Tag: ಡಿಸಿ ದೀಪಾ ಚೋಳನ್

  • ಚೆಕ್‍ಪೋಸ್ಟ್ ಕರ್ತವ್ಯಕ್ಕೆ ಗೈರಾದ ಇಬ್ಬರ ಅಮಾನತು

    ಚೆಕ್‍ಪೋಸ್ಟ್ ಕರ್ತವ್ಯಕ್ಕೆ ಗೈರಾದ ಇಬ್ಬರ ಅಮಾನತು

    ಹುಬ್ಬಳ್ಳಿ: ಕೋವಿಡ್-19 ಹರಡುವುದನ್ನು ತಡೆಗಟ್ಟುವ ಹಿನ್ನೆಲೆ ಜಿಲ್ಲಾಡಳಿತವು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಿ ಸಾರ್ವಜನಿಕರ ಸಂಚಾರ ತಪಾಸಣೆಗೆ ಕ್ರಮ ಕೈಗೊಂಡಿದೆ. ಆದರೆ ಈ ಚೆಕ್‍ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಎನ್‍ಸಿಸಿ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿದ್ದಕ್ಕೆ ಅವರನ್ನು ಅಮಾನತು ಮಾಡಲಾಗಿದೆ.

    ಹುಬ್ಬಳ್ಳಿಯ ಬಮ್ಮಾಪೂರದ ಚೆಕ್‍ಪೋಸ್ಟ್ ನಲ್ಲಿ ಕರ್ತವ್ಯಕ್ಕೆ ಗೈರುಹಾಜರಾಗಿರುವ ಹುಬ್ಬಳ್ಳಿ ವಿದ್ಯಾನಗರದ ಬಿಎನ್‍ಸಿಸಿ ಕಮಾಂಡಿಂಗ್ ಆಫೀಸರ್ ಕಚೇರಿಯ ಸಿಬ್ಬಂದಿ ರವೀಂದ್ರ ಭೂಜಪ್ಪ ಆಸಂಗಿ ಹಾಗೂ ಮಹೇಶ್ ದುಂದೂರ ಅವರನ್ನು ಇಂದು ಅಮಾನತು ಮಾಡಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

    ವಿಶ್ವವ್ಯಾಪಿ ಹರಡಿರುವ ಕೊವಿಡ್-19 ಮಹಾಸಾಂಕ್ರಾಮಿಕ ರೋಗಕ್ಕೆ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಈ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿದೆ. ಸೋಂಕು ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆ ಸ್ಥಾಪಿಸಿರುವ ಚೆಕ್‍ಪೋಸ್ಟ್ ಗಳಿಗೆ ಈ ನೌಕರರು ಹಾಜರಾಗದೇ ನಿಷ್ಕಾಳಜಿ ತೋರಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

    ಈ ಸಿಬ್ಬಂದಿ ಮೇಲೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಕೊವಿಡ್-19, ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನ್ವಯ ಇಲಾಖಾ ವಿಚಾರಣೆ ಬಾಕಿ ಇರಿಸಿ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈ ನೌಕರರು ಅಮಾನತು ಅವಧಿಯಲ್ಲಿ ತಮ್ಮ ಕಾರ್ಯಾಲಯದ ಮುಖ್ಯಸ್ಥರ ಪರವಾನಿಗೆ ಪಡೆಯದೇ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ನಿರ್ದೇಶಿಸಿ ಶಿಸ್ತುಕ್ರಮ ಕೈಗೊಂಡಿದ್ದಾರೆ.

  • ಧಾರವಾಡದಲ್ಲಿ ಏ. 30ರವರೆಗೆ ಕಡಲೆ ಖರೀದಿಗೆ ನೋಂದಣಿ – ಮೇ 12ರವರೆಗೆ ಖರೀದಿ ಪ್ರಕ್ರಿಯೆ

    ಧಾರವಾಡದಲ್ಲಿ ಏ. 30ರವರೆಗೆ ಕಡಲೆ ಖರೀದಿಗೆ ನೋಂದಣಿ – ಮೇ 12ರವರೆಗೆ ಖರೀದಿ ಪ್ರಕ್ರಿಯೆ

    ಧಾರವಾಡ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಯೋಜನೆ ಅಡಿ ಜಿಲ್ಲೆಯ 13 ಖರೀದಿ ಕೇಂದ್ರಗಳಲ್ಲಿ ಏಪ್ರಿಲ್ 30ರವರೆಗೆ ರೈತರಿಂದ ನೋಂದಾಯಿಸಿ ಕೊಂಡು, ಮೇ 12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

    ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕಡಲೆ ಖರೀದಿ ಕುರಿತು ರೈತ ಮುಖಂಡರು ಹಾಗೂ ಕೃಷಿ ಉತ್ಪನ್ನ ಮಾರಾಟ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಈ ವೇಳೆ ಮಾತನಾಡಿದ ಡಿಸಿ ದೀಪಾ ಚೋಳನ್ ಅವರು, ಹಿಂಗಾರು ಹಂಗಾಮಿನ ಕಡಲೆ ಕಾಳು ಉತ್ಪನ್ನವನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ ಯೋಜನೆ ಅಡಿ ಖರೀದಿಸಿಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯನ್ನು ಏಜೇನ್ಸಿಯಾಗಿ ಗುರುತಿಸಲಾಗಿದೆ. ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಲಿಗೆ 4,875 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಹುಬ್ಬಳ್ಳಿ, ಧಾರವಾಡ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಣಾಂಗಗಳು ಸೇರಿದಂತೆ ಜಿಲ್ಲೆಯ ಹುಬ್ಬಳ್ಳಿ, ಉಪ್ಪಿನಬೆಟಗೇರಿ, ನೂಲ್ವಿ, ಹೆಬಸೂರು, ಕುಂದಗೋಳ, ಯಲಿವಾಳ, ಯರಗುಪ್ಪಿ, ಅಣ್ಣಿಗೇರಿ, ನವಲಗುಂದ, ಮೊರಬ ಹಾಗೂ ತಿರ್ಲಾಪುರ ಗ್ರಾಮಗಳಲ್ಲಿ ಆರಂಭಿಸಿರುವ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರೈತರ ನೋಂದಣಿಗೆ ಏಪ್ರಿಲ್ 30ರವರೆಗೆ ಅವಕಾಶವಿದೆ. ಮೇ 12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುವುದು. ರಾಜ್ಯ ಮತ್ತು ಕೇಂದ್ರ ಉಗ್ರಾಣ ನಿಗಮಗಳಿಗೆ ಈ ಪ್ರಕ್ರಿಯೆಗೆ ಸಹಕಾರ ನೀಡಲು ತಿಳಿಸಲಾಗುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಗೋವಿನಜೋಳ ಖರೀದಿಗೆ ಮಾಜಿ ಶಾಸಕ ಕೊನರಡ್ಡಿ ಆಗ್ರಹ:
    ಕಡಲೆ ಖರೀದಿ ಕೇಂದ್ರ ಬಂದ್ ಮಾಡಬಾರದಿತ್ತು, ರೈತರು ಗೋವಿನಜೋಳ ಮನೆಯಲ್ಲಿಟ್ಟುಕೊಂಡು ಕುಳಿತಿದ್ದಾರೆ. ಮೊನ್ನೆ ಕೃಷಿ ಸಚಿವರು ಗೋವಿನಜೋಳ ಖರೀದಿ ಕೇಂದ್ರ ಆರಂಭಿಸ್ತೇವೆ ಅಂದಿದ್ದರು. ಆದರೆ ಇನ್ನೂ ಆರಂಭವಾಗಿಲ್ಲ ಎಂದು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಸರ್ಕಾರ ಎರಡ್ಮೂರು ತಿಂಗಳ ರೇಷನ್ ಮುಂಚಿತ ಕೊಡ್ತೇವಿ ಎಂದಿದೆ. ಆದರೆ ಅಧಿಕಾರಿಗಳು ಬೆರಳಚ್ಚು ಕೇಳುತ್ತಲೇ ಇದ್ದಾರೆ. ಸರ್ಕಾರದ ನಿಯಮ ಸರಿಯಾಗಿ ಜಾರಿಯಾಗಬೇಕು ಎಂದು ಮನವಿ ಮಾಡಿದರು. ಹಾಗೆಯೇ ರೈತರ ಉತ್ಪನ್ನ ತರಲು ತೊಂದರೆ ಕೊಡಬಾರದು. ಕೃಷಿ ಚಟುವಟಿಕೆಗಳಿಗೆ ತೊಂದರೆ ಮಾಡಬಾರದು ಎಂದು ಡಿಸಿಗೆ ಕೇಳಿದ್ದೇವೆ, ಜೊತೆಗೆ ಸಿಎಂ ಪರಿಹಾರ ನಿಧಿಗೆ 50 ಸಾವಿರ ನೀಡಿದ್ದೇವೆ ಎಂದರು.

  • ಧಾರವಾಡದ ಕೊರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ

    ಧಾರವಾಡದ ಕೊರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ

    ಹುಬ್ಬಳ್ಳಿ: ಧಾರವಾಡ ಹೊಸಯಲ್ಲಾಪುರದ ನಿವಾಸಿಗೆ ಕೋವಿಡ್-19(ಕೊರೊನಾ ವೈರಸ್) ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ವ್ಯಕ್ತಿ ಎಲ್ಲೆಲ್ಲಿಗೆ ಪ್ರಯಾಣ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಸೋಂಕಿತ ವ್ಯಕ್ತಿಯು ಮಾರ್ಚ್ 11ರಂದು ಆಸ್ಟ್ರೇಲಿಯಾ ದೇಶದ ಪರ್ಥ್ ನಗರದಿಂದ ಪ್ರಯಾಣ ಪ್ರಾರಂಭಿಸಿದ್ದನು. ಇಎ 421 ಎಮಿರೇಟ್ಸ್ ವಿಮಾನದ ಮೂಲಕ ದುಬೈ ತಲುಪಿ, ದುಬೈನಿಂದ ಓಮನ್ ಏರ್‌ಲೈನ್ಸ್‌ ಮೂಲಕ ಮಧ್ಯಾಹ್ನ 12:35ಕ್ಕೆ ಮಸ್ಕತ್ ನಗರಕ್ಕೆ ತೆರೆಳಿದರು. ಮಾರ್ಚ್ 12ರ ಮಧ್ಯಾಹ್ನ 2:45ಕ್ಕೆ ಮಸ್ಕತ್ ನಗರದಿಂದ ಓಮನ್ ಏರ್‌ಲೈನ್ಸ್‌ ಮೂಲಕ ಹೊರಟು, ಸಂಜೆ 7 ಗಂಟೆಗೆ ಗೋವಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

    ಗೋವಾ ವಿಮಾನ ನಿಲ್ದಾಣದಿಂದ ಬಾಡಿಗೆ ಸ್ಕೂಟರ್ ಪಡೆದು ಪಣಜಿ ಬಸ್ ನಿಲ್ದಾಣಕ್ಕೆ ಹೋಗಿದ್ದರು. ಮಾರ್ಚ್ 12ರ ರಾತ್ರಿ 8:16ಕ್ಕೆ ವಾಹನ ಸಂಖ್ಯೆ – ಕೆ.ಎ 26 ಎಫ್ 962 ಪಣಜಿ – ಗದಗ ಬೆಟಗೇರಿ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡಿ, ಮಾರ್ಚ್ 13ರಂದು ಬೆಳಗ್ಗೆ 01 ಗಂಟೆಗೆ ಧಾರವಾಡ ಬಸ್ ನಿಲ್ದಾಣಕ್ಕೆ ಆಗಮಿಸಿರುದ್ದರು. ಅಲ್ಲಿಂದ ಆಟೋ ಮೂಲಕ ಧಾರವಾಡದ ತಮ್ಮ ಮನೆ ತಲುಪಿದ್ದರು.

    ಅನಾರೋಗ್ಯದ ಕಾರಣ ಮಾರ್ಚ್ 17ರಂದು ಧಾರವಾಡದ ಸ್ಪಂದನಾ ಆಸ್ಪತ್ರೆಗೆ ಕೊರೊನಾ ಸೋಂಕಿತ ರೋಗಿ ಭೇಟಿ ನೀಡಿದ್ದರು. ಮಾರ್ಚ್ 18ರಿಂದ 21ರವರೆಗೆ ಓಪಿಡಿ ಸಂಖ್ಯೆ 6ರೊಂದಿಗೆ ಎಸ್‍ಡಿಎಂ ಆಸ್ಪತ್ರೆಯ ರೂಮ್ ನಂಬರ್ 4ರಲ್ಲಿ ಚಿಕಿತ್ಸೆ ಪಡೆದಿದ್ದರು.

    ಈ ವ್ಯಕ್ತಿ ಪ್ರಯಾಣಿಸಿರುವ ವಿಮಾನ, ಬಸ್, ಆಟೋದಲ್ಲಿ ಪ್ರಯಾಣಿಸಿರುವವರು, ರೋಗಿ ಭೇಟಿ ನೀಡಿರುವ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಆ ಸಮಯದಲ್ಲಿ ಹಾಜರಿದ್ದ ಸಾರ್ವಜನಿಕರಿಗೂ ಸೋಂಕು ತಗಲುವ ಸಾಧ್ಯತೆ ಇದ್ದು, ಅಂತಹವರು ತಮ್ಮ ಮನೆಯಿಂದ ಹೊರಬರದೇ ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾ ಸಹಾಯವಾಣಿ 104 ಮತ್ತು 1077 ನಂಬರ್ ಗಳಿಗೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಧಾರವಾಡದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆ

    ಧಾರವಾಡದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆ

    ಧಾರವಾಡ: ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ್ದ ಓರ್ವ ವ್ಯಕ್ತಿಯಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ವಿದೇಶ ಪ್ರವಾಸದಿಂದ ಆಗಮಿಸಿದ್ದ ಈ ವ್ಯಕ್ತಿಯು ಮಾಚ್ 12ರಂದು ಧಾರವಾಡ ನಗರಕ್ಕೆ ಆಗಮಿಸಿದ್ದರು. ಶಂಕಿತ ಕೋವಿಡ್-19ರ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆ ಮಾರ್ಚ್ 18ರಂದು ವ್ಯಕ್ತಿ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಹೀಗಾಗಿ ರೋಗ ಲಕ್ಷಣಗಳಿಗೆ ಅನುಗುಣವಾಗಿ ಅದೇ ದಿನ ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗದ ವಿಡಿಆರ್‌ಎಲ್‌ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿದೆ.

    ಹೊಸಯಲ್ಲಾಪುರ ಸುತ್ತಮುತ್ತ ಕಂಟೈನಮೆಂಟ್ ಪ್ರದೇಶ ಘೋಷಣೆ:
    ಸೋಂಕು ದೃಢಪಟ್ಟಿರುವ ವ್ಯಕ್ತಿಯು ಧಾರವಾಡ ನಗರದ ಹೊಸಯಲ್ಲಾಪುರ ಪ್ರದೇಶಕ್ಕೆ ಸೇರಿದ 33 ವರ್ಷ ವಯಸ್ಸಿನವನಾಗಿದ್ದು, ಹೊಸಯಲ್ಲಾಪುರ ಪ್ರದೇಶವನ್ನು ಕಂಟೈನಮೆಂಟ್ ಎಂದು ಘೋಷಿಸಲಾಗಿದೆ. ಅಲ್ಲಿಂದ ಸುತ್ತಮುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆಗಮನ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ.

    ಈ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಂಡು ಬಂದ ಸ್ಥಳದ ಸುತ್ತಮುತ್ತ ನಿಯಮಾನುಸಾರ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಈ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ (Contact Tracing) ಸಂಗ್ರಹಿಸಲಾಗುತ್ತಿದೆ.

    ಸಾಮಾಜಿಕ ಅಂತರ, ಶುಚಿತ್ವ ಪಾಲನೆಗೆ ಒತ್ತು ನೀಡಿ:
    ಜಿಲ್ಲೆಯಾದ್ಯಂತ ಈಗಾಗಲೇ ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನತೆ ಭಯಕ್ಕೆ ಒಳಗಾಗಬಾರದು, ಸಾಮಾಜಿಕ ಅಂತರ ಹಾಗೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಸಾರ್ವಜನಿಕರು ಸಾಧ್ಯವಾದಷ್ಟು ತಮ್ಮ ಮನೆಗಳಲ್ಲಿಯೇ ಇರುವುದರ ಮೂಲಕ ವೈರಾಣು ತಡೆಯಲು ತಮ್ಮ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಅನಧಿಕೃತ ಹೂಡಿಕೆ ಬಗ್ಗೆ ಚಿತ್ರ ಮಂದಿರದಲ್ಲಿ ವಿಡಿಯೋ ಜಾಹೀರಾತಿಗೆ ಸೂಚನೆ

    ಅನಧಿಕೃತ ಹೂಡಿಕೆ ಬಗ್ಗೆ ಚಿತ್ರ ಮಂದಿರದಲ್ಲಿ ವಿಡಿಯೋ ಜಾಹೀರಾತಿಗೆ ಸೂಚನೆ

    ಧಾರವಾಡ: ಅನಧಿಕೃತ ಹೂಡಿಕೆಗಳ ಕುರಿತು ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಚಲನಚಿತ್ರ ಮಂದಿರಗಳಲ್ಲಿ ವಿವಿಧ ವಿಡಿಯೋ ಜಾಹೀರಾತುಗಳನ್ನು ಪ್ರದರ್ಶಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸುತ್ತೋಲೆ ಹೊರಡಿಸಿದ್ದಾರೆ.

    ವಿವಿಧ ಅನಧಿಕೃತ ಕಂಪನಿಗಳ ಆಮಿಷಕ್ಕೆ ಮರುಳಾಗಿ ಹಣ ಕಳೆದುಕೊಳ್ಳುತ್ತಿರುವ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ 15 ಸೆಕೆಂಡುಗಳ ಸಾರ್ವಜನಿಕ ಹಿತಾಸಕ್ತಿ ಸರ್ಕಾರಿ ವಿಡಿಯೋ ಜಾಹೀರಾತುಗಳನ್ನು ಉಚಿತವಾಗಿ ಧಾರವಾಡ ಜಿಲ್ಲೆಯ ಎಲ್ಲ ಚಲನಚಿತ್ರ ಮಂದಿರಗಳ ಮಾಲೀಕರು ಪ್ರತಿ ಚಲನಚಿತ್ರ ಪ್ರದರ್ಶಿಸುವ ಆರಂಭದಲ್ಲಿ ಹಾಗೂ ವಿರಾಮ ಸಂದರ್ಭದಲ್ಲಿ ಪ್ರದರ್ಶಿಸಲು ಸುತ್ತೋಲೆ ಮೂಲಕ ನಿರ್ದೇಶಿಸಲಾಗಿದೆ.

    ಕರ್ನಾಟಕ ಚಲನಚಿತ್ರ ನಿಯಂತ್ರಣ ಕಾಯ್ದೆ 1964ರ ನಿಯಮ 12ರ ಅನ್ವಯ ಈ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರಿ ವಿಡಿಯೋ ಜಾಹೀರಾತುಗಳನ್ನು ಪ್ರದರ್ಶಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.