Tag: ಡಿಸಿಎಂ ಪರಮೇಶ್ವರ್

  • ಡಿಸಿಎಂ ಪರಮೇಶ್ವರ್ ಮುನಿಸು – ಮನವೊಲಿಸಲು ಮುಂದಾದ ಕಾಂಗ್ರೆಸ್ ನಾಯಕರು

    ಡಿಸಿಎಂ ಪರಮೇಶ್ವರ್ ಮುನಿಸು – ಮನವೊಲಿಸಲು ಮುಂದಾದ ಕಾಂಗ್ರೆಸ್ ನಾಯಕರು

    ಬೆಂಗಳೂರು: ತುಮಕೂರು ಜೆಡಿಎಸ್ ತೆಕ್ಕೆಗೆ ಹೋಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಡಿಸಿಎಂ ಡಾ.ಜಿ.ಪರಮೇಶ್ವರ್ ಮುನಿಸಿಕೊಂಡಿದ್ದು, ಸದ್ಯ ಪರಮೇಶ್ವರ್ ಮನವೊಲಿಕೆಗೆ ಕೈ ನಾಯಕರು ಮುಂದಾಗಿದ್ದಾರೆ.

    ಸದಾಶಿವ ನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಇತ್ತ ಇಂದು ಅಥವಾ ನಾಳೆ ಪರಮೇಶ್ವರ್ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಎಐಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಪರಮೇಶ್ವರ್ ಭೇಟಿ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ನಮ್ಮಿಬ್ಬರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪರಮೇಶ್ವರ್ ನಮ್ಮ ನಾಯಕರಾಗಿದ್ದು, ಚುನಾವಣಾ ಸಿದ್ಧತೆ ಸಂಬಂಧ ಚರ್ಚೆಗೆ ಬಂದಿದ್ದೇನೆ ಅಷ್ಟೇ. ಲೋಕಸಭಾ ಸ್ಥಾನದ ಬಗ್ಗೆ ಎರಡು ಪಕ್ಷದ ನಾಯಕರು ಮಾತನಾಡುತ್ತೇವೆ. ಕೊನೆಯ ಘಳಿಗೆಯಲ್ಲಿ ಏನಾದರೂ ಆಗಬಹುದು ಎಂದು ತಿಳಿಸಿದರು.

    ನಾವೆಲ್ಲ ಮುದ್ದಹನುಮೇಗೌಡರ ಪರ ಇದ್ದೇವೆ, ಅವರಿಗೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ. ನಾನೂ ಕೂಡ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಪರಮೇಶ್ವರ್ ಅವರೊಂದಿಗೆ ಎಲ್ಲರೂ ಈ ಕುರಿತು ಪ್ರಯತ್ನದಲ್ಲಿದ್ದೇವೆ. ಇನ್ನೂ ಸಿಇಸಿ ಸಭೆ ಆಗಿಲ್ಲ, ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿರುವ ಕಾರಣ ಅವರೊಂದಿಗೆ ಚರ್ಚೆ ನಡೆಸುತ್ತೇವೆ ಎಂದರು.

    ಇದೇ ವೇಳೆ ರಾಹುಲ್ ಗಾಂಧಿ ನಮ್ಮ ರಾಜ್ಯದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ನಾಳೆಯೂ ಈ ಕುರಿತು ಚರ್ಚೆ ಮಾಡುತ್ತೇವೆ. ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕ ಎಲ್ಲೇ ಸ್ಪರ್ಧೆ ಮಾಡಲಿ. ಎಲ್ಲರೂ ಒಟ್ಟಾಗಿ ಶ್ರಮಿಸಿ ಗೆಲ್ಲಿಸುತ್ತೇವೆ ಎಂದರು. ಶಿವಮೊಗ್ಗ ಚುನಾವಣಾ ಉಸ್ತುವಾರಿ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣಾ ಉಸ್ತುವಾರಿಗಳ ನೇಮಕ ಇನ್ನೂ ಪಕ್ಷದಿಂದ ತೀರ್ಮಾನ ಆಗಿಲ್ಲ. ಆದರೆ ಡಿ.ಕೆ ಶಿವಕುಮಾರ್ ಶಿವಮೊಗ್ಗಕ್ಕೆ ಏಕೆ ಹೋಗ್ತಾರೆ? ಅವರಿಗೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಚುನಾವಣಾ ಉಸ್ತುವಾರಿ ಇದೆ. ಹೀಗಿರುವಾಗ ಶಿವಮೊಗ್ಗಕ್ಕೆ ಅವರು ಏಕೆ ಹೋಗುತ್ತಾರೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ಶಿವಮೊಗ್ಗ ಉಸ್ತುವಾರಿ ಆಗುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

  • ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಚುನಾವಣೆಗೆ ನಿಲ್ತೀವಿ: ಎಚ್‍ಡಿಕೆ

    ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಚುನಾವಣೆಗೆ ನಿಲ್ತೀವಿ: ಎಚ್‍ಡಿಕೆ

    – ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ?
    – ನಾವ್ಯಾರೂ ಹಿಂಬಾಗಿಲಿನಿಂದ ಬಂದಿಲ್ಲ

    ನವದೆಹಲಿ: ಜೆಡಿಎಸ್ ಕಾರ್ಯಕರ್ತರು ಎಷ್ಟು ಜನರನ್ನು ಅಪೇಕ್ಷೆ ಮಾಡುತ್ತಾರೆ ಅಷ್ಟು ಜನ ನಮ್ಮ ಕುಟುಂಬದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳುವ ಮೂಲಕ ಕುಟುಂಬ ರಾಜಕೀಯವನ್ನು ಸಮರ್ಥಿಸಿಕೊಂಡಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಸಿಎಂ, ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ? ಕುಟುಂಬ ರಾಜಕೀಯಕ್ಕೆ ನೂರು ಉದಾಹರಣೆ ಕೊಡಬಲ್ಲೆ. ನಾವ್ಯಾರೂ ಹಿಂಬಾಗಿಲಿನಿಂದ ಬಂದಿಲ್ಲ ಎಂದು ಅವರು, ಜನರ ವಿಶ್ವಾಸ ಗಳಿಸಿ ಆಯ್ಕೆಯಾಗಿ ಬಂದಿದ್ದೇವೆ. ಎಂಟು ತಿಂಗಳ ಪರಿಸ್ಥಿತಿಗಿಂತ ಈಗಿನ ಪರಿಸ್ಥಿತಿ ಬದಲಾವಣೆ ಕಂಡಿದೆ ಎಂದು ಹೇಳಿದರು.

    ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸಬಾರದೆಂದು ಹೇಳಿಲ್ಲ. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಮಾಡವುದು ಅನಾವಶ್ಯಕ. ನಮ್ಮ ಪಕ್ಷದ ವತಿಯಿಂದ ಜನರ ಮುಂದೆ ಹೋಗುತ್ತೇವೆ. ಅಭಿವೃದ್ಧಿ ಕೆಲಸಗಳನ್ಮು ಜನರ ಮುಂದೆ ಇಡುತ್ತೇವೆ. ಜೆಡಿಎಸ್ ಹಾಗೂ ಮಂಡ್ಯಕ್ಕೆ ಇರುವ ಅನುಬಂಧ ದೊಡ್ಡದಿದೆ. ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಬಗ್ಗೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಸೀಟು ಹಂಚಿಕೆ ಬಗ್ಗೆ ಅನುಮಾನ ಬೇಡ. ಹಾಲಿ ಸಂಸದರ ಸೀಟು ಯಾರು ಕೇಳಿದ್ದಾರೆ..? ಇದು ಕೇವಲ ಮಾಧ್ಯಮಗಳ ವರದಿಯಷ್ಟೇ. ಆದರೆ ನಮಗೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸುವು ಮುಖ್ಯವಾಗಿದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದೆ ಕಲಬುರಗಿಗೆ ಭೇಟಿ ಕೊಟ್ಟಿದ್ದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಕರ್ನಾಟಕ ರಾಜ್ಯ ಸರ್ಕಾರವು ರೈತ ಮಾಹಿತಿ ಕೊಡುತ್ತಿಲ್ಲ. ಹಣ ತಲುಪಿಸಲು ರಾಜ್ಯ ಸರ್ಕಾರ ನೆರವು ನೀಡುತ್ತಿಲ್ಲ. ಈ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಪ್ರಧಾನಿ ಸ್ಥಾನದಲ್ಲಿರುವ ಮೋದಿ ಅವರಿಂದ ಈ ಮಾತು ಬರಬಾರದಿತು ಎಂದು ಅಸಮಾಧಾನ ಹೊರ ಹಾಕಿದರು.

    ಕಿಸಾನ್ ಸಮ್ಮಾನ್ ಯೋಜನೆ ಸಂಬಂಧ ರಾಜ್ಯ ಸರ್ಕಾರವು ಈಗಾಗಲೇ 59.48 ಲಕ್ಷ ಫಲಾನುಭವಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದೆ. ನಾವು ಸಾಲಮನ್ನಾ ಯೋಜನೆ ಕಡೆಗೆ ಗಮನ ಹರಿಸಿದ್ದೇವೆ. ಅದಕ್ಕಾಗಿ ಮಾಹಿತಿ ಸಂಗ್ರಹ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಎಲ್ಲ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿದ್ದಾರೆ. ಆದರೆ ಕೇಂದ್ರ ಸರ್ಕಾರವು ಮತ್ತೆ ತಕರಾರು ತೆಗೆದಿದೆ. ಐಎಫ್‍ಎಸ್‍ಸಿ ಮಾಹಿತಿ ನೀಡಿಲ್ಲವೆಂದು 40 ರೈತರ ಮಾಹಿತಿ ತಿರಸ್ಕಾರ ಮಾಡಿದೆ ಎಂದು ಆರೋಪಿಸಿದರು.

    ಇದೇ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಯಾರಿಗೆ ಸೇರುತ್ತದೆ ಎನ್ನುವ ತೀರ್ಮಾನ ಆಗಬೇಕು. ಸೀಟು ಹಂಚಿಕೆ ಅಧಿಕೃತವಾದ ಬಳಿಕ ಅಭ್ಯರ್ಥಿಗಳ ಹೆಸರು ಫೈನಲ್ ಮಾಡುತ್ತೇವೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಮಾತನಾಡುತ್ತಾರೆ. ಮಾರ್ಚ್ 11 ರಂದು ಸ್ಕ್ರೀನಿಂಗ್ ಕಮೀಟಿ ಸಭೆ ಇದೆ. ಅಂದು ಎಲ್ಲವನ್ನೂ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 3 ಬಾರಿ ಸಿಎಂ ಆಗೋದು ತಪ್ಪಿದೆ, ಬೇಡ ಎಂದ್ರು ಡಿಸಿಎಂ ಮಾಡಿದ್ದಾರೆ: ಪರಮೇಶ್ವರ್ ಅಸಮಾಧಾನ

    3 ಬಾರಿ ಸಿಎಂ ಆಗೋದು ತಪ್ಪಿದೆ, ಬೇಡ ಎಂದ್ರು ಡಿಸಿಎಂ ಮಾಡಿದ್ದಾರೆ: ಪರಮೇಶ್ವರ್ ಅಸಮಾಧಾನ

    ದಾವರಣಗೆರೆ: ದಲಿತರು ಅನಾದಿ ಕಾಲದಿಂದ ತುಳಿತಕ್ಕೆ ಓಳಗಾಗಿದ್ದು, ರಾಜ್ಯ ರಾಜಕೀಯದಲ್ಲಿ ದಲಿತರನ್ನು ತುಳಿಯುವ ಕೆಲಸ ನಡೆಯುತ್ತಿದೆ. ಹಲವು ದಲಿತ ನಾಯಕರು ಸಿಎಂ ಆಗುದನ್ನ ತಪ್ಪಿಸಿದ್ದಾರೆ. ನನಗೂ 3 ಬಾರಿ ಸಿಎಂ ಆಗೋದು ತಪ್ಪಿದೆ, ಈಗ ಬೇಡ ಎಂದರೂ ಡಿಸಿಎಂ ಮಾಡಿದ್ದಾರೆ ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.

