Tag: ಡಿಜೆ ಪೊಲೀಸ್ ಠಾಣೆ

  • ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಬಿಟ್ಟುಬಿಡಿ – ಠಾಣೆ ಮುಂದೆ ಗಲಭೆಕೋರರ ಪೋಷಕರು ಕಣ್ಣೀರು

    ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಬಿಟ್ಟುಬಿಡಿ – ಠಾಣೆ ಮುಂದೆ ಗಲಭೆಕೋರರ ಪೋಷಕರು ಕಣ್ಣೀರು

    ಬೆಂಗಳೂರು: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಗಲಭೆಕೋರರ ಪೋಷಕರು ಜಮಾಯಿಸಿದ್ದಾರೆ.

    ಗಲಭೆ ಪ್ರಕರಣ ನಡೆದ ದಿನದಿಂದ ಡಿಜೆ ಹಳ್ಳಿ ಪೊಲೀಸರು ಮಿಡ್‍ನೈಟ್ ಕಾರ್ಯಾಚರಣೆ ಮಾಡುವ ಮೂಲಕ ಪ್ರತಿದಿನ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಶನಿವಾರ ರಾತ್ರಿಯೂ ಸುಮಾರು 57 ಮಂದಿ ಗಲಭೆಕೋರರನ್ನ ಬಂಧಿಸಿದ್ದಾರೆ. ಆದ್ದರಿಂದ ಗಲಭೆಕೋರರ ಪೋಷಕರು ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ.

    ನಮ್ಮ ಮಕ್ಕಳು ಗಲಾಟೆ ನಡೆದ ದಿನ ಇರಲಿಲ್ಲ. ಕೆಲಸ ಮುಗಿಸಿ ಬಂದು ಮಕ್ಕಳು ಮಲಗಿದ್ದರು. ಆದರೆ ಪೊಲೀಸರು ಮಧ್ಯರಾತ್ರಿ ಬಂದು ಮಲಗಿದ್ದವರನ್ನು ಕರೆದುಕೊಂಡು ಬಂದಿದ್ದಾರೆ. ಅವರನ್ನು ನೋಡಲು, ಮಾತನಾಡಲು ಬಿಡುತ್ತಿಲ್ಲ. ನಮ್ಮ ಮಕ್ಕಳು ತಪ್ಪು ಮಾಡಿಲ್ಲ. ಅವರನ್ನ ಬಿಟ್ಟು ಬಿಡಿ ಎಂದು ಸ್ಟೇಷನ್ ಮುಂದೆ ಪೋಷಕರು ಕಣ್ಣೀರು ಹಾಕಿದ್ದಾರೆ.

    ಪೋಷಕರನ್ನ ಠಾಣೆ ಮುಂದೆ ಜಮಾಯಿಸದಂತೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಗಲಭೆ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಇರುವ ಹಿನ್ನಲೆಯಲ್ಲಿ ಯಾವುದೇ ಗುಂಪು, ಜಮಾವಣೆ ಮಾಡದಂತೆ ಪೋಷಕರನ್ನ ವಾಪಸ್ ಕಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪ್ರತಿ ದಿನ ಸ್ಟೇಷನ್ ಮುಂದೆ ಪೋಷಕರು ಬರುತ್ತಿದ್ದಾರೆ.

    ಇತ್ತ ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಡಿಜೆ ಹಳ್ಳಿ ಪೊಲೀಸರು ಗಲಭೆ ಆರೋಪಿಗಳನ್ನ ಬಂಧಿಸಿದ್ದರು. ಕೆಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಠಾಣೆ ಆವರಣ, ಒಳಗೆ, ಮುಂಭಾಗ ಸ್ಯಾನಿಟೈಸ್ ಮಾಡಲಾಗುತ್ತಿದೆ.

  • ಒಂದು ಧರ್ಮದ ಅಸಹಿಷ್ಣುತೆ ಇತರ ಧರ್ಮಗಳನ್ನ ಪ್ರಚೋದಿಸುತ್ತೆ: ನಟ ಚೇತನ್

    ಒಂದು ಧರ್ಮದ ಅಸಹಿಷ್ಣುತೆ ಇತರ ಧರ್ಮಗಳನ್ನ ಪ್ರಚೋದಿಸುತ್ತೆ: ನಟ ಚೇತನ್

    ಬೆಂಗಳೂರು: ಒಂದು ಧರ್ಮದ ಅಸಹಿಷ್ಣುತೆ ಇತರ ಧರ್ಮಗಳನ್ನ ಪ್ರಚೋದಿಸುತ್ತೆ ಎಂದು ನಟ ಚೇತನ್ ನಗರದಲ್ಲಿ ನಡೆದ ಗಲಭೆಯ ಪ್ರತಿಕ್ರಿಯೆ ನೀಡಿದ್ದಾರೆ.

    ನಟ ಚೇತನ್ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಅವಹೇಳನಕಾರಿ ಫೇಸ್‍ಬುಕ್ ಪೋಸ್ಟ್ ಕುರಿತು ಮುಸ್ಲಿಂ ಜನಸಮೂಹ ನಡೆಸಿದ ಹಿಂಸಾಚಾರವು ಸಮರ್ಥನೀಯವಲ್ಲ” ಎಂದಿದ್ದಾರೆ.

    ಅಲ್ಲದೇ “ವಾಕ್ ಸ್ವಾತಂತ್ರ್ಯವನ್ನು ಗರಿಷ್ಠ ಮಟ್ಟಿಗೆ ಎತ್ತಿಹಿಡಿಯಬೇಕು ಮತ್ತು ‘ಸರಿಯಾದ ಪ್ರಕ್ರಿಯೆಯ’ ಮೂಲಕ ವಿರೋಧಿಸಬೇಕು. ಎಲ್ಲಾ ಧರ್ಮಗಳು ಇಸ್ಲಾಂ ಸೇರಿದಂತೆ ವಿಮರ್ಶೆಗೆ ಮುಕ್ತವಾಗಿವೆ. ಒಂದು ಧರ್ಮದ ಅಸಹಿಷ್ಣುತೆ ಇತರ ಧರ್ಮಗಳನ್ನು ಪ್ರಚೋದಿಸುತ್ತದೆ. ಕೋಮು ಸೌಹಾರ್ದತೆಯನ್ನು ಅಡ್ಡಿಪಡಿಸುತ್ತದೆ” ಎಂದು ಫೇಸ್‍ಬುಕ್‍ನಲ್ಲಿ ನಟ ಚೇತನ್ ಬರೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ಮಂಗಳವಾರ ರಾತ್ರಿ ದುಷ್ಕರ್ಮಿಗಳು ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಸಂಪೂರ್ಣ ಸುಟ್ಟು ಹಾಕಿದ್ದಾರೆ. ಶಾಸಕರ ಆಪ್ತ ನವೀನ್ ಫೇಸ್‍ಬುಕ್‍ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ರಾತ್ರಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿದ್ದರು.

    ಅಷ್ಟೇ ಅಲ್ಲದೇ ಡಿಜೆ ಪೊಲೀಸ್ ಠಾಣೆಯ ಮೇಲೂ ಕಲ್ಲೂ ತೂರಾಟ ಮಾಡಿದ್ದು, ಪೊಲೀಸ್ ಠಾಣೆಯಲ್ಲಿದ್ದ 50ಕ್ಕೂ ಹೆಚ್ಚು ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ರಸ್ತೆಯಲ್ಲಿದ್ದ ಎಲ್ಲ ವಾಹನಗಳಿಗೆ ಬೆಂಕಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ರಾತ್ರಿ ಪೊಲೀಸ್ ಗಲಭೆಯ ವೇಳೆ ಫೈರಿಂಗ್ ಮಾಡಿದ್ದು, ಮೂವರು ಬಲಿಯಾಗಿದ್ದಾರೆ. ಪೊಲೀಸರು 170 ಮಂದಿಯನ್ನು ಬಂದಿಸಿದ್ದು, ಉಳಿದವರು ಬೆಂಕಿ ಹಚ್ಚಿ ಧ್ವಂಸ ಮಾಡಿದ ನಂತರ ಊರು ಬಿಟ್ಟು ಪರಾರಿಯಾಗಿದ್ದಾರೆ.