Tag: ಡಿಸಿ ಲತಾ

  • ಸೋಮವಾರದಿಂದ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ಪಾಸ್ ವಿತರಣೆ

    ಸೋಮವಾರದಿಂದ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ಪಾಸ್ ವಿತರಣೆ

    – ವಾಹನ ನಿಲುಗಡೆ ಸಾಮಥ್ಯಕ್ಕನುಗುಣವಾಗಿ ಪ್ರವಾಸಿಗರಿಗೆ ಅವಕಾಶ

    ಚಿಕ್ಕಬಳ್ಳಾಪುರ: ಪರಿಸರ ಸಂರಕ್ಷಣೆ, ವಾಹನ ದಟ್ಟಣೆ ಹಾಗೂ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಜುಲೈ 19 ರಿಂದ ನಂದಿಬೆಟ್ಟದ ವಾಹನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಸಾಮಥ್ಯಕ್ಕನುಗುಣವಾಗಿ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಚಿಕ್ಕಬಳ್ಳಾಪುರ ಡಿಸಿ ಆರ್.ಲತಾ ತಿಳಿಸಿದರು.

    ಸಪ್ತಗಿರಿಗಳ ಧಾಮ, ಸಪ್ತ ನದಿಗಳ ಉಗಮ ಸ್ಥಾನವಾದ ನಂದಿಬೆಟ್ಟವನ್ನು ವೀಕ್ಷಿಸಲು ಜಿಲ್ಲಾಡಳಿತ ರೂಪಿಸಲಿರುವ ಈ ನೂತನ ನಿಯಮಗಳನ್ನು ಪ್ರವಾಸಿಗರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ -19 ಲಾಕ್ ಡೌನ್ ಪ್ರಯುಕ್ತ ಏಪ್ರಿಲ್ 27 ರಿಂದ ಜಾರಿಯಲ್ಲಿದ್ದ ನಿಬರ್ಂಧವನ್ನು ತೆರೆವುಗೊಳಿಸಿ ಜೂನ್ 21 ರಿಂದ ನಂದಿಬೆಟ್ಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಜುಲೈ 10 ರಂದು 2,858 ಮತ್ತು ಜುಲೈ 11 ರಂದು 4,895 ಪ್ರವಾಸಿಗರು ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ಜನಸಂದಣಿ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಜುಲೈ 7 ರಂದು ವಾರಾಂತ್ಯದ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿತ್ತು.

    ಬಡವರ ಊಟಿ ಎಂದೇ ಹೆಸರುವಾಸಿಯಾದ ನಂದಿಬೆಟ್ಟವೂ ಬೆಂಗಳೂರು ರಾಜ್ಯಧಾನಿಗೆ ತುಂಬಾ ಹತ್ತಿರವಿರುದರಿಂದ ಹೆಚ್ಚೆಚ್ಚು ಪ್ರವಾಸಿಗರು ನಂದಿಬೆಟ್ಟಕ್ಕೆ ಭೇಟಿ ನೀಡುವುದನ್ನು ಮನಗಂಡ ಜಿಲ್ಲಾಡಳಿತ ನಂದಿಬೆಟ್ಟದ ಮೇಲೆ ಮುಂದಾಗಬಹುದಾದ ಜನಸಂದಣಿಯನ್ನು ತಡೆಗಟ್ಟಿ ಸುರಕ್ಷಿತವಾಗಿ ಪ್ರವಾಸಿಗರು ಬಂದು ಹೋಗಲು ವೈಜ್ಞಾನಿಕವಾಗಿ ವ್ಯವಸ್ಥಿತ ಯೋಜನೆಯನ್ನು ರೂಪಿಸುವ ಉದ್ದೇಶ ಹೊಂದಿದೆ. ಈ ಹಿನ್ನಲೆಯಲ್ಲಿ ಜುಲೈ 19 ರಿಂದ ವಾಹನ ನಿಲುಗಡೆಗೆ ಅವಕಾಶವಿರುವಷ್ಟು ಮಂದಿಯನ್ನು ಮಾತ್ರ ಪ್ರವೇಶ ಪಾಸ್ ಅನ್ನು ನೀಡಿ ನಂದಿಬೆಟ್ಟಕ್ಕೆ ಭೇಟಿ ನೀಡಲು ಯೋಜಿಸಲಾಗಿದೆ. ಅದಕ್ಕೆ ಪ್ರವಾಸಿಗರು ಸಹಕರಿಸಬೇಕು. ಆರಂಭದಲ್ಲಿ ಈ ಪ್ರಕ್ರಿಯೆಯು ಒಂದೆರಡು ವಾರ ಭೌತಿಕವಾಗಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆನ್ ಲೈನ್ ಮೂಲಕ ನಿರ್ವಹಿಸಲಾಗುವುದು ಎಂದರು.

    ಶೇಕಡಾ 50% ರಷ್ಟು ಪಾಸ್ ಗಳನ್ನು ಆನ್ ಲೈನ್ ನಲ್ಲಿ ಶೇ.50 ಪಾಸ್ ಗಳನ್ನು ಬೆಟ್ಟಕ್ಕೆ ಪ್ರವೇಶಿಸುವ ಮುಖ್ಯದ್ವಾರದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಿ ಪಾಸ್ ಪಡೆಯಬೇಕು. ಆರಂಭದಲ್ಲಿ ತುಸು ಗೊಂದಲವಾದರೂ ಸಹ ಮುಂದಿನ ದಿನಗಳಲ್ಲಿ ಈ ರೀತಿಯ ವ್ಯವಸ್ಥಿತ ವೀಕ್ಷಣೆಯಿಂದ ಪ್ರವಾಸಿತಾಣವನ್ನು ವೈಜ್ಞಾನಿಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ ಎಂದು ನುಡಿದರು.

    ಪ್ರಸ್ತುತ ನಂದಿಗಿರಿಧಾಮದ ಮೇಲಿರುವ ವಾಹನ ನಿಲ್ದಾಣದಲ್ಲಿ ಪ್ರಸ್ತುತ 310 ಕಾರು, 550 ದ್ವಿಚಕ್ರ ವಾಹನಗಳ ಪಾಕಿರ್ಂಗ್ ವ್ಯವಸ್ಥೆಯಿದ್ದು, ಬೆಟ್ಟದ ಕೆಳಭಾಗದಲ್ಲಿ 350 ಕಾರು ಹಾಗೂ 200 ದ್ವಿಚಕ್ರ ವಾಹನ ಪಾಕಿರ್ಂಗ್ ಮಾಡಬಹುದಾಗಿದೆ. ಈ ನಿಲುಗಡೆಯಲ್ಲಿ ಪಾರ್ಕ್ ಮಾಡಲು ವ್ಯವಸ್ಥೆ ಇರುವ ವಾಹನಗಳಲ್ಲಿನ ಪ್ರವಾಸಿಗರಿಗೆ ಮಾತ್ರ ಪಾಸ್ ವಿತರಿಸಿ ನಂದಿಬೆಟ್ಟ ವೀಕ್ಷಿಸಲು ಅನುಮತಿ ನೀಡಲಾಗುವುದು. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅವರ ನಿರ್ದೇಶನದಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

    ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ನಂದಿ ಪ್ರವಾಸ ತಾಣವನ್ನು ಸಂರಕ್ಷಿಸುವ ಜೊತೆಗೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಇದಲ್ಲದೆ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಹಯೋಗದೊಂದಿಗೆ 7 ಎಕರೆ ಜಮೀನು ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಿ ಅಲ್ಲಿಂದ ಬಸ್‌ಗಳ ಮೂಲಕ ಪ್ರವಾಸಿರನ್ನು ನಂದಿಗಿರಿಧಾಮಕ್ಕೆ ಕರೆದೊಯ್ಯಲು ನೂತನ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ಪರಿಸರ ಸಂರಕ್ಷಣೆ ಮಾಡುವುದರೊಂದಿಗೆ ವಾಹನ ದಟ್ಟಣೆ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಶಾಶ್ವತ ಪರಿಹಾರವಾಗಲಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಜುಲೈ 14 ರಿಂದಲೇ ಹಲವು ನೂತನ ಕ್ರಮಗಳನ್ನು ಕೈಗೊಂಡಿದೆ ಎಂದರು.

    ರೋಪ್ ವೇ ನಿರ್ಮಾಣಕ್ಕೆ ಅಗತ್ಯಕ್ರಮ
    ನಂದಿಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಸಂಬಂಧ ಸರ್ಕಾರಿ ಸಂಸ್ಥೆಯಾದ ಮೇ 11 ಐಡೆಕ್ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆಯಾದ ಬಾಂಬೆ ರೋಪ್ ವೇ ಸಂಸ್ಥೆಯಿಂದ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಈಗಾಗಲೇ ಮಣ್ಣಿನ ಗುಣಮಟ್ಟ ಪರೀಕ್ಷೆ, ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಹಾಗೂ ಡ್ರೋಣ್ ಸರ್ವೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೋಪ್ ವೇ ಆದಂತಹ ಸಂದರ್ಭದಲ್ಲಿಯೂ ಸಹ ಈಗ ನಿರ್ಮಿಸುತ್ತಿರುವ ಪಾರ್ಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸ್ವಲ್ಪದಿನ ಮುಂದೂಡಿ
    ಜುಲೈ 19 ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವ ಹಿನ್ನಲೆಯಲ್ಲಿ ಹೊಸ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗುವವರೆಗೆ ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರು ನಂದಿಬೆಟ್ಟ ಪ್ರವೇಶವನ್ನು ಸ್ವಲ್ಪದಿನಗಳ ಮಟ್ಟಿಗೆ ಮುಂದೂಡಿ, ಬೆಳಗಿನ ಜಾವ ಕಾಯುವಂತದ್ದು, ಜನಸಂದಣಿ, ವಾಹನದಟ್ಟಣೆ ಮಾಡುವಂತದ್ದನ್ನು ಮಾಡಬೇಡಿ. ಪಾಸ್ ಸಿಕ್ಕಿದವರು ಮಾತ್ರವೇ ನಂದಿಬೆಟ್ಟ ಪ್ರವೇಶ ಮಾಡಿ ಇನ್ಮೇಲೆ ವಾಹನಗಳಿಗೂ ಮತ್ತು ಪ್ರವಾಸಿಗರಿಗೂ ಪ್ರತ್ಯೇಕವಾಗಿ ಪಾಸ್ ನೀಡಲಾಗುವುದು. ಭೇಟಿ ನೀಡಿದ ಪ್ರವಾಸಿಗರು ಪಾಸ್ ಗಳನ್ನು ಹಿಂತಿರುಗಿಸಬೇಕು. ಈ ಪ್ರಕ್ರಿಯೇ ಚಕ್ರದ ರೀತಿಯಲ್ಲಿ ನಿರಂತರವಾಗಿ ನಡೆಯಲಿದೆ. ಈ ವ್ಯವಸ್ಥೆಯು ಸ್ವಲ್ಪ ದಿನದ ಮಟ್ಟಿಗೆ ಭೌತಿಕವಾಗಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಅಭಿವೃದ್ಧಿಪಡಿಸಿ ಆನ್ ಲೈನ್ ನಲ್ಲಿ ಶೇ.50 ಮತ್ತು ಭೌತಿಕವಾಗಿ ಶೇ.50 ರಷ್ಟು ಪಾಸ್ ಗಳನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿ ಗೋಪಾಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಿತೇಂದ್ರನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ:ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಡಿ – ಕೇಂದ್ರಕ್ಕೆ ತ.ನಾಡು ಸರ್ವಪಕ್ಷ ನಿಯೋಗದಿಂದ ಒತ್ತಡ

  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೇಗುಲ ಆರಂಭ- ಷರತ್ತುಗಳು ಅನ್ವಯ

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೇಗುಲ ಆರಂಭ- ಷರತ್ತುಗಳು ಅನ್ವಯ

    ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ನಾಳೆ ಜೂನ್ 8 ರಿಂದ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ‘ಎ’, ‘ಬಿ’ ಮತ್ತು ‘ಸಿ’ ದೇವಾಲಯಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ ಅಂತ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಆರ್.ಲತಾ ಅವರು ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಹಲವು ಷರತ್ತುಗಳನ್ನ ವಿಧಿಸಿದ್ದಾರೆ.
    * ಜನಸಂದಣಿ ಸೇರುವ ಉತ್ಸವಗಳಾದ ಬ್ರಹ್ಮ ರಥೋತ್ಸವ/ಜಾತ್ರೆ ಮುಂತಾದ ವಿಶೇಷ ಪೂಜೆಗಳು ಸೇರಿದಂತೆ ಇತರೆ ಎಲ್ಲಾ ರೀತಿಯ ಉತ್ಸವಗಳನ್ನು ಹಾಗೂ ದೇವಾಲಯದಲ್ಲಿ ನಡೆಯುವ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
    * ದೇವಾಲಯದ ಪ್ರವೇಶ ದ್ವಾರ ಮತ್ತು ಆವರಣಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡುವುದು. ದೇವಾಲಯಕ್ಕೆ ಬರುವ ಭಕ್ತಾಧಿಗಳ ದೇಹದ ಉಷ್ಣತೆಯನ್ನು ಥರ್ಮೋಮೀಟರ್ ನಿಂದ ತಪಾಸಣೆ ಮಾಡಲಾಗುವುದು. ಜೊತೆಗೆ ಕೈಗಳಿಗೆ ಸ್ಯಾನಿಟೈಸರ್ ಬಳಸಬೇಕಿದೆ.

    * ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ (6 ಅಡಿ) ಕಾಪಾಡುವುದು. ಭಕ್ತಾಧಿಗಳ ಸರದಿ ಸಾಲಿನಲ್ಲಿ ಮಾರ್ಕ್ ಗಳನ್ನು ಗುರುತಿಸುವುದು. ಆಯಾಯ ದೇವಾಲಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕ ಸರದಿ ಸಾಲುಗಳನ್ನು ನಿರ್ಮಿಸಿಕೊಂಡಿದ್ದು, ಬಾಕ್ಸ್ ಗಳಲ್ಲಿ ಭಕ್ತರು ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು.
    * ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಮಾಸ್ಕ್ ಅಥವಾ ಮುಖವಸ್ತ್ರಗಳನ್ನು ಕಡ್ಡಾಯವಾಗಿ ಧರಿಸಿದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶವಿರುತ್ತದೆ.
    * ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಪಾದರಕ್ಷೆಗಳನ್ನು ಅವರವರ ವಾಹನಗಳಲ್ಲಿಯೇ ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ಬಿಡುವುದು. ಪಾದರಕ್ಷೆಗಳನ್ನು ಧರಿಸಿ ದೇವಾಲಯದ ಆವರಣಕ್ಕೆ ಬರುವಂತಿಲ್ಲ.

    * ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ದೇವಾಲಯದ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕಿ, ಧಾರ್ಮಿಕ ಗ್ರಂಥ, ಪುಸ್ತಕ ಮುಂತಾದವುಗಳನ್ನು ಮುಟ್ಟುವಂತಿಲ್ಲ.
    * ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು, ದೇವಾಲಯದ ಒಳಾಂಗಣ, ಹೊರಾಂಗಣ ಹಾಗೂ ಇತರೆ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಅವರವರ ಮೊಬೈಲ್‍ಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

    ಇನ್ನೂ ದೇವಾಲಯದ ದರ್ಶನಕ್ಕೆ ಮುಂದಿನ ಆದೇಶದವರೆಗೆ 65 ವಯಸ್ಸಿನ ವೃದ್ಧರು, 10 ವರ್ಷದ ಒಳಗಿನ ಮಕ್ಕಳು ಮತ್ತು ಗರ್ಭಿಣಿಯರು ಆದಷ್ಟು ಮನೆಯಲ್ಲಿದ್ದು ಸಹಕರಿಸಬೇಕು. ಜೊತೆಗೆ ಅಸ್ವಸ್ಥರು ದೇವಾಲಯದ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.

     

  • ದೆಹಲಿಗೆ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ 7 ಮಂದಿಯ ವರದಿ ನೆಗೆಟಿವ್

    ದೆಹಲಿಗೆ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ 7 ಮಂದಿಯ ವರದಿ ನೆಗೆಟಿವ್

    ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ದೆಹಲಿಯ ನಿಜಾಮುದ್ದೀನ್ ಮಸೀದಿ ಮತ್ತು ಈ ಪ್ರದೇಶದಲ್ಲಿ ಓಡಾಡಿದ್ದ 37 ಮಂದಿಯನ್ನ ಜಿಲ್ಲಾಡಳಿತ ಪತ್ತೆ ಮಾಡಿದೆ.

    ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಮಧ್ಯೆ ಒಂದು ತಿಂಗಳ ನಡುವೆ 31 ಮಂದಿ ದೆಹಲಿಯ ನಿಜಾಮುದ್ದೀನ್ ಜಮಾತ್‍ಗೆ ಭೇಟಿ ನೀಡಿದ್ದು, ಅವರನ್ನು ಪತ್ತೆ ಮಾಡಿರುವ ಜಿಲ್ಲಾಡಳಿತ ಮೊದಲ ಹಂತದಲ್ಲಿ 07 ಮಂದಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಿತ್ತು. ಸದ್ಯ ಈ 7 ಮಂದಿಗೆ ಕೊರೊನಾ ವೈರಸ್ ಸೋಂಕು ಬಂದಿಲ್ಲ. ವರದಿ ನೆಗೆಟಿವ್ ಬಂದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿ ಲತಾ, ಈ 31 ಮಂದಿ ಜಮಾತ್‍ನಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾಗಿರಲಿಲ್ಲ. ಬದಲಾಗಿ ಇದಕ್ಕೂ ಮುನ್ನವೇ ಅವರ ಜಮಾತ್‍ಗೆ ಹೋಗಿ ಬಂದಿದ್ದರು. ಈ 31 ಮಂದಿಯೂ ಜಮಾತ್‍ಗೆ ಭೇಟಿ ನೀಡಿ ಈಗಾಗಲೇ 50 ದಿನಗಳು ಕಳೆದು ಹೋಗಿವೆ. ಆದರೂ ಕೂಡ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ಹಂತದಲ್ಲಿ 7 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದೆವು. ಆದರೆ ಅವರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಉಳಿದವರನ್ನು ಪರೀಕ್ಷೆಗೆ ಒಳಪಡಿಸಲಿಲ್ಲ ಎಂದು ತಿಳಿಸಿದರು.

    ಮತ್ತೊಂದೆಡೆ ಮಾರ್ಚ್ ತಿಂಗಳಲ್ಲಿ 6 ಮಂದಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಮ್ಮ ಜಿಲ್ಲೆಯವರು ಓಡಾಡಿರುವ ಮಾಹಿತಿ ಸಿಕ್ಕಿದೆ. ಆರು ಮಂದಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ಶಿಡ್ಲಘಟ್ಟ ಮೂಲದ ದಂಪತಿ, ಹಾಗೂ ಇದೇ ನಿಜಾಮುದ್ದೀನ್ ಪ್ರದೇಶದಲ್ಲಿನ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು, ಹಾಗೂ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ಹಾದು ಹೋಗುವ ರೈಲಿನ ಟಿಟಿಯೊಬ್ಬರು ನಮ್ಮದೇ ಜಿಲ್ಲೆಯವರು. ಇವರು ಯಾರೂ ಸಹ ಜಮಾತ್‍ಗೆ ಹೋಗಿಲ್ಲ. ಆದರೂ ಆ ಜಾಗದಲ್ಲಿ ಓಡಾಡಿರುವ ಕಾರಣ ಆರು ಮಂದಿಯನ್ನು ಕ್ವಾರಂಟೈನ್ ಗೆ ಸೂಚಿಸಲಾಗಿದೆ ಎಂದು ಡಿಸಿ ಹೇಳಿದ್ದಾರೆ.

    ಹೀಗಾಗಿ ನಿಜಾಮುದ್ದೀನ್ ಜಮಾತ್‍ನ ಮರ್ಕಜ್‍ನಿಂದ ನಮ್ಮ ಜಿಲ್ಲೆಯ ಯಾರಿಗೂ ಕೂಡ ಸೋಂಕು ತಗಲಿರುವ ಸಾಧ್ಯತೆ ತೀರಾ ಕಡಿಮೆ ಇದೆ. ಇದರಿಂದ ಜನ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಡಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

  • ಗೌರಿಬಿದನೂರಿನಲ್ಲಿ ಮತ್ತೆ ಐವರಿಗೆ ಕೊರೊನಾ – ಇಬ್ಬರ ವರದಿಗೆ ಕಾಯುತ್ತಿರುವ ವೈದ್ಯರು

    ಗೌರಿಬಿದನೂರಿನಲ್ಲಿ ಮತ್ತೆ ಐವರಿಗೆ ಕೊರೊನಾ – ಇಬ್ಬರ ವರದಿಗೆ ಕಾಯುತ್ತಿರುವ ವೈದ್ಯರು

    – ಆತಂಕದಲ್ಲಿ ಚಿಕ್ಕಬಳ್ಳಾಪುರದ ಜನತೆ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಹೊಸದಾಗಿ 5 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಸ್ಪಷ್ಟಪಡಿಸಿದ್ದಾರೆ.

    ಈ ಮೊದಲು 4 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಒಬ್ಬರೂ ಸಾವನ್ನಪ್ಪಿದ್ದರು. ಮೆಕ್ಕಾ ಪ್ರವಾಸ ಕೈಗೊಂಡು ವಾಪಸ್ ಆಗಿದ್ದ ನಂತರ ಮೊದಲು ಕೊರೊನಾ ಪತ್ತೆಯಾಗಿದ್ದ 31 ವರ್ಷದ ವ್ಯಕ್ತಿಯ ತಾಯಿ ಹಾಗೂ ಚಿಕ್ಕಮ್ಮ ಸೇರಿ ಮೂವರಿಗೆ ಸೋಂಕು ಧೃಢವಾಗಿತ್ತು. ಈ ಮೂವರು ಸಹ ಮೆಕ್ಕಾ ಪ್ರವಾಸದಿಂದ ವಾಪಸ್ ಬಂದಿದ್ದರು.

    ಈಗ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ತಂದೆಗೂ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಗೌರಿಬಿದನೂರು ನಗರದಲ್ಲೇ ಮೆಕ್ಕಾ ಪ್ರವಾಸದಿಂದ ವಾಪಸ್ ಆಗಿದ್ದ ಮಹಿಳೆ ಕೊರೊನಾಗೆ ಬಲಿಯಾಗಿದ್ದರು. ಈಗ ಮೃತ ಮಹಿಳೆಯ ಮಗ ಹಾಗೂ ಸೊಸೆ, ಅವರ ಮೊಮ್ಮಗ ಸೇರಿದಂತೆ ಸೊಸೆಯ ತಮ್ಮನಿಗೂ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಹೀಗಾಗಿ ಈ ಮೊದಲ 4 ಪ್ರಕರಣಗಳ ಜೊತೆಗೆ ಇಂದು ಹೊಸದಾಗಿ 5 ಪ್ರಕರಣಗಳು ಸೇರಿ ಒಟ್ಟು 09 ಪಾಸಿಟಿವ್ ಪ್ರಕರಣಗಳಾಗವೆ.

    ಇದಲ್ಲದೇ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ಸಹೋದರಿಯರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೂ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಅವರಿಬ್ಬರ ಅಂತಿಮ ವರದಿಗಾಗಿ ಕಾಯುತ್ತಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಹೊಸದಾಗಿ ಇಂದು ದೃಢಪಟ್ಟಿರುವ 05 ಮಂದಿ ಸೇರಿದಂತೆ ಶಂಕಿತ ಇಬ್ಬರನ್ನೂ ಸಹ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.