Tag: ಡೋಪಿಂಗ್ ಟೆಸ್ಟ್

  • ಡ್ರಗ್ಸ್‌ ನಟಿಯರ ಕೂದಲ ಸ್ಯಾಂಪಲ್‌ ವಾಪಸ್‌ ಕಳುಹಿಸಿದ ಎಫ್‌ಎಸ್‌ಎಲ್‌ ಲ್ಯಾಬ್‌

    ಡ್ರಗ್ಸ್‌ ನಟಿಯರ ಕೂದಲ ಸ್ಯಾಂಪಲ್‌ ವಾಪಸ್‌ ಕಳುಹಿಸಿದ ಎಫ್‌ಎಸ್‌ಎಲ್‌ ಲ್ಯಾಬ್‌

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್‍ನಲ್ಲಿ ಅರೆಸ್ಟ್ ಆಗಿರುವ ನಟಿಯರಾದ ಸಂಜನಾ, ರಾಗಿಣಿ ಸೇಫ್ ಆಗುವ ರೀತಿಯ ಎಡವಟ್ಟೊಂದನ್ನು ಸಿಸಿಬಿ ಪೊಲೀಸರು ಮತ್ತು ವೈದ್ಯರು ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

    ಈಗಾಗಲೇ ಜೈಲಿನಲ್ಲಿರುವ ರಾಗಿಣಿ, ಸಂಜನಾ ಡ್ರಗ್ಸ್ ವ್ಯಸನಿಗಳಾಗಿದ್ದರಾ ಎಂಬ ಅನುಮಾನದ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಂಗ್ರಹಿಸಲಾಗಿದ್ದ, ಕೂದಲು ಸ್ಯಾಂಪಲ್ ಅನ್ನು ಹೈದರಾಬಾದ್‌ ವಿಧಿವಿಜ್ಞಾನ ಪ್ರಯೋಗಾಲಯ ವಾಪಸ್ ಕಳುಹಿಸಿದೆ.

    ಕೂದಲ ಸ್ಯಾಂಪಲ್ ಅನ್ನು ನಿಯಮಾವಳಿ ಪ್ರಕಾರ ಪ್ಯಾಕಿಂಗ್ ಮಾಡದೇ, ಸಿಲ್ವರ್ ಕವರ್‌ನಲ್ಲಿ ಪ್ಯಾಕ್ ಮಾಡಿ ಟೆಸ್ಟ್‌ಗೆ ಕಳಿಸಲಾಗಿದೆ ಎಂದು ಹೇಳಿ ಕೆಸಿ ಜನರಲ್ ಆಸ್ಪತ್ರೆಗೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ನಟಿ ಸಂಜನಾ ಮತ್ತು ರಾಗಿಣಿ ಹೇರ್ ಟೆಸ್ಟ್ ಮತ್ತೆ ಡೋಪಿಂಗ್ ಟೆಸ್ಟ್ ರಿಸಲ್ಟ್ ಮತ್ತಷ್ಟು ತಡವಾಗಲಿದೆ. ಇದನ್ನೂ ಓದಿ: ಡ್ರಗ್ಸ್‌ ನಟಿಯರಿಗೆ ಹೇರ್ ಫೋಲಿಕಲ್ ಟೆಸ್ಟ್‌ – ಏನಿದು ಟೆಸ್ಟ್‌? ನಿಖರ ಹೇಗೆ?

    ಈ ಬಗ್ಗೆ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಸ್ಯಾಂಪಲ್ ವಾಪಸ್ ಬಂದಿದೆ. ಅದನ್ನ ಸರಿಪಡಿಸಿ ಈಗ ಮತ್ತೆ ಕಳಿಸಲಾಗಿದೆ. ಇದೇ ಮೊದಲ ಬಾರಿಗೆ ಹೆಚ್ಚುವರಿ ಸಾಕ್ಷಿಗಾಗಿ ಕೂದಲಿನ ಪರೀಕ್ಷೆ ಮಾಡಿಸಲಾಗಿತ್ತು ಎಂದು ತಿಳಿಸಿದರು.

    ಆರೋಪಿ ನಟಿಯರು ಮಾದಕ ವ್ಯಸನಿಗಳಾಗಿರುವ ಶಂಕೆಯನ್ನು ಸಿಸಿಬಿ ಪೊಲೀಸರು ವ್ಯಕ್ತಪಡಿಸಿದ್ದರು. ಇದನ್ನು ಖಚಿತಪಡಿಸಿಕೊಳ್ಳಲು ಕೋರ್ಟ್ ಅನುಮತಿ ಪಡೆದು ಮೂತ್ರ, ರಕ್ತ, ಕೂದಲ ಸ್ಯಾಂಪಲ್ ಸಂಗ್ರಹಿಸಲಾಗಿತ್ತು.

  • ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಬಾರಿಸಬಲ್ಲೆ ಎಂದ ಅಫ್ಘಾನ್ ಕ್ರಿಕೆಟಿಗ!

    ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಬಾರಿಸಬಲ್ಲೆ ಎಂದ ಅಫ್ಘಾನ್ ಕ್ರಿಕೆಟಿಗ!

    ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಕಿಂಗ್ ಆಗಿ ಮೆರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿರಬಹುದು. ಆದರೆ ವಿರಾಟ್ ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಗಳನ್ನು ನಾನು ಬಾರಿಸಬಲ್ಲೆ ಎಂದು ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿಕೆಟ್ ಕೀಪರ್ – ಬ್ಯಾಟ್ಸ್‍ಮನ್ ಮೊಹಮ್ಮದ್ ಶಹಝಾದ್ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಟೆಸ್ಟ್ ಆಡುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅಫ್ಘಾನಿಸ್ತಾನ, ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ. ಇದಕ್ಕಾಗಿ ಭಾರತದಲ್ಲಿಯೇ ಅಭ್ಯಾಸ ನಡೆಸುತ್ತಿರುವ ಶಹಝಾದ್ ಫಿಟ್ನೆಸ್ ವಿಚಾರದಲ್ಲಿ ಮಾತ್ರ ಯಾವುದೇ ರಾಜಿಯಾಗುವುದಿಲ್ಲ ಎಂದಿದ್ದಾರೆ.

    ಫಿಟ್ನೆಸ್ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇನೆ ಆದರೆ ಆಹಾರದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದಿರುವ 30 ವರ್ಷದ ಶಹಝಾದ್ 90 ಕೆಜಿ ದೇಹತೂಕ ಹೊಂದಿದ್ದಾರೆ. ತನ್ನ ದೇಹಗಾತ್ರದಿಂದಾಗಿ ಎಲ್ಲಡೆಯಿಂದ ಟೀಕೆ ಕೇಳಿ ಬರುತ್ತಿದ್ದರೂ ತಲೆಕೆಡಿಸಿಕೊಳ್ಳದ ಶೆಹಝಾದ್, ಫಿಟ್ನೆಸ್ ಕಾಯ್ದುಕೊಳ್ಳಲು ಕೊಹ್ಲಿ ಪಾಲಿಸುವ ಶೈಲಿಯನ್ನು ನನ್ನಿಂದ ನಿರೀಕ್ಷಿಸಬೇಡಿ. ಆದರೆ ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಗಳನ್ನು ನಾನು ಬಾರಿಸಬಲ್ಲೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

    ಈ ವೇಳೆ ಮಹೇಂದ್ರ ಸಿಂಗ್ ಧೋನಿ ತನ್ನ ಆಪ್ತ ಸ್ನೇಹಿತ ಎಂದಿರುವ ಶಹಝಾದ್, ಧೋನಿ ಅವರ ಕೊಠಡಿಯ ಬಾಗಿಲು ಎಲ್ಲರಿಗೂ ತೆರದಿರುತ್ತದೆ ಎಂದಿದ್ದಾರೆ. ಸುರೇಶ್ ರೈನಾ ಹಾಗೂ ಶಿಖರ್ ಧವನ್ ಜೊತೆ ಸಮಯ ಕಳೆಯುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಧೋನಿಯ ಹೆಲಿಕಾಪ್ಟರ್ ಹೊಡೆತವನ್ನು ಅನುಕರಿಸಿ ಸುದ್ದಿಯಾಗಿದ್ದ ಬಿಗ್ ಹಿಟ್ಟರ್ ಶಹಝಾದ್, ಅಫ್ಘಾನಿಸ್ತಾನದ ಪರ ಟಿ-20 ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಜೊತೆಗೆ ಏಕದಿನ ಕ್ರಿಕೆಟ್‍ನಲ್ಲಿ ಮುಹಮ್ಮದ್ ನಬಿ ಬಳಿಕ ಅತಿಹೆಚ್ಚು ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

    ವಿಶ್ವಕಪ್ ಅರ್ಹತಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗೆದ್ದಿದ್ದ ಶಹಝಾದ್, ದೇಹ ತೂಕ ಇಳಿಸಲು ಹೋಗಿ ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದು ಒಂದು ವರ್ಷ ಅಮಾನತು ಶಿಕ್ಷೆಗೆ ಗುರಿಯಾಗಿ ಇತ್ತೀಚಿಗಷ್ಟೇ ತಂಡಕ್ಕೆ ಮರಳಿದ್ದರು.