Tag: ಡ್ರಿಂಕ್ ಆ್ಯಂಡ್ ಡ್ರೈವ್

  • ಕೊರೊನಾ ಬರುತ್ತೆ ಊದಲ್ಲ ಅಂದ್ರೆ ಊದಲ್ಲ- ಕುಡುಕರ ಪಟ್ಟು

    ಕೊರೊನಾ ಬರುತ್ತೆ ಊದಲ್ಲ ಅಂದ್ರೆ ಊದಲ್ಲ- ಕುಡುಕರ ಪಟ್ಟು

    ಬೆಂಗಳೂರು: ಕೊರೊನಾ ಎಫೆಕ್ಟ್, ಕುಡುಕರಿಗೂ ತಟ್ಟಿದ್ದು, ಮದ್ಯಪಾನ ಮಾಡಿ ವಾಹನ ಓಡಿಸುವವರು ಟ್ರಾಫಿಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಸರ್.. ನಮ್ಮನ್ನ ಬಿಟ್ಬಿಡಿ. ಡ್ರಿಂಕ್ ಆಂಡ್ ಡ್ರೈವ್ ಮಷೀನ್‍ಗೆ ಊದಿದ್ರೆ ನಮ್ಗೂ ಕೊರೊನಾ ವೈರಸ್ ಬರುವ ಸಾಧ್ಯತೆ ಇದೆ. ನಾವು ಊದಲ್ಲ ಅಂದ್ರೆ ಊದಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಬೆಂಗಳೂರಿನ ಹಲಸೂರು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳ ಕುರಿತು ತಪಾಸಣೆ ಮಾಡುತ್ತಿದ್ದ ವೇಳೆ ಕೆಲವರು ಈ ರೀತಿ ಹೇಳುತ್ತಿದ್ದರು. ಕೆಲವರು ಮಷೀನ್‍ಗೆ ಊದಿ ಪೊಲೀಸರಿಗೆ ಸಹಕರಿಸಿದರೆ, ಇನ್ನೂ ಕೆಲವರು ಬಿಟ್ಬಿಡಿ ಸರ್.. ಊದಿದರೆ ನಮಗೂ ಕೊರೊನಾ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದರು.

    ಉಸಿರಾಟ ಹಾಗೂ ಸ್ಪರ್ಶದಿಂದ ವೈರಸ್ ಹರಡಬಹುದು ಎಂಬ ಆತಂಕದಿಂದ ತಪಾಸಣಾ ಮಷೀನ್ ಗೆ ಊದಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ದಿನಗಳಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಸಂಚಾರಿ ಪೊಲೀಸರು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಹೀಗಾಗಿ ಕೆಲ ಕುಡುಕರು ಫುಲ್ ಬಿಂದಾಸ್ ಆಗಿದ್ದರು. ಆದರೆ ಸಂಚಾರಿ ಪೊಲೀಸರು ಇದೀಗ ಮತ್ತೆ ಫೀಲ್ಡ್ ಗೆ ಇಳಿದಿದ್ದು, ವಾಹನ ಸವಾರರು ಸಂಚಾರಿ ಪೊಲೀಸರಿಗೆ ಸಹಕರಿಸುತ್ತಿಲ್ಲ. ಹೀಗಾಗಿ ರಾತ್ರಿ ಕುಡುಕರನ್ನು ಮನವೋಲಿಸಿ ಊದಿಸೋದೇ ಸಂಚಾರಿ ಪೊಲೀಸರಿಗೆ ದೊಡ್ಡ ಕೆಲಸವಾಗಿದೆ.

  • ವೀಕೆಂಡ್‍ನಲ್ಲಿ ಪೊಲೀಸ್ರಿಂದ ಶಾಕ್ – ಒಂದೇ ದಿನ 100 ಡ್ರಿಂಕ್ & ಡ್ರೈವ್ ಕೇಸ್ ದಾಖಲು

    ವೀಕೆಂಡ್‍ನಲ್ಲಿ ಪೊಲೀಸ್ರಿಂದ ಶಾಕ್ – ಒಂದೇ ದಿನ 100 ಡ್ರಿಂಕ್ & ಡ್ರೈವ್ ಕೇಸ್ ದಾಖಲು

    – ಹಾಸನದಲ್ಲೇ ವರ್ಷಕ್ಕೆ 420 ಜನ ಅಪಘಾತದಲ್ಲಿ ಸಾವು

    ಹಾಸನ: ವೀಕೆಂಡ್‍ನಲ್ಲಿ ಕುಡಿದು ವಾಹನ ಚಲಾಯಿಸುವವರಿಗೆ ಹಾಸನ ಪೊಲೀಸರು ಭರ್ಜರಿ ಶಾಕ್ ನೀಡಿದ್ದಾರೆ. ಶನಿವಾರ ಒಂದೇ ದಿನ ಸುಮಾರು 100 ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.

    ಕಳೆದ ಮೂರು ದಿನಗಳಲ್ಲಿ ಹಾಸನ ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಾಗಿದ್ದು, ಇದರಿಂದ ಕುಡಿದು ವಾಹನ ಚಲಾಯಿಸುತ್ತಿದ್ದವರು ಈಗ ಹೆದರುವಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಹಾಸನ ಜಿಲ್ಲೆಯೊಂದರಲ್ಲೇ ಅಪಘಾತದಿಂದಾಗಿ ವರ್ಷಕ್ಕೆ ಸರಾಸರಿ 420 ಜನ ಮೃತಪಟ್ಟಿದ್ದಾರೆ. ಇದು ಒಂದು ಜಿಲ್ಲೆಯ ಮಟ್ಟಿಗೆ ನೋಡುವುದಾದರೆ ದೊಡ್ಡ ಸಾವಿನ ಸಂಖ್ಯೆಯಾಗಿದೆ.

    ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ನೂತನ ಎಸ್‍ಪಿಯಾಗಿ ಶ್ರೀನಿವಾಸ್‍ಗೌಡ ಅಧಿಕಾರ ವಹಿಸಿಕೊಂಡ ದಿನದಿಂದ ಅಪಘಾತದಿಂದ ಉಂಟಾಗುತ್ತಿರುವ ಸಾವು-ನೋವಿನ ಪ್ರಮಾಣ ತಗ್ಗಿಸಲು ಪಣ ತೊಟ್ಟಿದ್ದಾರೆ. ಆದ್ದರಿಂದ ಅಪಘಾತಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ಪಟ್ಟಿ ಮಾಡಿ, ಅವುಗಳನ್ನು ಸರಿ ಪಡಿಸಲು ಹಗಲು ರಾತ್ರಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗಿಳಿದಿದ್ದಾರೆ.

    ಅಪಘಾತದಲ್ಲಿ ಸಾವು ನೋವು ಹೆಚ್ಚಾಗುತ್ತಿರುವುದಕ್ಕೆ ಕುಡಿದು ವಾಹನ ಚಲಾಯಿಸುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಹೀಗಾಗಿ ಹಾಸನ ಜಿಲ್ಲಾ ಪೊಲೀಸರು ಜಿಲ್ಲೆಯಾದ್ಯಂತ ಕುಡಿದು ವಾಹನ ಚಲಾಯಿಸುತ್ತಿರುವವರನ್ನು ಹಿಡಿದು ಕೇಸ್ ಹಾಕುತ್ತಿದ್ದಾರೆ.

    ಕುಡಿದು ವಾಹನ ಚಲಾಯಿಸುವವರನ್ನು ಹಿಡಿದಾಗ ಕೆಲವರು ತಮ್ಮ ಪ್ರಭಾವ ಬಳಸಲು ಮುಂದಾಗುತ್ತಾರೆ. ಕೆಲವೊಮ್ಮೆ ಬೇರೆಯವರಿಂದಲೂ ಕರೆ ಮಾಡಿಸುತ್ತಾರೆ. ಆದರೆ ನಾವು ಒಂದು ಒಳ್ಳೆಯ ಕೆಲಸಕ್ಕಾಗಿ ಕುಡಿದು ವಾಹನ ಚಲಾಯಿಸದಂತೆ ಮನವಿ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಯಾರೂ ಕೂಡ ತಮ್ಮ ಪ್ರಭಾವ ಬಳಸುವುದು ಸರಿಯಲ್ಲ ಎಂದು ಎಸ್‍ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ. ಇತ್ತ ಸಾರ್ವಜನಿಕರು ಕೂಡ ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

  • ಹೊಸ ವರ್ಷಾಚರಣೆ ನಂತರ ಆಗ್ತಿದ್ದ ಸಾವು, ನೋವು ತಡೆಯುವಲ್ಲಿ ಪೊಲೀಸರು ಯಶಸ್ವಿ

    ಹೊಸ ವರ್ಷಾಚರಣೆ ನಂತರ ಆಗ್ತಿದ್ದ ಸಾವು, ನೋವು ತಡೆಯುವಲ್ಲಿ ಪೊಲೀಸರು ಯಶಸ್ವಿ

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ನಂತರ ಆಗುತ್ತಿದ್ದ ಅಪಘಾತ ಹಾಗೂ ಸಾವು, ನೋವು ತಡೆಯುವಲ್ಲಿ ಸಂಚಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ವರ್ಷದ ಆರಂಭದಲ್ಲಿ ಪಾನಮತ್ತರು ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತದಲ್ಲಿ ಸಾವಿಗೆ ಇಡಾಗುತ್ತಿದ್ದರು. ಇದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದರು. ಇದರಿಂದಾಗಿ ಯಾವುದೇ ಸಾವು, ನೋವಿನ ಪ್ರಕರಣಗಳು ದಾಖಲಾಗಿಲ್ಲ. ಈ ಮೂಲಕ ಅಪಘಾತದಲ್ಲಿ ಸಾವಿಗೀಡಾಗಿರುವವರ ಸಂಖ್ಯೆಯನ್ನು ಸೊನ್ನೆಗೆ ತಂದು ನಿಲ್ಲಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.

    ಕಳೆದ ವರ್ಷ ಕುಡಿದು ವಾಹನ ಚಾಲನೆ ಮಾಡಿ ವರ್ಷದ ಆರಂಭದಲ್ಲೇ ಹಲವು ಸಾವು ನೋವು ಪ್ರಕರಣಗಳು ದಾಖಲಾಗಿದ್ದವು. ಇವುಗಳನ್ನು ತಡೆಯುವ ಉದ್ದೇಶದಿಂದ ಕನ್ನಡದ ಸ್ಟಾರ್ ನಟ ಯಶ್ ಅವರಿಂದ ಅರಿವು ಮೂಡಿಸುವ ಕೆಲಸವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಡಿದ್ದರು. ಈ ಉಪಾಯದಿಂದಾಗಿ ಸಾವು, ನೋವು ಪ್ರಕರಣಗಳು ದಾಖಲಾಗಿಲ್ಲ. ಮಾತ್ರವಲ್ಲದೆ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳೂ ಗಣನಿಯವಾಗಿ ಕಡಿಮೆಯಾಗಿವೆ.

    ಕಳೆದ ಬಾರಿಗಿಂತ ಈ ಬಾರಿ ನಾಲ್ಕು ಪಟ್ಟು ಕಡಿಮೆ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಹೊಸ ವರ್ಷದ ಒಂದೇ ರಾತ್ರಿ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈ ಬಾರಿ ರಾತ್ರಿ ಇಡೀ ಕೇವಲ 426 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿವೆ. ಈ ಸಿಹಿ ವಿಷಯ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ನೆಮ್ಮದಿ ತಂದಿದೆ.

  • ಪೊಲೀಸರಿಗೆ ಭಯಪಡಿಸಲು ಹೋಗಿ ಆತ್ಮಹತ್ಯೆ ನಾಟಕವಾಡಿದ್ದಾತ ಸಾವು!

    ಪೊಲೀಸರಿಗೆ ಭಯಪಡಿಸಲು ಹೋಗಿ ಆತ್ಮಹತ್ಯೆ ನಾಟಕವಾಡಿದ್ದಾತ ಸಾವು!

    ಬೆಂಗಳೂರು: ಪೊಲೀಸರನ್ನು ಹೆದರಿಸಲು ಹೋಗಿ ಆತ್ಮಹತ್ಯೆ ನಾಟಕವಾಡಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಮಣಿ ಸಾವನ್ನಪ್ಪಿದ ವ್ಯಕ್ತಿ. ಡ್ರಿಂಕ್ ಅಂಡ್ ಡ್ರೈವ್ ನಿಂದ ಬಿಡಿಸಿಕೊಳ್ಳಲು ಮಣಿ ಪೊಲೀಸರ ಎದುರೇ ಪೆಟ್ರೋಲ್ ಸುರಿದುಕೊಂಡಿದ್ದನು. ಬಳಿಕ ಬೆಂಕಿ ಕೂಡ ಹಚ್ಚಿಕೊಂಡಿದ್ದಾನೆ. ಕುಡಲೇ ಆತನನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇಆತ ಮೃತಪಟ್ಟಿದ್ದಾನೆ.

    ಮಣಿ ಚಲಾಯಿಸುತ್ತಿದ್ದ ವಾಹನವನ್ನು ಪೊಲೀಸರು ವಶ ಪಡೆದಿದ್ದರು. ಇದರಿಂದ ಮನನೊಂದ ಮಣಿ ನೇರವಾಗಿ ಮನೆಗೆ ಹೋಗಿದ್ದಾನೆ. ನಂತರ ಸುಮಾರು 2 ಗಂಟೆಯ ನಂತರ ವಾಪಾಸ್ ಮೈಕೋ ಲೇಔಟ್ ಸಂಚಾರಿ ಪೊಲೀಸ್ ಠಾಣೆ ಮುಂದೆ ಬಂದ ಆತ, ತನ್ನ ವಾಹನವನ್ನು ಹಿಂತಿರುಗಿಸುವಂತೆ ಹೇಳಿದ್ದಾನೆ. ಅಲ್ಲದೇ ನನ್ನ ಗಾಡಿ ವಾಪಸ್ ಕೊಡದಿದ್ದರೆ ಸಾಯ್ತೀನಿ ಅಂತ ಹೆದರಿಸಿದ್ದಾನೆ. ಇದಕ್ಕೆ ಪೊಲೀಸರು ಒಪ್ಪದಿದ್ದಾಗ ಅವರ ಎದುರೇ ಪೆಟ್ರೋಲ್ ಸುರಿದು ಬೆಂಕಿ ಹಂಚಿಕೊಂಡಿದ್ದಾನೆ ಎಂದು ಮಾಹಿತಿ ಲಭಿಸಿದೆ.