Tag: ಡಿ.ವಿ.ಸದಾನಂದಗೌಡ

  • ಯಶವಂತಪುರ, ಆರ್‍ಆರ್ ವಲಯದ ಕೋವಿಡ್ ಕೇರ್ ಸೆಂಟರ್‌ಗೆ  ಡಿವಿಎಸ್, ಎಸ್‌ಟಿಎಸ್‌ ಭೇಟಿ

    ಯಶವಂತಪುರ, ಆರ್‍ಆರ್ ವಲಯದ ಕೋವಿಡ್ ಕೇರ್ ಸೆಂಟರ್‌ಗೆ ಡಿವಿಎಸ್, ಎಸ್‌ಟಿಎಸ್‌ ಭೇಟಿ

    – ಕೋವಿಡ್ ಕೇರ್ ಸೆಂಟರ್ ಗಳ ಮೂಲ ಸೌಕರ್ಯ, ಸ್ಥಿತಿಗತಿ ವಿಕ್ಷಣೆ
    – ಸರ್ಕಾರದಿಂದ ಕೈಗೊಳ್ಳಲಾದ ಕ್ರಮಗಳ ವಿವರಿಸಿದ ಸಚಿವ ಸೋಮಶೇಖರ್
    – ಜನಸೇವಾ ವಿದ್ಯಾಕೇಂದ್ರದ ನೂತನ ಕೇರ್ ಸೆಂಟರ್ಗೆ 16 ಬೆಡ್‍ಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಮಾಡಿಸಿದ ಎಸ್‍ಟಿಎಸ್
    – ಶಾಶ್ವತ ಸೌಕರ್ಯಗಳ ಬಗ್ಗೆ ಚಿಂತನೆ

    ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯದ ಕೋವಿಡ್ ಕೇರ್ ಸೆಂಟರ್‌ಗಳ   ವ್ಯವಸ್ಥೆಗಳ ಬಗ್ಗೆ ಶನಿವಾರ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಸಚಿವರುಗಳು, ಅಲ್ಲಿ ನೂತನವಾಗಿ ಪ್ರಾರಂಭಿಸಲು ಉದ್ದೇಶಿಸಿರುವ 100 ಆಕ್ಸಿಜನ್ ಬೆಡ್‍ಗಳ ಪರಿಶೀಲನೆ ನಡೆಸಿದರು. ಜೊತೆಗೆ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಹೇಗೆ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಯಾವ ಯಾವ ವ್ಯವಸ್ಥೆಗಳನ್ನು ಮಾಡಲಾಗಿದೆ. ಇನ್ನೂ ಏನೇನು ಬೇಡಿಕೆಗಳು ಇವೆ ಎಂಬೆಲ್ಲ ಮಾಹಿತಿಗಳನ್ನು ಸಚಿವರಾದ ಸೋಮಶೇಖರ್ ಅವರು ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರಿಗೆ ವಿವರಿಸಿದರು.

    ಮೂಲ ಸೌಲಭ್ಯ ಬಗ್ಗೆ ಮಾಹಿತಿ :
    ಜ್ಞಾನಭಾರತಿ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದ ಕೇಂದ್ರ ಸಚಿವರಾದ ಸದಾನಂದಗೌಡ ಅವರು ಹಾಗೂ ಸೋಮಶೇಖರ್ ಅವರು, ಅಲ್ಲಿನ ಮೂಲ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ, ಆಕ್ಸಿಜನ್ ಸಿಲಿಂಡರ್‍ಗಳ ಪೂರೈಕೆ, ರೋಗಿಗಳಿಗೆ ಲಭ್ಯವಾಗುತ್ತಿರುವ ಚಿಕಿತ್ಸೆ, ಔಷಧಗಳು, ವೈದ್ಯಕೀಯ ಕಿಟ್‍ಗಳು, ನೀರು-ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಯಾವ ರೀತಿಯಾಗಿ ಕಲ್ಪಿಸಲಾಗಿದೆ. ತುರ್ತು ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವ ರೀತಿ ಆಸ್ಪತ್ರೆ ಸಜ್ಜಾಗಿದೆ ಎಂಬ ಬಗ್ಗೆ ಸಚಿವರಾದ ಸೋಮಶೇಖರ್ ಅವರು ಕೇಂದ್ರ ಸಚಿವರಿಗೆ ವಿವರಣೆ ನೀಡಿದರು. ಅಲ್ಲದೆ, ಅಚ್ಚುಕಟ್ಟಿನ ವ್ಯವಸ್ಥೆ ಬಗ್ಗೆ ಈ ವೇಳೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಿದ ಎಸ್ ಟಿ ಎಸ್:
    ಜನಸೇವಾ ವಿದ್ಯಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭವಾಗಿರುವ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದ ಕೇಂದ್ರ ಸಚಿವರಾದ ಸದಾನಂದಗೌಡ ಅವರು ಹಾಗೂ ಸಚಿವರಾದ ಸೋಮಶೇಖರ್ ಅವರು, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ವೇಳೆ 16 ಬೆಡ್‍ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ವ್ಯವಸ್ಥೆಗೆ ಬಿಬಿಎಂಪಿ ಮೂಲಕ ಸಚಿವರಾದ ಸೋಮಶೇಖರ್ ಅವರು ವ್ಯವಸ್ಥೆ ಮಾಡಿದ್ದರ ಬಗ್ಗೆ ವೈದ್ಯಾಧಿಕಾರಿಗಳು ಕೇಂದ್ರ ಸಚಿವರ ಗಮನಕ್ಕೆ ತಂದರು.

    ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಹಾಲಿ ಎಲ್ಲ ಕಡೆಗಳಿಂದ ಸೌಲಭ್ಯಗಳನ್ನು ಒದಗಿಸಿಕೊಂಡು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಆಕ್ಸಿಜನ್ ಬೆಡ್ ಗಳು, ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು, ಮೆಡಿಕಲ್ ಕಿಟ್ ಗಳು ಸೇರಿದಂತೆ ಆಸ್ಪತ್ರೆಗಳಲ್ಲಿ ಕೋವಿಡ್‍ಗೆ ಸಂಬಂಧಪಟ್ಟಂತೆ ಮೂಲಸೌಕರ್ಯವನ್ನು ಶಾಶ್ವತವಾಗಿ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇನೆ. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ ಮುಂಬರುವ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

    ಈ ಸಂದರ್ಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ವೈದ್ಯಾಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

  • ಜನ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಿಳಿದುಕೊಳ್ಳಬೇಕು: ಡಿವಿಎಸ್

    ಜನ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ತಿಳಿದುಕೊಳ್ಳಬೇಕು: ಡಿವಿಎಸ್

    ಮಡಿಕೇರಿ: ಜನ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.

    ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿವಿ, ತೆರಿಗೆ ಮತ್ತು ಸೆಸ್ ಮಧ್ಯೆ ಇರುವ ವ್ಯತ್ಯಾಸಗಳನ್ನು ಜನರು ಮೊದಲು ತಿಳಿದುಕೊಳ್ಳಬೇಕು. ತೆರಿಗೆ ಹಣವನ್ನು ಯಾವುದಕ್ಕೆ ಬೇಕಾದರೂ ಬಳಕೆ ಮಾಡಬಹುದು. ಅದರೆ ಸೆಸ್ ಹಣವನ್ನು ಯಾವುದಕ್ಕೆ ಸಂಗ್ರಹ ಮಾಡುತ್ತಿರೋ ಅದಕ್ಕೆ ಮಾತ್ರ ಅ ಹಣವನ್ನು ಬಳಕೆಮಾಡಲಾಗುತ್ತದೆ. 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕೊಡುತ್ತಿರುವುದು ಈ ಸೆಸ್ ಹಣ ಸಂಗ್ರಹದಿಂದಲೇ. ಕೃಷಿ ಸೆಸ್ ಅನ್ನು ಕೃಷಿ ಕಾರ್ಯಗಳಿಗೆ ಮಾತ್ರ ಬಳಸಲಾಗುತ್ತಿದೆ. ಇದನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

    ಇನ್ನೂ ರಾಜ್ಯ ಸರ್ಕಾರ ಡಕೋಟ ಎಕ್ಸ್‍ಪ್ರೆಸ್ ಎಂದಿದ್ದ ಸಿದ್ದರಾಮಯ್ಯ ಕುರಿತು ಮಾತಾನಾಡಿದ ಡಿವಿ ಸಿದ್ದರಾಮಯ್ಯ ಅವರಿಗೆ ಶಬ್ಧ ಪ್ರಯೋಗ ಗೊತ್ತಿಲ್ಲ ಅವರು ಹತ್ತು ಬಜೆಟ್ ಗಳನ್ನು ಮಂಡನೆ ಮಾಡಿದವರು ಆದರೂ ಅವರಿಗೆ ಪದ ಪ್ರಯೋಗ ಗೊತ್ತಿಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

    ತೆರಿಗೆ ವಸ್ತುವಿನ ಮೇಲೆ ತೆರಿಗೆ ಹಾಕಿದರೆ ಆ ವಸ್ತುವಿನಿಂದ ಬಂದ ತೆರಿಗೆಯನ್ನು ಯಾವುದೇ ಯೋಜನೆಗಳಿಗೆ ಬಳಸಬಹುದು. ಆದರೆ ಸೆಸ್ ಹಾಕಿದರೆ ಯಾವ ಉದ್ದೇಶವನ್ನು ಇಟ್ಟುಕೊಂಡು ಸೆಸ್ ಜಾರಿ ಆಗಿದೆಯೋ ಆ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತದೆ.

  • ಯತ್ನಾಳ್ ಬಾಯಿ ಮುಚ್ಚದಿದ್ರೆ ಕೇಂದ್ರ ನಾಯಕರು ಕ್ರಮಕೈಗೊಳ್ಳೋದು ನಿಶ್ಚಿತ: ಡಿವಿಎಸ್

    ಯತ್ನಾಳ್ ಬಾಯಿ ಮುಚ್ಚದಿದ್ರೆ ಕೇಂದ್ರ ನಾಯಕರು ಕ್ರಮಕೈಗೊಳ್ಳೋದು ನಿಶ್ಚಿತ: ಡಿವಿಎಸ್

    ಮಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇನ್ನು ಮುಂದೆ ಬಾಯಿ ಮುಚ್ಚದಿದ್ರೆ ಕೇಂದ್ರ ನಾಯಕರು ಸೂಕ್ತ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಎಚ್ಚರಿಸಿದ್ದಾರೆ.

    ಪುತ್ತೂರಿನಲ್ಲಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲೂ ಯತ್ನಾಳ್ ಇದೇ ರೀತಿ ಹೇಳಿಕೆ ನೀಡುತ್ತಿದ್ದರು. ಹಲವು ಎಚ್ಚರಿಕೆಯ ಬಳಿಕವೂ ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದ ಕಾರಣ ನಾನೇ ಅವರನ್ನು 6 ವರ್ಷ ಪಕ್ಷದಿಂದ ಉಚ್ಛಾಟಿಸಿದ್ದೆ. ಇದೀಗ ಮತ್ತೆ ಅವರು ಅಂಥದ್ದೇ ವರ್ತನೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ವೈಯಕ್ತಿವಾಗಿ ಯತ್ನಾಳ್ ಬಗ್ಗೆ ದ್ವೇಷವಿಲ್ಲ. ಆದರೆ ಅವರ ನಡವಳಿಗೆ ಬಗ್ಗೆ ಹೇಳುತ್ತೇನೆ. ಸಚಿವ ಸ್ಥಾನಕ್ಕಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಅಲ್ಲದೆ ಅವರನ್ನು ಕರೆದು ಮಾತನಾಡಬೇಕೆಂದು ಈ ರೀತಿ ವರ್ತಿಸುತ್ತಿದ್ದಾರೆ. ಅವರನ್ನು ಸಮಾಧಾನ ಮಾಡುವ ಪ್ರಶ್ನೆಯೇ ಇಲ್ಲ. ಇನ್ನೊಮ್ಮೆ ಯತ್ನಾಳ್ ಮಾತನಾಡಿದರೆ ಕೇಂದ್ರ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದರು.

    ಪಕ್ಷದ ವಿರುದ್ಧ, ಪಕ್ಷದ ನಾಯಕರ ವಿರುದ್ಧ ಬೀದಿ ಬದಿಯಲ್ಲಿ ಮಾತನಾಡುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಯತ್ನಾಳ್ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನುವುದು ನಾಯಕರ ಗಮನಕ್ಕೆ ಬಂದಿದೆ. ಪಕ್ಷಕ್ಕೆ, ಪಕ್ಷದ ನಾಯಕರಿಗೆ ಸಲಹೆ ಕೊಡುವ ಕೆಲಸವನ್ನು ಯತ್ನಾಳ್ ನಿಲ್ಲಿಸಬೇಕು. ಯತ್ನಾಳ್ ಸಲಹೆ ಅಗತ್ಯವಿಲ್ಲ, ಬೇಕಿದ್ದರೆ ಅವರು ಬೇರೆ ದಾರಿಯನ್ನು ಸಹ ನೋಡಿಕೊಳ್ಳಬಹುದು ಎಂದರು.

    ವಾಜಪೇಯಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದ ಯತ್ನಾಳ್ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದೇ ರೀತಿಯ ವರ್ತನೆಯನ್ನು ಮುಂದುವರಿಸಿದಲ್ಲಿ ಕೇಂದ್ರ ನಾಯಕರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಶಾಸಕರಾಗಿ ಕ್ಷೇತ್ರದ ಜನರ ಕೆಲಸ ಮಾಡಿ, ಪಕ್ಷದಲ್ಲಿ ಅಸಮಾಧಾನವಿದ್ದಲ್ಲಿ ಅದನ್ನು ಕೇಂದ್ರ ನಾಯಕರ ಗಮನಕ್ಕೆ ತನ್ನಿ. ರಾಜ್ಯದ ಕೆಲವು ನಾಯಕರು ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಬಿಟ್ಟು ಬೀದಿಯಲ್ಲಿ ಮಾತನಾಡುವುದನ್ನು ಪಕ್ಷ ಸಹಿಸುವುದಿಲ್ಲ ಎಂದು ಕಿಡಿಕಾರಿದರು.

  • ಸದಾನಂದಗೌಡರು ದೈವಿ ಪುರುಷ, ಅವರ ಬಗ್ಗೆ ನಾನೇನು ಮಾತಾಡಲ್ಲ- ಡಿವಿಎಸ್‍ಗೆ ಯತ್ನಾಳ್ ಟಾಂಗ್

    ಸದಾನಂದಗೌಡರು ದೈವಿ ಪುರುಷ, ಅವರ ಬಗ್ಗೆ ನಾನೇನು ಮಾತಾಡಲ್ಲ- ಡಿವಿಎಸ್‍ಗೆ ಯತ್ನಾಳ್ ಟಾಂಗ್

    ವಿಜಯಪುರ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಶಾಸಕ ಬಸನಗೌಡ ಪಾಟೀಲ್ ನಡುವಿನ ಮಾಕ್ಸಮರ ಮುಂದುವರಿದಿದ್ದು, ಸದಾನಂದಗೌಡರು ದೈವಿ ಪುರುಷರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎನ್ನುವ ಮೂಲಕ ಟಾಂಗ್ ನಿಡಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಸದಾನಂದಗೌಡ ಅವರಿಗೆ ಅಭಿನಂದನೆಗಳು, ಟೀಕೆ ಮಾಡ್ತಾರೆ ಬಹಳ ಹಿರಿಯರಿದ್ದಾರೆ. ಕೇಂದ್ರ ಮಂತ್ರಿಯಾಗಿ ಯಶಸ್ವಿ ಆಗಿದ್ದರಿಂದ ಇವತ್ತು ಅವರು ರಾಸಾಯನಿಕ ಗೊಬ್ಬರದ ಮಂತ್ರಿ ಆಗಿದ್ದಾರೆ. ಅದಕ್ಕೆ ಮಾತನಾಡುತ್ತಾರೆ. ಇನ್ನು ಅವರಿಗೆ ಹಕ್ಕಿದೆ, ನನ್ನ ಮೇಲೆ ಪ್ರೀತಿ ಇದೆ. ನಾವಿಬ್ಬರೂ 1992ರಲ್ಲಿ ಒಟ್ಟಿಗೆ ಶಾಸಕರಾಗಿದ್ದೇವೆ. ನನಗಿಂತಲೂ ಅವರು ಹಿರಿಯರೇನಲ್ಲ. ನಮ್ಮ ಹಿರಿಯರು ಯಡ್ಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡರು ನನ್ನ ಸಮಾನ ವಯಸ್ಕರರು ಎಂದರು.

    ಅವರಿಗೆ ನನ್ನ ಮೇಲೆ ಪ್ರೀತಿ ಮೊದಲಿನಿಂದಲು ಇದೆ. ರಾಜ್ಯಾಧ್ಯಕ್ಷ ಇದ್ದಾಗಿನಿಂದ ಪ್ರೀತಿ ಇದೆ. ಆವಾಗ ಅವರು 6 ವರ್ಷ ಪಕ್ಷದಿಂದ ನನ್ನ ಉಚ್ಛಾಟನೆ ಮಾಡಿದ್ದರಲ್ಲ ಆಗಿನಿಂದ ಇದೆ. ಅವರು ದೈವಿ ಪುರುಷರು, ಎಲ್ಲ ಅನುಭವಿಸಿದ್ದಾರೆ. ರಾಷ್ಟ್ರೀಯ ನಾಯಕರು ನಮ್ಮಂತಹ ಸಾಮಾನ್ಯ ಶಾಸಕರ ಬಗ್ಗೆ ಮಾತನಾಡಬಾರದು ಎಂದು ಕಾಲೆಳದರು.

    ಅವರು ರಾಷ್ಟ್ರಮಟ್ಟದ ನಾಯಕರು. ನಾವು ವಾಜಪೇಯಿ ಅವರ ಮಂತ್ರಿ ಮಂಡಲದಲ್ಲಿ ಮಂತ್ರಿ ಆದವರು. ಹಿರಿಯತನವನ್ನ ನೀವೆ ಲೆಕ್ಕ ಹಾಕಿ. ಅವರು ಏನೂ ಇರಲಾರದಾಗ ನಾವು ಕೇಂದ್ರ ಮಂತ್ರಿ ಆಗಿದ್ದೆವು. ಹೀಗಾಗಿ ನಾವು ಸಾಮಾನ್ಯ ಶಾಸಕ. ಅವರು ಈಗೀಗ ಮಂತ್ರಿ ಆಗಿದ್ದರೆ. ಅದಕ್ಕೆ ಅವರು ರಾಷ್ಟ್ರೀಯ ನಾಯಕರು ಎಂದು ಸದಾನಂದಗೌಡರಿಗೆ ವ್ಯಂಗ್ಯ ಮಾಡಿದರು.

  • ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿ ಹಾದಿ, ಬೀದಿಯಲ್ಲಿ ಮಾತಾಡ್ತಿದ್ದಾರೆ- ಯತ್ನಾಳ್ ವಿರುದ್ಧ ಡಿವಿಎಸ್ ಕಿಡಿ

    ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿ ಹಾದಿ, ಬೀದಿಯಲ್ಲಿ ಮಾತಾಡ್ತಿದ್ದಾರೆ- ಯತ್ನಾಳ್ ವಿರುದ್ಧ ಡಿವಿಎಸ್ ಕಿಡಿ

    ಬೆಂಗಳೂರು: ಯಾವುದನ್ನು, ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದರೆ ಅದಕ್ಕೆ ನಿಜವಾದ ಅರ್ಥ, ಗೌರವ ಬರುತ್ತದೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿ ಹಾದಿ, ಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಿಡಿಕಾರಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ರಾಷ್ಟ್ರೀಯ ನಾಯಕನಲ್ಲ, ರಾಜ್ಯದ ಅಧ್ಯಕ್ಷ ಅಥವಾ ಒನ್ನಾವುದೋ ಸ್ಥಾನದಲ್ಲಿ ಇಲ್ಲ. ಹೇಳಿಕೆ ನೀಡುವ ಸ್ಥಾನಮಾನದಲ್ಲಿ ಸಹ ಅವರಿಲ್ಲ. ಕೇವಲ ಒಬ್ಬ ಶಾಸಕ ಮಾತ್ರ. ಆದರೂ ಮಾಧ್ಯಮಗಳ ಮುಂದೆ ಏನೇನೋ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಾದರೂ ಹೇಳುವುದಿದ್ದರೆ ರಾಷ್ಟ್ರೀಯ ನಾಯಕರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳ ಬಳಿ ಚರ್ಚಿಸಬೇಕು. ಹೀಗೆ ಬೀದಿಯಲ್ಲಿ ಮಾತನಾಡುವುದರಿಂದ ಅವರ ಭವಿಷ್ಯದ ಮೇಲೆ ಒಳ್ಳೆಯ ಪರಿಣಾಮ ಬೀರಲ್ಲ. ಕೆಲವನ್ನು ಅವರೇ ಅರ್ಥ ಮಾಡಿಕೊಳ್ಳಬೇಕು. ಅವರುಗೂ ಸಮಯ ಬರುತ್ತೆ, ಕಾಯಬೇಕು. ಆದರೆ ಅವರ ಇತ್ತೀಚಿನ ಬೆಳವಣಿಗೆ ನೋಡಿದರೆ ಅವರ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯದಲ್ಲಿ, ಅದನ್ನು ಉಳಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ, ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.

    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಮತ್ತೆ ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ವಿರುದ್ಧ ತಮ್ಮ ಮುನಿಸನ್ನ ತೋರಿಸಿದ್ದಾರೆ. ಇಂದು ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುತ್ಧಳಿ ಲೋಕಾರ್ಪಣೆ ಕಾರ್ಯಕ್ರಮದ ಬ್ಯಾನರ್ ಗಳಲ್ಲಿ ಸಿಎಂ ಫೋಟೋವನ್ನ ಮುದ್ರಿಸಿರಲಿಲ್ಲ. ಕಾರ್ಯಕ್ರಮದ ವೇದಿಕೆಯ ಬ್ಯಾನರ್ ನಲ್ಲಿ ಸಿಎಂ ಯಡ್ಡಿಯೂರಪ್ಪ ಭಾವಚಿತ್ರ ಹಾಕದೆ ಎಲ್.ಕೆ.ಅಡ್ವಾಣಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಭಾವಚಿತ್ರ ಮಾತ್ರ ಮುದ್ರಣ ಮಾಡಲಾಗಿತ್ತು.

    ಶಾ ಬರೋದಕ್ಕೆ ಮೊದಲೇ ಬದಲಾವಣೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಬರೋದಕ್ಕೂ ಮೊದಲೇ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಅಮಿತ್ ಶಾ ಜ.16ಕ್ಕೆ ವಿಜಯಪುರಕ್ಕೂ ಬರುತ್ತಿದ್ದಾರೆ. ಸಂಕ್ರಮಣಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುತ್ತೋ ಅಥವಾ ಬದಲಾವಣೆ ಆಗುತ್ತೋ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಆಗಬಹುದು. ಉತ್ತರ ಕರ್ನಾಟಕ, ವಿಜಯಪುರ ಜಿಲ್ಲೆಗೆ ಒಳಿತಾಗಲಿದೆ ಎಂದು ಹೇಳಿದರು.

  • ಲವ್ ಜಿಹಾದ್ ವಿರುದ್ಧ ಕಾನೂನು ಖಚಿತ: ಸದಾನಂದಗೌಡ

    ಲವ್ ಜಿಹಾದ್ ವಿರುದ್ಧ ಕಾನೂನು ಖಚಿತ: ಸದಾನಂದಗೌಡ

    ಮಡಿಕೇರಿ: ಮತಾಂತರ ಮಾಡುವುದಕ್ಕಾಗಿಯೇ ಮದುವೆ ಆಗುವುದನ್ನು ತಡೆಗಟ್ಟುವುದಕ್ಕಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

    ಕೊಡಗಿನ ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರುವ ವಿಷಯ ಹಿಂದಿನಿಂದಲೂ ಚರ್ಚೆಯಲ್ಲಿತ್ತು. ಇದೀಗ ಕಾನೂನು ತರುವುದಕ್ಕೆ ಕಾಲ ಕೂಡಿ ಬಂದಿದೆ. ಅಲಹಬಾದ್ ಕೋರ್ಟ್ ಕೂಡ ಲವ್ ಜಿಹಾದ್ ವಿರುದ್ಧ ತೀರ್ಪು ನೀಡಿದೆ. ಉತ್ತರ ಪ್ರದೇಶ ಸಿಎಂ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದಿದ್ದಾರೆ ಎಂದರು.

    ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗುವುದು. ಈಗಾಗಲೇ ಪಕ್ಷದ ಕೋರ್ ಕಮಿಟಿಯಲ್ಲೂ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ತರಲಾಗುವುದು. ಮದುವೆಯಾಗಿ ಬಳಿಕ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವುದು ಸರಿಯಲ್ಲ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

    ಕೊಡಗಿನಲ್ಲೇ ಮೊಮ್ಮಗನ ನಾಮಕರಣ ಮಾಡಿದ ಡಿವಿಎಸ್ ಸದಾ ರಾಜಕಾರಣದ ಗುಂಗಿನಲ್ಲೇ ಬ್ಯುಸಿಯಾಗಿರುತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಇಂದು ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಮೊಮ್ಮಗನ ನಾಮಕರಣ ಕಾರ್ಯಕ್ರಮಮದಲ್ಲಿ ಭಾಗವಹಿಸಿ ಸಂತೋಷದಿಂದ ಕಾಲ ಕಳೆದರು.

    ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ತಮ್ಮ ಸೋದರ ಸಂಬಂಧಿ ನಾಣಯ್ಯ ಅವರ ಮನೆಯಲ್ಲಿ ತಮ್ಮ ಮೊಮ್ಮಗನ ನಾಮಕರಣದಲ್ಲಿ ಭಾಗಿಯಾಗಿ ಇಡೀ ದಿನ ಕಾಲ ಕಳೆದರು. ಕೋವಿಡ್ ಇರುವ ಹಿನ್ನೆಲೆಯಲ್ಲಿ ಬೇರೆ ಯಾರಿಗೂ ಕೂಡ ಆಹ್ವಾನ ನೀಡಿರಲಿಲ್ಲ. ಸದಾನಂದಗೌಡರ ಮಗ ಕಾರ್ತಿಕ್, ಅವರ ಪತ್ನಿ ಮತ್ತು ಬೀಗರಾದ ನಾಣಯ್ಯ ಅವರ ಕುಟುಂಬದವರು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾಣಯ್ಯ ಅವರ ಪತ್ನಿ ಸುಧಾನಾಣಯ್ಯ ತಮ್ಮ ಮೊಮ್ಮಗನನ್ನು ಕಾಲ ಮೇಲೆ ಮಲಗಿಸಿಕೊಂಡು ವಿವಿಧ ಆಚರಣೆಗಳನ್ನು ನೆರವೇರಿಸಿದರು.

    ಈ ವೇಳೆ ಸದಾನಂದಗೌಡ ಮತ್ತು ಪತ್ನಿ ಡಾಟಿ ಸದಾನಂದಗೌಡ ಅವರು ಮೊಮ್ಮಗನ ಕೊರಳಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ಹಾಕಿದರು. ಅಲ್ಲದೆ ಬೆಳ್ಳಿಯ ಹೊಳಲೆಯಲ್ಲಿ ಬೆಣ್ಣೆ ತಿನ್ನಿಸಿ ಹಾರೈಸಿದರು. ಅರೆಗೌಡ ಸಂಪ್ರದಾಯದಂತೆ ನಾಮಕರಣ ಮಾಡಿ ಬಳಿಕ ತೊಟ್ಟಿಲಿಗೆ ಹಾಕಿ ತೂಗಿ ಸಂಭ್ರಮಿಸಿದರು. ಮೊಮ್ಮಗನಿಗೆ ದಕ್ಷ್ ಎಂದು ಹೆಸರಿಟ್ಟು ಹಾರೈಸಿದ್ದೇವೆ. ದೊಡ್ಡವರಾದ ಮೇಲೆ ಯಾವ ಹೆಸರಿಟ್ಟುಕೊಳ್ಳುತ್ತಾರೋ ಯಾರಿಗೆ ಗೊತ್ತು ಎಂದು ಸದಾನಂದಗೌಡ ಹಾಸ್ಯವಾಡಿದರು.

  • ರೋಸ್ ಈರುಳ್ಳಿ ರಫ್ತು ಸ್ಥಗಿತ – ರಾಜ್ಯ ರೈತ ಮುಖಂಡರಿಂದ ಕೇಂದ್ರ ಸಚಿವರಿಗೆ ಮನವಿ

    ರೋಸ್ ಈರುಳ್ಳಿ ರಫ್ತು ಸ್ಥಗಿತ – ರಾಜ್ಯ ರೈತ ಮುಖಂಡರಿಂದ ಕೇಂದ್ರ ಸಚಿವರಿಗೆ ಮನವಿ

    ನವದೆಹಲಿ: ರೋಸ್ ಈರುಳ್ಳಿ ರಫ್ತನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಹತ್ತು ಸಾವಿರ ಟನ್ ಈರುಳ್ಳಿ ಹಾಳಾಗಲಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರಿಗೆ ರೈತರ ನಿಯೋಗ ಮನವಿ ಮಾಡಿದೆ.

    ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತ ಮುಖಂಡರು ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಸದಾನಂದಗೌಡರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು.

    ರಫ್ತು ಸ್ಥಗಿತ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆದ ಸುಮಾರು 10 ಸಾವಿರ ಟನ್ ರೋಸ್ ಈರುಳ್ಳಿ ಹಾಳಾಗಲಿದೆ. ಇದರಿಂದ ರೈತರು ನಷ್ಟ ಅನುಭವಿಸಲಿದ್ದಾರೆ. ಹೀಗಾಗಿ ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದರು.

    ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಸದಾನಂದಗೌಡರು, ಕೂಡಲೇ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕ ಸಚಿವರು ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

  • ರಾಜ್ಯದಲ್ಲಿ ಯೂರಿಯಾ ಕೊರತೆ – ರಸಗೊಬ್ಬರ ಒದಗಿಸುವಂತೆ ಡಿವಿಎಸ್‍ಗೆ ಬಿ.ಸಿ ಪಾಟೀಲ್ ಮನವಿ

    ರಾಜ್ಯದಲ್ಲಿ ಯೂರಿಯಾ ಕೊರತೆ – ರಸಗೊಬ್ಬರ ಒದಗಿಸುವಂತೆ ಡಿವಿಎಸ್‍ಗೆ ಬಿ.ಸಿ ಪಾಟೀಲ್ ಮನವಿ

    ನವದೆಹಲಿ: ರಾಜ್ಯಕ್ಕೆ ಅಗತ್ಯ ಪ್ರಮಾಣ ರಸಗೊಬ್ಬರ ಒದಗಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ ಅವರಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ ಹಿನ್ನೆಲೆ ದೆಹಲಿಯ ಶಾಸ್ತ್ರೀ ಭವನದಲ್ಲಿರುವ ಕಚೇರಿಯಲ್ಲಿ ಭೇಟಿಯಾದ ಬಿ.ಸಿ ಪಾಟೀಲ್, ರಾಜ್ಯದಲ್ಲಿ ಸೃಷ್ಟಿಯಾಗಿರುವ ಯೂರಿಯಾ ಗೊಬ್ಬರ ಅಭಾವದ ಬಗ್ಗೆ ಮಾಹಿತಿ ನೀಡಿದರು. ಮುಂಗಾರು ಮಳೆ ಉತ್ತಮವಾಗುತ್ತಿದ್ದು ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಹೀಗಾಗಿ ರಾಜ್ಯದಲ್ಲಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಕೇಂದ್ರ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

    ಬಿ.ಸಿ ಪಾಟೀಲ್ ಅವರಿಂದ ಮಾಹಿತಿ ಪಡೆದುಕೊಂಡ ಡಿ.ವಿ ಸದಾನಂದಗೌಡ ಅಧಿಕಾರಗಳ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಈಗಾಗಲೇ ರಾಜ್ಯ ಸರ್ಕಾರ ಅಗತ್ಯತೆಗೆ ಅನುಸಾರ ರಸಗೊಬ್ಬರ ಪೂರೈಕೆ ಮಾಡಿದ್ದು, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

  • ಕನ್ನಡಿಗರ ನೆರವಿಗೆ ನಿಂತ ಕೇಂದ್ರ- ವಿಶೇಷ ವಿಮಾನ, ರೈಲು ವ್ಯವಸ್ಥೆ

    ಕನ್ನಡಿಗರ ನೆರವಿಗೆ ನಿಂತ ಕೇಂದ್ರ- ವಿಶೇಷ ವಿಮಾನ, ರೈಲು ವ್ಯವಸ್ಥೆ

    ನವದೆಹಲಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಉತ್ತರ ಭಾರತದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ದೆಹಲಿಯಿಂದ ಕರ್ನಾಟಕಕ್ಕೆ ಇನ್ನೆರಡು ದಿನಗಳಲ್ಲಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

    ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಉತ್ತರ ಭಾರತದಲ್ಲಿ ಸಿಲುಕಿರುವ ಕನ್ನಡಿಗರು ರಾಜ್ಯಕ್ಕೆ ಮರಳುವುದಕ್ಕಾಗಿ ವಿಶೇಷ ರೈಲೊಂದನ್ನು ಓಡಿಸಲು ರೈಲ್ವೆ ಇಲಾಖೆಯು ಒಪ್ಪಿಗೆ ನೀಡಿದೆ. ಈ ಸಂಬಂಧ ರೈಲ್ವೆ ಸಚಿವ ಪಿಯುಶ್ ಗೋಯಲ್ ಜೊತೆಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಒಂದೆರಡು ದಿನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅನಿವಾಸಿ ಭಾರತೀಯರನ್ನ ಕರೆ ತರಲು ಮುಂದಾದ ಕೇಂದ್ರ- ಹೊರ ರಾಜ್ಯದ ಕನ್ನಡಿಗರನ್ನ ಮರೆತ ರಾಜ್ಯ ಸರ್ಕಾರ

    ದೆಹಲಿಯ ಹೊರತಾಗಿ ಹರ್ಯಾಣ, ಪಂಜಾಬ್ ಮತ್ತಿತರ ಸಮೀಪದ ಸ್ಥಳಗಳಿಂದಲೂ ಜನರು ರಾಜ್ಯಕ್ಕೆ ವಾಪಸ್ ಆಗಬಹುದಾಗಿದೆ. ಈ ನಿಟ್ಟಿನಲ್ಲಿ ದೆಹಲಿಯ ಸುತ್ತ ಬೇರೆ ನೇರ ಪ್ರದೇಶಗಳಲ್ಲಿರುವ ಕನ್ನಡಿಗರನ್ನು ಕೂಡಲೇ ದೆಹಲಿಗೆ ಕರೆಸಿಕೊಂಡು ಅವರನ್ನೂ ಇದೇ ರೈಲಿನಲ್ಲಿ ಕರ್ನಾಟಕಕ್ಕೆ ಕಳುಹಿಸಿಕೊಡಲು ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ದೆಹಲಿ ಮತ್ತಿತರ ಸ್ಥಳಗಳಿಂದ ತಮ್ಮ ಸ್ವಂತ ವಾಹನದಲ್ಲಿ ಕರ್ನಾಟಕಕ್ಕೆ ಮರಳಲು ಇಚ್ಛಿಸಿದ ಅನೇಕ ದೆಹಲಿ ಕನ್ನಡಿಗರು ಹಾಗೂ ಯಾತ್ರಾರ್ಥಿಗಳಿಗೂ ಅಗತ್ಯ ಪರವಾನಿಗೆ ನೀಡಲಾಗುತ್ತಿದೆ.

    ದುಬೈನಿಂದ 2 ವಿಶೇಷ ವಿಮಾನ:
    ಅರಬ್ ದೇಶಗಳಲ್ಲಿರುವ ಕನ್ನಡಿಗರು ಸ್ವದೇಶಕ್ಕೆ ಮರಳಲು ಎರಡು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿದ್ದು, ಮೇ 12ರಂದು ಯುಎಇನಿಂದ ಮಂಗಳೂರಿಗೆ ವಿಮಾನ ಸಂಚರಿಸುವುದನ್ನು ವಿದೇಶಾಂಗ ಸಚಿವರು ಖಚಿತಪಡಿಸಿದ್ದಾರೆ. ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದ್ದು, ಅದರ ವೇಳಾಪಟ್ಟಿ ಪ್ರಕಟವಾಗಬೇಕಿದೆ ಎಂದು ಸದಾನಂದಗೌಡ ಅವರು ತಿಳಿಸಿದ್ದಾರೆ.

  • ಪಾದರಾಯನಪುರ ಘಟನೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ: ಡಿವಿಎಸ್

    ಪಾದರಾಯನಪುರ ಘಟನೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ: ಡಿವಿಎಸ್

    ನವದೆಹಲಿ: ಪಾದರಾಯಣಪುರ ಘಟನೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ. ಇದೊಂದು ಪೂರ್ವ ನಿಯೋಜಿತ ಘಟನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಆರೋಪಿಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನ ಎನ್ನುವುದು ಜವಾಬ್ದಾರಿಯುತ ಸ್ಥಾನ, ಆ ಸ್ಥಾನದಲ್ಲಿ ಕುಳಿತು ತಪ್ಪಿತಸ್ಥರ ಪರ ಮಾತನಾಡುವುದು ಗಮನಿಸಿದರೇ ಇದರಲ್ಲಿ ಜಮೀರ್ ಅಹ್ಮದ್ ಪಾತ್ರ ಸ್ಪಷ್ಟವಾಗಿದೆ. ಜಮೀರ್ ಕಾರಣದಿಂದಲೇ ಆ ಕ್ಷೇತ್ರದ ಪರಿಸ್ಥಿತಿ ಹೀಗಾಗಿದೆ. ಘಟನೆಯನ್ನು ಸಮರ್ಥಿಸಿಕೊಳ್ಳುವುದು ನೋಡಿದರೇ ಇದು ಅವರ ಆಂತರಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತಿದೆ ಇದನ್ನು ಸುಮ್ಮನೆ ಬಿಟ್ಟರೆ ಕೊರೊನಾಗಿಂತ ವೇಗವಾಗಿ ಹರಡಲಿದೆ ಎಂದು ಹರಿಹಾಯ್ದರು.

    ಆಶಾ ಕಾರ್ಯಕರ್ತೆರ ಮೇಲೆ ದಾಳಿ ಆದಾಗಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಅದನ್ನು ಲಘುವಾಗಿ ಪರಿಗಣಿಸಿದಕ್ಕಾಗಿ ಈ ಘಟನೆ ನಡೆದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ರಾಜ್ಯ ಗೃಹ ಸಚಿವರು ಕಠೋರ ನಿರ್ಧಾರಗಳಿಗೆ ಸೂಚನೆ ನೀಡಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.

    ಪ್ರತಿಕೂಲ ವಾತಾವರಣ ಸೃಷ್ಟಿಸುವ ಜಮೀರ್ ಅಹ್ಮದ್ ಶಾಸಕ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ. ಗೌರವದ ಗಂಧ ಗಾಳಿ ಗೊತ್ತಿದ್ದರೆ ರಾಜೀನಾಮೆ ಕೇಳಬಹುದಿತ್ತು. ರಾಜಕೀಯ ಅವಕಾಶಕಕ್ಕಿರುವ ಜನರಿಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.