Tag: ಡ್ಯಾಂ

  • ಹುಟ್ಟುಹಬ್ಬದಂದು ಫೋಟೋ ತೆಗೆಯಲು ಹೋದ 6 ಮಂದಿ ದುರ್ಮರಣ

    ಹುಟ್ಟುಹಬ್ಬದಂದು ಫೋಟೋ ತೆಗೆಯಲು ಹೋದ 6 ಮಂದಿ ದುರ್ಮರಣ

    ಪುಣೆ: ಹುಟ್ಟುಬ್ಬದಂದು ಡ್ಯಾಂ ಎದುರು ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದ 6 ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವಲ್ದೇವಿ ಡ್ಯಾಮ್‍ನಲ್ಲಿ ನಡೆದಿದೆ.

    ಸೋನಿ ಗೇಮ್(12) ಖುಷಿ ಮಣಿಯಾರ್ (10), ಜ್ಯೋತಿ ಗೇಮ್ (16), ಹಿಮ್ಮತ್ ಚೌಧರಿ (16), ನಾಜಿಯಾ ಮಣಿಯಾರ್ (19) ಮತ್ತು ಆರತಿ ಭಲೇರಾವ್ (22) ಮೃತರಾಗಿದ್ದಾರೆ. ಸೋನಿ ಗೇಮ್ ಹುಟ್ಟುಹಬ್ಬದ ಆಚರಣೆಗೆಂದು ಹೋಗಿದ್ದರು. ಗ್ರೂಪ್ ಫೋಟೋ ಕ್ಲಿಕ್ಕಿಸುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಗ್ರೂಪ್ ಫೋಟೋ ಕ್ಲಿಕ್ಕಿಸುವ ವೇಳೆ ಆಯತಪ್ಪಿ ಕೆಲವರು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ಇತರರು ಕೂಡಾ ನೀರು ಪಾಲಾಗಿದ್ದಾರೆ. ಈ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂಡದಲ್ಲಿದ್ದ ಮೂವರು ಸಾವಿನಿಂದ ಪಾರಾಗಿದ್ದಾರೆ. ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • KRS ಡ್ಯಾಂ ಮೇಲೆ ಪೊಲೀಸ್ ಜೀಪ್ ಓಡಿಸಿದ ಪ್ರಕರಣ – ಅಧಿಕಾರಿ ಸಸ್ಪೆಂಡ್

    KRS ಡ್ಯಾಂ ಮೇಲೆ ಪೊಲೀಸ್ ಜೀಪ್ ಓಡಿಸಿದ ಪ್ರಕರಣ – ಅಧಿಕಾರಿ ಸಸ್ಪೆಂಡ್

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂ ಮೇಲೆ ಯುವಕನ ಅಂಧ ದರ್ಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ವಾಹನವನ್ನು ಕೊಟ್ಟಿದ್ದ ಪೊಲೀಸಪ್ಪನನ್ನು ಇದೀಗ ಅಮಾನತು ಮಾಡಲಾಗಿದೆ.

    ಅಣೆಕಟ್ಟಿನ ಮೇಲೆ ಪೊಲೀಸ್ ಜೀಪ್ ಚಲಾಯಿಸಿದ್ದಲ್ಲದೇ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದ ಆರೋಪದ ಮೇಲೆ ಸ್ವಾಮಿ. ಎಸ್.ಬಿಯನ್ನು ಸಸ್ಪೆಂಡ್ ಮಾಡಲಾಗಿದೆ. ಸ್ವಾಮಿ ಅವರು ಕರ್ನಾಟಕ ಕೈಗಾರಿಕಾ ಭದ್ರತೆಯ 3ನೇ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

    ಫೆಬ್ರವರಿ 09 ರಂದು ಸಂಜೆ 4 ಗಂಟೆ ಸುಮಾರಿಗೆ ಯುವಕ ಸರ್ಕಾರಿ ಜೀಪ್ ಚಲಾಯಿಸುತ್ತಿದ್ದರೆ ಪೊಲೀಸ್ ಅಧಿಕಾರಿ ಮಾತ್ರ ಪಕ್ಕದಲ್ಲಿ ಕೂತು ಮೊಬೈಲ್ ನಲ್ಲಿ ಶೂಟ್ ಮಾಡಿದ್ದರು. ಈ ಕುರಿತು ಫೆಬ್ರವರಿ 27 ರಂದು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆ ಅಂತ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನುಓದಿ: KRS ಅಣೆಕಟ್ಟೆ ಮೇಲೆ ಪೊಲೀಸ್ ಜೀಪ್‍ ಓಡಿಸಿದ ಯುವಕ

    ಇದೀಗ ಪೊಲೀಸ್ ಇಲಾಖೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಡ್ಯಾಂ ಮೇಲೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದರೂ ಯುವಕ ದರ್ಬಾರ್ ಮಾಡಲು ಅವಕಾಶ ನೀಡಲಾಗಿರುವುದರಿಂದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • ಕೆಆರ್‌ಎಸ್ ರಕ್ಷಣೆಗೆ ಇಸ್ರೋ ಮಾದರಿ ಅಳವಡಿಕೆ

    ಕೆಆರ್‌ಎಸ್ ರಕ್ಷಣೆಗೆ ಇಸ್ರೋ ಮಾದರಿ ಅಳವಡಿಕೆ

    – ಬೇಬಿ ಬೆಟ್ಟದ ಮೇಲೆ ಇಸ್ರೋ ಕಣ್ಗಾವಲು

    ಮಂಡ್ಯ: ಕೆಆರ್‌ಎಸ್  ಡ್ಯಾಂಗೆ ಕಲ್ಲುಗಣಿಯಿಂದ ಅಪಾಯವಿದ್ದು ಅಣೆಕಟ್ಟು ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಗಣಿಗಾರಿಕೆ ನಿರ್ಬಂಧಿಸುವಂತೆ ಆಗ್ರಹ ನಿರಂತರವಾಗಿ ಕೇಳಿಬರುತ್ತಿದೆ. ಈಗಾಗಲೇ ಡ್ಯಾಂ ವ್ಯಾಪ್ತಿಯ ಗಣಿಗಾರಿಕೆಗೆ ತಾತ್ಕಾಲಿಕ ನಿಷೇಧವನ್ನು ಹೇರಲಾಗಿದೆ. ಆದರೆ ಗಣಿಧಣಿಗಳು ನಿಷೇಧವನ್ನು ಲೆಕ್ಕಿಸದೇ ರಾತ್ರೋರಾತ್ರಿ ಅಕ್ರಮ ಗಣಿಗಾರಿಕೆ ಮಾಡ್ತಿದ್ದು, ಸ್ಥಳೀಯರು ಪದೇ ಪದೇ ದೂರುತ್ತಿದ್ದಾರೆ. ಇದರಿಂದ ಗಣಿಗಾರಿಕೆಗೆ ಬ್ರೇಕ್ ಹಾಕಲು ಮಂಡ್ಯ ಜಿಲ್ಲಾಡಳಿತ ಹೊಸ ಪ್ಲಾನ್ ಮಾಡಿದ್ದು ಬೇಬಿ ಬೆಟ್ಟವನ್ನ ಇಸ್ರೋ ಕಣ್ಗಾವಲಿನಲ್ಲಿಡಲು ನಿರ್ಧರಿಸಿದೆ.

     

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್  ಡ್ಯಾಂಗೆ ಗಣಿಗಾರಿಕೆಯಿಂದ ಅಪಾಯವಿದೆ ಎಂಬ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದೆ. ಡ್ಯಾಂ ವ್ಯಾಪ್ತಿಯ ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ಗಣಿಗಾರಿಕೆಯನ್ನ ಸಂಪೂರ್ಣ ನಿಷೇಧಿಸುವಂತೆ ಹೋರಾಟಗಳು ನಡೆಯುತ್ತಿವೆ. ಸದ್ಯ ತಾತ್ಕಾಲಿಕ ನಿಷೇಧಾಜ್ಞೆ ನಡುವೆಯೂ ಬೇಬಿಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಗಣಿಧಣಿಗಳೊಂದಿಗೆ ಶಾಮೀಲಾಗಿ ರಾತ್ರೋ ರಾತ್ರಿ ಅಕ್ರಮ ಗಣಿಚಟುವಟಿಕೆಗೆ ಅವಕಾಶ ನೀಡಿದ್ದಾರೆಂದು ಸ್ಥಳೀಯ ಆರೋಪಿಸಿದ್ದಾರೆ.

    ಪದೇ ಪದೇ ಸ್ಥಳೀಯರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಗಣಿಗಾರಿಕೆ ಮೇಲೆ ನಿಗಾವಹಿಸಲು ಮಂಡ್ಯ ಜಿಲ್ಲಾಡಳಿತ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ. ಇಸ್ರೋ ಮ್ಯಾಪಿಂಗ್ ಮೂಲಕ ಗಣಿಗಾರಿಕೆ ಪ್ರಮಾಣವನ್ನ ಜಿಲ್ಲಾಡಳಿತ ಪತ್ತೆಹಚ್ಚಲಿದ್ದು ಅಕ್ರಮಗಳಿಗೆ ಕಡಿವಾಣ ಹಾಕಲಿದ್ದಾರೆ. ಇಸ್ರೋ ಮ್ಯಾಪಿಂಗ್ ಎಂಬುದು ಉಪಗ್ರಹ ಚಿತ್ರ ತಂತ್ರಜ್ಞಾನವಾಗಿದ್ದು. ಕಲ್ಲಿನ ಸ್ವರೂಪ, ಪ್ರಾಕೃತಿಕ ಬದಲಾವಣೆ, ಹವಾಮಾನ, ಕಲ್ಲುಗಣಿಗಾರಿಕೆ, ಅರಣ್ಯ ಪ್ರದೇಶ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ಕಲೆಹಾಕಲು ಸಹಕಾರಿಯಾಗಲಿದೆ.

    ಡಿಸಿ ವೆಂಕಟೇಶ್ ನೇತೃತ್ವದಲ್ಲಿ ನಡೆದ ಗಣಿ ಇಲಾಖೆ, ಅರಣ್ಯ ಇಲಾಖೆಗಳ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಇಸ್ರೋ ಮ್ಯಾಪಿಂಗ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಧಿಕಾರಿಗಳನ್ನು ಜಿಲ್ಲಾಡಳಿತ ಸಂಪರ್ಕಿಸಿದ್ದು, ಅವರಿಂದ ಬೇಬಿಬೆಟ್ಟದ ಚಟುವಟಿಕೆಗಳ ಮಾಹಿತಿಯನ್ನ ಪ್ರತಿ ವಾರ ಚಿತ್ರಸಹಿತ ಪಡೆಯಬಹುದಾಗಿದೆ. ಇದರ ಜೊತೆಗೆ ಬೇಬಿಬೆಟ್ಟಕ್ಕೆ ಸಿಸಿ ಟಿವಿ ಅಳವಡಿಸಿ ಹೆಚ್ಚಿನ ಪೋಲೀಸ್ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ.

    ನಿಷೇಧಾಜ್ಞೆ ನಡುವೆಯೂ ನಡೆಯುತ್ತಿದ್ದ ಅಕ್ರಮ ಗಣಿಚಟುವಟಿಕೆಗೆ ಕಡಿವಾಣ ಹಾಕಲು ಇಸ್ರೋ ಮ್ಯಾಪಿಂಗ್ ಸಹಕಾರಿಯಾಗಲಿದ್ದು. ಹೊಸ ತಂತ್ರಜ್ಞಾನವನ್ನ ಅಧಿಕಾರಿಗಳು ಎಷ್ಟರಮಟ್ಟಿಗೆ ಬಳಕೆ ಮಾಡ್ತಾರೆ. ಈ ಮೂಲಕ ಕೆಆರ್‍ಎಸ್ ಡ್ಯಾಂನ್ನು ಎಷ್ಟರಮಟ್ಟಿಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ಕಾದು ನೋಡಬೇಕಿದೆ.

  • ತುಂಗಭದ್ರಾ ಜಲಾಶಯದ ಮೂರು ಗೇಟ್ ಓಪನ್: 4,539 ಕ್ಯೂಸೆಕ್ ನೀರು ಹೊರಕ್ಕೆ

    ತುಂಗಭದ್ರಾ ಜಲಾಶಯದ ಮೂರು ಗೇಟ್ ಓಪನ್: 4,539 ಕ್ಯೂಸೆಕ್ ನೀರು ಹೊರಕ್ಕೆ

    ಬಳ್ಳಾರಿ: ಗಣಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗ ಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್ ನಿಂದ ಇಂದು ಸಂಜೆ 7ಕ್ಕೆ ಅಂದಾಜು 4,539 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.

    ಸದ್ಯ ತುಂಗಭದ್ರಾ ಜಲಾಶಯದಲ್ಲಿ 1,632.20 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿ ಅಷ್ಟೇ ಬಾಕಿಯಿದೆ. 33,737 ಕ್ಯೂಸೆಕ್ ನಷ್ಟು ನೀರು ಈ ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಸಂಜೆ ಜಲಾಶಯದಿಂದ ಮೂರು ಕ್ರಸ್ಟ್ ಗೇಟ್ ಮೂಲಕ ಸುಮಾರು 1,513 ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದೆ.

    ಒಟ್ಟು 6,533 ಕ್ಯೂಸೆಕ್ ನೀರನ್ನು ಹರಿಬಿಡಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಇದೀಗ 4,539 ಕ್ಯೂಸೆಕ್ ನೀರನ್ನು ಬಿಡಲಾಗಿದೆ. ನದಿ ಪಾತ್ರದ ಜನರು ಎಚ್ಚರದಿಂದಿರಬೇಕು. ಅಪಾಯದ ಸ್ಥಳದಲ್ಲಿರುವ ಜನ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯದ ಮಂಡಳಿ ಕೋರಿದೆ.

  • ಪ್ರವಾಹದಿಂದ ಒಡೆದ ಡ್ಯಾಂ- ನೀರು ಸೋರಿಕೆಯ ವಿಡಿಯೋ ಸೆರೆ ಹಿಡಿದ ಪೈಲಟ್

    ಪ್ರವಾಹದಿಂದ ಒಡೆದ ಡ್ಯಾಂ- ನೀರು ಸೋರಿಕೆಯ ವಿಡಿಯೋ ಸೆರೆ ಹಿಡಿದ ಪೈಲಟ್

    ಲ್ಯಾಂಸಿಂಗ್: ಡ್ಯಾಂ ಒಡೆದು ನೀರು ಸೋರಿಕೆ ಆಗುತ್ತಿರುವ ದೃಶ್ಯಗಳನ್ನು ಪೈಲಟ್ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಡ್ಯಾಂ ಒಡೆದ ತಕ್ಷಣ ನೀರಿನ ರಭಸ ಹೇಗಿತ್ತು ಎಂಬುದನ್ನು ತೋರಿಸುತ್ತಿದೆ.

