Tag: ಡಿ.ಕೆ.ಶಿವಕುಮಾರ್

  • ಡಿಕೆಶಿ ಕನಸಿಗೆ ತಣ್ಣೀರೆರಚಿದ ಕೇಂದ್ರ ಸರ್ಕಾರ – ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಕ್ಕೆ ಕೇಂದ್ರ ತಡೆ

    – ರಾಜ್ಯ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಕರ್ನಾಟಕ ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ತಡೆಯೊಡ್ಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಎರಡು ತಿಂಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಈ ನಿರ್ಧಾರವನ್ನು ಮುಂದುವರಿಸದಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

    2024ರ ಜುಲೈನಲ್ಲಿ ಕರ್ನಾಟಕದ ಸಂಪುಟವು ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಡಿಸಿದ ಈ ಯೋಜನೆಯನ್ನು ಸ್ಥಳೀಯ ಜನರ ಮತ್ತು ಶಾಸಕರ ಬೇಡಿಕೆ ಆಧರಿಸಿ ಒಪ್ಪಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ಸ್ಥಳೀಯರ ವಿರೋಧವೇ ಮುಖ್ಯ ಕಾರಣ ಎಂದು ಹೇಳಲಾಗಿದೆ. ಜೊತೆಗೆ, ಈ ನಿರ್ಧಾರವನ್ನು ಜಾರಿಗೊಳಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದು ಎಂದು ಕೇಂದ್ರವು ಎಚ್ಚರಿಕೆ ನೀಡಿದೆ.

    ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಈ ವಿಷಯವನ್ನು ದೃಢಪಡಿಸಿದ್ದಾರೆ. ಕೇಂದ್ರಕ್ಕೆ ಸಂಪುಟದ ನಿರ್ಧಾರದ ನಂತರ ತಕ್ಷಣವೇ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಆದರೆ, ಕೇಂದ್ರದಿಂದ ಬಂದ ಉತ್ತರ ಸಕಾರಾತ್ಮಕವಾಗಿಲ್ಲ ಎಂದು ಅವರು ಹೇಳಿದ್ದಾರೆ.

    ಈ ಪ್ರಸ್ತಾವನೆಯು ಆರಂಭದಿಂದಲೂ ವಿವಾದಕ್ಕೆ ಕಾರಣವಾಗಿತ್ತು. ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ‘ನಾನು ಜೀವಂತವಿರುವವರೆಗೆ ರಾಮನಗರ ಜಿಲ್ಲೆಯ ಹೆಸರು ಬದಲಾಗಲು ಬಿಡುವುದಿಲ್ಲ’ ಎಂದು ಅವರು ಘೋಷಿಸಿದ್ದರು. ಇದೇ ವೇಳೆ, ಬಿಜೆಪಿಯು ಈ ನಿರ್ಧಾರಕ್ಕೆ ಧಾರ್ಮಿಕ ತಿರುವು ನೀಡಿ, ‘ರಾಮನ ಹೆಸರಿರುವ ಜಿಲ್ಲೆಯನ್ನು ಬದಲಾಯಿಸುವುದು ಕಾಂಗ್ರೆಸ್‌ನ ರಾಮ ವಿರೋಧಿ ಮನೋಭಾವವನ್ನು ತೋರಿಸುತ್ತದೆ’ ಎಂದು ಆರೋಪಿಸಿತ್ತು.

    ಡಿ.ಕೆ.ಶಿವಕುಮಾರ್ ಅವರು, ‘ರಾಮನಗರದ ಜನರು ಮೂಲತಃ ಬೆಂಗಳೂರಿನವರೇ. ಬೆಂಗಳೂರು ಎಂಬ ಜಾಗತಿಕ ಖ್ಯಾತಿಯ ಹೆಸರನ್ನು ಜಿಲ್ಲೆಗೆ ಜೋಡಿಸುವುದರಿಂದ ಅಭಿವೃದ್ಧಿ ಮತ್ತು ಯುವ ಜನರಿಗೆ ಅವಕಾಶಗಳು ದೊರೆಯುತ್ತವೆ’ ಎಂದು ತಮ್ಮ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಕೇಂದ್ರದ ತೀರ್ಮಾನದಿಂದ ಈ ಯೋಜನೆಗೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.

    ರಾಮನಗರ ಜಿಲ್ಲೆಯು 2007ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲೆಯಿಂದ ಪ್ರತ್ಯೇಕಗೊಂಡಿತ್ತು. ಈ ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ತಾಲೂಕುಗಳು ಸೇರಿವೆ. ಈ ಘಟನೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಜಟಾಪಟಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

  • ಒತ್ತುವರಿ ಮಾಡಿಲ್ಲ ಎಂದಾದರೆ ಕುಮಾರಸ್ವಾಮಿ ಏಕೆ ಗಾಬರಿಯಾಗಬೇಕು: ಡಿ.ಕೆ.ಶಿವಕುಮಾರ್ ಪ್ರಶ್ನೆ

    ಒತ್ತುವರಿ ಮಾಡಿಲ್ಲ ಎಂದಾದರೆ ಕುಮಾರಸ್ವಾಮಿ ಏಕೆ ಗಾಬರಿಯಾಗಬೇಕು: ಡಿ.ಕೆ.ಶಿವಕುಮಾರ್ ಪ್ರಶ್ನೆ

    – ನಾನು,‌ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡಿಲ್ಲ ಎಂದ ಡಿಸಿಎಂ

    ನವದೆಹಲಿ: ಕುಮಾರಸ್ವಾಮಿ ಒತ್ತುವರಿ ಮಾಡಿಕೊಂಡಿಲ್ಲ ಎಂದರೆ ಮಾಡಿಕೊಂಡಿಲ್ಲ, ಜಮೀನು ಕದ್ದಿಲ್ಲ ಎಂದರೆ ಕದ್ದಿಲ್ಲ. ಎಲ್ಲಕ್ಕೂ ಅಳತೆ, ದಾಖಲೆ ಇರುತ್ತದೆ ಅಲ್ಲವೇ? ಇದಕ್ಕೂ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ಗೂ ಏನು ಸಂಬಂಧ? ಕುಮಾರಸ್ವಾಮಿ ಅವರು ಏಕೆ ಗಾಬರಿಯಾಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಛೇಡಿಸಿದ್ದಾರೆ.

    ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಸರಣಿ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು. ಕಾಂಗ್ರೆಸ್‌ಗೆ ನಾನೇ ಟಾರ್ಗೆಟ್, ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, ನಾನು ಹಾಗೂ ಸಿದ್ದರಾಮಯ್ಯ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನ್ಯಾಯಾಲಯ ಹೇಳಿದಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಕೇತಗಾನಹಳ್ಳಿ ಸುದ್ದಿಗೆ ನಾವು ಹೋಗಿಲ್ಲ. ನಮಗೆ ಈ ವಿಚಾರ ಗೊತ್ತೂ ಇಲ್ಲ. ಯಾರೋ ಇದರ ಬಗ್ಗೆ ಪಿಐಎಲ್ ಹಾಕಿದ್ದಾರೆ. ಇದು ಬಹಳ ವರ್ಷದಿಂದ ನಡೆದಿದೆ. ಭೂಒತ್ತುವರಿ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯವು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಇದರ ಬಗ್ಗೆ ನಾವು ಮಾಧ್ಯಮದಲ್ಲಿ ಓದಿದ್ದೇವೆ. ನ್ಯಾಯಾಲಯ ಕ್ರಮ ತೆಗೆದುಕೊಳ್ಳಲು ಗಡುವು ನೀಡಿದ ಕಾರಣಕ್ಕೆ ಅಧಿಕಾರಿಗಳು ಹೋಗಿ ಅಳತೆ ಮಾಡಿದ್ದಾರೆ ಎಂದರು.

    ವಾಟ್ಸಪ್ ಅಲ್ಲಿ ಬಂದ ಸುದ್ದಿ ನೋಡಿದೆ. ಅಧಿಕಾರಿಗಳು ನೋಟಿಸ್ ನೀಡದೆ ಅಳತೆ ಮಾಡಲು ಸಾಧ್ಯವೇ? ಮೊದಲಿನಿಂದಲೂ ಅಳತೆ ಮಾಡಲಾಗಿತ್ತು. ಅವರ ಸಿಬ್ಬಂದಿ ಹೆಚ್ಚುವರಿ ಭೂಮಿಯಿದ್ದರೆ ವಾಪಸ್ ತೆಗೆದುಕೊಳ್ಳಿ ಎಂದು ಏಕೆ ಪತ್ರ ಬರೆದಿದ್ದಾರೆ? ಎಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಅವರು ನಮ್ಮ ಮೇಲೆ ಈ ಹಿಂದೆ ಏನು ಮಾತನಾಡಿದ್ದಾರೆ ಎಂಬುದನ್ನು ಈಗ ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

    ನಮ್ಮದನ್ನೂ ಹೊರಗೆ ತೆಗೆದಿಡಲಿ
    ನಮ್ಮದೂ ಬೇಕಾದಷ್ಟು ದಾಖಲೆ ತೆಗೆದಿಟ್ಟುಕೊಂಡಿದ್ದಾರಂತೆ.‌ ನಾವು ಏನಾದರೂ ಒತ್ತುವರಿ ಮಾಡಿಕೊಂಡಿದ್ದರೆ ತೆಗೆದಿಡಲಿ. ಎಲ್ಲವೂ ನನ್ನ ಬಳಿ ಇದೆ, ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಅವರು ಹೇಳಿದ್ದ ನೆನಪು. ಮಧ್ಯರಾತ್ರಿ ಒತ್ತಿಸಿಕೊಂಡಿದ್ದಾರೆ, ಬರೆಸಿಕೊಂಡಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡಿದ್ದರು. ಕಾಸು ಕೊಟ್ಟು ಬರೆಸಿಕೊಂಡಿದ್ದೇವೆ. ಪುಗಸಟ್ಟೆ ಯಾರೂ ಬರೆದು ಕೊಡುವುದಿಲ್ಲ. ನಾನು ಒತ್ತುವರಿಗೆ ಯಾರಿಗಾದರೂ ಭಯಪಡಿಸಿದ್ದರೆ ಅವರಿಂದ ದೂರು ದಾಖಲಿಸಲಿ ಅಥವಾ ಇವರೇ ದೂರು ನೀಡಲಿ. ಇವರು ಮಾತ್ರ ಶುದ್ಧ, ನಾವು ಅಶುದ್ಧವೇ? ನಾವು ಯಾವುದೇ ದ್ವೇಷದ ರಾಜಕಾರಣಕ್ಕೆ ಹೋಗಿಲ್ಲ. ನನ್ನ ಮೇಲೂ ಬೇಕಾದಷ್ಟು ಪಿಐಎಲ್ ಹಾಕಿದ್ದಾರೆ ಎಂದು ಹರಿಹಾಯ್ದರು.

    ನನ್ನ ಮೇಲೂ ಈ ಹಿಂದೆ ಅವರು ಬೇಕಾದಷ್ಟು ಆರೋಪ ಮಾಡಿಲ್ಲವೇ? ಗ್ರಾನೈಟ್ ಅದು, ಇದು ಕದ್ದಿದ್ದೀರಿ ಎಂದು ಹೇಳಿರಲಿಲ್ಲವೇ? ನನ್ನ ಹೆಂಡತಿ, ತಂಗಿ, ತಮ್ಮನ ಮೇಲೆ ತನಿಖೆ ನಡೆದಿರಲಿಲ್ಲವೇ? ಬಳ್ಳಾರಿಗೆ ಹೋಗಿ ಕದ್ದುಕೊಂಡು ಬಂದಿದ್ದೀರಿ ಎಂದು ಪ್ರಕರಣ ದಾಖಲಿಸಿರಲಿಲ್ಲವೇ? ಇವರ ಅಣ್ಣ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಬೇಕಾದಂತೆ ಅರ್ಜಿ ಬರೆದುಕೊಟ್ಟಿರಲಿಲ್ಲವೇ? ನಮಗೆಲ್ಲಾ ಇದು ತಿಳಿದಿಲ್ಲವೇ? ಸುಮ್ಮನೆ ಕಾಂಗ್ರೆಸ್, ಕಾಂಗ್ರೆಸ್ ಎನ್ನುತ್ತಾರೆ.‌ ಯಾವ ಕಾಂಗ್ರೆಸ್ಸಿಗರು ಇವರ ವಿಚಾರಕ್ಕೆ ಹೋಗಿಲ್ಲ. ಇವರ ಜಮೀನು ಇದ್ದರೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೇ ಬಿಟ್ಟುಕೊಡಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

    ಗ್ರೇಟರ್ ಬೆಂಗಳೂರಿನಿಂದ ಲೂಟಿ ಮಾಡಲಾಗುತ್ತಿದೆ, ನಾವು ಯಾವುದೇ ಲೂಟಿ ಮಾಡುತ್ತಿಲ್ಲ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಅವರಿಗೆ ರಾಜಕೀಯವಾಗಿ ಜೀವ ಕೊಟ್ಟ ರಾಮನಗರ ಜಿಲ್ಲೆಗೆ ಹೊಸ ರೂಪ ನೀಡಲು ನಾವು ಈ ನಿರ್ಧಾರ ಮಾಡಿದ್ದೇವೆ. ಆದರೆ ಅವರು ರಾಜಕೀಯ ಆರೋಪ ಮಾಡಬೇಕು ಎಂದು ಮಾಡುತ್ತಿದ್ದಾರೆ. ಅವರು ನನ್ನನ್ನು ಬೈಯದೇ ಇನ್ಯಾರನ್ನು ಬೈಯುತ್ತಾರೆ ಎಂದರು.

    ಕುಮಾರಸ್ವಾಮಿ ಅವರೇ ಹೆಚ್ಚು ಅನುಕೂಲ ಪಡೆದವರು. ಆದರೂ ನಿಮ್ಮ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ನೀವೇ ಅನುಕೂಲ ಮಾಡಿಕೊಟ್ಟಿದ್ದೀರಿ ಅಲ್ಲವೇ ಎಂದು ಮರು ಪ್ರಶ್ನಿಸಿದಾಗ, ಅವರ ಜಮೀನು ಪಕ್ಕದಲ್ಲಿ ಇದೆ ಎನ್ನುವ ಕಾರಣಕ್ಕೆ ನಾವು ದ್ವೇಷ ರಾಜಕಾರಣ ಮಾಡಲು ಆಗುತ್ತದೆಯೇ? ಅವರ ತಂದೆ 5-6 ಸಾವಿರಕ್ಕೆ 1984-85 ರಲ್ಲಿ ಅವರ ಅತ್ತೆ, ನಾದಿನಿ ಹೆಸರಿಗೆ ಜಮೀನು ತೆಗೆದುಕೊಂಡಿದ್ದರು. ಅದು ಕುಮಾರಸ್ವಾಮಿ ಅವರಿಗೆ ಉಡುಗೊರೆಯಾಗಿ ಬಂದಿದೆ. 7-8 ಕೋಟಿಗೆ ಹೋಗುತ್ತದೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದಾದರೆ 10 ಕೋಟಿಯಾಗುತ್ತದೆ. ನಾವು 2-3 ಸಾವಿರಕ್ಕೆ ಒಂದು ಕಾಲದಲ್ಲಿ ಜಮೀನು ತೆಗೆದುಕೊಂಡಿದ್ದೆವು. ಅವುಗಳ ಬೆಲೆ ಸಹ ಹೆಚ್ಚಾಗಿದೆ ಏನು ಮಾಡಲು ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

    ಏನಾದರೂ ಒಳ್ಳೆ ಕೆಲಸಗಳು ಮಾಡುವಾಗ ಅಡಚಣೆಗಳು ಉಂಟಾಗುತ್ತವೆ. ಅದಕ್ಕೆ ಕಲ್ಲೆಸೆಯುವವರು, ಅಡಚಣೆ ಉಂಟು ಮಾಡುವವರು ಇರುತ್ತಾರೆ. ಈ ಜಾಗವನ್ನು ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ರಾಮನಗರ, ಸಾತನೂರು, ಸೋಲೂರು, ತ್ಯಾಮಗೊಂಡ್ಲು ಸೇರಿದಂತೆ ಒಟ್ಟು ಐದು ಕಡೆ ನೋಟಿಫಿಕೇಶನ್ ಮಾಡಿದ್ದರು. ನಾನು ಡಿನೋಟಿಫಿಕೇಷನ್‌ಗೆ ಹೋಗಿರಲಿಲ್ಲ. ಹೊಸ ಮಾದರಿಯ ಅಂತರರಾಷ್ಟ್ರೀಯ ಮಟ್ಟದ ನಗರ ಮಾಡಬೇಕು ಎನ್ನುವ ಆಲೋಚನೆಯನ್ನು ಇಟ್ಟುಕೊಂಡು ಈ ಯೋಜನೆಗಳನ್ನು ಕ್ಯಾಬಿನೆಟ್ ಮುಂದೆ ಇಟ್ಟು ಒಪ್ಪಿಗೆ ತೆಗೆದುಕೊಳ್ಳಲಾಗಿದೆ. ಇದು ಅಂತರರಾಷ್ಟ್ರೀಯ ನಗರವಾಗಿ ಬೆಳೆಯುತ್ತದೆ. ಈಗ ಇರುವ ಬೆಂಗಳೂರಿಗಿಂತ ಹೊಸ ಬೆಂಗಳೂರನ್ನು ಸೃಷ್ಟಿ ಮಾಡಲು ಅನುಕೂಲವಾಗುತ್ತದೆ. ಕುಮಾರಸ್ವಾಮಿಗೆ ಹೆಚ್ಚು ಅನುಕೂಲವಾಗಲಿದೆ. ಅವರದ್ದೇ ಹೆಚ್ಚು ಜಮೀನುಗಳು ಅಕ್ಕಪಕ್ಕವಿರುವುದು. ಅತ್ಯಂತ ಹೆಚ್ಚು ಅನುಕೂಲ ಪಡೆಯುವವರು ಅವರ ಕುಟುಂಬದವರೇ ಎಂದು ತಿಳಿಸಿದರು.

    ಒಳಮೀಸಲಾತಿ ಜಾರಿಗೆ ನಮ್ಮ ಪಕ್ಷ ಬದ್ಧವಾಗಿದೆ
    ಒಳಮೀಸಲಾತಿ ವಿಚಾರವಾಗಿ ನಾಯಕರ ಸಭೆ ಬಗ್ಗೆ ಪ್ರಶ್ನಿಸಿದಾಗ, ಒಳಮೀಸಲಾತಿ ವಿಚಾರವಾಗಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿಗೆ ನಾವು ಬದ್ಧವಾಗಿದ್ದೇವೆ. ಒಳಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಸಮುದಾಯದವರು ತಮ್ಮ, ತಮ್ಮಲ್ಲಿಯೇ ಮಾತನಾಡಿ ರಾಜಿ ಮಾಡಿಕೊಳ್ಳಿ ಎಂದು ಹೇಳಲಾಗಿತ್ತು. ಆದ ಕಾರಣ ಸಭೆ ಮಾಡಿದ್ದಾರೆ. ಬೋವಿಗಳು, ಲಂಬಾಣಿ, ಕೊರಮ, ಕೊರಚ, ಎಡಗೈ, ಬಲಗೈಗೆ ಸೇರಿದ ಸಮುದಾಯಗಳಿವೆ. ಅವರೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬಂದರೆ ಸಂತೋಷ ಎಂದರು.

    ಸರ್ವಜನಾಂಗದ ಶಾಂತಿಯ ತೋಟ ನಮ್ಮದು
    ಅಲ್ಪಸಂಖ್ಯಾತರ ಗುತ್ತಿಗೆ ಮೀಸಲು ವಿಚಾರವಾಗಿ ಬಿಜೆಪಿ ಹೋರಾಟದ ಬಗ್ಗೆ ಕೇಳಿದಾಗ, ಕುವೆಂಪು ಅವರ ಹಾಡನ್ನು ನಾವು ನಾಡಗೀತೆ ಮಾಡಿಕೊಂಡಿದ್ದೇವೆ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಎಲ್ಲರೂ ಮೇಲಕ್ಕೆ ಬರಬೇಕು. ಪರಿಶಿಷ್ಟ ಜಾತಿಯವರಿಗೂ ಕೂಡ ಗುತ್ತಿಗೆ ಮೀಸಲಾತಿ ನೀಡಿದ್ದೇವೆ. ಇದೇ ರೀತಿ ಇವರಿಗೂ ಕೊಟ್ಟಿದ್ದೇವೆ. ಸಣ್ಣಪುಟ್ಟ ಕೆಲಸ ಮಾಡಿಕೊಳ್ಳುತ್ತಾರೆ ಎಂದರು.

    ಬಡತನವೇ ಒಂದು ಧರ್ಮ
    ಸಿದ್ದರಾಮಯ್ಯ, ಶಿವಕುಮಾರ್ ಒಂದು ಧರ್ಮದ ಓಲೈಕೆ ಮಾಡುತ್ತಿದ್ದಾರೆ, ಹಿಂದುಳಿದವರು ಕಾಂಗ್ರೆಸ್ ಗಮನದಲ್ಲಿ ಇಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ಹೇಳಿದವರು ಯಾರು? ಪರಿಶಿಷ್ಟ ಜಾತಿಯವರು ಒಂದು ಧರ್ಮವೇ? ಬಡತನವೇ ಒಂದು ಧರ್ಮ. 2ಎ ವರ್ಗಕ್ಕೆ, ಪರಿಶಿಷ್ಟರಿಗೆ ಗುತ್ತಿಗೆ ಮೀಸಲಾತಿ ನೀಡಿಲ್ಲವೇ? ಹಾಗಾದರೆ ಇವರು ಎಲ್ಲರಿಗೂ ವಿರೋಧ ಮಾಡುತ್ತಿದ್ದಾರೆ. ಹಾಗಾದರೆ ಈ ವರ್ಗಗಳ ಜನರನ್ನು ಮೇಲಕ್ಕೆ ಎತ್ತುವುದು ಹೇಗೆ? ಹಾಗಾದರೆ ಪರಿಶಿಷ್ಟ, ಅಲ್ಪಸಂಖ್ಯಾತ, ಹಿಂದುಳಿದ ಇಲಾಖೆಗಳನ್ನು ಏಕೆ ಇಟ್ಟುಕೊಂಡಿದ್ದೇವೆ? ಅವರಿಗೆ ಹಿಂದೂ ಮಾತ್ರ ಮುಂದು. ನಮಗೆ ಆ ರೀತಿಯ ಮನೋಭಾವವಿಲ್ಲ. ಹಿಂದೂ, ಕ್ರೈಸ್ತ, ಮುಸಲ್ಮಾನ, ಒಕ್ಕಲಿಗ, ಲಿಂಗಾಯತ, ಮಹಿಳೆಯರು ಎಲ್ಲರೂ ಮುಂದು,‌ ನಾವೆಲ್ಲ ಒಂದು ಎಂಬುದು ನಮ್ಮ ಭಾವನೆ ಎಂದರು.

    ಮಾ.27 ಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ
    ಮಾ. 27 ರಂದು ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನು ದೆಹಲಿಯಲ್ಲಿ ಕರೆಯಲಾಗಿದೆ. ಅಂದು ನಾನು ಸಹ ಸಭೆಯಲ್ಲಿ ಭಾಗವಹಿಸಲಿದ್ದೇನೆ. ಇದಕ್ಕೆ ನಾನು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮಾ.28 ಕ್ಕೆ ಅಹಮದಾಬಾದಿನ ಸಬರಮತಿ ಆಶ್ರಮದ ಬಳಿ ಎಐಸಿಸಿ ಸದಸ್ಯರ ಸಭೆಗೆ ಆಹ್ವಾನ ನೀಡಿದ್ದಾರೆ. ಹಿರಿಯ ನಾಯಕರು, ಸಂಸದರು ಅಲ್ಲಿಗೆ ಹೋಗುತ್ತಾರೆ ಎಂದರು.

    ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿಯಾಗಿದ್ದೀರಾ ಎಂದಾಗ, ಸಮಯ ಸಿಕ್ಕರೆ ಭೇಟಿ ಮಾಡುತ್ತೇನೆ. ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯುತ್ತಿರುವ ಕಾರಣಕ್ಕೆ ಭೇಟಿ ಸಾಧ್ಯವಾಗಿಲ್ಲ ಎಂದರು.

    ದೆಹಲಿಗೆ ಬಂದರೂ ಸಂಜೆಯ ತನಕ ಕಾಣಿಸಿಕೊಳ್ಳದ ನೀವು ನಿಗೂಢವಾಗಿ ಭೇಟಿ ಮಾಡಿದ್ದೀರಾ ಎಂದು ಕೇಳಿದಾಗ, ಯಾವ ನಿಗೂಢತೆಯೂ ಇಲ್ಲ. ಎಲ್ಲಿಗೆ ಹೋಗಬೇಕಿತ್ತೊ ಅಲ್ಲಿಗೆ ಹೋಗಿದ್ದೆ. ಈಗ ಮನೆಯಿಂದ ಬರುತ್ತಿರುವೆ ಎಂದು ಹೇಳಿದರು.

    ಪೆನ್ನಾರ್ ನದಿ ನೀರು ವಿವಾದ ಸಭೆ ಮುಂದೂಡಿಕೆ
    ಸೋಮವಾರ (ಮಾ.17) ಮಧ್ಯರಾತ್ರಿ ಹೊತ್ತಿಗೆ ತಮಿಳುನಾಡಿನವರು ಪೆನ್ನಾರ್ ಸಭೆಯನ್ನು ಬಹಿಷ್ಕರಿಸಿ ಪ್ರತ್ಯೇಕ ದಿನಾಂಕ ನೀಡಿ ಎಂದು ಕೇಳಿದ ಕಾರಣಕ್ಕೆ ಸಭೆಯನ್ನು ಮುಂಡೂಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಯಾರ ಬಳಿ ಮಾತನಾಡಬೇಕೊ ಅವರ ಬಳಿ ದೂರವಾಣಿಯಲ್ಲಿ ನಾನು ಮಾತನಾಡಿದ್ದೇನೆ. ಮುಂದಿನ ಸಭೆ ದಿನಾಂಕ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಇವತ್ತಿನ ಸಭೆಯಲ್ಲಿ ಭಾಗವಹಿಸಲು ತಮಿಳುನಾಡಿನವರು ಒಪ್ಪಿಲ್ಲ ಎಂದು ತಿಳಿಸಿದ್ದಾರೆ ಎಂದರು.

    ಪೆನ್ನಾರ್ ನದಿ ನೀರಿನ ವಿಚಾರವಾಗಿ ಕರ್ನಾಟಕದ ಯೋಜನೆಗಳಿಗೆ ತಮಿಳುನಾಡಿನವರು ತಕರಾರು ಎತ್ತಿದ್ದರು. ಈ ಕಾರಣಕ್ಕಾಗಿ ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಎರಡು ರಾಜ್ಯಗಳ ನಡುವೆ ರಾಜಿ ಸಂಧಾನ ಸಭೆಗೆ ನಾನು ಹಾಜರಾಗಿದ್ದೆ. ಮಾರ್ಕಂಡೇಯ ಅಣೆಕಟ್ಟು, ಬೈಲಹಳ್ಳಿ ಬಳಿ ಪಂಪ್ ಹೌಸ್, ವರ್ತೂರು ಕೆರೆಯಿಂದ ನರಸಾಪುರ ಕೆರೆಗೆ ಹಾಗೂ ಮಾಲೂರಿನ ಕಾಟನೂರು ಕೆರೆಗೆ ಪೆನ್ನಾರ್ ನದಿ ನೀರು ಹರಿಸುವ ಕುರಿತು ಕರ್ನಾಟಕ ಯೋಜನೆ ರೂಪಿಸಿತ್ತು ಎಂದು ಹೇಳಿದರು.

    ತಮಿಳುನಾಡಿನವರು ನ್ಯಾಯಾಲಯಕ್ಕೆ ತಕರಾರು ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರವನ್ನು ಬಗೆಹರಿಸಲು ಎರಡು-ಮೂರು ಬಾರಿ ದಿನಾಂಕ ಕೊಟ್ಟಿದ್ದರು. ಆದರೆ, ಬೆಳಗಾವಿ ಅಧಿವೇಶನವಿದ್ದ ಕಾರಣ ನಾವು ಭಾಗವಹಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದೆವು.‌ ಈ ಕಾರಣಕ್ಕೆ ಮಾ.18 ರಂದು ಸಭೆ ಏರ್ಪಡಿಸಿದ್ದರು. ನಾವು ಯಾವ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು.

    ಬಿಜೆಪಿಯವರೇ ಗ್ಯಾರಂಟಿ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ
    ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರು ಗ್ಯಾರಂಟಿಗೆ ಹಣ ಹೊಂದಿಸಲು ಕಷ್ಟವಾಗುತ್ತಿದೆ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, ಅವರ ದುಗುಡವನ್ನು ಅವರು ಹೇಳಿದ್ದಾರೆ. ನಾವು ಶಕ್ತಿಶಾಲಿಯಾಗಿ ಇದ್ದೇವೆ ಎಂದು ಬಜೆಟ್ ಅಲ್ಲಿ 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ. ಇದುವರೆಗೂ ಒಂದೆರಡು ದಿನ ತಡವಾಗಿಯಾದರೂ ನೀಡುತ್ತಾ ಬಂದಿದ್ದೇವೆ. ನಿರ್ದಿಷ್ಟ ಇದೆ ದಿನದಂದು ನೀಡುತ್ತೇವೆ ಎಂದು ಹೇಳಿಲ್ಲ. ಆದರೆ ತಪ್ಪದೇ ನೀಡುತ್ತಿದ್ದೇವೆ. ದೆಹಲಿಯವರು, ಪ್ರಧಾನಮಂತ್ರಿಗಳು ನಮ್ಮನ್ನು ಟೀಕೆ ಮಾಡುತ್ತಿದ್ದರು. ಆದರೆ ಈಗ ಅವರೇ ನಮಗಿಂತ ಮುಂಚಿತವಾಗಿ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.

  • ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಡಿಕೆಶಿ ಗರಂ – ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧವೇ 12 ಎಫ್‌ಐಆರ್‌, 12 ಲಕ್ಷ ದಂಡ

    ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಡಿಕೆಶಿ ಗರಂ – ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧವೇ 12 ಎಫ್‌ಐಆರ್‌, 12 ಲಕ್ಷ ದಂಡ

    – ಪದಗ್ರಹಣ ಸ್ವೀಕರಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷಗೆ 1 ಲಕ್ಷ ರೂ. ದಂಡ

    ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) ನಿರ್ದೇಶನದ ಮೇರೆಗೆ ಬಿಬಿಎಂಪಿ ಆಯುಕ್ತರು ಕ್ರಮಕೈಗೊಂಡಿದ್ದಾರೆ.

    ಬಳ್ಳಾರಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಪಶ್ಚಿಮ, ಪೂರ್ವ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಡಿಕೆಶಿ ಎಚ್ಚರಿಕೆಗೆ ಕ್ಯಾರೇ ಅನ್ನದ ಯುವ ಕಾರ್ಯಕರ್ತರು – ಈಗಲೂ ರಾರಾಜಿಸುತ್ತಿವೆ ಬ್ಯಾನರ್‌ಗಳು

    ಫ್ಲೆಕ್ಸ್ ತೆರವುಗೊಳಿಸಲು ಖರ್ಚಾಗುವ ಹಣವನ್ನು ಫ್ಲೆಕ್ಸ್‌ಗಳನ್ನು ಅಳವಡಿಸಿರುವವರಿಂದಲೇ ವಸೂಲಿಗೆ ಕ್ರಮವಹಿಸಲಾಗಿದೆ. ಫ್ಲೆಕ್ಸ್‌ ಅಳವಡಿಸಿದವರ ವಿರುದ್ಧ ಇದುವರೆಗೂ 12 ಎಫ್‌ಐಆರ್ ದಾಖಲಿಸಲಾಗಿದ್ದು, 12 ಲಕ್ಷ ರೂ. ದಂಡ ವಿಧಿಸಲಾಗಿದೆ.

    ನಗರದ ಪೂರ್ವ, ಪಶ್ಚಿಮ ಹಾಗೂ ಯಲಹಂಕ ಸೇರಿದಂತೆ ಮೂರೂ ವಲಯಗಳ ಅನಧಿಕೃತ ಫ್ಲೆಕ್ಸ್ ತೆರವು ಮಾಡಲಾಗಿದೆ. ನಿನ್ನೆಯಿಂದ 1,350 ಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್‌ಗಳು ಹಾಗೂ 600 ಕ್ಕೂ ಹೆಚ್ಚು ಪಕ್ಷದ ಧ್ವಜಗಳನ್ನು ತೆಗೆಯಲಾಗಿದೆ. ಇದನ್ನೂ ಓದಿ: ರನ್ಯಾ ರಾವ್ ಕೇಸ್ | ತಾಕತ್ತಿದ್ದರೆ ಸಚಿವರ ಹೆಸರು ಬಹಿರಂಗಪಡಿಸಲಿ – ಯತ್ನಾಳ್‌ಗೆ ಕಾಂಗ್ರೆಸ್ ಸಚಿವರ ಸವಾಲು

    ಅರಮನೆ ಮೈದಾನದಲ್ಲಿ ನಡೆದ ಯುವಸಂಕಲ್ಪ ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕರಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಅವರಿಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಾ ಪ್ರದೀಪ್‌, ಮಾಜಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ಸುಧಾಕರ್, ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಕುಮಾರ್‌, ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಚೈತ್ರಾ ಗಿರೀಶ್‌, ಬೆಂಗಳೂರು ಕೇಂದ್ರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ದಿವಾಕರ್, INTUC ರಾಜ್ಯ ಸಂಘಟನೆ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಗೆ ತಲಾ 1 ಲಕ್ಷ ರೂ. ಹಾಗೂ ತೆರವುಗೊಳಿಸುವ ಚಾರ್ಜ್ 5,000 ರೂ. ದಂಡ ಹಾಕಲಾಗಿದೆ.

  • ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ತೆರವಿಗೆ ಸೂಚನೆ – ಆದೇಶ ಉಲ್ಲಂಘಿಸಿದ್ರೆ ಯಾವುದೇ ಪಕ್ಷದವರಾದ್ರೂ ಕ್ರಮ: ಡಿಕೆಶಿ

    ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ತೆರವಿಗೆ ಸೂಚನೆ – ಆದೇಶ ಉಲ್ಲಂಘಿಸಿದ್ರೆ ಯಾವುದೇ ಪಕ್ಷದವರಾದ್ರೂ ಕ್ರಮ: ಡಿಕೆಶಿ

    ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅರಮನೆ ಮೈದಾನ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಬಿಬಿಎಂಪಿ ಕಮಿಷನರ್ ಅವರಿಗೆ ಸೂಚನೆ ನೀಡಿದ್ದಾರೆ.

    ಮಾರ್ಚ್ 17 ರಂದು ಸೋಮವಾರ ಅರಮನೆ ಮೈದಾನದಲ್ಲಿ (ಸೋಮವಾರ) ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಾಕಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನ ಕೂಡಲೇ ತೆರವುಗೊಳಿಸಬೇಕು ಎಂದು ಡಿಸಿಎಂ ಅವರು ಸೂಚಿಸಿದ್ದಾರೆ.

    ಒಂದೊಮ್ಮೆ ತೆರವು ಮಾಡದಿದ್ದರೆ ಸಂಬಂಧಪಟ್ಟವರ ವಿರುದ್ಧ ದಂಡ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಅವರು ಸೂಚನೆ ನೀಡಿದ್ದಾರೆ.

    ಬೆಂಗಳೂರು ನಗರದ ಸೌಂದರ್ಯವನ್ನು ಹಾಳು ಮಾಡಬಾರದು ಎಂದು ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಈ ಆದೇಶವನ್ನು ಪದೇ ಪದೆ ನಿರ್ಲಕ್ಷಿಸಲಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಆದೇಶ ಉಲ್ಲಂಘಿಸಿರುವವರು ನಮ್ಮ ಪಕ್ಷದವರಾದರೂ ಸರಿ, ಬೇರೆ ಪಕ್ಷದವರಾದರೂ ಸರಿ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿರುವುದಾಗಿ ಡಿಸಿಎಂ ತಿಳಿಸಿದ್ದಾರೆ.

  • 4% ಮೀಸಲಾತಿ ಮುಸ್ಲಿಮರಿಗೆ ಮಾತ್ರವಲ್ಲ – ಡಿ.ಕೆ ಶಿವಕುಮಾರ್‌

    4% ಮೀಸಲಾತಿ ಮುಸ್ಲಿಮರಿಗೆ ಮಾತ್ರವಲ್ಲ – ಡಿ.ಕೆ ಶಿವಕುಮಾರ್‌

    ಬೆಂಗಳೂರು: ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ (4% Reservation) ಎಂದು ಹೇಳಿದವರು ಯಾರು?. ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಅಲ್ಪಸಂಖ್ಯಾತರು ಎಂದರೆ ಕ್ರಿಶ್ಚಿಯನ್, ಜೈನ,‌ ರ್ಸಿ, ಸಿಖ್ ಹೀಗೆ ಎಲ್ಲರೂ ಸೇರುತ್ತಾರೆ. ಈ ಹಿಂದೆ ಪರಿಶಿಷ್ಟ ಜಾತಿ,‌ ಪಂಗಡವರಿಗೆ ಗುತ್ತಿಗೆ ಮೀಸಲಾತಿ ನೀಡುವಂತೆ ತಿದ್ದುಪಡಿ ಮಾಡಿದ್ದೆವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.

    ಕೆಪಿಸಿಸಿ (KPCC) ಕಚೇರಿ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4 ರಷ್ಟು ಮೀಸಲಾತಿ ನೀಡಲು ಮಾಡಿರುವ ತೀರ್ಮಾನದ ಬಗ್ಗೆ ಕೇಳಿದಾಗ, ಕೇವಲ 2 ಕೋಟಿ ಮೊತ್ತಕ್ಕೆ ಮಾತ್ರ ಒಪ್ಪಿಗೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ಮೊತ್ತದ‌‌ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ನಾವು ಬೇರೆ ಯಾರ ಹಕ್ಕನ್ನು ಇಲ್ಲಿ ಕಸಿದುಕೊಳ್ಳುತ್ತಿಲ್ಲ‌ ಅವರಿಗೂ ನಾವು ಬದುಕು ಕೊಡಬೇಕಲ್ಲವ? ಬಿಜೆಪಿಯು ಗುತ್ತಿಗೆ ಮೀಸಲಾತಿಯನ್ನು ಮತ ಬ್ಯಾಂಕ್ ರಾಜಕಾರಣ ಎನ್ನುತ್ತಿದೆ ಎಂದಾಗ, ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಾ ಇರಬೇಕು.‌ಆಗಲೇ ನಾವು ಗಟ್ಟಿಯಾಗವುದು ಎಂದರು.

    ಬಿಬಿಎಂಪಿ ಚುನಾವಣೆಗೆ ಸರ್ಕಾರ ತಯಾರಿದೆ ಖಂಡಿತವಾಗಿ ತಯಾರಿದೆ. ಎಷ್ಟು ದಿನ ನಾವು ತಪ್ಪಿಸಿಕೊಂಡು ಇರಲು ಸಾಧ್ಯ? ಶನಿವಾರ (ಇಂದು) ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಸಭೆಯನ್ನು ಕರೆಯಲಾಗಿದೆ. ನಂತರ ಎಲ್ಲಾ ಪಕ್ಷದವರನ್ನು ಸಭೆಗೆ ಕರೆಯಲಾಗುವುದು. ಅವರಲ್ಲಿಯೂ ಕೆಲವೊಬ್ಬರು ಅನಧಿಕೃತವಾಗಿ ಬಿಬಿಎಂಪಿ ಚುನಾವಣೆ ಕುರಿತಾಗಿ ಸಲಹೆ ನೀಡಿದ್ದಾರೆ. ಈಗ ಅಧಿಕೃತವಾಗಿ ಸಲಹೆಗಳನ್ನು ಪಡೆಯಲಾಗುವುದು

    ಕ್ಷೇತ್ರ ಪುನರ್‌ವಿಂಗಡಣೆ ವಿರೋಧಿ ಸಭೆಗೆ ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ತಮಿಳುನಾಡಿನ ಸಿಎಂ ಆಹ್ವಾನ ನೀಡಿದ್ದರು. ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಮಾ.22 ರಂದು ತಮಿಳುನಾಡಿನಲ್ಲಿ ನಡೆಯುವ ಸಭೆಗೆ ಭಾಗವಹಿಸಿ ಎಂದು ನಿರ್ದೇಶನ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಮೊಣಕಾಲಿನ ನೋವು ಇರುವ ಕಾರಣಕ್ಕೆ ವೈದ್ಯರ ಸಲಹೆಯ ಮೇರೆಗೆ ಅವರು ಬರುತ್ತಿಲ್ಲ. ಪಕ್ಷ ಹಾಗೂ ಸರ್ಕಾರದ ವತಿಯಿಂದ ನಾನು ಸಭೆಯಲ್ಲಿ ಭಾಗವಹಿಸುವೆ. ಪಕ್ಷದ ನಿಲುವನ್ನು ಹೈಕಮಾಂಡ್ ಜೊತೆ ಚರ್ಚಿಸಿ ತಿಳಿಸುವೆ. ದೇಶದಲ್ಲಿ ದೊಡ್ಡ ಪ್ರಮಾಣದ ಚರ್ಚೆ ನಡೆಯುತ್ತಿದೆ. ನಾವುಗಳು ನಮ್ಮ ಹಕ್ಕುಗಳನ್ನು ಹಾಗೂ ಸಂಖ್ಯೆಗಳನ್ನು ಬಿಟ್ಟುಕೊಡಲು ತಯಾರಿಲ್ಲ. ಪಕ್ಷದ ನಿಲುವಿನ ಬಗ್ಗೆ‌ ಬರುವ 18 ರಂದು ಚರ್ಚೆ ನಡೆಸಿ ನಿಲುವನ್ನು ತಿಳಿಸುತ್ತೇವೆ ಎಂದು ವಿವರಿಸಿದರು.

  • ಬೆಂಗಳೂರಿನಲ್ಲಿ ನೀರಿನ ದರ 1 ಪೈಸೆ ಹೆಚ್ಚಳ

    ಬೆಂಗಳೂರಿನಲ್ಲಿ ನೀರಿನ ದರ 1 ಪೈಸೆ ಹೆಚ್ಚಳ

    ಬೆಂಗಳೂರು: ನಗರದಲ್ಲಿ ಪ್ರತಿ 1 ಲೀಟರ್‌ ನೀರಿಗೆ 1 ಪೈಸೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ.

    ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿ ಕಾಂಗ್ರೆಸ್ (Congress) ಸದಸ್ಯ ರಾಮೋಜಿಗೌಡ ಪ್ರಶ್ನೆಗೆ ಡಿಸಿಎಂ ಡಿಕೆಶಿವಕುಮಾರ್ ಉತ್ತರಿಸಿದರು. ಇದನ್ನೂ ಓದಿ: ಹೋಳಿ ಸಂಭ್ರಮದಲ್ಲೂ ಕೆಎಸ್‍ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಿದ ಮರಾಠಿ ಪುಂಡರು

    ಬೇಸಿಗೆ ಕಾಲದಲ್ಲಿ ಬೆಂಗಳೂರಿನಲ್ಲಿ (Bengaluru) ನೀರಿನ ಸಮಸ್ಯೆ ಪರಿಹಾರಕ್ಕೆ ಅನೇಕ ಕ್ರಮ ತೆಗೆದುಕೊಳ್ತಿದ್ದೇವೆ. ಮಾರ್ಚ್‌ 22ರಂದು ವಿಶ್ವ ಜಲ ದಿನ ಇದೆ. ಹೀಗಾಗಿ ಅಂದಿನಿಂದ ಒಂದು ತಿಂಗಳ ಕಾಲ ʻನೀರು ಉಳಿಸಿʼ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ ಸಮಸ್ಯೆ ಬಗೆಹರಿಸಿದ್ದಕ್ಕೆ ಟ್ರಂಪ್‌, ಮೋದಿಗೆ ಥ್ಯಾಂಕ್ಸ್‌: ಪುಟಿನ್‌

    ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲವರು ಯಾವುದೇ ಅನುಮತಿ‌ ಇಲ್ಲದೇ ಬೋರ್‌ವೆಲ್‌ ಕೊರೆದಿದ್ದಾರೆ. ಅವರಿಗೆ ನೊಟೀಸ್ ಕೊಡುವ ಕೆಲಸ ಮಾಡಿದ್ದೇವೆ. 2014 ರಿಂದ ಇಲ್ಲಿವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ 1 ಪೈಸೆ ಆದರು ಜಾಸ್ತಿ ಮಾಡಬೇಕು ಅಂತ ತೀರ್ಮಾನ ಮಾಡಲಾಗಿದೆ. 6-7 ಪೈಸೆ ಜಾಸ್ತಿ ಮಾಡಬೇಕು ಅಂತ BWSSB ಅವರು ಮನವಿ ಮಾಡಿದ್ರು. ನಾನು 1 ಪೈಸೆ ಏರಿಕೆ ಮಾಡಲು ಒಪ್ಪಿಗೆ ಕೊಟ್ಡಿದ್ದೇನೆ ಎಂದು ವಿವರಿಸಿದರು.

    ಈಗ ಬಿಬಿಎಂಪಿ ಬಜೆಟ್ ಮೀಟಿಂಗ್ ಮಾಡುತ್ತೇನೆ. ಆಗ ಬೆಂಗಳೂರಿನ ಎಲ್ಲಾ ಶಾಸಕರ ಸಭೆ ಕರೆದು ನಿರ್ಧಾರ ಮಾಡ್ತೀವಿ. ಅಂಡರ್ ಗ್ರೌಂಡ್ ವಾಟರ್ ಹೆಚ್ಚಿಸಲು ಎಲ್ಲಾ ಕೆರೆ ತುಂಬಿಸೋ ಯೋಚನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ಕಳ್ಳತನ – ಹಾಡಹಗಲೇ ರೈತನ ಬೈಕ್‌ನಲ್ಲಿದ್ದ 7 ಲಕ್ಷ ಲೂಟಿ 

  • ಬಿಜೆಪಿ ಸಭಾತ್ಯಾಗದ ನಡ್ವೆ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕಾರ – ಜೆಡಿಎಸ್ ಬೆಂಬಲ

    ಬಿಜೆಪಿ ಸಭಾತ್ಯಾಗದ ನಡ್ವೆ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕಾರ – ಜೆಡಿಎಸ್ ಬೆಂಬಲ

    ಬೆಂಗಳೂರು: ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಇಂದು ಪರಿಷತ್‌ನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 (Greater Bengaluru Bill 2024) ಅನ್ನು ಅಂಗೀಕಾರ ಮಾಡಲಾಯಿತು.

    ಪರಿಷತ್‌ನಲ್ಲಿ ಗ್ರೇಟರ್ ಬೆಂಗಳೂರು ಬಿಲ್ ಮಂಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar), ಅಧಿಕಾರ ವಿಕೇಂದ್ರೀಕರಣವನ್ನು ಸಮರ್ಥಿಸಿದ್ರು. ಸುಮಾರು 2:50 ಗಂಟೆಗಳ ಕಾಲ ಚರ್ಚೆ ನಡೆಯಿತು. ಕೊನೆಗೆ ವಿಪಕ್ಷಗಳ ಸಭಾಗ್ಯಾಗದ ನಡ್ವೆ ವಿಧೇಯಕವನ್ನು ಅಂಗೀಕರಿಸಲಾಯಿತು. ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸಭಾತ್ಯಾಗ ಮಾಡಿದ್ರೆ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದ್ರು.

    ಪರಿಷತ್‌ನಲ್ಲಿ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಪಾಲರ ಭಾಷಣದ ಮೇಲೆ ಮುಂದುವರೆದ ಚರ್ಚೆ ನಡೆಯಿತು. ಬಳಿಕ ಡಿಕೆಶಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅನ್ನು ಮಂಡನೆ ಮಾಡಿದ್ರು. ಇದನ್ನೂ ಓದಿ: ಕೆಪಿಎಸ್‌ಸಿ ಪರೀಕ್ಷೆಯ ಲೋಪದೋಷಗಳನ್ನು ಪರಿಹರಿಸಿ: ಬಿ.ವೈ.ವಿಜಯೇಂದ್ರ

    ಬಿಲ್ ಮಂಡಿಸಿ ಮಾತನಾಡಿದ ಡಿಕೆಶಿ, ಬೆಂಗಳೂರಿಗೆ ದೊಡ್ಡ ಇತಿಹಾಸ ಇದೆ. ಕೆಂಪೇಗೌಡರು ಬೆಂಗಳೂರು ಕಟ್ಟಿದ್ರು. 750 ಕಿಲೋಮೀಟರ್ ಬೆಂಗಳೂರು ಬೆಳೆದಿದೆ. ಬೆಂಗಳೂರು ಅಭಿವೃದ್ಧಿ ಮಾಡಬೇಕು, ಆಡಳಿತ ವಿಕೇಂದ್ರೀಕರಣ ಆಗಬೇಕು. ಉತ್ತಮವಾದ ಆಡಳಿತ ಕೊಡಬೇಕು ಅಂತ ಈ ಬಿಲ್ ತಂದಿದ್ದೇವೆ ಎಂದು ಸಮರ್ಥಿಸಿಕೊಂಡರು.

    ಮುಂದುವರಿದು.. ಅನೇಕ ಜನರು ಕಾರ್ಪೋರೇಟರ್‌ಗಳಾಗಿ ಇವತ್ತು ಮಂತ್ರಿ, ಶಾಸಕರಾಗಿದ್ದಾರೆ. ಬೆಂಗಳೂರಿಗೆ ದೊಡ್ಡ ಇತಿಹಾಸ ಇದೆ. 39% ಜನಸಂಖ್ಯೆ ನಗರ ವ್ಯಾಪ್ತಿಗೆ ಬಂದಿದೆ. ಬೆಂಗಳೂರು ಜನಸಂಖ್ಯೆ 1.40 ಕೋಟಿ ಆಗಿದೆ. 1 ಕೋಟಿ ವಾಹನಗಳು ಇವೆ. ಮೊದಲು ಹೆಬ್ಬಾಳದವರೆಗೂ ಕಾರ್ಪೋರೇಷನ್ ಇತ್ತು. ಅದಾದ ಬಳಿಕ ಬಿಬಿಎಂಪಿ ಅಂತ ಮಾಡಿದ್ರು. ಇದನ್ನೂ ಓದಿ: ಯೂನಿವರ್ಸಿಟಿ ಮುಚ್ಚುವ ಬದಲು ಕಾಂಗ್ರೆಸ್ ಪಕ್ಷವನ್ನೇ ಮುಚ್ಚಿ ಬಿಡಿ: ಛಲವಾದಿ ನಾರಾಯಣಸ್ವಾಮಿ

    198 ವಾರ್ಡ್ 2007 ರಲ್ಲಿ ರಚನೆ ಮಾಡಲಾಗಿತ್ತು. ಬೆಂಗಳೂರು ಅಭಿವೃದ್ಧಿ ಆಗಬೇಕಾದ್ರೆ ಅಧಿಕಾರ ವಿಕೇಂದ್ರೀಕರಣ ಮಾಡಬೇಕು. ಬಿ.ಎಸ್ ಪಾಟೀಲ್ ಅವರ ಕೈಯಲ್ಲಿ ಈ ಬಗ್ಗೆ ವರದಿ ಪಡೆದಿದ್ದೇವೆ. ಆ ವರದಿ ಆಧಾರದಲ್ಲಿ ನಾನು ಬಿಲ್ ಸದನಕ್ಕೆ ತಂದಿದ್ದೇವೆ. ಸದನ ಸಮಿತಿ ರಚನೆ ಮಾಡಬೇಕು ಅಂತ ಅಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸದನ ಸಮಿತಿ ರಚನೆ ಮಾಡಿದ್ವಿ. 5-6 ತಿಂಗಳು ಸದನ ಸಮಿತಿ ಚರ್ಚೆ ಮಾಡಿ ವರದಿ ಕೊಟ್ಟಿದ್ದಾರೆ. ಸದನ ಸಮಿತಿ ಅವರು ಎಲ್ಲರ ಸಭೆ ಮಾಡಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ವರದಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮನೆಯ ಬಾಗಿಲಲ್ಲೇ ಕುಳಿತ ಮೈಕ್ರೋಫೈನಾನ್ಸ್ ಸಿಬ್ಬಂದಿ – ಬೇಸತ್ತು ಮಹಿಳೆ ಆತ್ಮಹತ್ಯೆ

    ಅಲ್ಲದೇ 74ನೇ ತಿದ್ದುಪಡಿಯನ್ನ ನಾವು ಯಾವುದೇ ಕಾರಣಕ್ಕೂ ಬದಲಾವಣೆ ಮಾಡೋದಿಲ್ಲ. ಬಿಜೆಪಿ ಅವರು ವರದಿ ಒಪ್ಪಿದ್ದಾರೆ. ರಾಜಕೀಯಕ್ಕೆ ವಿರೋಧ ಮಾಡ್ತಿದ್ದಾರೆ ಅಷ್ಟೆ. ಮೇಯರ್ ಅವಧಿ 2.5 ವರ್ಷ ಇರಲಿ. ಇದೊಂದು ಐತಿಹಾಸಿಕ ಬಿಲ್ ತಂದಿದ್ದೇವೆ. ಸದಸ್ಯರು ಸಲಹೆಗಳನ್ನು ಕೊಟ್ಟರೆ ಅದನ್ನ ಸ್ವೀಕಾರ ಮಾಡ್ತೀವಿ. ಏನಾದ್ರು ತಪ್ಪಿದ್ರೆ ಅದನ್ನ ಸರಿ ಮಾಡಿಕೊಳ್ತೀವಿ. ಪಾಲಿಕೆ ಎಷ್ಟು ಮಾಡಬೇಕು ಎಂಬುದರ ಚರ್ಚೆಯೂ ಆಗ್ತಿದೆ. ಯಾವುದೇ ಕಾರ್ಪೋರೇಷನ್ ಬೆಂಗಳೂರು ಬಿಟ್ಟು ಹೆಸರು ಇಡೋದಿಲ್ಲ. ಬೆಂಗಳೂರು ನಾರ್ಥ್, ಈಸ್ಟ್, ಸೌಥ್ ಅಂತ ಹೆಸರು ಇಡ್ತೀವಿ. ಒಂದು ಪಾಲಿಕೆಗೆ 150 ವಾರ್ಡ್ ಇರಲಿದೆ. ಸಿಎಂ ನೇತೃತ್ವದಲ್ಲಿ ಹೈ ಲೆವೆಲ್ ಸಮಿತಿ ಇರಲಿದೆ. ವಾರ್ಡ್ ಕಮಿಟಿಯನ್ನು ಮಾಡ್ತಿದ್ದೇವೆ ಎಂದು ಡಿಕೆಶಿ ಸದನದ ಗಮನಕ್ಕೆ ತಂದರು.

  • ಡಿಸಿಎಂ ಡಿಕೆಶಿಗೆ ಬೆಳ್ಳಿ ಕಿರೀಟ ಹಾಕಿದ ಪಾಲನಹಳ್ಳಿ ಮಠದ ಸ್ವಾಮೀಜಿ

    ಡಿಸಿಎಂ ಡಿಕೆಶಿಗೆ ಬೆಳ್ಳಿ ಕಿರೀಟ ಹಾಕಿದ ಪಾಲನಹಳ್ಳಿ ಮಠದ ಸ್ವಾಮೀಜಿ

    ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಪಾಲನಹಳ್ಳಿ ಮಠದ ಸ್ವಾಮೀಜಿ ಬೆಳ್ಳಿ ಕಿರೀಟ ಹಾಕಿದ್ದಾರೆ.

    ಮಾಗಡಿ ತಾಲೂಕು ಸೋಲೂರಿನ ಶ್ರೀ ಶನೈಶ್ವರ ಕ್ಷೇತ್ರ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿಗಳು ಡಿಕೆಶಿಗೆ ಕಿರೀಟ ಹಾಕಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಡಿಕೆಶಿ ಭೇಟಿ ಮಾಡಿ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸುತ್ತಿರುವ ಡಿಸಿಎಂ ಡಿಕೆಶಿಗೆ ಶಾಲು ಹೊದಿಸಿ ಹೂವಿನ ಹಾರ ಮತ್ತು ಕಿರೀಟ ತೊಡಿಸಿ ಅಭಿನಂದಿಸಿದ್ದಾರೆ.

  • 5 ವರ್ಷ ನಾನೇ ಅಧ್ಯಕ್ಷ – ಡಿಕೆ ಶಿವಕುಮಾರ್‌

    5 ವರ್ಷ ನಾನೇ ಅಧ್ಯಕ್ಷ – ಡಿಕೆ ಶಿವಕುಮಾರ್‌

    – ಭದ್ರಾ ಮೇಲ್ದಂಡೆ ಯೋಜನೆಯ ಶಾಖಾ ಕಾಲುವೆ ಕಾಮಗಾರಿ ಶೀಘ್ರದಲ್ಲೇ ಪೂರ್ಣ

    ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯ ಎರಡು ಜಿಲ್ಲೆಗಳ ಶಾಖಾ ಕಾಲುವೆ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿಂದು ಸಭೆ ನಡೆಯಿತು. ಸಭೆಯಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಸಚಿವರು, ಎಲ್ಲಾ ಪಕ್ಷದ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

    ಸಭೆಯ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌, ಅಪ್ಪರ್ ಭದ್ರಾ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು, ಅಲ್ಲಿನ ಶಾಸಕರು ಅಲ್ಲಿಗೆ ಹೋಗಿ ಮಾತಾಡಿದ್ವಿ. ನಮಗೆ ತಾರತಮ್ಯವಾಗಿದೆ ಅಂತ ರೈತರು ಆಕ್ರೋಶ ಹೊರಹಾಕಿದರು. 6 ತಿಂಗಳಲ್ಲಿ ನೀರು ಕೋಡೋಕೆ ಸಾಧ್ಯವಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಹಳೇ ರೇಟು ಎಕರೆಗೆ 4 ಲಕ್ಷ ಕೊಟ್ಟಿದ್ದಾರೆ. ಅದಕ್ಕೆ ತಾರತಮ್ಯ ಆಗಿದೆ ಅಂತ ಕೆಲಸ ಮಾಡೋಕೆ ಕೊಟ್ಟಿಲ್ಲ. ಲೀಗಲೀ ಹೇಗೆ ಮಾಡಬೇಕು ಎಂದು ಚರ್ಚೆ ಗೆ ಕರೆದಿದ್ದೇವೆ. ಶಾಸಕರು ಮಂತ್ರಿಗಳು ಅಭಿಪ್ರಾಯ ತಿಳಿಸಿದ್ದಾರೆ. ಆದಷ್ಟು ಬೇಗ ಯೋಜನೆ ಪೂರ್ಣ ಗೊಳಿಸುತ್ತೇವೆ ಎಂದು ಹೇಳಿದರು.

    ಇನ್ನೂ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕಾರ್ಯಕರ್ತರಿಗೆ ವೇತನ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಗ್ಯಾರಂಟಿ ಸಮಿತಿ ಮಾಡಿದ್ದೇವೆ ಐದು ವರ್ಷ ನಾನೇ ಅಧ್ಯಕ್ಷ ನಾಗಿದ್ದೇನೆ. ಪಕ್ಷಕ್ಕೆ ಯಾರು ದುಡಿದ್ದಾರೆ, ಅಂತವರನ್ನ ಗುರುತಿಸೋ ಕೆಲಸ ಮಾಡಿದ್ದೇವೆ. ಶಾಸಕರ ಅಧಿಕಾರ ನಾವೇನು ಕಿತ್ತುಕೊಂಡಿಲ್ಲ. ಶಾಸಕರಿಗೆ ಇರೋ ಅಧಿಕಾರ ಮುಂದುವರಿಯುತ್ತದೆ. ಅನ್ಯಾಯ ಆಗಿದ್ದವರಿಗೆ ಪರಿಹರಿಸೋದಕ್ಕೆ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಯಾವ ಕಾರಣಕ್ಕೂ ಬದ್ಧತೆ ಬದಲಾವಣೆ ಮಾಡಲ್ಲ. ಅಧ್ಯಕ್ಷರನ್ನ ನಾವು ಬದಲಾಯಿಸೋದಿಲ್ಲ ಎಂದು ಹೇಳಿದ್ದಾರೆ.

    ಬಿಜೆಪಿಯಿಂದ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೋರಾಟ ಮಾಡೋವರಿಗೆ ನಾವು ಬೇಡ ಅಂತ ಹೇಳಲ್ಲ. ಅವರಿಗೂ ಅರಿವಿದೆ, ಇದು ರಾಜಕೀಯ ಕಾರ್ಯಕ್ರಮ ಅಲ್ಲ ಅಂತ. ಬಡವರಿಗೆ ಸಹಾಯ ಮಾಡಲು ತಂದಿರೋ ಕಾರ್ಯಕ್ರಮ ಅದು ಅನುಷ್ಠಾನ ಮಾಡಿದ್ದೇವೆ. ಕಾರ್ಯಕರ್ತರಿಗೆ ಗೌರವ ಧನ ಅಂತ ಒಂದೆರಡು ಸಾವಿರ ಅಂತ ಕೊಡುತ್ತೇವೆ ಅಷ್ಟೇ. ಅದು ಬಿಟ್ಟು ಏನಿಲ್ಲ ಎಂದು ತಿಳಿಸಿದ್ದಾರೆ.

  • ತೇಜಸ್ವಿ ಸೂರ್ಯ, ಶಿವಶ್ರೀ ರಿಸೆಪ್ಷನ್ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ನವದಂಪತಿಗೆ ಶುಭಹಾರೈಕೆ

    ತೇಜಸ್ವಿ ಸೂರ್ಯ, ಶಿವಶ್ರೀ ರಿಸೆಪ್ಷನ್ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ನವದಂಪತಿಗೆ ಶುಭಹಾರೈಕೆ

    ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹಾಗೂ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್‌ (Sivasri Skandaprasad) ಆರತಕ್ಷತೆ ಸಂಭ್ರಮದಲ್ಲಿದ್ದಾರೆ. ನವ ದಂಪತಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಅನೇಕ ಗಣ್ಯರು ಶುಭಹಾರೈಸಿದ್ದಾರೆ.

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಜೋಡಿಯ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಈ ಸಂಭ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರು, ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಆಪ್ತರು, ಬಂಧುಗಳು ಆಗಮಿಸಿ ಜೋಡಿಯನ್ನು ಆಶೀರ್ವದಿಸಿದ್ದಾರೆ. ಇದನ್ನೂ ಓದಿ: ಗಾಯಕಿ ಶಿವಶ್ರೀ ಜೊತೆ ಸಪ್ತಪದಿ ತುಳಿದ ಸಂಸದ ತೇಜಸ್ವಿ ಸೂರ್ಯ

    ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಜಿ.ಪರಮೇಶ್ವರ್‌, ಸಚಿವ ಜಮೀರ್‌ ಅಹ್ಮದ್‌ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ನವದಂಪತಿಗೆ ವಿಶ್‌ ಮಾಡಿದರು.

    ಮಾರ್ಚ್‌ 5 ಮತ್ತು 6 ರಂದು ತೇಜಸ್ವಿ ಸೂರ್ಯ ವಿವಾಹ ಸಮಾರಂಭ ಬೆಂಗಳೂರು ಕನಕಪುರ ರೆಸಾರ್ಟ್‌ನಲ್ಲಿ ನಡೆದಿತ್ತು. ಇದಕ್ಕೆ ಕುಟುಂಬ ಸದಸ್ಯರು, ಆಪ್ತ ವಲಯದ ಸ್ನೇಹಿತರು, ರಾಜಕೀಯ ಗಣ್ಯರು ಸಾಕ್ಷಿಯಾಗಿದ್ದರು. ಇದನ್ನೂ ಓದಿ: ತೇಜಸ್ವಿ ಸೂರ್ಯ ಮದುವೆ – ಎಲ್ಲಿ? ಯಾವಾಗ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್‌