    ಜಿಲ್ಲೆಯಲ್ಲಿ ಶಿವಯೋಗಿ ಮಂದಿರದ ಆವರಣದಲ್ಲಿ ನಡೆದ ಛಲವಾದಿ ಮಹಾಸಭಾದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ದಲಿತರು ಅನಾದಿ ಕಾಲದಿಂದಲೂ ತುಳಿತಕ್ಕೆ ಓಳಗಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ದಲಿತರನ್ನು ತುಳಿಯುವ ಕೆಲಸ ನಡೆಯುತ್ತಿದೆ. ದಲಿತರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಅವಕಾಶ ಯಾರಿಗೂ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾವು ಯಾವುದೇ ನಾಯಕರು ಕೂಡ ವರ್ಗಿಕರಣ ಮಾಡಿಲ್ಲ. ಆದರೆ ನಮ್ಮನ್ನು ತುಳಿಯುವ ಕಾರ್ಯ ಮುಂದುವರೆದಿದೆ. ಈ ಹಿಂದೆ ಬಸವಲಿಂಗಪ್ಪ ಅವರು, ಕೆಚ್ ರಂಗನಾಥ್ ಅವರಿಗೂ ಸಿಎಂ ಆಗುವ ಸ್ಥಾನ ತಪ್ಪಿಸಿದ್ದರು. ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಒಂದು ಹೆಜ್ಜೆ ಇಟ್ಟಿದ್ದಾರೆ ಸಿಎಂ ಆಗುತ್ತಿದ್ದರು. ನನಗೂ 3 ಬಾರಿ ಸಿಎಂ ಆಗುವ ಅವಕಾಶ ತಪ್ಪಿತ್ತು. ಈಗ ಬೇಡ ಎಂದರೂ ಡಿಸಿಎಂ ಮಾಡಿದ್ದಾರೆ. ಇನ್ನು ಎಷ್ಟು ಅಂತ ತುಳಿಸಿಕೊಳ್ಳಬೇಕು? ಆದ್ದರಿಂದಲೇ ನಾನು ಇಂದು ಸಮಾವೇಶದಲ್ಲಿ ಭಾಗವಹಿಸಿದ್ದು, ಅಂಬೇಡ್ಕರ್ ಹಾಕಿ ಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕಿದೆ ಎಂದು ಸಮಾವೇಶದಲ್ಲಿ ಬೆಂಬಲಿಗರಿಗೆ ಕರೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಡಿಸಿಎಂ ಪರಮೇಶ್ವರ್ ಅಮೂಲ್ ಬೇಬಿ: ಮಾಜಿ ಸಂಸದ ಜಿ.ಎಸ್.ಬಸವರಾಜು

    ಡಿಸಿಎಂ ಪರಮೇಶ್ವರ್ ಅಮೂಲ್ ಬೇಬಿ: ಮಾಜಿ ಸಂಸದ ಜಿ.ಎಸ್.ಬಸವರಾಜು

    ತುಮಕೂರು: ಡಿಕೆ ಬ್ರದರ್ಸ್ ಹಾಗೂ ದೇವೇಗೌಡ ಕುಟುಂಬ ಎರಡೂ ಸೇರಿ ತುಮಕೂರಿಗೆ ಬರುವ ಹೇಮಾವತಿಗೆ ನೀರಿಗೆ ಅಡ್ಡ ಹಾಕುವ ಕೆಲಸ ಮಾಡ್ತಿದ್ದಾರೆ. ಆದ್ರೆ ಈ ವಿಷಯದಲ್ಲಿ ಡಿಸಿಎಂ ಜಿ. ಪರಮೇಶ್ವರ್ ಅವರು ಅಮೂಲ್ ಬೇಬಿ ತರಹ ಆಗಿದ್ದಾರೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಟೀಕಿಸಿದ್ದಾರೆ.

    ಜಿಲ್ಲೆಗೆ ಬರುವ ನೀರನ್ನು ರಾಮನಗರ ತಾಲೂಕಿಗೆ ತೆಗೆದುಕೊಂಡ ಹೋಗಲಾಗುತ್ತಿದೆ. ತುಮಕೂರು ಜಿಲ್ಲೆಗೆ ಇದು ಮರಣ ಶಾಸನವಾಗಲಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಜಿಲ್ಲೆಯ ರಾಜಕಾರಣಿಗಳು ನಿದ್ದೆ ಮಾಡ್ತಿದ್ದಾರೆ. ಸಂಸದ ಮುದ್ದಹನುಮೇಗೌಡ ಜಿಲ್ಲೆಯಿಂದ ನೀರು ಬಿಟ್ಟು ಕೊಡಲ್ಲ ಅಂತ ಕಳೆದ ವಾರ ಹೇಳಿದ್ದಾರೆ. ಈಗ ಈ ವಿಚಾರವಾಗಿ ಕ್ರಮ ತೆಗೆದುಕೊಂಡು ಪುರುಷತ್ವ ತೋರಿಸಬೇಕು. ಈ ಕುರಿತು ಹೋರಾಟ ಮಾಡಬೇಕಿದ್ದ ಡಿಸಿಎಂ ಸುಮ್ಮನಿದ್ದಾರೆ. ಪರಮೇಶ್ವರ್ ಅವರು ನಮ್ಮ ದೃಷ್ಟಿಯಲ್ಲಿ ಅಮೂಲ್ ಬೇಬಿ. ಡಿಸಿಎಂಗೆ ಸಮ್ಮಿಶ್ರ ಸರ್ಕಾರದಲ್ಲಿ ಹಾಯಲ್ಲ, ಒದೆಯಲ್ಲ, ಒಳ್ಳೆಯದು ಮಾಡೋಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಜಿಲ್ಲೆಯಲ್ಲಿ ಮೂವರು ಸಚಿವರಿದ್ದಾರೆ. ಇವರು ಕ್ಯಾಬಿನೇಟ್‍ನಲ್ಲಿ ಈ ಯೋಜನೆ ವಿರೋಧ ವ್ಯಕ್ತಪಡಿಸಬೇಕಾದವರ್ರು ಸುಮ್ಮನ್ನಿದ್ದಾರೆ. ಈಗಿನ ಸರ್ಕಾರಕ್ಕೆ ಮೂರು ಜಿಲ್ಲೆಗಳು ಮಾತ್ರ ಗೊತ್ತು ಬೇರೆ ಜಿಲ್ಲೆಗಳು ಗೊತ್ತಿಲ್ಲ. ರೇವಣ್ಣ ಅವರಿಗಂತೂ ಹೊಳೆನರಸೀಪುರ ಕರ್ನಾಟಕ ಇದ್ದಹಾಗೆ, ಹಾಸನ ಜಿಲ್ಲೆ ಇಂಡಿಯಾ ಇದ್ದಹಾಗೆ. ಅವರಿಗೆ ಅವರ ಜಿಲ್ಲೆ ಮಾತ್ರ ಗೊತ್ತಿರುವುದು. ಹಾಸನ ಜಿಲ್ಲೆಯ ಪಕ್ಕದವರ ನೋವು ಗೊತ್ತಿಲ್ಲ. ಕುಮಾರಸ್ವಾಮಿಯವರು ಸಿಎಂ ಸ್ಥಾನದಲ್ಲಿದ್ದಾರೆ. ಎಲ್ಲರನ್ನು ಕರೆದು ನೀರಿನ ವಿಚಾರವಾಗಿ ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿ.ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅದೃಷ್ಟ ಒಲಿದರೆ ಬಿಎಸ್‍ವೈ, ಪರಮೇಶ್ವರ್ ಕೂಡ ಸಿಎಂ ಆಗಬಹುದು: ವಿ ಸೋಮಣ್ಣ

    ಅದೃಷ್ಟ ಒಲಿದರೆ ಬಿಎಸ್‍ವೈ, ಪರಮೇಶ್ವರ್ ಕೂಡ ಸಿಎಂ ಆಗಬಹುದು: ವಿ ಸೋಮಣ್ಣ

    ಬೆಂಗಳೂರು: ನಾನು ಡಿಸಿಎಂ ಜಿ ಪರಮೇಶ್ವರ್ ಅವರನ್ನು ಕಳೆದ 40 ವರ್ಷದಿಂದ ನೋಡುತ್ತಿದ್ದೇನೆ. ಅವರು ನನಗೆ ಆಪ್ತರಾಗಿದ್ದು, ಅದೃಷ್ಟ ಒಲಿದರೆ ಸಿಎಂ ಆಗಬಹುದು ಎಂದು ಬಿಜೆಪಿ ಮುಖಂಡ ವಿ ಸೋಮಣ್ಣ ಹೇಳಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸೋಮಣ್ಣ ಅವರು, ವೇದಿಕೆ ಮೇಲಿದ್ದ ಡಿಸಿಎಂ ಅವರೊಂದಿಗೆ ಇರುವ ಆಪ್ತತೆಯ ಬಗ್ಗೆ ಬಿಚ್ಚಿಟ್ಟರು. ಸಿದ್ದಗಂಗಾ ಮಠಕ್ಕೆ ಅವರ ಕುಟುಂಬದ ಕೊಡುಗೆ ಆಪಾರ. ಸಿದ್ದಗಂಗಾ ಶ್ರೀಗಳಿಂದಲೇ ನನಗೆ ಪರಮೇಶ್ವರ್ ಅವರ ಪರಿಚಯ ಆಯಿತು. ಅಂದಿನಿಂದ ಇಲ್ಲಿಯವರೆಗೂ ಕೂಡ ಅವರನ್ನು ನೋಡಿದ್ದೇನೆ. ಅವರು ಸಿಎಂ ಆಗುವುದು ಹಲವರ ಆಸೆ. ಆದ್ದರಿಂದ ಮುಂದಿನ ದಿನದಲ್ಲಿ ಆದರೂ ಅವರು ಸಿಎಂ ಆಗುತ್ತಾರೆ ಎಂದರು.

    ರಾಜ್ಯದ ನಾಯಕರಲ್ಲಿ ಅವಕಾಶ ಸಿಕ್ಕರೆ ಯಾರು ಬೇಕಾದರು ಸಿಎಂ ಆಗಬಹುದು. ಅಂತೆಯೇ ಅದೃಷ್ಟ ಒಲಿದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ಸಿಎಂ ಆಗುತ್ತಾರೆ. ಪರಮೇಶ್ವರ್ ಅವರು ಕೂಡ ಅವಕಾಶ ಸಿಕ್ಕರೆ ಸಿಎಂ ಆಗುತ್ತಾರೆ. ಕುಮಾರಸ್ವಾಮಿ ಅವರು ಕಡಿಮೆ ಸ್ಥಾನ ಪಡೆದು ಸಿಎಂ ಆಗಲಿಲ್ಲವಾ ಎಂದು ಉದಾಹರಣೆ ಕೂಡ ನೀಡಿ, ಯಾರೂ ಅದೃಷ್ಟಕ್ಕಿಂತ ದೊಡ್ಡವರು ಅಲ್ಲ. ಪರಮೇಶ್ವರ್ ಅವರು ಎಲ್ಲ ಪಕ್ಷದ ನಾಯಕರನ್ನು ಒಂದಾಗಿ ಕರೆದುಕೊಂಡು ಹೋಗುವ ಸಾಮಥ್ರ್ಯ ಹೊಂದಿದ್ದಾರೆ ಎಂದರು.

    ಇದೇ ವೇಳೆ ಮಾತನಾಡಿದ ಪರಮೇಶ್ವರ್ ಅವರು, ಸೋಮಣ್ಣ ಕ್ರಿಯಾಶೀಲ ಶಾಸಕರು. ಯಾವುದಾದ್ರು ಒಂದು ಕಾರ್ಯದಲ್ಲಿ ನಿರಂತರವಾಗಿ ತೊಡಗಿರುತ್ತಾರೆ. ನನ್ನ ಪಕ್ಕದ ಕುರ್ಚಿಯಲ್ಲೇ ಅವರನ್ನು ಇಟ್ಟುಕೊಂಡಿದ್ದೆ. ಆದರೆ ರಾತ್ರೋ ರಾತ್ರಿ ಬದಲಾದರು. ಆದರೆ ಒಬ್ಬ ಕ್ರಿಯಾಶೀಲ ನಾಯಕ ಏನ್ನೆಲ್ಲಾ ಕಾರ್ಯ ಮಾಡಬಹುದೋ ಅದೆಲ್ಲಾ ಅವರು ಮಾಡಿದ್ದಾರೆ. ಹಲವು ಯುವ ನಾಯಕರಿಗೆ ಮಾರ್ಗದರ್ಶಿ ನಾಯಕರಾಗಿದ್ದಾರೆ ಎಂದು ಹಾಡಿ ಹೊಗಳಿದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿವಾದಿತ ಸ್ಟೀಲ್ ಬ್ರಿಡ್ಜ್‌ಗೆ ಮರುಜೀವ – ಮತ್ತೆ ಯೋಜನೆ ಕೈಗೆತ್ತಿಕೊಳ್ಳಲು ದೋಸ್ತಿಗಳ ಚಿಂತನೆ

    ವಿವಾದಿತ ಸ್ಟೀಲ್ ಬ್ರಿಡ್ಜ್‌ಗೆ ಮರುಜೀವ – ಮತ್ತೆ ಯೋಜನೆ ಕೈಗೆತ್ತಿಕೊಳ್ಳಲು ದೋಸ್ತಿಗಳ ಚಿಂತನೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಿವಾದಕ್ಕೆ ಒಳಗಾಗಿ ಕೈ ಬಿಟ್ಟಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಮರುಜೀವ ನೀಡಲು ಮೈತ್ರಿ ಸರ್ಕಾರ ಮುಂದಾಗಿದೆ. ಈ ಕುರಿತು ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿ ಸರ್ಕಾರ ಚಿಂತನೆ ಬಗ್ಗೆ ಮಾಹಿತಿ ನೀಡಿದ್ದಾರೆ.

    2017 ಮಾರ್ಚ್ ತಿಂಗಳಿನಲ್ಲಿ ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಕೈಬಿಟ್ಟಿದ್ದು, ಚಾಲುಕ್ಯ ಸರ್ಕಲ್ ನಿಂದ ಎಸ್ಟೀಮ್ ಮಾಲ್ ವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು 1,856 ಕೋಟಿ ರೂ. ಅಂದಾಜು ಮೊತ್ತ ನಿಗದಿ ಮಾಡಲಾಗಿತ್ತು. ಆದರೆ ಪರಿಸರವಾದಿಗಳ ವಿರೋಧ ಹಾಗೂ ಜನಸಾಮಾನ್ಯರ ಒತ್ತಡದಿಂದಾಗಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ಮತ್ತೆ ಈಗ ಡಿಸಿಎಂ ಬ್ರಿಡ್ಜ್ ಕುರಿತು ಮರು ಪರೀಶಿಲನೆ ನಡೆಸಲು ತೀರ್ಮಾನ ಕೈಗೊಂಡಿದ್ದಾಗಿ ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಿಸಿಎಂ ಪರಮೇಶ್ವರ್ ಅವರು, ಸ್ಟೀಲ್ ಬ್ರಿಡ್ಜ್ ನಿರ್ಮಾಣ ನಮಗೆ ಅಗತ್ಯವಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಹೆಚ್ಚು ಅನುಕೂಲ ಆಗಲಿದೆ. ಈ ಯೋಜನೆಯ ಸಮಗ್ರ ಯೋಜನಾ ವರದಿ(ಡಿಪಿಆರ್) ಮರುಪರಿಶೀಲನೆಗೆ ತೀರ್ಮಾನಿಸಲಾಗಿದೆ. ಈ ಯೋಜನೆಯನ್ನು ಯಾರು ವಿರೋಧ ಮಾಡುತ್ತಾರೆ ಅಂತಹವರ ಹಾಗೂ ಜನಸಾಮಾನ್ಯರ ಅಭಿಪ್ರಾಯ ಪಡೆಯಲಾಗುವುದು. ಡಿಪಿಆರ್ ನಲ್ಲಿ ಇರುವ ಲೋಪಗಳ ಅಂಶಗಳ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಸರಿಪಡಿಸಿಕೊಳ್ಳುತ್ತವೆ ಎಂದರು.

    ಆರಂಭದಲ್ಲಿ 1,356 ಕೋಟಿ ಇದ್ದ ಯೋಜನೆಯ ಗಾತ್ರ ಕೆಲ ದಿನಗಳ ಅಂತರದಲ್ಲಿ 450 ಕೋಟಿ ರೂ. ಹೆಚ್ಚಿಸಿ ಯೋಜನೆ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿತ್ತು. ದಿಢೀರ್ ಆಗಿ 450 ಕೋಟಿ ರೂ. ಮೊತ್ತ ಏರಿಕೆಯಾಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿತ್ತು. ಅಂದು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರು ಸದ್ಯ ಸಿಎಂ ಆಗಿದ್ದಾರೆ.