    ಮಿಶಿಗನ್ ರಾಜ್ಯದಲ್ಲಿ ಟಿಟ್ಟಾಬವಾಸಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಎಡೆನ್ವಿಲ್ ಆಣೆಕಟ್ಟು ಪ್ರವಾಹದ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಬುಧವಾರ ಆಣೆಕಟ್ಟು ಒಡೆದಿದ್ದು, ಹಿಂದಿನ ದಿನ ಮಂಗಳವಾರ ಭಾರೀ ಮಳೆಯಾಗಿತ್ತು. ಎಡೆನ್ವಿಲ್ ಆಣೆಕಟ್ಟಿನಿಂದ ಅಪಾರ ಪ್ರಮಾಣದ ನೀರು ಹರಿದ ಪರಿಣಾಮ ಸ್ಯಾಂಡೋರ್ಡ್ ಡ್ಯಾಂ ತುಂಬಿ ಹರಿದಿದೆ. ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಮಿಡ್ ಲ್ಯಾಂಡ್ ಪ್ರದೇಶದ ಜನರನ್ನು ಬುಧವಾರ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

    ಪುಟ್ಟ ಪ್ಲೇನ್ ನಲ್ಲಿ ಹೋಗ್ತಿದ್ದ ಪೈಲಟ್ ರಿಯಾನ್ ಕಾಲೆಟೋ ಎಡೆನ್ವಿಲ್ ಡ್ಯಾಂನಿಂದ ನೀರು ಹರಿಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದ್ದಾರೆ. ಈ ವಿಡಿಯೋ ರಿಯಾನ್ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, 10 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 19 ಸಾವಿರಕ್ಕೂ ಹೆಚ್ಚು ಜನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

  • ಡ್ಯಾಂನಲ್ಲಿ ನೀರಿದ್ರೂ ರೈತರ ಬೆಳೆಗೆ ಸಿಗ್ತಿಲ್ಲ- ಮಂಡ್ಯ ರೈತರಲ್ಲಿ ಆತಂಕ

    ಡ್ಯಾಂನಲ್ಲಿ ನೀರಿದ್ರೂ ರೈತರ ಬೆಳೆಗೆ ಸಿಗ್ತಿಲ್ಲ- ಮಂಡ್ಯ ರೈತರಲ್ಲಿ ಆತಂಕ

    ಮಂಡ್ಯ: ಇಷ್ಟು ವರ್ಷ ಬೇಸಿಗೆ ಕಾಲದಲ್ಲಿ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗದ ಕಾರಣ ಮಂಡ್ಯ ಜಿಲ್ಲೆಯ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದರು. ಆದರೆ ಇದೀಗ ಈ ಬಾರಿ ದಾಖಲೆ ಪ್ರಮಾಣದಲ್ಲಿ ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾದರು ಸಹ ಮಂಡ್ಯ ಜಿಲ್ಲೆಯ ರೈತರು ಆತಂಕದ ಪರಿಸ್ಥಿತಿ ಎದುರಾಗಿದೆ.

    ಕೆಆರ್‌ಎಸ್‌ನಿಂದ ಬೇಸಿಗೆ ಬೆಳೆಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ವಿಳಂಬ ಧೋರಣೆ ಅನುಸರಿಸುತ್ತಿವೆ. ಹೀಗಾಗಲೇ ಮಂಡ್ಯ ಭಾಗದ ರೈತರು ಭತ್ತ ಬಿತ್ತನೆ ಮಾಡಿದ್ದು, ನೀರಿಗಾಗಿ ಕಾಯುತ್ತಿದ್ದಾರೆ. ಹಲವು ವರ್ಷಗಳಿಂದ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗದ ಕಾರಣ ರೈತರು ಬೇಸಿಗೆ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಬಾರಿ ಸುರಿದ ಭಾರೀ ಮಳೆಯಿಂದ ದಾಖಲೆ ಪ್ರಮಾಣದಲ್ಲಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದೆ.

    ಜಲಾಶಯ ಭರ್ತಿಯಾದರು ಸಹ ರೈತರಿಗೆ ನೀರು ಬಿಡಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹಿಂದೆ ಮುಂದೆ ನೋಡುತ್ತಿದೆ. ಹೀಗಾಗಲೇ ಮಂಡ್ಯ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳು ಬಾಗಿಲು ಹಾಕಿರುವ ಪರಿಣಾಮ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೀಗಿರುವಾಗ ಈಗ ಡ್ಯಾಂನಲ್ಲಿ ನೀರಿದ್ದರೂ ಬೇಸಿಗೆ ಬೆಳೆಗೆ ನೀರು ಹರಿಸುತ್ತಿಲ್ಲ. ಇದರಿಂದ ರೈತರ ಸ್ಥಿತಿ ಶೋಚನೀಯವಾಗಿದೆ.

    ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಸ್ಥಿತಿಯ ಬಗ್ಗೆ ಗಮನಹರಿಸಿ ರೈತರ ಬೇಸಿಗೆ ಬೆಳೆಗೆ ನೀರು ಹರಿಸಬೇಕೆಂದು ಮಂಡ್ಯ ಜಿಲ್ಲೆಯ ರೈತರು ಆಗ್ರಹಿಸುತ್ತಿದ್ದಾರೆ.

  • ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವವರು ಈಗ ಮಾತಾಡಲಿ – ರೇವಣ್ಣ

    ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವವರು ಈಗ ಮಾತಾಡಲಿ – ರೇವಣ್ಣ

    ಹಾಸನ: ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿಯ ಮುಖಂಡರು ನಿಂಬೆಹಣ್ಣಿನ ಬಗ್ಗೆ ಈಗ ಮಾತನಾಡಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಮಾತನಾಡಿದ ಅವರು, ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸಿದ ನಂತರ ವಿಮಾನ ಹಾರಾಟಕ್ಕೂ ಮುನ್ನ ಚಕ್ರಗಳಿಗೆ ನಿಂಬೆಹಣ್ಣು ಇಟ್ಟಿದ್ದಾರೆ. ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿ ನಾಯಕರು ಈಗ ನಿಂಬೆಹಣ್ಣಿನ ಬಗ್ಗೆ ಮಾತನಾಡಲಿ ಎಂದು ಹೇಳಿದರು.

    ಕಾವೇರಿ ಕೊಳ್ಳದಲ್ಲಿರುವ ಡ್ಯಾಂಗಳಲ್ಲಿ ನಡೆಯಬೇಕಿದ್ದ ಕೆಲಸಗಳಿಗೆ ಮುಖ್ಯಮಂತ್ರಿ ತಡೆಹಿಡಿದಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿಯ ಸೇರಿದಂತೆ ವಿವಿಧೆಡೆ ನಡೆಯಬೇಕಿದ್ದ 5 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರದ ಕಾಮಗಾರಿಗಳಿಗೆ ತಡೆ ಕೊಟ್ಟಿದ್ದಾರೆ. ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿದ್ದರೂ ಕಾಮಗಾರಿ ನಿಲ್ಲಿಸಿದ್ದಾರೆ. ಬಿಜೆಪಿ ಸೇರಿದ ಅನರ್ಹರ ಕ್ಷೇತ್ರಗಳಿಗೆ ಮತ್ತು ಬಿಜೆಪಿ ಗೆದ್ದ ಕೆಲ ಕ್ಷೇತ್ರದ ಕಾಮಗಾರಿಗಳಿಗೆ ಈಗ ಕೆಲಸಕ್ಕೆ ಅನುಮತಿ ನೀಡುತ್ತಿದ್ದಾರೆ. ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿನ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ ಎಂದು ಆರೋಪಿಸಿದರು.

    ದ್ವೇಷದ ರಾಜಕಾರಣ ಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಸಹ ಹಾಗೆಯೇ ಇದೆ. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ರಾಜಕೀಯ ದ್ವೇಷ ಬಿಟ್ಟು ಕೆಲಸಮಾಡಿ. ಕಾಮಗಾರಿ ತಡೆ ಹಿಡಿದ ಜಿಲ್ಲೆಗಳ ಜನತೆ ಕರ್ನಾಟಕದವರಲ್ಲವೇ? ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮರು ಚುನಾವಣೆಯಲ್ಲಿ ಕೆ.ಆರ್.ಪೇಟೆ ಸೇರಿದಂತೆ ಎಲ್ಲ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯನ್ನು ರಾಜ್ಯದಿಂದ ತೆಗೆಯುವ ಗುರಿಯೇ ನಮ್ಮ ಕೆಲಸ ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ಹೊಳೆನರಸೀಪುರದ ಚಾಕೇನಹಳ್ಳಿ ಮಿನಿ ಡ್ಯಾಂಗೆ ಹೆಚ್.ಡಿ.ರೇವಣ್ಣ ಮತ್ತು ಕುಟುಂಬದವರಿಂದ ಬಾಗಿನ ಅರ್ಪಿಸಲಾಯಿತು. ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ ಭಾಗಿಯಾಗಿದ್ದರು. ಚಾಕೆನಹಳ್ಳಿ ಡ್ಯಾಂ 12 ವರ್ಷಗಳ ನಂತರ ಭರ್ತಿಯಾಗಿದ್ದು, ಕಾಮಸಮುದ್ರ ಏತನೀರಾವರಿ ಮೂಲಕ ಡ್ಯಾಂಗೆ ನೀರು ಹರಿಸಲಾಗಿದೆ. 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಡ್ಯಾಂಗೆ ಇಂದು ಬಾಗಿನ ಅರ್ಪಿಸಲಾಯಿತು.

  • ಕೋಡಿ ಹರಿದ ಮೊಟ್ಟ ಮೊದಲ ಕೆರೆ ಈಗ ಪ್ರವಾಸಿ ತಾಣ

    ಕೋಡಿ ಹರಿದ ಮೊಟ್ಟ ಮೊದಲ ಕೆರೆ ಈಗ ಪ್ರವಾಸಿ ತಾಣ

    ಚಿಕ್ಕಬಳ್ಳಾಪುರ: ಕುಡಿಯುವ ನೀರಿಗೂ ಹಾಹಾಕಾರವಿದ್ದ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಗತಕಾಲದ ಜಲವೈಭವ ಮರುಕಳುಸುತ್ತಿದೆ. ಜಿಲ್ಲೆಯಲ್ಲೇ ಈ ವರ್ಷ ಮೊಟ್ಟ ಮೊದಲ ಬಾರಿಗೆ ಜಲಾಶಯವೊಂದು ತುಂಬಿ ತುಳುಕುತ್ತಿದ್ದು, ಪ್ರವಾಸಿಗರನ್ನ ತನ್ನತ್ತ ಬರಸೆಳೆಯುತ್ತಿದೆ.

    ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಅರೆಮಲೆನಾಡು ಖ್ಯಾತಿಯ ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಡ್ಯಾಂ ಹಚ್ಚು ಹಸುರಿನ ಬೆಟ್ಟ ಗುಡ್ಡಗಳ ನಡುವೆ ಮೈದುಂಬಿ ಹರಿಯುತ್ತಿದೆ. ಕಳೆದ ಒಂದು ವಾರದಿಂದ ಜಿಲ್ಲೆಯ ಮೇಲೆ ವರುಣದೇವ ಕೃಪೆ ತೋರಿದ್ದು, ಜಿಲ್ಲೆಯ ಗತಕಾಲದ ಜಲವೈಭವ ಮರುಕಳಿಸುತ್ತಿದೆ.

    ಜಿಲ್ಲೆಯ ಹಲವು ಕೆರೆಗಳಿಗೆ ನೀರು ಹರಿದುಬಂದಿದ್ದು, ದಂಡಿಗಾನಹಳ್ಳಿ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ದಂಡಿಗಾನಹಳ್ಳಿ ಡ್ಯಾಂ ಕೋಡಿ ಹರಿದಿದೆ. ಈ ವರ್ಷ ಜಿಲ್ಲೆಯಲ್ಲೇ ಕೋಡಿ ಹರಿದ ಮೊಟ್ಟ ಮೊದಲ ಕೆರೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಫೌಸಿಯಾ ತರನಮ್ ಸಂತಸದಿಂದ ಹೇಳಿದ್ದಾರೆ.

    ಎಂದು ಬತ್ತದ ಕೆರೆಯಂತಲೇ ಫೇಮಸ್ ಆಗಿರುವ ಈ ದಂಡಿಗಾನಹಳ್ಳಿ ಜಲಾಶಯ ಬತ್ತಿದ ಉದಾಹಾರಣೆಗಳಿಲ್ಲ. ಸುತ್ತಲೂ ಹಸಿರ ತೋರಣಗಳಂತೆ ಆವರಿಸಿರುವ ಬೆಟ್ಟಗಳ ಮಧ್ಯೆ ನೆಲೆ ನಿಂತಿರುವ ಈ ದಂಡಿಗಾನಹಳ್ಳಿ ಜಲಾಶಯ ತನ್ನ ಪ್ರಾಕೃತಿಕ ಸೊಬಗಿನಿಂದ ಸದಾ ತನ್ನತ್ತ ಪ್ರವಾಸಿಗರನ್ನ ಬರಸೆಳೆಯುತ್ತದೆ ಎಂದು ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

    ದಂಡಿಗಾನಹಳ್ಳಿ ಡ್ಯಾಂ ಕೋಡಿ ಹರಿದ ವಿಷಯ ತಿಳಿದು ಜಿಲ್ಲಾಪಂಚಾಯತ್ ಸಿಇಓ ಜಲಾಶಯಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿದರು. ಅಂದಹಾಗೆ ಈ ದಂಡಿಗಾನಹಳ್ಳಿ ಡ್ಯಾಂ ತನ್ನ ಪ್ರಾಕೃತಿಕ ಸೊಬಗಿನಿಂದ ಬಲು ಆಕರ್ಷಕವಾಗಿದ್ದು, ಸದಾ ಪ್ರವಾಸಿಗರ ಮನ ಸೆಳೆಯುತ್ತದೆ.

  • ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಒಳಹರಿವು – ಕೆಆರ್​ಎಸ್ ಭರ್ತಿ

    ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಒಳಹರಿವು – ಕೆಆರ್​ಎಸ್ ಭರ್ತಿ

    ಮಂಡ್ಯ: ಕೆಆರ್​ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು, ಒಳ ಹರಿವು ಹೆಚ್ಚಿನ ಪ್ರಮಾಣದಲ್ಲಿ ಆರಂಭವಾದ ಒಂಬತ್ತೇ ದಿನಕ್ಕೆ ಕೆಆರ್​ಎಸ್ ಅಣೆಕಟ್ಟೆ 124.80 ಅಡಿ ಗರಿಷ್ಠ ಮಟ್ಟ ತಲುಪಿದೆ.

    ಜುಲೈ 6ರಂದು ಅಣೆಕಟ್ಟೆಯಲ್ಲಿ ಕೇವಲ 84.20 ಅಡಿ ನೀರಿತ್ತು. ಆದರೆ ಐದು ದಶಕಗಳ ಬಳಿಕ ದಾಖಲೆ ಮಟ್ಟದ ಒಳ ಹರಿವು ಬಂದ ಹಿನ್ನೆಲೆಯಲ್ಲಿ ಅಣೆಕಟ್ಟು ಭರ್ತಿಯಾಗಿದೆ. ಮುಂಜಾಗೃತಾ ಕ್ರಮವಾಗಿ ಜುಲೈ 9ರಿಂದ ಹೊರ ಹರಿವು ಬಿಡದೇ ಇದ್ದರೆ ನಾಲ್ಕೇ ದಿನಕ್ಕೆ ಡ್ಯಾಂ ಭರ್ತಿಯಾಗುತ್ತಿತ್ತು. 118 ಅಡಿ ಭರ್ತಿಯಾಗುತ್ತಿದ್ದಂತೆ ಅಣೆಕಟ್ಟು ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ನೀರು ಬಿಟ್ಟಿದ್ದರಿಂದ ಈಗ ಡ್ಯಾಂ ಭರ್ತಿಯಾಗಿದೆ.

    ಒಳ ಹರಿವು ಇಳಿಮುಖವಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಹೊರ ಹರಿವು ಕಡಿಮೆ ಮಾಡಲಾಗಿತ್ತು. ಡ್ಯಾಂ ಸಂಪೂರ್ಣ ಭರ್ತಿಮಾಡಿಕೊಳ್ಳಲು ಹೊರ ಹರಿವು ಕಡಿಮೆ ಮಾಡಲಾಗಿತ್ತು.

    ಕೆಆರ್​ಎಸ್ ಜಲಾಶಯದ ನೀರಿನ ಗರಿಷ್ಟ ಮಟ್ಟ 124.80 ಅಡಿ ಆಗಿದ್ದು, ಇಂದು 124.80 ಅಡಿ ಇದೆ. ಜಲಾಶಯ ಒಳ ಹರಿವು 18,769 ಕ್ಯೂಸೆಕ್ ಆಗಿದ್ದು, 5,168 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಪ್ರಸ್ತುತ 49.452 ಟಿಎಂಸಿ ನೀರು ಸಂಗ್ರಹವಾಗಿದೆ.

    ಕಾವೇರಿ ಜಲಾನಯನ ಪ್ರದೇಶ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹೇಮಾವತಿ ಮತ್ತು ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತಿತ್ತು. ಪರಿಣಾಮ ಭಾನುವಾರ ಸಂಜೆ 2,05,852 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಸೋಮವಾರ ಬೆಳಗ್ಗೆ 2.04 ಲಕ್ಷ ಕ್ಯೂಸೆಕ್ ಇತ್ತು.

    ಸೋಮವಾರ ಬೆಳಗ್ಗೆ 122.40 ಅಡಿ ಇದ್ದ ನೀರಿನ ಮಟ್ಟವು ಹೊರ ಹರಿವಿನಿಂದ ಹೆಚ್ಚಳದಿಂದಾಗಿ ಸಂಜೆ ವೇಳೆಗೆ 121.80 ಅಡಿಗೆ ಇಳಿದಿತ್ತು. ಸೋಮವಾರ ಬೆಳಿಗ್ಗೆಯಿಂದ 1.64 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ನಂತರ ಒಳ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಹೊರ ಹರಿವನ್ನು 50 ಸಾವಿರಕ್ಕೆ ಇಳಿಸಲಾಗಿತ್ತು. ಇದೀಗ ಒಳ ಹರಿವಿಗೆ ತಕ್ಕಂತೆ ಹೊರ ಹರಿವನ್ನು ತಗ್ಗಿಸಿದ್ದು ಮಂಗಳವಾರ 43,093 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.

    2012 ರಿಂದ 2017ರವರೆಗೆ ಬರ ಬಂದಿದ್ದರಿಂದ ಜಲಾಶಯ ಭರ್ತಿಯಾಗಿರಲಿಲ್ಲ. ಕಳೆದ ವರ್ಷ ಜುಲೈ 15 ರಂದು ಕೆಆರ್​ಎಸ್ ಭರ್ತಿಯಾಗಿತ್ತು. ಈ ಮೂಲಕ ದಶಕದ ಬಳಿಕ ಕೆಆರ್​ಎಸ್ ಅವಧಿಗೂ ಮುನ್ನವೇ ಭರ್ತಿಯಾಗಿತ್ತು. ಈ ಹಿಂದೆ 2007ರಲ್ಲಿ ಕೆಆರ್​ಎಸ್  ಜುಲೈ ತಿಂಗಳಿನಲ್ಲಿ ಭರ್ತಿಯಾಗಿತ್ತು.

  • ಡ್ಯಾಂನಲ್ಲಿ ಪ್ಲಾಸ್ಟಿಕ್ ಬಾಟಲ್ ತರುವ ಚಾಲೆಂಜ್- ನೀರು ಪಾಲದ ಇಬ್ಬರು ವಿದ್ಯಾರ್ಥಿಗಳು

    ಡ್ಯಾಂನಲ್ಲಿ ಪ್ಲಾಸ್ಟಿಕ್ ಬಾಟಲ್ ತರುವ ಚಾಲೆಂಜ್- ನೀರು ಪಾಲದ ಇಬ್ಬರು ವಿದ್ಯಾರ್ಥಿಗಳು

    ಚಿಕ್ಕಬಳ್ಳಾಪುರ: ಡ್ಯಾಂ ನಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದು ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಬಳಿಯ ದಂಡಿಗಾನಹಳ್ಳಿ ಡ್ಯಾಂನಲ್ಲಿ ನಡೆದಿದೆ.

    23 ವರ್ಷದ ಅಭಿಲಾಷ್ ಹಾಗೂ ಸತೀಶ್ ಶಿವಕುಮಾರ್ ಮೃತರು. ಬೆಂಗಳೂರಿನ ಕೆ. ನಾರಾಯಣಪುರ ಬಳಿಯ ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿಗಳಾದ ಇವರು ಕಾರಿನಲ್ಲಿ ಓರ್ವ ಯುವತಿ ಸೇರಿ ನಾಲ್ವರು ಯುವಕರು ದಂಡಿಗಾನಹಳ್ಳಿ ಡ್ಯಾಂಗೆ ಆಗಮಿಸಿದ್ದರು. ಘಟನೆಯಲ್ಲಿ ಕೆವಿನ್ ಮೆಂಡೋಸ್ ಹಾಗೂ ಬುವಾಜ್ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

    ಇನ್ನೂ ಡ್ಯಾಂನ ಕೊನೆಯಲ್ಲಿ ಈಜಾಡುತ್ತಿದ್ದ ರಕ್ಷಿತಾ ಘಟನೆಯಿಂದ ಬೆಚ್ಚಿಬಿದ್ದು ನೀರಿನಿಂದ ಹೊರಬಂದಿದ್ದಾಳೆ. ನೀರಿನಲ್ಲಿ ಈಜಾಡುತ್ತಾ ಆಡವಾಡುತ್ತಿದ್ದ ನಾಲ್ವರು ಯುವಕರು ಡ್ಯಾಂನಲ್ಲಿ ಎಲ್ಲಿಂದಲೋ ತೇಲಿ ಬಂದ ಪ್ಲಾಸ್ಟಿಕ್ ಬಾಟಲಿಯನ್ನು ನಾನು ತರುತ್ತೇನೆ ಎಂದು ಚಾಲೆಂಜ್ ಹಾಕಿಕೊಂಡಿದ್ದಾರೆ. ಈ ವೇಳೆ ಡ್ಯಾಂ ಆಳ ಅರಿಯದ ಯುವಕರು ಪ್ಲಾಸ್ಟಿಕ್ ಬಾಟಲಿ ತರುವ ಭರದಲ್ಲಿ ಮೊದಲು ಸತೀಶ್ ಶಿವಕುಮಾರ್ ನೀರಿನಲ್ಲಿ ಮುಳುಗಿದ್ರೇ ಅವನನ್ನ ಹುಡುಕಿಕೊಂಡು ಹೋದ ಅಭಿಲಾಷ್ ಸಹ ನೀರಿನಲ್ಲಿ ಮುಳುಗಿದ್ದಾನೆ.

    ಅಷ್ಟರಲ್ಲೇ ಸ್ಥಳದಲ್ಲಿದ್ದ ಸ್ಥಳೀಯರು ಉಳಿದ ಇಬ್ಬರು ಯುವಕರನ್ನು ದಡಕ್ಕೆ ಕರೆತಂದಿದ್ದಾರೆ. ಸದ್ಯ ಇಬ್ಬರು ಯುವಕರು ನೀರುಪಾಲಾಗಿದ್ದು ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಆಗ್ನಿಶಾಮಕ ದಳ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದು ನೀರಿನಲ್ಲಿ ಮುಳುಗಡೆ ಆಗಿರುವ ಇಬ್ಬರು ಯುವಕರ ಮೃತದೇಹಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.