Tag: ಡೆಲ್ಲಿ

  • ಕನ್ನಡಿಗ ಅಗರ್ವಾಲ್ ಸ್ಫೋಟಕ ಆಟ – ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ

    ಕನ್ನಡಿಗ ಅಗರ್ವಾಲ್ ಸ್ಫೋಟಕ ಆಟ – ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ

    – ಗೆಲುವಿನ ಹತ್ತಿರ ಬಂದು ಸೋತ ಪಂಜಾಬ್
    – ಐಪಿಎಲ್ ಇತಿಹಾಸದಲ್ಲಿ 10ನೇ ಸೂಪರ್ ಓವರ್

    ದುಬೈ: ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಫೋಟಕವಾಗಿ ಆಡಿದ್ದರೂ ವಿಜಯ ಲಕ್ಷ್ಮಿ ಪಂಜಾಬ್ ತಂಡದ ಕೈ ಹಿಡಿಯಲಿಲ್ಲ. ಸೂಪರ್ ಓವರಿನಲ್ಲಿ  ಡೆಲ್ಲಿ ತಂಡ ಪಂಜಾಬ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ.

    ಗೆಲ್ಲಲು 157 ರನ್‍ಗಳ ಸುಲಭ ಸವಾಲನ್ನು ಪಡೆದಿದ್ದರೂ ಪಂಜಾಬ್ ತಂಡ ಬೇಗನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ಒಂದು ಕಡೆ ಮಾಯಾಂಕ್ ಅಗರ್ವಾಲ್ ಬಂಡೆಯಂತೆ ನಿಂತು 89 ರನ್(60 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದು ತಂಡವನ್ನು ವಿಜಯದ ಬಾಗಿಲ ಬಳಿ ತಂದು ನಿಲ್ಲಿಸಿದ್ದರು. ಆದರೆ ಕೊನೆಯಲ್ಲಿ ಅದೃಷ್ಟ ಕೈಕೊಟ್ಟ ಪರಿಣಾಮ ಪಂದ್ಯ ಸೂಪರ್ ಓವರಿಗೆ ಹೋಯ್ತು.

    ಟೈ ಹೇಗಾಯ್ತು?
    ಕೊನೆಯ 18 ಎಸೆತಗಳಲ್ಲಿ ಪಂಜಾಬ್ 42 ರನ್ ಗಳಿಸಬೇಕಿತ್ತು. 18ನೇ ಓವರಿನಲ್ಲಿ 17 ರನ್ ಬಂದಿದ್ದರೆ, 19ನೇ ಓವರಿನಲ್ಲಿ 12 ರನ್ ಬಂದಿತ್ತು. ಕೊನೆಯ ಓವರಿನಲ್ಲಿ  13 ರನ್ ಬೇಕಿತ್ತು. ಮಾರ್ಕಸ್ ಸ್ಟೊಯಿನಿಸ್ ಎಸೆದ ಮೊದಲ ಎಸೆತವನ್ನು ಅಗರ್ವಾಲ್ ಸಿಕ್ಸರ್ ಗೆ ಅಟ್ಟಿದ್ದರೆ ಎರಡನೇ ಎಸೆತದಲ್ಲಿ 2 ರನ್ ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದರು. ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತವನ್ನು ಬಲವಾಗಿ ಹೊಡೆದರೂ ಕ್ಯಾಚ್ ನೀಡಿ ಔಟಾದರು. ಕೊನೆಯ ಎಸೆತವನ್ನು ಎಡಗಡೆಗೆ ಜೋರ್ಡಾನ್ ಹೊಡೆದರೂ ಅದು ಕ್ಯಾಚ್ ಆಗಿತ್ತು. ಹೀಗಾಗಿ ಪಂದ್ಯ ಸೂಪರ್ ಓವರಿಗೆ  ಹೋಯ್ತು.

    ಸೂಪರ್ ಓವರಿನಲ್ಲಿ ರಬಾಡ ಎಸೆದ ಮೊದಲ ಓವರ್‍ನಲ್ಲಿ 2 ರನ್ ಬಂದರೆ ಎರಡನೇ ಎಸೆತದಲ್ಲಿ ಕೆಎಲ್ ರಾಹುಲ್ ಕ್ಯಾಚ್ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಪೂರನ್ ಬೌಲ್ಡ್ ಆದರು. ಸೂಪರ್ ಓವರ್‍ನಲ್ಲಿ ಎರಡು ವಿಕೆಟ್ ಕಳೆದುಕೊಂಡರೆ ತಂಡ ಆಲೌಟ್ ಎಂದು ಘೋಷಿಸಲಾಗುತ್ತದೆ. ನಂತರ ಶಮಿ ಪಂಜಾಬ್ ಪರವಾಗಿ ಬೌಲಿಂಗ್ ಮಾಡಿದರು. ಒಂದು ವೈಡ್ ಜೊತೆಗೆ ರಿಷಬ್ ಪಂತ್ 2 ರನ್ ಹೊಡೆಯುವ ಮೂಲಕ ಡೆಲ್ಲಿ ತಂಡ ಪಂದ್ಯವನ್ನು ಜಯಗಳಿಸಿತು. ಐಪಿಎಲ್ ಇತಿಹಾಸದಲ್ಲಿ 10ನೇ ಸೂಪರ್ ಓವರ್ ಪಂದ್ಯ ಇದಾಗಿತ್ತು.

    ಆರಂಭದಲ್ಲೇ ಕುಸಿತ:
    ಕಿಂಗ್ಸ್ ಇಲೆವನ್ ಪಂಜಾಬ್ ತಂಡ 35 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ನಾಯಕ ಕೆಎಲ್ ರಾಹುಲ್ ಅವರು 19 ಬಾಲಿಗೆ 21 ರನ್ ಸಿಡಿಸಿ ಮೋಹಿತ್ ಶರ್ಮಾಗೆ ನಾಲ್ಕನೇ ಓವರಿನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಕ್ರಿಸ್‍ಗೆ ಬಂದ ಮತ್ತೋರ್ವ ಆಟಗಾರ ಕರುಣ್ ನಾಯರ್ ಕೇವಲ ಒಂದು ರನ್ ಗಳಿಸಿ ಆರ್ ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ಬಂದ ನಿಕೋಲಸ್ ಪೂರನ್ ಅವರ ಕೂಡ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸೊನ್ನೆ ಸುತ್ತಿ ವಾಪಸ್ ಹೋದರು. ಅಶ್ವಿನ್ ಅವರ ಒಂದೇ ಓವರಿನಲ್ಲಿ ಎರಡು ವಿಕೆಟ್ ಕಿತ್ತರು.

    ನಾಲ್ಕನೇ ಬ್ಯಾಟ್ಸ್ ಮ್ಯಾನ್ ಆಗಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ ವೆಲ್ ಒಂದು ರನ್ ಗಳಿಸಿ ಕಗಿಸೊ ರಬಾಡ ಅವರ ಬೌಲಿಂಗ್‍ನಲ್ಲಿ ಶ್ರೇಯಾಸ್ ಅಯ್ಯರ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು. ಇದಾದ ನಂತರ ಕೆಲ ಕಾಲ ಕ್ರಿಸ್‍ನಲ್ಲಿ ಉಳಿದುಕೊಳ್ಳುವ ಮುನ್ಸೂಚನೆ ನೀಡಿದ ಸರ್ಫರಾಜ್ ಖಾನ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕೇವಲ 12 ರನ್ ಗಳಿಸಿ ಆಕ್ಸಾರ್ ಪಟೇಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು.

    ಈ ವೇಳೆ ಜೊತೆಯಾದ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೃಷ್ಣಪ್ಪ ಗೌತಮ್ ಉತ್ತಮ ಜೊತೆಯಾಟವಾಡಿದರು. 15 ಓವರ್ ಮುಕ್ತಾಕ್ಕೆ ಪಂಜಾಬ್ ತಂಡ 98 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. ಮಯಾಂಕ್ ಅಗರ್ವಾಲ್ ಮತ್ತು ಗೌತಮ್ 6ನೇ ವಿಕೆಟಿಗೆ 46 ರನ್, ಅಗರ್ವಾಲ್ ಮತ್ತು ಜೋರ್ಡಾನ್ 7ನೇ ವಿಕೆಟಿಗೆ 56 ರನ್ ಜೊತೆಯಾಟವಾಡಿದ ಪರಿಣಾಮ ವಿಜಯದತ್ತ ಪಂಜಾಬ್ ಬಂದಿತ್ತು.

    ಅಶ್ವಿನ್‍ಗೆ ಗಾಯ:
    ಸ್ಪಿನ್ನರ್ ಆರ್. ಅಶ್ವಿನ್ ಫಿಲ್ಡಿಂಗ್ ವೇಳೆ ಕೈಗೆ ಗಾಯಗೊಂಡ ಪರಿಣಾಮ ಕ್ರೀಡಾಂಗಣವನ್ನು ತೊರೆದಿದ್ದರು. ಅಶ್ವಿನ್ 1 ಓವರ್ ಎಸೆದು 2 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದ್ದರು.

  • 408 ದಿನಗಳ ಬಳಿಕ ದೇಶಿಯ ಕ್ರಿಕೆಟಿಗೆ ಯುವಿ ಎಂಟ್ರಿ – ಮೊದ್ಲ ರನ್ನಿಗಾಗಿ 28 ಬಾಲ್ ಎದುರಿಸಿದ್ರು

    408 ದಿನಗಳ ಬಳಿಕ ದೇಶಿಯ ಕ್ರಿಕೆಟಿಗೆ ಯುವಿ ಎಂಟ್ರಿ – ಮೊದ್ಲ ರನ್ನಿಗಾಗಿ 28 ಬಾಲ್ ಎದುರಿಸಿದ್ರು

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ವೇಳೆಗೆ ಟೀಂ ಇಂಡಿಯಾ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಉದ್ದೇಶ ಹೊಂದಿರುವ ಯುವರಾಜ್ ಸಿಂಗ್ ಬರೋಬ್ಬರಿ 408 ದಿನಗಳ ಬಳಿಕ ಬ್ಯಾಟಿಂಗ್ ಗೆ ಇಳಿದಿದ್ದು, ಈ ವೇಳೆ ತಮ್ಮ ಮೊದಲ ರನ್ ಗಳಿಸಲು 28 ಎಸೆತಗಳನ್ನು ಎದುರಿಸಿದ್ದಾರೆ.

    ನವದೆಹಲಿಯ ಫಿರೋಜ್ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಪಂಜಾಬ್ ತಂಡದ ಪರ 5ನೇ ಕ್ರಮಾಂಕದಲ್ಲಿ ಆಡುತ್ತಿರುವ ಯುವರಾಜ್, ಫಾರ್ಮ್ ಕಂಡುಕೊಳ್ಳಲು ಪರದಾಟ ನಡೆಸಿದರು. ಈ ಹಂತದಲ್ಲಿ 29ನೇ ಎಸೆತದಲ್ಲಿ ಯುವಿ ಮೊದಲ ರನ್ ಗಳಿಸಿ ಖಾತೆ ತೆರೆದರು. ಬುಧವಾರ ದಿನದಾಟದ ಅಂತ್ಯದ ವೇಳೆಗೆ ಯುವಿ 47 ಎಸೆತಗಳಲ್ಲಿ 16 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡರು.

    ಇತ್ತ ಡೆಲ್ಲಿ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾ ಮತ್ತೋರ್ವ ಅನುಭವಿ ಆಟಗಾರ ಗೌತಮ್ ಗಂಭೀರ್ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ, 107 ರನ್ ಗಳಿಗೆ ಆಲೌಟಾಯಿತು. ಇತ್ತ 2019 ರ ಐಪಿಎಲ್ ಆವೃತ್ತಿಯಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 37 ವರ್ಷದ ಯುವಿರನ್ನು ಕೈಬಿಟ್ಟಿತ್ತು. ಇದಾದ ಬಳಿಕ ಪಂಜಾಬ್ ತಂಡದ ಯುವ ಆಟಗಾರ ಶುಬ್‍ಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧದ ಟೀಂ ಇಂಡಿಯಾ ಎ ತಂಡಕ್ಕೆ ಆಯ್ಕೆಯಾದ ಕಾರಣ ಪಂಜಾಬ್ ತಂಡದಲ್ಲಿ ಸ್ಥಾನ ಪಡೆದಿದ್ದರು.

    2017ರ ಅಕ್ಟೋಬರಿನಲ್ಲಿ ಯುವರಾಜ್ ಸಿಂಗ್, ವಿದರ್ಭ ತಂಡದ ವಿರುದ್ಧ ನಡೆದ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪಂಜಾಬ್ ತಂಡದ ಪರ ಆಡಿದ್ದರು. ಅಂದು ತಂಡದ ನಾಯಕತ್ವ ವಹಿಸಿದ್ದ ಯುವರಾಜ್ ಸಿಂಗ್ ಎರಡು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 20, 42 ರನ್ ಗಳಿಸಿದ್ದರು. ಇದೀಗ ಬಹುದಿನಗಳ ಬಳಿಕ ಯುವಿ ಮೈದಾನಕ್ಕೆ ಎಂಟ್ರಿ ಕೊಡುತ್ತಿದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದರು. ಯುವಿ ಪಂದ್ಯದಲ್ಲಿ ಆಡುತ್ತಾರೆಂಬ ಕಾರಣದಿಂದಲೇ ಶಾಲಾ ಕಾಲೇಜು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಚಿನ್‍ರಂತೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದ ದೆಹಲಿಯ ರಿಷಭ್ ಪಂತ್!

    ಸಚಿನ್‍ರಂತೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದ ದೆಹಲಿಯ ರಿಷಭ್ ಪಂತ್!

    ಬೆಂಗಳೂರು: ಐಪಿಎಲ್‍ನ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಆರ್‍ಸಿಬಿಗೆ ಶರಣಾಗಿದೆ. ಆದರೆ ಡೆಲ್ಲಿ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ರಂತೆ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ.

    ಮೂರು ದಿನಗಳ ಹಿಂದಷ್ಟೇ ರಿಷಭ್ ತಂದೆ ರಾಜೇಂದ್ರ ಪಂತ್ ಹೃದಾಯಾಘಾತದಿಂದ ನಿಧನರಾಗಿದ್ದರು. ಈ ವೇಳೆ ರಿಷಭ್ ಡೆಲ್ಲಿ ಡೇರ್‍ಡೆವಿಲ್ಸ್ ಕ್ಯಾಂಪ್‍ನಲ್ಲಿ ಐಪಿಎಲ್‍ಗಾಗಿ ಕಠಿಣ ತಾಲೀಮಿನಲ್ಲಿದ್ದರು. ತಂದೆಯ ನಿಧನ ಸುದ್ದಿ ತಿಳಿಯುತ್ತಲೇ ರಿಷಭ್ ಹರಿದ್ವಾರಕ್ಕೆ ದೌಡಾಯಿಸಿದ್ರು. ತಾಯಿ ಸರೋಜ, ಸಹೋದರಿ ಸಾಕ್ಷಿ ಜೊತೆಗೆ ತಂದೆಯ ಅಂತಿಮ ವಿಧಿವಿಧಾನ ಪೂರೈಸಿದ್ದ ರಿಷಭ್‍ಗೆ, ಈ ವೇಳೆ ಕಾಲಿಗೆ ಸುಟ್ಟ ಗಾಯವಾಗಿತ್ತು.

    ಈ ಎಲ್ಲಾ ಕಾರಣಗಳಿಂದಾಗಿ ರಿಷಭ್ ಚೊಚ್ಚಲ ಐಪಿಎಲ್ ಪ್ರವೇಶ ಸಂಶಯವಾಗಿತ್ತು. ಆದರೆ ತಂದೆಯ ಅಕಾಲಿಕ ಅಗಲುವಿಕೆಯ ಆಘಾತ ಜೊತೆಗೆ ಸುಟ್ಟ ಗಾಯದ ನಡುವೆಯೇ ರಿಷಭ್ ಶುಕ್ರವಾರ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದರು.

    ತಂದೆಯ ನಿಧನದ ಆಘಾತ ಅನುಭವಿಸಿದ್ದ ರಿಷಭ್ ತಮ್ಮ ದುಃಖವನ್ನು ಬದಿಗಿಟ್ಟು ತಂಡ ಗೆಲುವಿಗೆ ಪ್ರಯತ್ನಿಸಿದ ರೀತಿ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಆರ್‍ಸಿಬಿ ನೀಡಿದ್ದ 157 ರನ್‍ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ತಂಡದಲ್ಲಿ ಏಕಾಂಗಿ ಹೋರಾಟ ನಡೆಸಿದ ರಿಷಭ್ ಆಕರ್ಷಕ ಅರ್ಧಶತಕ ದಾಖಲಿಸಿದ್ರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಿಷಭ್ 4 ಸಿಕ್ಸರ್, 3 ಬೌಂಡರಿಗಳನ್ನು ಒಳಗೊಂಡ 57 ರನ್ ಬಾರಿಸಿ ಅಂತಿಮ ಓವರ್‍ನಲ್ಲಿ ನೇಗಿಗೆ ಬೌಲ್ಡ್ ಆದ್ರು.

    ಕಣ್ಣಂಚಿನಲ್ಲಿ ಕಣ್ಣೀರು: ಕೊನೆಯ ಓವರ್‍ನಲ್ಲಿ 19 ರನ್‍ಗಳಷ್ಟೇ ಗೆಲುವಿಗೆ ಬೇಕಾಗಿತ್ತು. ರಿಷಬ್ ಅದನ್ನು ಸಾಧಿಸುವ ನಿರೀಕ್ಷೆ ಇತ್ತು. ಆದರೆ ಪವನ್ ನೇಗಿಯ ಪ್ರಥಮ ಎಸೆತದಲ್ಲಿಯೇ ಬೌಲ್ಡ್ ಆಗಿ ಪೆವಿಲಿಯನ್‍ನತ್ತ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದರು. ಅವರ ಕಣ್ಣಂಚಿನಲ್ಲಿ ಜಿನುಗಿದ ಹನಿಗಳು, ಹಣೆಯ ಮೇಲಿನ ಬೆವರು, ಹೊನಲು ಬೆಳಕಿನಲ್ಲಿ ಕ್ಯಾಮರಾ ಕಣ್ಣಲ್ಲಿ ಸ್ಪಷ್ಟವಾಗಿತ್ತು.

    1.90 ಕೋಟಿಗೆ ಖರೀದಿ: ರಿಷಭ್ ಪಂತ್ ಹೆಸರು ಮೊದಲ ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದು 2016ರಲ್ಲಿ. 10 ಲಕ್ಷ ಮೂಲಬೆಲೆ ಹೊಂದಿದ್ದ ರಿಷಭ್ ಪಂತ್‍ರನ್ನು 10 ಪಟ್ಟು ಹೆಚ್ಚು ಮೊತ್ತ ಕೊಟ್ಟು ಅಂದರೆ 1.90 ಕೋಟಿಗೆ ಡೆಲಿ ಡೇರ್ ಡೆವಿಲ್ಸ್ ಖರೀದಿಸಿತ್ತು.

    ಕಿರಿಯ ಆಟಗಾರ: 19 ವರ್ಷ ವಯಸ್ಸಿನ ರಿಷಭ್ ಕಳೆದ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯ ವೇಳೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಚುಟಕು ಫಾರ್ಮೆಟ್‍ನಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ ಕಿರೀಯ ಆಟಗಾರ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದರು.

    ರಣಜಿಯಲ್ಲೂ ದಾಖಲೆ: ಕಳೆದ ಬಾರಿಯ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ 67 ಎಸೆತದಲ್ಲಿ ಶತಕ ದಾಖಲಿಸಿದ್ದ ಪಂತ್, ಅದೇ ಅವಧಿಯಲ್ಲಿ ತ್ರಿಶತಕದ ಗಡಿಯನ್ನೂ ದಾಟಿದ್ದರು. ಇತ್ತೀಚಿಗಷ್ಟೇ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೌತಮ್ ಗಂಭೀರ್ ಬದಲಿಗೆ ರಿಷಭ್ ದೆಹಲಿ ತಂಡವನ್ನು ಮುನ್ನಡೆಸಿ ಗಮನ ಸೆಳೆದಿದ್ದರು.

    ಸಚಿನ್ ಶತಕ ಹೊಡೆದಿದ್ರು: 1998ರ ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ವೇಳೆ ಸಚಿನ್ ತೆಂಡೂಲ್ಕರ್ ಅವರ ತಂದೆ ನಿಧನರಾಗಿದ್ದರು. ಈ ಸಂದರ್ಭದಲ್ಲಿ ಅರ್ಧದಲ್ಲೇ ಭಾರತಕ್ಕೆ ಬಂದ ಸಚಿನ್ ತಂದೆಯ ಅಂತ್ಯಕ್ರಿಯೆ ನಡೆಸಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಅಜೇಯ 140 ರನ್(101 ಎಸೆತ, 16 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರು. ಈ ಪಂದ್ಯವನ್ನು ಭಾರತ 94 ರನ್‍ಗಳಿಂದ ಗೆದ್ದುಕೊಂಡಿತ್ತು.

    https://twitter.com/Rohitraje_wai/status/850740036236660736

    https://twitter.com/jhalli_arti/status/850936280649269248

    https://twitter.com/TheTimeChor/status/850755672253792258