Tag: ಡೆಂಘೀ

  • ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

    ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

    ದಾವಣಗೆರೆ: ಜಿಲ್ಲೆಯಲ್ಲಿ ವೈರಲ್ ಫೀವರ್ ಹಾಗೂ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ.

    ಜ್ವರದಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ಸುಮಯ್ಯಾ ಕೌಸರ್ ಸಾವನ್ನಪ್ಪಿದ್ದಾಳೆ. ಇದು ಡೆಂಘೀ ಶಂಕಿತ ಪ್ರಕರಣವಾಗಿದ್ದು, ಡೆಂಘೀ ಎಂದು ಖಚಿತವಾಗಿಲ್ಲ ಎಂದು ಡಿಹೆಚ್‍ಒ ನಾಗರಾಜ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬಾಲಕಿ ಸಾವಿನ ಬಗ್ಗೆ ದಾವಣಗೆರೆ ಡಿಎಚ್‍ಒ ಡಾ.ನಾಗರಾಜ ಮಾತನಾಡಿ, ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿ, ದಾವಣಗೆರೆ ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಕಳೆದ ದಿನ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಸಾವನ್ನಪ್ಪಿದ ಬಾಲಕಿ ಸುಮಯ್ಯಾ ಕೌಸರ್ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಮುಜಾಹಿದ್ ಅವರ ಪುತ್ರಿ ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.57ಕ್ಕೆ ಇಳಿಕೆ- 847 ಹೊಸ ಕೊರೊನಾ ಕೇಸ್, 20 ಸಾವು

    ಜಿಲ್ಲೆಯಲ್ಲಿ ಡೆಂಘೀ ಹಾಗೂ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳನ್ನು ಹೆಚ್ಚು ಬಾಧಿಸುತ್ತಿದೆ. ಹೀಗಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿದೆ.

  • ಶಂಕಿತ ಡೆಂಘೀ ಜ್ವರಕ್ಕೆ ಬಾಲಕ ಬಲಿ!

    ಶಂಕಿತ ಡೆಂಘೀ ಜ್ವರಕ್ಕೆ ಬಾಲಕ ಬಲಿ!

    ಗದಗ: ಶಂಕಿತ ಡೆಂಘೀ ಜ್ವರದಿಂದಾಗ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

    ಅಭಿ ರಾಮಪ್ಪ ಮಾಳಗಿಮನೆ (7) ಮೃತ ಬಾಲಕನಾಗಿದ್ದು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದನಾಗಿದ್ದಾನೆ. ಕಳೆದ ಒಂದು ವಾರದಿಂದ ತೀರ್ವ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಪೋಷಕರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಡೆಂಘೀ ಜ್ವರದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ.

    ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡೆಂಘೀ ಜ್ವರ ಭೀತಿ ಹೆಚ್ಚಾಗಿದ್ದು, ಸಾರ್ವಜನಿಕರು ಡೆಂಘೀ ಜ್ವರದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕವಾಗಿದೆ.

  • ಡೆಂಘೀಯಿಂದ ಬಳಲುತ್ತಿದ್ದ 7ರ ಬಾಲಕಿ ಸಾವು- ಪೋಷಕರಿಗೆ 16 ಲಕ್ಷ ರೂ. ಬಿಲ್

    ಡೆಂಘೀಯಿಂದ ಬಳಲುತ್ತಿದ್ದ 7ರ ಬಾಲಕಿ ಸಾವು- ಪೋಷಕರಿಗೆ 16 ಲಕ್ಷ ರೂ. ಬಿಲ್

    ನವದೆಹಲಿ: ಡೆಂಘೀಯಿಂದ ಬಳಲುತ್ತಿದ್ದ 7 ವರ್ಷದ ಬಾಲಕಿಯ ಚಿಕಿತ್ಸೆಗಾಗಿ ಗುರ್ಗಾಂವ್‍ನ ಆಸ್ಪತ್ರೆಯೊಂದು ಬರೋಬ್ಬರಿ 16 ಲಕ್ಷ ರೂ. ಬಿಲ್ ಮಾಡಿರೋದು ವರದಿಯಾಗಿದೆ. ಇಲ್ಲಿನ ಫೋರ್ಟಿಸ್ ಆಸ್ಪತ್ರೆಯ ಐಸಿಯುನಲ್ಲಿ 15 ದಿನಗಳವರೆಗೆ ದಾಖಲಾಗಿದ್ದ ಬಾಲಕಿ ಆದ್ಯಾ ರಾಕ್‍ಲ್ಯಾಂಡ್ ಆಸ್ಪತ್ರೆಗೆ ರವಾನಿಸುವಾಗ ಮೃತಪಟ್ಟಿದ್ದಾಳೆ.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದ್ರೆ ಈ ಪ್ರಕರಣದಲ್ಲಿ ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಫೋರ್ಟಿಸ್ ಆಸ್ಪತ್ರೆ ಹೇಳಿದೆ. ಬಾಲಕಿ ಆದ್ಯಾ ಸಿಂಗ್‍ಗೆ ಚಿಕಿತ್ಸೆ ನೀಡುವಾಗ ಎಲ್ಲಾ ವೈದ್ಯಕೀಯ ಶಿಷ್ಟಾಚಾರಗಳನ್ನ ಅನುಸರಿಸಲಾಗಿದೆ ಎಂದು ಹೇಳಿದೆ. 15.79 ಲಕ್ಷ ರೂ. ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಸಚಿವರಿಗೆ ನೀಡಿದ ಸ್ಪಷ್ಟನೆಯಲ್ಲಿ ಫೋರ್ಟಿಸ್ ಆಸ್ಪತ್ರೆ ಹೇಳಿದೆ.

    ನವೆಂಬರ್ 17ರಂದು ಬಾಲಕಿಯ ತಂದೆಯ ಸ್ನೇಹಿತರೊಬ್ಬರು ಟ್ವಿಟ್ಟರ್‍ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಡೆಂಘೀಯಿಂದ ನನ್ನ ಸ್ನೇಹಿತರೊಬ್ಬರ ಮಗಳು 15 ದಿನಗಳ ಕಾಲ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಳು. 1700 ಗ್ಲವ್ಸ್ ಗೂ ಸೇರಿದಂತೆ ಒಟ್ಟು 18 ಲಕ್ಷ ರೂ. ಬಿಲ್ ಮಾಡಿದ್ದಾರೆ. ಆದ್ರೆ ಕೊನೆಗೆ ಬಾಲಕಿ ಸಾವನ್ನಪ್ಪಿದ್ದಾಳೆ. ಭ್ರಷ್ಟರು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ 4 ದಿನಗಳಲ್ಲಿ 9 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿತ್ತು. ಈ ಬಗ್ಗೆ ಆರೋಗ್ಯ ಸಚಿವರು ಪ್ರತಿಕ್ರಿಯಿಸಿ, ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಇಷ್ಟೂ ದಿನ ಆಸ್ಪತ್ರೆಯವರು ನಮ್ಮನ್ನ ದಾರಿ ತಪ್ಪಿಸಿದ್ದಾರೆ. ಈ ರೀತಿ ಮತ್ತೆ ಯಾವುದೇ ಆಸ್ಪತ್ರೆ ತನ್ನ ರೋಗಿಗಳೊಂದಿಗೆ ನಡೆದುಕೊಳ್ಳಬಾರದು. ಹೀಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಾಲಕಿ ತಂದೆ ಜಯಂತ್ ಸಿಂಗ್ ಹೇಳಿದ್ದಾರೆ. ಮಗಳ ಚಿಕಿತ್ಸೆಯ ವೆಚ್ಚಕ್ಕಾಗಿ ಜಯಂತ್ ತಮ್ಮ ಉಳಿತಾಯದ ಹಣ ಹಾಗೂ ಕುಟುಂಬಸ್ಥರು ನೀಡಿದ ಹಣದ ಜೊತೆಗೆ 5 ಲಕ್ಷ ರೂ. ಖಾಸಗಿ ಲೋನ್ ಪಡೆದಿದ್ದರು ಎಂದು ವರದಿಯಾಗಿದೆ.

    ಆದ್ಯಾಳಿಗೆ ಆಗಸ್ಟ್ 27ರಂದು ಜ್ವರ ಕಾಣಿಸಿಕೊಂಡಿತ್ತು. ಎರಡು ದಿನಗಳ ಬಳಿಕ ದ್ವಾರಕಾದ ರಾಕ್‍ಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಆದ್ಯಾಗೆ ಡೆಂಘೀ ಇದೆ ಎಂಬುದು ಗೊತ್ತಾಗಿತ್ತು. ಬಾಲಕಿಯ ಪರಿಸ್ಥಿತಿ ಮತ್ತಷ್ಟು ಚಿಂತಾನಜಕವಾದಾಗ ಆಕೆಯನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ವೈದ್ಯರು ಸೂಚಿಸಿದ್ದರು. ಅಲ್ಲಿಂದ ಆಗಸ್ಟ್ 31ರಂದು ಕುಟುಂಬಸ್ಥರು ಆದ್ಯಾಳನ್ನು ಫೋರ್ಟಿಸ್ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ ಅಲ್ಲೂ ಕೂಡ ಆದ್ಯಾ ಆರೋಗ್ಯದಲ್ಲಿ ಚೇತರಿಕೆಯಾಗಿರಲಿಲ್ಲ. ಆಕೆಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನ ವೆಂಟಿಲೇಷನ್‍ನಲ್ಲಿ ಇಡಲಾಗಿತ್ತು.

