Tag: ಡೀಸೆಲ್ ಟ್ಯಾಂಕರ್

  • ಡೀಸೆಲ್ ಟ್ಯಾಂಕರ್ ಸ್ಫೋಟಿಸಿ ನಕ್ಸಲರ ಅಟ್ಟಹಾಸ – ಮೂವರು ಬಲಿ

    ಡೀಸೆಲ್ ಟ್ಯಾಂಕರ್ ಸ್ಫೋಟಿಸಿ ನಕ್ಸಲರ ಅಟ್ಟಹಾಸ – ಮೂವರು ಬಲಿ

    ರಾಯ್ಪುರ: ಛತ್ತೀಸ್‍ಗಢದ ಕಂಕರ್ ಜಿಲ್ಲೆಯಲ್ಲಿ ರೈಲ್ವೆ ಹಳಿ ನಿರ್ಮಾಣ ಕೆಲಸ ಮಾಡುತ್ತಿದ್ದಾಗ ಡೀಸೆಲ್ ಟ್ಯಾಂಕರ್ ಒಂದನ್ನು ನಕ್ಸಲಿಯರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಇಟ್ಟು ಸ್ಫೋಟಿಸಿದ್ದು, ನಕ್ಸಲಿಯರ ಅಟ್ಟಹಾಸಕ್ಕೆ ಮೂವರು ನಾಗರಿಕರು ಬಲಿಯಾಗಿದ್ದಾರೆ.

    ಕಂಕರ್ ಜಿಲ್ಲೆಯ ತುಮಾ ಪಾಲ್ ಗ್ರಾಮದ ಬಳಿ ಸೋಮವಾರ ರಾತ್ರಿ ನಕ್ಸಲಿಯರು ಈ ಕೃತ್ಯವೆಸೆಗಿದ್ದಾರೆ. ಜಿಲ್ಲೆಯ ರೌಫಾಟ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಟ್ರಕ್ ಮ್ಯಾನ್‍ಗಳು ಹಾಗೂ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ಈ ದಾಳಿ ನಡೆಸಿದ್ದಾರೆ. ಕೆಲಸ ನಡೆಯುತ್ತಿದ್ದ ಪ್ರದೇಶದಲ್ಲಿ ಐಇಡಿ ಸ್ಫೋಟಿಸಿ ನಕ್ಸಲಿಯರು ಅಟ್ಟಹಾಸ ಮೆರೆದಿದ್ದಾರೆ.

    ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಲು ಜವಾನರು ಸ್ಥಳಕ್ಕೆ ಹೋದಾಗ, ಅಲ್ಲಿಯೇ ಹೊಂಚು ಹಾಕಿ ಕುಳಿತ್ತಿದ್ದ ನಕ್ಸಲರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

    ಘಟನಾ ಸ್ಥಳಕ್ಕೆ ಕಂಕರ್ ಎಸ್‍ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗೃತ ಕ್ರಮವಾಗಿ ಘಟನಾ ಸ್ಥಳವನ್ನು ಹಾದು ಹೋಗುವ ಭಾನುಪ್ರತಾಪ್‍ಪುರ ಹಾಗೂ ನಾರಾಯಣ್‍ಪುರ ಮಾರ್ಗದ ರಸ್ತೆ ಸಂಚಾರವನ್ನು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ನಕ್ಸಲರಿಗಾಗಿ ಹುಡುಕಾಟ ನಡೆಸಲಾಗಿದೆ

  • ಟ್ಯಾಂಕರ್‌ಗೆ ಲಾರಿ ಡಿಕ್ಕಿ – ಅಪಾಯ ಲೆಕ್ಕಿಸದೆ ಕ್ಯಾನಿಗೆ ಡೀಸೆಲ್ ತುಂಬಿಸಿದ ಜನ

    ಟ್ಯಾಂಕರ್‌ಗೆ ಲಾರಿ ಡಿಕ್ಕಿ – ಅಪಾಯ ಲೆಕ್ಕಿಸದೆ ಕ್ಯಾನಿಗೆ ಡೀಸೆಲ್ ತುಂಬಿಸಿದ ಜನ

    ಕಾರವಾರ: ಡೀಸೆಲ್ ತುಂಬಿದ್ದ ಟ್ಯಾಂಕರಿಗೆ ಲಾರಿಯೊಂದು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಟ್ಯಾಂಕರ್ ನಿಂದ ಸೋರಿಕೆಯಾಗಿ ರಸ್ತೆಯಲ್ಲಿ ಡೀಸೆಲ್ ಹೊಳೆಯೇ ಹರಿದುಬಿಟ್ಟಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಬೇಂಗ್ರೆಯ ಭಾರತ್ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ಭಟ್ಕಳದ ಕಡೆ ತೆರಳುತಿದ್ದ ಡೀಸೆಲ್ ಟ್ಯಾಂಕರ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಟ್ಯಾಂಕರ್ ಹಿಂಬದಿಗೆ ಬಲವಾಗಿ ಹೊಡೆತಬಿದ್ದು, ಟ್ಯಾಂಕರ್ ಒಡೆದು ಡೀಸೆಲ್ ಸೋರಿಕೆಯಾಗಿದೆ.ಸೋರಿಕೆಯಿಂದಾಗಿ ಇಡೀ ರಸ್ತೆಯಲ್ಲಿ ಡೀಸೆಲ್ ನೀರಿನ ಕೋಡಿಯಂತೆ ಹರಿದು ಹೋಗುತ್ತಿತ್ತು.

    ಈ ವೇಳೆ ಟ್ಯಾಂಕರ್ ನಿಂದ ಹರಿಯುತ್ತಿದ್ದ ಡೀಸೆಲ್‍ನನ್ನು ಸುತ್ತಮುತ್ತಲ ಜನ ಮನೆಯಲ್ಲಿದ್ದ ಪಾತ್ರೆ ಹಾಗೂ ಕ್ಯಾನ್‍ಗಳನ್ನು ತಂದು ಅದನ್ನು ತುಂಬಿಕೊಂಡಿದ್ದಾರೆ. ಅಲ್ಲದೆ ಈ ಮಾರ್ಗದಲ್ಲಿ ಸಾಗುತ್ತಿದ್ದ ಕೆಲ ವಾಹನ ಸವಾರರು ಕೂಡ ಡೀಸೆಲ್‍ಗಾಗಿ ಮುಗಿಬಿದ್ದಿದ್ದರು. ಅಪಾಯ ಸಂಭವಿಸಬಹುದು ಎಂಬುವ ಅರಿವೇ ಇಲ್ಲದೇ ಜನ ಸೋರುತಿದ್ದ ಡೀಸೆಲ್ ಗೆ ಪಾತ್ರೆ ಹಿಡಿದಿದ್ದರು.

     

  • ಡೀಸೆಲ್ ಟ್ಯಾಂಕರ್ ಪಲ್ಟಿ- ಮುಗಿಬಿದ್ದು ಡೀಸೆಲ್ ಹೊತ್ತೊಯ್ದ ಜನ

    ಡೀಸೆಲ್ ಟ್ಯಾಂಕರ್ ಪಲ್ಟಿ- ಮುಗಿಬಿದ್ದು ಡೀಸೆಲ್ ಹೊತ್ತೊಯ್ದ ಜನ

    ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಅದರಿಂದ ಸೋರಿಕೆಯಾಗುತ್ತಿದ್ದ ಡೀಸೆಲ್‍ಗಾಗಿ ಜನರು ಮುಗಿಬಿದ್ದಿದ್ದ ದೃಶ್ಯ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮ ಬಳಿ ಕಂಡುಬಂದಿದೆ.

    ಇಂದು ಬೆಲಗೂರು ಬಳಿಕ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿತ್ತು. ಈ ವೇಳೆ ಟ್ಯಾಂಕರ್ ನಿಂದ ಸೋರಿದ ಡೀಸೆಲ್ ತುಂಬಿಕೊಂಡು ಹೋಗಲು ಜನರು ಮುಗಿಬಿದ್ದಿದ್ದರು. ತಾ ಮುಂದು ನಾ ಮುಂದು ಎಂದು ಡೀಸೆಲ್‍ಗಾಗಿ ಜನ ಮುಗಿಬಿದ್ದಿದ್ದು, ಸಿಕ್ಕ ಸಿಕ್ಕ ಬಾಟಲಿ, ಕೊಡ, ಬಕೆಟ್, ಕ್ಯಾನ್‍ಗಳನ್ನು ತಂದು ಡೀಸೆಲ್ ಹೊತ್ತೊಯ್ದ ದೃಶ್ಯವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

    ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕದಳ ಭೇಟಿ ನೀಡಿದ್ದು, ಟ್ಯಾಂಕರ್ ಅನ್ನು ಎತ್ತಿ ನಿಲ್ಲಿಸಿ ಡೀಸೆಲ್ ಸೋರಿಕೆಗೆ ಬ್ರೇಕ್ ಹಾಕಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಅಲ್ಲದೆ ಗಾಯಾಳು ಚಾಲಕ ಹಾಗೂ ಸಹಾಯಕನನ್ನು ಹೊಸದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.