Tag: ಡಿ.ಕೆ. ರವಿ

  • ಶಂಕರಣ್ಣ@45: ಹೀಗೊಂದು ಸುದ್ದಿ ನಿಜನಾ?

    ಶಂಕರಣ್ಣ@45: ಹೀಗೊಂದು ಸುದ್ದಿ ನಿಜನಾ?

    ಖ್ಯಾತನಾಮರು ನಿಧನರಾದಾಗ ಅಥವಾ ಸುದ್ದಿಯಾದಾಗ ಅವರ ಮೇಲೆ ಸಿನಿಮಾ ಮಾಡುವ ಖಯಾಲಿಯನ್ನು ಸ್ಯಾಂಡಲ್ ವುಡ್ ನಲ್ಲಿ ಕೆಲವರು ಬೆಳೆಸಿಕೊಂಡಿದ್ದಾರೆ. ಆದರೆ, ಆ ಸಿನಿಮಾಗಳು ಈವರೆಗೂ ಆಗಿಲ್ಲ. ಆದರೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಾಯಿಸಲಾಗುತ್ತದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಈ ಹಿಂದೆ ಭೂಗತ ಪಾತಕಿ, ಸುಪಾರಿ ಕಿಲ್ಲರ್ ಗುಂಡಿಗೆ ತಲೆಯೊಡ್ಡಿದ್ದ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯ ಪಿ.ಎಸ್.ಐ ಮಲ್ಲಿಕಾರ್ಜುನ್ ಬಂಡೆ ಅವರ ಮೇಲೆ ಸಿನಿಮಾ ಮಾಡಲು ಮೂವರು ರೆಡಿಯಾಗಿದ್ದರು. ಮೂರು ಟೈಟಲ್ ಗಳು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಆದವು. ಅದು ಈವರೆಗೂ ಸುದ್ದಿಯಿಲ್ಲ. ಐಎಎಸ್ ಅಧಿಕಾರಿ ಡಿ.ಕೆ ರವಿ ನಿಧನರಾದಾಗಲೂ ಅವರ ಬಗ್ಗೆ ಸಿನಿಮಾ ಮಾಡಲು ಹಲವರು ಮುಂದಾದರು. ವಾಣಿಜ್ಯ ಮಂಡಳಿಯು ಡಿ.ಕೆ. ರವಿ ಹೆಸರಿನಲ್ಲಿ ಶೀರ್ಷಿಕೆ ಕೊಡದೇ ಇದ್ದರೂ ಬೇರೆ ಬೇರೆ ಹೆಸರಿನಲ್ಲಿ ಟೈಟಲ್ ರೆಜಿಸ್ಟರ್ ಆಯಿತು. ಆ ಸಿನಿಮಾಗಳು ಈವರೆಗೂ ಸೆಟ್ಟೇರಿಲ್ಲ. ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡುತ್ತೇನೆ ಎಂದು ಬಂದರು. ಅದು ಕೂಡ ಈವರೆಗೂ ಆಗಲಿಲ್ಲ. ಹೀಗೆ ಇಂತಹ ಘಟನೆಗಳು ನಡೆದಾಗೆಲ್ಲ ಸಿನಿಮಾ ಮಾಡುವ ಇಂಗಿತವನ್ನು ಕೆಲವರು ವ್ಯಕ್ತ ಪಡಿಸುತ್ತಾರೆ, ಕಾವು ಆರಿದ ನಂತರ ಸುಮ್ಮನಾಗುತ್ತಾರೆ. ಇದೀಗ 45ನೇ ವಯಸ್ಸಿಗೆ 25ರ ಹರೆಯದ ಹುಡುಗಿಯನ್ನು ಮದುವೆಯಾಗಿ ನೆನ್ನೆಯಷ್ಟೇ ನೇಣಿಗೆ ಕೊರಳೊಡ್ಡಿರುವ ಶಂಕರಣ್ಣನ ಬಗ್ಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಗಿರಿಕಿ ಹೊಡೆಯುತ್ತಿದೆ.

    ಲಾಕ್ ಡೌನ್, ಕೊರೋನಾ, ಕೋವಿಡ್ ಎನ್ನುವ ಆತಂಕದ ನಡುವೆ 2021ರಲ್ಲಿ 45ರ ಇಳಿವಯಸ್ಸಿನ ಶಂಕರಣ್ಣ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದ ಮೇಘನಾ ಅವರನ್ನು ಮದುವೆಯಾಗಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈಗ ಅದನ್ನೇ ಸಿನಿಮಾ ಮಾಡುವ ಆಲೋಚನೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಶಂಕರಣ್ಣ ಮತ್ತು ಮೇಘನಾ ಅವರದ್ದು ಒಂದು ರೀತಿಯಲ್ಲಿ ಇಂಟ್ರಸ್ಟಿಂಗ್ ಸ್ಟೋರಿ ನಿಜ. ಮೇಘನಾ ಅವರಿಗೆ ಆಗಲೇ ಮದುವೆ ಆಗಿತ್ತು. ಎರಡು ವರ್ಷದಿಂದ ಗಂಡ ನಾಪತ್ತೆಯಾಗಿದ್ದ. ಮದುವೆಯಾಗಿಯೂ ಒಂಟಿ ಬದುಕು ನಡೆಸುವುದು ತುಂಬಾ ಕಷ್ಟ. ಹಾಗಾಗಿ ಇನ್ನೂ ಮದುವೆಯಾಗದೇ ಉಳಿದಿದ್ದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಂಕರಣ್ಣನನ್ನು ಭೇಟಿಯಾಗುವ ಮೇಘನಾ, ತನ್ನನ್ನು ಮದುವೆ ಆಗುವಂತೆ ಕೇಳುತ್ತಾಳೆ. ನೊಂದಿರುವ ಹುಡುಗಿಗೆ ಬಾಳು ಕೊಡಲು ಶಂಕರಣ್ಣ ಒಪ್ಪುತ್ತಾನೆ. ಗುರು ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಸತಿಪತಿಗಳಾಗುತ್ತಾರೆ. ಆ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿತ್ತು. ಕೆಲವರು ಅವರನ್ನು ಆಡಿಕೊಂಡರೆ, ಇನ್ನೂ ಕೆಲವರು ಶಂಕರಣ್ಣನಿಗೆ ಶಹಭಾಷ್ ಹೇಳಿದ್ದರು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    Shankaranna

    ಈ ದಾಂಪತ್ಯಕ್ಕೆ ಕೇವಲ ಐದೇ ಐದು ತಿಂಗಳು ಆಯುಷ್ಯ ಅಂತ ಯಾರೂ ಅಂದುಕೊಂಡಿರಲಿಲ್ಲ. ನೆನ್ನೆ ಶಂಕರಣ್ಣ ಬಾರದ ಲೋಕಕ್ಕೆ ಹೋಗಿ ಬಿಟ್ಟಿದ್ದಾರೆ. ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕರಣ್ಣನ ಸಾವು ಇದೀಗ ನಾನಾ ರೂಪ ಪಡೆದುಕೊಂಡಿದೆ. ಹೆಂಡತಿ ಮೇಘನಾ ಒಂದು ರೀತಿಯಲ್ಲಿ ಹೇಳಿದರೆ, ಶಂಕರಣ್ಣನ ತಾಯಿ ಮತ್ತೊಂದು ರೀತಿಯಲ್ಲಿ ಹೇಳುತ್ತಿದ್ದಾರೆ. ಹಾಗಾಗಿ ಶಂಕರಣ್ಣನ ಸಾವು ನಿಗೂಢ.

  • ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪಗೆ ಕೊರೊನಾ ಸೋಂಕು

    ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪಗೆ ಕೊರೊನಾ ಸೋಂಕು

    ಬೆಂಗಳೂರು: ಕಾಂಗ್ರೆಸ್ ನಾಯಕಿ ಹಾಗೂ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ಬಗ್ಗೆ ಕುಸುಮಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ‘ನನ್ನ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ ಕಾರಣ ಮನೆಯಲ್ಲಿಯೇ ಐಸೋಲೇಟ್ ಆಗಿದ್ದು, ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕಕೆ ಬಂದಿರುವವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.

    ಮಹಾಮಾರಿ ಕೊರೊನಾ ಎರಡನೇ ಅಲೆಯು ತೀವ್ರ ತರವಾಗಿದ್ದು ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ.

    ಈ ಹಿಂದೆ ರಾಜರಾಜೇಶ್ವರಿ ನಗರದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಸ್ಪರ್ಧಿಸಿದ್ದರು.

  • ಒನ್ ಟೇಕ್ ಆರ್ಟಿಸ್ಟ್ ಚೆನ್ನಾಗಿ ಮಾತಾಡಿದ್ದಾರೆ – ಗೌರಮ್ಮ ವಿರುದ್ಧ ಮುನಿರತ್ನ ಪರೋಕ್ಷ ಅಸಮಾಧಾನ

    ಒನ್ ಟೇಕ್ ಆರ್ಟಿಸ್ಟ್ ಚೆನ್ನಾಗಿ ಮಾತಾಡಿದ್ದಾರೆ – ಗೌರಮ್ಮ ವಿರುದ್ಧ ಮುನಿರತ್ನ ಪರೋಕ್ಷ ಅಸಮಾಧಾನ

    ಬೆಂಗಳೂರು: ಒನ್ ಟೇಕ್ ಆರ್ಟಿಸ್ಟ್ ಚೆನ್ನಾಗಿ ಮಾತನಾಡಿದ್ದಾರೆ. ನಮ್ಮ ಕಲಾವಿದರಿಗೆ ಬುದ್ಧಿ ಇಲ್ಲಾ ಹತ್ತು ಟೇಕ್ ತೆಗೆದುಕೊಳ್ತಾರೆ. ಇವರು ಒಂದೇ ಟೇಕ್ ತೆಗೆದುಕೊಂಡಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.

    ಡಿ.ಕೆ ರವಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, 10 ದಿನದ ಹಿಂದೆ ಜಗಲಿ ಮೇಲೆ ಕುಳಿತು ಏನೋ ಮಾತನಾಡಿದ್ದರು. ಈಗ 3.5 ಲಕ್ಷದ ಸೋಫಾ ಮೇಲೆ ಕುಳಿತು ಮಾತನಾಡಿದ್ದಾರೆ. ಒಂದೇ ಟೇಕ್ ನಲ್ಲಿ ಹೇಳಿ ಮುಗಿಸಿದ್ದಾರೆ ಎಂದರು.

    ಇದೇ ವೇಳೆ ಚುನಾವಣೆಯ ಬಗ್ಗೆ ಮಾತನಾಡಿದ ಮುನಿರತ್ನ, ಕೊರೊನಾ ಸಮಯದಲ್ಲಿ ಶೇ.45 ರಷ್ಟು ಮತದಾನವಾಗಿರೋದು ಒಳ್ಳೆಯ ಮತದಾನ. ಕಳೆದ ಬಾರಿಗಿಂತ ಶೇ.7 ರಷ್ಟು ಮತದಾನ ಕಡಿಮೆಯಾಗಿದೆ. ಕಡಿಮೆ ಮತದಾನವಾಗಿ ಯಾರಿಗೆ ಲಾಭ ಅನ್ನೋ ಪ್ರಶ್ನೆ ಬರಲ್ಲ ಎಂದು ತಿಳಿಸಿದರು.

    ಕಳೆದ 134 ವರ್ಷಗಳಿಂದ ಅದನ್ನೇ ಹೇಳಿಕೊಂಡು ಬರ್ತಿದ್ದಾರೆ. ಕಡಿಮೆ ಪರ್ಸೆಂಟೆಜ್ ಆದರೆ ನಮಗೆ ಲಾಭ ಅಂತ ಹೇಳ್ತಾ ಬರುತ್ತಿದ್ದಾರೆ. ಆದರೆ ಜನರು ತುಂಬಾ ಬುದ್ಧಿವಂರಿದ್ದಾರೆ. ಶೇ.20 ಆಗ್ಲಿ ಶೇ.30 ಆಗಲಿ ಅಭಿವೃದ್ಧಿ ಮಾಡಿದವರಿಗೆ ಜನರು ವೋಟ್ ಹಾಕ್ತಾರೆ. ಕಡಿಮೆ ಮತದಾನವಾದ್ರೆ ನಮಗೆ ಲಾಭ ಅಗುತ್ತೆ ಅನ್ನೋದನ್ನ ಬಿಟ್ಟು ಮುಂದೆ ಜನರ ಜೊತೆ ಯಾವ ರೀತಿ ಬೆರೆಯಬೇಕು ಎಂಬುದು ಚಿಂತೆ ಮಾಡಿದ್ರೆ ಕಾಂಗ್ರೆಸ್ ಉಳಿಯುತ್ತೆ ಎಂದು ವಾಗ್ದಾಳಿ ನಡೆಸಿದರು.

    50 ಸಾವಿರ ಮತಗಳಿಂದ ಮುನಿರತ್ನ ಗೆಲ್ತಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಯಡಿಯೂರಪ್ಪನವರ ಹಿರಿತನದ ಆಧಾರದಲ್ಲಿ ಹೇಳಿದ್ದಾರೆ. ನಾನು ಮತದಾರರಲ್ಲಿ ಮತಭಿಕ್ಷೆ ಕೇಳಿದ್ದೇನೆ. ಎಷ್ಟು ಮತಗಳಿಂದ ಗೆಲ್ಲುತ್ತೇನೆ ಅನ್ನೋದನ್ನ ಈಗ ಹೇಳೋದಿಲ್ಲ. ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ಇದು ಸೂರ್ಯಚಂದ್ರ ಇರೋವರೆಗೂ ಸತ್ಯ. ಆ ಮಾತು ಪ್ರಕಾರ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನ್ನ ಕರ್ತವ್ಯ ಮಾತು ಕೊಟ್ಟಂತೆ ಮಂತ್ರಿ ಮಾಡ್ತೀನಿ ಅಂತ ನನಗೂ ಹೇಳಿದ್ದಾರೆ ಎಂದರು.

    ಸಚಿವ ಸ್ಥಾನ ನೀಡುವ ಬಗ್ಗೆ ನಾನು ಈಗಲೇ ನಾನು ಏನು ಹೇಳುದಿಲ್ಲ. ಮುಂದಿನ ಭವಿಷ್ಯ ಏನು ಅನ್ನೋದು ಯಾರಿಗೆ ಗೊತ್ತಿಲ್ಲ. ಅದಕ್ಕೆ ಕಾಲವೇ ಉತ್ತರ ಕೊಡುತ್ತೆ ಎಂದು ತಿಳಿಸಿದರು.

  • ಹೆಬ್ಬುಲಿಯನ್ನು ಕೊಂದ ಕಥೆ ಹೇಳುತ್ತಲೇ ಬೆವರಾಡಿಸುತ್ತೆ ಚಂಬಲ್!

    ಹೆಬ್ಬುಲಿಯನ್ನು ಕೊಂದ ಕಥೆ ಹೇಳುತ್ತಲೇ ಬೆವರಾಡಿಸುತ್ತೆ ಚಂಬಲ್!