    10 ದಿನಗಳ ಕಾಲ ಆದ್ಯಾಳನ್ನ ಲೈಫ್ ಸಪೋರ್ಟ್‍ನಲ್ಲಿ ಇರಿಸಿದ್ದ ಆಸ್ಪತ್ರೆ ಭಾರೀ ಮೊತ್ತದ ಬಿಲ್ ಮಾಡಿದೆ. 1600 ಗ್ಲವ್ಸ್, 660 ಸಿರಿಂಜ್‍ಗಳು, ಆ್ಯಂಟಿಬಯಾಟಿಕ್ಸ್ ಹಾಗೂ ಬಳಕೆಯೇ ಮಾಡದ ಶುಗರ್ ಸ್ಟ್ರಿಪ್ಸ್ ಗಾಗಿ ಕೂಡ ಬಿಲ್ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

    ಸೆಪ್ಟೆಂಬರ್ 14 ರಂದು ಎಮ್‍ಆರ್‍ಐ ಮಾಡಿದ ನಂತರ ಮೆದುಳಿನಲ್ಲಿ ತೀವ್ರ ಹಾನಿಯಾಗಿರುವುದು ಗೊತ್ತಾಗಿ ವೈದ್ಯರು ಕೈ ಚೆಲ್ಲಿದರು. ನಾವು ಮಗುವನ್ನ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆವು. ಆದ್ರೆ ಅದಕ್ಕಾಗಿ ಆಸ್ಪತ್ರೆಯವರು ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಿಲ್ಲ ಎಂದು ಹೇಳಿದ್ದಾರೆ.

    ಅನಾರೋಗ್ಯದಿಂದ ಆದ್ಯಾಳ ದೇಹ ಊದಿಕೊಂಡಿತ್ತು. ಆಸ್ಪತ್ರೆಯ ಉಡುಪಿನಲ್ಲೇ ಅಲ್ಲಿಂದ ಹೋಗಲು ಹೇಳಿದ್ರು. ಅದಕ್ಕೂ ಹಣ ಕಟ್ಟಲು ಹೇಳಿದ್ರು. ಸೆಪ್ಟೆಂಬರ್ 14 ಹಾಗೂ 15ರ ಮಧ್ಯರಾತ್ರಿ ರಾಕ್‍ಲ್ಯಾಂಡ್ ಆಸ್ಪತ್ರೆಗೆ ಕೊಂಡೊಯ್ದಾಗ ಆದ್ಯಾ ಆಗಲೇ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ರು ಎಂದು ತಂದೆ ಜಯಂತ್ ಹೇಳಿದ್ದಾರೆ. ಆದ್ರೆ ವಿವಿಧ ಅತ್ಯಾಧುನಿಕ ಚಿಕಿತ್ಸೆಗಳಿಗಾಗಿ ಬಿಲ್ ಮಾಡಲಾಗಿದೆ. ಬಿಲ್ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ.

  • ಡೆಂಘೀಗೆ ಬಾಗಲಕೋಟೆಯ ಯೋಧ ಬಲಿ

    ಡೆಂಘೀಗೆ ಬಾಗಲಕೋಟೆಯ ಯೋಧ ಬಲಿ

    ಬಾಗಲಕೋಟೆ: ಜಮ್ಮು ಕಾಶ್ಮೀರದಲ್ಲಿ ಸೇವೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ಸಿಆರ್‍ಪಿಎಫ್ ಯೋಧರೊಬ್ಬರು ಡೆಂಘೀ ಜ್ವರದಿಂದ ಮೃತಪಟ್ಟಿದ್ದಾರೆ.

    ಮಂಜುನಾಥ್ ಮೇತ್ರಿ(30) ಮೃತಪಟ್ಟ ಯೋಧ. ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಶಾಂತಿ ಮುಕಂದ್ ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಅವರಿಗೆ ಡೆಂಘೀ ಕಾಣಿಸಿಕೊಂಡು ಮೃತಪಟ್ಟಿದ್ದಾರೆ.

