Tag: ಡಿಪೋ ಮ್ಯಾನೇಜರ್

  • ಅಪಘಾತ ಮಾಡಿದ ಬಸ್ ಚಾಲಕರಿಗೆ ಸನ್ಮಾನ – ಡಿಪೋ ಮ್ಯಾನೇಜರ್‌ನಿಂದ ಅಪಹಾಸ್ಯ

    ಅಪಘಾತ ಮಾಡಿದ ಬಸ್ ಚಾಲಕರಿಗೆ ಸನ್ಮಾನ – ಡಿಪೋ ಮ್ಯಾನೇಜರ್‌ನಿಂದ ಅಪಹಾಸ್ಯ

    ಹುಬ್ಬಳ್ಳಿ: ಅಪಘಾತ ಮಾಡಿದ ಬಸ್ ಚಾಲಕರಿಗೆ ಡಿಪೋ ಮ್ಯಾನೇಜರ್ ಮತ್ತು ಅಧಿಕಾರಿಗಳು, ಸನ್ಮಾನ ಮಾಡಿ ಅಪಹಾಸ್ಯ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

    ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಚಿಗರಿ ಬಸ್‌ಗಳ ನಡುವೆ ಬುಧವಾರ ಧಾರವಾಡದಲ್ಲಿ (Dharwad) ಅಪಘಾತ ನಡೆದಿತ್ತು. ಮುಂದೆ ಹೋಗುತ್ತಿದ್ದ ಬಸ್ ಬ್ರೇಕ್ ಹಾಕಿದಾಗ ಹಿಂಬದಿಯ ಬಸ್ ಚಾಲಕ ಬ್ರೇಕ್ ಹಾಕಿದರೂ, ಬ್ರೇಕ್ ಹತ್ತದೇ ಮುಂದಿನ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಶಾಲಿನಿ ರಜನೀಶ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ರೆ ನೇಣು ಹಾಕಿಕೊಳ್ಳುತ್ತೇನೆ: ರವಿಕುಮಾರ್‌

    ಅಪಘಾತದಲ್ಲಿ ಎರಡು ಬಸ್‌ಗಳ ಗಾಜುಗಳು ಪುಡಿಪುಡಿಯಾಗಿದ್ದವು. ಚಾಲಕರಿಗೆ ಬುದ್ಧಿವಾದ ಹೇಳುವ ನೆಪದಲ್ಲಿ ಎರಡು ಬಸ್‌ಗಳ ಚಾಲಕರನ್ನು ಡಿಪೋಗೆ ಕರೆಸಿದ ಅಧಿಕಾರಿಗಳು ಸನ್ಮಾನ ಮಾಡಿ ಅಪಮಾನ ಮಾಡಿದ್ದಾರೆ. ಬಸ್‌ಗಳ ಮುಂದೆ ಚಾಲಕರನ್ನು ನಿಲ್ಲಿಸಿ, ಮಾಲೆ ಹಾಕಿ ಸನ್ಮಾನ ಮಾಡಿದ ಫೋಟೋವನ್ನು ಶೇರ್ ಮಾಡಿ, ಅಪಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಶಾಲಿನಿ ರಜನೀಶ್‌ ವಿರುದ್ಧ ಅಸಭ್ಯ ಹೇಳಿಕೆ – ರವಿಕುಮಾರ್‌ ವಿರುದ್ಧ ಕೇಸ್‌ ದಾಖಲು

    ಅಧಿಕಾರಿಗಳ ನಡೆಗೆ ಇತರೇ ಚಾಲಕರು ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ಎನ್‌ಡಬ್ಲ್ಯೂಕೆಆರ್‌ಟಿಸಿ ಎಂಡಿ ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಎಂಡಿ ಪ್ರಿಯಾಂಗ್ ಅವರು ಡಿಪೋ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    ದಾವಣಗೆರೆ: ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭದ ವೇಳೆ ಶಾಸಕ ಎಂ.ಪಿ. ರೇಣುಕಾಚಾರ್ಯ ಕೆಎಸ್ಆರ್‌ಟಿಸಿ ಬಸ್ ಚಾಲನೆ ಮಾಡಿದ ಹಿನ್ನಲೆ ಹೊನ್ನಾಳಿ ಡಿಪೋ ಮ್ಯಾನೇಜರ್ ಅವರಿಗೆ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಡಿಸಿ ವಿವರಣೆ ಕೇಳಿ ನೋಟಿಸ್ ನೀಡಿದ್ದಾರೆ.

    ಸೋಮವಾರ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನಿಪುರ, ರಾಂಪುರ, ಸಾಸ್ವೇಹಳ್ಳಿ ಗ್ರಾಮಗಳ ಮಾರ್ಗವಾಗಿ ಹೊಸದಾಗಿ ಕೆಎಸ್ಆರ್‌ಟಿಸಿ ಬಸ್ ಚಾಲನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಂಪಿ ರೇಣುಕಾಚಾರ್ಯ ಸ್ವತಃ ತಾವೇ ಚಾಲಕನ ಯೂನಿಫಾರಂ ಹಾಕಿಕೊಂಡು ಗ್ರಾಮಗಳಿಗೆ ಬಸ್ ಚಲಾಯಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಡಿಸಿ ಟಿ ಆರ್ ನವೀನ್ ಕುಮಾರ್ ಘಟನೆಯ ಬಗ್ಗೆ ಹೊನ್ನಾಳಿ ಘಟಕ ವ್ಯವಸ್ಥಾಪಕ ಮಹೇಶ್ವರಪ್ಪರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ.

    ರೇಣುಕಾಚಾರ್ಯ ಬಸ್ ಚಲಾಯಿಸಿದ್ದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಶಾಸಕ ಎಂ.ಪಿ.ರೇಣುಕಾಚಾರ್ಯ ಚಾಲಕನ ಸಮವಸ್ತ್ರ ಧರಿಸಿ ಸುಮಾರು 60 ಕಿ.ಮೀ ಬಸ್ ಓಡಿಸಿದ್ದರು. ಕೆಎಸ್ಆರ್‌ಟಿಸಿ ಬಸ್ ಗಳನ್ನು ಕೇವಲ ನಿಗಮದ ಚಾಲಕರು ಹಾಗೂ ಇಲಾಖೆಯ ಪರವಾನಿಗೆ ಪಡೆದವರು ಮಾತ್ರ ಚಲಾಯಿಸಬೇಕು. ಈ ನಿಯಮವನ್ನು ಉಲ್ಲಂಘಿಸಿ  ಶಾಸಕರು ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ ಚಲಾಯಿಸಿರುವುದಕ್ಕೆ ವಿವರಣೆ ನೀಡುವಂತೆ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ನೋಟಿಸ್ ನೀಡಿದ್ದಾರೆ.

     

  • ಕೊಟ್ಟಿಗೆಪಾಳ್ಯ ಬಿಎಂಟಿಸಿ ಬಸ್ ಅಪಘಾತ- ಡಿಪೋ ಮ್ಯಾನೇಜರ್, AWS ಅಮಾನತು

    ಕೊಟ್ಟಿಗೆಪಾಳ್ಯ ಬಿಎಂಟಿಸಿ ಬಸ್ ಅಪಘಾತ- ಡಿಪೋ ಮ್ಯಾನೇಜರ್, AWS ಅಮಾನತು

    -ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
    -ಮೃತ ಕುಟುಂಬಸ್ಥರಿಗೆ, ಗಾಯಾಳುಗಳಿಗೆ ಪರಿಹಾರ

    ಬೆಂಗಳೂರು: ಕೊಟ್ಟಿಗೆಪಾಳ್ಯದ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಡಿಪೋ ಮ್ಯಾನೇಜರ್ ಶಿವಲಿಂಗಯ್ಯ ಮತ್ತು ಎಡಬ್ಲ್ಯೂಎಸ್ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

    ಬಸ್ ಚಾಲಕ ವೆಂಕಟೇಶ್ 15 ದಿನಗಳ ಹಿಂದೆಯೇ 250ಎಂ ಬಸ್ ಬ್ರೇಕ್ ಸರಿ ಇಲ್ಲ. ಬೇರೆ ಬಸ್ ಕೊಡಿ ಅಂತಾ ಕೇಳಿದ್ದರು. ಆದರೆ ಡಿಪೋ ಮ್ಯಾನೇಜರ್ ಚಾಲಕನ ಮಾತನ್ನು ನಿರ್ಲಕ್ಷ್ಯಿಸಿದ್ದರು. ಕಳೆದ 15 ದಿನಗಳಿಂದಲೂ ಬಸ್ ಬ್ರೇಕ್ ಸರಿ ಇಲ್ಲ ಎಂದು ಬರೆದು ವೆಂಕಟೇಶ್ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಹೀಗಾಗಿ ಅಪಘಾತಕ್ಕೆ ಡಿಪೋ ಮ್ಯಾನೇಜರ್ ಶಿವಲಿಂಗಯ್ಯ ಮತ್ತು ಎಡಬ್ಲ್ಯೂಸಿ ಕಾರಣ ಎಂದು ಇಬ್ಬರನ್ನು ಬಿಎಂಟಿಸಿ ಎಂಡಿ ಶಿಖಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೇನೆ. ಮೇಲ್ನೋಟಕ್ಕೆ ಬ್ರೇಕ್ ಸರಿ ಇರಲಿಲ್ಲ ಎಂದು ಹೇಳಲಾಗುತ್ತಿದ್ದು, ಕರ್ತವ್ಯಲೋಪ ಕಂಡ ಹಿನ್ನೆಲೆಯಲ್ಲಿ ಈ ಕೂಡಲೇ ಡಿಪೋ ಮ್ಯಾನೇಜರ್ ಮತ್ತು ಎಡಬ್ಲ್ಯೂಎಸ್ ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದೇನೆ ಎಂದು ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ತಾತ್ಕಾಲಿಕ ಪರಿಹಾರವಾಗಿ 25 ಸಾವಿರ ರೂ. ಮತ್ತು ಗಾಯಾಳುಗಳ ಸಂಪೂರ್ಣ ವೆಚ್ಚವನ್ನ ಭರಿಸಲಾಗುತ್ತದೆ. ಪ್ರತಿ ಬಸ್ 8 ಲಕ್ಷ ಕಿಮೀ ವರೆಗೆ ಓಡಿಸಲಾಗುತ್ತದೆ. ಅಪಘಾತವಾದ ಬಸ್ 5 ಲಕ್ಷ ಕಿಮೀ ಓಡಿದೆ. ಬಸ್ ಕಂಡೀಷನ್ ಬಗ್ಗೆ ಡ್ರೈವರ್ ಗಳು ಡಿಪೋ ಮ್ಯಾನೇಜರ್ ಗೆ ಮಾಹಿತಿ ನೀಡುತ್ತಾರೆ. ಇದನ್ನ ಪರಿಗಣನೆಗೆ ತೆಗೆದುಕೊಂಡು ಕೆಲಸ ಮಾಡಬೇಕು. ಈ ಸಂಬಂಧ ಆಂತರಿಕೆ ತನಿಖೆಗೆ ಆದೇಶ ನೀಡಿದ್ದೇವೆ ಎಂದು ಎಂಟಿಸಿ ಪಶ್ಚಿಮ ವಿಭಾಗ ಡಿಸಿ ಶ್ರೀನಾಥ್ ತಿಳಿಸಿದ್ದಾರೆ.

    ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ:
    ಈ ಅಪಘಾತದ ದೃಶ್ಯಗಳು ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ವೇಗವಾಗಿ ಬಂದ ಬಸ್ ನಾಲ್ಕು ದ್ವಿಚಕ್ರ ವಾಹನಗಳು, ಒಂದು ಕಾರ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ವಾಹನಗಳು ಸಂಪೂರ್ಣ ಜಖಂ ಆಗಿವೆ. ಬಿಎಂಟಿಸಿ ಚಾಲಕ ವೆಂಕಟೇಶ್ ಸಮಯ ಪ್ರಜ್ಞೆ ಮೆರೆದಿದ್ದಾರೆ. ರಸ್ತೆಯ ಎಡಬದಿಯಲ್ಲಿ ಬಸ್ ಸ್ಟಾಪ್ ಇದ್ದು, ಸಾಕಷ್ಟು ಜನ ನಿಂತಿದ್ದರು. ಬಲಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಲ್ಲುಗಳಿಗೆ ಬಸ್ ಡಿಕ್ಕಿ ಹೊಡಿಸಿ ನಿಲ್ಲಿಸಿದ್ದಾರೆ.

    ವಾಹನ ಸವಾರರ ಮೇಲೆ ಹರಿದ ಪರಿಣಾಮ ಹರ್ಷಿತ್, ನಾಗರಾಜ್ ಮತ್ತು ಅಭಿಷೇಖ್ ಗೆ ಗಂಭೀರ ಗಾಯಗಳಾಗಿ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿಲ್ಲಿದ್ದ ಪ್ರಯಾಣಿಕರು, ಎಮರ್ಜೆನ್ಸಿ ಎಕ್ಸಿಟ್‍ನಿಂದ ಹೊರಬಂದಿದ್ದಾರೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಇಬ್ಬರು ಸಾವನ್ನಪ್ಪಿದ್ರೆ, ಮೂವರಿಗೆ ತಲೆಗೆ ಗಾಯವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜಾಸ್ತಿ ಮಾತಾಡಿದ್ರೆ ಒದೆ ಬೀಳುತ್ತೆ-ಚಾಲಕನಿಗೆ ಡಿಪೋ ಮ್ಯಾನೇಜರ್ ಧಮ್ಕಿ

    ಜಾಸ್ತಿ ಮಾತಾಡಿದ್ರೆ ಒದೆ ಬೀಳುತ್ತೆ-ಚಾಲಕನಿಗೆ ಡಿಪೋ ಮ್ಯಾನೇಜರ್ ಧಮ್ಕಿ

    ಮೈಸೂರು: ಕರ್ತವ್ಯ ನಿಯೋಜನೆ ವಿಚಾರದಲ್ಲಿ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ಮತ್ತು ಚಾಲಕನ ನಡುವೆ ವಾಗ್ವಾದ ನಡೆದ ವೀಡಿಯೋ ವೈರಲ್ ಆಗಿದೆ.

    ಮೈಸೂರು ಜಿಲ್ಲೆಯ ಕೆ.ಆರ್ ನಗರದ ಕೆಎಸ್‍ಆರ್ ಟಿಸಿ ಡಿಪೋ ಮ್ಯಾನೇಜರ್ ಪಾಪನಾಯಕ್ ಮತ್ತು ಚಾಲಕ ಶರಣಬಸಯ್ಯ ಎಂಬವವರಿಗೆ ಕರ್ತವ್ಯ ನಿಯೋಜನೆ ವಿಚಾರದಲ್ಲಿ ಧಮ್ಕಿ ಹಾಕಿದ್ದಾರೆ. ಕರ್ತವ್ಯ ನಿಯೋಜನೆ ವಿಚಾರದಲ್ಲಿ ಡಿಪೋ ವ್ಯವಸ್ಥಾಪಕ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ. ವೈರಲ್ ಆಗಿರೋ ವೀಡಿಯೋದಲ್ಲಿ ವ್ಯವಸ್ಥಾಪಕರು, ಚಾಲಕನಿಗೆ ನಿನಗೆ ನಾನು ಹೊಡೆಯಲ್ಲಾ ಬೇರೆಯವರು ಹೊಡೆಯುತ್ತಾರೆ ಎಂದು ಧಮ್ಕಿ ಹಾಕಿ ಡೀಪೋ ದಿಂದ ಹೊರಗೆ ದಬ್ಬುತ್ತಿರುವುದು ದೃಶ್ಯಗಳಿವೆ.

    ನನಗೆ ಏನಾದ್ರೂ ಆದರೆ ಪಾಪನಾಯಕ್ ಹೊಣೆಗಾರರು ಎಂದು ಶರಣಬಸಯ್ಯ ಹೇಳಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಬೇರೆಯವರ ಜೊತೆ ಮಾತನಾಡಿದಂತೆ ನನ್ನೊಂದಿಗೆ ವರ್ತಿಸಿದ್ರೆ ಒದೆ ತಿನ್ನುತ್ತಿಯಾ? ಆತನನ್ನು ಕರ್ತವ್ಯಕ್ಕೆ ನಿಯೋಜಿಸಬೇಡಿ. ಸುಮ್ಮನೆ (..) ಮುಚ್ಚಕೊಂಡು ಹೋಗಬೇಕು. ಸಸ್ಪೆಂಡ್ ಆಗಬೇಕಾ ಎಂದು ಅವಾಜ್ ಹಾಕಲಾಗಿದೆ.