    ಯೋಜನೆ ನಿರ್ಮಾಣವಾದರೆ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳು 20 ನಿಮಿಷ ಸಾಕು ಎಂಬ ಪರಮೇಶ್ವರ್ ಹೇಳಿಕೆ ನೀಡಲು ಬಿಡಿಎ ಎಂಜಿನಿಯರ್ ಹಾಗೂ ಗುತ್ತಿಗೆ ಕಂಪೆನಿಗಳ ಒತ್ತಡವೇ ಕಾರಣ ಎನ್ನಲಾಗಿದೆ. 6.7 ಕಿ.ಮೀ ದೂರದ ಸೇತುವೆ ನಿರ್ಮಾಣವಾದರೆ ಸುಮಾರು ಸಾವಿರಕ್ಕೂ ಹೆಚ್ಚಿನ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ಇದನ್ನು ಓದಿ: ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

    ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಪಕ್ಷದ ನಾಯಕಿ ತೇಜಸ್ವಿನಿ ಅವರು, ಸ್ಟೀಲ್ ಬ್ರಿಡ್ಜ್ ಪರಿಸರಕ್ಕೆ ಹೆಚ್ಚಿನ ಉಷ್ಣಾಂಶವನ್ನು ಬಿಡುಗಡೆ ಮಾಡುತ್ತದೆ. ಅಲ್ಲದೇ ನಿರ್ಮಾಣದ ವೇಳೆ ಹೆಚ್ಚಿನಮರಗಳಿಗೆ ಹಾನಿ ಆಗಲಿದೆ. ಆದ್ದರಿಂದ ಸರ್ಕಾರ ಈ ಯೋಜನೆ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು, ಇರುವ ರಸ್ತೆಯನ್ನು ಆಗಲೀಕರಣ ಮಾಡಿ ಉತ್ತಮ ರಸ್ತೆ ನಿರ್ಮಾಣ ಮಾಡಲಿ ಎಂದು ಸಲಹೆ ನೀಡಿದರು.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ?
    ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1790 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ಪ್ರತಿಪಕ್ಷ ಬಿಜೆಪಿ ಈ ಯೋಜನೆಯಲ್ಲಿ ಡೀಲ್ ನಡೆದಿದೆ. ಉತ್ತರ ಪ್ರದೇಶ ಚುನಾವಣೆಗಾಗಿ ಈ ಯೋಜನೆಯ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ಬಿಜೆಪಿ ಆರೋಪಿಸಿತ್ತು. ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ಬ್ರಿಡ್ಜ್‍ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು. ವಿವಾದ ಜೋರಾಗುತ್ತಿದ್ದಂತೆ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ಕೈ ಬಿಟ್ಟಿತ್ತು. ಇದನ್ನು ಓದಿ:  ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಯಾಬಿನೆಟ್ ವಿಸ್ತರಣೆ – ಯಾರು ಇನ್? ಯಾವ ಕೋಟಾದಲ್ಲಿ ಯಾರಿಗೆ ಸ್ಥಾನ?

    ಕ್ಯಾಬಿನೆಟ್ ವಿಸ್ತರಣೆ – ಯಾರು ಇನ್? ಯಾವ ಕೋಟಾದಲ್ಲಿ ಯಾರಿಗೆ ಸ್ಥಾನ?

    ಬೆಂಗಳೂರು: ಕೆಜಿಎಫ್ ಚಿತ್ರಕ್ಕಿಂತಲೂ ಕುತೂಹಲ ಮೂಡಿಸಿರೋ ಕ್ಯಾಬಿನೆಟ್ ವಿಸ್ತರಣೆಗೆ ಕೊನೆಗೂ ಕಾಲಕೂಡಿ ಬಂದಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ರಾಜ್ಯದ ಕಾಂಗ್ರೆಸ್ ನಾಯಕರು ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದೆ.

    ಸಂಪುಟ ವಿಸ್ತರಣೆ ಅಲ್ಲದೇ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮಗ್ಗಲ ಮುಳ್ಳಾಗಿರುವ ಜಾರಕಿಹೊಳಿ ಬ್ರದರ್ಸ್ ಅವರನ್ನ ಒಡೆದು ಆಳಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದ್ದು, ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಮಾಜಿ ಸಚಿವ ಸತೀಶ್ ಜಾರಕಿಹೊಳಿಗೆ ಅವಕಾಶ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಉಳಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ಹೊಸ ಮುಖಗಳಿಗೆ ಈ ಬಾರಿ ಮಣೆ ಹಾಕಲು ಹೈಕಮಾಂಡ್ ಚರ್ಚೆ ನಡೆಸಿದೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಸಂಪುಟದಿಂದ ಯಾರಿಗೆ ಕೊಕ್ ?
    * ರಮೇಶ್ ಜಾರಕಿಹೊಳಿ ಔಟ್, ಸತೀಶ್ ಜಾರಕಿಹೊಳಿ ಇನ್ (ಎಸ್‍ಪಿ ಕೋಟಾ)
    * ಆರ್. ಶಂಕರ್ ಔಟ್, ಸಿ.ಎಸ್. ಶಿವಳ್ಳಿ ಇನ್ (ಕುರುಬರ ಕೋಟಾ)

    ಹೊಸದಾಗಿ ಯಾರ ಎಂಟ್ರಿ ?
    * ಎಂ.ಬಿ. ಪಾಟೀಲ್ / ಬಿಸಿ ಪಾಟೀಲ್ (ಲಿಂಗಾಯತ ಕೋಟಾ)
    * ರಹೀಂ ಖಾನ್ (ಮುಸ್ಲಿಂ ಕೋಟಾ)
    * ತುಕಾರಾಂ (ಎಸ್‍ಟಿ ಕೋಟಾ)
    * ಭೀಮಾನಾಯ್ಕ್/ ಪರಮೇಶ್ವರ ನಾಯ್ಕ್ (ಎಸ್‍ಟಿ ಲಂಬಾಣಿಗೆ ಮತ್ತೊಂದು ಸ್ಥಾನ)
    * ಧರ್ಮಸೇನಾ / ರೂಪಾ ಶಶಿಧರ್ / ತಿಮ್ಮಾಪೂರ (ದಲಿತ ಎಡಗೈ ಕೋಟಾ)
    * 20 ನಿಗಮ ಮಂಡಳಿಗೆ ನೇಮಕ
    * 8 ಸಂಸದೀಯ ಕಾರ್ಯದರ್ಶಿ, ಓರ್ವ ದೆಹಲಿ ವಿಶೇಷ ಪ್ರತಿನಿಧಿ ನೇಮಕ

    ಸಂಪುಟ ವಿಸ್ತರಣೆ ಕಸರತ್ತು ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ರಾಜ್ಯ ಕಾಂಗ್ರೆಸ್ ನಾಯಕರು ಈ ಸಂಬಂಧ ಚರ್ಚೆ ನಡೆಸಿದರು. ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಭೆಯಲ್ಲಿ ಭಾಗಿದ್ದರು. ಈ ವೇಳೆ ಆರು ಸಚಿವ ಸ್ಥಾನ ಭರ್ತಿ ಕುರಿತು ಚರ್ಚೆ ನಡೆಸಿದರು.

    ಈ ವೇಳೆ ಪ್ರಮುಖವಾಗಿ ವಿ. ಮುನಿಯಪ್ಪಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡುವ ವಿಚಾರದಲ್ಲಿ ನಾಯಕರದಲ್ಲಿ ಒಮ್ಮತ ಅಭಿಪ್ರಾಯ ಮೂಡಿಬಂತು ಎನ್ನಲಾಗಿದ್ದು, ರಾಹುಲ್ ಗಾಂಧಿ ಅವರ ಬಳಿ ಒಂದೇ ಹೆಸರು ನೀಡಿ ಅಂತಿಮ ಮುದ್ರೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ನೂತನ ಸಚಿವರ ಪ್ರಮಾಣವಚನ ಸಮಾರಂಭ ರಾಜಭವನದ ಗ್ಲಾಸ್‍ಹೌಸ್‍ನಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೆಟ್ರೋದಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದ ಡಿಸಿಎಂ ಪರಮೇಶ್ವರ್

    ಮೆಟ್ರೋದಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದ ಡಿಸಿಎಂ ಪರಮೇಶ್ವರ್

    ಬೆಂಗಳೂರು: ಟ್ರಿನಿಟಿ ವೃತ್ತ ಸಮೀಪದ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಅವರು ಶನಿವಾರ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿ ಪರಿಶೀಲನೆ ನಡೆಸಿದರು.

    ಡಾ. ಅಂಬೇಡ್ಕರ್ ಮೆಟ್ರೋ ನಿಲ್ದಾಣದಿಂದ ಹಲಸೂರು ನಿಲ್ದಾಣದವರೆಗೆ ಪ್ರಯಾಣ ಬೆಳೆಸಿ ಡಿಸಿಎಂ ದೋಷ ಕಾಣಿಸಿಕೊಂಡ ಸ್ಥಳವನ್ನು ಪರಿಶೀಲನೆ ನಡೆಸಿದರು.

    ತಮ್ಮ ಪ್ರಯಾಣದ ವೇಳೆ ಮೆಟ್ರೋ ಪ್ರಯಾಣಿಕರೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಅಲ್ಲದೇ ಮೆಟ್ರೋದಲ್ಲಿ ಯಾವುದೇ ದೋಷ ಇಲ್ಲ. ಅದ್ದರಿಂದಲೇ ನಾನು ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದೇನೆ ಎಂದು ತಿಳಿಸಿದರು.

    ಟ್ರಿನಿಟಿ ಬಳಿಯ ಮೆಟ್ರೋ ಸೇತುವೆಯ ವಯಾಡಕ್ಟ್ ವೀಕ್ಷಿಸಿ ಬೆಂಗಳೂರು ಮೆಟ್ರೋ ಯೋಜನೆಯ ನಿರ್ದೇಶಕ ವಿಜಯ್ ಕುಮಾರ್ ಅವರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮೆಟ್ರೋ ಪಿಲ್ಲರ್ ನಲ್ಲಿ ಯಾವುದೇ ದೋಷವಿಲ್ಲ. ಕಾಂಕ್ರೀಟ್ ಹಾಕುವಾಗ ಹನಿಕಾಂಬ್ (ಕಾಂಕ್ರೀಟ್ ಪದರ ಟೊಳ್ಳಾಗುವುದನ್ನು ಸಿವಿಲ್ ಎಂಜಿನಿಯರಿಂಗ್ ಭಾಷೆಯಲ್ಲಿ ಹನಿಕಾಂಬ್ ಎಂದು ಕರೆಯಲಾಗುತ್ತದೆ) ಆಗಿದೆ. ಅದ್ದರಿಂದ ಯಾವುದೇ ಆತಂಕ ಬೇಡ. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ದೆಹಲಿಯಿಂದ ಎಂಜಿನಿಯರ್ ಬಂದು ಸಲಹೆ ನೀಡಿದ್ದಾರೆ. ಇಂದು ಸಂಜೆಯಿಂದ ದುರಸ್ತಿ ಕಾರ್ಯ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವೇದಿಕೆಯಲ್ಲೇ ಸಿಎಂ ಎಚ್‍ಡಿಕೆ, ಸಂಸದ ಸಿಂಹ ನಡುವೆ ‘ಅಪ್ಪ, ಅಮ್ಮ’ ವಾರ್!

    ವೇದಿಕೆಯಲ್ಲೇ ಸಿಎಂ ಎಚ್‍ಡಿಕೆ, ಸಂಸದ ಸಿಂಹ ನಡುವೆ ‘ಅಪ್ಪ, ಅಮ್ಮ’ ವಾರ್!

    ಮಡಿಕೇರಿ: ಕೊಡಗಿನ ಪ್ರವಾಹದಲ್ಲಿ  ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮನೆನಿರ್ಮಾಣಕ್ಕೆ ಗುದ್ದಲಿಪೂಜೆ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ‘ಅಪ್ಪ, ಅಮ್ಮ’ ವಿಚಾರಕ್ಕೆ ಸಂಬಂಧಿಸಿದಂತೆ ವಾರ್ ನಡೆದಿದೆ.

     ಜಂಬೂರಿನಲ್ಲಿ ನಡೆದ  ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಮಾತನಾಡುವುದಕ್ಕೆ ಮೊದಲು ಸಚಿವ ಸಾರಾ ಮಹೇಶ್ ಹಾಗೂ ಡಿಸಿಎಂ ಪರಮೇಶ್ವರ್ ಅವರು ಕೊಡಗು ಪರಿಹಾರಕ್ಕೆ ರಾಜ್ಯ ಸರ್ಕಾರ ಎಷ್ಟು ಕೊಟ್ಟಿದೆ ಎಂಬುವುದನ್ನು ಪ್ರಸ್ತಾಪ ಮಾಡಿದ್ದರು. ಅಲ್ಲದೇ ಕೇರಳ ಮಾದರಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ್ಕೆ ನೆರವು ನೀಡಬೇಕೆಂದು ಹೇಳಿದ್ದರು.

    ನಂತರ ಮಾತನಾಡಿದ ಪ್ರತಾಪ್ ಸಿಂಹ್, ಕೇಂದ್ರ ಸರ್ಕಾರ ಕೂಡ ಜಿಲ್ಲೆಯ ಜನರಿಗೆ ಸ್ಪಂದಿಸಿದೆ. ಎನ್‍ಡಿಆರ್ ಎಫ್ ಪಡೆ ಬೇಕೆಂದು ನಾನು ನಿರ್ಮಲಾ ಸೀತಾರಾಮನ್ ಅವರನ್ನು ಕೇಳಿದಾಗ ನಮಗೆ ಯಾವುದೇ ಪ್ರಕ್ರಿಯೆ ಬಂದಿಲ್ಲ ಎಂದು ಹೇಳಿದರು. ಇದಕ್ಕೆ ನಾನು ಕೂಡಲೇ ನನ್ನದೇ ಲೇಟರ್ ಹೆಡ್ ಬಳಸಿ ಮನವಿ ಮಾಡಿದ್ದಕ್ಕೆ ಕೂಡಲೇ ಎನ್‍ಡಿಆರ್ ಎಫ್ ತುಕಡಿ ಕೊಡಗಿಗೆ ಬಂದಿದೆ. ಕುಶಾಲನಗರದಿಂದ ಜೋಡುಪಾಲದವರೆಗೆ ರಸ್ತೆ ಹಾಳಾಗಿದ್ದು ಆ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ರಿಪೇರಿ ಮಾಡಿದೆ ಎಂದು ತಿಳಿಸಿದರು.

    ಇದರ ಜೊತೆಯಲ್ಲಿ ಸಚಿವರಿಗೆ ಟಾಂಗ್ ಎನ್ನುವಂತೆ, ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಪ್ಪ, ಅಮ್ಮ ಯಾರು ಅಂತ ಕೇಳುತ್ತಾರೆ. ಅದಕ್ಕೆ ಕೇಂದ್ರ ಎಷ್ಟು ಕೊಟ್ಟಿದೆ ಎಂದು ಹೇಳಿದ್ದೇನೆ. ಕೇರಳಕ್ಕೆ ನೀಡಿದಂತೆ ಕರ್ನಾಟಕದ ಕೊಡಗು ಪ್ರವಾಹಕ್ಕೂ ಕೇಂದ್ರ 546 ಕೋಟಿ ರೂ. ಗಳನ್ನು ನೀಡಿದೆ. ಈ ಕುರಿತು ಡಿಸಿಎಂ ಪ್ರಸ್ತಾಪ ಮಾಡಿದ್ದಾರೆ. ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಪ್ಪ, ಅಮ್ಮ ಯಾರು ಅಂತ ಕೇಳುತ್ತಾರೆ ಅದ್ದರಿಂದಲೇ ನಾನು ಈ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂದರು.

    ಪ್ರತಾಪ್ ಸಿಂಹ ಅವರು ಈ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡುತ್ತಿದಂತೆ ಕೆಂಡಾಮಂಡಲರಾದ ಸಿಎಂ ನೇರ ಸಂಸದರತ್ತ ಕೈ ಸನ್ನೆ ಮಾಡಿ ನಿಲ್ಲಿಸಿ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಆಯ್ತು ಆಯ್ತು ಎಂದರು. ಈ ವೇಳೆ ಸಿಎಂ ಪಕ್ಕದಲ್ಲೇ ಕುಳಿತಿದ್ದ ಸಚಿವ ಸಾ ರಾ ಮಹೇಶ್ ವಿರುದ್ಧ ರೇಗಿದ ಸಿಎಂ ಎಚ್‍ಡಿಕೆ, ಸಂಸದರಿಗೆ ಭಾಷಣ ನಿಲ್ಲಿಸುವಂತೆ ಹೋಗಿ ಹೇಳಿ ಎಂದು ಸೂಚನೆ ನೀಡಿದರು.

    ಭಾಷಣ ಮುಗಿಸಿ ತಮ್ಮ ಕುರ್ಚಿಯ ಬಳಿ ಪ್ರತಾಪ್ ಸಿಂಹ ಬಂದ ಬಳಿಕವೂ ಸಿಎಂ ಎಚ್‍ಡಿಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಸೈಲೆಂಟ್ ಆಗಿ ಕುಳಿತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv