Tag: ಡಿಸಿ ತಮ್ಮಣ್ಣ

  • ಲೋಕಸಮರದ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್!

    ಲೋಕಸಮರದ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್!

    ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಲೋಕಸಭೆ ಚುನಾವಣೆ ಬಳಿಕ ಬಸ್ ಟಿಕೆಟ್ ದರ ಹೆಚ್ಚಳ ಕುರಿತು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಚುನಾವಣೆ ಮುಗಿಯುವವರೆಗೂ ಪ್ರಯಾಣ ದರ ಏರಿಕೆ ಬೇಡ ಎಂದು ಸಿಎಂ ಹೇಳಿದ್ದಾರೆ ಎಂದರು. ಈ ಮೂಲಕ ಲೋಕಸಭೆ ಚುನಾವಣೆ ಬಳಿಕ ಬಸ್ ಪ್ರಯಾಣ ದರ ಹೆಚ್ಚಳ ಖಚಿತ ಎಂಬ ಸುಳಿವನ್ನು ನೀಡಿದರು.

    ಇದೇ ವೇಳೆ ಬಾಡಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ ಪ್ರಸ್ತಾಪ ಕೈ ಬಿಟ್ಟಿರುವುದಾಗಿ ಸ್ಪಷ್ಟನೆ ನೀಡಿದರು. ಎಲೆಕ್ಟ್ರಿಕ್ ಬಸ್ ಖರೀದಿಗೆ ಸರ್ಕಾರ ಅನುಮತಿಯೇ ಕೊಟ್ಟಿರಲಿಲ್ಲ. ಹಿಂದಿನ ಸರ್ಕಾರದ ಅಧಿಕಾರಿಗಳು ಎಲೆಕ್ಟ್ರಿಕ್ ಬಸ್ ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಬಾಡಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಗೆ ನನ್ನ ವಿರೋಧ ಇತ್ತು. ನಾನು ಸ್ವತಃ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ನಾವೇ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಿದರೆ ನಮಗೆ ಹೆಚ್ಚು ಅನುಕೂಲ ಆಗುತ್ತೆ ಈ ಪ್ರಸ್ತಾಪ ಕೈ ಬಿಟ್ಟಿದ್ದೇವೆ. ನಾವೇ 80 ಬಸ್ ಖರೀದಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇಲಾಖೆಯಲ್ಲಿ ಇರುವ ಹಳೆ ಬಸ್ ಬದಲಾವಣೆ ಮಾಡಲು ಹೊಸ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. 3 ಸಾವಿರ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಖರೀದಿ ಮಾಡುತ್ತಿದ್ದೇವೆ. 7 ಲಕ್ಷ ಕಿಲೋಮೀಟರ್ ಓಡಿರುವ ಬಸ್ ಗಳನ್ನ ಬದಲಾವಣೆ ಮಾಡಲಾಗುತ್ತೆ. ಹಳೆ ಬಸ್ ಗಳ ಬದಲಾವಣೆ ಮಾಡಿ ಮತ್ತಷ್ಟು ಸುಸ್ಥಿತಿಯಲ್ಲಿ ಬಸ್ ಸೇವೆ ಸಾರ್ವಜನಿಕರಿಗೆ ಒದಗಿಸುತ್ತೇವೆ ಎಂದರು. ಅಲ್ಲದೇ ಆರ್ ಟಿಓ ಹುದ್ದೆಗಳು ಖಾಲಿ ಇದ್ದು, ಹೊಸ ನೇಮಕಾತಿಗೆ ಕೇಂದ್ರ ಸರ್ಕಾರದ ಕಾಯ್ದೆ ಅಡ್ಡಿ ಇದೆ. ಚುನಾವಣೆ ಆದ ಬಳಿಕ ಕಾಯ್ದೆಗೆ ಒಂದಿಷ್ಟು ಬದಲಾವಣೆ ತಂದು ನಮ್ಮ ಇಲಾಖೆಯೆ ಆರ್ ಟಿಓ ನೇಮಕಾತಿ ಮಾಡಿಕೊಳ್ಳುತ್ತೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಧನ ದರ ಏರಿಕೆ ಇಳಿಕೆ ಆಗುವಂತೆ 3 ತಿಂಗ್ಳಿಗೊಮ್ಮೆ ಬಸ್ ಪ್ರಯಾಣ ದರ ನಿಗದಿ: ಡಿಸಿ ತಮ್ಮಣ್ಣ

