Tag: ಡಿ.ಎಚ್.ಶಂಕರಮೂರ್ತಿ

  • ವಿಧಾನ ಪರಿಷತ್ ಘಟನೆ ಯಾರಿಗೂ ಮರ್ಯಾದೆ, ಗೌರವ ತರುವಂತಹದ್ದಲ್ಲ- ಶಂಕರಮೂರ್ತಿ

    ವಿಧಾನ ಪರಿಷತ್ ಘಟನೆ ಯಾರಿಗೂ ಮರ್ಯಾದೆ, ಗೌರವ ತರುವಂತಹದ್ದಲ್ಲ- ಶಂಕರಮೂರ್ತಿ

    – ಗಲಾಟೆಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ
    – ಕಾಂಗ್ರೆಸ್ ವಿಲನ್ ರೀತಿ ವರ್ತಿಸಿದೆ

    ಶಿವಮೊಗ್ಗ: ವಿಧಾನ ಪರಿಷತ್ ನಲ್ಲಿ ನಡೆದ ಇಂದಿನ ಘಟನೆ ಯಾರಿಗೂ ಶೋಭೆ ತರುವಂತಹದ್ದಲ್ಲ, ಇಂತಹ ಘಟನೆ ನಡೆಯಬಾರದಿತ್ತು. ಈ ಘಟನೆ ಯಾರಿಗೂ ಮರ್ಯಾದೆ, ಗೌರವ ತರುವಂತಹದ್ದಲ್ಲ. ನನಗೂ ಅತ್ಯಂತ ನೋವು ತರಿಸಿದೆ ಎಂದು ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದರು.

    ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಂದು ನಡೆದ ಘಟನೆಯಲ್ಲಿ ಮೂರೂ ಪಕ್ಷದವರದ್ದು ತಪ್ಪಿದೆ. ಆದರೆ ಕಾಂಗ್ರೆಸ್ ಪ್ರಚೋದನೆಯಿಂದಾಗಿ ಇಂತಹ ಘಟನೆ ಪರಿಷತ್ ನಲ್ಲಿ ನಡೆದು ಹೋಗಿದೆ. ಪರಿಷತ್ ಗೆ ತನ್ನದೇಯಾದ ಗೌರವ ಇದೆ. ರಾಜ್ಯದ ಜನತೆ ಈ ಘಟನೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಇಂದಿನ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ಸದಸ್ಯರ ಬೆಂಬಲ ಇಲ್ಲ. ಸದಸ್ಯರ ವಿಶ್ವಾಸ ಇಲ್ಲ ಎಂದ ಮೇಲೆ ಅವರು ಆ ಸ್ಥಾನದಲ್ಲಿಯೇ ಕುಳಿತುಕೊಳ್ಳಬಾರದು. ನಾನು ಸಭಾಪತಿ ಆದ ಸಂದರ್ಭದಲ್ಲಿ ಸಹ ಇಂತಹ ಪ್ರಸಂಗ ಎದುರಾಗಿತ್ತು. ಆದರೆ ನಾನು ಈ ರೀತಿ ನಡೆದುಕೊಳ್ಳದೆ ಉಪ ಸಭಾಪತಿಯನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿದೆ. ನಂತರ ವಿಶ್ವಾಸಮತಯಾಚನೆಯಲ್ಲಿ ಗೆದ್ದ ನಂತರ ಮತ್ತೆ ಸಭಾಪತಿ ಸ್ಥಾನ ಅಲಂಕರಿಸಿದೆ ಎಂದರು.

    ಕಾಂಗ್ರೆಸ್ ನವರು ಎಲ್ಲ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿರುವ ಕಾರಣ ಹತಾಶರಾಗಿದ್ದಾರೆ. ಈಗಾಗಿಯೇ ಕಾಂಗ್ರೆಸ್ ಕುತಂತ್ರದಿಂದಾಗಿ, ಪ್ರಚೋದನೆಯಿಂದಾಗಿ ಪರಿಷತ್ ನಲ್ಲಿ ಇಂತಹ ಘಟನೆ ನಡೆದಿದೆ. ಕಾಂಗ್ರೆಸ್ ನವರು ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಬಹಳಷ್ಟು ಬಾರಿ ತೆಗೆದುಕೊಂಡಿದ್ದಾರೆ. ಘಟನೆಯಿಂದಾಗಿ ರಾಜ್ಯದ ಜನಕ್ಕೆ ರಾಜಕಾರಣಿಗಳ ಬಗ್ಗೆ ತಿರಸ್ಕಾರ ಭಾವನೆ ಮೂಡಿದೆ. ಇಂದಿನ ಘಟನೆಯಲ್ಲಿ ಕಾಂಗ್ರೆಸ್ ವಿಲನ್ ರೀತಿ ವರ್ತಿಸಿದೆ. ಕಾಂಗ್ರೆಸ್ ಮೂಲ ಸಂಸ್ಕೃತಿ ಅಂದರೆ ನಾವು ದೇಶ ಆಳುವುದಕ್ಕೆ ಇರೋರು, ಏಕ ಚಕ್ರಾಧಿಪತ್ಯ ಧೋರಣೆ ವಂಶಪಾರಂಪರ್ಯ ಹಕ್ಕು ಎಂದುಕೊಂಡಿದ್ದಾರೆ ಎಂದು ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

  • ಅಡ್ವಾಣಿಗೆ ಭಾರತ ರತ್ನ ನೀಡಿ- ಶಂಕರಮೂರ್ತಿಯಿಂದ ಪ್ರಧಾನಿಗೆ ಪತ್ರ

    ಅಡ್ವಾಣಿಗೆ ಭಾರತ ರತ್ನ ನೀಡಿ- ಶಂಕರಮೂರ್ತಿಯಿಂದ ಪ್ರಧಾನಿಗೆ ಪತ್ರ

    ಶಿವಮೊಗ್ಗ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವಂತೆ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

    ಎಲ್.ಕೆ.ಅಡ್ವಾಣಿ ಅವರು 7 ದಶಕಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಡ್ವಾಣಿ ಅವರ ಈ ಎಲ್ಲ ಜನಪರ ಸೇವೆ ಗುರುತಿಸಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕು. ಇದು ರಾಜ್ಯದ ಸಾವಿರಾರು ಮಂದಿಯ ಅಭಿಲಾಷೆ ಸಹ ಆಗಿದೆ ಎಂದು ಡಿ.ಎಚ್ ಶಂಕರಮೂರ್ತಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

    ಅಡ್ವಾಣಿಯವರು ಆರ್‍ಎಸ್‍ಎಸ್, ಭಾರತೀಯ ಜನಸಂಘ ಹಾಗೂ ಬಿಜೆಪಿ ಮೂಲಕ ತಾಯ್ನಾಡಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಹಾಗೂ ಕೊಡುಗೆ ನೀಡಿದ್ದಾರೆ. ಸಾರ್ವಜನಿಕ ಹಾಗೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಮ್ಮ ವಿಶಿಷ್ಠ ಜ್ಞಾನ ಹಾಗೂ ಅನುಭವದ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಲ್ಲದೆ ಅಡ್ವಾಣಿಯವರದ್ದು ಅಪರೂಪದ ವ್ಯಕ್ತಿತ್ವವಾಗಿದೆ. ಹೀಗಾಗಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.

    ಕಳೆದ ಐದು ದಶಕಗಳಿಂದ ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ, ಲಕ್ಷಾಂತರ ಜನರ ರೀತಿ ನಾನೂ ಸಹ ಅಡ್ವಾಣಿಯರಿಗೆ ಹತ್ತಿರವಾಗಿದ್ದೆ. ಹೀಗಾಗಿ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಸಾರ್ವಜನಿಕ ಭಾಷಣಗಳನ್ನು ಭಾಷಾಂತರ ಮಾಡುತ್ತಿದ್ದೆ ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

    ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ನೀಡಬೇಕೆಂಬುದು ಪಕ್ಷದ ಸಾವಿರಾರು ಕಾರ್ಯಕರ್ತರು ಹಾಗೂ ಸಾಮಾನ್ಯ ಜನರ ಆಶಯವಾಗಿದೆ. ಅಡ್ವಾಣಿಯವರು ಭಾರತ ರತ್ನಕ್ಕೆ ಯೋಗ್ಯರು, ಸರಿಯಾದ ವ್ಯಕ್ತಿ ಹಾಗೂ ಎಲ್ಲ ಗೌರವಗಳನ್ನು ಹೊಂದುವ ಶ್ರೇಷ್ಠ ಗುಣಗಳನ್ನು ಹೊಂದಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿನ ಪಕ್ಷದ ಸಾವಿರಾರು ಕಾರ್ಯಕರ್ತರ ಪರವಾಗಿ ಅಡ್ವಾಣಿಯವರಿಗೆ ಭಾರತ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದ್ದಾರೆ.

    ನಿನ್ನೆಯಷ್ಟೇ ಎಲ್.ಕೆ.ಅಡ್ವಾಣಿಯವರು 93ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿಯವರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಅಡ್ವಾಣಿಯವರ ಕಾಲು ಮುಟ್ಟಿ ನಮಸ್ಕರಿಸಿ ಮೋದಿ ಶುಭ ಕೋರಿದ್ದಾರೆ. ಟ್ವೀಟ್ ಮೂಲಕ ಸಹ ಮೋದಿ ಅಡ್ವಾಣಿಯವರಿಗೆ ಶುಭಾಶಯ ತಿಳಿಸಿ ನೀವೇ ನಮಗೆ ಸ್ಫೂರ್ತಿ ಎಂದಿದ್ದಾರೆ.

  • ನವ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿ: ಡಿ.ಎಚ್ ಶಂಕರಮೂರ್ತಿ

    ನವ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿ: ಡಿ.ಎಚ್ ಶಂಕರಮೂರ್ತಿ

    ಶಿವಮೊಗ್ಗ: ಧರ್ಮಾಧಾರಿತವಾಗಿ ಭಾರತವನ್ನು ಒಡೆದವರು ಕಾಂಗ್ರೆಸ್ಸಿಗರು. ಭಾರತ ಕಟ್ಟುವುದಕ್ಕೆ ಕಾಂಗ್ರೆಸ್ ಬಿಡುತ್ತಿಲ್ಲ. ಒಂದೇ ತಾಯಿಯ ಮಕ್ಕಳಾದ ಹಿಂದೂ, ಮುಸ್ಲಿಮರನ್ನು ಬೇರೆ ಮಾಡಿ ಭಾರತಕ್ಕೆ ಕಾಂಗ್ರೆಸ್ ದ್ರೋಹ ಮಾಡುತ್ತಿದೆ. ಪೌರತ್ವ ಕಾಯ್ದೆ ಯಾವ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ ಎಂದು ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

    ತೀರ್ಥಹಳ್ಳಿಯ ತಾಲೂಕು ಕಚೇರಿ ಎದುರು ನಡೆದ ಪೌರತ್ವ ಕಾಯ್ದೆ ಬೆಂಬಲಿಸಿ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಬೃಹತ್ ಜನ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ನಂತರ ಭಾರತ, ಪಾಕಿಸ್ತಾನವನ್ನು ಒಡೆದ ಕಾಂಗ್ರೆಸ್ ಇಂದು ರಾಜಕೀಯ ದುರುದ್ದೇಶದಿಂದ ದೇಶದಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿದೆ. ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಒಡೆಯುವುದು ಬೇಡ ಎಂದು ಮಹಾತ್ಮ ಗಾಂಧಿಜೀ, ಅಂಬೇಡ್ಕರ್ ಹಲವು ಬಾರಿ ಮನವಿ ಮಾಡಿದರೂ ಕಾಂಗ್ರೆಸ್ ಕೇಳಲಿಲ್ಲ. ಕಾಂಗ್ರೆಸ್ ಸುಳ್ಳನ್ನು ಬಂಡವಾಳ ಮಾಡಿಕೊಂಡಿದೆ. ದೇಶ ಕಟ್ಟುವ ಬದಲು ಛಿದ್ರ ಮಾಡುವ ಹುನ್ನಾರ ನಡೆಸುತ್ತಿದೆ. ಇನ್ನೊಮ್ಮೆ ದೇಶವನ್ನು ಒಡೆಯಲು ಧರ್ಮದ ಹೆಸರಿನಲ್ಲಿ ಜನರನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ ಎಂದರು.

    ಪೌರತ್ವ ಕಾಯ್ದೆ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗದವರಿಗೆ ತೊಂದರೆ ಉಂಟು ಮಾಡುತ್ತದೆ ಎಂದು ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಅಪ ಪ್ರಚಾರದಲ್ಲಿ ತೊಡಗಿವೆ. ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಜಾರಿಗೆ ತಂದಿದ್ದು, ಎಷ್ಟೇ ಪ್ರತಿರೋಧ ಎದುರಾದರೂ ವಾಪಸ್ ಪಡೆಯುವುದಿಲ್ಲ. ಬಿಜೆಪಿ ಮನೆ ಮನೆಗೆ ತೆರಳಿ ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಸ್ಸಾಂನಲ್ಲಿ ಎನ್‍ಆರ್ ಸಿ ನಿಯಮ ಜಾರಿಗೆ ತಂದರು. 1950ರಲ್ಲಿ ಪೌರತ್ವ ಪರ ಕಾಂಗ್ರೆಸ್ ನಿರ್ಣಯ ಕೈಗೊಂಡಿದೆ. ಈಗಿನ ಪ್ರಸ್ತುತ ಕಾಂಗ್ರೆಸ್ ಪೌರತ್ವ ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದು ಇಂತಹ ದ್ವಂದ್ವ ನಿಲುವು ಏಕೆ ಎಂದು ಶಂಕರಮೂರ್ತಿ ಪ್ರಶ್ನಿಸಿದರು.

  • ರಾಜ್ಯಪಾಲನಾಗುವ ಆಸೆ ಇದೆ: ಡಿ.ಎಚ್.ಶಂಕರಮೂರ್ತಿ

    ರಾಜ್ಯಪಾಲನಾಗುವ ಆಸೆ ಇದೆ: ಡಿ.ಎಚ್.ಶಂಕರಮೂರ್ತಿ

    – ಯಾರಿಗೂ ಕೇಂದ್ರದಲ್ಲಿ ಉನ್ನತ ಸ್ಥಾನ ದೊರೆತಿಲ್ಲ

    ಶಿವಮೊಗ್ಗ : ಕಳೆದ 6 ವರ್ಷದ ಮೋದಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಯಾವ ನಾಯಕರಿಗೂ ಕೇಂದ್ರದಲ್ಲಿ ಉನ್ನತ ಸ್ಥಾನ ದೊರೆತಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದವರಿಗೆ ರಾಜ್ಯಪಾಲ ಹುದ್ದೆ ಸೇರಿದಂತೆ ಯಾವ ಹುದ್ದೆಯೂ ದೊರೆತಿಲ್ಲ. ವಾಜಪೇಯಿಯವರು ಪ್ರಧಾನಿಯಾಗಿದ್ದ ವೇಳೆ ರಾಮಜೋಯಿಸರು ರಾಜ್ಯಪಾಲರಾಗಿದ್ದರು. ಆದರೆ ಮೋದಿ ಸರ್ಕಾರ ಬಂದ ನಂತರ ಕರ್ನಾಟಕದ ಯಾರೊಬ್ಬರು ರಾಜ್ಯಪಾಲರಾಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಕರ್ನಾಟಕ ರಾಜ್ಯದಿಂದ ಕಳೆದ ಬಾರಿ ಸಂಸತ್ ಗೆ 18 ಮಂದಿ ಹಾಗೂ ಈ ಬಾರಿ 25 ಮಂದಿ ಆಯ್ಕೆ ಮಾಡಿ ಕಳುಹಿಸಿದೆ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ವೈಯಕ್ತಿಕವಾಗಿ ನನಗೆ ರಾಜ್ಯಪಾಲನಾಗುವ ಅವಕಾಶ ಬರಬೇಕಿತ್ತು ಆದರೆ ಬಂದಿಲ್ಲ. ಈ ಮಧ್ಯದಲ್ಲಿ ಡಿ.ಎಚ್.ಶಂಕರಮೂರ್ತಿ ರಾಜ್ಯಪಾಲರಾಗುತ್ತಾರೆ ಎಂಬ ಗುಸುಗುಸು ಆರಂಭವಾಯ್ತು. ಅದು ಮಧ್ಯದಲ್ಲಿ ಹಾಗೆ ನಿಂತು ಹೋಯ್ತು ಎಂದು ಹೇಳುವ ಮೂಲಕ ಶಂಕರಮೂರ್ತಿ ಅವರು ರಾಜ್ಯಪಾಲರಾಗುವ ಆಸೆಯನ್ನು ಹೊರ ಹಾಕಿದ್ದಾರೆ.