Tag: ಡ್ಯಾರೆನ್ ಲೆಹ್ಮನ್

  • ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

    ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ಟೆಸ್ಟ್ ಓಪನರ್ ಜಸ್ಟಿನ್ ಲ್ಯಾಂಗರ್ ನೇಮಕಗೊಂಡಿದ್ದಾರೆ.

    ಸದ್ಯ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ಪರ್ತ್ ಸ್ಕಾಚರ್ಸ್ ತಂಡದ ಕೋಚ್ ಕಾರ್ಯನಿರ್ವಹಿಸುತ್ತಿರುವ 47 ವರ್ಷದ ಜಸ್ಟಿನ್ ಲ್ಯಾಂಗರ್, ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಮುಂದಿನ ನಾಲ್ಕು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೇ 22ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.

    ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ನಿರಪರಾಧಿಯಾಗಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಕೋಚ್ ಡ್ಯಾರೆನ್ ಲೆಹ್ಮನ್ ಜಾಗಕ್ಕೆ ಜಸ್ಟಿನ್ ಲ್ಯಾಂಗರ್‍ರನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆಯ್ಕೆಮಾಡಿದೆ. ಲ್ಯಾಂಗರ್ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿದಂತೆ ಮೂರು ಮಾದರಿಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಈ ಹಿಂದೆ ಲ್ಯಾಂಗರ್ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ಕೋಚ್ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಲ್ಯಾಂಗರ್, ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. 1993ರಿಂದ 2007 ರವರೆಗೂ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿದ್ದ ಲ್ಯಾಂಗರ್ 105 ಟೆಸ್ಟ್ ಪಂದ್ಯಗಳನ್ನಾಡಿದ್ದು, 23 ಶತಕಗಳು ಸೇರಿದಂತೆ 45.27 ಸರಾಸರಿಯಲ್ಲಿ 7,696 ರನ್‍ಗಳಿಸಿದ್ದಾರೆ. ಲ್ಯಾಂಗರ್ ಅವರ ಈ ನಾಲ್ಕು ವರ್ಷದ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರಮುಖವಾಗಿ ಎರಡು ಆಶಸ್ ಸರಣಿ ಹಾಗೂ ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸದರ್ಲೆಂಡ್, ಜಸ್ಟಿನ್ ಲ್ಯಾಂಗರ್ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ನಾವು ಬಲವಾಗಿ ನಂಬುತ್ತೇವೆ. ಅವರು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    2013ರಲ್ಲಿ ಕೋಚ್ ಆಗಿ ನೇಮಗೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಲೆಹ್ಮನ್ 2019ರ ಆಶಸ್ ಸರಣಿಯವರೆಗೂ ಕೋಚ್ ಆಗಿ ಮುಂದುವರೆಯಬೇಕಿತ್ತು. ಆದರೆ ಮಾರ್ಚ್‍ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್‍ನಲ್ಲಿ ಚೆಂಡು ವಿರೂಪ ಪ್ರಕರಣದಿಂದಾಗಿ ಲೆಹ್ಮನ್ ಕಣ್ಣೀರ ವಿದಾಯ ಹೇಳಿದ್ದರು. ಇದೇ ವೇಳೆ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕರಾಗಿದ್ದ ಡೇವಿಡ್ ವಾರ್ನರ್ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದು, ಈ ಕಾರಣದಿಂದಾಗಿ ಪ್ರಸಕ್ತ ಐಪಿಲ್‍ನಿಂದಲೂ ಹೊರಗುಳಿದಿದ್ದಾರೆ. ಮತ್ತೊಬ್ಬ ಬ್ಯಾಟ್ಸ್‍ಮನ್ ಕ್ಯಾಮರೂನ್ ಬ್ಯಾನ್ ಕ್ರಿಫ್ಟ್ ರನ್ನು 9 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.

  • 6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    ಸಿಡ್ನಿ: ಆಸೀಸ್ ಆಟಗಾರರು ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದ ಸಮಯದಲ್ಲಿ ಕೋಚ್ ಡ್ಯಾರೆನ್ ಲೆಹ್ಮನ್ ಆಡಿದ ಆರು ಪದಗಳು ಅವರನ್ನು ಈಗ ಉಳಿಸಿದೆ.

    ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಸೀಸ್ ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸುತ್ತಿರುವ ವೇಳೆ ಕ್ಯಾಮೆರಾದ ಕಣ್ಣಿಗೆ ಸಿಕ್ಕಿ ಬಿದ್ದಿದ್ದರು. ಇದನ್ನು ನೋಡಿದ ಡ್ಯಾರೆನ್ ಲೆಹ್ಮನ್ ವಾಕಿಟಾಕಿಯಲ್ಲಿ ‘What the f*** is going on?’ ಎಂದು ಮೈದಾನದಲ್ಲಿದ್ದ 12ನೇ ಆಟಗಾರರನ್ನು ಪ್ರಶ್ನಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಜೇಮ್ಸ್ ಸುಂದರ್ಲ್ಯಾಂಡ್  ಪ್ರಕರಣದಲ್ಲಿ ಕೋಚ್ ಲೆಹ್ಮನ್ ಅವರ ಪಾತ್ರದ ಕುರಿತು ಘಟನೆ ವೇಳೆ ಅವರು ವಾಕಿಟಾಕಿ ನಡೆಸಿದ್ದ ಸಂಭಾಷಣೆ ಪ್ರಮುಖ ಸಾಕ್ಷಿಯಾಗಿದೆ. ಇದು ಅವರನ್ನು ಪ್ರಕರಣದ ಶಿಕ್ಷೆಯಿಂದ ಕಾಪಾಡಿದೆ ಎಂದು ತಿಳಿಸಿದ್ದಾರೆ.

    ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಬುಧವಾರ ನಾಯಕ ಸ್ಮಿತ್, ಉಪನಾಯಕ ವಾರ್ನರ್ ಗೆ ಒಂದು ವರ್ಷ ಹಾಗೂ ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ ಗೆ 9 ತಿಂಗಳು ಶಿಕ್ಷೆ ವಿಧಿಸಿತ್ತು. ಆದರೆ ಕೋಚ್ ಲೆಹ್ಮನ್ ಗೆ ತಮ್ಮ ಸ್ಥಾನದಲ್ಲಿ ಮುಂದುವರೆಲು ಸೂಚಿಸಿದೆ.

    ಪ್ರಕರಣದ ತನಿಖೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನೇಮಿಸಿದ್ದ ಸಮಿತಿಯ ಮುಖ್ಯಸ್ಥ ಇಯಾನ್ ರಾಯ್ ಸತ್ಯಾಂಶವನ್ನು ಹೊರ ತಂದಿದ್ದಾರೆ. ಪ್ರಕರಣದಲ್ಲಿ ಕೋಚ್ ಲೆಹ್ಮನ್ ಪಾತ್ರವಹಿಸಿಲ್ಲ ಹಾಗೂ ಈ ಕುರಿತು ತಿಳಿದಿಲ್ಲ ಎಂಬುದು ತಮಗೆ ತೃಪ್ತಿ ತಂದಿದೆ ಎಂದು ಸುಂದರ್ಲ್ಯಾಂಡ್ ಹೇಳಿದ್ದಾರೆ.

    ಇದೇ ವೇಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆಟಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾಗಿ ತಿಳಿಸಿದ ಅವರು, ತಮ್ಮ ಕೃತ್ಯದ ಕುರಿತು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಬಿಸಿಸಿಐ ಸ್ಮಿತ್ ಹಾಗೂ ವಾರ್ನರ್ ಐಪಿಎಲ್ ನಲ್ಲಿ ಭಾಗವಹಿಸಿದಂತೆ ಒಂದು ವರ್ಷ ನಿಷೇಧ ವಿಧಿಸಿದೆ. ಇದರೊಂದಿಗೆ ಕಳ್ಳಾಟದ ನಡೆಸಿದ ಪರಿಣಾಮವಾಗಿ ಇಬ್ಬರು ಆಟಗಾರರು ಸುಮಾರು 13 ಕೋಟಿ ರೂ. ಮೊತ್ತದ ಒಪ್ಪಂದಗಳನ್ನು ಕಳೆದು ಕೊಂಡಿದ್ದಾರೆ. ಇದನ್ನೂ ಓದಿ: ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!