Tag: ಡಿ ಕಾಕ್

  • ಕೆಕೆಆರ್ ವಿರುದ್ಧ 75 ರನ್‍ಗಳ ಜಯ – ಅಂಕಪಟ್ಟಿಯಲ್ಲಿ ಲಕ್ನೋ ಟಾಪ್

    ಕೆಕೆಆರ್ ವಿರುದ್ಧ 75 ರನ್‍ಗಳ ಜಯ – ಅಂಕಪಟ್ಟಿಯಲ್ಲಿ ಲಕ್ನೋ ಟಾಪ್

    ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ಆಟಕ್ಕೆ ಸ್ಟನ್ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲುವಿಗೆ 75 ರನ್ ಬೇಕಿರುವಾಗಲೇ ಅಲೌಟ್ ಆಗಿ ಹೀನಾಯ ಸೋಲನುಭವಿಸಿತು.

    ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್‍ಗಳ ಸವಾಲಿನ ಗುರಿ ನೀಡಿತ್ತು.

    ಕೆ.ಎಲ್ ರಾಹುಲ್ ಪಡೆಗೆ ಆರಂಭಿಕ ಆಘಾತ ಎದುರಾಗಿತ್ತು. ನಾಯಕ ಕೆ.ಎಲ್. ರಾಹುಲ್ ಖಾತೆ ತೆರೆಯುವ ಮುನ್ನವೇ ಔಟ್ ಆಗಿ ಶೂನ್ಯ ಸುತ್ತಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‍ನಲ್ಲಿ ಮೂರನೇ ಬಾರಿಗೆ ಶೂನ್ಯ ಸುತ್ತಿದರು.

    ಎರಡನೇ ವಿಕೆಟ್‍ಗೆ ಕ್ವಿಂಟನ್ ಡಿ ಕಾಕ್ ಹಾಗೂ ದೀಪಕ್ ಹೂಡಾ ಅರ್ಧಶತಕದ (71) ಜೊತೆಯಾಟವನ್ನು ಆಡಿದರು. ಇವರಿಬ್ಬರು ಕೆಕೆಆರ್ ಬೌಲರ್‍ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಡಿ ಕಾಕ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. 29 ಎಸೆತಗಳನ್ನು ಎದುರಿಸಿದ ಡಿ ಕಾಕ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.

    ಹೂಡಾ ಕೂಡ 41 ರನ್‍ಗಳ (27 ಎಸೆತ, 4 ಬೌಂಡರಿ, 2 ಸಿಕ್ಸರ್) ಮೂಲಕ ಉತ್ತಮವಾದ ಇನ್ನಿಂಗ್ಸ್ ಕಟ್ಟಿದರು. ಇನ್ನಿಂಗ್ಸ್‍ನ ಕೊನೆಯಲ್ಲಿ ಕೃಣಾಲ್ ಪಾಂಡ್ಯ (25) ಹಾಗೂ ಮಾರ್ಕಸ್ ಸ್ಟೋಯಿನಿಸ್ (28 ರನ್, 14 ಎಸೆತ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

    ಅಂತಿಮವಾಗಿ ಲಖನೌ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಹೋಲ್ಡರ್ 13 ರನ್ ಗಳಿಸಿದರು. ಕೆಕೆಆರ್ ಪರ ಆಂಡ್ರೆ ರಸೆಲ್ ಎರಡು ಹಾಗೂ ಸುನಿಲ್ ನಾರಾಯಣ್ ಒಂದು ವಿಕೆಟ್ ಕಬಳಿಸಿದರು. ಇದೇ ಮೊದಲ ಬಾರಿ ಆಡುತ್ತಿರುವ ಲಕ್ನೋ, ಇದುವೆರೆಗೆ 11 ಪಂದ್ಯಗಳಲ್ಲಿ ಏಂಟರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಒಟ್ಟು 16 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    11 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎಂಟು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಈ ಮೂಲಕ ಶ್ರೇಯಸ್ ಪಡೆಗೆ ಪ್ಲೇ ಆಫ್ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ.

    ನಂತರದಲ್ಲಿ ಲಕ್ನೋ 176 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡವು ಖಾತೆ ತೆರೆಯುವ ಮುಂಚೆಯೇ ಶೂನ್ಯಕ್ಕೆ ಬಾಬಾ ಇಂದ್ರಜೀತ್ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು. ನಂತರದಲ್ಲಿ 25 ರನ್ ಗಳಿಸುವಷ್ಟರಲ್ಲಿಯೇ 3 ವಿಕೆಟ್‍ಗಳನ್ನು ಕಳೆದುಕೊಂಡು ಪೆವಿಲಿಯನ್‍ನತ್ತ ಪರೇಡ್ ನಡೆಸಿದರು. ತಂಡದ ನಾಯಕ ಶ್ರೇಯಸ್ ಆಯ್ಯರ್ ಕೂಡಾ ಹೇಳಿಕೊಳ್ಳುವಷ್ಟೇನು ಬ್ಯಾಟ್ ಬೀಸದೆ 9 ಎಸೆತಗಳಲ್ಲಿ 6 ರನ್ ಗಳಿಸುವಷ್ಟರಲ್ಲಿ ಚಾಮೀರಾಗೆ ವಿಕೆಟ್ ಒಪ್ಪಿಸಿದರು.

    6ನೇ ವಿಕೆಟ್‍ಗೆ ಜೊತೆಯಾದ ಜಮೈಕಾದ ದೈತ್ಯ ಆಟಗಾರರಾದ ರಸೆಲ್ 45 ಕೇವಲ (19 ಎಸೆತ, 3 ಬೌಂಡರಿ, 5 ಸಿಕ್ಸರ್) ಹೊಡೆದು ತಂಡದ ಗೆಲುವಿನ ಆಸೆಯನ್ನು ಕೊಂಚ ಚಿಗುರಿಸಿದರು. ನಂತರದಲ್ಲಿ ಆವೇಶ್ ಖಾನ್‍ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಅದೇ ರೀತಿ ಸುನಿಲ್ ನರೈನ್ 22 ರನ್‍ಗಳನ್ನು ಬಾರಿಸಿ 3 ಬೌಂಡರಿ ಒಂದು ಸಿಕ್ಸರ್ ಬಾರಿಸಿ ಜೇಸನ್ ಹೋಲ್ಡರ್ ಅವರ ಬೌಲಿಂಗ್‍ನಲ್ಲಿ ಕೃಣಾಲ್ ಪಾಂಡ್ಯಗೆ ಕ್ಯಾಚ್ ನೀಡಿ ಪೆವಿಲಿಯನ್‍ನತ್ತ ಮುಖ ಮಾಡಿದರು.

     

  • 8 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಮೊದಲ ಸ್ಥಾನಕ್ಕೆ ಏರಿದ ಮುಂಬೈ

    8 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಮೊದಲ ಸ್ಥಾನಕ್ಕೆ ಏರಿದ ಮುಂಬೈ

    ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಭರ್ಜರಿ ಜಯ ಪಡೆದಿದ್ದು, ಆ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

    ಕೆಕೆಆರ್ ನೀಡಿದ 149 ರನ್‍ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ 16.5 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿ ಜಯ ಪಡೆಯಿತು. ಪಂದ್ಯದಲ್ಲಿ 44 ಎಸೆತಗಳಲ್ಲಿ 78 ರನ್ ಸಿಡಿಸಿದ ಡಿ ಕಾಕ್ ಮುಂಬೈ ಗೆಲುವಿಗೆ ಮಹತ್ವ ಕಾಣಿಕೆ ನೀಡಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. 11 ಎಸೆತಗಳಲ್ಲಿ 21 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಅಜೇಯರಾಗಿ ಉಳಿದರು.

    2019ರಿಂದ ಮುಂಬೈ ಇಂಡಿಯನ್ಸ್ ಪರ ಡಿ ಕಾಕ್ 7 ಅರ್ಧ ಶತಕಗಳನ್ನು ಗಳಿಸಿದರೆ, ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ತಲಾ 4 ಅರ್ಧ ಶತಗಳನ್ನು ಗಳಿಸಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 149 ಗಳಿಸಿತ್ತು. ಕೋಲ್ಕತ್ತಾ ಪರ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕಮ್ಮಿನ್ಸ್ ಸ್ಫೋಟಕ ಅರ್ಧ ಶತಕ ಸಿಡಿದರು. 36 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಕಮ್ಮಿನ್ಸ್ ಗೆ ಉತ್ತಮ ಸಾಥ್ ನೀಡಿದ ನಾಯಕ ಇಯಾನ್ ಮಾರ್ಗನ್ 29 ಎಸೆತಗಳಲ್ಲಿ 39 ರನ್ ಗಳಸಿ ಅಜೇಯರಾಗಿ ಉಳಿದರು. ಈ ಜೋಡಿ 6ನೇ ವಿಕೆಟ್‍ಗೆ 87 ರನ್ ಕಾಣಿಕೆ ನೀಡಿತ್ತು.

    ಉಳಿದಂತೆ ಆರಂಭಿಕ ಶುಭ್‍ಮನ್ ಗಿಲ್ 21 ಗಳಿಸಿದ್ದರೆ, ಬೇರೆ ಯಾವುದೇ ಆಟಗಾರ ಮುಂಬೈ ಬೌಲರ್ ಗಳ ದಾಳಿಯನ್ನು ಎದುರಿಸಲು ಯಶಸ್ವಿಯಾಗಲಿಲ್ಲ. ತ್ರಿಪಾಠಿ 7, ರಾಣಾ 5, ದಿನೇಶ್ ಕಾರ್ತಿಕ್ 4, ರುಸೇಲ್ 12 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.

    ಮುಂಬೈ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ರಾಹುಲ್ ಚಹರ್ 4 ಓವರ್ ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್, ಬುಮ್ರಾ, ನಾಥನ್ ಕೌಲ್ಟರ್ ನೈಲ್ ತಲಾ 1 ವಿಕೆಟ್ ಪಡೆದರು. ಆದರೆ ನಾಥನ್ ಕೌಲ್ಟರ್ ನೈಲ್ ಪಂದ್ಯದಲ್ಲಿ 51 ರನ್ ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಯುಎಇನಲ್ಲಿ ಮುಂಬೈ ತಂಡದ ಬೌಲರ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಬೇಡದ ದಾಖಲೆ ಬರೆದರು. ಈ ಹಿಂದೆ ಬೆಂಗಳೂರು ತಂಡದ ವಿರುದ್ಧ ಜೇಮ್ಸ್ ಪ್ಯಾಟಿನ್‍ಸನ್ 33 ರನ್ ನೀಡಿದ್ದರು.