Tag: ಡಿಸಿಎಂ ಗೋವಿಂದ್ ಕಾರಜೋಳ

  • ಕಾರಜೋಳ ಪುತ್ರನಿಗೆ 23 ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ

    ಕಾರಜೋಳ ಪುತ್ರನಿಗೆ 23 ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ

    – ಕುಟುಂಬದ ಕಷ್ಟಗಳನ್ನ ಬಿಚ್ಚಿಟ್ಟ ಡಿಸಿಎಂ

    ಬೆಂಗಳೂರು: ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಕೊರೊನಾ ಸಂಕಷ್ಟಕ್ಕೆ ತುತ್ತಾಗಿರೋದರಿಂದ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಲು ಆಗುತ್ತಿಲ್ಲ ಎಂದು ಹೇಳಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು. ಇದೀಗ ಮಾಧ್ಯಮ ಪ್ರಕಟನೆ ಮೂಲಕ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿರುವ ಪುತ್ರನಿಗೆ 23 ದಿನಗಳಿಂದ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿರುವ ವಿಷಯ ತಿಳಿಸಿದ್ದಾರೆ.

    ಮಾಧ್ಯಮ ಪ್ರಕಟನೆ:
    ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ. ಆದರೆ ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದರಿಗಷ್ಟೇ ಅದರ ಪ್ರಖರತೆ ಗೊತ್ತು. ಇದ ಪರಿಣಾಮವಾಗಿ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರುಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಲಾರದು. ನನ್ನ ಪುತ್ರ ಡಾ. ಗೋಪಾಲ್ ಕಾರಜೋಳ ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಧರ್ಮಪತ್ನಿ ಕೂಡಾ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಹಿಂದಿರುಗಿದ್ದಾರೆ. ನಾನೂ ಕೂಡಾ ಕೋವಿಡ್ 19ಕ್ಕೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ. ನಮ್ಮ ಕುಟುಂಬದಲ್ಲಿ ಒಟ್ಟಾರೆ 8 ಮಂದಿ ಕೊರೊನಾ ಸೋಂಕಿನಿಂದ ಒಳಗಾಗಿದ್ದೇವೆ. ಇದು ವಸ್ತುಸ್ಥಿತಿ.

    ಇಂತಹ ಗತ್ಯಂತರ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಿದ್ದ ಪ್ರಸಂಗದಲ್ಲಿ ಮಾತ್ರ ಮುನ್ನೆಚ್ಚರಿಕೆಯಿಂದ ಆಯಾಸವಾಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವೈದ್ಯರ ಸಲಹೆ ಇದೆ. ದೂರದ ಪ್ರಯಾಣ ನಿಷಿದ್ಧ ಎಂಬುದು ವೈದ್ಯರು ಕೊಟ್ಟಿರುವ ಎಚ್ಚರಿಕೆ. ಈ ಎಲ್ಲಾ ಅಂಶಗಳು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಗಮನದಲ್ಲಿದೆ. ಅವರೂ ಕೂಡಾ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದಾರೆ.

    ಮಾಧ್ಯಮಗಳ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ಪ್ರವಾಹ ಪೀಡಿತ ಜಿಲ್ಲೆಗಳಾದ ಕಲಬುರಗಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಂತ್ರಸ್ತರ ಪರಿಹಾರಕ್ಕೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳನ್ನು ಜಿಲ್ಲಾಡಳಿತಕ್ಕೆ ಖಚಿತವಾಗಿ ನಿರ್ದೇಶಿಸಿದ್ದೇನೆ. ಅದರ ಸತತ ಉಸ್ತುವಾರಿಯಲ್ಲಿ ಇದ್ದೇನೆ. ಪರಿಸ್ಥಿತಿಯ ಅನಿವಾರ್ಯತೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಿಲ್ಲದಿರಬಹುದು. ಆದರೆ ಜವಾಬ್ದಾರಿಯಿಂದ ಉಪಮುಖ್ಯಮಂತ್ರಿಯಾಗಿ, ಜಿಲ್ಲಾಉಸ್ತುವಾರಿ ಸಚಿವರಾಗಿ ನೊಂದವರ ಪರಿಹಾರಕ್ಕೆ ಶ್ರಮಿಸುತ್ತಿದ್ದೇನೆ.

    ಮಾತುಗಳಿಂದ ಇಲ್ಲವೇ ಘೋಷಣೆಗಳಿಂದ ಅಥವಾ ಟೀಕೆ ಟಿಪ್ಪಣಿಗಳಿಂದ ಸಂತ್ರಸ್ತರ ಪರಿಹಾರ ಕಾರ್ಯ ಆಗಲಾರದು. ಅದಕ್ಕೆ ಬೇಕಾದುದು ಸರ್ಕಾರದ ದೃಢ ಸಂಕಲ್ಪ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಟೀಕೆ ಟಿಪ್ಪಣಿಗಳಿಗೆ ಮಾರುಹೋಗದೇ ಸರ್ಕಾರದ ವಿಶ್ವಾಸಾರ್ಹ ಕ್ರಮಗಳನ್ನು ಗಮನಿಸಬೇಕೆಂದು ಎಂದು ಗೋವಿಂದ್ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.

    ಯುಗಾದಿಯಿಂದ ಆರಂಭವಾದ ಈ ಕೊರೊನಾ ವೈರಾಣು ನಿವಾರಣೆ ಹಾಗೂ ನೊಂದವರ ಕಲ್ಯಾಣಕ್ಕೆ ನಾನು ಕೈಗೊಂಡಿರುವ ಕಾರ್ಯ, ಪರಿಹಾರಕ್ರಮಗಳು ಎಲ್ಲರಿಗೂ ಗೊತ್ತಿರುವ ಸಂಗತಿ. ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದನ್ನು ಸ್ಮರಿಸಬೇಕು. 2009ರ ಅತಿವೃಷ್ಟಿ ಸಂದರ್ಭದ ಪರಿಸ್ಥಿತಿಯಲ್ಲಿ ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಸಂತ್ರಸ್ತರ ರಕ್ಷಣಾ ಕಾರ್ಯ, ಪರಿಹಾರಕಾರ್ಯಗಳನ್ನು ಕೈಗೊಂಡಿರುವ ಕ್ರಮದ ಬಗ್ಗೆ ತಮ್ಮಲ್ಲರಿಗೂ ತಿಳಿದ ಸಂಗತಿಯಾಗಿದೆ.

    ವರ್ತಮಾನದ ಒಂದು ಘಟನೆಯಿಂದಷ್ಟೇ ವ್ಯಕ್ತಿಯನ್ನು ಅಳೆಯಲು ಹೋಗಬಾರದು. ಹಿಂದಿನ ವಿದ್ಯಾಮಾನಗಳು ಈಗಿನ ಸ್ಥಿತಿಯನ್ನು ಗುರುತಿಸಲು ಯಾವತ್ತಿಗೂ ನಿರ್ಣಾಯಕ ಎಂಬುದು ನನ್ನ ತಿಳುವಳಿಕೆ. ಈ ಸಂದರ್ಭದಲ್ಲಿ ಪರಂಪರೆಯ ಬೆಳಕಿನಲ್ಲಿ ವರ್ತಮಾನದ ಕತ್ತಲನ್ನು ಓಡಿಸಿ ಭವಿಷ್ಯಕ್ಕೆ ಬೆಳಕನ್ನು ತರುವ ಕಡೆ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಮುನ್ನಡೆಯುವುದು ನಾನು ತೊಟ್ಟಿರುವ ಧೀಕ್ಷೆ. ಇದಕ್ಕೆ ಇಡೀ ಕರ್ನಾಟಕದ ಜನತೆಯ ಆರೈಕೆ/ ಹಾರೈಕೆ ಅಗತ್ಯ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  • ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ರೂ ಶಿಸ್ತು ಕ್ರಮ: ಡಿಸಿಎಂ ಕಾರಜೋಳ

    ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ರೂ ಶಿಸ್ತು ಕ್ರಮ: ಡಿಸಿಎಂ ಕಾರಜೋಳ

    ಬಾಗಲಕೋಟೆ: ರಾಗಿಣಿ-ಪಾಗಿಣಿ ನನಗೆ ಗೊತ್ತಿಲ್ಲ. ಯಾರೇ ತಪ್ಪು ಮಾಡಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದರೂ, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ರಾಜಕಾರಣಿಗಳ ಮಕ್ಕಳಿರಲಿ, ಅಧಿಕಾರಿಗಳ ಮಕ್ಕಳೇ ಇರಲಿ, ಯಾರ ಮಕ್ಕಳಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಡ್ರಗ್ಸ್ ವಿವಾದದಲ್ಲಿ ಸಿಲುಕಿದವರ ಮೇಲೆ ಈಗಾಗಲೇ ಕ್ರಮ ಶುರುವಾಗಿದೆ. ತನಿಖೆ ನಡೆಯುತ್ತಿದೆ, ತನಿಖೆ ಮುಗಿಯುವವವರೆಗೆ ನಾವೇನೂ ಹೇಳಲು ಸಾಧ್ಯವಿಲ್ಲ. ತನಿಖೆ ಮುಗಿಯುವ ವರೆಗೂ ವಿಷಯವನ್ನು ಗೌಪ್ಯವಾಗಿ ಇಡಲಾಗುತ್ತದೆ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಎಲ್ಲರಿಗೂ ಮಾಹಿತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಕಾರಜೋಳ ತಿಳಿಸಿದರು.

    ಇದು ಕೇವಲ ಕಾನೂನಿನಿಂದ ಬಗೆ ಹರಿಯುವ ಸಮಸ್ಯೆ ಅಲ್ಲ, ತನಿಖೆ ನಡೆಯುತ್ತಿದೆ. ಗೌಪ್ಯತೆ ಕಾಪಾಡಬೇಕಾಗುತ್ತದೆ. ಜನರಿಗೆ ಈ ಬಗ್ಗೆ ತಿಳುವಳಿಕೆ ಬರಬೇಕು. ಇಂತಹ ಚಟುವಟಿಕೆಗಳಿಂದ ಜೀವಕ್ಕೆ ಕುತ್ತು ಬರುತ್ತೆ. ಈ ರೀತಿ ನಡೆಯದಂತೆ ಇಡೀ ಸಮಾಜ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.

    ಡ್ರಗ್ಸ್ ಮಾಫಿಯಾದಿಂದ ಮೈತ್ರಿ ಸರ್ಕಾರ ಕೆಡವಿದರು ಎಂಬ ಕುಮಾರಸ್ವಾಮಿಯವರ ಆರೋಪದ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಆರೋಪದಲ್ಲಿ ಸತ್ಯಾಂಶ ಇಲ್ಲ. ಅವರ ಆರೋಪ ಕೇವಲ ರಾಜಕೀಯ ಪ್ರೇರಿತ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.

  • ಮಲಪ್ರಭಾ ನದಿ ಪಾತ್ರದಲ್ಲಿನ ಒತ್ತುವರಿ ತೆರೆವುಗೊಳಿಸಿ- ಸಚಿವ ಜಾರಕಿಹೊಳಿಗೆ ಡಿಸಿಎಂ ಕಾರಜೋಳ ಪತ್ರ

    ಮಲಪ್ರಭಾ ನದಿ ಪಾತ್ರದಲ್ಲಿನ ಒತ್ತುವರಿ ತೆರೆವುಗೊಳಿಸಿ- ಸಚಿವ ಜಾರಕಿಹೊಳಿಗೆ ಡಿಸಿಎಂ ಕಾರಜೋಳ ಪತ್ರ

    – ಮಾನವರ ದುರಾಸೆಯಿಂದ ಪ್ರವಾಹವಾಗುತ್ತಿದೆ
    – ವ್ಯಾಪಕ ಒತ್ತುವರಿ ದೂರಿನ ಹಿನ್ನೆಲೆ ಪತ್ರ

    ಬೆಂಗಳೂರು: ಮಲಪ್ರಭಾ ನದಿ ಪಾತ್ರದಲ್ಲಿ ವ್ಯಾಪಕ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಕೋರಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರು ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿಗೆ ಪತ್ರ ಬರೆದಿದ್ದಾರೆ.

    ಉತ್ತರ ಕರ್ನಾಟಕದ ಮಲಪ್ರಭಾ ನದಿ ತೀರದಲ್ಲಿ ಮಾನವರ ದುರಾಸೆಯಿಂದ ಹೆಚ್ಚು ಒತ್ತುವರಿಯಾಗಿದೆ. ಇದರ ಪರಿಣಾಮ ಮಲಪ್ರಭಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗುತ್ತಿದೆ. ಇದರಿಂದಾಗಿ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಒಟ್ಟು ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಹೀಗಾಗಿ ಮಲಪ್ರಭಾ ನದಿ ಪಾತ್ರದಲ್ಲಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಮಲಪ್ರಭಾ ನದಿಯ ಉಳಿವಿಗೆ ಒತ್ತುವರಿ ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ಗೋವಿಂದ್ ಕಾರಜೋಳ ಪತ್ರದಲ್ಲಿ ತಿಳಿಸಿದ್ದಾರೆ.

    ಪ್ರತಿ ವರ್ಷ ಉಂಟಾಗುವ ಭಾರೀ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮತ್ತು ಪ್ರವಾಹ ನಿಯಂತ್ರಿಸುವ ಬಗ್ಗೆ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಿಗದಿಪಡಿಸಬೇಕು. ತುರ್ತು ಪರಿಹಾರ ಕಂಡುಕೊಳ್ಳುವ ಬಗ್ಗೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕಾರಜೋಳ ವಿನಂತಿಸಲಾಗಿದೆ.

  • ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಡಿಸಿಎಂ ಕಾರಜೋಳ

    ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಡಿಸಿಎಂ ಕಾರಜೋಳ

    ಚಿಕ್ಕೋಡಿ: ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಶನಿವಾರ ಲಾಕ್‍ಡೌನ್ ಮಾಡುವ ವಿಚಾರ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ಹಾಗೂ ನೂತನ ಪ್ರವಾಸಿ ಮಂದಿರ ಉದ್ಘಾಟಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಸುರಕ್ಷತೆಗಾಗಿ ಶನಿವಾರ ಹಾಗೂ ಭಾನುವಾರ ಲಾಕ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮದುವೆ ಕಾರ್ಯಕ್ರಮಗಳಿಂದ ಹೆಚ್ಚಿನ ಕೊರೊನಾ ಪ್ರಕರಣ ಬಂದ ಕಾರಣ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.

    ಸರ್ಕಾರ ಕೋವಿಡ್-19 ನಿರ್ವಹಣೆಯಲ್ಲಿ ವಿಫಲವಾಗಿಲ್ಲ. ಸರ್ಕಾರ ಸಂಪೂರ್ಣ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ. ಸಾವು ನೋವುಗಳನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿದೆ. ಆದರೆ ಸರ್ಕಾರ ಸಂಕಷ್ಟದಲ್ಲಿದೆ ನಮ್ಮ ಸಂಕಷ್ಟವನ್ನು ಯಾರಿಗೆ ಹೇಳಬೇಕು ಎಂದು ಬಸವಣ್ಣನವರ ವಚನ ಹೇಳಿದರು.

    ನಿಪ್ಪಾಣಿಯಲ್ಲಿ ನಡೆದ ಅಂಬೇಡ್ಕರ್ ಭವನ ಉದ್ಘಾಟನೆ, ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಉದ್ಘಾಟನೆ ಹಾಗೂ ನೂತನ ಪ್ರವಾಸಿ ಮಂದಿರ ಉದ್ಘಾಟನೆಯಲ್ಲಿ ಸಾಮಾಜಿಕ ಅಂತರ ಹಾಗೂ ಕೊವಿಡ್-19 ನಿಯಮಗಳನ್ನು ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ ಹಾಗೂ ಗೋವಿಂದ್ ಕಾರಜೋಳ ಗಾಳಿಗೆ ತೂರಿದ್ದರು.