    ಇಂಧನ ದರ ಏರಿಕೆ ಇಳಿಕೆ ಆಗುವಂತೆ 3 ತಿಂಗ್ಳಿಗೊಮ್ಮೆ ಬಸ್ ಪ್ರಯಾಣ ದರ ನಿಗದಿ: ಡಿಸಿ ತಮ್ಮಣ್ಣ

    ಬೆಂಗಳೂರು: ದೇಶದಲ್ಲಿ ಇಂಧನ ದರ ಏರಿಕೆ ಇಳಿಕೆ ಆಗುವಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಬಸ್ ಪ್ರಯಾಣ ದರ ನಿಗದಿ ಮಾಡುವ ಹೊಸ ಯೋಚನೆಯನ್ನು ಸಾರಿಗೆ ಇಲಾಖೆ ಮಾಡಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ರಾಜ್ಯದಲ್ಲಿ ಸದ್ಯ 5 ವರ್ಷಗಳಿಗೊಮ್ಮೆ ಪ್ರಯಾಣ ದರ ಏರಿಕೆ ಮಾಡುವ ಪದ್ಧತಿ ಇದ್ದು, ಇದರ ಬದಲು ಇಂಧನ ದರಕ್ಕೆ ಅನುಗುಣವಾಗಿ ಬಸ್ ಪ್ರಯಾಣ ದರ ನಿಗದಿ ಮಾಡುವಂತೆ ಸಿಎಂ ಕುಮಾರಸ್ವಾಮಿ ಅವರೇ ಸಲಹೆ ಕೊಟ್ಟಿದ್ದಾರೆ. ಸಿಎಂ ಕೊಟ್ಟ ದರ ಪರಿಷ್ಕರಣೆ ಸಲಹೆಯನ್ನೇ ಈಗ ಅವರಿಗೆ ಮನವಿ ರೂಪದಲ್ಲಿ ನೀಡಲಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ಹಳ್ಳಿಗಳಿಗೂ ಐಷಾರಾಮಿ ಬಸ್:
    ಹಳೆ ಬಸ್‍ಗಳನ್ನು ಕೊಟ್ಟು ಹೊಸ ಬಸ್‍ಗಳ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದ್ದು, ಸ್ಲೀಪರ್ ಕೋಚ್, ಲಕ್ಷುರಿ ಬಸ್ ಸೇರಿ ಒಟ್ಟು 3 ಸಾವಿರ ಬಸ್ ಖರೀದಿಗೆ ನಿರ್ಧರಿಸಲಾಗಿದೆ. ಕೆಲ ಹಳ್ಳಿಗಳಲ್ಲಿನ ಜನ ನಮಗೆ ಹಳೆಯ ಬಸ್ ನೀಡುತ್ತೀರಾ ಎಂದು ಪ್ರಶ್ನೆ ಮಾಡಿದ್ದು, ಹಾಗಾಗಿ ಈಗ ಖರೀದಿ ಮಾಡುವ ಹೊಸ ಬಸ್‍ಗಳಲ್ಲಿ ಕೆಲವುಗಳನ್ನು ಹಳ್ಳಿಗಳಿಗೆ ಕಳುಹಿಸುವ ಯೋಚನೆ ಇದೆ ಎಂದು ಸಚಿವರು ತಿಳಿಸಿದರು.

    ರಾಜ್ಯ ಸಾರಿಗೆ ಇಲಾಖೆ ನಷ್ಟದಲ್ಲಿರೋವುದು ಅಧಿಕಾರಿಗಳ ಅವ್ಯವಹಾರದಿಂದ ಹೊರತು ಕಡಿಮೆ ಆದಾಯದಿಂದಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದೇವೆ. ನಾಲ್ಕೂ ನಿಗಮಗಳಲ್ಲೂ ಅಕ್ರಮ ನಡೆಯುತ್ತಿದೆ. ಸಾರಿಗೆ ಇಲಾಖೆ ನಷ್ಟ ಅನುಭವಿಸಲು ಅಕ್ರಮಗಳೇ ಕಾರಣವಾಗಿದೆ ಎಂದು ದೂರಿದ್ದಾರೆ. ಅಲ್ಲದೇ ಯಾರೇ ಅಕ್ರಮ ಮಾಡಿದರು ಸುಮ್ಮನೇ ಬಿಡಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

    ಜೆಡಿಎಸ್ ಪಕ್ಷದ ನಾಯಕರುಗಳಿಗೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಸಮಾಧಾನ ತಂದಿಲ್ಲ. ಬದಲಾಗಿ ಅಡ್ಜಸ್ಟ್ ಮೆಂಟ್ ಮಾಡಿಕೊಂಡು ಹೋಗುತ್ತಿದ್ದೇವೆ ಎಂಬ ರೀತಿಯಲ್ಲಿ ಸಚಿವರು ಹೇಳಿದ್ದು. ಅಡ್ಜಸ್ಟ್ ಮೆಂಟ್ ರಾಜಕೀಯ ಇದ್ದರೆ ಮಾತ್ರಾ ಎಲ್ಲಾ ಸುಗಮವಾಗಿ ನಡೆಯುತ್ತೆ, ಸರ್ಕಾರ ನಡೆಯಬೇಕಾದರೆ ಹೊಂದಿಕೊಂಡು ಹೋಗುವುದು ಅನಿವಾರ್ಯ, ವಾಜಪೇಯಿ ಇಪ್ಪತ್ತಮೂರು ಪಕ್ಷಗಳ ಜೊತೆ ಹೊಂದಿಕೊಂಡು ಸರ್ಕಾರ ನಡೆಸಿರಲಿಲ್ವಾ. ಅಂತೆಯೇ ಸಿಎಂ ಎಚ್‍ಡಿಕೆ ಅವರು, ಹೊಂದಿಕೊಂಡು ಹೋಗಬೇಕಿದೆ ಅಷ್ಟೇ ಎಂದು ಹೇಳಿದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಏನಾದರು ಸಮಸ್ಯೆ ಆಗುತ್ತಿದ್ದೇಯಾ ಎಂಬ ಪ್ರಶ್ನೆಗೆ, ಅದನ್ನೆಲ್ಲಾ ಹೇಳೋಕೆ ಆಗಲ್ಲ ಎಂದು ಪರೋಕ್ಷವಾಗಿ ಸಮಸ್ಯೆ ಆಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

    ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

    ಮಂಡ್ಯ: ಜಿಲ್ಲೆಗೆ 5 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಘೋಷಿಸಿದ ಬೆನ್ನಲ್ಲೇ ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

    ಹೌದು. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಿದ್ದ ಕೇಸುಗಳ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮದ್ದೂರಿನ ಕೆಎಂ ದೊಡ್ಡಿಯಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಾವೇರಿ ಹೋರಾಟದ ಸಮಯದಲ್ಲಿ ರೈತರ ಮೇಲೆ ದಾಖಲಾಗಿದ್ದ ಶೇ.95 ರಷ್ಟು ಕೇಸುಗಳನ್ನು ಕೈಬಿಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

    ಈಗಾಗಲೇ ರೈತರ ಮೇಲೆ ಹೂಡಿರುವ ಕೇಸುಗಳ ಬಗ್ಗೆ ತಾಲೂಕುವಾರು ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೋರಾಟದ ಸಂದರ್ಭದಲ್ಲಿ ಸರ್ಕಾರದ ಆಸ್ತಿ-ಪಾಸ್ತಿ ನಷ್ಟ ಮಾಡಿರುವ ಕೇಸುಗಳು ವಾಪಸ್ ಪಡೆಯಲಿದ್ದೇವೆ. ಆದರೆ ಖಾಸಗಿ ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಕ್ಯಾಮೆರಾ, ಕಾರುಗಳ ಜಖಂ, ಅಂಗಡಿ, ಮುಗ್ಗಟ್ಟು ಮೇಲೆ ಕಲ್ಲು ತೂರಾಟ, ಪಾಂಡವಪುರ ಜಡ್ಜ್ ಮನೆ ಮೇಲೆ ದಾಳಿ ಸೇರಿದಂತೆ ಖಾಸಗಿಯಾಗಿ ನೀಡಿರುವ ಕೇಸುಗಳು ಕೋರ್ಟ್ ನಲ್ಲೇ ಇತ್ಯರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

    ಈಗಾಗಲೇ ಹೋರಾಟಗಾರರ ಪಟ್ಟಿ ಕಾರ್ಯ ಭರದಿಂದ ಸಾಗಿದ್ದು, ಇದೇ ತಿಂಗಳು 27 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅಂದೇ ಕಾವೇರಿ ಹೋರಾಗಾರರ ಮೇಲಿನ ಕೇಸ್ ವಾಪಸ್ ಪಡೆಯುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಪುಣ್ಯತಿಥಿ ವೆಚ್ಚವನ್ನು ನಾನೇ ಭರಿಸುತ್ತೇನೆ: ಸಚಿವ ಡಿಸಿ ತಮ್ಮಣ್ಣ

    ಹುತಾತ್ಮ ಯೋಧನ ಪುಣ್ಯತಿಥಿ ವೆಚ್ಚವನ್ನು ನಾನೇ ಭರಿಸುತ್ತೇನೆ: ಸಚಿವ ಡಿಸಿ ತಮ್ಮಣ್ಣ

    ಮಂಡ್ಯ: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮದ ಖರ್ಚು ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ಜಿಲ್ಲೆಯ ಕೆಎಂ ದೊಡ್ಡಿಯಲ್ಲಿ ಮಾತನಾಡಿದ ಸಚಿವರು, ಗುರು ನಮ್ಮ ಊರಿನ ಯೋಧ ಆಗಿರುವುದರಿಂದ ನಾನೇ ಖರ್ಚು ಭರಿಸುತ್ತೇನೆ. ನಮ್ಮ ಬೆಂಬಲಿಗರು ಕೂಡ ಎಲ್ಲ ಕಾರ್ಯದಲ್ಲೂ ಸಹಾಯ ಮಾಡುತ್ತಾರೆ ಎಂದರು.

    ಗುರು ಸ್ಮಾರಕ:
    ಪುಣ್ಯಕಾರ್ಯದಂದು ಸುಮಾರು 4 ರಿಂದ 5 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಸಂಪ್ರದಾಯದಂತೆ ಏನೆಲ್ಲಾ ಊಟ ಮಾಡಬೇಕೆಂದು ನಿಗದಿ ಆಗಿಂದೆಯೋ ಎಲ್ಲವನ್ನೂ ಮಾಡುತ್ತೇವೆ. ಸದ್ಯದಲ್ಲೇ ಹುತಾತ್ಮ ಯೋಧ ಗುರು ಸ್ಮಾರಕ ಕೂಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

    ಜೆಡಿಎಸ್‍ಗೆ ನಷ್ಟವಿಲ್ಲ: ಇದೇ ವೇಳೆ ಸುಮಲತಾ ಅಂಬರೀಶ್ ಅವರ ಲೋಕಸಭಾ ಸ್ಪರ್ಧೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸುಮಲತಾ ಅವರು ನಮ್ಮ ಸಂಬಂಧಿಕರೇ ಆಗಿದ್ದಾರೆ. ಆದರೆ ಸಂಬಂಧ ಅಥವಾ ಪಕ್ಷ ಎಂದು ಬಂದಾಗ ನನಗೇ ಪಕ್ಷವೇ ಮುಖ್ಯವಾಗುತ್ತದೆ ಎಂದರು.

    ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಸುಮಲತಾ ಅವರ ಸಂಬಂಧಿಕರ ಮೂಲಕ ಸಿಎಂ ಜೊತೆ ಮಾತನಾಡಿ ನಿರ್ಧಾರ ಮಾಡುವ ಬಗ್ಗೆ ಅವರಿಗೆ ತಿಳಿಸಲು ಹೇಳಿದ್ದೆ. ಆದರೆ ಅವರು ಬರಲಿಲ್ಲ. ಯಾರಿಗೆ ಅವಶ್ಯಕವಾಗಿದೆಯೋ ಅವರು ಮಾತುಕತೆಗೆ ಮುಂದಾಗಬೇಕು. ಆದರೆ ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮಂಡ್ಯ ಲೋಕಸಭೆಗೆ ದೇವೇಗೌಡರೇ ಬಂದರೆ ಯಾವುದೇ ವಿವಾದ ಇಲ್ಲದಂತಾಗುತ್ತದೆ. ನಿಖಿಲ್ ಸ್ಪರ್ಧೆ ಮಾಡಿದರು ಕೂಡ ಸಂತೋಷ. ನನ್ನ ಮಗನಿಗೆ ಟಿಕೆಟ್ ಸಿಗದಿದ್ದಾಗಲೂ ನಾನು ಪಕ್ಷ ನಿಷ್ಠೆ ಮೆರೆದಿದ್ದೇನೆ. ಒಂದು ವೇಳೆ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಿದರೂ ಜೆಡಿಎಸ್ ಗೆ ಏನೂ ಆಗುವುದಿಲ್ಲ ಎಂದು ಡಿಸಿ ತಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

    ಅಂಬರೀಶ್ ಹಾಗೂ ಡಿಸಿ ತಮ್ಮಣ್ಣ ಅವರು ಬೇರೆ ಬೇರೆ ಪಕ್ಷದಲ್ಲಿದ್ದರೂ ಕೂಡ ದೊಡ್ಡರಸಿನಕೆರೆ ಗ್ರಾಮದವರಾಗಿದ್ದ ಪರಿಣಾಮ ಹೆಚ್ಚು ಆತ್ಮೀಯರಾಗಿದ್ದರು. ದೊಡ್ಡರಸಿನಕೆರೆ ಗ್ರಾಮಕ್ಕೆ ಬರುವ ಸಮಯದಲ್ಲಿ ಹೆಚ್ಚು ಸಲ ಸಚಿವ ಡಿಸಿ ತಮ್ಮಣ್ಣ ಅವರ ಕಾರಿನಲ್ಲೇ ಅಂಬರೀಶ್ ಆಗಮಿಸುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಕುಟುಂಬಕ್ಕೆ ಫೋನಿನಲ್ಲಿ ಸಾಂತ್ವಾನ ಹೇಳಿದ ಸಚಿವ ಡಿಸಿ ತಮ್ಮಣ್ಣ

    ಹುತಾತ್ಮ ಯೋಧನ ಕುಟುಂಬಕ್ಕೆ ಫೋನಿನಲ್ಲಿ ಸಾಂತ್ವಾನ ಹೇಳಿದ ಸಚಿವ ಡಿಸಿ ತಮ್ಮಣ್ಣ

    ಮಂಡ್ಯ: ಉಗ್ರನ ಆತ್ಮಾಹುತಿ ದಾಳಿಗೆ ಮಂಡ್ಯದ ಗಂಡು 33 ವರ್ಷದ ಗುರು ಬಲಿಯಾಗಿದ್ದಾರೆ. ಈ ಹೀನ ಕೃತ್ಯವನ್ನು ರಾಜ್ಯ ಹಾಗೂ ಇಡೀ ದೇಶವೇ ಖಂಡಿಸುತ್ತಿದ್ದು, ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಆದ್ರೆ ರಾಜ್ಯದ ಸಾರಿಗೆ ಸಚಿವರು ಮಾತ್ರ ಫೋನಿನಲ್ಲಿ ಮೃತ ಯೋಧ ಗುರು ತಂದೆಯ ಜೊತೆ ಮಾತನಾಡುವ ಮೂಲಕ ಸಾಂತ್ವಾನ ಹೇಳಿದ್ದಾರೆ.

    ಹೌದು. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಡಿಸಿ ತಮ್ಮಣ್ಣ ಅವರು ಮಗನ ಕಳೆದುಕೊಂಡು ದುಃಖದಲ್ಲಿರುವ ಹುತಾತ್ಮ ಯೋಧ ಗುರು ತಂದೆಯ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ. ಈ ವೇಳೆ ಹೊನ್ನಯ್ಯ ಅವರು,”ನನ್ನ ಮಗ ಹೊರಟು ಹೋದ್ನಲ್ಲ ಸಾರ್” ಎಂದು ಮಗನನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಸಚಿವರ ಈ ನಡೆಗೆ ಸ್ಥಳೀಯರು ಕಿಡಿಕಾರಿದ್ದಾರೆ. ಇದನ್ನೂ ಓದಿ:  ನಮ್ಮವರನ್ನು ಹೇಗೆ ಬ್ಲಾಸ್ಟ್ ಮಾಡಿದ್ರೋ ಹಾಗೆಯೇ ಅವ್ರನ್ನು ಕೊಂದು ಬಿಡಿ ಪ್ಲೀಸ್ – ಗುರು ಪತ್ನಿ ಮನವಿ

    ನಿನ್ನೆಯಿಂದ ಮದ್ದೂರು ತಾಲೂಕಿನ ಗುರು ನಿವಾಸಲ್ಲಿ ನೀರವ ಮೌನ ಆವರಿಸಿದೆ. ಅಲ್ಲದೆ ಪತ್ನಿ, ಹೆತ್ತವರು, ಗೆಳೆಯರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದ್ರೆ ಸ್ಥಳಕ್ಕೆ ಯಾವ ರಾಜಕೀಯ ನಾಯಕರು ಬಂದಿಲ್ಲ. ಹೀಗಾಗಿ ರಾಜ್ಯ ರಾಜಕೀಯ ನಾಯಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಇಂದು ದೂರವಾಣಿಯಲ್ಲಿ ಯೋಧ ಕುಟುಂಬಸ್ಥರೂಂದಿಗೆ ಪೋನ್‍ನಲ್ಲಿ ಮಾತನಾಡಿ ಸಾಂತ್ವಾನ ಹೇಳಿದ್ದಾರೆ.

    ಕೃತ್ಯ ನಡೆದಿದ್ದು ಹೇಗೆ?
    ಗುರುವಾರ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 47 ಮಂದಿ ಸೈನಿಕರು ವೀರಮರಣವನ್ನು ಅಪ್ಪಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಘೋಷಣೆ

    ಸ್ಫೋಟದ ತೀವ್ರತೆ ಎಷ್ಟು ಇತ್ತು ಎಂದರೆ ಸೈನಿಕರ ದೇಹದ ಭಾಗಗಳು ಹೈವೇಯ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸ್ಫೋಟಕಗೊಂಡ ಬಳಿಕ ಉಳಿದ ಬಸ್ಸುಗಳು ನಿಂತ ಮೇಲೆ ಅವುಗಳ ಮೇಲೂ ಉಗ್ರರು ದಾಳಿ ನಡೆಸಿದ್ದಾರೆ. ಆತ್ಮಾಹುತಿ ದಾಳಿಕೋರ ಬಸ್ಸಿಗೆ ಕಾರನ್ನು ಡಿಕ್ಕಿ ಹೊಡೆದ ಬಳಿಕ ಉಳಿದ ಬಸ್ಸು ನಿಂತ ಕೂಡಲೇ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಹೀಗಾಗಿ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಉಗ್ರರ ಈ ದಾಳಿಗೆ ಸಾಕ್ಷ್ಯ ಎಂಬಂತೆ ಬಸ್ಸಿನ ಹಿಂಭಾಗದಲ್ಲಿ ಬುಲೆಟ್ ಗುರುತು ಬಿದ್ದಿದೆ. ವಿಪರೀತ ಮಂಜು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಶ್ರೀನಗರ ಹೆದ್ದಾರಿ ಕಳೆದ ಎರಡು ದಿನಗಳಿಂದ ಮುಚ್ಚಲ್ಪಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಯಾವಾಗ ಬೇಕಾದ್ರೂ ಸರ್ಕಾರ ಬೀಳಲಿ, ಚಿಂತಿಸಲ್ಲ- ಡಿಸಿ ತಮ್ಮಣ್ಣ

    ಯಾವಾಗ ಬೇಕಾದ್ರೂ ಸರ್ಕಾರ ಬೀಳಲಿ, ಚಿಂತಿಸಲ್ಲ- ಡಿಸಿ ತಮ್ಮಣ್ಣ

    ದಾವಣಗೆರೆ: ಸರ್ಕಾರ ಬೀಳೋದಾದ್ರೆ ಯಾವಾಗ ಬೇಕಾದ್ರೆ ಬೀಳಲಿ. ಈ ಬಗ್ಗೆ ನಮಗೇನೂ ಚಿಂತೆ ಇಲ್ಲ. ಇರುವಷ್ಟು ದಿನ ನೆಮ್ಮದಿಯಾಗಿ ಕೆಲಸ ಮಾಡುತ್ತೇವೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅಸ್ಥಿರದ ಬಗ್ಗೆ ಯಾರೂ ಕೂಡ ಚಿಂತೆ ಮಾಡುವುದಿಲ್ಲ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡುತ್ತೇವೆ. ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತದೆ ಅಂದ್ರು.

    ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಯಾರೂ ಎಲ್ಲೂ ಹೋಗೋದಿಲ್ಲ. ಯಾವುದೂ ಆಗೋದು ಕೂಡ ಇಲ್ಲ. ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ಸಂಕ್ರಾತಿ ನಂತರ ಯಾವ ಕ್ರಾಂತಿಯಾಗುವುದಿಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡಲಿ. ರಾಜ್ಯದ ಜನತೆ ನೋಡಿದ್ದಾರೆ. ಹೀಗಾಗಿ ತೀರ್ಮಾನ ರಾಜ್ಯದ ಮಹಾಜನತೆ ಕೊಡುತ್ತಾರೆ. ಆದ್ದರಿಂದ ನಾವುಗಳು ಈ ಬಗ್ಗೆ ತೀರ್ಮಾನ ಕೊಡಲು ಆಗಲ್ಲ ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೀಘ್ರದಲ್ಲಿ ಆರ್‌ಟಿಓ ಅಧಿಕಾರಿಗಳ ನೇಮಕಾತಿ – ಡಿಸಿ ತಮ್ಮಣ್ಣ

    ಶೀಘ್ರದಲ್ಲಿ ಆರ್‌ಟಿಓ ಅಧಿಕಾರಿಗಳ ನೇಮಕಾತಿ – ಡಿಸಿ ತಮ್ಮಣ್ಣ

    – ಆರ್‌ಟಿಓ ಅಧಿಕಾರಿ ನೇಮಕಾತಿಯ ಪರೀಕ್ಷೆ ಹೇಗೆ ಇರುತ್ತೆ?

    ಬೆಂಗಳೂರು: ಒಬ್ಬ ಅಧಿಕಾರಿ ಎರಡರಿಂದ ಮೂರು ಆರ್‌ಟಿಓ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಶೀಘ್ರವೇ ಖಾಲಿಯಿರುವ 271 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಾನು ಸಚಿವನಾದ ಮೇಲೆ ಸಾರಿಗೆ ಇಲಾಖೆಯಲ್ಲಿ ಖಾಲಿಯಿದ್ದ 2.5 ಸಾವಿರ ಹುದ್ದೆ ಭರ್ತಿಯಾಗಿವೆ. ಈಗಾಗಲೇ ಚಾಲಕ, ನಿರ್ವಾಹಕ ಹಾಗೂ ಮೆಕ್ಯಾನಿಕಲ್ ಹುದ್ದೆಗಳು ಕೂಡ ಭರ್ತಿಯಾಗಿವೆ. ರಾಜ್ಯದಲ್ಲಿ ಆರ್‌ಟಿಓ ಅಧಿಕಾರಿಗಳ ಕೊರತೆ ಎದರುರಾಗಿದ್ದು, ಈ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

    ಪರೀಕ್ಷೆ ಹೇಗಿರುತ್ತೇ?:
    ಆರ್‌ಟಿಓ ಅಧಿಕಾರಿಗಳ ನೇಮಕಾತಿ ನಿಟ್ಟಿನಲ್ಲಿ ಕೆಪಿಎಸ್‍ಸಿ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷ ತರಬೇತಿ ಇರುತ್ತದೆ. ತರಬೇತಿ ಬಳಿಕವೂ ಒಂದು ಪರೀಕ್ಷೆ ನಡೆಸಿ, ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ತಿಳಿಸಿದರು.

    ಚೆಕ್ ಪೋಸ್ಟ್‍ಗಳಲ್ಲಿ ಹಣ ವಸೂಲಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಚೆಕ್‍ಪೋಸ್ಟ್‍ಗಳನ್ನ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ. ವಾಹನಗಳಿಗೆ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಮೂಲಕ ಪ್ರತಿಯೊಂದು ವ್ಯವಹಾರ ದಾಖಲಾಗಲಿದ್ದು, ಹಣ ವಸೂಲಿ ಮಾಹಿತಿ ಸಿಕ್ಕರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದರು.

    ಈ ಯೋಜನೆ ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ಎಲ್ಲವನ್ನೂ ಈಗಲೇ ಸರಿ ಮಾಡೋಕೆ ಆಗಲ್ಲ. ಹಂತ ಹಂತವಾಗಿ ಸರಿಪಡಿಸುತ್ತೇವೆ ಎಂದು ಸಚಿವರು ಗರಂ ಆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತಚಲಾಯಿಸಿದ ಅಂಬಿ!

    ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತಚಲಾಯಿಸಿದ ಅಂಬಿ!

    ಮಂಡ್ಯ: ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಅವರು ಮೊಬೈಲ್ ಟಾರ್ಚ್ ಲೈಟ್ ಸಹಾಯದಿಂದ ಮತದಾನ ಮಾಡಿದ್ದಾರೆ.

    ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಲು ಅಂಬರೀಶ್ ಹಾಗೂ ಡಿ.ಸಿ.ತಮ್ಮಣ್ಣ ಸ್ವಗ್ರಾಮಕ್ಕೆ ಭೇಟಿ ನೀಡಿ ಮತದಾನವನ್ನು ಮಾಡಿದರು. ಈ ವೇಳೆ ವಿವಿ ಪ್ಯಾಟ್ ಬಳಿ ನಿಂತು ಏನೋ ಇಲ್ಲಿ ಕತ್ತಲೆ ಎಂದು ಬೆಂಬಲಿಗರಿಗೆ ಹೇಳಿದರು. ಬಳಿಕ ಬೆಂಬಲಿಗರು ಮೊಬೈಲ್ ಟಾರ್ಚ್ ವ್ಯವಸ್ಥೆ ಮಾಡಿದರು. ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಅಂಬರೀಶ್ ವೋಟ್ ಮಾಡಿದರು.

    ಮತಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬಿ ಉಪಚುನಾವಣೆಯ ಫಲಿತಾಂಶ ಕುರಿತು ಈ ಚುನಾವಣೆ ಸರಿಯಿಲ್ಲ. ಮೂರು ಮೂರು ದಿನಕ್ಕೆ ಚುನಾವಣೆ 13 ದಿನಕ್ಕೆ ಕಳೆದುಹೋಗುತ್ತದೆ. ಮತ್ತೆ ಓಡಾಡಬೇಕು. 5 ಕ್ಷೇತ್ರದಲ್ಲಿ ಐದು ಕ್ಷೇತ್ರ ಗೆಲ್ಲುತ್ತೇವೆ ಎಂದರು. ಈ ವೇಳೆ ರಾಮನಗರದಲ್ಲಾದ ಬೆಳವಣಿಗೆಗಳಿಗೆ ಅದು ಸರಿಯಾದುದ್ದಲ್ಲ. ಆದರೆ ಒಳಗಡೆ ಏನೇನೂ ಮಾತುಕತೆಗಳು ನಡೆದಿದೆಯೋ ಯಾರಿಗೂ ಗೊತ್ತಿಲ್ಲ. ಮನಸ್ತಾಪ ಇರಬಹುದು ಅಥವಾ ಬೇರೆ ರೀತಿಯ ವ್ಯವಹಾರ ಇರಬಹುದು ಅಷ್ಟೇ ಎಂದರು.

    ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಆಳ್ವಿಕೆ ಮಾಡಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ರಾಜ್ಯದಲ್ಲೇ ಜೆಡಿಎಸ್, ಕಾಂಗ್ರೆಸ್ ಆಳ್ವಿಕೆಯಲ್ಲಿದೆ ಇನ್ನೂ ಮಂಡ್ಯದಲ್ಲಿ ಆಗೋದಿಲ್ಲವೇ ಈ ಬಾರಿ ದಾಖಲೆಯ ಅಂತರದಲ್ಲಿ ಶಿವರಾಮೇಗೌಡರು ಗೆಲ್ಲಲೇಬೇಕು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂದು ಶಿವರಾಮೇಗೌಡರ ವಿರುದ್ಧ ಎಚ್‍ಡಿಡಿ ಪ್ರತಿಭಟಿಸಿದ್ದು ಯಾಕೆ: ಉತ್ತರ ಕೊಟ್ಟ ಡಿಸಿ ತಮ್ಮಣ್ಣ

    ಅಂದು ಶಿವರಾಮೇಗೌಡರ ವಿರುದ್ಧ ಎಚ್‍ಡಿಡಿ ಪ್ರತಿಭಟಿಸಿದ್ದು ಯಾಕೆ: ಉತ್ತರ ಕೊಟ್ಟ ಡಿಸಿ ತಮ್ಮಣ್ಣ

    ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಶಿವರಾಮೇಗೌಡರ ವಿರುದ್ಧ ಹಿಂದೆ ದೇವೇಗೌಡರು ಪ್ರತಿಭಟನೆ ನಡೆಸಿದ್ದು ಯಾಕೆ ಎನ್ನುವುದಕ್ಕೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಉತ್ತರ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವರಾಮೇಗೌಡ ಸುಸಂಸ್ಕೃತ ಕುಟುಂಬದಿಂದ ಬಂದವರು. ಅವರು ಬೀದಿಯಿಂದ ಬಂದವರಲ್ಲ. ಅವರಿಗೆ ಸಮಾಜದಲ್ಲಿ ಗೌರವ, ಘನತೆ ಇದೆ. ಕೇಸ್ ಇದ್ದ ಮಾತ್ರಕ್ಕೆ ಶಿವರಾಮೇಗೌಡರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದರು.

    ಇದೇ ವೇಳೆ ಸುಮಾರು 25 ವರ್ಷಗಳ ಹಿಂದೆ ಪತ್ರಕರ್ತ ಗಂಗಾಧರ್ ಕೊಲೆ ಕೇಸಿನ ವಿಚಾರವಾಗಿ, ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಮಾತನಾಡಿ, ಪತ್ರಕರ್ತ ಗಂಗಾಧರ್ ಮೂರ್ತಿ ಕೊಲೆ ಸಂದರ್ಭ ದೇವೇಗೌಡರು ಶಿವರಾಮೇಗೌಡ ವಿರುದ್ಧ ಪ್ರತಿಭಟಿಸಿದ್ದು ರಾಜಕೀಯದಲ್ಲಿ ಸಹಜ. ಸಿದ್ದರಾಮಯ್ಯ ಮತ್ತು ದೇವೇಗೌಡರು ಹಾವು ಮುಂಗುಸಿಯಂತಿದ್ದರು. ಇವತ್ತು ಅವರು ಒಂದಾಗಲಿಲ್ಲವೇ? ಹಾಗೆ ಅಂದು ಕಾರ್ಯಕರ್ತರ ಒತ್ತಡಕ್ಕೆ ಮಣಿದು ದೇವೇಗೌಡರು ಪ್ರತಿಭಟಿಸಿದ್ದರು. ದ್ವೇಷದಿಂದ ಪ್ರತಿಭಟನೆ ಮಾಡಿಲ್ಲ. ನಾವು ಅಷ್ಟೇ ಕೆಲವು ಸರಿ ಮನಸ್ಸಿಲ್ಲದೇ ಹೋದರೂ ಕಾರ್ಯಕರ್ತರನ್ನ ತೃಪ್ತಿಪಡಿಸುವ ಸಲುವಾಗಿ ಈ ರೀತಿ ಕೆಲಸ ಮಾಡಬೇಕಾಗತ್ತದೆ ಎಂದು ಶಿವರಾಮೇಗೌಡ ಪರ ಬ್ಯಾಟಿಂಗ್ ಮಾಡಿದರು.

    ಕೇಸು ದಾಖಲಾದ ಮಾತ್ರಕ್ಕೆ ಕೊಲೆಗಾರ ಅಂತ ತೀರ್ಮಾನವಾಗುವುದಿಲ್ಲ. ಶಿವರಾಮೇಗೌಡ ಲಾಂಗು, ಮಚ್ಚು ಹಿಡಿದು ಕೊಲೆ ಮಾಡುವುದನ್ನು ನೋಡಿದ್ದೀರಾ, ಅವರನ್ನ ಕೊಲೆಗಾರ ಅಂತ ಕರೆಯಲು ಎಂದು ಪ್ರಶ್ನಿಸಿದರು. ಇವೆಲ್ಲ ಸಹಜ. ನನ್ನ ಮೇಲೂ ಕ್ರಿಮಿನಲ್ ಕೇಸಿದೆ ಹಾಗಂತ ನಾನು ಕೊಲೆಗಾರನೇ? ಸಾಕ್ಷಿ ಆಧಾರ ಇದ್ದರೆ ಮಾತ್ರ ಅದಕ್ಕೆ ಬೆಲೆ ಎಂದು ಖಾರವಾಗಿ ಮಾತನಾಡಿದರು.

    ಶಿವರಾಮೇಗೌಡ ಪರ ನಾಗಮಂಗಲ ಮತ್ತು ಮಂಡ್ಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮಣ್ಣ ಭಾಗಿಯಾಗಿರಲಿಲ್ಲ. ಇದರಿಂದ ಸಚಿವರಾದ ತಮ್ಮಣ್ಣ ಮತ್ತು ಪುಟ್ಟರಾಜು ನಡುವೆ ಮುನಿಸಿದ್ದು, ಪುಟ್ಟರಾಜು ಇರುವ ಸಭೆಗೆ ತಮ್ಮಣ್ಣ ಬರುತ್ತಿಲ್ಲ ಎಂಬ ಊಹಾಪೋಹ ಹರಿದಾಡಿತ್ತು. ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ ತಮ್ಮಣ್ಣ ನಮ್ಮಿಬ್ಬರ ನಡುವೆ ಯಾತಕ್ಕೆ ಮುನಿಸು, ಚೇ ಚೇ ಅದೇಲ್ಲ ಏನೂ ಇಲ್ಲ. ನಾನು ಸಿಎಸ್ ಪುಟ್ಟರಾಜು ಚೆನ್ನಾಗಿದ್ದೇವೆ. ಆ ರೀತಿ ಅಸಮಾಧಾನ ಇದ್ದಿದ್ದರೆ ಬಹಿರಂಗವಾಗಿ ಹೇಳುತ್ತಿದ್ದೆ. ನಾಳೆ ಮದ್ದೂರಿನಲ್ಲಿ ನಡೆಯುವ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಪ್ರಚಾರ ಸಭೆಗೆ ಎಲ್ಲಾ ಶಾಸಕರು ಬರುತ್ತಿದ್ದಾರೆ. ಅದಕ್ಕೆ ತಯಾರಿ ನಡೆಯುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಸ್ಸಿನ ಡೀಸೆಲ್ ಟ್ಯಾಂಕಿಗೆ ಬಾಟಲ್‍ಗಳ ಮುಚ್ಚಳ ಅಳವಡಿಕೆ- ಮಾಹಿತಿ ನೀಡಿದವರ ಅಮಾನತು

    ಬಸ್ಸಿನ ಡೀಸೆಲ್ ಟ್ಯಾಂಕಿಗೆ ಬಾಟಲ್‍ಗಳ ಮುಚ್ಚಳ ಅಳವಡಿಕೆ- ಮಾಹಿತಿ ನೀಡಿದವರ ಅಮಾನತು

    ಕಲಬುರಗಿ: ಈಶಾನ್ಯ ಸಾರಿಗೆ ಬಸ್‍ನ ಡೀಸೆಲ್ ಟ್ಯಾಂಕ್‍ಗೆ ಬಾಟಲ್‍ಗಳನ್ನೆ ಮುಚ್ಚಳಿಕೆ ಮಾಡಿರುವ ಕುರಿತು ಪಬ್ಲಿಕ್ ಟಿವಿ ಇತ್ತೀಚೆಗೆ ವರದಿ ಮಾಡಿತ್ತು. ವರದಿಯ ನಂತರ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಡಿಪೋ ಮ್ಯಾನೇಜರ್ ಹಾಗೂ ಸಾರಿಗೆ ಡಿಸಿಯನ್ನು ಅಮಾನತು ಮಾಡುವುದಾಗಿ ಹೇಳಿದ್ದರು. ಇದೀಗ ಯಾರೋ ಮಾಡಿದ್ದ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವಂತಾಗಿದೆ.

    ಇದೀಗ ಅಲ್ಲಿನ ಅಧಿಕಾರಿಗಳು ಈ ಕುರಿತು ಮೇಲಾಧಿಕಾರಿ ಹಾಗೂ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಎಫ್ ಡಿಎ ನಾಗರೆಡ್ಡಿ ಅವರನ್ನೇ ಬಲಿಪಶು ಮಾಡಿದ್ದು, ಕರ್ತವ್ಯ ನಿರ್ಲಕ್ಷ್ಯ ಅಂತ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅಮಾಯಕ ಅಧಿಕಾರಿಯನ್ನು ಬಲಿಪಶು ಮಾಡಿದ್ದಾರೆ. ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸುವುದಾಗಿ ಹೇಳಿದ್ದ ಸಚಿವ ತಮ್ಮಣ್ಣ ಇದೀಗ ಸೈಲೆಂಟಾಗಿದ್ದಾರೆ. ಈ ಮೂಲಕ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತಾಗಿದೆ. ಇದನ್ನು ಓದಿ:  ಪಬ್ಲಿಕ್ ಟಿವಿ ಇಂಪ್ಯಾಕ್ಟ್-ಡೀಸೆಲ್ ಟ್ಯಾಂಕ್‍ಗಳ ಮುಚ್ಚಳ ಇಲ್ಲದಿರುವ ಬಸ್ ಓಡಿಸಿದವರನ್ನು ಮನೆಗೆ ಕಳಸ್ತೀನಿ: ಡಿ.ಸಿ.ತಮ್ಮಣ್ಣ

    ಈಶಾನ್ಯ ಸಾರಿಗೆಯ ಬಹುತೇಕ ಬಸ್‍ಗಳಲ್ಲಿ ಡೀಸೆಲ್ ಟ್ಯಾಂಕ್‍ಗಳನ್ನು ಮುಚ್ಚಲು 1 ಲೀ. ಮತ್ತು 2 ಲೀ. ಪ್ಲಾಸ್ಟಿಕ್ ಬಾಟಲ್‍ಗಳನ್ನು ಬಳಕೆ ಮಾಡಲಾಗುತ್ತಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನೆಲ್ಲೆ ಎಚ್ಚೆತ್ತ ಈಶಾನ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ಗಳ ತಪಾಸಣೆ ನಡೆಸಿ, ಬಾಟಲ್ ತೆರವು ಮಾಡಿ ಟ್ಯಾಂಕ್‍ಗಳಿಗೆ ಕ್ಯಾಪ್ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದನ್ನು ಓದಿ: ಈಶಾನ್ಯ ಸಾರಿಗೆ ಬಸ್ ಹತ್ತೋ ಮುನ್ನ ಹುಷಾರ್!

    ಟ್ಯಾಂಕ್‍ಗಳಿಗೆ ಬಾಟಲ್‍ಗಳನ್ನು ಮುಚ್ಚಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಆದೇಶಿಸುತ್ತೇನೆ. ಡೀಸೆಲ್ ಟ್ಯಾಂಕ್‍ಗಳ ಮುಚ್ಚಳ ಇಲ್ಲದಿರುವ ಬಸ್‍ಗಳನ್ನು ಓಡಿಸಿರುವಂತಹ ಡಿಪೋ ಮ್ಯಾನೇಜರ್ ಸೇರಿದಂತೆ ಇತರೆ ಸಿಬ್ಬಂದಿಯನ್ನು ನಾಳೆಯೇ ಮನೆಗೆ ಕಳುಹಿಸುತ್ತೇನೆ. ಕೆಲವು ದಿನಗಳ ಹಿಂದೆಯೇ ಬೆಂಗಳೂರಿನಿಂದ ಕೆಲವು ಅಧಿಕಾರಿಗಳು ಈಶಾನ್ಯ ಸಾರಿಗೆಯ ವ್ಯವಸ್ಥೆಯ ಬಗೆಗೆ ವರದಿ ನೀಡುವಂತೆ ಕಳುಹಿಸಿದ್ದೇನೆ. ಪಬ್ಲಿಕ್ ಟಿವಿ ವರದಿ ನನ್ನ ಗಮನಕ್ಕೂ ಬಂದಿದ್ದೂ, ನಾಳೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡುತ್ತೇನೆ. ಪಬ್ಲಿಕ್ ಟಿವಿ ಈ ವರದಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ಪಬ್ಲಿಕ್ ಟಿವಿಗೆ ತಿಳಿಸಿದ್ದರು.

    https://www.facebook.com/publictv/videos/1926995200670473/