    ಬೆಂಗಳೂರು: ಐಎಎಸ್ ಅಧಿಕಾರಿ ಡಿಕೆ ರವಿ ಸಾವು ಕೊಲೆಯಲ್ಲ ಆತ್ಮಹತ್ಯೆ ಅಂತ ಸರ್ಕಾರಿ ಫರ್ಮಾನು ಹೊರ ಬಿದ್ದು ವರ್ಷಗಳೇ ಕಳೆದಿವೆ. ಆದರೂ ಈ ನೆಲದ ಜನಸಾಮಾನ್ಯರು, ರವಿಯವರನ್ನು ಹತ್ತಿರದಿಂದ ಬಲ್ಲವರು ಮಾತ್ರ ಅದೊಂದು ಆತ್ಮಹತ್ಯೆ ಅನ್ನೋದನ್ನು ಈ ಕ್ಷಣಕ್ಕೂ ಒಪ್ಪಿಕೊಂಡಿಲ್ಲ. ಹೀಗೆ ಜನಸಾಮಾನ್ಯರ ಗುಮಾನಿಗಳಿಗೆ ತಕ್ಕುದಾಗಿಯೇ ಅದ್ಭುತವಾದೊಂದು ಕಥಾನಕ ಹೊಂದಿರೋ ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ತೆರೆ ಕಂಡಿದೆ. ಈ ಮೂಲಕವೇ ಸಿನಿಮಾದಾಚೆಗಿನ ಸತ್ಯವೊಂದಕ್ಕೆ ಸೀಮಿತ ಚೌಕಟ್ಟಿನಲ್ಲಿಯೇ ಕನ್ನಡಿ ಹಿಡಿಯೋ ಪರಿಣಾಮಕಾರಿ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

    ಆತ ಯಾವ ಊರಿಗೇ ಅಧಿಕಾರಿಯಾಗಿ ಹೋದರೂ ಜನರ ನಡುವೆಯೇ ಬೆರೆತು, ಜನರ ಒಳಿತನ್ನೇ ಉಸಿರಾಡೋ ಅಪರೂಪದ ಅಧಿಕಾರಿ. ಅವರ ಪ್ರಾಮಾಣಿಕತೆಗೆ ಆಯಾ ಭಾಗದ ಸಾಮಾನ್ಯ ಜನರೂ ಬೆರಗಾಗುತ್ತಾರೆ. ಭ್ರಷ್ಟಾಚಾರವನ್ನ ಬುಡ ಸಮೇತ ಕಿತ್ತು ಹಾಕಿ ಜನಸಾಮಾನ್ಯರ ಜೀವನವನ್ನ ಹಸನಾಗಬೇಕೆನ್ನೋದು ಆತನ ಗುರಿ. ಆದರೆ ಅಧಿಕಾರಸ್ಥರು, ಅವರ ಚೇಲಾಗಳು ಈ ಅಧಿಕಾರಿಯ ವಿರುದ್ಧವೇ ಗುರಾಣಿಯ ಗುರಿಯಿಡುತ್ತಾರೆ. ಅದರ ಫಲವಾಗಿ ಪದೇ ಪದೇ ವರ್ಗಾವಣೆಯ ಅಸ್ತ್ರವೂ ಈ ಅಧಿಕಾರಿಯ ಮೇಲೆ ಪ್ರಯೋಗವಾಗುತ್ತಿರುತ್ತೆ.

    ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಅಧಿಕಾರಿ ಎಲ್ಲಿಗೇ ಹೋದರೂ, ಯಾವ ಇಲಾಖೆಗೇ ವರ್ಗಾವಣೆ ಆದರೂ ಜನಪರತೆಯನ್ನೇ ಉಸಿರಾಡುತ್ತಾನೆ. ಕಡೆಗೂ ಒಂದಿನ ಈತ ರೇಡು ಮಾಡಿದ ದಾಖಲೆಗಳನ್ನು ಕದಿಯಲು ನಡೆಯೋ ಅಧಿಕಾರಸ್ಥರ ಸಾಹಸ, ಅದಕ್ಕೆ ಸಾಥ್ ನೀಡೋ ಕಿರಾತಕರು… ಅಲ್ಲೊಂದು ಭೀಕರ ಕೊಲೆ ಮತ್ತು ಅದನ್ನು ಆತ್ಮಹತ್ಯೆ ಅಂತ ನಿರೂಪಿಸೋ ಸರ್ಕಸ್ಸು…

    ಇದು ಡಿಕೆ ರವಿ ಸಾವಿನ ಸುತ್ತಲಿನ ಕಥೆ ಅನ್ನೋದಕ್ಕೆ ಇದಕ್ಕಿಂತಲೂ ಯಾವ ಪುರಾವೆಯೂ ಬೇಕಿಲ್ಲ. ಜೇಕಬ್ ವರ್ಗೀಸ್ ರವಿ ಸಾವಿನ ಸುತ್ತಲಿನ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿ ಈ ಕಥೆ ಸಿದ್ಧಪಡಿಸಿದ್ದಾರೆ. ಯಾವ ಅಬ್ಬರವೂ ಇಲ್ಲದೆ ತಣ್ಣಗೆ ನಿರೂಪಿಸಿದ್ದಾರೆ. ನೀನಾಸಂ ಸತೀಶ್ ಅಂತೂ ಡಿ.ಕೆ.ರವಿಯವರನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲ ಪಾತ್ರಗಳೂ ಕಾಡುವಂತೆ ಮೂಡಿ ಬಂದಿವೆ. ಕಡೆಯ ಕೆಲ ಸೀನುಗಳಲ್ಲಂತೂ ಅವರು ನಟನಾಗಿ ವಿಜೃಂಭಿಸಿದ್ದಾರೆ.

    ಒಟ್ಟಾರೆಯಾಗಿ ಒಂದು ಕಹಿ ಸತ್ಯವನ್ನ ಜೇಕಬ್ ಈ ಸಿನಿಮಾ ಮೂಲಕ ಜಾಹೀರು ಮಾಡಿದ್ದಾರೆ. ಈ ಮೂಲಕ ಸಿನಿಮಾ ಮಾಧ್ಯಮದ ಶಕ್ತಿ ಏನೆಂಬುದನ್ನೂ ಜಾಹೀರು ಮಾಡಿದ್ದಾರೆ. ಈ ಕಾರಣದಿಂದಲೇ ಈ ಸಿನಿಮಾ ಜನರಿಗಿಷ್ಟವಾಗೋದರಲ್ಲಿ ಯಾವ ಅನುಮಾನವೂ ಇಲ್ಲ.

    ರೇಟಿಂಗ್: 4/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಚಂಬಲ್’ನಲ್ಲಿ ಅಡಗಿದ್ಯಾ ಡಿ.ಕೆ.ರವಿ ಸಾವಿನ ರಹಸ್ಯ – ಸತೀಶ್ ನೀನಾಸಂ ಹೇಳಿದ್ದೇನು?

    ‘ಚಂಬಲ್’ನಲ್ಲಿ ಅಡಗಿದ್ಯಾ ಡಿ.ಕೆ.ರವಿ ಸಾವಿನ ರಹಸ್ಯ – ಸತೀಶ್ ನೀನಾಸಂ ಹೇಳಿದ್ದೇನು?

    ಬೆಂಗಳೂರು: ನಟ ಸತೀಶ್ ನೀನಾಸಂ ಅಭಿನಯದ ‘ಚಂಬಲ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಇದು ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಜೀವನದ ಕಥೆ ಆಧಾರಿತ ಸಿನಿಮಾವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಟ ಸತೀಶ್ ನೀನಾಸಂ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಸತೀಶ್ ನೀನಾಸಂ, ‘ಚಂಬಲ್’ ಸಿನಿಮಾ ಒಬ್ಬ ಐಎಎಸ್ ದಕ್ಷ ಅಧಿಕಾರಿ ಕಥೆಯಾಗಿದೆ. ನಾನು ಈ ಸಿನಿಮಾದಲ್ಲಿ ಸುಭಾಶ್ ಎಂಬ ಪಾತ್ರ ಮಾಡುತ್ತಿದ್ದೇನೆ. ನಾನು ಮಾಡಿದ ಸಿನಿಮಾದಲ್ಲಿ ನನಗೆ ಶಿಕ್ಷಣ ಇರುತ್ತಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಒಳ್ಳೆಯ ಶಿಕ್ಷಣ ಇದ್ದು, ಐಎಎಸ್ ಅಧಿಕಾರಿಯಾಗಿದ್ದೇನೆ. ನಾನು ಎಸ್‍ಎಸ್‍ಎಲ್‍ಸಿ ಮಾಡಿ, ಡಿಪ್ಲೋಮಾ ಮಾಡಿದ್ದೇನೆ. ಆದರೆ ಈ ಸಿನಿಮಾದಲ್ಲಿ ನಾನು ಓದಿರುವುದಕ್ಕೂ, ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎಂದು ತಿಳಿಸಿದ್ರು.

    ಚಿತ್ರದ ಕಥೆಗಾಗಿ ಕೆಲವು ಅಧಿಕಾರಿಗಳಿಂದ ಸ್ಪೂರ್ತಿ ಪಡೆದುಕೊಂಡಿದ್ದೇವೆ. ಆದರೆ ಯಾರು ಏನು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಒಬ್ಬ ಐಎಎಸ್ ಅಧಿಕಾರಿಯ ಕಥೆಯಾಗಿದೆ. ನಮ್ಮಲ್ಲಿ ಒಳ್ಳೆಯ ಅಧಿಕಾರಿಗಳಿದ್ದು, ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಸಿನಿಮಾ ಮಾಡಿದ್ದೇವೆ. ಲೂಸಿಯಾ ನಂತರ ಇದು ಒಂದೊಂದು ಅದ್ಭುತವಾದ ಸಿನಿಮಾವಾಗಿದೆ. ನಾವು ಕಾಣುವ ಸತ್ಯಕ್ಕಿಂತ, ನೀವು ಕಾಣುವ ಸತ್ಯವೇ ಮುಖ್ಯವಾಗಿದೆ. ಟ್ರೇಲರ್ ನೋಡಿ, ಬಳಿಕ ಸಿನಿಮಾ ನೋಡಿ ಎಂದು ಸತೀಶ್ ಹೇಳಿದ್ದಾರೆ.

    ಚಂಬಲ್ ಅನ್ನೋ ಹೆಸರಿನ ಸುತ್ತಾ ನಾನಾ ನಿಗೂಢಗಳು ಅಡಗಿಕೊಂಡಿವೆ. ಒಂದಷ್ಟು ಕ್ರೈಮುಗಳ ಸರಣಿಯೂ ಕಣ್ಮುಂದೆ ಸುಳಿದಾಡುತ್ತೆ. ಅದೇ ಹೆಸರನ್ನು ಶೀರ್ಷಿಕೆಯಾಗಿಸಿಕೊಂಡಿರೋ ಚಂಬಲ್ ಚಿತ್ರದ ಬಗ್ಗೆ ನಾನಾ ಕುತೂಹಲಗಳಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರದ ಟೃಲರ್ ಬಿಡುಗಡೆ ಮಾಡಿದ್ದಾರೆ.

    ಸತೀಶ್ ನೀನಾಸಂ ಈ ಚಿತ್ರದಲ್ಲಿ ಭ್ರಷ್ಟಾಚಾರಿಗಳನ್ನ ಕಂಡ್ರೆ ಬೆಂಕಿಯುಂಡೆಯಂತಾಡೋ ಖಡಕ್ ಅಧಿಕಾರಿಯಾಗಿ ನಟಿಸಿರೋದರ ಸುಳಿವೂ ಕೂಡಾ ಸಿಕ್ಕಿದೆ. ಪ್ರತೀ ಹಂತದಲ್ಲಿಯೂ ಪ್ರೇಕ್ಷಕರನ್ನ ನಿಗಿ ನಿಗಿಸೋ ಕ್ಯೂರಿಯಾಸಿಟಿಯ ಕೆಂಡದ ಮೇಲೆ ತಂದು ಕೂರಿಸುವಂತೆ ಇಡೀ ಚಿತ್ರ ಮೂಡಿ ಬಂದಿದೆ ಎಂಬುದಕ್ಕೆ ಈ ಟ್ರೇಲರ್ ಸಾಕ್ಷಿಯೊದಗಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv