Tag: ಡಿಡಿಸಿಎ

  • ಅಂಡರ್-19 ವಿಶ್ವಕಪ್ ತಂಡದ ಸ್ಟಾರ್ ಆಟಗಾರನಿಗೆ 1 ವರ್ಷದ ನಿಷೇಧದ ಬರೆ

    ಅಂಡರ್-19 ವಿಶ್ವಕಪ್ ತಂಡದ ಸ್ಟಾರ್ ಆಟಗಾರನಿಗೆ 1 ವರ್ಷದ ನಿಷೇಧದ ಬರೆ

    ನವದೆಹಲಿ: 2018ರ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಶತಕ ಸಿಡಿಸಿದ್ದ ಆಟಗಾರ ಮಂಜೋತ್ ಕಾಲ್ರಾ ರಣಜಿ ಕ್ರಿಕೆಟ್‍ಗೆ 1 ವರ್ಷ ನಿಷೇಧವನ್ನು ಎದುರಿಸಿದ್ದಾರೆ. ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಬೋರ್ಡ್ (ಡಿಡಿಸಿಎ) ನಿಷೇಧವನ್ನು ವಿಧಿಸಿದ್ದು, ವಯಸ್ಸಿನ ತಪ್ಪು ಪ್ರಮಾಣ ಪತ್ರ ನೀಡಿ ವಯಸ್ಸನ್ನು ಮರೆಮಾಚಿದ ಆರೋಪವನ್ನು ಮಂಜೀತ್ ಕಾಲ್ರಾ ಎದುರಿಸುತ್ತಿದ್ದಾರೆ.

    ಎಡಗೈ ಬ್ಯಾಟ್ಸ್ ಮನ್ ಆಗಿರುವ ಮಂಜೋತ್ ಕಾಲ್ರಾ ಅಂಡರ್-19 ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ ಕಾಲ್ರಾ ತಮ್ಮ ಅಂಡರ್-16 ಹಾಗೂ ಅಂಡರ್-19 ಕ್ರಿಕೆಟ್ ಆಡುವ ವೇಳೆ ಡೆಲ್ಲಿ ಸಂಸ್ಥೆಗೆ ನಕಲಿ ಪ್ರಮಾಣ ಪತ್ರ ನೀಡಿದ್ದರು.

    ಇಂತಹದ್ದೇ ಅಪರಾಧದಲ್ಲಿ ದೆಹಲಿ ತಂಡದ ಉಪನಾಯಕ ನಿತೀಶ್ ರಾಣಾ ಅವರಿಗೆ ಯಾವುದೇ ಶಿಕ್ಷೆಯಾಗಿಲ್ಲ. ಶಿಸ್ತುಕ್ರಮದಿಂದ ಅವರಿಗೆ ವಿನಾಯಿತಿ ನೀಡಿ, ಹೆಚ್ಚಿನ ದಾಖಲೆಗಳನ್ನು ನೀಡಲು ಕೋರಲಾಗಿತ್ತು.

    ಡೆಲ್ಲಿ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ, ಬಾದರ್ ದುರಾಜ್ ಅಹ್ಮದ್ ಅವರು ತಮ್ಮ ಅಂತಿಮ ದಿನದಂದು ಆದೇಶವನ್ನು ಜಾರಿ ಮಾಡಿದ್ದಾರೆ. ಆದೇಶದ ಅನ್ವಯ ಕಾಲ್ರಾ 1 ವರ್ಷ ರಣಜಿ ಕ್ರಿಕೆಟ್ ಪಂದ್ಯಗಳನ್ನು ಆಡುವಂತಿಲ್ಲ. ಅಲ್ಲದೇ ಅಂಡರ್-23 ಕ್ರಿಕೆಟ್‍ಗೆ 2 ವರ್ಷ ನಿಷೇಧ ಮಾಡಲಾಗಿದೆ.

    ಬಿಸಿಸಿಐ ಮಾಹಿತಿಯ ಅನ್ವಯ ಕಾಲ್ರಾ 20 ವರ್ಷ, 351 ದಿನ ವಯಸ್ಸಾಗಿದ್ದು, ಕಳೆದ ವಾರ ಅಂಡರ್-23 ರಲ್ಲಿ ದೆಹಲಿ ತಂಡದಲ್ಲಿ ಬಂಗಾಳದ ವಿರುದ್ಧ ನಡೆದ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ಪಂದ್ಯದಲ್ಲಿ ಕಾಲ್ರಾ 80 ರನ್ ಗಳಿಸಿದ್ದರು. ದೆಹಲಿ ತಂಡದಲ್ಲಿ ಶಿಖರ್ ಧವನ್ ಅವರ ಸ್ಥಾನವನ್ನು ರೀ-ಪ್ಲೇಸ್ ಮಾಡುವ ಎಂಬ ಭರವಸೆಯನ್ನು ಮೂಡಿಸಿದ್ದರು. ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಡೆಲ್ಲಿ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹರಾ, ಈ ಹಿಂದೆ ನಿತೀಶ್ ರಾಣಾ ಎಂದು ಅಪರಾಧಿ ಎಂದು ಹೇಳಲಾಗದ ಅದೇ ಅಪರಾಧಕ್ಕೆ ಕಾಲ್ರಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಇದು ತಮಗೆ ಅಚ್ಚರಿಯನ್ನು ತಂದಿದ್ದು, ಬಾದರ್ ದುರಾಜ್ ಅಹ್ಮದ್ ಅವರು ತಮ್ಮ ಕರ್ತವ್ಯದ ಅಂತಿಮ ದಿನದ ರಾತ್ರಿ 11:30ರ ಮೊದಲು ಈ ಆದೇಶವನ್ನು ನೀಡಿದ್ದಾರೆ. ಈಗ ಇದು ಸ್ವಲ್ಪ ವಿಲಕ್ಷಣವಾಗಿ ಕಾಣುತ್ತಿದೆ. ಆದರೆ ಈ ಹುದ್ದೆಗೆ ಹೊಸಬರು ನೇಮಕವಾಗಿ ಕಾಲ್ರಾ ಮೇಲಿನ ನಿಷೇಧವನ್ನು ತೆರವು ಮಾಡುವವರೆಗೂ ನಾವು ಆತನನ್ನು ತಂಡಕ್ಕೆ ಪರಿಗಣಿಸಲು ಸಾಧ್ಯವಿಲ್ಲ. ನಾವು ಅಸಹಾಯಕರಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್ ಜೇಟ್ಲಿ ಹೆಸರು ಮರುನಾಮಕರಣ

    ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್ ಜೇಟ್ಲಿ ಹೆಸರು ಮರುನಾಮಕರಣ

    ನವದೆಹಲಿ: ದೆಹಲಿಯ ಪ್ರತಿಷ್ಠಿತ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ಮರುನಾಮಕರಣ ಮಾಡಲು ನಿರ್ಧಾರ ಕೈಗೊಂಡಿದೆ.

    ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ(ಡಿಡಿಸಿಎ) ಈ ವಿಚಾರವನ್ನು ತಿಳಿಸಿದ್ದು, ಸೆಪ್ಟೆಂಬರ್ 12ರಂದು ನಡೆಯಲಿರುವ ಸಮಾರಂಭದಲ್ಲಿ ಮರುನಾಮಕರಣ ಮಾಡಲಾಗುವುದು. ಅಲ್ಲದೆ, ಕೋಟ್ಲಾ ಸ್ಟ್ಯಾಂಡ್‍ಗೆ ಈ ಹಿಂದೆ ಘೋಷಿಸಿದಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಇಡಲಾಗುವುದು ಎಂದು ತಿಳಿಸಿದೆ.

    ಮೈದಾನಕ್ಕೆ ಫಿರೋಜ್ ಷಾ ಕೋಟ್ಲಾ ಎಂದೇ ಕರೆಯಲಾಗುತ್ತದೆ, ಆದರೆ ಕ್ರೀಡಾಂಗಣದ ಹೆಸರನ್ನು ಮಾತ್ರ ಮರುನಾಮಕರಣ ಮಾಡಲಾಗುತ್ತದೆ ಎಂದು ಡಿಡಿಸಿಎ ಸ್ಪಷ್ಟಪಡಿಸಿದೆ.

    ಈ ಕುರಿತು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಮಾತನಾಡಿ, ವಿರಾಟ್ ಕೊಹ್ಲಿ, ವಿರೇಂದ್ರ  ಸೆಹ್ವಾಗ್, ಗೌತಮ್ ಗಂಭೀರ್, ಆಶಿಶ್ ನೆಹ್ರಾ, ರಿಷಬ್ ಪಂತ್‍ರಂತಹ ಆಟಗಾರರಿಗೆ ಅರುಣ್ ಜೇಟ್ಲಿ ಅವರು ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು. ಇವೆರಲ್ಲರೂ ಭಾರತ ಹೆಮ್ಮೆ ಪಡುವಂತಹ ನಾಯಕರು ಎಂದು ಶರ್ಮಾ ತಿಳಿಸಿದ್ದಾರೆ.

    ಜೇಟ್ಲಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ಅಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನವೀಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಶ್ವ ದರ್ಜೆಯ ಡ್ರೆಸ್ಸಿಂಗ್ ರೂಂ ನಿರ್ಮಿಸುವುದರ ಜೊತೆಗೆ ಕ್ರೀಡಾಂಗಣದ ಸಾಮಥ್ರ್ಯವನ್ನು ಹೆಚ್ಚಿಸಿದ್ದಾರೆ ಎಂದು ಶರ್ಮಾ ಇದೇ ವೇಳೆ ಜೇಟ್ಲಿ ಅವರ ಕಾರ್ಯವನ್ನು ಸ್ಮರಿಸಿದ್ದಾರೆ.

    ಸೆಪ್ಟೆಂಬರ್ 12ರಂದು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಈ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಉಪಸ್ಥಿತರಿರಲಿದ್ದಾರೆ.

    ಫಿರೋಜ್ ಷಾ ಕ್ರೀಡಾಂಗಣವು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಂತರ ಭಾರತ ಎರಡನೇ ಅತ್ಯಂತ ಹಳೇಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. 1883ರಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಪ್ರಸ್ತುತ ಕ್ರೀಡಾಂಗಣದ ಸಾಮರ್ಥ್ಯ 40 ಸಾವಿರಕ್ಕಿಂತ ಹೆಚ್ಚಿದೆ. ಈ ಕ್ರೀಡಾಂಗಣ 34 ಟೆಸ್ಟ್ ಪಂದ್ಯಗಳು, 25 ಏಕದಿನ ಮತ್ತು 5 ಟಿ-20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ.