Tag: ಡೆಂಟಲ್ ಕಾಲೇಜು

  • ಕೋವಿಡ್ ನಿಯಮ ಉಲ್ಲಂಘನೆ – ವಿರಾಜಪೇಟೆ ಡೆಂಟಲ್ ಕಾಲೇಜು ವಿರುದ್ಧ ಎಫ್‍ಐಆರ್

    ಕೋವಿಡ್ ನಿಯಮ ಉಲ್ಲಂಘನೆ – ವಿರಾಜಪೇಟೆ ಡೆಂಟಲ್ ಕಾಲೇಜು ವಿರುದ್ಧ ಎಫ್‍ಐಆರ್

    ಮಡಿಕೇರಿ: ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರ ಈಗಾಗಲೇ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ಆದರೆ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಡೆಂಟಲ್ ಕಾಲೇಜು ಆಡಳಿತ ಮಂಡಳಿ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ಕಾಲೇಜು ನಡೆಸದಂತೆ ಸ್ಪಷ್ಟ ಸೂಚನೆ ಇದ್ದರೂ ಕಾಲೇಜನ್ನು ನಡೆಸುತ್ತಿತ್ತು. ಹಾಗಾಗಿ ಇದೀಗ ಕಾಲೇಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಡೆಂಟಲ್ ಕಾಲೇಜಿನಲ್ಲಿ ತರಗತಿಗಳು ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ತಹಶೀಲ್ದಾರ್ ಆರ್.ಯೋಗಾನಂದ್ ಅವರು ವಿರಾಜಪೇಟೆ ಪಟ್ಟಣ ಪೊಲೀಸರೊಂದಿಗೆ ಕಾಲೇಜಿನ ಮೇಲೆ ಏಕಾಏಕಿ ದಾಳಿ ಮಾಡಿದರು. ಈ ವೇಳೆ ಕಾಲೇಜಿನಲ್ಲಿ ಕೋವಿಡ್ ನಿಯಮಗಳನ್ನು ಮೀರಿ ಆಂತರಿಕ ಪರೀಕ್ಷೆಗಳನ್ನು ನಡೆಸುತ್ತಿರುವುದನ್ನು ಸ್ವತಃ ತಹಶೀಲ್ದಾರ್ ಖುದ್ದು ವೀಕ್ಷಿಸಿದರು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಬ್ ತರಗತಿಗಳನ್ನು ನಡೆಸುತ್ತಿದ್ದನ್ನು ಗಮನಿಸಿದರು. ಈ ವೇಳೆ ಉಪನ್ಯಾಸಕರನ್ನು ವಿಚಾರಿಸಿದಾಗ ನಾವು ಯಾವುದೇ ತರಗತಿ ನಡೆಸುತ್ತಿರಲಿಲ್ಲ. ಸಂಶೋಧನೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೆವು ಎಂದು ಸಮಾಜಾಯಿಷಿ ನೀಡಿದ್ದಾರೆ.

    ಇದೇ ವೇಳೆ ತರಗತಿ ಕೊಠಡಿಗಳಿಂದ ಹೊರಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಕೇಳಿದಾಗ ವಿದ್ಯಾರ್ಥಿಗಳು ಲ್ಯಾಬ್ ತರಗತಿಯಲ್ಲಿ ಇದ್ದೇವು ಎನ್ನೋದನ್ನು ಒಪ್ಪಿಕೊಂಡರು. ಜೊತೆಗೆ ಕಾಲೇಜು ಆವರಣದಲ್ಲಿರುವ ಹೋಟೆಲಿನಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿಯೇ ಊಟ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳು ಒಂದೊಂದು ಟೇಬಲ್‍ನಲ್ಲೂ ಗುಂಪು ಗುಂಪಾಗಿ ಕುಳಿತು ಊಟ ಮಾಡುತ್ತಿದ್ದರು, ಜೊತೆಗೆ ಕ್ಯಾಂಟೀನ್ ನಲ್ಲೂ ವಿದ್ಯಾರ್ಥಿಗಳು ಕುಳಿತು ವಿವಿಧ ತಿನಿಸುಗಳನ್ನು ತಿನ್ನುತಿದ್ದರು.

    ತಕ್ಷಣವೇ ಎಚ್ಚೆತ್ತುಕೊಂಡು ತಹಶೀಲ್ದಾರ್ ಇದ್ದ ಸ್ಥಳಕ್ಕೆ ಬಂದ ಕಾಲೇಜು ಡೀನ್ ತರಗತಿ ನಡೆಸುವುದಕ್ಕೆ ನಮಗೆ ಅವಕಾಶ ಇದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದರೆ ತಹಶೀಲ್ದಾರ್ ಅವರು ಎಲ್ಲವನ್ನೂ ಪರಿಶೀಲಿಸಿ ಕಾಲೇಜು ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸರ್ಕಾರದ ನಿಯಮದ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಕಾಲೇಜಿನಲ್ಲಿ ಹಲವು ವಿಷಯಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಕಾಲೇಜು ವಿರುದ್ಧ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

  • ಸುಳ್ಯದ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು!

    ಸುಳ್ಯದ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು!

    ಮಂಗಳೂರು: ಡೆಂಟಲ್ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.

    ನೇಹಾ ಎ. ಥಾಮಸ್(22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಡಿಎಸ್ ಓದುತ್ತಿದ್ದ ನೇಹಾ, ಬುಧವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೇರಳ ಮೂಲದ ನೇಹಾ ವಿದ್ಯಾಭ್ಯಾಸಕ್ಕಾಗಿ ಸುಳ್ಯಕ್ಕೆ ಬಂದಿದ್ದು, ಕಾಲೇಜು ಬಳಿಯಿರುವ ಕಾವೇರಿ ಆರ್ಕೆಡ್ ಸಮೀಪದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.

    ಈ ಘಟನೆಯ ಬಗ್ಗೆ ಸ್ನೇಹಿತೆಯೊಬ್ಬಳು ಪ್ರತಿಕ್ರಿಯಿಸಿದ್ದು, ಎಂದಿನಂತೆ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ನೇಹಾ ತನ್ನ ಸ್ನೇಹಿತರ ಜೊತೆಗೆ ಮನೆಗೆ ಹಿಂದಿರುಗಿದ್ದಳು. ಸ್ವಲ್ಪ ಸಮಯದ ಬಳಿಕ ನೇಹಾಳಿಗೆ ಫೋನ್ ಕರೆಯೊಂದು ಬಂದಿದೆ. ಈ ವೇಳೆ ಆಕೆ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಳು. ಕೆಲವೊಂದು ಬಾರಿ ಆಕೆ ಫೋನಿನಲ್ಲಿ ಜಗಳವಾಡುತ್ತಿರುತ್ತಿದ್ದಳು. ಹೀಗಾಗಿ ಇದನ್ನು ಕೇಳಿಯೂ ನಾನು ಫ್ರೆಶ್ ಆಗೋಕೆ ಅಂತ ನನ್ನ ರೂಮೊಳಗೆ ಹೋಗಿ ಸ್ವಲ್ಪ ಹೊತ್ತು ನಿದ್ದೆ ಮಾಡಿದೆ. ಬಳಿಕ ಸಂಜೆ 6 ಗಂಟೆ ಸುಮಾರಿಗೆ ಎದ್ದು, ನೇಹಾ ರೂಮಿಗೆ ತೆರಳಿ ಕರೆದಾಗ ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಗಾಬರಿಗೊಂಡು ಆಕೆಯ ಮನೆಯ ಕಿಟಕಿಯಿಂದ ಒಳಗೆ ನೋಡಿದಾಗ ನೇಹಾ ನೇಣಿಗೆ ಶರಣಾಗಿದ್ದಳು. ಭಯಗೊಂಡು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದೆವು. ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಹರಸಾಹಸಪಟ್ಟು ರೂಮಿನ ಬಾಗಿಲು ಒಡೆದ್ರು. ಒಳಗೆ ಹೋಗಿ ನೋಡಿದಾಗ ನೇಹಾ ಅದಾಗಲೇ ಮೃತಪಟ್ಟಿದ್ದಳು. ನಂತ್ರ ಸುಳ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು ಎಂದು ತಿಳಿಸಿದ್ದಾಳೆ.

    ಆದ್ರೆ ಆತ್ಮಹತ್ಯೆಗೆ ಕಾರಣವೇನೆಂದು ಇನ್ನಷ್ಟೆ ತಿಳಿದುಬರಬೇಕಿದೆ. ಸದ್ಯ ನೇಹಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಈಕೆಯ ಹೆತ್ತವರು ದುಬೈನಲ್ಲಿದ್ದು, ಅಣ್ಣ ಕೇರಳದ ಕೊಟ್ಟಾಯಂನಲ್ಲಿ ವಾಸವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv