Tag: ಡಿಸಿಎಂ ಅಶ್ವತ್ಥನಾರಾಯಣ

  • ಆದ್ಯತಾ ಗುಂಪು, ಮುಂಚೂಣಿ ಕಾರ್ಯಕರ್ತರ ವ್ಯಾಕ್ಸಿನೇಷನ್ ಪರಿಶೀಲಿಸಿದ ಡಿಸಿಎಂ

    ಆದ್ಯತಾ ಗುಂಪು, ಮುಂಚೂಣಿ ಕಾರ್ಯಕರ್ತರ ವ್ಯಾಕ್ಸಿನೇಷನ್ ಪರಿಶೀಲಿಸಿದ ಡಿಸಿಎಂ

    ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣರವರು ಬುಧವಾರ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ವಿವಿಧೆಡೆ ಸಂಚರಿಸಿ, ಕೋವಿಡ್ ಪರಿಸ್ಥಿತಿ ಹಾಗೂ ಮುಂಚೂಣಿ ಕಾರ್ಯಕರ್ತರ ಲಸಿಕೆ ಅಭಿಯಾನವನ್ನು ಪರಿಶೀಲನೆ ನಡೆಸಿದರು.

    ಬೆಳಿಗ್ಗೆಯಿಂದಲೇ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಕೈಗೊಂಡ ಡಿಸಿಎಂ, ಮುಖ್ಯವಾಗಿ ಕ್ಷೇತ್ರದಲ್ಲಿನ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು. ಸೋಂಕಿನ ಕಾರಣದಿಂದ ದೂರದಿಂದಲೇ ಜನರು ತಮ್ಮ ಅಹವಾಲು ಹೇಳಿಕೊಂಡರು.

    ಜೊತೆಗೆ, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತೆಯ ಗುಂಪಿಗೆ ನಡೆಯುತ್ತಿರುವ ಲಸಿಕೆ ಆಭಿಯಾನವನ್ನೂ ವೀಕ್ಷಿಸಿದರಲ್ಲದೆ ಇದಕ್ಕೆ ಇನ್ನೂ ವೇಗ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ಯಾಲೇಸ್ ಗುಟ್ಟಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಜೊತೆಗೆ, ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಅದರ ಪಕ್ಕದಲ್ಲೇ ಇರುವ ಕೋವಿಡ್ ಕೇರ್ ಕೇಂದ್ರಕ್ಕೂ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

    ಮಲ್ಲೇಶ್ವರದ 19ನೇ ಅಡ್ಡರಸ್ತೆಯ ಕಾಶಿಮಠದಲ್ಲಿ ಆದ್ಯತಾ ಗುಂಪಿನಡಿ ವಿಕಲಚೇತನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಅಲ್ಲಿನ ವ್ಯವಸ್ಥೆಯನ್ನು ಡಿಸಿಎಂ ವೀಕ್ಷಿಸಿದರು. ಅಲ್ಲದೆ, ವ್ಯಾಕ್ಸಿನ್ ಕೊಟ್ಟ ನಂತರವೂ ಆರೋಗ್ಯದ ಮೇಲೆ ನಿಗಾ ಇಡುವಂತೆ ಆರೋಗ್ಯ ಸಿಬ್ಬಂದಿಗೆ ಸೂಚನೆ ಕೊಟ್ಟರು. ಇದೇ ವೇಳೆ ಮಲ್ಲೇಶ್ವರದ 13ನೇ ಅಡ್ಡರಸ್ತೆಯ ರೋಟರಿ ಜಾಗಕ್ಕೂ ಡಿಸಿಎಂ ಭೇಟಿ ನೀಡಿದ್ದರು. ಇದರ ನಡುವೆ ಮಲ್ಲೇಶ್ವರದ 13ನೇ ಅಡ್ಡರಸ್ತೆಯ ಪಬ್ಲಿಕ್ ಶಾಲೆ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಅದರ ಪ್ರಗತಿಯನ್ನು ವೀಕ್ಷಿಸಿದರು. ನಿಗದಿತ ಕಾಲಕ್ಕೆ ಕಾಮಗಾರಿ ಮುಗಿಯಬೇಕು ಎಂದು ಸಂಬಂಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಡಿಸಿಎಂ ಸೂಚನೆ ಕೊಟ್ಟರು.

    ಇನ್ನೊಂದೆಡೆ ಆರೋಗ್ಯ ಕಾರ್ಯಕರ್ತರು ಮನೆಮನೆಗೂ ತೆರಳಿ ರೋಗ ಲಕ್ಷಣ ಇರುವ ಸೋಂಕಿತರನ್ನು ಪತ್ತೆ ಮಾಡುತ್ತಿದ್ದಾರೆ. ಅಗತ್ಯ ಇರುವವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ. ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ ಎಂದು ತಿಳಿಸಿದರು.

  • ರಾಮನಗರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ – 3.5 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ

    ರಾಮನಗರ ಜಿಲ್ಲೆಗೆ 20 ಆಮ್ಲಜನಕ ಸಾಂದ್ರಕ – 3.5 ಕೋಟಿ ಮೌಲ್ಯದ ವೈದ್ಯಕೀಯ ಯಂತ್ರೋಪಕರಣ

    -ಟೊಯೊಟಾ ಕಿರ್ಲೋಸ್ಕರ್ ಕಂಪನಿಯಿಂದ ಡಾ.ಸಿಎನ್.ಅಶ್ವತ್ಥನಾರಾಯಣರಿಗೆ ಹಸ್ತಾಂತರ

    ಬೆಂಗಳೂರು: ಈಗಾಗಲೇ ರಾಮನಗರ ಜಿಲ್ಲೆಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಮತ್ತಷ್ಟು ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣರವರಿಗೆ ಸೋಮವಾರ ಹಸ್ತಾಂತರ ಮಾಡಿದೆ.

    ಬೆಂಗಳೂರಿನಲ್ಲಿ ಡಿಸಿಎಂ ಅವರನ್ನು ಭೇಟಿಯಾದ ಕಂಪನಿಯ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗ್ಡೆ ಹಾಗೂ ಹಿರಿಯ ವ್ಯವಸ್ಥಾಪಕ ಕಿರಣ್ ರವರು 3.5 ಕೋಟಿ ರೂ. ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದರು.

    ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನರವರು ಜಿಲ್ಲಾಡಳಿತದ ಪರವಾಗಿ ವೈದ್ಯಕೀಯ ಸಲಕರಣೆಗಳನ್ನು ಸ್ವೀಕರಿಸಿದರು. 8 ನೆಬಲೈಸರ್‍ಗಳು, 20 ಗ್ಲೂಕೋ ಮೀಟರ್‌ಗಳು, 5 ಆಂಬೂ ಬ್ಯಾಗ್, 48 ಪಲ್ಸ್ ಆಕ್ಸಿ ಮೀಟರ್, 200 ನೋಸಲ್ ಪ್ರಾಂಗ್ಸ್, 250 ಆಕ್ಸಿಜನ್ ಮಾಸ್ಕ್, 20 ಆಮ್ಲಜನಕ ಸಾಂದ್ರಕ ಹಾಗೂ 5 ಮಲ್ಟಿ ಪ್ಯಾರಾ ಬೆಡ್ ಸೈಡ್ ಮಾನೀಟರ್‌ಗಳನ್ನು ಹಸ್ತಾಂತರ ಮಾಡಲಾಯಿತು. ಇನ್ನೊಂದು ವಾರದಲ್ಲಿ 30 ಆಮ್ಲಜನಕ ಸಾಂದ್ರಕ ಸರಬರಾಜು ಮಾಡಲಿದ್ದಾರೆ.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, “ಈಗಾಗಲೇ ಜಿಲ್ಲೆಗೆ ಹಲವಾರು ರೀತಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪನಿ ನೆರವಾಗಿದೆ. ಈಗ ಕೋವಿಡ್ ಸಂಕಷ್ಟದಲ್ಲಿ ಅಗತ್ಯವಾದ ವಿವಿಧ ವೈದ್ಯಕೀಯ ಸಲಕರಣೆಗಳನ್ನು ನೀಡಿದೆ. ಇದಕ್ಕಾಗಿ ಕಂಪನಿಗೆ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದರು.

    ಟೊಯೊಟಾ ಕಂಪನಿ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗಡೆ, ಹಿರಿಯ ವ್ಯವಸ್ಥಾಪಕ ಕಿರಣರವರು ಈ ವೇಳೆ ಉಪಸ್ಥಿತಿಯಿದ್ದರು.