    ಬೇರೆ ಡೀಪೋದಿಂದ ವರ್ಗವಾಗಿ ಇಲ್ಲಿಗೆ ಬಂದಿರೋ ಶರಣಬಸವಯ್ಯ ತಮ್ಮ ಮಾವನ ಸಾವಿನ ಕಾರಣ ಎರಡು ದಿನ ಅನಧಿಕೃತವಾಗಿ ರಜೆ ತೆಗೆದುಕೊಂಡ ಕಾರಣ ವ್ಯವಸ್ಥಾಪಕ ಹೀಗೆ ಕಿರುಕುಳ ಕೊಡ್ತಿದ್ದಾರೆ. ಅಲ್ಲದೆ ಹಣಕ್ಕಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಚಾಲಕ ಆರೋಪಿದ್ದಾರೆ.

  • ಕಾಡಿನಲ್ಲಿ ನಾನು ಒಬ್ಬಳೇ ಇದ್ದೇನೆ, ಏನಾದ್ರೂ ಆದ್ರೆ ಮ್ಯಾನೇಜರೇ ಕಾರಣ- ಲೇಡಿ ಕಂಡಕ್ಟರ್ ನೋವಿನ ಮಾತು ವೈರಲ್

    ಕಾಡಿನಲ್ಲಿ ನಾನು ಒಬ್ಬಳೇ ಇದ್ದೇನೆ, ಏನಾದ್ರೂ ಆದ್ರೆ ಮ್ಯಾನೇಜರೇ ಕಾರಣ- ಲೇಡಿ ಕಂಡಕ್ಟರ್ ನೋವಿನ ಮಾತು ವೈರಲ್

    ಬೆಂಗಳೂರು: ಹಳಿಯಾಳ ಘಟಕಕ್ಕೆ ಸೇರಿದ ಬಸ್ ನಿರ್ವಾಹಕಿ ಮೊಬೈಲಿನಲ್ಲಿ ತನ್ನ ಸುರಕ್ಷತೆಗೆ ಸಂಬಂಧಪಟ್ಟಂತೆ ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗಿದೆ. ಜೊತೆಗೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಮಹಿಳಾ ಸಿಬ್ಬಂದಿಗೆ ಸುರಕ್ಷತೆ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ.

    ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಹಳಿಯಾಳ ಘಟಕಕ್ಕೆ ಸೇರಿದ ಕೆಎ 25 ಎಫ್ 3421 ಬಸ್ ಮಂಗಳವಾರ ಬೆಳಗ್ಗೆ ಕಾರವಾರ ಕಡೆಗೆ ಹೊರಟಿತ್ತು. ಬೆಳಗ್ಗೆ 8.30ರ ವೇಳೆ ಯಲ್ಲಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಬಸ್ಸಿನ ಮುಂದಿನ ಟೈರ್ ಪಂಚರ್ ಆಗಿತ್ತು. ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬಸ್ಸಿಗೆ ಹತ್ತಿಸಲಾಗಿದೆ.

    ಬಸ್ಸಿನಲ್ಲಿ ಸ್ಟೆಪ್ನಿ ಇಲ್ಲದ ಕಾರಣ ಕೂಡಲೇ ನಿರ್ವಾಹಕಿ ಡಿಪೋ ಮ್ಯಾನೇಜರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುವ ಮತ್ತೊಂದು ಬಸ್ಸಿನಲ್ಲಿ ಮ್ಯಾನೇಜರ್ ಸ್ಟೆಪ್ನಿ ಕಳುಹಿಸಿದ್ದಾರೆ. ಆದರೆ ಸ್ಟೆಪ್ನಿ ಚೇಂಜ್ ಮಾಡಲು ಬೇಕಾದ ಟೂಲ್ಸ್ ಬಸ್ಸಿನಲ್ಲಿದ್ದರು, ಟೂಲ್ ಬಾಕ್ಸ್ ಓಪನ್ ಆಗುತ್ತಿರಲಿಲ್ಲ. ಹಾಗಾಗಿ ನಿರ್ವಾಹಕಿ ಮತ್ತೆ ಮ್ಯಾನೇಜರ್‌ಗೆ ಕರೆ ಮಾಡಿ ಈ ವಿಷಯವನ್ನು ತಿಳಿಸುತ್ತಾರೆ. ಆಗ ಮ್ಯಾನೇಜರ್ ಸ್ಥಳೀಯ ಯಲ್ಲಾಪುರ ಡಿಪೋ ಹೋಗಿ ಟೂಲ್ಸ್ ಮತ್ತು ಮೆಕಾನಿಕ್ ಅವರನ್ನು ಕರೆ ತಂದು ರಿಪೇರಿ ಮಾಡಿಸುವಂತೆ ಚಾಲಕನಿಗೆ ಸೂಚನೆ ನೀಡಿ ನಿರ್ವಾಹಕಿಗೆ ಬಸ್ ಬಳಿಯೇ ಇರುವಂತೆ ಹೇಳಿದ್ದಾರೆ.

    ನಿರ್ಜನ ಪ್ರದೇಶದಲ್ಲಿ ಯಾವೊಬ್ಬ ಪ್ರಯಾಣಿಕರು ಇಲ್ಲದ ಬಸ್ಸಿನಲ್ಲಿ ಮಹಿಳಾ ಕಂಡೆಕ್ಟರ್ ಧೈರ್ಯ ಮಾಡಿ ಚಾಲಕ ಬರುವವರೆಗೂ ಬಸ್ ಬಳಿಯೇ ಇರುತ್ತಾರೆ. ಈ ವೇಳೆ ನಿರ್ಜನ ಕಾಡು ಪ್ರದೇಶದಲ್ಲಿ ತನ್ನ ಸುರಕ್ಷತೆ ಪ್ರಶ್ನಿಸಿ ನಿರ್ವಾಹಕಿ, ನನಗೆ ಇಂತಹ ನಿರ್ಜನ ಪ್ರದೇಶದಲ್ಲಿ ಏನಾದರೂ ಆದರೆ ಅದಕ್ಕೆ ಇಲ್ಲಿ ಇರಲು ಹೇಳಿದ ಹಳಿಯಾಳ ಡಿಪೋ ಮ್ಯಾನೇಜರ್ ಅವರೇ ಕಾರಣ ಎಂದು ತನ್ನ ಅಸಹಾಯಕತೆಯನ್ನು ತೋರಿದ್ದಾರೆ.

    ಇದೇ ಘಟನೆಗೆ ಸಂಬಂಧಿಸಿದಂತೆ ಸಾರಿಗೆ ನೌಕರರ ಕಾರ್ಮಿಕ ಮುಖಂಡ ಯೋಗೇಶ್ ಗೌಡ ಸಾರಿಗೆ ಸಂಸ್ಥೆಯಲ್ಲಿನ ಮಹಿಳಾ ಸಿಬ್ಬಂದಿಯ ಸುರಕ್ಷತೆ ಪ್ರಶ್ನಿಸಿ ಗುರುವಾರ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.

  • ಡಿಪೋ ಮ್ಯಾನೇಜರ್ ವಿರುದ್ಧ ಕಿರುಕುಳ ಆರೋಪ- ಚಾಲಕ ಕಮ್ ನಿರ್ವಾಹಕ ಆತ್ಮಹತ್ಯೆಗೆ ಯತ್ನ

    ಡಿಪೋ ಮ್ಯಾನೇಜರ್ ವಿರುದ್ಧ ಕಿರುಕುಳ ಆರೋಪ- ಚಾಲಕ ಕಮ್ ನಿರ್ವಾಹಕ ಆತ್ಮಹತ್ಯೆಗೆ ಯತ್ನ

    ಕಲಬುರಗಿ: ಆಳಂದ ಡಿಪೋ ಮ್ಯಾನೇಜರ್ ಚಂದ್ರಶೇಖರ್ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಚಾಲಕ ಕಮ್ ನಿರ್ವಾಹಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

    ಮಲ್ಲಿಕಾರ್ಜುನ ಕಡಗಂಚಿ ಆತ್ಮಹತ್ಯೆಗೆ ಯತ್ನಿಸಿದ ಎನ್‍ಇಕೆಎಸ್‍ಆರ್ ಟಿಸಿ ಚಾಲಕ ಕಮ್ ನಿರ್ವಾಹಕ. ಮಲ್ಲಿಕಾರ್ಜುನ್ ಮಂಗಳವಾರ ಸಂಜೆ 5 ಗಂಟೆಗೆ ಡಿಪೋ ಮ್ಯಾನೇಜರ್ ಚೇಂಬರ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಳಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಸದ್ಯ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಳಂದದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ಆಳಂದ, ಕಲಬುರಗಿ ಸೇರಿ ತಮ್ಮ ತಮ್ಮ ಹಳ್ಳಿಗಳಿಗೆ ತೆರಳುವ ಪ್ರಯಾಣಿಕರು ಬಸ್ ಇಲ್ಲದೇ ಪರದಾಡುತ್ತಿದ್ದಾರೆ.