Tag: ಡಿನ್ನರ್ ಮೀಟಿಂಗ್

  • ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

    ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

    – ಸಿಎಂ ಡಿನ್ನರ್ ಪಾರ್ಟಿ ಅಜೆಂಡಾ ಊಟ ಅಷ್ಟೆ, ನವೆಂಬರ್ ಕ್ರಾಂತಿ ಯಾವುದು ಇಲ್ಲ

    ಬೆಂಗಳೂರು: ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ ಯಾವುದೇ ಪೊಲಿಟಿಕಲ್ ಮೀಟಿಂಗ್ ಮಾಡಿಲ್ಲ ಎಂದು ಗೃಹಸಚಿವ ಪರಮೇಶ್ವರ್ (Parameshwar) ಸ್ಪಷ್ಟಪಡಿಸಿದ್ದಾರೆ.

    ಗುರುವಾರ ಮಹದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೊಳಿ (Satish Jarkiholi) ಅಪಾರ್ಟ್ಮೆಂಟ್‌ನಲ್ಲಿ ಸಭೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಸಭೆಯಲ್ಲಿ ಯಾವುದೇ ವಿಶೇಷ ಇಲ್ಲ. ಮಾಧ್ಯಮಗಳಿಗೆ ಯಾವ ರೀತಿ ಕಣ್ಣಿಗೆ ಕಾಣಿಸುತ್ತೆ ಅಂತ ಗೊತ್ತಿಲ್ಲ. ಹಾಗೆ ಸಭೆ ಮಾಡಿರೋದು ಮೊದಲ ಬಾರಿ ಅಲ್ಲ. ಅನೇಕ ಬಾರಿ ನಾನು ಜಾರಕಿಹೊಳಿ, ಮಹದೇವಪ್ಪ ಸಭೆ ಮಾಡಿದ್ದೇವೆ. ನಾವೆಲ್ಲ ಸ್ನೇಹಿತರು, ಕೆಲವು ವಿಷಯಗಳು ಚರ್ಚೆ ಮಾಡಬೇಕು ಅಂದಾಗ ಭೇಟಿ ಮಾಡುತ್ತೇವೆ. ಅದು ಪೊಲಿಟಿಕಲ್ ಮೀಟಿಂಗ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಂಪುಟ ಪುನರ್‌ಚನೆ ವದಂತಿ ಬೆನ್ನಲ್ಲೇ ಮೂವರು ಸಚಿವರಿಂದ ಬ್ರೇಕ್‌ಫಾಸ್ಟ್‌ ಮೀಟಿಂಗ್‌

    ರಾಜಣ್ಣ ಮಂತ್ರಿ ಅಲ್ಲ ಅದಕ್ಕೆ ಬಂದಿರಲಿಲ್ಲ. ನಿನ್ನೆ ಕ್ಯಾಬಿನೆಟ್ ಸಭೆ ಇತ್ತು. ಕೆಲವು ವಿಷಯ ಸೂಕ್ಷ್ಮ ಇತ್ತು ಹಾಗೇ ಮಾತಾಡಿಕೊಂಡು, ತಿಂಡಿ ತಿಂದು ಹೋಗೋಣ ಅಂತ ಸಭೆ ಮಾಡಿದ್ವಿ. ಅದೊಂದು ಸಾಮಾನ್ಯ ಮೀಟಿಂಗ್ ಅಷ್ಟೇ. ಈ ಹಿಂದೆ ಬೇಕಾದಷ್ಟು ಬಾರಿ ನಾವು ಸಭೆ ಮಾಡಿದ್ದೇವೆ. ಇದೇನು ಮೊದಲ ಸಭೆ ಅಲ್ಲ. ಸತೀಶ್ ಜಾರಕಿಹೊಳಿ, ಮಹದೇವಪ್ಪ ಮನೆಯಲ್ಲಿ ಅನೇಕ ಬಾರಿ ಮೀಟ್ ಮಾಡಿದ್ದೇವೆ. ಹೊಸದೇನು ಅಲ್ಲ ಎಂದಿದ್ದಾರೆ.

    ದಲಿತ ನಾಯಕರ ಬೇಡಿಕೆ ಕಾಂಗ್ರೆಸ್‌ನಲ್ಲಿ ಈಡೇರುತ್ತಿಲ್ಲ ಅಂತ ಯಾರು ಹೇಳಿದ್ರು? ಹೆಚ್ಚುವರಿ ಡಿಸಿಎಂ ಬೇಕು ಅಂತ ನಾನು ಹೇಳಿರಲಿಲ್ಲ. ಯಾರು ಹೇಳಿದ್ರು, ಯಾರು ಒತ್ತಾಯ ಮಾಡಿದ್ರು? ಸತೀಶ್ ಜಾರಕಿಹೊಳಿ, ರಾಜಣ್ಣ ಒತ್ತಾಯ ಮಾಡಿರೋದು ನನಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ, ನಾವು ಜನರಲ್ ಆಗಿ ಮಾತಾಡಿದ್ದೇವೆ. ಇದೇ ರೀತಿ ಆಗಬೇಕು ಅಂತ ನಾವ್ಯಾರು ಮಾತಾಡಿಲ್ಲ ಎಂದು ತಿಳಿಸಿದ್ದಾರೆ.

    ಸಿಎಂ ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ
    ಸಿಎಂ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಹಿಂದೆಯೂ ಅನೇಕ ಬಾರಿ ಊಟಕ್ಕೆ ಕರೆದಿದ್ದಾರೆ. ತುಂಬಾ ದಿನ ಆಗಿತ್ತು. ಹೀಗಾಗಿ ಊಟಕ್ಕೆ ಕರೆದಿದ್ದಾರೆ. ಡಿನ್ನರ್ ಕರೆಯೋದಕ್ಕೆ ಏನು ವಿಶೇಷತೆ ಇಲ್ಲ. ಊಟ ಹಾಕ್ತಾರೆ, ಊಟ ಮಾಡಿಕೊಂಡು ಬರುತ್ತೇವೆ. ಸಿಎಂ ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ. ಸಿಎಂ ಊಟಕ್ಕೆ ಕರೆದಿರೋದು ಒಂದು ಸಾಮಾನ್ಯ ಮೀಟಿಂಗ್ ಅಷ್ಟೆ. ಜಾಸ್ತಿ ದಿನ ಆಗಿದೆ ಅಂತ ಊಟಕ್ಕೆ ಕರೆದಿದ್ದಾರೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲಿದೆ ನವೆಂಬರ್ ಕ್ರಾಂತಿ? ಯಾರು ಹೇಳಿದ್ರು ನವೆಂಬರ್ ಕ್ರಾಂತಿ ಅಂತ? ಯಾವ ಕ್ರಾಂತಿಯೂ ಇಲ್ಲ. ಸಂಪುಟ ಪುನಾರಚನೆ ಆಗೋದು ಎಲ್ಲಾ ಸಿಎಂ ಅವರನ್ನ ಕೇಳಬೇಕು. ಸಂಪುಟ ಪುನರಾಚನೆ ಇದ್ಯಾ, ಯಾರನ್ನಾದ್ರು ಹೊಸಬರನ್ನ ಮಂತ್ರಿಯಾಗಿ ತಗೋತೀರಾ ಅಂತ ಸಿಎಂ ಅವರನ್ನ ಕೇಳಿ ಎಂದಿದ್ದಾರೆ.