    8 ವರ್ಷ 9 ತಿಂಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್ ಅವರು ಜಮ್ಮುಕಾಶ್ಮೀರದ ಸಿಆರ್‍ಪಿಎಫ್‍ನ 28ನೇ ಬೆಟಾಲಿಯನ್‍ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

    ಮಂಜುನಾಥ್ ಅವರ ಪಾರ್ಥಿವ ಶರೀರ ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿಗೆ ಸಂಜೆ ಬರಲಿದ್ದು, ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ತಮ್ಮ ಸ್ವಗ್ರಾಮವಾದ ಚಿಮ್ಮಡ ಗ್ರಾಮಕ್ಕೆ ಪಾರ್ಥಿವ ಶರೀರ ತರಲು ಸಿದ್ಧತೆ ನಡೆಯುತ್ತಿದೆ.

  • ಗದಗದಲ್ಲಿ ಡೆಂಘೀ ಭೀತಿಗೆ ಊರೇ ಖಾಲಿ!

    ಗದಗದಲ್ಲಿ ಡೆಂಘೀ ಭೀತಿಗೆ ಊರೇ ಖಾಲಿ!

    ಗದಗ: ಜಿಲ್ಲೆಯ ಮನೆಗಳಿಗೆ ಬೀಗ ಹಾಕಿದ್ದರಿಂದ ಊರು ಬಿಕೋ ಅಂತಿದೆ. ಅರ್ಧದಷ್ಟು ಮಂದಿ ಹಳ್ಳಿಯನ್ನೇ ತೊರೆದ್ರೆ ಉಳಿದರ್ಧ ಮಂದಿ ಆಸ್ಪತ್ರೆ ಬೆಡ್‍ಗಳಲ್ಲಿ ನರಳಾಡುತ್ತಿದ್ದಾರೆ. ಅಂದಹಾಗೆ ಇದು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್‍ಕೆ ಪಾಟೀಲ್ ಉಸ್ತುವಾರಿಯಲ್ಲಿ ಬರುವ ಗದಗ ಜಿಲ್ಲೆಯ ರೋಣ ತಾಲೂಕಿನ ಬೈರಾಪೂರ ತಾಂಡದ ಕಥೆ.

    ಒಂದು ತಿಂಗಳಿಂದ ಬೈರಾಪೂರ ತಾಂಡದ ಮಂದಿ ವಿಚಿತ್ರ ರೋಗ-ರುಜಿನಗಳಿಂದ ಬಳಲುತ್ತಿದ್ದಾರೆ. ಇದ್ದಕ್ಕಿದ್ದಂತೆ ಜ್ವರ, ತಲೆನೋವು, ಕೀಲುನೋವು, ಹೊಟ್ಟೆ ನೋವು, ವಾಂತಿ ಕಾಣಿಸಿಕೊಳ್ತಿದ್ದು ಊರಿಗೆ ಊರೇ ಆಸ್ಪತ್ರೆ ಸೇರಿದೆ. ಅನೇಕರು ಡೆಂಘೀ ಜ್ವರದಿಂದ ಬಳಲುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ ವೈದ್ಯರು. ಗಜೇಂದ್ರಗಢ ಸರ್ಕಾರಿ ಆಸ್ಪತ್ರೆಯಲ್ಲಿ 70ಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ದುರ್ಗತಿಗೆ ಸ್ವಚ್ಛ ಕುಡಿಯುವ ನೀರಿನ ಕೊರತೆ, ಸೊಳ್ಳೆ ಮತ್ತು ವಿಪರೀತ ಬಿಸಿಲೇ ಕಾರಣ ಅಂತಾ ಹಳ್ಳಿಯಲ್ಲಿ ಅಧ್ಯಯನ ನಡೆಸಿರುವ ವೈದ್ಯರ ತಂಡ ಹೇಳಿದೆ.

    ಸಿಎಂ ಸಿದ್ದರಾಮಯ್ಯ ಸರ್ಕಾರವೇನೋ ನಾಲ್ಕು ವರ್ಷ ಮುಗಿಸಿದ ಖುಷಿಯಲ್ಲಿದೆ. ತನ್ನ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಿದೆ ಅಂತಾ ಕಾಂಗ್ರೆಸ್ ಬೀಗ್ತಿದೆ. ಆದ್ರೆ ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲಿನ ಗ್ರಾಮವೇ ರೋಗಪೀಡಿತವಾಗಿರುವುದು ಮಾತ್ರ ನಿಜಕ್ಕೂ ಶೋಚನೀಯ.