  • 5 ಲಕ್ಷ ರೆಮಿಡಿಸಿವರ್ ಆಮದು, ಔಷಧ ಕೊರತೆ ಆಗದಂತೆ ಕಟ್ಟೆಚ್ಚರ: ಡಿಸಿಎಂ ಅಶ್ವತ್ಥನಾರಾಯಣ

    5 ಲಕ್ಷ ರೆಮಿಡಿಸಿವರ್ ಆಮದು, ಔಷಧ ಕೊರತೆ ಆಗದಂತೆ ಕಟ್ಟೆಚ್ಚರ: ಡಿಸಿಎಂ ಅಶ್ವತ್ಥನಾರಾಯಣ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ 5 ಲಕ್ಷ ರೆಮಿಡಿಸಿವಿರ್ ಇಂಜೆಕ್ಷನ್ ಆಮದು ಮಾಡಿಕೊಳ್ಳುತ್ತಿದ್ದು, ಈ ಸಲುವಾಗಿ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಎರಡನೇ ಅಲೆಯನ್ನು ಎದುರಿಸಲು ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಡೀ ರಾಜ್ಯದಲ್ಲಿ ಎಲ್ಲಿಯೂ ರೆಮಿಡಿಸಿವರ್ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ, ಅಗತ್ಯವಾದ ಎಲ್ಲ ಔಷಧಿಗಳು, ಸಾಮಗ್ರಿಗಳು ಮತ್ತು ವೈದ್ಯಕೀಯ ಬಳಕೆಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ” ಎಂದರು.

    15,000 ಆಮ್ಲಜನಕ ಸಾಂದ್ರಕಗಳ (ಆಕ್ಸಿಜನ್ ಕನ್ಸೆಂಟ್ರೇಟರ್) ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಈಗಾಗಲೇ 3,000 ಆಮ್ಲಜನಕ ಸಾಂದ್ರಕಗಳ ಖರೀದಿಗೆ ಆದೇಶ ನೀಡಲಾಗಿದ್ದು, ಉಳಿದ 12,000 ಸಾಂದ್ರಕಗಳ ಖರೀದಿಗೆ ಜಾಗತಿಕ ಟೆಂಡರ್ ಕರೆಯಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ರಾಜ್ಯದಲ್ಲಿ ಈಗ ಕೋವಿಡ್ ಬೆಡ್‍ಗಳನ್ನು 4,000ದಿಂದ 24,000ಕ್ಕೆ ಹೆಚ್ಚಿಸಲಾಗಿದೆ. ಒಟ್ಟು 60,000 ಆಕ್ಸಿಜನ್ ಬೆಡ್‍ಗಳಿವೆ. ಆಕ್ಸಿಜನ್ ಅಗತ್ಯ ಇಲ್ಲದವರು ಕೂಡ ಆಸ್ಪತ್ರೆ ಸೇರಿದ್ದರಿಂದ ಬೆಡ್‍ಗಳ ಕೊರತೆ ಉಂಟಾಗಿತ್ತು. ಇದನ್ನು ತಡೆಯಲು ದಾಖಲಾತಿಗೆ ಮುನ್ನ ಭೌತಿಕ ಪರೀಕ್ಷೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.

    ಎಲ್ಲಾ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿ ಜಿಲ್ಲೆಯ ವೈದ್ಯಕೀಯ ಅಗತ್ಯ ವಸ್ತುಗಳ ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಮಾರ್ಚ್ ತಿಂಗಳಲ್ಲಿ ದಿನಕ್ಕೆ 100 ರಿಂದ 150 ಮೆಟ್ರಿಕ್ ಟನ್ ಆಗಿದ್ದ ಆಮ್ಲಜನಕದ ಬೇಡಿಕೆ ಇದ್ದಕ್ಕಿದ್ದಂತೆ ದಿನಕ್ಕೆ 1,200 ಟನ್‍ಗಳಿಗೆ ಏರಿದೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಕೋವಿಡ್ ಕರ್ತವ್ಯಕ್ಕೆ ಹಾಜರಾಗುವ ವೈದ್ಯ ವಿದ್ಯಾರ್ಥಿಗಳು ಮತ್ತು ಇಂಟರ್ನಿಗಳಿಗೆ ಎಲ್ಲ ಸೌಲಭ್ಯ ಕಲ್ಪಸಲಾಗುತ್ತಿದೆ. ಅವರಿಗೆ ಸಂಬಳ ಮತ್ತು ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಜತೆಗೆ ಅವರ ಆರೋಗ್ಯ ಮತ್ತು ವಿಶ್ರಾಂತಿಯ ಮೇಲೂ ನಿಗಾ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

  • ಕೋವಿಡ್ ವಿರುದ್ಧ ಹೋರಾಟದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಒತ್ತು

    ಕೋವಿಡ್ ವಿರುದ್ಧ ಹೋರಾಟದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಒತ್ತು

    -ರಾಮನಗರ ಜಿಲ್ಲೆಗೆ 1 ಕೋಟಿ ರೂ. ಮೌಲ್ಯದ ವೈದ್ಯಕೀಯ ಉತ್ಪನ್ನ
    – ತಕ್ಷಣವೇ ನೀಡಲು ಟೊಯೋಟಾ ಕಿರ್ಲೋಸ್ಕರ್ ಒಪ್ಪಿಗೆ

    ಬೆಂಗಳೂರು: ಕೋವಿಡ್ ಎರಡನೇ ಅಲೆಯನ್ನು ಹತ್ತಿಕ್ಕುವ ಉದ್ದೇಶದಿಂದ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಟೊಯೋಟಾ ಕಿರ್ಲೋಸ್ಕರ್ ಕಂಪನಿ ಜತೆ ಶುಕ್ರವಾರ ಮಹತ್ವದ ಸಮಾಲೋಚನೆ ನಡೆಸಿದರು.

    ವರ್ಚುಯಲ್ ವೇದಿಕೆ ಮೂಲಕ ಕಂಪನಿಯ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಜತೆ ಚರ್ಚೆ ನಡೆಸಿದ ಡಿಸಿಎಂ, ರಾಮನಗರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಅಗತ್ಯವಾದ ನೆರವನ್ನು ಕಂಪನಿ ವತಿಯಿಂದ ನೀಡುವಂತೆ ಕೋರಿದರು.

    ಈ ಮನವಿಗೆ ಕೂಡಲೇ ಸ್ಪಂದಿಸಿದ ವಿಕ್ರಂ ಕಿರ್ಲೋಸ್ಕರ್ ಅವರು, ತತ್‍ಕ್ಷಣವೇ 1 ಕೋಟಿ ರೂ. ಮೌಲ್ಯದ ವೈದ್ಯಕೀಯ ಉತ್ಪನ್ನಗಳನ್ನು ರಾಮನಗರ ಜಿಲ್ಲೆಗೆ ನೀಡುವುದಾಗಿ ಡಿಸಿಎಂ ಅವರಿಗೆ ತಿಳಿಸಿದರು. ಕಂಪನಿಯ ಜತೆ ರಾಮನಗರ ಜಿಲ್ಲಾಡಳಿತ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ ಎಂದು ಈ ಸಂದರ್ಭದಲ್ಲಿ ಡಿಸಿಎಂ ಅವರು ಟೊಯೋಟಾ ಕಿರ್ಲೋಸ್ಕರ್ ಪ್ರತಿನಿಧಿಗಳಿಗೆ ಹೇಳಿದರು.

    ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಎಂ ಅವರು, “ಕೋವಿಡ್ ನಿರ್ವಹಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ. ಟೊಯೋಟಾ ಕಿರ್ಲೋಸ್ಕರ್ ಕಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರಾಮನಗರ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಅವರ ನೆರವು ಕೇಳಿದ್ದೇವೆ” ಎಂದರು.

    ಮಾಗಡಿ ಮತ್ತು ಕನಕಪುರದಲ್ಲಿ ಆರ್‌ಟಿಪಿಸಿಆರ್ ಪರೀಕ್ಷಾ ಘಟಕಗಳ ಸ್ಥಾಪನೆ, ರಾಮನಗರ ಜಿಲ್ಲೆಗೆ 50 ವೆಂಟಿಲೇಟರ್‌ಗಳು ಮತ್ತು 50 ಪ್ಯಾರಾ ಮಲ್ಟಿ ಮಾನಿಟರ್‍ಗಳು, ಆಕ್ಸಿಜನ್ ಜನರೇಟರ್‌ಗಳು, 200 ಆಕ್ಸಿಜನ್ ಬೆಡ್‍ಗಳು ಬೇಕೆಂದು ನಾವು ಮನವಿ ಮಾಡಿದ್ದೇವೆ. ಈ ಎಲ್ಲ ಬೇಡಿಕೆಗಳಿಗೆ ಕಂಪನಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಡಿಸಿಎಂ ತಿಳಿಸಿದರು.

    ನಗರದ ಎಂ.ಎಸ್.ರಾಮಯ್ಯ, ಮೈಸೂರು ರಸ್ತೆಯ ರಾಜರಾಜೇಶ್ವರಿ ಮತ್ತು ಕನಕಪುರ ರಸ್ತೆಯ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಿಗೆ ತುರ್ತಾಗಿ ಆಕ್ಸಿಜನ್ ಬೆಡ್‍ಗಳ ಅಗತ್ಯವಿದೆ. ಈ ಆಸ್ಪತ್ರೆಗಳಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಇದ್ದು, ಇಂಥ ಹಾಸಿಗೆಗಳ ಮೇಲೆ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ. ಸಾರ್ವಜನಿಕರಿಗೆ ಇಂಥ ಕಡೆ ಉತ್ತಮ ಚಿಕಿತ್ಸೆ ಕೊಡಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

    ಸಭೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ವತಿಯಿಂದ ಸಂದೀಪ್ ಶಾಂತಾರಾಂ ದಲ್ವಿ, ಬಿಡದಿ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಹೆಗಡೆ ಮುಂತಾದವರು ಇದ್ದರು. ಇದಾದ ನಂತರ ಡಿಸಿಎಂ ಅವರು ವರ್ಚುಯಲ್ ಮೂಲಕವೇ ಪ್ಲಿಪ್‍ಕಾರ್ಟ್ ಪ್ರತಿನಿಧಿಗಳ ಜತೆಯೂ ಮಾತುಕತೆ ನಡೆಸಿದರು.

  • ಆಕ್ಸಿಜನ್ ಬೆಡ್ ಹೆಚ್ಚು ಪಡೆಯಲು ಎಲ್ಲ ಕ್ರಮ – ಎಂಎಸ್ ರಾಮಯ್ಯ ಆಸ್ಪತ್ರೆ ಜತೆ ಡಿಸಿಎಂ ಮಾತುಕತೆ

    ಆಕ್ಸಿಜನ್ ಬೆಡ್ ಹೆಚ್ಚು ಪಡೆಯಲು ಎಲ್ಲ ಕ್ರಮ – ಎಂಎಸ್ ರಾಮಯ್ಯ ಆಸ್ಪತ್ರೆ ಜತೆ ಡಿಸಿಎಂ ಮಾತುಕತೆ

    ಬೆಂಗಳೂರು: ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಅಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

    ವೆಂಟಿಲೇಟರ್‌ಗಳು, ಆಕ್ಸಿಜನ್ ಬೆಡ್‍ಗಳು, ರೆಮಿಡಿಸ್ವಿರ್, ಆಮ್ಲಜನಕ ಮತ್ತಿತರೆ ಅಂಶಗಳ ಬಗ್ಗೆ ಅವರು ಆಸ್ಪತ್ರೆಯ ಹಿರಿಯ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ, ಆಸ್ಪತ್ರೆಯ ಅಧ್ಯಕ್ಷ ಎಂ.ಆರ್.ಜಯರಾಂ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅವರ ಜೊತೆ ಮಾತುಕತೆ ನಡೆಸಿದ ಡಿಸಿಎಂ, ಆಕ್ಸಿಜನ್ ಬೆಡ್‍ಗಳ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಮನವಿ ಮಾಡಿದರು. ಇದಕ್ಕೆ ಅವರಿಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿದರು.

    ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಮಾತ್ರವಲ್ಲ. ಮುಂದೆ ಎದುರಾಗಬಹುದಾದ ಯಾವುದೇ ವೈದ್ಯಕೀಯ ಸವಾಲನ್ನು ಎದುರಿಸಲು ಸನ್ನದ್ಧರಾಗಿರಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬೆಡ್‍ಗಳನ್ನು ಇಟ್ಟುಕೊಂಡಿರಬೇಕು. ಇಡೀ ವೈದ್ಯಕೀಯ ವ್ಯವಸ್ಥೆ 24/7 ಅಲರ್ಟ್ ಆಗಿರಬೇಕು. ಸರಕಾರ ಕೋರಿಕೆಗೆ ಎಂಎಸ್ ರಾಮಯ್ಯ ಆಸ್ಪತ್ರೆ ಆಡಳಿತ ವರ್ಗ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.

    ಕೆಲ ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿವೆ. ಆದರೆ, ಆಕ್ಸಿಜನ್ ಜೋಡಿತ ಬೆಡ್‍ಗಳಿಲ್ಲ. ನಮಗೆ ಬೇಕಿರುವುದು ಆಕ್ಸಿಜನ್ ಇರುವ ಹಾಸಿಗೆಗಳು ಮಾತ್ರ. ಎಮರ್ಜೆನ್ಸಿ ಪ್ರಕರಣಗಳಲ್ಲಿ ಆಮ್ಲಜನಕ ಇಲ್ಲದಿದ್ದರೆ ಅದು ಎಷ್ಟು ದೊಡ್ಡ ಆಸ್ಪತ್ರೆಯಾದರೂ ಪ್ರಯೋಜನ ಇಲ್ಲ. ಆದಷ್ಟು ಅಂಥ ಆಸ್ಪತ್ರೆಗಳಿಗೆ ನಾವೇ ಸೌಲಭ್ಯಗಳನ್ನು ಕೊಟ್ಟು ಅಂಥ ಹಾಸಿಗೆಗಳನ್ನು ಸರಕಾರದ ವಶಕ್ಕೆ ಪಡೆಯಬೇಕು. ಈ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಸಿಬ್ಬಂದಿ ಕೊರತೆ ಆಗಬಾರದು: ಸರಕಾರ ಆಗರಲಿ ಅಥವಾ ಖಾಸಗಿ ಆಗಿರಲಿ, ಯಾವುದೇ ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜ್ ಆಗಿರಬಹುದು, ಸಿಬ್ಬಂದಿ ಕೊರತೆ ಆಗಬಾರದು. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸೇವೆಯನ್ನು ಪಡೆದುಕೊಳ್ಳಿ. ಅವರಿಗೆ ತಜ್ಞ ವೈದ್ಯರು ಮಾರ್ಗದರ್ಶನ ಮಾಡಿದರೆ ಸಾಕು. ಅದಕ್ಕೆ ಕಾನೂನಿನಲ್ಲಿ ಅವಕಾಶ ಕೊಡಲು ಸರಕಾರ ಸಿದ್ಧವಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಖ್ಯಾತ ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ ಅವರು ಕೋವಿಡ್ ತಡೆಗೆ ಅನೇಕ ಪರಿಣಾಮಕಾರಿ ಸಲಹೆಗಳನ್ನು ನೀಡಿದ್ದಾರೆ. ಕ್ಷಿಪ್ರವಾಗಿ ಆ ಸಲಹೆಗಳನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ವೈದ್ಯರ ಜತೆ ಸಮಾಲೋಚನೆ: ಇದಾದ ಮೇಲೆ ಮಲ್ಲೇಶ್ವರದ ವೈದ್ಯರು, ಮತ್ತಿತರೆ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಸೋಂಕಿತರ ಆರೋಗ್ಯ ಉಲ್ಬಣವಾಗುವ ಸ್ಥಿತಿಗೆ ಬಿಡದೇ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡಿ ಗುಣಪಡಿಸಬೇಕು ಎಂದು ತಾಕೀತು ಮಾಡಿದರು.

    ಸೋಂಕಿತರಿಗೆ ವೈದ್ಯ ಸೌಲಭ್ಯದಲ್ಲ ಯಾವುದೇ ಲೋಪವಾಗಬಾರದು. ಪರೀಕ್ಷೆ, ರಿಸಲ್ಟ್ ಹಾಗೂ ಚಿಕಿತ್ಸೆ ಕೊಡುವ ವಿಚಾರದಲ್ಲಿ ಎಲ್ಲವೂ ವ್ಯವಸ್ಥಿತವಾಗಿರಬೇಕು ಎಂದು ಡಿಸಿಎಂ ಸೂಚನೆ ಕೊಟ್ಟರು.

  • ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ

    ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರನ್ನ ವಿಶ್ವಕ್ಕೆ ಪರಿಚಯಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ನಾಡಪ್ರಭುವಿನ ಸಾಧನೆ, ಬೆಂಗಳೂರಿನ ನಿರ್ಮಾಣದ ಇತಿಹಾಸವನ್ನ ಅಮರವಾಗಿಸುವ ನಿಟ್ಟಿನಲ್ಲಿ ಸರ್ಕಾರವು ಕೆಂಪೇಗೌಡರ ಪ್ರತಿಮೆ ನಿರ್ಮಾಣದ ನಿರ್ಧಾರ ಕೈಗೊಂಡಿದೆ.

    ನಾಡಪ್ರಭು ಕೆಂಪೇಗೌಡರ 551ನೇ ಜಯಂತಿಗೆ ರಾಜ್ಯ ಸರ್ಕಾರ ಐತಿಹಾಸ ಕಾರ್ಯಕ್ರಮಕ್ಕೆ ಹೆಜ್ಜೆ ಇಟ್ಟಿದೆ. ನಾಡಪ್ರಭುವಿನ ಸಾಧನೆಯನ್ನ ವಿಶ್ವಕ್ಕೆ ಪರಿಚಯ ಮಾಡಲು ಐತಿಹಾಸಿಕ ಕೆಲಸಕ್ಕೆ ಕೈ ಹಾಕಿದೆ. ಈ ಐತಿಹಾಸಿಕ ಕೆಲಸಕ್ಕೆ ನಾಳೆಯೆ ಅಡಿಗಲ್ಲು ಹಾಕುತ್ತಿದೆ.

    ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುಮಾರು 23 ಎಕರೆ ಜಾಗದಲ್ಲಿ ಸುಮಾರು 66 ಕೋಟಿ ವೆಚ್ಚದಲ್ಲಿ ಪ್ರತಿಮೆ ಜೊತೆಗೆ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಶನಿವಾರ ಕೆಂಪೇಗೌಡರ 551ನೇ ಜಯಂತಿ ಈ ಹಿನ್ನಲೆಯಲ್ಲಿ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಚಾಲನೆ ನೀಡಲಾಗ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಅಶ್ವತ್ಥನಾರಾಯಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ ಅವರು, ಕೆಂಪೇಗೌಡರ ಪ್ರತಿಮೆಯ ಮಾದರಿ ವಿನ್ಯಾಸವನ್ನು ಶನಿವಾರ ಬಿಡುಗಡೆ ಮಾಡಲಾಗುತ್ತದೆ. ಸ್ವಾಮೀಜಿಗಳು, ಗಣ್ಯರು, ಸಚಿವರು, ವಿಪಕ್ಷ ನಾಯಕರು ಸೇರಿ ಒಟ್ಟು 50ಕ್ಕೂ ಕಡಿಮೆ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಳಿದವರು ಆನ್‍ಲೈನ್ ವ್ಯವಸ್ಥೆ ಮೂಲಕ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲಿದ್ದಾರೆ. ಮುಂದಿನ ವರ್ಷ ಕೆಂಪೇಗೌಡರ ಜಯಂತಿಗೆ ಪ್ರತಿಮೆ ಸೆಂಟ್ರಲ್ ಪಾರ್ಕ್ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಾಗಲೇ ಅಲ್ಲಿ ಬೃಹತ್ ಪ್ರತಿಮೆ ಮತ್ತು ಸ್ಮಾರಕ ನಿರ್ಮಾಣ ಮಾಡಬೇಕು ಅಂತ ಪ್ರಸ್ತಾಪ ಇತ್ತು. ಸಿಎಂ ಯಡಿಯೂರಪ್ಪ 2019-20ನೇ ಸಾಲಿನ ಬಜೆಟ್‍ನಲ್ಲಿ ಇದಕ್ಕಾಗಿ ವಿಶೇಷ ಅನುದಾನ ಮೀಸಲಿಟ್ದಿದ್ದರು. ಈಗ ಡಿಸಿಎಂ ಅಶ್ವಥ್ ನಾರಾಯಣ ಅವರ ಕಾಳಜಿಯಿಂದ ಪ್ರತಿಮೆ ನಿರ್ಮಾಣ ಹಾಗೂ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ ಈ ಕಾಮಗಾರಿ ಪ್ರಾರಂಭವಾಗುತ್ತಿದೆ. ಐಡೆಕ್ ಸಂಸ್ಥೆ ಸೆಂಟ್ರಲ್ ಪಾರ್ಕ್ ನಿರ್ಮಾಣದ ಉಸ್ತುವಾರಿ ಹೊತ್ತಿದೆ. ಖ್ಯಾತ ಕಲಾವಿದ ರಾಮ್ ಸಿತಾರ್ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಿದ್ದಾರೆ.

    ಸೆಂಟ್ರಲ್ ಪಾರ್ಕ್ ಪ್ಲ್ಯಾನ್!
    > ಸೆಂಟ್ರಲ್ ಪಾರ್ಕ್ ನಲ್ಲಿ ಕೆಂಪೇಗೌಡರು ನಿರ್ಮಿಸಿದ ನಗರದ ಐತಿಹಾಸಿಕ ಹೆಜ್ಜೆ ಗುರುತುಗಳನ್ನ ಈಗಿನ ಪೀಳಿಗೆಗೆ ಪರಿಚಯ ಮಾಡಿಸುವ ಕೆಲಸ ಮಾಡಲಾಗುತ್ತೆ.
    > ವ್ಯಾಪಾರ, ವಾಣಿಜ್ಯ ಉದ್ದೇಶಕ್ಕಾಗಿ ಕೆಂಪೇಗೌಡರು ರಚಿಸಿದ್ದ ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ 64ಕ್ಕೂ ಹೆಚ್ಚು ಪೇಟೆಗಳ ಸೊಗಡು ಈ ಪಾರ್ಕ್ ನಲ್ಲಿ ಇರುತ್ತದೆ.
    > ಉದ್ಯಾನವನದ ಪ್ರವೇಶ ದ್ವಾರದಲ್ಲಿ ಎರಡು ಎತ್ತರದ ಗೋಡೆಗಳು ಇರಲಿವೆ. ಇದನ್ನು ದಾಟಿ ಒಳಗೆ ಹೋಗುವ ಪ್ರವಾಸಿಗರಿಗೆ ಕೌತುಕ ಮೂಡಿಸುವ ಚಿತ್ರಗಳು ಕಲಾಕೃತಿಗಳು ಕಾಣಿಸಲಿವೆ.
    > ಕೆಂಪೇಗೌಡರು ನಿರ್ಮಿಸಿದ್ದ ಮಣ್ಣಿನ ಗೋಡೆಗಳನ್ನು ನೆನಪಿಸುವ ಗೋಡೆಗಳು ಇರಲಿದೆ. ಇದಕ್ಕಾಗಿ ರಾಮ್ಡ್ ಅರ್ಥ್ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ.

    > ಸೆಂಟ್ರಲ್ ಪಾರ್ಕ್ ಮಧ್ಯದಲ್ಲಿ ಚಕ್ರಾಕಾರದ ನೀರಿನ ಸಂಗ್ರಹಗಾರ ಇರಲಿದೆ. ಇವು ಕೆಂಪೇಗೌಡರು ನಿರ್ಮಿಸಿದ್ದ ಕಾಲುವೆ ಹಾಗೂ ಕೆರೆಗಳ ವಿನ್ಯಾಸದ ತದ್ರೂಪವಾಗಿರುತ್ತದೆ.
    > ನೀರಿನ ಸಂಗ್ರಹಗಾರದ ಸುತ್ತ ತೆರೆದುಕೊಳ್ಳುವ ದಾರಿಗಳು ಚಕ್ರದ ವಿನ್ಯಾಸದಲ್ಲಿ ಇರಲಿದೆ. ಚಕ್ರದ ಕಡ್ಡಿಗಳಂತೆ ಹೊರಭಾಗಕ್ಕೆ ಈ ದಾರಿಗಳು ಮಧ್ಯೆ ಭಾಗಕ್ಕೆ ತೆರೆದುಕೊಳ್ಳಲಿದೆ.
    > ಪ್ರತಿಮೆ ಸುತ್ತ ಪೀಠ ಮತ್ತು ಅದರ ಜಗಲಿಯಂತಹ ಪ್ರದೇಶವನ್ನು ವಸುಂದರ ವಿವರಣಾತ್ಮಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತೆ.
    > ಪ್ರತಿಮೆ ಸ್ಥಳದಲ್ಲಿ ಮಾಹಿತಿ ಫಲಕ, ಭಿತ್ತಿಚಿತ್ರಗಳ ಮೂಲಕ ಕೆಂಪೇಗೌಡರ ಜೀವನದ ಪ್ರಮುಖ ಘಟನೆಗಳನ್ನ ಬಣ್ಣಿಸಲಾಗುತ್ತೆ. ಜೊತೆ ಕೆಂಪೇಗೌಡರ ಐತಿಹಾಸಿಕ ಮಹತ್ವ ಮತ್ತು ದೂರದೃಷ್ಟಿಯ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತೆ.
    > ಸೆಂಟ್ರಲ್ ಪಾರ್ಕ್ ನಮ್ಮ ರಾಜ್ಯದ ಧ್ವಜದ ಸಂಕೇತವಾಗಿರುವ ಅರಿಶಿಣ, ಕುಂಕುಮ ಬಣ್ಣಗಳನ್ನು ಒಳಗೊಂಡಿರುತ್ತದೆ.