    ಹೈಕಮಾಂಡ್ ಸಚಿವರ ಮೌಲ್ಯಮಾಪನ ಏನು ಮಾಡಿಲ್ಲ. ಸಚಿವರ ಬಗ್ಗೆ ಬೇರೆ ಬೇರೆ ಸಮಯದಲ್ಲಿ ಮಾಹಿತಿ ತಗೊಂಡಿದ್ರು. ಇದೆಲ್ಲ ಸಾಮಾನ್ಯವಾಗಿ ಹಾಗೂ ನಿರಂತರವಾಗಿ ನಡೆಯುತ್ತದೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡೋದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ಯಾವುದೇ ಕ್ರಾಂತಿ ಇಲ್ಲ ಎಂದು ತಿಳಿಸಿದ್ದಾರೆ.

  • ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಕ್ಕಿಲ್ಲ ಅಂದ್ರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ – `ಕೈ’ ಡಿನ್ನರ್ ಮೀಟಿಂಗ್‌ಗೆ ಹೆಚ್‌ಡಿಕೆ ಕಿಡಿ

    ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಕ್ಕಿಲ್ಲ ಅಂದ್ರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ – `ಕೈ’ ಡಿನ್ನರ್ ಮೀಟಿಂಗ್‌ಗೆ ಹೆಚ್‌ಡಿಕೆ ಕಿಡಿ

    ಬೆಂಗಳೂರು: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಕ್ಕಿಲ್ಲ ಎಂದರೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಡಿನ್ನರ್ ಮೀಟಿಂಗ್ ಯಾಕೆ ಎಂದು ಕಾಂಗ್ರೆಸ್‌ನಲ್ಲಿ (Congress) ದಲಿತ ನಾಯಕರ ಡಿನ್ನರ್ ಮೀಟಿಂಗ್ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.

    ದಲಿತ ನಾಯಕರ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದಲಿತ ಶಾಸಕರು, ನಾಯಕರು, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಟ್ಟಿಲ್ಲ ಅದಕ್ಕೆ ಸಭೆ ಮಾಡ್ತೀನಿ ಎಂದು ಹೇಳುತ್ತಾರೆ. ಡಿನ್ನರ್ ಪಾರ್ಟಿ ಮಾಡಿ ಚರ್ಚೆ ಮಾಡ್ತೀವಿ ಅಂತಾರೆ. ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡೋದಾದ್ರೆ ಕ್ಯಾಬಿನೆಟ್ ಇರೋದು ಯಾಕೆ ಅಂತ ಪ್ರಶ್ನೆ ಮಾಡಿದರು.ಇದನ್ನೂ ಓದಿ: Kempegowda International Airport | 2024ರಲ್ಲಿ ದಾಖಲೆಯ 4 ಕೋಟಿ ಪ್ರಯಾಣಿಕರ ಸಂಖ್ಯೆ

    ಎಸ್ಸಿ-ಎಸ್ಟಿ ಇರಲಿ ಯಾವುದೇ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗದೇ ಇದ್ದರೆ ಕ್ಯಾಬಿನೆಟ್ ಚರ್ಚೆ ಮಾಡಬೇಕಾ? ಅಥವಾ ಬೇರೆಕಡೆ ಊಟಕ್ಕೆ ಸೇರಿ ಡಿನ್ನರ್‌ನಲ್ಲಿ ಚರ್ಚೆ ಮಾಡ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದೇ ವೇಳೆ ಕಾಂಗ್ರೆಸ್‌ನಲ್ಲಿ ಸಿಎಂ ಫೈಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಕಾರ ಮಾಡಿದ ಕುಮಾರಸ್ವಾಮಿ, ಅದು ಅವರ ಪಕ್ಷದ ವಿಚಾರ. ಅವರ ಪಕ್ಷದ ವಿಚಾರ ಅವರು ಚರ್ಚೆ ಮಾಡಿಕೊಳ್ಳಲಿ ಬಿಡು ಎಂದು ಜಾರಿಕೊಂಡರು.ಇದನ್ನೂ ಓದಿ: ಡಿಕೆಶಿ ಎರಡೂವರೆ ವರ್ಷ ಯಾಕೆ, ಮುಂದೆ ಐದು ವರ್ಷ ಸಿಎಂ ಆಗಲಿ: ಕೆ.ಎನ್.ರಾಜಣ್ಣ

  • ಡಿನ್ನರ್ ಹೊಸತೇನು ಅಲ್ಲ, ಮುಸುಕಿನ ಗುದ್ದಾಟ ಏನಿಲ್ಲ: ಸಚಿವ ಸತೀಶ್ ಜಾರಕಿಹೊಳಿ

    ಡಿನ್ನರ್ ಹೊಸತೇನು ಅಲ್ಲ, ಮುಸುಕಿನ ಗುದ್ದಾಟ ಏನಿಲ್ಲ: ಸಚಿವ ಸತೀಶ್ ಜಾರಕಿಹೊಳಿ

    ಬೆಂಗಳೂರು: ಡಿನ್ನರ್ ಹೊಸತೇನು ಅಲ್ಲ, ನಮ್ಮಲ್ಲಿ ಮುಸುಕಿನ ಗುದ್ದಾಟ ಎನಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಎಸ್ಸಿ-ಎಸ್ಟಿ ಶಾಸಕರ ಡಿನ್ನರ್ ಮೀಟಿಂಗ್ ಮುಂದೂಡಿಕೆ ವಿಚಾರ, ಯಾರು ಕರೆದಿದ್ರು ಅವರನ್ನೇ ಕೇಳಬೇಕು. ಕರೆದಿದ್ದರೆ ನಾವು ಭಾಗವಹಿಸುತ್ತಿದ್ದೆವು. ಸಭೆಗೆ ನಾವು ಆಹ್ವಾನಿತರಷ್ಟೇ. ಸರಿಯಾದ ಪರ್ಸನ್ ಕೇಳಿದ್ರೆ ಗೊತ್ತಾಗುತ್ತೆ. ಸಭೆಗೆ ನನ್ನನ್ನ ಕರೆದಿದ್ದರು. ಏನು ಚರ್ಚೆಯಾಗ್ತಿತ್ತು ನನಗೆ ಗೊತ್ತಿಲ್ಲ. ಪರಮೇಶ್ವರ್ ಜೊತೆ ನಾನು‌ ಮಾತನಾಡಿಲ್ಲ. ಪಕ್ಷ ಒಂದೇ ಇದೆ. ಎಲ್ಲರೂ ‌ಇದ್ದೇವೆ. ರಾಜಕೀಯ‌ ಮಾಡಬೇಕಾದ್ರೆ ಶಕ್ತಿ ಇಟ್ಕೊಂಡೇ ಬರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಬೇಜಾರಾಗಲು ಅವ್ರ ಆಸ್ತಿ ಬರೆಸಿಕೊಂಡಿದ್ದೀವಾ? – ಡಿಸಿಎಂ ವಿರುದ್ಧ ರಾಜಣ್ಣ ಅಸಮಾಧಾನ

    ಸಭೆ ಕರೆದವರೂ ಅಲ್ಲ ಡೆಲ್ಲಿಗೆ ಹೋದವರು ಅಲ್ಲ. ಇದರ ಬಗ್ಗೆ ಹೇಳಿದರೆ, ಮತ್ತೇನೋ ಆಗುತ್ತೆ. ಮತ್ತೆ ಯಾವಾಗ ಮಾಡ್ತಾರೆ ಕೇಳ್ತೇವೆ. ಡಿನ್ನರ್ ಹೊಸದೇನು ಅಲ್ಲ. ಮುಸುಕಿನ ಗುದ್ದಾಟ ಏನೂ ಇಲ್ಲ. ಹೈಕಮಾಂಡ್ ಪರ್ಮಿಷನ್ ಹೋಂ ಮಿನಿಸ್ಟರ್ ತೆಗೆದುಕೊಳ್ತಾರೆ. ಆಮೇಲೆ ಸಭೆಯ ಬಗ್ಗೆ ನೋಡೋಣ. ಸಮಸ್ಯೆ ಉದ್ಭವವಾದಾಗ ಕೇಳಬೇಕಲ್ಲ. ಹೈಕಮಾಂಡ್ ಹತ್ತಿರವೇ ಕೇಳೋಣ ಎಂದಿದ್ದಾರೆ.

    ರಾಜಕೀಯದಲ್ಲಿ ಹಿನ್ನಡೆ, ಮುನ್ನಡೆ ಇರುತ್ತೆ. ಫೋನಿನಲ್ಲಿ ಮಾತನಾಡೋಕೇನು ಆಗಲ್ವಾ. ಪಕ್ಷ ಮೇಲಿದೆ ಸಮಸ್ಯೆ ಪರಿಹರಿಸುವ ಶಕ್ತಿ ಅವರಿಗಿದೆ. ನಮ್ಮ ಊಟ ನಮ್ಮದು ಬೇರೆಯವರಿಗೇನು ಸಂಬಂಧ? ಅವರಿಗೇನು ಆತಂಕ? ಪರ್ಮಿಷನ್ ತೆಗೆದುಕೊಂಡು ಮತ್ತೆ ಸಭೆ ಮಾಡಬಹುದು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಹನೆಯ ಕಟ್ಟೆ ಒಡೆಯುವ ಕಾಲ ಸನ್ನಿಹಿತವಾಗಿದೆ: ಬೊಮ್ಮಾಯಿ

  • ಔತಣಕೂಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಡಿ.ಕೆ.ಸುರೇಶ್

    ಔತಣಕೂಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಡಿ.ಕೆ.ಸುರೇಶ್

    ಬೆಂಗಳೂರು: ವಿಶೇಷ ಸಂದರ್ಭಗಳಲ್ಲಿ ಸಚಿವರು, ನಾಯಕರು ಒಟ್ಟಿಗೆ ಸೇರಿ ಔತಣಕೂಟ ನಡೆಸುವುದು ಸಾಮಾನ್ಯ. ಇದಕ್ಕೆ ರಾಜಕೀಯವಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ (D.K.Suresh) ಹೇಳಿದ್ದಾರೆ.

    ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಡಿಸಿಎಂ ಅನುಪಸ್ಥಿತಿಯಲ್ಲಿ ಅನೇಕ ಡಿನ್ನರ್ ಸಭೆಗಳು ನಡೆಯುತ್ತಿವೆ ಅಂತೇನಿಲ್ಲ. ವಿಶೇಷ ಸಂದರ್ಭಗಳಲ್ಲಿ ಸ್ನೇಹಿತರು ಊಟಕ್ಕೆ ಸೇರುವುದು, ಹೀಗೆ ಊಟಕ್ಕೆ ಸೇರಿದಾಗ ಹಲವಾರು ಚರ್ಚೆ ಮಾಡುವುದು ಸರ್ವೇ ಸಾಮಾನ್ಯ. ಹೊಸ ವರ್ಷದ ಹಿನ್ನೆಲೆಯಲ್ಲಿ ಕೆಲವು ಸಚಿವರು, ನಾಯಕರು ಔತಣಕೂಟಕ್ಕೆ ಸೇರಿದ್ದರು. ಅದರಲ್ಲಿ ಮುಖ್ಯಮಂತ್ರಿಗಳು ಸೇರಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಾಜಕಾರಣದಲ್ಲಿ ಮಾಧ್ಯಮಗಳು ಹೇಳುವ ರೀತಿ ವಿಶೇಷ ಬದಲಾವಣೆಗೆ ಒತ್ತಡ ಹಾಕಲಾಗುತ್ತಿದೆ ಎಂದು ಅರ್ಥ ಕಲ್ಪಿಸಲು ಸಾಧ್ಯವಿಲ್ಲ. ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಅವರೇ ಔತಣಕೂಟದಲ್ಲಿ ಸೇರಿರುವಾಗ ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಚಿವ ಪರಮೇಶ್ವರ್‌ ಕರೆದಿದ್ದ ಡಿನ್ನರ್‌ ಮೀಟಿಂಗ್‌ ಮುಂದೂಡಿಕೆ

    ಪರಮೇಶ್ವರ್ ಅವರು ಪರಿಶಿಷ್ಟ ಜಾತಿ, ಸಮುದಾಯದ ಸಚಿವರು ಹಾಗೂ ಶಾಸಕರ ಸಭೆ ಕರೆದಿದ್ದಾರೆ ಎಂದು ಕೇಳಿದಾಗ, ಸಭೆ ಕರೆಯಬಾರದು ಅಂತೇನಿಲ್ಲವಲ್ಲ? ಅವರೂ ಸಭೆ ಕರೆಯಬಹುದು, ನೀವು ಕರೆಯಬಹುದು, ನಾನೂ ಕರೆಯಬಹುದು. ಊಟಕ್ಕೆ ಕರೆಯುವುದರಲ್ಲಿ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಪರಮೇಶ್ವರ್ ಅವರು ನಮ್ಮ ಹಿರಿಯ ನಾಯಕರು, ಗೃಹಮಂತ್ರಿಗಳು. ಅವರಿಗೆ ತಮ್ಮದೇ ಆದ ಒತ್ತಡಗಳಿವೆ. ಅವರ ಸಮುದಾಯದ ಶಾಸಕರು ಅವರ ಮುಂದೆ ಕೆಲವು ಬೇಡಿಕೆ ಇಟ್ಟಿರಬಹುದು. ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಪೂರೈಸಲು ಚರ್ಚೆ ಮಾಡಬಹುದು. ಮತ್ತೊಂದು ಕಾಂತರಾಜು ಅವರ ವರದಿ ಬಗ್ಗೆ ಚರ್ಚೆ ಆರಂಭವಾಗಿವೆ. ಈ ಬಗ್ಗೆ ಚರ್ಚೆ ನಡೆಸಲು ಸಭೆ ಸೇರುವುದು ಸಾಮಾನ್ಯ. ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂಬ ಶಿವಕುಮಾರ್ ಅವರ ಹೇಳಿಕೆ ನಂತರ ಈ ಬೆಳವಣಿಗೆಗಳು ನಡೆಯುತ್ತಿವೆ ಅಂತೇನು ಇಲ್ಲ. ಈ ಬಗ್ಗೆ ಶಿವಕುಮಾರ್ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಈ ವಿಚಾರವಾಗಿ ನಾನು ಹೇಳುವುದೇನು ಇಲ್ಲ ಎಂದು ತಿಳಿಸಿದರು.

    ಕೇಂದ್ರ ಸಚಿವ ಕುಮಾರಸ್ವಾಮಿ ಸರ್ಕಾರದ ವಿರುದ್ಧ 60% ಕಮಿಷನ್ ಆರೋಪ ಮಾಡಿದ್ದಾರೆ. ಕರ್ನಾಟಕದ ಅಭಿವೃದ್ಧಿ ಹಾಗೂ ಸೇವೆ ಮಾಡಲು ಕುಮಾರಸ್ವಾಮಿ ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ. ರಾಜ್ಯದ ಅಭಿವೃದ್ಧಿಗೆ ಅವರು ತಮ್ಮ ಸಲಹೆ ನೀಡಲಿ. 2025ನೇ ವರ್ಷದಲ್ಲಾದರೂ ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ. ರಾಜ್ಯದ ಜನರ ಹಿತದೃಷ್ಟಿಯಿಂದ ಅವರ ಸಲಹೆ ಇರಲಿ. 60%, 40% ಆರೋಪ ಬಿಟ್ಟು, ಅವರಿಗೆ ಕೇಂದ್ರ ಸರ್ಕಾರದಲ್ಲಿರುವ ಅಧಿಕಾರ ಬಳಸಿಕೊಂಡು, ರಾಜ್ಯಕ್ಕೆ ಯಾವ ರೀತಿ ಕೊಡುಗೆ ನೀಡಬಹುದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾದ ಪಾಲಿನ ಬಗ್ಗೆ, ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹಾಕಲಿ. ಶನಿವಾರ, ಭಾನುವಾರ ಬಂದು ಆರೋಪ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಚುನಾವಣೆ ಇನ್ನು ಬಹಳ ದೂರವಿದೆ. ಈಗ ಆರೋಪ ಮಾಡುವುದು ಬೇಡ. ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡಲಿ. ನಾವು ಅವರಿಂದ ಅಭಿವೃದ್ಧಿ ಚಿಂತನೆ ನಿರೀಕ್ಷಿಸುತ್ತೇನೆ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಸರ್ಕಾರ ಕೊಟ್ಟ ಹಣ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಸಿಎಂ ಕೆಂಡಾಮಂಡಲ

    ಸಿಎಂ ಕುರ್ಚಿ ಬಗ್ಗೆ ಚರ್ಚೆಯಾಗುತ್ತಿದ್ದು, 2028ಕ್ಕೆ ಸಿಎಂ ಆಕಾಂಕ್ಷಿ ಎಂಬ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ವಿಚಾರವಾಗಿ ನೀವು ಅವರನ್ನೇ ಕೇಳಬೇಕು. ಅವರು ಆಕಾಂಕ್ಷಿಯಾಗಿದ್ದರೆ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರು ನಮ್ಮ ಪಕ್ಷದ ನಾಯಕರು, ಸಮುದಾಯದ ಮುಖಂಡರು. ರಾಜಕೀಯದಲ್ಲಿರುವವರು ತಮ್ಮದೇ ಆಸೆ ಆಕಾಂಕ್ಷಿ ಇಟ್ಟುಕೊಂಡಿರುತ್ತಾರೆ. ಅವರೊಬ್ಬರೆ ಅಲ್ಲ, ಈ ಆಸೆ ಆಕಾಂಕ್ಷೆ ಇಟ್ಟುಕೊಂಡಿರುವ ಸಾಕಷ್ಟು ಜನ ಇದ್ದಾರೆ. ಅದು ತಪ್ಪು ಎಂದು ಹೇಳಲು ಆಗುವುದಿಲ್ಲ. ಅವರನ್ನು ಸಿಎಂ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ಸಿಎಂ ಮಾಡುವ ವಿಚಾರ ಚರ್ಚೆಯಾಗುತ್ತದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮ 140 ಶಾಸಕರ ಮೇಲಿದೆ. ಕಾಂಗ್ರೆಸ್ ಪಕ್ಷವನ್ನು ಜನ ಅಧಿಕಾರಕ್ಕೆ ತಂದಿದ್ದು, ಇದಕ್ಕೆ ಎಷ್ಟು ಕಷ್ಟಪಡಲಾಗಿದೆ ಎಂದು ಎಲ್ಲರೂ ಅರಿತು ಎಚ್ಚರಿಕೆ ನಡೆ ಇಡಬೇಕು ಎಂದರು.

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಜನ ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ. ಈಗಾಗಲೇ ಸಿಎಂ ಸ್ಥಾನದಲ್ಲಿ ಒಬ್ಬರು ಕೂತಿದ್ದಾರೆ. ಪಕ್ಷದ ಅದ್ಯಕ್ಷ ಸ್ಥಾನದಲ್ಲಿ ಮತ್ತೊಬ್ಬರು ಕೂತಿದ್ದಾರೆ. ಆ ಸ್ಥಾನಗಳು ಖಾಲಿಯಾಗುವ ಸಂದರ್ಭದಲ್ಲಿ ಪಕ್ಷ ಅದರ ಬಗ್ಗೆ ಚರ್ಚೆ ಮಾಡಲಿದೆ. ನಾನು ನೀವು ಇಲ್ಲಿ ಕೂತು ಚರ್ಚೆ ಮಾಡಿದರೆ ಅರ್ಥವಿಲ್ಲ. ಏನೇ ತೀರ್ಮಾನ ಮಾಡಬೇಕಾದರೂ ನಮ್ಮ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ಮಾಡಬೇಕು. ಆಕಾಂಕ್ಷಿಗಳು ಇದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಶಿವಕುಮಾರ್ ಅವರೇ ಇರಬೇಕು ಎಂದೇನಿಲ್ಲ. ಅವರು ನಾಲ್ಕೈದು ವರ್ಷಗಳಿಂದ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಆ ಹುದ್ದೆಗೆ ಸತೀಶ್ ಜಾರಕಿಹೊಳಿ, ರಾಜಣ್ಣ, ಪರಮೇಶ್ವರ್ ಅವರು ಮತ್ತೊಮ್ಮೆ ಆದರೂ ಸಂತೋಷ. ಈ ಸ್ಥಾನ ಅಲಂಕರಿಸಬೇಕು ಎಂದು ಬೇರೆ ಯಾರಿಗೆ ಆತುರವಿದೆಯೋ ಅವರೇ ಆದರೂ ಸಂತೋಷ. ಯಾರೂ ಆಗಬಾರದು ಎಂಬುದೇನಿಲ್ಲ. ಪಕ್ಷದ ದೃಷ್ಟಿಯಿಂದ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ಎಲ್ಲಾ ನಾಯಕರ ಮೇಲಿದೆ. ಸಿದ್ದರಾಮಯ್ಯ ಅವರು ಬೇಕಾದರೂ ಅಧ್ಯಕ್ಷರಾಗಬಹುದು, ನಾನಂತೂ ಆಕಾಂಕ್ಷಿಯಲ್ಲ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಪಕ್ಷದಲ್ಲಿ ತರಾತುರಿಯಿಲ್ಲ, ಯಾರೂ ತರಾತುರಿಯಲ್ಲಿಲ್ಲ. ಪಕ್ಷದ ಏಳಿಗೆ, ಒಳಿತು ಬಯಸುವವರು, ಜನರ ಸಂಕಷ್ಟ ಅರಿತಿರುವವರು, ತಮ್ಮ ಮುಂದಿರುವ ಸವಾಲು ತಿಳಿದು ಪಕ್ಷವನ್ನು ಸಂಘಟಿಸುವವರು ಈ ಸ್ಥಾನಕ್ಕೆ ಆಯ್ಕೆಯಾಗಬೇಕು ಎಂದು ಚಿಂತನ ಮಂಥನ ಸಭೆ ನಡೆದರೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 60% ಕಮಿಷನ್ ಆರೋಪಕ್ಕೆ ಗುತ್ತಿಗೆದಾರರ ಬಾಕಿ ಹಣದ ಪಟ್ಟಿ ರಿಲೀಸ್ ಮಾಡಿದ ಹೆಚ್‌ಡಿಕೆ

    ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಬೇಡಿಕೆ ವಿಚಾರವಾಗಿ ಮಾತನಾಡಿ, ಅಧ್ಯಕ್ಷ ಸ್ಥಾನವನ್ನು ಪಕ್ಷ ಶಿವಕುಮಾರ್ ಅವರಿಗೆ ನೀಡಿದೆಯೇ ಹೊರತು, ಶಿವಕುಮಾರ್ ಅವರು ಕಿತ್ತುಕೊಂಡಿಲ್ಲ. ಪಕ್ಷದ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಅವರು ಶಿವಕುಮಾರ್ ಅವರಿಗೆ ಈ ಜವಾಬ್ದಾರಿ ನೀಡಿದ್ದಾರೆ. ಅವರು ಬೇಡ ಎಂದು ತೀರ್ಮಾನಿಸಿದರೆ ಈ ಸ್ಥಾನ ತ್ಯಜಿಸಲು ಶಿವಕುಮಾರ್ ಅವರು ಸಿದ್ಧರಿದ್ದಾರೆ. ಇವು ಶಾಶ್ವತವಾದ ಹುದ್ದೆಗಳಲ್ಲ. ತೀರ್ಮಾನ ಮಾಡಬೇಕಾದವರು ವರಿಷ್ಠರು. ಒಂದು ವ್ಯಕ್ತಿಗೆ ಒಂದು ಹುದ್ದೆ ಎಂದು ಹೇಳುವುದು ಎಐಸಿಸಿ ನಾಯಕರನ್ನು ಪ್ರಶ್ನೆ ಮಾಡುವಂತಾಗುತ್ತದೆ. ಇಂತಹ ವಿಚಾರವನ್ನು ಮಾಧ್ಯಮಗಳ ಮುಂದೆ ಮಾತನಾಡುವುದಕ್ಕಿಂತ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ದೃಷ್ಟಿಯಿಂದ ಯಾರು ಬೇಕಾದರೂ ತಮ್ಮ ಬೇಡಿಕೆ, ಸಲಹೆಗಳನ್ನು ಅವರ ಮುಂದೆ ಇಡಬಹುದು ಎಂದರು.

  • ಸಚಿವ ಪರಮೇಶ್ವರ್‌ ಕರೆದಿದ್ದ ಡಿನ್ನರ್‌ ಮೀಟಿಂಗ್‌ ಮುಂದೂಡಿಕೆ

    ಸಚಿವ ಪರಮೇಶ್ವರ್‌ ಕರೆದಿದ್ದ ಡಿನ್ನರ್‌ ಮೀಟಿಂಗ್‌ ಮುಂದೂಡಿಕೆ

    ಬೆಂಗಳೂರು: ಸಚಿವ ಡಾ. ಜಿ.ಪರಮೇಶ್ವರ್‌ (G.Parameshwar) ಕರೆದಿದ್ದ ಡಿನ್ನರ್‌ ಮೀಟಿಂಗ್‌ (Dinner Meeting) ಅನ್ನು ಮುಂದೂಡಲಾಗಿದೆ.

    ಪರಮೇಶ್ವರ್ ಅವರು, ದಲಿತ ನಾಯಕರ ಜೊತೆಗಿನ ಡಿನ್ನರ್ ಮೀಟಿಂಗ್‌ ಅನ್ನು ಹೈಕಮಾಂಡ್‌ ಸೂಚನೆ ಮೇರೆಗೆ ಮುಂದೂಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಕೊಟ್ಟ ಹಣ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಸಿಎಂ ಕೆಂಡಾಮಂಡಲ

    ಪ್ರಕಟಣೆಯಲ್ಲೇನಿದೆ?
    ಇದೇ ಜ.8 ರಂದು ರಾಜ್ಯ ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಚಿವರು, ಶಾಸಕರು, ಸಂಸದರು ಹಾಗೂ ಮುಖಂಡರ ಸಭೆಯನ್ನು ಬೆಂಗಳೂರಿನ ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದು ಸರಿಯಷ್ಟೆ. ಸದರಿ ಸಭೆಯನ್ನು ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರ ಸೂಚನೆ ಮೇರೆಗೆ ಮುಂದೂಡಲಾಗಿದೆ. ಸದರಿ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದಿದೆ.

    ಬೆಳಗಾವಿಯಲ್ಲಿ ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ಅವರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿನ್ನರ್‌ ಮೀಟಿಂಗ್‌ ನಡೆದಿತ್ತು. ಸಿಎಂ ಆಪ್ತರ ಜೊತೆ ನಡೆಸಿದ ಮೀಟಿಂಗ್‌ ಕಾಂಗ್ರೆಸ್‌ ಪಾಳಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿದೇಶ ಪ್ರವಾಸದಲ್ಲಿದ್ದರು. ಇದನ್ನೂ ಓದಿ: ಯಾವುದೇ ಸಮುದಾಯಗಳಿಗೆ ಸಮಸ್ಯೆ ಆಗದಂತೆ ಜಾತಿಗಣತಿ ವರದಿ ಬಗ್ಗೆ ನಿರ್ಧಾರ: ಈಶ್ವರ್ ಖಂಡ್ರೆ

  • ಎಸ್‌ಸಿ, ಎಸ್ಟಿ ಶಾಸಕರು, ಸಚಿವರು ಊಟಕ್ಕೆ ಕರೆದಿದ್ದಾರೆ, ಸಿಎಂ ಹೋಗಿದ್ದಾರೆ, ತಪ್ಪೇನು? – ಎಂ.ಬಿ ಪಾಟೀಲ್

    ಎಸ್‌ಸಿ, ಎಸ್ಟಿ ಶಾಸಕರು, ಸಚಿವರು ಊಟಕ್ಕೆ ಕರೆದಿದ್ದಾರೆ, ಸಿಎಂ ಹೋಗಿದ್ದಾರೆ, ತಪ್ಪೇನು? – ಎಂ.ಬಿ ಪಾಟೀಲ್

    ಬೆಂಗಳೂರು: ಸಿಎಂ ಸಚಿವರ ಜೊತೆ ಊಟ ಮಾಡಿದರೆ ತಪ್ಪೇನು ಎಂದು ಸಿಎಂ ಡಿನ್ನರ್ ಪಾಲಿಟಿಕ್ಸ್ (Dinner Politics) ಅನ್ನು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಸ್‌ಸಿ, ಎಸ್ಟಿ ಶಾಸಕರು, ಸಚಿವರು ಊಟಕ್ಕೆ ಕರೆದಿದ್ದಾರೆ. ಸಿಎಂ ಹೋಗಿದ್ದಾರೆ. ಸಹಜವಾಗಿ ಅವರ ಸಮಸ್ಯೆ ಹೇಳಿಕೊಂಡಿದ್ದಾರೆ. ಸಿಎಂ ನಮ್ಮ ಮನೆಗೆ ಊಟಕ್ಕೆ ಕರೆದರೂ ಬರುತ್ತಾರೆ, ಅದರಲ್ಲಿ ತಪ್ಪೇನಿದೆ? ಊಟಕ್ಕೆ ಹೋದರೆ ತಪ್ಪೇನಿದೆ? ಪಕ್ಷದಲ್ಲಿ ಹೈಕಮಾಂಡ್ ಇದೆ, ವರಿಷ್ಠರಿದ್ದಾರೆ. ಎಲ್ಲವನ್ನೂ ಅವರು ನೋಡಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ – ಕೋಚ್‌ಗಳು ಏನ್‌ ಮಾಡ್ತಿದ್ದಾರೆ? – ಗವಾಸ್ಕರ್‌ ತೀವ್ರ ತರಾಟೆ

    ಅಶ್ವಥ್ ನಾರಾಯಣ್, ಬೊಮ್ಮಾಯಿ ನಮ್ಮನೆಗೆ ಊಟಕ್ಕೆ ಬಂದಿದ್ದರು. ಅದು ದೊಡ್ಡ ಸುದ್ದಿ ಆಗಿತ್ತು. ಊಟಕ್ಕೆ ಹೋಗುವುದೆಲ್ಲ ದೊಡ್ಡದಲ್ಲ. ಸಿಎಂ, ಡಿಸಿಎಂ ಇಬ್ಬರನ್ನು ನಮ್ಮ ಮನೆಗೂ ಊಟಕ್ಕೆ ಕರೆಯೋಣ, ಬರುತ್ತಾರೆ. ಅದರಲ್ಲಿ ವಿಶೇಷ ಏನೂ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ

  • ಡಿಕೆಶಿ ವಿದೇಶದಲ್ಲಿರುವಾಗಲೇ ಆಪ್ತ ಸಚಿವರೊಂದಿಗೆ ಸಿಎಂ ಡಿನ್ನರ್ ಮೀಟಿಂಗ್!

    ಡಿಕೆಶಿ ವಿದೇಶದಲ್ಲಿರುವಾಗಲೇ ಆಪ್ತ ಸಚಿವರೊಂದಿಗೆ ಸಿಎಂ ಡಿನ್ನರ್ ಮೀಟಿಂಗ್!

    – ಪವರ್ ಶೇರಿಂಗ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ಚರ್ಚೆ?

    ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಮೀಟಿಂಗ್ ಸಂಚಲನ ಮೂಡಿಸಿದೆ. ಮೂರು ಅಜೆಂಡಾಗಳೊಂದಿಗೆ ಬೆಳಗಾವಿಯಲ್ಲಿ ಆಪ್ತ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.

    ಅತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸದಸ್ಯರ ಜೊತೆ ವಿದೇಶದಲ್ಲಿ ಪ್ರವಾಸದಲ್ಲಿದ್ದಾರೆ. ಈ ಹೊತ್ತಿನಲ್ಲೇ ಇತ್ತ ಸಿದ್ದರಾಮಯ್ಯ ಬಣದಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ಕಾಂಗ್ರೆಸ್ ರಾಜಕೀಯ ಪಡಸಾಲೆಯಲ್ಲಿ ಕುತೂಹಲ ಮೂಡಿಸಿದೆ.

    ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಗೃಹ ಸಚಿವ ಪರಮೇಶ್ವರ್, ಸಚಿವ ಹೆಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಪಾಲ್ಗೊಂಡಿದ್ದರು.

    ಬಜೆಟ್‌ಗೂ ಮುನ್ನವೇ ಸಂಪುಟ ಪುನಾರಚನೆ ಗುಸುಗುಸು ಕೇಳಿಬಂದಿದೆ. ಈ ಬೆನ್ನಲ್ಲೇ ಎರಡು ವಿಚಾರಗಳ ಬಗ್ಗೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ. ಮುಂದಿನ ರಾಜಕೀಯ ಬದಲಾವಣೆಗಳ ಬಗ್ಗೆ ಡಿನ್ನರ್ ಪಾಲಿಟಿಕ್ಸ್ನಲ್ಲಿ ಭರ್ಜರಿ ಚರ್ಚೆ ನಡೆದಿದೆ ಎನ್ನಲಾಗಿದೆ.

    ಸಚಿವ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಪವರ್ ಶೇರಿಂಗ್ ವಿಚಾರ, ಈ ಮೂರು ವಿಚಾರಗಳ ಬಗ್ಗೆ ಆಪ್ತ ಸಚಿವರ ಜೊತೆ ಸಿಎಂ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆನ್ನಲಾಗಿದೆ.

    ಸಚಿವ ಸಂಪುಟ ಪುನಾರಚನೆ ಆಗಬೇಕಾ ಬೇಡ್ವಾ? ವೈಯಕ್ತಿಕವಾಗಿ ಸಂಪುಟ ಪುನಾರಚನೆ ಇಷ್ಟವಿಲ್ಲದಿದ್ದರೂ ಹೈಕಮಾಂಡ್ ಸೂಚನೆ ನೀಡಿದರೆ ಏನು ಎಂಬ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ. ಸಂಪುಟ ಪುನಾರಚನೆ ಅನಿವಾರ್ಯ ಆದರೆ ಹೇಗಿರಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿರುವ ಸಾಧ್ಯತೆ ಇದೆ.

    ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಪ್ರಮುಖವಾಗುತ್ತೆ. ಹೈಕಮಾಂಡ್ ಬದಲಾವಣೆಗೆ ಒಪ್ಪಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ಹೇಗಿರಲಿದೆ ಎಂಬುದರ ಬಗ್ಗೆಯೂ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆ ಆಗಿದೆ ಎಂಬ ಮಾಹಿತಿ ಇದೆ. ಪವರ್ ಶೇರಿಂಗ್ ವಿಚಾರದಲ್ಲಿ ಸಿಎಂ ಸೈಲೆಂಟ್ ಗೇಮ್ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

  • ಪಕ್ಷದ ಶಿಸ್ತು ಉಲ್ಲಂಘಿಸಿದ್ದು ಸಾಬೀತಾದ್ರೆ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಎಐಸಿಸಿ ಸೂಚನೆ: ಸಿಎಂ

    ಪಕ್ಷದ ಶಿಸ್ತು ಉಲ್ಲಂಘಿಸಿದ್ದು ಸಾಬೀತಾದ್ರೆ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಎಐಸಿಸಿ ಸೂಚನೆ: ಸಿಎಂ

    ಬೆಂಗಳೂರು: ಎಐಸಿಸಿ ಅಧ್ಯಕ್ಷರು (AICC President) ಈಗಾಗಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸಚಿವ ಸುರ್ಜೆವಾಲಾ ಅವರಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಗಿಸಿದ್ದು ಸಾಬೀತಾದರೇ ಸಚಿವ ಸ್ಥಾನದಿಂದ ವಜಾ ಮಾಡುವಂತೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸಂಪುಟ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಮಾತಮಾಡಿದ ಅವರು, ಸಚಿವರಿಗೆ ಎಚ್ಚರಿಕೆ ಕೊಟ್ಟರು. ನನ್ನ ಮತ್ತು ಶಿವಕುಮಾರ್‌ ಇಬ್ಬರೊಟ್ಟಿಗೂ ಕೆ.ಸಿ ವೇಣುಗೋಪಾಲ್ (KC Venugopal) ಮಾತನಾಡಿದ್ದಾರೆ. ನೀವ್ಯಾರು ಇನ್ನುಮುಂದೆ ಸಭೆ ಸೇರುವುದು, ಮಾತನಾಡುವುದು, ಮಾಡಬಾರದು. ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ನೀವೆ ಜವಾಬ್ದಾರರು ಎಂದಿದ್ದಾರೆ. ಇದನ್ನೂ ಓದಿ: ದಸರಾ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ: ಕಮಿಷನರ್ ಸೀಮಾ ಲಾಟ್ಕರ್

    ಮುಂದುವರಿದು, ಎಐಸಿಸಿ ಅಧ್ಯಕ್ಷರು ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಯಾವ ಸಚಿವರು ಸಭೆ ಮಾಡ್ತಾರೆ? ಬಹಿರಂಗವಾಗಿ ಮಾತಾಡ್ತಾರೆ ಅವರಿಗೆ ಎಐಸಿಸಿಯಿಂದ ನೀವೆ ನೋಟಿಸ್ ನೀಡಿ. ಪಕ್ಷದ ಶಿಸ್ತು ಉಲ್ಲಂಗಿಸಿದ್ದು ಸಾಬೀತಾದರೆ ಸಚಿವ ಸ್ಥಾನದಿಂದ ವಜಾ ಮಾಡಿ. ಇವಿಷ್ಟು ನಿರ್ದೇಶನ ಎಐಸಿಸಿ ಅಧ್ಯಕ್ಷರಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿಗೆ ಬಂದಿದೆ. ಇದನ್ನ ಕೆ.ಸಿ ವೇಣುಗೋಪಾಲ್‌ ಹಾಗೂ ಸುರ್ಜೆವಾಲ ಇಬ್ಬರೂ ನನ್ನ ಗಮನಕ್ಕೆ ತಂದಿದ್ದಾರೆ. ನಿಮ್ಮ ಸಭೆ, ನಿಮ್ಮ ಮಾತು, ನಿಮ್ಮ ಜವಬ್ದಾರಿ. ಈ ವಿಚಾರದಲ್ಲಿ ಯಾವುದೂ ನನ್ನ ಕೈಯಲ್ಲಿ ಇಲ್ಲ ಎಂದು ನೇರವಾಗಿ ಸಿಎಂ ಹೇಳಿದ್ದಾರೆ.

    ಇದಕ್ಕೂ ಮುನ್ನ ಸಂಪುಟ ಸಭೆ ಆರಂಭವಾಗುತ್ತಿದ್ದಂತೆ ಮೊದಲಿಗೆ ಸಚಿವರ ಸಭೆ ಬಗ್ಗೆ ಸಿಎಂ ಮಾತು ಆರಂಭಿಸಿದರು. ಈ ವೇಳೆ ಮಾಜಿ ಸ್ಪೀಕರ್‌ ಕೆ.ಬಿ ಕೋಳಿವಾಡ ಅವರ ಮಾತಿನ ಬಗ್ಗೆ ಅವರ ಮಗ ಶಾಸಕ ಪ್ರಕಾಶ್ ಕೋಳಿವಾಡ ಕ್ಷಮೆ ಕೇಳಿದರು. ಬಳಿಕ ಸಿಎಂ ಅದು ಮುಗಿದ ಅಧ್ಯಾಯ, ಆದ್ರೆ ಸಚಿವರು ನೀವೇ ಮಾತಾನಾಡಿದರೆ ಹೇಗೆ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಾವು ಎಲ್ಲಿಯೂ, ಯಾವತ್ತೂ ಸಿಎಂ ಪದವಿ ಬಗ್ಗೆ ಚರ್ಚೆ ಮಾಡಿಲ್ಲ: ಸಚಿವ ಪರಮೇಶ್ವರ್‌

    ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಸಚಿವ ಮಹಾದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೋಳಿ ಸ್ಪಷ್ಟನೆ ನೀಡಿದ್ದಾರೆ. ಇಲಾಖೆ ವಿಚಾರಕ್ಕೆ ಭೇಟಿ ಮಾಡಿದ್ದರು ಅದು ಮಾಧ್ಯಮಗಳಲ್ಲಿ ಹಾಗೆ ಸುದ್ದಿ ಆಗಿದೆ ಅಷ್ಟೆ. ಮೈಸೂರಲ್ಲಿ ಎಲ್ಲರನ್ನೂ ನಾನೇ ಊಟಕ್ಕೆ ಕರೆದೆ ಅದಕ್ಕೆ ಎಲ್ಲರೂ ಸೇರಿದ್ದೆವು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಏನೇ ಇರಲಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

  • ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆದಿಲ್ಲ: ಪರಮೇಶ್ವರ್

    ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆದಿಲ್ಲ: ಪರಮೇಶ್ವರ್

    ಮೈಸೂರು: ಮಹದೇವಪ್ಪ (HC Mahadevappa) ಮನೆಯಲ್ಲಿ ಡಿನ್ನರ್ ಮೀಟಿಂಗ್ (Dinner Meeting) ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹದೇವಪ್ಪ ಮನೆಯಲ್ಲಿ ಡಿನ್ನರ್ ಏರ್ಪಾಡು ಮಾಡಲಾಗಿತ್ತು. ಊಟಕ್ಕೆ ಹೋಗಿದ್ದೆವು. ಯಾವ ಮೀಟಿಂಗ್ ಇಲ್ಲ, ಡಿನ್ನರ್ ಅಷ್ಟೇ. ಮೈಸೂರಿನ ಆತಿಥ್ಯ ಬಿಡುವುದಕ್ಕೆ ಆಗುತ್ತಾ? ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಸಹಜವಾಗಿ ಊಟಕ್ಕೆ ಸೇರಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

    ಡಿನ್ನರ್‌ನಲ್ಲಿ ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಶಾಸಕ ಎ.ಆರ್ ಕೃಷ್ಣ ಮೂರ್ತಿ ಭಾಗಿಯಾಗಿದ್ದೆವು. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಊಟದ ವೇಳೆ ಸಿಎಂ ಬದಲಾವಣೆ ಅದು ಇದು ಯಾವ ವಿಚಾರವೂ ಚರ್ಚೆ ಮಾಡಿಲ್ಲ. ವಿರೋಧ ಪಕ್ಷಗಳಿಗೆ ಸಿಎಂ ಬದಲಾವಣೆ ಮಾಡಿಸುವುದೇ ಕೆಲಸ. ಕಾಂಗ್ರೆಸ್‌ನಲ್ಲಿ ಯಾವ ಬದಲಾವಣೆ ಬಗ್ಗೆಯೂ ಚರ್ಚೆ ಆಗಿಲ್ಲ ಎಂದರು. ಇದನ್ನೂ ಓದಿ: `ಅಹಿಂದ’ ನಾಯಕರ ಡಿನ್ನರ್‌ ಮೀಟಿಂಗ್‌ – ರಾಜ್ಯ ರಾಜಕೀಯದಲ್ಲಿ ಸಂಚಲನ

    ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯ ಇಲ್ಲ. ನಾವು ಆಗಾಗ ಈ ರೀತಿ ಸೇರುತ್ತಿರುತ್ತೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ತಿಳಿಸಿದರು. ದಲಿತ ಸಿಎಂ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯ ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೋಲಾರ| ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ತಾಯಿ, ಮಗ ಸಾವು