ ಇವರಿಬ್ಬರ ಗಲಾಟೆಗೆ ಡ್ರೈವರ್ ಸಹ ಭಾಗಿಯಾಗಿದ್ದು, ಇಬ್ಬರು ಸೇರಿಕೊಂಡು ಪ್ರಯಾಣಿಕ ಮಹಮ್ಮದ್‍ಗೆ ಮನಬಂದಂತೆ ಥಳಿಸಿದ್ದಾರೆ. ಸದ್ಯಕ್ಕೆ ಪ್ರಯಾಣಿಕ ಮಹಮ್ಮದ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಕುರಿತು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುರುಡೇಶ್ವರದಲ್ಲಿ ಕೊಚ್ಚಿ ಹೋಗುತ್ತಿದ್ದ ಬಸ್ಸನ್ನು ಮೇಲೆ ತರಲು ಹರಸಾಹಸಪಟ್ಟ ಪ್ರವಾಸಿಗರು!

    ಮುರುಡೇಶ್ವರದಲ್ಲಿ ಕೊಚ್ಚಿ ಹೋಗುತ್ತಿದ್ದ ಬಸ್ಸನ್ನು ಮೇಲೆ ತರಲು ಹರಸಾಹಸಪಟ್ಟ ಪ್ರವಾಸಿಗರು!

    ಕಾರವಾರ: ಸಮುದ್ರದ ದಂಡೆಯ ಮೇಲೆ ನಿಲ್ಲಿಸಿದ್ದ ಪ್ರವಾಸಿ ಬಸ್‍ವೊಂದು ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಬಸ್ಸನ್ನು ಮೇಲೆ ತರಲು ಹರಸಾಹಸ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.

    ಶುಕ್ರವಾರ ಬೆಂಗಳೂರಿಂದ ಪ್ರವಾಸಿಗರನ್ನು ಕರೆದುಕೊಂಡು ಬಂದ ಡ್ರೈವರ್ ಬಸ್ ಅನ್ನು ಸಮುದ್ರ ತೀರದಲ್ಲೇ ನಿಲ್ಲಿಸಿದ್ದ. ಆದರೆ ಅಲೆಗಳಿಗೆ ನಿಧಾನವಾಗಿ ಮರಳು ಕೊಚ್ಚಿ ಹೋದಂತೆ ಬಸ್ ಕೂಡ ಸಮುದ್ರ ಕಡೆಗೆ ತೆರಳಿತ್ತು. ಅಷ್ಟರಲ್ಲಿ ಗಮನಿಸಿದ ಡ್ರೈವರ್ ಬಸ್ ಹತ್ತಿ ಹಿಂದೆ ತರುವ ಪ್ರಯತ್ನ ನಡೆಸಿದ್ದರಾದರೂ ಪ್ರಯೋಜನವಾಗಿರಲಿಲ್ಲ.

    ತಕ್ಷಣ ಪ್ರವಾಸಿಗರು ಬಸ್ಸನ್ನು ಹಗ್ಗದಿಂದ ಎಳೆಯಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗದೇ ಇದ್ದಾಗ ಸ್ಥಳೀಯರ ಟ್ರ್ಯಾಕ್ಟರ್‍ಗೆ ಹಗ್ಗ ಕಟ್ಟಿ ಎಳೆಯಲು ಪ್ರಯತ್ನಿಸಿದ್ದರಾದರು ಪ್ರಯೋಜನವಾಗಿರಲಿಲ್ಲ. ಕೊನೆಗೆ ಕ್ರೇನ್ ಮೂಲಕ ಎಳೆದು ಬಸ್ಸನ್ನು ತೆಗೆಯಲಾಯಿತು.

    ಮುರುಡೇಶ್ವರದ ಕಡಲ ತೀರದಲ್ಲಿ ಪಾರ್ಕಿಂಗ್ ಮಾಡಿದ್ದ ಬಹುತೇಕ ಪ್ರವಾಸಿ ಬಸ್‍ಗಳು ಸಾಕಷ್ಟು ಬಾರಿ ಬಿದ್ದಿದ್ದವು. ಆದರೆ ಈ ಬಾರಿ ಬಸ್ ಸಮುದ್ರದಲ್ಲಿ ಕೊಚ್ಚಿ ಹೋಗಿ ಕೆಲ ಕಾಲ ಪ್ರವಾಸಿಗರು ಆತಂಕಕ್ಕೊಳಗಾಗುವಂತೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv